ಶ್ರೀದೇವಿ ಕೆರೆಮನೆ ಓದಿದ ‘ಸಂತೆಯೊಳಗೆ ಸಿಕ್ಕ ಬುದ್ಧ’

ವಿರಹಕ್ಕೆ ಮದಿರೆಯೊಂದೇ ಸಾಕೆ?

ಶ್ರೀದೇವಿ ಕೆರೆಮನೆ

ಗಜಲ್ ಗಳಿಗೆ ಈಗ ಸುಗ್ಗಿಯ ಕಾಲ. ನಮ್ಮ ಸುತ್ತ ಅದೆಷ್ಟು ಗಜಲಕಾರರಿದ್ದಾರೆ. ಅದರಲ್ಲೂ ಯುವ ಕವಿಗಳಲ್ಲಿ ಗಜಲ್ ಬರೆಯುವ ಹುಕಿ ಎದ್ದು ಕಾಣುತ್ತಿದೆ.ಅದರಲ್ಲೂ ಯುವ ಕವಿಗಳು ಗಜಲ ಬರೆಯುವ ಹುಮ್ಮಸ್ಸು ನೋಡಿದರೆ ಅದು ಪ್ರವಾಹದೋಪಾದಿಯಾಗಿ ದುಮ್ಮಿಕ್ಕಿ ಹರಿದಂತೆ ಭಾಸವಾಗುತ್ತದೆ. ಇಂತಹ ಪ್ರವಾಹದಲ್ಲಿ ಹರಿಯುತ್ತಿರುವ ರಭಸದ ಧಾರೆಯಲ್ಲಿರುವವರು ಅಭಿಷೇಕ ಬಳೆ.

ಗಾಳಕ್ಕೆ ಸಿಲುಕುವವರೆಗೂ ಮೀನಿನ ಆಟ
ಇಂದು ಬದುಕಿದ್ದರೆ ನಾಳೆ ಬಾಳಿನ ಆಟ

ಎನ್ನುವ ಮಕ್ತಾ ಬರೆಯುತ್ತ ಗಮನ ಸೆಳೆಯುತ್ತಾರೆ. ಅನ್ನ ಬೆಂದಿದೆಯೋ ಎಂದು ನೋಡಲು ಒಂದು ಅಗುಳನ್ನು ನೋಡಿದರೆ ಸಾಕಾಗುವಂತೆ ಗಜಲ್ ಗೆ ಪ್ರವೇಶ ನೀಡುವ ಒಂದು ಮಕ್ತಾ ಗಜಲಕಾರನ ಬರಹಧ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಇಹ ಹಾಗೂ ಪರದ ತತ್ವವನ್ನು ಸೂಕ್ಷ್ಮವಾಗಿ ಹೇಳುವ ಈ ಮಕ್ತಾ ಸಹೃದಯ ಓದುಗನನ್ನು ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗುತ್ತದೆ.

ಗಜಲ್ ನ ಸಂಪ್ರದಾಯಬದ್ಧವಾದ ಪ್ರೀತಿ, ಪ್ರೇಮ ವಿರಹಗಳನ್ನಲ್ಲದೇ ಜನಸಾಮಾನ್ಯರ ಬದುಕನ್ನು ತಮ್ಮ ಶೇರ್ ಗಳಲ್ಲಿ ಕಟ್ಟಿಕೊಡುವುದರ ಮೂಲಕ ಅಭಿಷೇಕ ಬಳೆ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಯಾರು ಸಂಪ್ರದಾಯವನ್ನು ಅರಿತಿರುತ್ತಾರೋ ಅವರು ಮಾಡಿದ ಮುರಿದು ಕಟ್ಟುವ ಕೆಲಸ ಯಶಸ್ವಿಯಾಗುತ್ತದೆ. ತಳಪಾಯವೇ ಇಲ್ಲದೇ ಮನೆಯ ಗೋಡೆಯನ್ನೆಬ್ಬಿಸಿ, ಉಪ್ಪರಿಗೆಯನ್ನೇರುವವರು ಎಂದಿಗೂ ಸಶಕ್ತವಾದ ಸೌಧವನ್ನು ನಿರ್ಮಾಣ ಮಾಡಲಾರರು. ಚಂದದ ಅಡಿಪಾಯ, ಸುಭದ್ರವಾದ ಗೋಡೆಯೊಂದಿಗೆ ಅಭಿಷೇಕ ಬಳೆ ಸದಾ ಸೆಲೆಯುವ ಬರುಜುಗಳನ್ನು ನಮ್ಮೆದುರಿಗಿಟ್ಟಿದ್ದಾರೆ.

ಬದುಕು ಕಟ್ಟಿಕೊಳ್ಳಲು ಊರಿಂದ ಊರಿಗೆ ಗುಳೆ ಹೋದವರು ನಾವು
ನಾಳೆಗೆ ಬದುಕ ಕಟ್ಟಲಾಗದೆ ಬರಿಗೈಲಿ ಹಿಂದಿರುಗಿ ಬಂದವರು ನಾವು

ಅಧಿಕಾರದಲ್ಲಿ ರಾಮ ಇದ್ದರೇನು ರಾವಣ ಇದ್ದರೇನು ಬಂತು
ನಮ್ಮ ಹಸಿವಿಗೆ ಮೈ ಬಾಗಿಸಿ ದುಡಿಯಬೇಕಾದವರು ನಾವು

ಕಂಕುಳಲ್ಲಿ ಕೂಸು ತಲೆ ಮೇಲೆ ಗಂಟು, ಅಲೆಮಾರಿ ಜೀವನ
ಊರುವಷ್ಟು ಜಾಗ ಕಂಡಲ್ಲಿ ಇಡೀ ಬದುಕ ಊರುವವರು ನಾವು

ಈ ಗಜಲ ಕೇವಲ ಜನಸಾಮಾನ್ಯರ ಪಾಡನ್ನು ಹೇಳುವುದಿಲ್ಲ. ಒಂದು ಸಶಕ್ತ ಚಿತ್ರಣವನ್ನು ಕಣ್ಣೆದುರಿಗೆ ಬಿಚ್ಚಿಡುತ್ತದೆ. ಈ ಶೇರ್ ಗಳನ್ನು ಓದುವಾಗ ಚಿಕ್ಕ ಚಿಕ್ಕ ಮಕ್ಕಳನ್ನು ಸೀರೆಯ ಸೆರಗಿನಿಂದ ಸೊಂಟಕ್ಕೆ ಕಟ್ಟಿಕೊಂಡು, ತಲೆಯ ಮೇಲೆ ಭಾರವಾದ ಮೂಟೆ, ಒಂದು ಕೈಯ್ಯಲ್ಲಿ ಮಣಭಾರದ ಚೀಲ, ಮತ್ತೊಂದು ಕೈಯ್ಯಲ್ಲಿ ಆಗಷ್ಟೇ ನಡೆಯಲು ಕಲಿತು ಪ್ರತಿ ಹೆಜ್ಜೆಗೂ ತಡವರಿಸುವ ಇನ್ನೊಂದು ಮಗುವಿನ ಕೈ ಹಿಡಿದು ಸಂಭಾಳಿಸುತ್ತ ಬೆವರಿಳಿಸುವ ತಾಯಿಯ ಚಿತ್ರಣ ಕಣ್ಣಿಗೆ ಕಟ್ಟದೇ ಇರದು. ಸಂಸಾರ ನೀಗಿಸಲಾಗದೇ ತಾನು ಅರೆಹೊಟ್ಟೆ ಉಂಡು, ಬರೀ ಚಹಾ ಕುಡಿದು ಕೆಲಸಕ್ಕೆ ಓಡುವ ಅಪ್ಪನಿಗೆ ಭವಿಷ್ಯಕ್ಕಾಗಿ ಒಂದಿಷ್ಟು ಕಾಸು- ದಮ್ಮಡಿಯನ್ನು ಕೂಡಿಡುವ ಮನಸ್ಸು ನಮ್ಮ ಒಳ ಮನಸ್ಸನ್ನು ಆವರಿಸಿ ವಿಷಣ್ಣತೆಗೆ ದೂಡುತ್ತದೆ. ಎರಡೇ ಎರಡು ಸಾಲಿನ ಒಂದು ಶೇರ್ ಮೂಲಕ ಒಂದಿಡೀ ಪ್ರದೇಶದ ಚಿತ್ರಣವನ್ನು ಕಟ್ಟಿಕೊಡುವುದು ಗಜಲಕಾರರಿಗೆ ಇರಬೇಕಾದ ನಿಜವಾದ ತಾಕತ್ತು.
ದಮನಿತರ ನೋವುಗಳನ್ನು ಹೇಳಲು ಅಭಿಷೇಕ ಬಳೆ ಎಂದಿಗೂ ಹಿಂದೇಟು ಹಾಕುವುದಿಲ್ಲ

ಹುಟ್ಟಿದ ಊರ ಸೇರಲಾಗದೆ ಸಾವಿನೂರ ಕದ ಬಡೆದವರು ನಾವು
ವಿಧಿಯಾಟಕ್ಕೆ ಸಿಲುಕಿ ನಲುಗಿದವರ ಬದುಕಿದು ಹೋಗಲಿ ಬಿಡಿ
ಎನ್ನುತ್ತಾರೆ. ಇಂತಹ ಹಲವಾರು ಶೇರ್ ಗಳು ಶೋಷಿತರ ಪರವಾಗಿ ಮಾತನಾಡುತ್ತವೆ.

ಗಜಲ್ ಎಂದ ಮೇಲೆ ಅಲ್ಲಿ ವಿರಹದ್ದೇ ಕಾರುಬಾರು. ವಿರಹ ಎನ್ನುವುದು ಗಜಲ್ ನ ಆತ್ಮ ಇದ್ದಂತೆ. ವಿರಹದ ಆಲಾಪಗಳು ಗಜಲ್ ಗೆ ತೀವ್ರತೆಯನ್ನೂ ನವಿರತೆಯನ್ನೂ ನೀಡುತ್ತದೆ ಎಂಬುದನ್ನು ಅಭಿಷೇಕ ಬಳೆ ಮತ್ತೊಮ್ಮೆ ನಿರೂಪಿಸಿದ್ದಾರೆ.

ನಗುನಗುತ್ತಲೇ ನೋವ ಕೊಟ್ಟಿದ್ದಕ್ಕೆ ಋಣಿಯಾಗಿರುವೆ ಸಖಿ
ನೋವ ಮರೆಯಲು ನೆನಪುಗಳಬಿಟ್ಟಿದ್ದಕ್ಕೆ ಋಣಿಯಾಗಿರುವೆ ಸಖಿ

ವಿರಹದ ನೋವನ್ನು ಸಹಿಸುವದು ಸಾಮಾನ್ಯರಿಂದ ಸಾಧ್ಯವಿಲ್ಲ. ಉತ್ಕಟ ಪ್ರೀತಿ ಮುರಿದು ಬಿದ್ದಾಗ ಆವರಿಸಿಕೊಳ್ಳುವ ಖಿನ್ನತೆಯನ್ನು ದೂರ ಮಾಡಲು ಮತ್ತದೇ ಪ್ರೇಮದ ನೆನಪುಗಳನ್ನು ಆವಾಹಿಸಿಕೊಳ್ಳಬೇಕು. ವಿರಹವು ತಣ್ಣಗೆ, ಮಂಜುಗಡ್ಡೆಯ ಚೂರಿ ಎದೆ ಬಗೆದಂತೆ.

ವಿರಹದ ಕ್ಷಣಗಳು ಹಳೆಯ ನೆನಪಿನ ವಿಳಾಸ ಹುಡುಕುತಿವೆ
ಬಾಯಾರಿದ ತುಟಿಗಳು ಮಧುಶಾಲೆಯ ಬಾಗಿಲು ಬಡಿಯುತಿವೆ

ವಿರಹದ ಜೊತೆ ಜೊತೆಗೆ ಮಧುವಿರದ ಗಜಲ್ ತೀರಾ ಸಪ್ಪೆಯೆನಿಸುತ್ತದೆ. ವಿರಹವನ್ನು ಮರೆಯಲು ಮದಿರೆಯೇ ಔಷಧ. ಹೀಗಾಗಿ ಸುರೆಯ ನಶೆಯನ್ನು ಗಜಲ್ ನ ಉತ್ಕಂಟತೆಯ ಜೊತೆ ಸೇರಿಸುವದು ಎಲ್ಲ ಗಜಲಕಾರರ ರೂಢಿ.

ಮನದ ಬಾಗಿಲು ಮುಚ್ಚಿದ್ದರೇನು ಮಧುಶಾಲೆ ತೆರೆದಿದೆ
ನಿನ್ನ ಸಾಂಗತ್ಯ ಇಲ್ಲದಿದ್ದರೇನು ಸಾಕಿಯ ಕರುಣೆಯಿದೆ

ಮಧುಶಾಲೆಯ ಸಾಕಿ ಲಿಂಗಬೇಧವಿಲ್ಲದ ಆತ್ಮೀಯ. ಹೆಣ್ಣೂ ಆಗಿರಬಹುದಾದ, ಗಂಡೂ ಆಗಿರಬಹುದಾದ ಈ ಸಾಕಿ ಕೇವಲ ಮದಿರೆಯನ್ನು ಬಗ್ಗಿಸಿ ಕೊಡುವುದಷ್ಟೇ ಅಲ್ಲ ಮನದ ಬೇಗೆಯನ್ನೂ ಕಡಿಮೆ ಮಾಡಬಹುದು. ಹೀಗಾಗಿ ಪ್ರೇಮಿ ದೂರವಾದರೆ ಸಾಕಿಯ ಸಂತೈಸುವಿಕೆ ಇದ್ದೇ ಇರುತ್ತದೆ. ತನ್ನ ಬಳಿ ಸದಾ ಬರುವವರ ಮಾನಸಿಕ ಸ್ತೀತಿಯ ಅರಿವು ಸಾಕಿಗಿರುತ್ತದೆ. ಎಷ್ಟರಮಟ್ಟಿಗೆ ಆ ದೇಹ ಹಾಗೂ ಮನಸ್ಸು ಸುರೆಯನ್ನು ಸಹಿಸಿಕೊಂಡೀತು ಎಂಬುದು ತಿಳಿದಿರುತ್ತದೆ. ಹೀಗಾಗಿಯೇ

ಇಂದು ಇಲ್ಲೆನಬೇಡ ಕೇಳಿದಷ್ಟು ಮಧುವ ತುಂಬಿಕೊಡು ಸಾಕಿ
ಲೆಕ್ಕ ಹಾಕಬೇಕಿದೆ ಕೂತು ಮನದ ನೋವ ತುಂಬಿಕೊಡು ಸಾಕಿ

ಎನ್ನುತ್ತಾರೆ. ವಿರಹಕ್ಕೆ ಮದಿರೆಯೇ ಮದ್ದು. ಮದಿರೆಯ ನಶೆಯೊಳಗೆ ಪ್ರೇಮಿಯ ನೆನಪೂ ಮರೆಯಾಗಲಿ ಎಂಬ ಆಶಯವಿದೆ

ಗಜಲ್ ಸಾಮಾಜಿಕ ತಲ್ಲಣಗಳಿಗೆ ಬಾಯಿಯಾಗಬೇಕು . ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವಿಪ್ಲವಗಳನ್ನು ಕಟ್ಟಿಕೊಡಲೇ ಬೇಕು.

ರಾಮನೂರಿನಲ್ಲಿ ಸೀತೆಯ ಗೆಳತಿ ಕೊಲೆಯಾದಳಲ್ಲ ಒಳ್ಳೆಯ ದಿನ ಯಾವಾಗ
ಮನೆ ಬೆಳಗುವ ದೀಪವೊಂದು ಆರಿತಲ್ಲ ಒಳ್ಳೆಯ ದಿನ ಯಾವಾಗ

ನಿರ್ಭಯ, ಮಧು, ಮನೀಷಾ ಇನ್ನೆಷ್ಟು ಜೀವ ಬಲಿಯಾಗಬೇಕು
ಮನೆಯಂಗಳದಿ ಅರಳಿದ್ದ ಹೂವೊಂದು ಬಾಡಿತಲ್ಲ ಒಳ್ಳೆಯ ದಿನ ಯಾವಾಗ

ಎನ್ನುತ್ತ ಬರಲಿರುವ ಅಚ್ಛೆದಿನದ ಕನಸು ಮುರುಟಿ ಹೋಗುತ್ತಿರುವ ವ್ಯಂಗ್ಯವನ್ನು ಹೇಳುತ್ತಾರೆ. ಏನೇನೋ ಆಗಿಬಿಡುವುದೆಂಬ ಭ್ರಮೆಯಲ್ಲಿರುವ ನಮಗೆ ಆ ದಿನ ಯಾವತ್ತಿಗೂ ಬರಲಾರದ್ದು ಎಂಬ ವಾಸ್ತವವೇ ಸುಳ್ಳು ಎನ್ನಿಸುವಂತಾಗಿದೆ.

ಗಜಲನ್ನು ಸಮರ್ಪಕವಾಗಿ ಬಳಸಿ ಬೆಳೆಸಿಕೊಳ್ಳುವ ಅವಕಾಶ ನಮ್ಮ ಕೈಯ್ಯಲ್ಲಿಯೇ ಇದೆ. ಅಭಿಷೇಕ ಬಳೆಯವರು ಹಿಂದಿ ಪದಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಚಂದದ ಸಿಗನ್ನಡವನ್ನು ಬಳಸಿದರೆ ಮತ್ತಿಷ್ಟು ಸುಂದರವಾಗುತ್ತದೆ. ಮತ್ತೆ ಮತ್ತೆ ಗಾಲಿಬ್ , ಸಾಕಿ, ಸಖಿ ಎಂಬ ರಧೀಪ್ ಬಳಸುವುದನ್ನು ಕಡಿಮೆ ಮಾಡಿ ಈ ಸಂಕಲನದಲ್ಲಿ ನೀಡಿರುವ ರಾಧಾಕೃಷ್ಣ, ಕೃಷ್ಣ, ನಾನೆಷ್ಟರವ ಮುಂತಾದ ಹೊಸ ಹೊಸ ರಧೀಪ್ ಬಳಸುವುದರಿಂದ ಸಂಕಲನ ಮತ್ತಿಷ್ಟು ಆಕರ್ಷಿಸುತ್ತದೆ‌

ದ್ವೇಷ ಕಾರುವವರಿಗೆ ಪ್ರೀತಿಯಂದರೆ ಏನೆಂದು ಹೇಗೆ ಹೇಳಲಿ ಗಾಲಿಬ್
ರಕ್ತದ ರುಚಿ ಉಂಡ ನಾಲಿಗೆಗೆ ಮದಿರೆ ಹೇಗೆ ಕುಡಿಸಲಿ ಗಾಲಿಬ್

ಎಂಬ ಮಕ್ತಾ ಕಾಡುತ್ತಿದೆಯಾದರೂ ಪ್ರೀತಿ ಸರ್ವವ್ಯಾಪಿಯಾಗಲಿ. ಸಹನೆ ಸಮಾನತೆ ಸಹಬಾಳ್ವೆ ಜೀವನದ ಮಂತ್ರವಾಗಲಿ.

‍ಲೇಖಕರು Admin

August 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: