ಶಿವರಾಜ ಬ್ಯಾಡರಹಳ್ಳಿ ಓದಿದ ‘ಸಾಂಗತ್ಯ’

ಡಾ ಶಿವರಾಜ ಬ್ಯಾಡರಹಳ್ಳಿ

ಇತ್ತೀಚೆಗಷ್ಟೇ ಬಿಡುಗಡೆಯಾದ ಒಂದು ಅಪೂರ್ವ ಗ್ರಂಥ ಅದು ಡಾ.ಕರಿಗೌಡ ಬೀಚನಹಳ್ಳಿ ಅವರ ಬದುಕು, ಕೃತಿ, ವಿಮರ್ಶೆ ಕುರಿತಾ ಸಂಭಾವನಾ ಗ್ರಂಥ ‘ಸಾಂಗತ್ಯ’.

ಡಾ.ಕರಿಗೌಡ ಬೀಚನಹಳ್ಳಿ ಅವರು ಎಪ್ಪತ್ತರ ತುಂಬು ವಸಂತಗಳನ್ನು ಕಳೆದಿದ್ದಕ್ಕಾಗಿ ಅವರ ಸ್ನೇಹಿತರು, ಒಡನಾಡಿಗಳು, ಸಹೋದ್ಯೋಗಿ ಮಿತ್ರರು ಹಾಗೂ ಶಿಷ್ಯರು ಸೇರಿ ಈ ಗ್ರಂಥವನ್ನು ಹೊರತಂದಿದ್ದಾರೆ. ಕರಿಗೌಡರ ಆಪ್ತ ಮಿತ್ರ ಅಗ್ರಹಾರ ಕೃಷ್ಣಮೂರ್ತಿ ಅವರು ತುಂಬು ಪ್ರೀತಿಯಿಂದ 700 ಪುಟವಿರುವ ಬೃಹತ್ ಗ್ರಂಥವನ್ನು ಸಂಪಾದಿಸಿದ್ದಾರೆ. ಈ ಸಂಭಾವನಾ ಗ್ರಂಥವು ಒಂದು ವಿಮರ್ಶಾ ಗ್ರಂಥವಾಗಿ ಕಾಣುತ್ತದೆ. ಈ ಗ್ರಂಥವನ್ನು 10 ಪರ್ವವಾಗಿ ವಿಂಗಡಿಸಿ ಓದುಗರಿಗೆ ಆಯ್ಕೆ ಮಾಡಿ ಓದುವ ಸಾವಧಾನವನ್ನು ತರುವ ಪ್ರಯತ್ನ ಮಾಡಿದ್ದಾರೆ. ಪುಸ್ತಕವನ್ನುಯಾವ ಪರ್ವದಿಂದಾದರೂ ಓದಲು ಆರಂಭಿಸಬಹುದು. ಸಾಮಾನ್ಯವಾಗಿ ಅಭಿನಂದನೆ ಗ್ರಂಥವೆಂದರೆ ಹಾಡಿ, ಹೊಗಳಿ, ತೇಲಿಸಿಬಿಡುವಂತೆ ಬಹುತೇಕ ಅಭಿನಂದನಾ ಗ್ರಂಥಗಳು ಪ್ರಕಟವಾಗುವ ದೊಡ್ಡ ಪರಂಪರೆ ಈಗಲೂ ಇದೆ. ಸಂಭಾವನಾ ಗ್ರಂಥಗಳಿಗೆ ಬರೆಯುವ ಲೇಖಕರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಭಿವಂದಿತರಿಗೆ ವಿಶ್ವಾಸದಲ್ಲಿರುತ್ತಾರೆ.

ಬಹುಪಾಲು ಭಾಗ ವ್ಯಕ್ತಿಯನ್ನು ಹೊಗಳುತ್ತಾ ತಮ್ಮ ಲೇಖನವನ್ನು ಬರೆಯುವುದು ವಾಡಿಕೆಯಾಗಿದೆ. ಆದರೆ ಸಾಂಗತ್ಯದಲ್ಲಿ ಹತ್ತು ಪರ್ವವೂ ಭಿನ್ನವಾಗಿವೆ. ಒಂದನೇ ಪರ್ವದಲ್ಲಿ ಕರಿಗೌಡರ ವ್ಯಕ್ತಿತ್ವ, ಸ್ನೇಹ, ಗೆಳೆತನವನ್ನು ಕುರಿತು ಸಹಪಾಠಿ ಮಿತ್ರರು ತುಂಬಾ ಆಪ್ತವಾಗಿ ಬರೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯವನ್ನು ಕಂಬಾರ ಅವರ ಜೊತೆ ಕಟ್ಟಿ ಬೆಳೆಸುವಲ್ಲಿ ಕರಿಗೌಡರು ವಹಿಸಿದ ಶ್ರಮ ಮತ್ತು ಶ್ರದ್ದೆ, ನಿರ್ವಹಿಸಿದ ಹುದ್ದೆ ಜವಾಬ್ದಾರಿಯನ್ನು ತೀರ ಹತ್ತಿರದಿಂದ ಬಲ್ಲವರು ಸೋದಾಹರಣವಾಗಿ ದಾಖಲಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ಕವಿತೆಯೊಂದಿಗೆ ಆರಂಭವಾಗುವ ಒಂದನೇ ಪರ್ವದಲ್ಲಿ ಬಿಳಿಮಲೆ, ಲಕ್ಕಪ್ಪಗೌಡ, ವಿವೇಕ್ ರೈ, ಮುರಿಗೆಪ್ಪ, ಬೋರಲಿಂಗಯ್ಯ, ಜಾಣಗೆರೆ, ಬರಗೂರು, ಮಲ್ಲೇಪುರಂ ಹೀಗೆ ಕರಿಗೌಡರ ಹಲವು ಗೆಳೆಯರು ಅವರ ವ್ಯಕ್ತಿತ್ವ ಸ್ನೇಹಪರತೆ ಸಾಹಿತ್ಯ ಸೃಜನಶೀಲತೆಯನ್ನು ಕಟ್ಟಿದ್ದಾರೆ. ಇದರಲ್ಲಿ ಗಂಗಾಧರ ಬೀಚನಹಳ್ಳಿ ಬರೆದಿರುವ ‘ಅರಿವು ಮೂಡುವ ಮುಂಚಿನ ಗೆಳೆತನ’ ಈ ಲೇಖನ ವಿಶೇಷವಾದುದ್ದು. ಕರಿಗೌಡ ಮತ್ತು ಗಂಗಾಧರ್ ಇಬ್ಬರೂ ಬಾಲ್ಯ ಸ್ನೇಹಿತರು ಜೊತೆಗೆ ಒಂದೇ ಊರಿನವರು ಕೇರಿ ಕಟ್ಟೆಗಳಲ್ಲಿ ಓಡಾಡುತ್ತಾ ಬೆಳೆದಿರುವವರು. ಗಂಗಾಧರ್ ಕೂಡ ಲೇಖಕರಾಗಿ, ಕಾದಂಬರಿಕಾರರಾಗಿ ಬೆಳೆದಿದ್ದಾರೆ. ತನ್ನ ಒಡನಾಡಿ ಜೊತೆಗಾರ ಮಿತ್ರನ ಬಗ್ಗೆ ಹಲವು ನೆನಪುಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ. ಹಾಗಾಗಿ ಈ ಲೇಖನ ವೈಯಕ್ತಿಕ ವಿವರದ ಜೊತೆ ಸ್ನೇಹ, ಪ್ರೀತಿ, ಮಾನವತೆಯನ್ನು ಉಳಿಸಿಕೊಂಡು ಬಂದ ಬಗೆಯನ್ನು ಬಹು ಆಯಾಮದಲ್ಲಿ ಚಿತ್ರಿಸಿದ್ದಾರೆ.

ಎರಡನೇ ಪರ್ವದಲ್ಲಿ ಬೀಚನಹಳ್ಳಿ ಅವರ ಕಥಾ ಸಾಹಿತ್ಯವನ್ನು ಕುರಿತು 21 ಲೇಖನಗಳಿವೆ. ಮುಖ್ಯವಾಗಿ ಕರಿಗೌಡರು ನವ್ಯ ಸಾಹಿತ್ಯದ ಉತ್ಕರ್ಷದಲ್ಲಿದ್ದಾಗ ಆರಂಭವಾದ ಅವರ ಕಥಾ ಪಯಣ ನಡೆದು ಬಂದ ಕಥನದ ಹಾದಿಯನ್ನು ಓ.ಎಲ್.ಎನ್, ಅಗ್ರಹಾರ, ಹುಳಿಯಾರ್, ಪ್ರೊ.ನಾಗಣ್ಣ ಅವರೂ ಸೇರಿದಂತೆ ಹಿರಿ ಕಿರಿಯ ಮಿತ್ರರು ಅವರ ಒಟ್ಟು ಕಥಾ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಈ ಭಾಗದಲ್ಲಿ ಎರಡು ಮುಖ್ಯವಾದ ಇಂಗ್ಲಿಷ್ ಲೇಖನಗಳು ಒಂದೇ ಶೀರ್ಷಿಕೆಯಲ್ಲಿ Companions and other stories ಎನ್ನುವ ಲೇಖನವನ್ನು ಪ್ರೊ.ಸಿ.ಎನ್.ಆರ್ ಮತ್ತು ಪ್ರೊ.ನಾಗಣ್ಣ ಅವರು ಬರೆದಿರುವುದು ಹೆಚ್ಚುಗಾರಿಕೆಯಾಗಿದೆ.

ಹಳ್ಳಿಗಾಡಿನ ಬಡ ರೈತಾಪಿ ಜನ ಜೀವನವನ್ನು ತುಂಬಾ ಹತ್ತಿರದಿಂದ ಬಲ್ಲ ಕರಿಗೌಡರ ನವಿರಾದ ಭಾಷೆ ಹಳ್ಳಿಯ ಸಹಜ ಪ್ರೀತಿ, ಪ್ರೇಮ, ಸ್ನೇಹ, ದೇವರು, ನಂಬಿಕೆ ಎಲ್ಲವೂ ಇರುವುದನ್ನು ಅವಲೋಕಿಸಿರುವ ಲೇಖಕರು ಗುರುತಿಸಿದ್ದಾರೆ. ಯಾವುದೇ ಕಥೆಗಳಲ್ಲಿ ಆಳವಾಗಿ ಕಾಣುವ ದಟ್ಟವಾದ ಗ್ರಾಮ ಜೀವನದ ನೋವು ನಲಿವನ್ನು ಗೌಡರು ಓದುಗನಿಗೆ ಕಾಡುವಂತೆ ಚಿತ್ರಿಸುವ ಕಸುಬನ್ನು ದಕ್ಕಿಸಿಕೊಂಡಿದ್ದಾರೆ. ಹಾಗಾಗಿಯೇ ಇವರ ಕಥೆಗಳು ಹಲವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಠ್ಯವಾಗಿ ಇಂದಿಗೂ ಓದುತ್ತಿರುವುದು ಕಥೆಗಳ ಗುಣಗ್ರಾಹಿತ್ವದಿಂದಲೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಳ್ಳಿ ಬದುಕಿನ ಜಾತ್ಯತೀತ ಮನಸ್ಸುಗಳು ಒಟ್ಟಾಗಿ ಹೊಂದುಕೊಂಡು ಹೋಗುವ ಸೌಹಾರ್ದತೆ, ಹಿಂದೂ ಮುಸ್ಲಿಂ ಒಂದಾಗಿ ಬಾಳುವ ಜಾತ್ಯತೀತ ತತ್ತ್ವ ಅವರ ಕಥಾ ಪಯಣದ ಉದ್ದಕ್ಕೂ ಎದ್ದುಕಾಣುತ್ತದೆ. ಹಾಗೆಯೇ ಕಾದಂಬರಿ ಕುರಿತ ವಿಮರ್ಶಾ ಲೇಖನಗಳು ಗಮನಸೆಳೆಯುತ್ತವೆ.

ಪರ್ವ ಮೂರುರಲ್ಲಿ ಅನುವಾದ ಸಾಹಿತ್ಯದ ಒಂದು ಅವಲೋಕನ ನಡೆದಿರುವುದು ಗಮನಿಸಬೇಕಾದ ವಿಚಾರ. ಒಬ್ಬ ಸೃಜನಶೀಲ ಲೇಖಕ ತನ್ನ ಕಥೆ ಕಾದಂಬರಿಲೋಕದಲ್ಲಿಯೇ ಪಯಣಿಸುತ್ತಿರುವಾಗ ಅನುವಾದದಲ್ಲಿಯೂ ತನ್ನ ಛಾಪು ಮೂಡಿಸುವ ಬಗೆ ವಿಶಿಷ್ಟವಾದುದು.

ಪರ್ವ ನಾಲ್ಕರಲ್ಲಿ 31 ಲೇಖನಗಳು ಗೌಡರ ವಿಮರ್ಶಾ ಸಂಕಲನ ಮತ್ತು ಲೇಖನಗಳನ್ನು ಕುರಿತ ತಮ್ಮ ಅಭಿಪ್ರಾಯಗಳನ್ನು ಹಲವು ಲೇಖಕರು ನಿರ್ಭಿಡೆಯಿಂದ ಮಂಡಿಸಿದ್ದಾರೆ. ಕೆ.ವಿ.ನಾರಾಯಣ, ಮೊಗಳ್ಳಿ, ಮಲ್ಲೇಪುರಂ, ಪ್ರೊ.ಎಂ.ಎಚ್ ಕೃಷ್ಣಯ್ಯ ಅವರ ಲೇಖನಗಳು ತುಂಬಾ ಮೌಲಿಕವಾಗಿವೆ.

ಐದರಲ್ಲಿ ಸಂಪಾದಿತ ಕೃತಿಗಳನ್ನು ಕುರಿತು ಚರ್ಚಿಸಲು ಬೇರೆ ಬೇರೆ ಲೇಖಕರಿಗೆ ಮುಕ್ತತೆ ಕೊಟ್ಟು ತಮ್ಮದೇ ಆದ ಶೈಲಿಯಲ್ಲಿ ತಮಗೆ ಅನಿಸಿದ್ದನ್ನು ಬರೆದಿದ್ದಾರೆ. ಆರು ಮತ್ತು ಏಳರಲ್ಲಿ ಬೆನ್ನುಡಿಗಳು, ವಿವಿಧ ವಿದ್ವಾಂಸರು ಬರೆದ ಪತ್ರಗಳನ್ನು ಕಾಪಿಟ್ಟುಕೊಂಡು ಬಳಸಿರುವುದು ಒಂದು ಕಾಲದ ನೆನಪಿನ ಬುತ್ತಿಯನ್ನು ಹೊರ ಬಿಚ್ಚಿದಂತೆ ಆಗುತ್ತದೆ ಹಾಗೆಯೇ ಎಂ.ಎಸ್.ಆಶಾದೇವಿಯವರು ನಡೆಸಿರುವ ಸಂದರ್ಶನ ದೀರ್ಘವಾಗಿಯೇ ಇದೆ. (ಮಹಾಮನೆ ಪತ್ರಿಕೆಗೆ ನಡೆಸಿದ ಸಂದರ್ಶನ) ಮುಖ್ಯವಾಗಿ ಗಮನ ಸೆಳೆಯುತ್ತದೆ. ಅವರ ಕುಟುಂಬದ ಹಲವು ಛಾಯಾ ಚಿತ್ರಗಳು ಗಮನ ಸೆಳೆದರೂ ತಮ್ಮ ಇಬ್ಬರ ಮಕ್ಕಳ ಮದುವೆಯನ್ನು ‘ಕುವೆಂಪು ಮಂತ್ರ ಮಾಂಗಲ್ಯ’ದ ಪ್ರಕಾರ ಮಾಡಿಕೊಡುವುದರ ಜೊತೆಗೆ ಇವರ ಪ್ರಭಾವದಿಂದಾಗಿ ಇವರ ಕುಟುಂಬದಲ್ಲೇ ಒಟ್ಟು 21 ಜೋಡಿಗಳು ಕುವೆಂಪು ಮಂತ್ರ ಮಾಂಗಲ್ಯದ ಹಾದಿ ತುಳಿದಿರುವುದು ವಿಶೇಷವೇ ಸರಿ.

ಈ ʼಸಾಂಗತ್ಯʼದಲ್ಲಿ ಬಹಳ ಗಮನ ಸೆಳೆಯುವುದೆಂದರೆ ಅದು ಹತ್ತನೇ ಪರ್ವ. ಸಾಹಿತ್ಯ ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆ ಹೆಸರಲ್ಲಿ ಕನ್ನಡದ ಬಹುಮುಖ್ಯ ಚಿಂತಕರ ಲೇಖನಗಳನ್ನು ಬಳಸಿರುವುದು ಈ ಪುಸ್ತಕದ ಹೆಚ್ಚುಗಾರಿಕೆ ಯಾಗಿದೆ. ನವ್ಯ ಲೇಖಕರು, ಬಂಡಾಯ ಲೇಖಕರು ಸೇರಿದಂತೆ ಪ್ರೊ.ಕಿ.ರಂ, ಪ್ರೊ.ಕಲ್ಗುಡಿ, ಡಿ.ಆರ್.ನಾಗರಾಜ್ ಅನಂತಮೂರ್ತಿ ಅಂತಹ ಮಹತ್ವದ ಲೇಖಕರ ಲೇಖನಗಳು ಬಹಳ ಮೌಲಿಕವಾಗಿವೆ. ಡಾ.ಕಾರಿಗೌಡರೆ ಹೇಳುವಂತೆ ʼಕಳೆದ ಐವತ್ತು ವರ್ಷಗಳ (1959-2008) ನಾಡು ನುಡಿ ಸಾಹಿತ್ಯ, ಸಮಾಜ, ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡಿ ವಿವಿಧ ವಿದ್ವಾಂಸರು ಬರೆದಿರುವ ಹದಿನೇಳು ಲೇಖನಗಳು ನನ್ನ ದೀರ್ಘ ಅಧ್ಯಯನದ ಹಿನ್ನೆಲೆಯಲ್ಲಿ ಆಯ್ದು ಸಂಕಲಿಸಿದ್ದೇನೆʼ ಎಂಬ ಅವರ ಮಾತು ಮಹತ್ತರವಾದುದು.

ಕನ್ನಡ ಸಾಹಿತ್ಯ ಪರಂಪರೆಗೆ ದೊಡ್ಡ ಕೊಡುಗೆ ನೀಡಿರುವ ಇಲ್ಲಿಯ ಬರಹಗಳು ಸಾಂಗತ್ಯ ಕೃತಿಗೆ ಹೊಂದುಕೊಳ್ಳುವಂತೆ ಮಾಡುವ ಬೆಸುಗೆಯನ್ನು ಕೊಟ್ಟಂತೆ ಕಾಣುತ್ತದೆ. ಕೀರ್ತಿನಾಥ ಕುರ್ತಕೋಟಿ ಅವರ ‘ಯುಗಧರ್ಮ ಹಾಗೂ ಸಾಹಿತ್ಯ ವಿಕಾಸ’ ಈ ಲೇಖನದಿಂದ ಅನಂತಮೂರ್ತಿ ಅವರ ಲೇಖನ ‘ಕನ್ನಡದ ಸ್ಥಿತಿ ಗತಿ’ಯ ಲೇಖನಗಳು ಸಮಾಜದ ಜೊತೆಗೆ ಮತ್ತು ಸಾಹಿತ್ಯದ ಜೊತೆ ಅನುಸಂಧಾನ ಮಾಡಿದ ಬಗೆ ಅನನ್ಯವಾಗಿದೆ. ಒಟ್ಟಾರೆ ಹೇಳುವುದಾದರೆ ಇತ್ತೀಚಿಗೆ ಬಂದಿರುವ ಸಂಭಾವನಾ ಗ್ರಂಥಗಳಲ್ಲಿಯೇ ಸಾಂಗತ್ಯ ಕೃತಿಯೂ ಭಿನ್ನವಾಗಿ ಮತ್ತು ಮೌಲಿಕವಾಗಿಯೂ, ವಿಸ್ತಾರವಾಗಿಯೂ ಇದೆ. ಡಾ.ಕರಿಗೌಡ ಬೀಚನಹಳ್ಳಿ ಅವರ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಬದುಕು ಬರಹ ಕುರಿತು ಅಧ್ಯಯನ ಮಾಡುವವರಿಗೆ ಒಂದು ಆಕರ ಗ್ರಂಥವಾಗಿದೆ. ಈ ಕೃತಿಯನ್ನು ಬಹಳ ಆಸ್ಥೆಯಿಂದ ಆಕರ್ಷಕವಾಗಿ ಮನಮುಟ್ಟುವಂತೆ ಕಿ.ರಂ ಪ್ರಕಾಶನದ ಜಿ.ವಿ ಧನಂಜಯ ಅತ್ಯಂತ ಸುಂದರವಾಗಿ ಮುದ್ರಿಸಿದ್ದಾರೆ.

‍ಲೇಖಕರು Admin

November 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: