ಶಿವಶಂಕರ ಭಟ್ಟ ಅವರಿಗೆ..

ಶೂದ್ರ ಶ್ರೀನಿವಾಸ್ 

ಶಿವಶಂಕರ ಭಟ್ಟ ಅವರಿಗೆ ಗುಮಾನಿ ಅಡ್ಡಾದಿಡ್ಡಿ ಇದೆ ಅನ್ನಿಸುತ್ತದೆ.

ಅಡಿಗರು ಮತ್ತು ಲಂಕೇಶ್ ಅವರು ಶೂದ್ರ ಹೇಳಿದ್ದರಲ್ಲಿ ಸುಳ್ಳಿಲ್ಲ ಎಂದರೂ ನಂಬದೇ ಇರಬಹುದು.ಇರಲಿ ಯಾರನ್ನೋ ನಂಬಿಸಲು ನಾನು ಬರೆಯುವ ಅಗತ್ಯವಿಲ್ಲ. ನನ್ನ ಕಾಲ ಘಟ್ಟದಲ್ಲಿ ಇಂತಿಂಥವನ್ನು ಅರಿಯಲು ಸಾಧ್ಯವಾಯಿತು ಎಂಬುದು ನನ್ನ ಮನೋಲೋಕದ ಸಂಭ್ರಮಕ್ಕೆ ಸಂಬಂಧಪಟ್ಟಿದ್ದು. ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂದರ್ಭ ನಮಗೆ ಏನೇನೋ ಕೊಡಬಲ್ಲುದು .ಆದರೆ ಅದನ್ನು ಅರಿಯುವ ಮತ್ತು ಅರ್ಥೈಸಿಕೊಳ್ಳುವ ವೈಶಾಲ್ಯತೆ ನಮ್ಮ ನಮ್ಮ ವ್ಯಕ್ತಿತ್ವದಲ್ಲಿ ಸಾಕಾರಗೊಂಡಿರಬೇಕಾಗುತ್ತದೆ.

ನಾನು ಸುಮಾರು ಮೂರೂವರೆ ದಶಕಗಳ ಹಿಂದೆ ಲಂಕೇಶ್ ಅವರಿಗೆ ಒಂದು ಬಹಿರಂಗ ಪತ್ರವನ್ನು ಬರೆದಿದ್ದೆ. ಅದನ್ನು ಶೂದ್ರ ದಲ್ಲಿ ಪ್ರಕಟಿಸಿದ್ದೆ. ಅದರಲ್ಲಿ ಗಾಂಧಿ, ಹಿಟ್ಲರ್ ಮತ್ತು ಸ್ಟಾಲಿನ್ ಮೂರೂ ವ್ಯಕ್ತಿತ್ವಗಳನ್ನು ಏಕಕಾಲದಲ್ಲಿ ಮೈನ್ ಟೈನ್ ಮಾಡ್ತೀರಿ ಎಂದು ಬರೆದಾಗ ಲಂಕೇಶ್ ಅವರು ನನ್ನನ್ನು ದೂರ ಮಾಡಲಿಲ್ಲ. ಅದನ್ನು ಅಡಿಗರು ಓದಿ ನಿಮ್ಮಂತೆ ಸಿನಿಕತನದಿಂದ ಸಂಭ್ರಮಪಡಲಿಲ್ಲ. ಹೀಗೆ ಆರೋಗ್ಯ ಪೂರ್ಣವಾಗಿ ಮಾತಾಡುವ ಮನಸ್ಥಿತಿ ನಮ್ಮಲ್ಲಿ ಶ್ರೀಮಂತವಾಗಬೇಕು ಎಂದು ಪ್ರತಿಕ್ರಿಯಿದ್ದರು.

ಅಡಿಗರು ಮತ್ತು ಲಂಕೇಶ್ ಅವರ ನಡುವೆ ಗಾಢವಾದ ಜೀವನ ಸಂಬಂಧಿ ಸಾಹಿತ್ಯದ ಸೇತುವೆಯು ಅವರನ್ನು ಬಂಧಿಸಿಟ್ಟಿತ್ತು.

ಆದ್ದರಿಂದಲೇ ಲಂಕೇಶ್ ಅವರಿಗೆ ಅಡಿಗರನ್ನು ನೋಡುವ ತುಡಿತ ದಟ್ಟವಾಗಿದ್ದುದು. ಈ ಎಲ್ಲವನ್ನೂ ಒಳಗೊಂಡಂತೆ ನಾನಾ ವಿಧದಲ್ಲಿ ಗುರುಗಳಾದ ಕಿ.ರಂ ಅವರ ಬಗ್ಗೆ ಒಂದು ದೀರ್ಘವಾದ ಲೇಖನವನ್ನು ಬರೆದಿದ್ದೆ. ‘ಕನಸಿಗೊಂದು ಕಣ್ಣು’ವಿನ ಆ ಲೇಖನಕ್ಕೆ ಸಾಕ್ಷಿಭೂತರಾಗಿದ್ದರು.

ಭಟ್ಟರೇ ಒಂದು ನೆನಪಿರಲಿ: ಸಾಹಿತ್ಯದ ಸಂಬಂಧ ವೃದ್ಧಿಸುವುದು ಗುಮಾನಿ ಮತ್ತು ಸಂಕುಚಿತತೆಯಿಂದಲ್ಲ.ಅದು ಜೀವನಾನುಭವದ ಚೇತೋಹಾರಿತನದಿಂದ.

ಕೊನೆಗೆ ಈ ಮಾತನ್ನು ಹೇಳಲು ಬಯಸುವೆ:

ಈ ಸಮಾಜಕ್ಕೆ ಚೈತನ್ಯಶೀಲತೆ ಇದ್ದರೆ ಅದು ಮುಂದುವರಿಯುತ್ತಿದ್ದರೆ ; ಅತ್ಯುತ್ತಮ ಕೃತಿಗಳಿಂದ ಮತ್ತು ಕುವೆಂಪು, ಮಾಸ್ತಿ, ಅಡಿಗ, ಲಂಕೇಶ್, ಅನಂತಮೂರ್ತಿ, ಕಾರಂತ ಮುಂತಾದ ಚಿಂತಕರಿಂದ.

ಕೊನೆಗೂ ಈ ಮಾತುಗಳನ್ನು ನನಗೆ ನಾನೇ ಹೇಳಿಕೊಳ್ಳಬೇಕಾಗಿದೆ. ಯಾಕೆಂದರೆ, ನನ್ನ ಅಂತರಂಗದಲ್ಲಿಯೂ ನಿಮ್ಮಂಥ ಭಟ್ಟರೊಬ್ಬರು ಇರ್ತಾರೆ. ಅವರನ್ನು ದುರ್ಬಲಗೊಳಿಸಲು ಸದಾ ಅತ್ಯುತ್ತಮ ಕಲೆ, ಸಾಹಿತ್ಯ, ಸಂಗೀತ ಮತ್ತು ಶ್ರೀಮಂತ ಮನಸ್ಸುಗಳ ಮೊರೆ ಹೋಗಲೇಬೇಕಾಗುತ್ತದೆ. ಕ್ಷಮಿಸಿ , ಇಷ್ಟು ಮಾತುಗಳನ್ನು ದಾಖಲಿಸಿದ್ದಕ್ಕೆ.

ನಿಮ್ಮ,

ಶೂದ್ರ ಶ್ರೀನಿವಾಸ್

‍ಲೇಖಕರು avadhi

April 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. ಶಿವಶಂಕರ ಭಟ್ಟ

  ಪ್ರಿಯರಾದ ಶೂದ್ರ ಶ್ರೀನಿವಾಸರಿಗೆ—
  ತಮಗೆ ಲಂಕೇಶರ ಬಗ್ಗೆ ಅನನ್ಯವಾದ ಪ್ರೀತಿ ಹಾಗೂ ಗೌರವವಿದೆ ಎಂಬುದು ನನಗೆ ತಿಳಿದಿದೆ. ಇದುವರೆಗೆ ಪ್ರಕಟವಾಗಿರುವ‌ ತಮ್ಮ ‘ಕನಸಿಗೊಂದು ಕಣ್ಣು’ ಲೇಖನಗಳ ಎಲ್ಲಾ ಸಂಪುಟಗಳನ್ನು ನಾನು ಕೊಂಡುಕೊಂಡು ಓದಿರುವೆ. ಅದರಲ್ಲಿನ ಬಹುತೇಕ ಲೇಖನಗಳಲ್ಲಿ ಲಂಕೇಶರ ಪ್ರಸ್ತಾಪವಿದೆ. ಇರಬಾರದು ಎಂದು ಹೇಳಲು ನಾನು ಯಾರು? ಇರಲಿ. ಬಿ.ಎಸ್ ವೆಂಕಟಲಕ್ಷ್ಮಿಯವರು ತಮ್ಮ ‘ ಚರ್ಚೆಗೊಂದು ಚಾವಡಿ’ ಎಂಬ ಕಿರು ಪತ್ರಿಕೆಯಲ್ಲಿ ‘ ಶೂದ್ರ ಶ್ರೀನಿವಾಸರಿಗೆ ಲಂಕೇಶರ ಮೇಲೆ ಅವಲಂಬನೆ ಜಾಸ್ತಿಯಾಗಿದೆ. ಸ್ವತಃ ಒಬ್ಬ ಲೇಖಕರಾದ ಶೂದ್ರ ಅವರಿಗೆ ಇದು ಅನಿವಾರ್ಯವೆ?’ ಎಂದ್ದಿದ್ದರು. ಅದು ತಮ್ಮ ಗಮನಕ್ಕೆ ಬಂದಿರಬಹುದು. ಅನಂತಮೂರ್ತಿಯವರನ್ನು ಸನ್ಮಾನ ಮಾಡಲೆಂದು ಬೆಂಗಳೂರಿನ ಟೌನ್ ಹಾಲ್/ರವೀಂದ್ರ ಕಲಾಕ್ಷೇತ್ರಕ್ಕೆ ತಾವು, ಕಿ.ರಂ. ಮತ್ತಿತರರು ಲಂಕೇಶರ ಮುಂದಾಳತ್ವದಲ್ಲಿ ಕರೆಸಿದಾಗ ಲಂಕೇಶರ ವರ್ತನೆಯಿಂದ ಬೇಸರಪಟ್ಟುಕೊಂಡ ಅನಂತಮೂರ್ತಿ ಅವರು ಆ ಸಮಾರಂಭದಲ್ಲಿ ಭಾಗವಹಿಸದೆ ನೊಂದ ಮನಸ್ಸಿನಿಂದ ವಾಪಸ್ಸು ಹೋದರೆಂದು ತಾವೇ ತಮ್ಮ ಲೇಖನವೊಂದರಲ್ಲಿ ವಿವರವಾಗಿ ಬರೆದಿದ್ದೀರಿ ಅಲ್ಲವೆ? ನಾನು ಆ ಪ್ರತಿಕ್ರಿಯೆ ಬರೆದಾಗ ಇವೆಲ್ಲವೂ ನನ್ನ ಗಮನದಲ್ಲಿತ್ತು. ಲಂಕೇಶರು ತಮ್ಮ ಪತ್ರಿಕೆಯಲ್ಲಿ ತಾವು ಮಾಡಿದ ಮತ್ತು ತಮ್ಮ ‘ಆಸ್ಥಾನ ವಿದ್ವಾಂಸರಿಂದ’ ವಿಮರ್ಶೆ ಎಂಬ ಹೆಸರಿನಲ್ಲಿ ತಮಗೆ ‌ ಇಷ್ಟವಿಲ್ಲದ ಸಾಹಿತಿಗಳ ಬಗ್ಗೆ ಮತ್ತು ಅವರ ಪುಸ್ತಕಗಳ ಬಗ್ಗೆ ಮಾಡಿಸಿದ
  ಕುಹಕ, ಲೇವಡಿಗಳಿಂದ ಸುಮಾರು ಜನ ಸಾಹಿತಿಗಳ ಬಗ್ಗೆ ಅವರ ಪುಸ್ತಕಗಳ ಬಗ್ಗೆ
  ಆ ಕಾಲದಲ್ಲಿನ ಯುವಕರ ಓದುವ ಆಸಕ್ತಿ ಮೇಲೆ ಸಾಕಷ್ಟು ಹಾನಿಮಾಡಿದವು. ಇದನ್ನು ಒಪ್ಪುವುದು ಬಿಡುವುದು ತಮಗೆ ಬಿಟ್ಟದ್ದು. ನಿಮ್ಮ ಅಂತರಂಗದಲ್ಲೂ ನನ್ನಂತಹ ಒಬ್ಬ ‘ಭಟ್ಟ’ರಿರುತ್ತಾರೆ ಎಂದು ಹೇಳಿರುವಿರಿ. ತಮ್ಮ compliments ಅನ್ನು ಸಂತೋಷದಿಂದ ಸ್ವೀಕರಿಸಿರುವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: