ವಾಚಕರನ್ನು ವಿಮರ್ಶಕರನ್ನೂ ಚಿತ್ತಾಗಿಸುವ ಕವಿತೆಗಳು
ಶಿವ ಕಂಪ್ಲಿ
ಇದು ವಿಚಾರಗಳ ವಿಜ್ಞಾನ ಮತ್ತು ತಂತ್ರಜ್ಞಾನಗಳ ಕಾಲ ಎನ್ನುವಾಗಲೇ ಇಲ್ಲಿನ ಕವಿತೆಗಳು ಕನಸುಗಾರಿಕೆಯನ್ನ, ಕಲ್ಪನೆಯನ್ನ, ಉತ್ಪ್ರೇಕ್ಷೆ ಹಾಗೂ ಫ್ಯಾಂಟಸಿಗಳನ್ನ ತಮ್ಮ ಕೈಕಾಲು ಮಾಡಿಕೊಂಡು ನಗುತ್ತಿವೆ. ಇದು ಗದ್ಯಗಳ ಯುಗ ಎನ್ನುವಾಗಲೂ ಇಲ್ಲೇ ಕಾವ್ಯ ಕೃಷಿ ಸಖತ್ತಾಗಿ ನಡೆದಿದೆ. ಈ ಫಸಲು ಸಹೃದಯನ ಎದೆಯ ಮಾರುಕಟ್ಟೆಯಲ್ಲಿ ಬಂದು ನಿಂತಾಗ ಮಾತ್ರ ಕೆಲವು ತೀರಾ ಜಡವಾಗಿ, ಹಲವು ಬಾಲಿಶವಾಗಿ ಬೆಲೆ ಕಳಕೊಂಡು ಕುಳಿತಲ್ಲೇ ಕೂಡುತ್ತವೆ. ಕೆಲವು ಕವಿತೆಗಳು ಬೆನ್ನಮೇಲೆ ಸಿದ್ಧಾಂತಗಳ ಭಾರ ಹೇರಿಕೊಂಡು ಜೀವಂತಿಕೆಯ ಚೆಲುವನ್ನೇ ಮರೆತರೆ, ಇನ್ನೂ ಕೆಲವು ಕೆಟ್ಟ ಕೆಟ್ಟ ಫ್ಯಾಶನ್ನಿನ ಅಂಗಿ ತೊಟ್ಟು ಸೊಟ್ಟಗೆ ನಿಂತರೂ ಜಾಹೀರಾತಿನ ಮರಳು ಮಾತುಗಾರರ ತುಂತುರು ಮಳೆಯಲ್ಲಿ ನಿಂತು ಬಿಂಕ ಮಾಡುತ್ತವೆ. ಸೀದಾ ಸಾದಾ ಸಹಜ ಕವಿತೆಗಳು ತಮ್ಮ ಪಾಡಿಗೆ ತಾವು ಬಂದು ಹೃದಯವನ್ನ ತೀವ್ರವಾಗಿ ಆಕರ್ಷಿಸುತ್ತವೆ. ತಮ್ಮದೇ ಉಪಯುಕ್ತ ಗುಣದಿಂದ, ತೂಕದ ನಡೆಗಳಿಂದ, ಸಾಮಾಜಿಕ, ರಾಜಕೀಯ ಪ್ರಬುದ್ಧತೆಗಳಿಂದ ಅವು ಕಾಲಾತೀತವೆಂಬಂತೆ ಕಂಗೊಳಿಸುತ್ತವೆ.
ಓದಿನ ಸುಖದಲ್ಲಿ ತನ್ನ ತೆಕ್ಕೆಗೆ ಬಂದ ಕೆಲವು ಸಂಕಲನಗಳನ್ನ ರಸಿಕನು ನಿಷ್ಠೂರವಾಗಿ ತಳ್ಳಿ ಹಾಕುವಂತೆಯೇ ವಿಮರ್ಶಕನೂ ಸುಲಭವಾಗಿ ಮಣಿಯದೆ ಸೂಕ್ಷ್ಮವಾಗಿಯೇ ಪಟ್ಟಕಟ್ಟಿ ನಡೆಯುತ್ತಾನೆ. ಖುಷಿಯೇ ದುಬಾರಿಯೆನಿಸುವ ಈ ಕಾಲದಲ್ಲಿ ಕೈ ಹಿಡಿದು ಮುದ್ದಿಸುವಂತಹ ಸಂಕಲನಗಳು ಎಷ್ಟೋ ದಿನಗಳಿಗೊಮ್ಮೆ ಕಾಣುತ್ತವೆ. ಅಂತಹ ಅರ್ಥಪೂರ್ಣ ಧ್ವನಿಗಳ, ಪ್ರಯೋಗಶೀಲ ನಡೆಗಳ ಅಕ್ಕರೆ ಹುಟ್ಟಿಸುವ ಸಂಕಲನವೇ ವಿಲ್ಸನ್ ಕಟೀಲ್ ಅವರ “ನಿಷೇಧಕ್ಕೊಳಪಟ್ಟ ಒಂದು ನೋಟು.” ಮಿಂಚು ‘ಥಳ್’ ಎಂದು ಮಾಯವಾದಂತೆ, ಹೊಸ ಹಗಲಿಗೆ ಮೊಗ್ಗು ಜೊತೆಯಾದಂತೆ, ಬೋನಿಗೆ ಬಿದ್ದ ಇಲಿ ಪರದಾಡುವಂತೆ, ಬರದ ಕೆನ್ನೆಯ ಮೇಲೆ ಕಣ್ಣೀರ ಮಳೆಹನಿ ಮಾತ್ರ ನಿಂತಂತೆ, ಅವಳ ಕಣ್ಣಲ್ಲಿ ಪದಕ್ಕೇ ಸವಾಲು ಹಾಕುವ ಒಲವು ಜಿನುಗಿದಂತೆ ಇವರು ಕವಿತೆಯನ್ನ ಜೀವಂತವಾಗಿ ನಿಲ್ಲಿಸಬಲ್ಲರು.
ಕವನ ಎಂದು ಕಾರಿಕೊಳ್ಳುವವರ ನಡುವೆ ಕ್ರಿಯಾಶೀಲ ಬರವಣಿಗೆಯ ಬನಿಯ ನಯವನ್ನಿವರು ತೋರಬಲ್ಲರು. ”ಹರಿತ ಶೈಲಿ, ತಾಜಾತನ ಇಲ್ಲಿನ ಕವಿತೆಗಳಲ್ಲಿ ಮುಟ್ಟಿ ಅನುಭವಿಸಬಹುದಾದ ಸಾಮಾನ್ಯ ಗುಣಗಳು. ‘ಕಾವ್ಯದ ಜೀವಂತಿಕೆ‘ ಹಾಗಂದರೇನು? ತಿಳಿಯ ಬಯಸುವವರು ಇವರ ಕವಿತೆಗಳನ್ನೊಮ್ಮೆ ಓದಿ ನೋಡಬೇಕು. ಒಣಶಬ್ದ, ವಾಕ್ಯ, ವಿವರಗಳಲ್ಲಿ ಸೊಕ್ಕಿ ಹೋಗಿರುವ ಕವಿ-ಓದುಗರಿಗೆ ಮುಕ್ತಿ ನೀಡಬಲ್ಲ ನಮ್ಮ ಕೆಲವೇ ಕೆಲವು ಸಮಕಾಲೀನರಲ್ಲಿ ವಿಲ್ಸನ್ ಕಟೀಲ್ ಒಬ್ಬರು. ಅದೇ ಹಳೆಯ ಮಾತಿನಲ್ಲಿ ಹೇಳುವುದಾದರೆ ಆಕೃತಿಯಲ್ಲಿ ಹಳಬನಾಗಿ ಆಶಯದಲ್ಲಿ ಹೊಸಬನಾಗಿರುವ ಇವತ್ತಿನ ಕವಿ ಎದುರಿಸುವ ಬಿಕ್ಕಟ್ಟು ಭಾವದ್ದಲ್ಲ; ಅ-ಭಾವದ್ದು! ಕಾವ್ಯದ ಶರೀರದಲ್ಲೇ ಅಂತರ್ಗತವಾಗಿರುವ ಕಥನದ ಆಕರ್ಷಣೆ ವಿಲ್ಸನ್ ಕಟೀಲ್ ಕವಿತೆಗಳ ಯಶಸ್ಸಿನ ಗುಟ್ಟೂ ಹೌದು. ತನ್ನ ಬ್ಯಾಗೇಜುಗಳ ಭಾರಕ್ಕೆ ತಾನೇ ಕುಸಿಯುತ್ತಿರುವ ಕನ್ನಡ ಕಾವ್ಯಲೋಕಕ್ಕೆ ವಿಲ್ಸನ್ ಕವಿತೆಗಳ ಹಗುರತನ ಚೇತೋಹಾರಿಯಾದದ್ದು. ಒಂದು ಭಾವದ ಎಳೆಯನ್ನು ಹಿಡಿದುಕೊಂಡು ಹೋಗಿ ಅದನ್ನು ಕವಿತೆಯನ್ನಾಗಿಸುವ ಕುಸುರಿತನ ಈ ಕವಿಗೆ ಸಿದ್ಧಿಸಿದೆ,” ಎಂದು ಇವರ ಕವಿತೆ ಕುರಿತಂತೆ ಕವಿ ಆರೀಫ್ ರಾಜಾ ಟಿಪ್ಪಣಿಯೆಂಬ ಪ್ರವೇಶಿಕೆಯನ್ನ ನೀಡಿದ್ದಾರೆ.
“ವಿಲ್ಸನ್ ಕಟೀಲ್ ಪ್ರತಿಭಾವಂತ ಕವಿ ಕನ್ನಡದಲ್ಲಿ ಕವಿತೆ ಬರೆಯಬಲ್ಲರಾದರೂ ಮುನ್ನೆಲೆಗೆ ಬಾರದೆ ಕೊಂಕಣಿಯಲ್ಲಿ ತಮ್ಮ ಪಾಡಿಗೆ ತಾವು ಬರೆದುಕೊಂಡಿದ್ದರು. ಸಂಗಾತ ಪತ್ರಿಕೆ ಆರಂಭಿಸಿದಾಗ ಮೊದಲ ಸಂಚಿಕೆಗೆ ತಮ್ಮದೇ ಕೊಂಕಣಿ ಕವಿತೆಗಳನ್ನ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದರು. ಆ ಕವಿತೆಗಳು ನಿಜಕ್ಕೂ ಡಿಸ್ಟರ್ಬ್ ಮಾಡಿದವು. ಅದೇ ಹಳಸಲು ರೂಪಕಗಳು ಪ್ರಯೋಗಶೀಲತೆ ಇಲ್ಲದ ಕವಿತೆಗಳ ಹಾವಳಿಯೇ ಹೆಚ್ಚಾಗಿದ್ದ ಹೊತ್ತಿನಲ್ಲಿ ವಿಲ್ಸನ್ ಕವಿತೆಗಳು ತಾಜಾ ಅನ್ನಿಸಿದವು. ಇದು ‘ನಿಷೇಧಕ್ಕೊಳಪಟ್ಟ ಒಂದು ನೋಟು’ ಸಂಕಲನ ಪ್ರಕಟಿಸಲು ಕಾರಣ ಇಲ್ಲಿನ ಪದ್ಯಗಳು ನಿಮ್ಮ ಎದೆಗೂ ಇಳಿಯುವುದರಲ್ಲಿ ಅನುಮಾನವಿಲ್ಲ,” ಎಂದು ಪ್ರಕಾಶಕ ಟಿ.ಎಸ್.ಗೊರವರ್ ಪ್ರಕಟಣೆಯ ಉದ್ದೇಶ ಸಾರುತ್ತಾರೆ. ಇಲ್ಲಿನ ಕವಿತೆಗಳು ರೀತಿಯಿಂದ ಹೊಸವು. ಇವು ತಮ್ಮ ಚೌಕಟ್ಟುಗಳನ್ನ ದಾಟುವ, ಜೀವಂತಿಕೆಗೆ ಮಿಡಿವ, ಬಹುತ್ವ ಭಾರತದ ಚೆಲುವಿಗೆ ಸಾಕ್ಷಿಯಂತಿವೆ.
ನಲವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಜೀವಗಳೇ ಸೆಳೆವಂತೆ ನಮ್ಮನ್ನ ಸೆಳೆವುದು, ಕಾಡುವುದು ಕವಿತೆಯೇ.
ಅವಳು ದಾಟಿದ ಸೇತುವೆಯ ಮೇಲೆ
ನೆರೆ ಉಕ್ಕಿದೆಯಂತೆ…
ಅದರಲ್ಲೇನು ವಿಶೇಷ
ನನ್ನೀ ಕಣ್ಣುಗಳು
ಎಂದು ಒಣಗಿದ್ದವು ಹೇಳಿ?
ಎಂದು ತುಂಬಾ ಸರಳವೆನ್ನಿಸುವ ಮಾತುಗಳ ಮೂಲಕವೇ ಇವರು ಅನೇಕರ ಎದೆಯೊಳಗಿನ ಆಳದ ನೋವ ಅಲೆಗಳನ್ನು ಹೊರತೆಗೆದು ಚಲ್ಲಿಸಿ ಬಿಡಬಲ್ಲರು. ಕಾವ್ಯವನ್ನ ಯಂತ್ರದ ಜಡ ಸರಕಾಗಿಸದೆ ರಕ್ತ ಮಾಂಸಗಳ ಜೀವವಾಗಿಸುವ ನಗು ತುಂಬಿಸಿ ಹೊರ ಕಳಿಸುವ ಕವಿ ಇವರು. ಇವು ವಿಮರ್ಶೆಯ ತರಗತಿ ಪರೀಕ್ಷೆಯಲ್ಲಿ ವಿದ್ವಾಂಸರ ಸಾಂಪ್ರದಾಯಿಕ ಬರಹಗಳ ಮೊನಚಿನಲ್ಲೂ ಮತ್ತು ಮನುಷ್ಯತ್ವದ ಬೀದಿಯಲ್ಲೂ ಏಕಕಾಲಕ್ಕೇ ಗೆದ್ದು ಬರಬಲ್ಲವು. ಕವಿತೆ ಭಾರದ ಸರಕಲ್ಲ ಮುಗಿಲು ಮುಟ್ಟುವ ಚೇತೋಹಾರಿಯಾದ ಹಗುರತನದ ಚೈತನ್ಯ. ಅದಕ್ಕೆ ಬೇಕಿರುವುದು ಕಲೆಯ ಕುಸುರಿತನವಲ್ಲ ಮಾನವೀಯತೆಯ ಸ್ಪಂದನ.
“ಸಾಲುಗಳೇಕೆ ಇಷ್ಟೊಂದು ಉಪ್ಪುಪ್ಪು?”
ಮಗು ಆಸ್ಪತ್ರೆಗೆ ದಾಖಲಾದಾಗ
ಸಂತೈಸಲು ಬಂದಿದ್ದವು ಒಂದೆರಡು ಸಾಲುಗಳು
ಔಷಧ ಚೀಟಿಯಲ್ಲೇ ಗೀಚಿ ಬಿಟ್ಟಿದ್ದೆ
ಕಂಬನಿ ಉದುರಿರಬೇಕು.
ಕವಿತೆಯನ್ನ ಕಟ್ಟುವಾಗಲೇ ಕೆಲವರು ಮಾನ ಕಳಕೊಂಡರೆ ಮತ್ತೆ ಕೆಲವರು ಮುಜುಗರ ಹುಟ್ಟಿಸುತ್ತಾರೆ. ರುಚಿಯ ಹದ ಅರಿತ ಅಭಿರುಚಿವಂತರು ಮಾತ್ರ ಕವಿತೆಗೂ ಘನತೆ ತುಂಬಬಲ್ಲರು. ಅಂತಹ ಅನೇಕ ಪ್ರಾಯೋಗಿಕ ಉದಾಹರಣೆಗಳನ್ನ ಈ ಸಂಕಲನದಿಂದ ಹೆಕ್ಕಿ ನೀಡಬಹುದು.
ಗೀರಿದ ಕಡ್ಡಿಯ
ಮುಂದೆ ಬೀಡಿಯಿದೆ
ಹಿಂದೆ
ಬೀಡಿ ಕಟ್ಟುವವರ ಒಲೆಯಿದೆ.
ಒಂದು ಹನಿ ಮಧುವನ್ನು
ಚಲ್ಲಿ ಬಿಟ್ಟಿದ್ದೇನೆ ನೆಲದಲ್ಲಿ…
ಇರುವೆಗಳು ಇಂದು
ಸಾಲಾಗಿ ಗೂಡಿಗೆ ಹೋಗಲಾರವು
ಕಟಕಟೆಯಲ್ಲಿ ನಿಲ್ಲಿಸಿ ಕೇಳಿದಳವಳು
ನೀನು ಪ್ರೀತಿಸಿದ್ದಕ್ಕೆ ಏನು ಸಾಕ್ಷಿ?
ಮಾತುಗಳಿಗಿದ್ದ ಬೆಲೆ
ಮುತ್ತುಗಳಿಗಿದ್ದಿದ್ದರೆ
ನಾನು ಗೆಲ್ಲುತ್ತಿದ್ದೆ!
ಗದ್ಯಕ್ಕೆ ಬುದ್ಧಿವಂತಿಕೆಯ ತಾಂತ್ರಿಕ ಸಾಲು ಸಾಕಾದರೆ ಪದ್ಯಕ್ಕೆ ಇಂತಹ ಸರಳತೆಯ ಜೊತೆಗೆ ಹಲವು ಸ್ಥರಗಳಲ್ಲಿ ವಿಸ್ತಾರಗೊಳ್ಳಬಹುದಾದ ಅನುಭಾವಿಯ ಬದುಕಿನ ಬೆಳಕೂ ಬೇಕಾಗುತ್ತದೆ. ಅಂತಹ ಓದಿನ ಸುಖ ನೀಡಬಲ್ಲ ಕವಿತೆಗಳು ಇಲ್ಲಿವೆ. ’ಸಾರ್ವಜನಿಕರಿಗೆ ಕೆಲವು ಸೂಚನೆಗಳು’ ಕವಿತೆ ನೆರೂಡರ “ಕವಿಗಳಿಗೋಸ್ಕರ ಕವಿತೆ ಬರೆಯುವ ಕವಿಯಲ್ಲ ನಾನು ಓದುಗರ ಕವಿ” ಎಂಬ ಮಾತನ್ನ ನೆನಪಿಸುತ್ತದೆ. ಈ ಕವಿತೆ ತನ್ನ ಸಮಕಾಲೀನ ಸಮಾಜದ ಶಿಕ್ಷಣ, ಧರ್ಮ, ಆಡಳಿತಗಳು ಹೇಗೆ ಪ್ರಪಾತಕ್ಕಿಳಿದಿವೆ ಎಂಬ ವಿಪರ್ಯಾಸವನ್ನ ಕವಿ ತನ್ನದೇ ಹಾಸ್ಯ ಮತ್ತು ವ್ಯಂಗ್ಯದ ಮೊನಚಿನಿಂದ ತಿವಿಯುವಂತಿದೆ.
“ಸಾರ್ವಜನಿಕ ಸ್ಥಳಗಳಲ್ಲಿ
ಸಿಗರೇಟಿಗೆ ಕಡ್ಡಿಗೀರಬೇಡಿ
ಬೆಂಕಿ ಹಚ್ಚುವ ಕೆಲಸವನ್ನು
ಭಾಷಣಕಾರರಿಗೆ ವಹಿಸಲಾಗಿದೆ!
ಕೊನೆಯದಾಗಿ,
ಚುನಾವಣೆಯ ವೇಳೆ
ಎರಡೆರಡು ಚಿಹ್ನೆಗಳಿಗೆ ಮತ ಒತ್ತಬೇಡಿ
ದೇಶವನ್ನು ಕೊಳ್ಳೆ ಹೊಡೆಯಲು
ಒಂದೇ ಪಕ್ಷ ಸಾಕು!”
ಮಾತಿಗೂ ಮಿಗಿಲಾದ ಮೌನದ ಬೆನ್ನಟ್ಟಿರುವ ಈ ಕವಿ ಉದ್ದಕ್ಕೂ ಅಲಕ್ಷಿತ ಆವರಣಗಳನ್ನೇ ಕವಿತೆಯ ಕಣವನ್ನಾಗಿಸುತ್ತಾ ಕವಿತೆಗಳ ರಾಶಿ ಮಾಡಿದ್ದಾರೆ. ಬದುಕು ಕಂಡ ಅನುಭವದ ಹಬೆಯಲ್ಲೇ ಕಾವ್ಯವನ್ನ ಹೊರತೆಗೆ ತೆಗೆದು ಹರವಿದ್ದಾರೆ. ಇವು ತಮ್ಮ ತಾಜಾ ಘಮಲಿನಿಂದಲೇ ಥಟ್ಟನೆ ಕಾವ್ಯಾಸಕ್ತರನ್ನ ಕೂಡಿಕೊಳ್ಳುತ್ತವೆ ಥ್ರಿಲ್ ನ ಅನುಭವ ನೀಡುತ್ತವೆ.
ದಾರ
ಪುಟ್ಟ ಮಕ್ಕಳ ಕೈಯಲ್ಲಿರುವಾಗ
ಹಿಡಿತ ತಪ್ಪಿ
ಭೀಕರ ಅಪಘಾತ!
ಛಿದ್ರಗೊಂಡ ದೇಹ!
ರಸ್ತೆಯ ಮೇಲೆ ಹೊರಳಾಡುವ ಬಲೂನು
ಇನ್ನೂ ಹಿಡಿದುಕೊಂಡಿದೆ
ಕೊಂಚ ಹೊತ್ತಿನ ಮುಂಚೆ
ಮಗು ಊದಿದ ಉಸಿರನ್ನೂ!
ಹೀಗೆ ರಸ್ತೆಯ ಅಪಘಾತವನ್ನ ನೀಡುವಂತೆಯೇ ಮಾನವೀಯತೆಯನ್ನೇ ಮರೆತು ಕಲ್ಲು ಗೋಡೆಗಳಲ್ಲಿ ಹೊಳೆಯುತ್ತಾ ಹೋಗುವ ಆಸ್ಪತ್ರೆಗಳು ‘ಮನೆಯೆಂಬಂತಿದ್ದವು’, ‘ಶವವಿಟ್ಟು ಪ್ರತಿಭಟಿಸುವ ಕುಟುಂಬಗಳನ್ನ ಕಾಣುವಷ್ಟು’ ಬೆಳೆದಿವೆ ಎಂಬ ಜೀವವಿರೋಧಿ ವಿರೋಧಿ ಗುಣಗಳನ್ನ ಮಾನವೀಯ ಪತನದ ಚಿತ್ರಗಳನ್ನ ಹೊಳೆಸಬಲ್ಲರು.
ನಾ ಕಂಡ
ಮೊದಲ ಗ್ರಹಣ
ಅಪ್ಪ ಕಣ್ಮರೆಯಾದಾಗ
ಅವ್ವನ ಮೊಗದಲ್ಲಿ ಕವಿದ ಕತ್ತಲು
ಯಾರದೋ ಕೈ ರೇಖೆಗಳಲ್ಲಿ
ತಮ್ಮ ಬದುಕು ಹುಡುಕುತ್ತಿದ್ದಾರೆ
ಭವಿಷ್ಯ ಹೇಳುವವರು!
ಈ ಪುಟ್ ಪಾತಿಗೆ
ಕಸಕ್ಕಿಂತಲೂ ಹೆಚ್ಚು ಕನಸುಗಳನ್ನ ಎಸೆಯಲಾಗಿದೆ!
ಈ ಪುಟ್ ಪಾತು
ಮಳೆಗಿಂತಲೂ ಹೆಚ್ಚು ಕಣ್ಣೀರಲ್ಲಿ ತೊಯ್ದಿದೆ!
ಹೀಗೆ… ಮನದ ಚೆಲುವನ್ನು ಹಾದಿಯ ವಿಷಾದಗಳನ್ನು ಆಯುತ್ತಲೇ… ತನ್ನದೇ ಪ್ರತಿರೋಧದ ರೀತಿಯನ್ನಾಗಿ ಸ್ಫೋಟಿಸುತ್ತಾ… ಇವರು ತಮ್ಮ ಕವಿತೆಗಳಿಂದಲೇ ವಾಚಕರನ್ನು ವಿಮರ್ಶಕರನ್ನೂ ಚಿತ್ತಾಗಿಸಬಲ್ಲರು.
ಉತ್ತಮ ಪುಸ್ತಕ ವಿಮರ್ಶೆ