2
ಶೋಭಾ ಹಿರೇಕೈ ಕಂಡ್ರಾಜಿ.
ಈ ಲೇಖನದ ಮೊದಲ ಭಾಗ – ನನ್ನೊಂದಿಗೆ ಕನ್ನಡ ಕೂಡಾ ಅನಾಥವಾದಂತೆನಿಸಿತ್ತು…
ನವಂಬರ್ ಅಂದರೆ ಕನ್ನಡದ ಮಾಸ. ಅದರ ಜೊತೆಗೆ ನನಗೋ ಎಡಬಿಡದೆ ಮರಾಠಿಯದ್ದೇ ದ್ಯಾಸ.
ನೆನೆಯದಿರಲಿ ಹೇಗೆ ಆ ಮರಾಠಿ ಊರಲ್ಲಿ ಈ ಮಲೆನಾಡಿನ ಮಗಳಿಗೆ ತೋರಿದ ಗೌರವ, ಅಕ್ಕರೆ, ವಾತ್ಸಲ್ಯ ಪ್ರೀತಿಗಳನ್ನು. ಹೇಗೆ ನೆನೆಯದೇ ಇರಲಿ ಆ ತುತ್ತ ತುದಿಯೂರಲ್ಲಿ ನನಗಾಗಿ ಎಂಬಂತೆ ಕನ್ನಡ ಮಾತಾಡಲು ಕಾದು ಕುಳಿತ ಆ ವೃದ್ಧ ತಂದೆಯನ್ನ.. ದೀದಿ ದೀದಿ ಎನ್ನುತ್ತಾ ನನ್ನೆಲ್ಲಾ ವಯಕ್ತಿಕ ಕೆಲಸಗಳಿಗೆ ಜೊತೆಯಾಗುತಿದ್ದ ಅಲ್ಲಿಯ ಅಕ್ಕ ತಂಗಿಯರನ್ನ. ಆಯಿ , ವಡೀಲ್ (ಅಪ್ಪ) ಸಗಳಿ ಆಹೆ, ಖರ ಕಾಯ್ ಉಪಯೋಗ್ ನಾಹಿ… ಎನ್ನುತ್ತಾ ಸದಾ ಕನಿಕರವಿಟ್ಟು ನಾನು ಅತ್ತಾಗ ತಾವೂ ಅತ್ತು ಕಣ್ಣೊರೆಸುತಿದ್ದ ಆ ಊರ ತಾಯಂದಿರನ್ನ. ಮತ್ತೆ ಹೇಗೆ ಮರೆತೇನು ಹೇಳಿ ನನ್ನ ಮೊದಲ ಶಾಲೆಯ ಆ ಮುದ್ದು ಮಕ್ಕಳನ್ನ, ನನ್ನ ಎರಡು ವರ್ಷ ಕಾಲ ಪೊರೆದ ಆ ಕಣಿವೆಯೂರನ್ನು…. ನೋವನ್ನೆಲ್ಕಾ ಮರೆಸಿ ಬಿಡುತಿದ್ದ ಆ ಕಣಿವೆಯನ್ನ, ಕಣಿವೆಯ ನೆತ್ತಿ ಮೇಲಿದ್ದ ಮಾವುಲಿ ತಾಯಿಯನ್ನ, ಮಾತಾರಿ ದೇವಿಯ ಕೃಪೆಯನ್ನು… ಮರೆತೆನೆಂದರೂ ಮರೆಯಲಾದೀತೆ?
ತಾ ಮುಂದು ತಾಮುಂದು ಎಂದು ಓಡೋಡಿ ಬಂದು , ನನ್ನ ತಲೆಯೇರಿ ಕುಳಿತು ಬಿಡುವ ಅಲ್ಲಿಯ ನೆನಪುಗಳಲ್ಲಿ ನನ್ನ ‘ನಾನಾನ’ ನೆನಪೇ ಮೊದಲು ಕುಳಿತು ತಂಗ್ಯವ್ವ ಎಂದು ಕರೆದಂತೆ… ಊರ್ ಸೇರಿ ಚಲೋ ಅದಿಯೋ ಇಲ್ಲೋ ಎಂದಂತೆ.
ಆ ತಂದೆಯನ್ನು ಎಲ್ಲರೂ ನಾನಾ ಎಂದು ಕರೆಯುತಿದ್ದರು. ಬಹುಷ; ಮರಾಠಿಯಲ್ಲಿ ಅದು ಅಜ್ಜ ಇರಬಹುದು ಅಂದುಕೊಂಡು ನಾನು ಸಹ ಅವರೆಲ್ಲಾ ಕರೆದ ಹಾಗೆ ‘ನಾನಾ’ ಎನ್ನುತ್ತಿದ್ದೆ. ಆ ಊರಲ್ಲಿ ನಾನು ನೌಕರಿ ಮಾಡಬಲ್ಲೆ ಎಂಬ ಧೈರ್ಯಕ್ಕೆ ಕಾರಣ ಇದೇ ನಾನಾ ಮತ್ತವರ ಕನ್ನಡ. ಹಾಗಾಗಿ ನನ್ನ ಪಾಲಿಗೆ ದೇವರೇ ಈ ರೂಪದಲ್ಲಿ ಸಿಕ್ಕಿದ್ದಾರೆ ಎಂದು ನಮ್ಮ ಮನೆಯಲ್ಲಿ ಎಲ್ಲರೂ ನಂಬಿದ್ದರು. ನಾನೂ ಕೂಡಾ ಹಾಗೇ ನಂಬಿದ್ದೆ.
ಮೊದಲ ದಿನ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಾಗ ನನಗೊಂದು ಉಳಿಯಲು ವ್ಯವಸ್ಥೆ ಮಾಡಬೇಕಲ್ಲ. ಹೆಡ್ ಮಾಸ್ತ್ರು ಶಾಲಾ ಸಮಿತಿಯವರ ಮನೆಗೆಲ್ಲ ಮಕ್ಕಳನ್ನು ಓಡಿಸಿ ವಿಷಯ ಮುಟ್ಟಿಸಿದ್ರು. ಅವರೆಲ್ಲಾ ಊರಿನ ಮಂದಿರದ ಎದುರು ಮೊದಲೇ ಸೇರಿ ಕನ್ನಡ ಬಲ್ಲ ‘ನಾನಾ’ರ ಮನೆಯಲ್ಲೇ ಉಳಿಸುವುದು ಎಂದು ತೀರ್ಮಾನ ಮಾಡಿಕೊಂಡು. ನಾನಾರಿಗೆ ವಿಷಯ ಮುಟ್ಟಿಸಿಯೇ ಶಾಲೆಗೆ ಬಂದಿದ್ದರು. ನಾನು ಮತ್ತೆ ಅಪ್ಪ ಸ್ವಲ್ಪ ಸಮಾಧಾನದ ಉಸಿರೆಳೆದುಕೊಂಡೆವು. ಅಷ್ಟರಲ್ಲೆ ಪಟಗಚ್ಚೆ ಶೈಲಿಯ ಸೀರೆ ಯನ್ನು ಮೊಣಕಾಲಿಂದ ಕೆಳಗೆ ಇಳಿಸಿಕೊಳ್ಳುತ್ತಾ ನಾನಾರ (ಹೆಂಡತಿ) ಬಂದು ಹೆಡ್ ಮಾಸ್ತರರ ಕಡೆ ಏನೇನೋ ಹೇಳಿ ಹೋದರು. ಆಮೇಲೆ ಮಾಸ್ಟರ್ ಥಂಡಾಗಿ ಅವರ ಭಾಷೆಯಲ್ಲೇ ಅದೇನೇನೋ ಸಲಹೆ ಸೂಚನೆ ಕೊಡುತಿದ್ದರು.
ಆಯಿ ಹೇಳಿದ್ದೇನೆಂದರೆ, ಬಾಡಿಗೆ ಕೊಡಲು ತೊಂದರೆ ಇಲ್ಲ, ಆದರೆ ಬಾಯಿ ಬಾಹಿರ್ (ಮುಟ್ಟು) ಆದಾಗ ಒಳಗಡೆ ಇರುವಂತಿಲ್ಲ. ಅದು ಊರಿನ ಪದ್ಧತಿ. ಹೀಗಾಗಿ ಬೇರೆ ಎಲ್ಲಾದರೂ ಹೊರಗಡೆ ಇರುವ ರೂಮಿದ್ದರೆ ನೋಡಿ ಎಂದು ಹೇಳಿ ಹೋದರಂತೆ. ಬಂದ ಎಲ್ಲರ ಅಭಿಪ್ರಾಯವೂ ಒಂದೇ…. ಮತ್ತೆ ಎಲ್ಲೂ ಬಾಡಿಗೆ ಕೊಡುವ ಖೋಲಿ ಇಲ್ಲ ಎಂದು. (ಅಲ್ಲಿಯ ಪರಿಸ್ಥಿತಿಯೇ ಹಾಗಿತ್ತು. ಬಾಡಿಗೆ ಕೊಡಲು ಉದ್ದೇಶಕ್ಕೆ ಯಾರೂ ಮನೆ ಕಟ್ಟಿರಲಿಲ್ಲ. ಅಷ್ಟಕ್ಕೂ ಅಲ್ಲಿ ಬಾಡಿಗೆ ಮನೆ ಹಿಡಿದು ಉಳಿವವರಾದರೂ ಯಾರು?) ಅಂತೂ ಕೊನೆಗೆ ನಾನಾರ ಮನೆಯ ಎತ್ತುಗಳಿದ್ದ ( ರಾತ್ರಿ ಮಾತ್ರ ಅಲ್ಲಿ ಕಟ್ಟುತ್ತಿದ್ದ) ಒಂದು ಖೋಲಿಯನ್ನು ಖಾಲಿ ಮಾಡಿ ಅದನ್ನೆ ಸ್ವಲ್ಪ ಸಾರಿಸಿ, ಗುಡಿಸಿ ಮಣ್ಣು ಮೆತ್ತಿ ಕೊಡುವುದು, ಅಲ್ಲೀವರೆಗೂ ನಾನಾರ ಮನೆಯಲ್ಲಿ ಊಟ ತಿಂಡಿ ಮಾಡುವುದು. ಆದರೆ ಬಾಹಿರ್ ಪರಿಪಾಲನೆ ಈ ಊರಿನ ನಿಯಮ ಮೀರಬಾರದು …ಎನ್ನುವ ಪ್ರೀತಿಯ… (ಭೀತಿಯ) ಸಲಹೆ ನೀಡಿ ನಾನಾರ ಮನೆಗೆ ನಮ್ಮ ಲಗೇಜು ದಾಟಿಸಿದರು. ಅಪ್ಪ ಅಲ್ಲಿಯ ಮಾವುಲಿ ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಬಂದರು.
ಅಗಷ್ಟ್ ತಿಂಗಳ ಜೋರು ಮಳೆ. ಬೆಳಗಾವಿಯ ಪಶ್ಚಿಮ ದ ತುದಿಯ, ಪಶ್ಚಿಮ ಘಟ್ಟದ ಸಾಲು ಸಾಲು ಕರಿ ಮೋಡಗಳೆಲ್ಲಾ ಒಟ್ಟಾಗಿ ಅದೇ ಊರಿಗೆ ಮಾತ್ರ ಸುರಿದಂಗೆ. ಕನಕುಂಬಿ ಅತೀ ಹೆಚ್ಚಿಗೆ ಮಳೆ ಪಡೆವ ಊರು ಕೂಡಾ. ಇಂತಹ ಮಳೆಯೂರಿಗೆ ಕನ್ನಡದ ಮಳೆ ತಂದವಳನ್ನು ರಾತ್ರಿ ಹೊಡಿಸಲಿನ ಮುಂದೆ ಕೂರಿಸಿ ಊರವರೆಲ್ಲರಿಗೂ.. ಕನ್ನಡ ಬಾಯಿ.. ಎಂದು ಎಲ್ಲರಿಗೂ ಪರಿಚಯಿಸುತ್ತಾ …. ಗೊತ್ತಾಗದ ಮರಾಠಿ ಮಾತನ್ನೆಲ್ಲಾ ತಂಗ್ಯವ್ವ ಅದರ ಅರ್ಥ ಹೀಗೆ ಹಾಗೇ ಎನ್ನುತ್ತಾ … ಕನ್ನಡ ಕಲಿಸಲು ಹೋದ ಗುರುವಿಗೆ, ಮರಾಠಿ ಕಲಿಸುವ ಗುರುವಾದರು ನಾನಾ.
ಆದರೆ ನಾನೋ ಅಲ್ಲಿ ಗುರುವಾಗಲು ತುಂಬಾ ಕಷ್ಟಪಡಬೇಕಿತ್ತು .ಅದರಲ್ಲೊಂದು ಕಷ್ಟ ಮತ್ತು ಅದಕ್ಕೆ ನಾನಾರ ಸಹಾಯವನ್ನು ತಂಪು ಹೊತ್ತಲ್ಲಿ ಮಾತ್ರ ನೆನೆಯಬೇಕು.
ಊರಲ್ಲಿ ಇದ್ದ ಒಂದೇ ಒಂದು ಬಸ್ಸು. ಅದು ಬೆಳಿಗ್ಗೆ ೬ ಕ್ಕೆ ಊರು ಬಿಟ್ಟಿತೆಂದರೆ ರಾತ್ರಿ ಎಂಟಕ್ಕೆ ಮತ್ತೆ ಮರಳುವುದು. ಮೀಟಿಂಗೋ, ಟ್ರೈನಿಂಗೋ…. ಅಥವಾ ಊರಿಗೇ ಬಂದಾಗಲೆಲ್ಲಾ ನನಗೆ ಅದೇ ಬಸ್ಸೇ ಗತಿ. ಆಂತಹ ಸಂದರ್ಭದಲ್ಲೆಲ್ಲಾ ರಾತ್ರಿ ಬಂದಿಳಿದ ನನ್ನ ಕಾಲು ಬಸ್ಸಿನ ಮೆಟ್ಟಿಲ ಕೆಳಗೆ ಇಳಿಯುವುದರೊಳಗೆ.. ತಂಗ್ಯವ್ವ ಎನ್ನುತ್ತಾ ಬ್ಯಾಟರಿಯ ಬೆಳಕನ್ನು ನನ್ನ ದಾರಿಗೆ ಹಿಡಿಯೋರು. ನಾನಾ ಇಲ್ಲದಿದ್ದರೆ ನಾನು ಅಕ್ಷರಷ: ಅನಾಥಳಾಗಬೇಕಿತ್ತೇನೋ ಅಲ್ಲಿ. ಇಡೀ ಊರೇ ಗೌರವ ಕೊಡುತಿತ್ತು. ಆದರೆ ಕೆಲವು ಸಲ ಗೌರವಕ್ಕಿಂತ ಒಂದು ಹಿಡಿ ಪ್ರೀತಿ , ವಾತ್ಸಲ್ಯವನ್ನು ಬೇಡುತ್ತದೆ ಬದುಕು. ಅದನ್ನು ನನಗೆ ಕೊಟ್ಟವರು ನಾನಾ. ನಾನಾರ ಕಿರಿ ಮಗಳು ಕನ್ನಡ ಬಾಯಿ ಅಂತ ಊರಿನ ಎಲ್ಲರೂ ಹೇಳುವಾಗ ನನಗೆ
ಯಾವ ಜನ್ಮದ ಋಣವೋ
ಕರೆ ತಂದಿತಿಲ್ಲಿಗೆ ನನ್ನ
ಸಿಗಬಹುದೆ
ನನಗಿಲ್ಲಿ ಹೆತ್ತೊಡಲ ಪ್ರೀತಿ?
ಬದುಕ ಬಲ್ಲೆನೆ
ನಾನು
ನನ್ನತನವನು ಬಿಡದೆ
ಬೆಳಕ ತೋರಲಿ
ನನ್ನೆದೆಯ ಜ್ಯೋತಿ
ಎಂದು ಇಲ್ಲಿಗೆ ಬಂದ ಮೊದಲ ದಿನ ಬರೆದ ಡೈರಿ ಪುಟದ ಕೊನೆಯ ಸಾಲುಗಳು ನೆನಪಾಗುತಿದ್ದವು. ಬರೆದ ಸಾಲು ಸತ್ಯವಾಯಿತು ಎಂದು ಸಮಾಧಾನ ಪಟ್ಟು ಕೊಳ್ಳುತ್ತಿದ್ದೆ. ಹೌದು ಅದಾವುದೋ ಒಂದು ಅಲೌಕಿಕ ಶಕ್ತಿಯೇ ನಾನಿಲ್ಲಿ ಬರಲು ಕಾರಣ.. ಮತ್ತೂ ಈ ತಾಯಿ ರೂಪದ ತಂದೆ ಸಿಗಲು ಕಾರಣ ಅಂದುಕೊಳ್ಳುತ್ತಿದ್ದೆ.
ಅಲ್ಲಿಂದ ಎರಡೇ ವರ್ಷಕ್ಕೆ ವರ್ಗವಾಗಿ ನನ್ನೂರಿಗೆ ಬರುವಾಗಲೂ ಅಷ್ಟೇ.. ‘ ತಂಗ್ಯವ್ವ ವರ್ಗಾವರ್ಗಿ ಸುದ್ದಿ ಇಲ್ಲಿ ಯಾರಿಗೂ ಹೇಳಬ್ಯಾಡವ್ವ. ಮೊದಲು ಊರು ಸೇರು. ಮುಂದೊಂದು ದಿನ ಬಂದು ಹೇಳಿ ಹೋಗು. ಇಲ್ಲದಿದ್ರ ಗಲಾಟೆ ಮಾಡ್ತಾರು ಇಲ್ಲಿ ಜನ’ ಅಂತ ಹೇಳಿ ..ಕಣ್ಣೀರು ಒರೆಸಿಕೊಂಡು ಬೀಳ್ಕೊಟ್ಟಿದ್ದರು ನಾನ.
ಅಲ್ಲಿಂದ ಬಂದ ನಾನು ಒಂದೆರಡು ವರ್ಷ ಆಗಾಗ ಪತ್ರ ಬರೆದು ಕ್ಷೇಮ ಕುಶಲ ಕೇಳುತಿದ್ದೆ. ಆಮೇಲಾಮೇಲೆ ಮರೆತೆ ಬಿಟ್ಟೆ. ಒಂದಿನ ಕನಕುಂಬಿಗೆ ಬಂದು ಅವರ ಮಗ ಕಾಲ್ ಮಾಡಿ ‘ದೀದಿ ನಾನಾರಿಗೆ ತುಂಬಾ ಹುಷಾರಿಲ್ಲ, ನಿಮ್ಮ ಸುದ್ದಿ ಆಗಾಗ ಕೇಳುತಿದ್ದರು. ಈಗ ಮಾತೇನು ಆಡುತ್ತಿಲ್ಲ.. ಒಮ್ಮೆ ಬಂದು ಹೋಗಿ’ ಅಂತ ಅದೇ ಅವರ ಕೊಂಕಣಿ ಮಿಶ್ರಿತ ಮರಾಠಿಯಲ್ಲಿ ಹೇಳಿ… ತುಮಿ ಆಯೆಲಾ ಪಾಯಿಜೆ ಅಂತ ಹೇಳಿದಾಗ… ಹೋಗದೇ ಇರಲು ಸಾಧ್ಯವೆ?
ಅಲ್ಲಿಂದ ಬಂದು ಹತ್ತು ವರ್ಷದ ಮೇಲೆ ನಾನಾರ ನೋಡಲು ನಾನು ನನ್ನ ಕುಟುಂಬದೊಂದಿಗೆ ಹೋದೆವು. ನಾನಾ ಜೀವಚ್ಛವವಾಗಿದ್ದರು. ಮರಾಠಿ ಊರಲ್ಲಿ ಕನ್ನಡನಾಡಿನ ಪ್ರತಿನಿಧಿಯಂತಿದ್ದ ನಾನಾ, ನನಗೆ ನನ್ನ ಅಪ್ಪ ಅಮ್ಮ, ಬಂಧು ಬಳಗದ ದನಿಯಾದ ನಾನಾ ಈಗ ಮಾತುಕತೆಯಿಲ್ಲದೆ … ನನ್ನ ಬರುವಿಕೆಗಾಗಿಯೇ ಜೀವ ಇಟ್ಟುಕೊಂಡು ಉಸಿರಾಡುತಿದ್ದರೇನೋ ಅನ್ನಿಸಿ ಬಿಟ್ಡಿತ್ತು. ಮೊದಲನೇ ದಿನ ಈವೂರಲ್ಲಿ ಮಾತಾಡದೇ ಮೌನವಾಗಿಬಿಟ್ಟಿದ್ದೆನೋ ಅದೇ ರೀತಿ ಈ ದಿನವೂ ಮಾತೇ ಹೊರಡುತ್ತಿರಲಿಲ್ಲ ನನಗೆ. ನಾನು ಹೋದ ಸುದ್ದಿ ಗೊತ್ತಾಗಿ ಊರವರೆಲ್ಲಾ ಸೇರಿದರು. ಬಂದವರೆಲ್ಲಾ ಬಾಯಿ ಕನ್ನಡದಲ್ಲಿ ಮಾತಾಡಿಸಿ ನಾನಾಗೆ ಎಚ್ಚರ ಆಗಬಹುದು ಎನ್ನುತ್ತಿದ್ದರು. ಅವರ ಹೆಣ್ಣು ಮಕ್ಕಳೆಲ್ಲರೂ ಅದನ್ನೆ ಹೇಳಿದರು…. ‘ ಬಾಯಿ ಕನ್ನಡ ಮಾತಾಡಿ.”…
ನಾನು ಮಾತಾಡಿದೆ… ಕನ್ನಡದಲ್ಲೇ ಮಾತಾಡಿದೆ … ಕಣ್ಣೀರಲ್ಲೂ ಮಾತಾಡಿದೆ. ಆದರೆ ನಾನಾ ಮಾತ್ರ ಮಾತಾಡಲಿಲ್ಲ. ಅವರ ಕಣ್ಣಂಚಿನ ನೀರು ಮಾತ್ರ ಹೇಳಿತು… ಅಲ್ಲ, ಕೇಳಿದಂತೆನಿಸಿತು , ‘ತಂಗ್ಯವ್ವ ಬರಲು ಇಷ್ಟೇಕೆ ತಡ ಮಾಡಿದೆ ‘ಎಂದು…. ನನ್ನೊಂದಿಗೆ ಅಲ್ಲಿದ್ದ ಎಲ್ಲರ ಕಣ್ಣೀರಿನ ಉತ್ತರವನ್ನು ನಾನಾ ಕೇಳಲೇ ಇಲ್ಲ. ನೋಡಲೂ ಇಲ್ಲ. ಅದೇ ಸಂಜೆ ಅಲ್ಲಿಂದ ಭಾರವಾದ ಮನಸಿನಿಂದ ಹೊರಟು ನಿಂತ ನನಗೆ ಆಯಿ ಉಡಿ ತುಂಬಿ ಕಳಿಸಿದಳು. ಬಹುಷಃ ಆಯಿ ಗಂಡನ (ನಾನಾರ) ಪಕ್ಕ ನಿಂತು ಕೊನೆಯದಾಗಿ ಉಡಿ ತುಂಬಿದ್ದು ಈ ಕನ್ನಡದ ಮಗಳಿಗೇ… ನೆನೆದರೀಗ ಕಣ್ಣು ಕೊಳ. ಭಾಷೆ ಮೀರಿದ ಈ ಬಾಂಧವ್ಯಕ್ಕೆ ಏನನ್ನಬೇಕು?
ನಾನು ಮನೆಗೆ ಮರಳಿ ಹದಿನೈದು ದಿನವೂ ಆಗಿತ್ತೋ ಇಲ್ಲವೋ… ‘ಬಾಯಿ ನಾನಾ ಗೆಲೆ ‘ ಎಂಬ ಕರೆ. ಮರಾಠಿ ಊರಿನ ಕನ್ನಡ ತಂದೆಯ ಅಂತಿಮ ದರ್ಶನದ ಭಾಗ್ಯ ನನಗೆ ಸಿಗಲಿಲ್ಲ.
ನನಗೆ ಈಗಲೂ ನಾನಾರ ನೆನನಪಾದಗಲೆಲ್ಲಾ “ಬಾಯಿ ತುಮಿ ಕನ್ನಡ್ ಮದೆ ಬೋಲಾ, ನಾನಾಲಾ ಜಾಗ್ ಏತೆ ” ಎಂದ ಮರಾಠಿಗರ ದನಿಯೇ ಕೇಳಿದಂತಾಗುತ್ತದೆ.
ಆದರೆ…
ನಾನಾ ಕಣ್ಬಿಡಲೇ ಇಲ್ಲ. .ದೇವರೇ ಅಲ್ಲೀಗ
ಕನ್ನಡದ ಸ್ವರವೂ ಇಲ್ಲ.
0 Comments