ಶಿವಕುಮಾರ ಮಾವಲಿ ಅವರ ಹೊಸ ಕಥೆ: ವ್ಯಾಲಂಟೈನ್ ಇನ್ ದ ಟೈಮ್ ಆಫ್ ಕ್ವಾರಂಟೈನ್

ಶಿವಕುಮಾರ ಮಾವಲಿ

ಕೆನಡಾದ ಒಟ್ಟಾವಾ ಮತ್ತು ಆಸ್ಟ್ರೇಲಿಯದ ಮೆಲ್ಬೋರ್ನ್ ನಿಂದ ಬೆಂಗಳೂರಿಗೆ ಬಂದ ವಿಮಾನಗಳ ಸಮಯ ಆಚೀಚೆ ಇದ್ದರೂ ಈ ಪ್ರಯಾಣಿಕರೊಂದಿಗೆ ಮಾರಣಾಂತಿಕ ವೈರಸ್ ಕೂಡ ಪ್ರಯಾಣಿಸಿದ್ದರೆ ಎಂಬ ಭಯದಿಂದಾಗಿ ಎರಡೂ ವಿಮಾನಗಳಲ್ಲಿ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವುದು ಕಡ್ಡಾಯವಾಗಿತ್ತು.‌ ಹಾಗೆ ನೋಡಿದರೆ ಅದುವರೆಗೂ ವಿಮಾನಯಾನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರದ ಸರ್ಕಾರ, ವೈರಸ್ ದೇಶದೊಳಗೆ ಬರಲು ವಿಮಾನ ಪ್ರಯಾಣ ಕಾರಣವಾದ ಬಗ್ಗೆ ಮಾಧ್ಯಮಗಳು ಒತ್ತಿ ಹೇಳುತ್ತಿದ್ದ ಕಾರಣಕ್ಕೋ ಏನೋ ಆ‌ ದಿನವೇ ದೇಶದೊಳಗಿನ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿತ್ತು.

ಟರ್ಮಿನಲ್ ನಲ್ಲಿ ಈ ಬಗ್ಗೆ ಹಾಕಿದ್ದ ಬೋರ್ಡ್ ನೋಡಿದ ಪ್ರಯಾಣಿಕರೆಲ್ಲ‌ ಹೇಗೋ ತಾವು ಬಂದು ಬೆಂಗಳೂರು ಸೇರಿದೆವು ಎಂಬ ಬಗ್ಗೆ ನಿಟ್ಟುಸಿರು ಬಿಟ್ಟರಾದರೂ ಎಲ್ಲರನ್ನೂ ಹತ್ತಿರದ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲು ಸರ್ಕಾರ ಆದೇಶಿಸಿದ್ದನ್ನು ತಿಳಿದು ತಾತ್ಕಾಲಿಕ ಕೋಪವನ್ನು ಪ್ರದರ್ಶಿಸಿದರು.‌ ಪ್ರಯಾಣಿಕರನ್ನೆಲ್ಲ ಸ್ಕ್ರೀನಿಂಗ್ ಮಾಡಿ ಜ್ವರದ ಲಕ್ಷಣವೇನಾದರೂ ಇದ್ದರೆ ಅವರನ್ನು ಪ್ರತ್ಯೇಕವಾಗಿ ಟೆಸ್ಟ್ ಮಾಡಿ ಕ್ವಾರಂಟೈನ್ ಮಾಡಲಾಗುತ್ತಿತ್ತು. ‘ ದಿಸ್ ಇಸ್ ಮೀನಿಂಗ್ಲೆಸ್ , ವಾಟ್ ಅ ಜೋಕ್, ಹೈಯ್ಲಿ ರಿಡಿಕ್ಯುಲಸ್ ಎಂದೆಲ್ಲಾ ಮನಸೋಯಿಚ್ಛೆ ಭಾರತ ಸರ್ಕಾರವನ್ನು ಬೈದುಕೊಳ್ಳುತ್ತಲೇ ಸ್ಕ್ರೀನಿಂಗ್ ಗಾಗಿ ಎರಡೂ ವಿಮಾನಗಳಿಂದಿಳಿದವರು ಪ್ರತ್ಯೇಕ‌ ಸಾಲಿನಲ್ಲಿ ನಿಂತಿದ್ದರು. ಅವರೆಲ್ಲರನ್ನು ನಿಯಮಾನುಸಾರ ರ್ಯಾಂಡಮ್ ಆಗಿ ಹೋಟೆಲ್ ಗಳಿಗೆ ಕ್ವಾರಂಟೈನ್ ಗೆಂದು ಕಳುಹಿಸಲಾಯಿತು.

ಮೆಲ್ಬೋರ್ನ್ ದಿಂದ ಬಂದಿದ್ದ ವಿವೇಕ್ ಈ ಕಡ್ಡಾಯ ಕ್ವಾರಂಟೈನನ್ನು ಶಪಿಸುತ್ತಲೇ ತನಗೆ ಸೂಚಿಸಲಾದ ತ್ರೀ‌ ಸ್ಟಾರ್ ಹೋಟೆಲ್ ನ ರೂಮ್ ನೊಳಗೆ ಬಂದು, ತನಗಾಗಿ ಚನ್ನಗಿರಿಯಲ್ಲಿ ಕಾಯುತ್ತಿದ್ದ ಅಮ್ಮನಿಗೆ ಕಾಲ್ ಮಾಡಿ ಇರುವ ವಿಷಯವನ್ನೆಲ್ಲ ಹೇಳಿದ. ವೈರಸ್ ಬಗ್ಗೆ ಟಿವಿಯಲ್ಲಿ ನೋಡಿ ಹೆದರಿದ್ದ ಅಮ್ಮ ‘ ಆಯ್ತು ವಿವಿ ಹುಷಾರಾಗಿದ್ದು‌,‌ ಅಲ್ಲಿಂದ ಆರೋಗ್ಯವಾಗಿ ಮನೆಗೆ ಬಾ’ ಎಂದು ಅಮ್ಮ ಹೇಳಬೇಕಾದ್ದೆಲ್ಲವನ್ನೂ ಹೇಳಿ ಕಾಲ್ ಮುಗಿಸಿದರು.

ರಾತ್ರಿ ಊಟ ತಂದ ವೇಟರ್, ಬೆಲ್ ಮಾಡಿ, ಇವನು ಡೋರ್ ತೆಗೆಯುವವರೆಗೂ ಇದ್ದು ನಂತರ ದೂರದಿಂದ ಬಾಗಿಲ ಬಳಿ ಊಟ ಇಟ್ಟು ಪಕ್ಕದ ರೂಮಿನ ಬೆಲ್ ಮಾಡಿ ಕಾಯುತ್ತಿದ್ದ. ರೂಮಿನ ಬಾಗಿಲು ತೆಗೆದ ಕೆನಡಾದಿಂದ ಬಂದಿದ್ದ ರಿಚಾ ಊಟವನ್ನು ಒಳಗೆ ತರದೆ ಬಾಗಿಲ ಬಳಿಯಲ್ಲೇ ಇಟ್ಟು ಹೊರಟ ವೇಟರ್ ನನ್ನು ‘ ಹೆಲೋ‌, ಏನಿದು ಡೋರ್ ಹತ್ರ ಇಟ್ಟು ಹೋಗ್ತಾ ಇದ್ದೀರಾ? ಒಳಗೆ ತಂದಿಡ್ಬೇಕಲ್ವ?’ ಎಂದು ಅಧಿಕಾರವಾಣಿಯಲ್ಲಿ ಹೇಳಿದ್ದು, ತನ್ನ ಊಟ ಒಳಗೆ ತಾನೇ ತಂದು ಟೇಬಲ್ ಮೇಲೆ ಇಡುತ್ತಿದ್ದ ವಿವೇಕ್ ಗೆ ಕೇಳಿಸಿತು. ‘ ಇಲ್ಲ ಮೇಡಂ, ನಮಗೆ ಹೇಳಿದ್ದಾರೆ ರೂಮ್ ಒಳಗೆ ನಾವು ಬರೋ ಹಾಗಿಲ್ಲ. ಡೋರ್ ಹತ್ರಾನೆ ಫುಡ್ ಇಡಬೇಕು ಅಂತ’ ಎಂದು ಹೇಳಿ ಇವಳ ಮುಂದಿನ ಮಾತಿಗೆ ಕಾಯದೇ ಸ್ಟೇರ್ ಕೇಸ್ ನಲ್ಲಿ ಕೆಳಗಿಳಿದು ಹೋದ.

ಆ ಹೆಣ್ಣು ಧ್ವನಿಯ ಧಾಟಿಯನ್ನು ಹಿಂಬಾಲಿಸುತ್ತ ತನ್ನ ರೂಮಿನ ಬಾಗಿಲು ಹಾಕಿಕೊಳ್ಳುವ ನೆಪದಲ್ಲಿ ವಿವೇಕ್ ರೂಮಿನ ಹೊರಗೆ ಬಂದ. ಅಷ್ಟರಲ್ಲಿ ಪಕ್ಕದ ರೂಮಿನ ಬಾಗಿಲು ‘ಡಬ್’ ಎಂದು ಹಾಕಿಕೊಂಡಿತು. ಯಾಕೋ ವಿವೇಕನಿಗೆ ಆ ರಾತ್ರಿ ಆ ಧ್ವನಿ ಬಹಳ ಕಾಡಿತು. ಸಾಕಷ್ಟು ಹೆಣ್ಣು ಧ್ವನಿಗಳನ್ನು ಕೇಳಿದ್ದರೆ ಅವನಿಗೆ ಇದು ವಿಶೇಷ ಅನ್ನಿಸುತ್ತಿರಲಿಲ್ಲವೇನೋ ಆದರೆ ಸುಮಾರು ಹದಿನೈದು ವರ್ಷಗಳ ಹಿಂದೆ ತೀರ ಪರಿಚಿತವಾಗಿದ್ದ ಧ್ವನಿಯನ್ನೇನಾದರೂ ತಾನು ಇವತ್ತು ಮತ್ತೆ ಕೇಳಿಸಿಕೊಂಡೆನೇ ಅನ್ನಿಸಿದ್ದಂತೂ ನಿಜ. ತಾನು ತಕ್ಷಣ ಊಟ ತೆಗೆದುಕೊಂಡು ಒಳಗೆ ಬರದಿದ್ದರೆ ಆಕೆ ಯಾರೆಂದು ನೋಡಬಹುದಿತ್ತು ಎಂದು ನೆನೆದು ತನ್ನನ್ನು ತಾನು ಬೈದುಕೊಂಡರೂ ಹೇಗೂ ಬೆಳಗ್ಗೆ ತಿಂಡಿ ಸಮಯಕ್ಕೆ ಬರುತ್ತಾಳಲ್ಲ ಎಂದುಕೊಂಡು ಮಲಗಿದ.‌

ಬೆಳಗ್ಗೆ ರಿಚಾ ಎದ್ದಾಗ ಒಂಭತ್ತು ಘಂಟೆಯಾಗಿತ್ತು. ಬಾಗಿಲು ತೆಗೆದು ನೋಡಿದಳು. ವೇಟರ್ ಇನ್ನೂ ತಿಂಡಿ ತಂದಿರಲಿಲ್ಲ. ವಾಪಾಸ್ ರೂಮ್ ಗೆ ಹೋಗಿ ರಿಸೆಪ್ಷನ್ ಗೆ ಕಾಲ್ ಮಾಡಿ ವಿಚಾರಿಸಿದರೆ ‘ ಬೆಳಗ್ಗೆ ಎಂಟು ಗಂಟೆಗೆ ತಿಂಡಿ ಕೊಡಬೇಕು ಅಂತ ನಮಗೆ ಸೂಚನೆ‌ ಇದೆ ಮೇಡಂ.‌ ನಾವು ನಿಮ್ಮ ರೂಮಿನ ಬೆಲ್ ಮಾಡಿ ಕಾದರೂ ನೀವು ಹೊರಗೆ ಬರಲಿಲ್ಲ. ಹಾಗಾಗಿ ಅಲ್ಲೇ ಇಟ್ಟು ಬಂದಿದ್ವಿ‌ ಇಲ್ಲಾ ಅಂದ್ರೆ ಯಾರಾದರೂ ಬೇರೆಯವರು ತೆಗೆದುಕೊಂಡಿರಬಹುದು‌’ ಅಂದರು. ಇಂಥ ವ್ಯವಸ್ಥೆಯಲ್ಲಿ ಹದಿನಾಲ್ಕು ದಿನ ಕಳೀಬೇಕಾ ಎಂದು ಗೊಣಗುತ್ತ ಪಕ್ಕದ ರೂಮಿನವರದ್ದೂ ಇದೇ ಕತೆನಾ ಎಂದು ವಿಚಾರಿಸಲು ಬೆಲ್ ಮಾಡಿದಳು.‌ ಬಾಗಿಲು ತೆಗೆದಾಗ ತನ್ನ ಮುಂದಿದ್ದ ರಿಚಾಳನ್ನು ನೋಡಿದ ವಿವೇಕ್ ಹಾಗು ವಿವೇಕ್ ನನ್ನು ನೋಡಿದ ರಿಚಾ ಇಬ್ಬರೂ ದಿಗ್ಭ್ರಮೆಯಿಂದ ನಿಂತರು.

• * * * *

‘ ಹಾಯ್, ವಿವೇಕ್ ನೀನಾ ? ನೀನ್ಹೇಗೆ ಇಲ್ಲಿ ? ‘ ಎಂದಳು ರಿಚಾ.
‘ ಮೆಲ್ಬೋರ್ನ್ ನಿಂದ ಬಂದೆ. ನಿನ್ನೆ ಇಲ್ಲಿ ತಂದಿಟ್ಟರು’ ಎಂದ ವಿವೇಕ್.
ರಿಚಾಗೆ ವಿವೇಕ್ ಮೆಲ್ಬೋರ್ನ್ ಇಂದ ಬಂದಿದ್ದಾನೆ ಎಂಬುದನ್ನು ನಂಬಲಿಕ್ಕಾಗುತ್ತಿಲ್ಲ.

‘ ರಾತ್ರಿ ನೀನು ವೇಟರ್ ಗೆ ದಬಾಯಿಸುತ್ತಿದ್ದಾಗಲೇ ನಿನ್ನ ಧ್ವನಿ ಕೇಳಿ ಓಡಿ ಬಂದೆ.‌ ಅಷ್ಟರಲ್ಲಿ ನೀನು ಬಾಗಿಲು ಹಾಕ್ಕೊಂಡ್ ಒಳಗೋದೆ’

‘ ಓಹ್, ನನ್ನ ಧ್ವನಿ ಇನ್ನೂ ಮರೆತಿಲ್ಲ ಹಾಗಾದರೆ ನೀನು ?’

‘ ಮತ್ಯಾವ ಧ್ವನಿಯೂ ಕಿವಿ ಮೇಲೆ ಬೀಳದಿದ್ದಾಗ ಮೊದಲಿನ ಧ್ವನಿಯನ್ನು ಮರೆಯುವುದಾದರೂ ಹೇಗೆ?’

‘ ಅಂದರೆ, ನೀನು ಇನ್ನೂ ಮದುವೆ ಆಗಿಲ್ಲವೆ ? ‘

‘… ‘

‘ ಛೇ, ನೀನು ಮಾತ್ರ ಯಾಕೆ ಹೀಗೆ ನೋವು ತಿನ್ನಬೇಕು ? ‘

‘ಅದೆಲ್ಲ ಮಾತಾಡೋಣ ಈಗ ರೂಮೊಳಗೆ ಬಾ. ಯಾರಾದರೂ ನೋಡಿದರೆ ಸೋಷಿಯಲ್ ಡಿಸ್ಟನ್ಸ್ ಫಾಲೋ ಮಾಡ್ತಿಲ್ಲ ಅಂತ ಬೈತಾರೆ. ಆಮೇಲೆ ಟಿವಿಯಲ್ಲೂ ಬಂದುಬಿಡ್ತೀವಿ ‘ ಎಂದು ನಕ್ಕ ವಿವೇಕ್. ರೂಮೊಳಗೆ ಬಂದ ಅವಳಿಗೆ ತಾನು ಇನ್ನೂ ತಿಂಡಿ ತಿಂದಿಲ್ಲದ್ದನ್ನು ಹೇಳಿ ಇಬ್ಬರೂ ಶೇರ್‌ ಮಾಡೋಣ ಎಂದು ಕುಳಿತರು.

‘ಹೇಳು ವಿವೇಕ್‌. ಆಮೇಲೆ ಏನಾಯ್ತು? ಅದೇ ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಕ್ಯಾಂಟೀನ್ ನಲ್ಲಿ ನಾನು ನೀನು ಹೀಗೆ ಅದೆಷ್ಟು ಸಾರಿ ಒಂದೇ ಪ್ಲೇಟಲ್ಲಿ ತಿಂದಿದ್ವಿ ಅಲ್ವಾ ?’

‘ಹೌದು. ಅಲ್ಲೇ ಕೊನೇ ಸಾರಿ ನಾವಿಬ್ಬರೂ ಊಟ ಮಾಡಿದ್ದು, ಭೇಟಿ ಮಾಡಿದ್ದು. ನೆನಪಿದೆಯಾ ? ‘

‘ನೆನಪಿದೆ ಕಣೋ… ಏನ್ ಮಾಡ್ಲಿ ಆಗಿನ ಸ್ಥಿತಿ‌ ಹಾಗಿತ್ತು ‘

‘ನೀನು MBA ನೇ ಮಾಡ್ಬೇಕು. ಇಷ್ಟೇ ಸ್ಯಾಲರಿ ತಗೋಳ್ಳೋ ಜಾಬ್ ಗೆ ಸೇರಬೇಕು. ನಾವು ಲವ್ ಮಾಡ್ತಿದ್ದೀವಿ ಅಂತ ಯಾರಿಗೂ ಗೊತ್ತಾಗಬಾರ್ದು. ನೀನು ನಿಮ್ಮ ಅಪ್ಪ ಅಮ್ಮನ ಜೊತೆ ನಮ್ಮ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಬೇಕು‌. ಮದುವೆಯಾದ ಮೇಲೆ ಯಾವುದಾದರೂ ಒಂದು ದೇಶಕ್ಕೆ ಹೋಗಿ ಸೆಟಲ್ ಆಗುತ್ತೇವೆ ಎಂದು ನಮ್ಮ ಮನೆಯವರಿಗೆ ಹೇಳಿ ಮದುವೆಗೆ ಒಪ್ಪಿಸಬೇಕು.‌ ಆಗ ಮಾತ್ರ ಇದು ಸಾಧ್ಯ. ಇಲ್ಲವಾದರೆ ಇನ್ಮುಂದೆ ನಮ್ಮ ನಡುವೆ ಏನೂ ಇರಲ್ಲ. ಈಗ ಸ್ಟಡಿ ಹಾಲಿಡೇಸ್. ಒಂದು ತಿಂಗಳು ಟೈಮ್ ಇದೆ ನಿನಗೆ. ಎಕ್ಸಾಂಗೆ ಬಂದಾಗ ಏನು ಅಂತ ನಿನ್ನ ಡಿಸಿಷನ್ ಹೇಳು’

ಆವತ್ತು ರಿಚಾ ಹೇಳಿದ ಮಾತುಗಳನ್ನ ಇವತ್ತು ವಿವೇಕ್ ಅವಳಿಗೆ ನೆನಪು ಮಾಡಿದ.

‘ಅದಕ್ಕೆ ನೀನೇನ್‌‌ ಮಾಡಿದೆ . ಎಕ್ಸಾಂ ಬರೆಯೋಕೆ ಬರಲಿಲ್ಲ ಅಲ್ವಾ ? ನಿನ್ಗೆ ಇಷ್ಟೂ ಮಾಡೋಕೆ ಆಗ್ಲಿಲ್ಲ ಅಂತ ತಿಳಿದಮೇಲೆ ಎಷ್ಟು ನೋವನುಭವಿಸಿದೆ ಗೊತ್ತಾ ?’

‘ನೀನು ಹೇಳಿದ್ದು ಯಾವುದೋ ಪ್ರಾಜೆಕ್ಟ್ ಥರ ಇತ್ತು.‌ಅದನ್ನ‌ ಮಾಡಬೇಕು ಅನ್ನಿಸ್ಲಿಲ್ಲ’

‘ ಆದರೆ , ಅದು ನಮ್ಮಿಬ್ಬರ ಪ್ರೀತಿ ಗೆಲ್ಲೋಕೆ ಅನಿವಾರ್ಯ ಆಗಿತ್ತು .‌ಅದಕ್ಕೆ ಹಾಗೆ ಹೇಳಿದೆ .‌ತಪ್ಪೇನು ? ‘

‘ ಅದೊಂದು ಒಪ್ಪಂದ ಅನ್ನಿಸಿಬಿಡ್ತು ನನಗೆ. ನಿಜ ಹೇಳ್ತೀನಿ. ನೀನಿಲ್ಲದೆ ಬದುಕುವುದು ನನಗೆ ಬಹಳ ಬೇಗ ಅಭ್ಯಾಸವಾಯ್ತು’

‘ಹಲೋ, ನಾನೇನು ನಿನ್ನ ನೆನಪಲ್ಲಿ ನರಳ್ತಾ ಇರಲಿಲ್ಲ ಗೊತ್ತಾ. I got what I have been aspiring for ‘

ರಿಚಾಗೆ ತಿಂಡಿ ಸಾಕಾಗಲಿಲ್ಲವೆಂದು ಅರಿತ ವಿವೇಕ್ ತನ್ನ ಬ್ಯಾಗ್ ನಲ್ಲಿ ಅಮ್ಮನಿಗಾಗಿ ಆಸ್ಟ್ರೇಲಿಯಾದಿಂದ ತಂದಿದ್ದ ಚಾಕೊಲೇಟ್ ಗಳಲ್ಲಿ ಕೆಲವನ್ನು ರಿಚಾಳಿಗೆ ಕೊಟ್ಟ.

ಚಾಕೊಲೇಟ್ ಬಾಯಿಗಿಡುತ್ತಾ ‘How sweet of you ! ಅಂದಹಾಗೆ ಏನ್ ಮಾಡ್ತಿದ್ದೀಯ ನೀನೀಗ ? ‘ ಅಂದಳು ರಿಚಾ .

‘ ನಮ್ಮೂರಲ್ಲಿಯೇ ಗದ್ದೆ, ತೋಟ ಗಳಲ್ಲಿ ಆರ್ಗ್ಯಾನಿಕ್ ಕೃಷಿ ಮಾಡ್ಕೊಂಡ್ ಅಮ್ಮನ ಜೊತೆ ಇದ್ದೀನಿ’

‘ಅಪ್ಪ ? ‘

‘ಆತ್ಮಹತ್ಯೆ ಮಾಡಿಕೊಂಡರು ‘

‘ಅಯ್ಯೋ ‘

‘ಹೌದು. ಅವರ ಸಹೋದ್ಯೋಗಿಗಳಲ್ಲೇ ಯಾರೋ ಒಬ್ಬರು ಅವರ ಬಗ್ಗೆ ಸುಮ್ಮನೆ ಮಾತಿನ ಮಧ್ಯೆ He is a womanizer ಅಂದು ಬಿಟ್ರಂತೆ. ಆ ದಿನವೇ ನೇಣು ಹಾಕಿಕೊಂಡಿದ್ರು. ಅದ್ಯಾವ ಕಾರಣಕ್ಕೆ ಅವರಿಗೆ ಹೀಗಂದರು ಅನ್ನೋದು ಇಡೀ ಊರಿನಲ್ಲಿ ಯಾರಿಗೂ ತಿಳಿಯಲಿಲ್ಲ. ಆದರೆ ಅಮ್ಮ ಅದನ್ನೆಲ್ಲ ನಂಬಲಿಲ್ಲ.‌ ಅವಳ ಜೊತೆ ನಾನು ಗಟ್ಟಿಯಾಗಿ ನಿಲ್ಲಲೇಬೇಕಾಯಿತು’

‘I am really sorry to hear this Vivek. ರಬ್ಬಿಷ್ ಪೀಪಲ್. They make nasty comments. ಆದ್ರೆ ನೀನು ಮದುವೆ…’

‘ಅಮ್ಮನ ಒತ್ತಾಯಕ್ಕೆ ಮದುವೆಯಾಗಲು ನಾನು ಸಿದ್ಧನಿದ್ದೆ. ಆದರೆ ಇಡೀ ಊರಲ್ಲಿ‌ ಅಪ್ಪನ ಸಾವಿನ ನಂತರ ಏನೇನೋ ಗುಲ್ಲೆದ್ದು ಅದೂ ಸಾಧ್ಯವಾಗಲಿಲ್ಲ’

‘ರಿಯಲಿ ಸ್ಯಾಡ್. ಈಗ ಮೆಲ್ಬೋರ್ನ್ ಹೋಗಿದ್ದು ಏನಕ್ಕೆ ? ಸುಳ್ಳು ಹೇಳ್ಬೇಡ.‌ ನಿಜವಾಗಲೂ ನೀನು ಏನ್‌ ಕೆಲ್ಸ ಮಾಡ್ತೀಯ ಹೇಳು? ‘

‘ಆಸ್ಟ್ರೇಲಿಯ ನೋಡಲು ಹೋಗಿದ್ದೆ…’

‘ನಿಜಾನಾ ?’

‘ಹೌದು. ನನಗೆ ಪಿಯುಸಿಯಲ್ಲಿ ‘Australia and I’ ಅಂತಾ ಒಂದು ಪಾಠ ಇತ್ತಲ್ಲ. ಅದರ ಬಗ್ಗೆ ತಿಳಿದಾಗಿನಿಂದಲೇ ಆ ದೇಶವನ್ನು ನೋಡಬೇಕೆಂಬ ಆಸೆ ಬಹಳ ಇತ್ತು. ಅದಕ್ಕಾಗಿಯೇ ಹೋಗಿದ್ದೆ‌. ಪೆಂಗ್ವಿನ್, ಡಾಲ್ಫಿನ್ , ಬೀಚ್, ಶಾಪಿಂಗ್, ಕಾಫೀ ಎಲ್ಲಾನೂ ಎಂಜಾಯ್ ಮಾಡ್ಕೊಂಡ್ ಬಂದೆ. ಅಮ್ಮನೂ ಜೊತೆಲಿ ಬರಬೇಕಿತ್ತು ಆದರೆ ಡಾಕ್ಟರ್ ಬೇಡ್ವೇ ಬೇಡ ಅಂದಬಿಟ್ರು’

‘ವೆರಿ‌ ಇಂಟರೆಸ್ಟಿಂಗ್ ಕಣೋ ನೀನು…’

‘ಓಹೋ ! Things thrown once should not become interesting again’ ಎಂದು ಚುಚ್ಚಿದ ವಿವೇಕ್.

ರಿಚಾಳ ಬಳಿ ಇದಕ್ಕೆ ಉತ್ತರ ಇರಲಿಲ್ಲ.

‘Just kidding Richa. ಅಂದಹಾಗೆ ನೀನು ಕೆನಡಾ‌ ಏತಕ್ಕೆ ಹೋಗಿದ್ದೆ ? ‘

‘ಸುಹಾಸ್, ಪ್ಯಾಸಿಫಿಕ್‌ ಕೋಸ್ಟಲ್ ಏರ್ ಲೈನ್ಸ್ ನಲ್ಲಿ ಪೈಲಟ್ ಆಗಿದ್ದಾನೆ. ನಾನೂ ಒಟ್ಟಾವಾ ದಲ್ಲಿ‌ ಇನ್ ವೆಸ್ಟ್‌ಮೆಂಟ್ ಬ್ಯಾಂಕೊದರಲ್ಲಿ ಅಡ್ವೈಸರ್ ಆಗಿ ಕೆಲಸ ಮಾಡ್ತಿದ್ದೀನಿ ವಿವೇಕ್‌. ಈಗ ವೆಕೇಶನ್ ಗೆ ಅಂತ ಊರಿಗೆ ಬಂದೆ. ಸುಹಾಸ್ ಗೆ ಈ ಬಾರಿ ಜೊತೇಲಿ ಬರಲಿಕ್ಕೆ ಆಗಲಿಲ್ಲ. ಈ ವೈರಸ್ ಬೇರೆ ಇತ್ತಲ್ಲ ನಮ್ಮೂರೇ ಸೇಫ್ ಅಂತಾ ಹೊರಟು ಬಂದೆ’

‘ನೋಡು, ನಾನು ವೆಕೇಶನ್ ಗೆ ಅಂತ ವಿದೇಶಕ್ಕೆ‌ ಹೋದ್ರೆ ನೀನು ನಿನ್ನದೇ ದೇಶಕ್ಕೆ ವೆಕೇಶನ್ ಗೆ ಬಂದಿದ್ದೀಯಾ ?’ ಎಂದ ವಿವೇಕನ ಮಾತು ಇಬ್ಬರಲ್ಲೂ ನಗು ತಂದಿತು.

‘ನಾವು ಹೀಗೆ ಮತ್ತೆ ಭೇಟಿ ಮಾಡ್ತೀವಿ ಅಂತ ನಾನು ಕನಸಲ್ಲೂ ಊಹಿಸಿರಲಿಲ್ಲ ವಿವೇಕ್ ‘

‘ನಾನು ಕೂಡ … ‘

‘ಸರಿ , ಫ್ರೆಶ್ ಆಗಿ ಬರ್ತೀನಿ. ಇನ್ನು ಹದಿನಾಲ್ಕು ದಿನ ನಾವಿಬ್ಬರೂ ಇಲ್ಲೇ ಇರ್ತೀವಲ್ಲ ಅನ್ನೋದು ಖುಷಿ ವಿಷಯ’

‘ರಿಚಾ, remember, we are quarantines ‘

‘Yes, we are valentines in the time of quarantine ‘ ಎಂದು ಮಂದಹಾಸ ಬೀರುತ್ತ ರೂಮಿಂದ ಹೋದ ರಿಚಾಳ ಉತ್ಸಾಹ ಕಂಡು ವಿವೇಕ್ ಗೆ ಆತಂಕವೂ ಅನಂದವೂ ಆಗಿದ್ದಿರಬಹುದು.

ಹೀಗೆ ಹೋದವಳು ಹಾಗೆ ಬಂದಳು. ಊಟ ಕೊಡುವವರು ಬರುವ ಸಮಯಕ್ಕೆ ಸರಿಯಾಗಿ ತನ್ನ ರೂಮಿಗೆ ಹೋಗಿದ್ದು ಅವರು ಹೋದಮೇಲೆ ಮತ್ತೆ ವಿವೇಕ್ ನ ರೂಮಿಗೆ ಹಾಜರಾಗುವಳು.

ಈ ನಡುವೆ ಒಮ್ಮೆ ವಿವೇಕ್ ಅವಳ ರೂಮಿಗೆ ಹೋದಾಗ ಅಲ್ಲಿದ್ದ ವಾಚ್ ನ್ನು ನೋಡಿ ಖುಷಿಯಾದ. ಅದು ಅವಳಿಗೆ ಅವನು ಸುಮಾರು ಹದಿನೈದು ವರ್ಷಗಳ ಹಿಂದೆ ಕೊಡಸಿದ್ದ ಸಾಧಾರಣ ವಾಚು ಅದು. ಆ ಬಗ್ಗೆ ಅವಳನ್ನು ಏನೂ ಕೇಳಲಿಲ್ಲ. ಹೀಗೆ ದಿನವಿಡೀ ಪರಸ್ಪರರ ರೂಮಲ್ಲಿ ಕೂತು ಮಾತಾಡುತ್ತ, ಸಿನಿಮಾ ನೋಡುತ್ತ ಕಾಲ ಕಳೆಯಲಾರಂಭಿಸಿದರು.

ಕ್ವಾರಂಟೈನ್ ನ ಆರನೇ ದಿನ ಮಧ್ಯ ರಾತ್ರಿ ರಿಚಾ ಗಾಬರಿಯಿಂದ ವಿವೇಕ್ ನ ರೂಮಿಗೆ ಕಾಲ್ ಮಾಡಿ ಬರಲು ತಿಳಿಸಿದಳು. ಹೋಗಿ ನೋಡಿದರೆ ಅವಳ ಪಕ್ಕದ ರೂಮಿನಲ್ಲಿದ್ದ ಹುಡುಗಿಯೊಬ್ಬಳು ಕಿಟಕಿಯಿಂದ ಯಾರನ್ನೋ ಮೇಲೆತ್ತಿಕೊಳ್ಳುತ್ತಿದ್ದುದು ಕಾಣಿಸಿತು.‌ ಬಂದವನು ‘ನೀನು ಚಿಂತೆ ಮಾಡ್ಬೇಡ ಡಿಯರ್. ದಿನ ನಾನು ಹೀಗೆ ಬಂದು ಪುಡ್ ಕೊಟ್ಟು ಹೋಗ್ತೀನಿ. ಇಲ್ಲಿ ಕೊಡೋದನ್ನ ನೀನು ತಿನ್ನೋಕ್ ಹೋಗ್ಬೇಡ.’ ಎಂದು ಹೇಳಿ ಹೋಗುವುದನ್ನು ಕಂಡು ಆಶ್ಚರ್ಯಕ್ಕೊಳಗಾದರು. ಆಗಾಗ ರಸ್ತೆ ಬದಿಯ ರೂಮಿನಲ್ಲಿದ್ದ ಯುವ ಪತ್ರಕರ್ತನೊಬ್ಬನನ್ನು ಕಿಟಕಿಯಲ್ಲಿ ನೋಡಿಕೊಂಡು, ಕಣ್ಣಲ್ಲೇ ಪ್ರೇಮಧಾರೆ‌ ಎರೆದು ಹೋಗಲು ಬರುತ್ತಿದ್ದ ಅವನ ಪ್ರೇಯಸಿಯನ್ನು ನೋಡಿದಾಗಲೆಲ್ಲ ತಮ್ಮ ಮಾಜೀ ಪ್ರೇಮವನ್ನು ನೆನೆದು ವಿವೇಕ್ ಮತ್ತು ರಿಚಾ ಥ್ರಿಲ್ ಆಗುತ್ತಿದ್ದರು. ತಮ್ಮ ಹಳೆಯ ದಿನಗಳನ್ನು ನೆನದು ನೆನಪುಗಳನ್ನೆಲ್ಲ ಹಂಚಿಕೊಂಡರು. ಹೊರಗಡೆ ಲೋಕದಲ್ಲಿ ಒಂದು ವೈರಸ್ ಏನೆಲ್ಲ ಮಾಡುತ್ತಿದೆ ಎಂಬ ಯಾವ ಅರಿವೂ ಬಾರದಂತೆ ಕಾಲ ಕಳೆದರು. ಒಮ್ಮೊಮ್ಮೆ ಶಿವಮೊಗ್ಗದ ನ್ಯಾಷನಲ್ ಕಾಲೇಜು ಮೈದಾನದಲ್ಲಿರುವಂತೆಯೇ ಭಾವಿಸಿಬಿಡುತ್ತಿದ್ದರು.

ಹದಿಮೂರನೆಯ ದಿನ ಸಂಜೆ ರಿಚಾ ಕೇಳಿದಳು.

‘ವಿವೇಕ್ ಈ ರಾತ್ರಿ ನಾನು ಇಲ್ಲಿಯೇ ಮಲಗಬಹುದಾ ?’

‘Are you sure ? ‘ ಎಂದ ವಿವೇಕ್.

‘Yes. It’s physical distance not the social distance ‘ ಎಂದು ರಾಗವಾಗಿ ಹೇಳುತ್ತಾ ಎದ್ದು ಹೋದವಳು ಊಟದ ಜೊತೆ ಮತ್ತೆ ವಿವೇಕ್ ನ ರೂಮಿಗೆ ಬಂದಳು.

ಊಟ ಮುಗಿಸಿ, ಟಿವಿಯಲ್ಲಿ ನ್ಯೂಸ್ ಹಾಕಿದಾಗ ನಾಳೆ ಆ ಹೋಟೆಲ್ ನಲ್ಲಿರುವವರ ಕ್ವಾರಂಟೈನ್ ಮುಗಿಯುವುದಾಗಿಯೂ ಅವರನ್ನೆಲ್ಲ ಮನೆಗೆ ಕಳುಹಿಸುವುದಾಗಿಯೂ ಸುದ್ದಿ ಬಿತ್ತರವಾಗುತ್ತಿತ್ತು.‌

ಟಿ.ವಿ‌.‌ಆಫ್ ಮಾಡಿದ ವಿವೇಕ್ .

‘ನಾಳೆಯಿಂದ ನಾವು ಮತ್ತೆ ಬೇರೆ ಬೇರೆ ಆಗುತ್ತೇವೆ ಎನ್ನುವುದನ್ನು ನೆನೆದರೆ ನಿನಗೆ ಏನನ್ನಿಸುತ್ತದೆ ವಿವೇಕ್ ?’

‘ಮತ್ತೆ ನಾವೆಂದೂ ಹೀಗೆ ಭೇಟಿಯಾಗುವುದು ಬೇಡ ಎನ್ನಿಸುತ್ತದೆ’

‘Why such cold emotions ? ‘

‘ಮತ್ತೆ ಬೇರೆಯಾಗಲೂ ಭೇಟಿಯಾದರೂ ಏಕೆ ಆಗಬೇಕಲ್ಲವೆ ? ‘

‘ಮತ್ತೆ ಒಂದಾಗೋಣ ಬಾ ‘ ಎಂದು ಕಿರುನಗೆ ಬೀರಿದಳು ರಿಚಾ.

‘ಅದು ಸಿನಿಮಾದಲ್ಲಿ ಮಾತ್ರ ಸಾಧ್ಯ ‘ ಎನ್ನುತ್ತಾ ಅವಳನ್ನು ಕಿಚಾಯಿಸಿದ ವಿವೇಕ್ ಬ್ಲಾಂಕೆಟ್ ಮೈಮೇಲೆಳೆದುಕೊಂಡ.

‘ನ್ಯಾಷನಲ್ ಕಾಲೇಜ್ ಕ್ಯಾಂಟೀನ್ ನೆನಪಾಗುತ್ತದೆ ವಿವೇಕ್. ನೀನು ಮಾಡುತ್ತಿದ್ದ ಆ ಚೇಷ್ಟೆಗಳೂ ಕೂಡ.’

‘ಆಗ ನೀನು ಭಾಳ ಪ್ರತಿಭಟಿಸುತ್ತಿದ್ದೆ ‘

‘ಹೌದಾ ? ನಾನು resist ಮಾಡ್ತಿದ್ನಾ ?’

‘ಯಾಕೆ ಹೇಳ್ಬೇಕಾ ? I hug you tightly ಅಂತ ಕಳಿಸಿದ ಒಂದು ಮೆಸೇಜಿಗಾಗಿ ಒಂದು ತಿಂಗಳು ಮಾತು ಬಿಟ್ಟಿದ್ದು ನೆನಪಲ್ವ ? ‘

‘ಇದೆ. ಆದರೆ ಈಗ ಪ್ರತಿಭಟಿಸುವುದಿಲ್ಲ‌ ಅಂದರೆ ತುಂಟನಾಗುತ್ತೀಯ ? ‘

‘ಅತಿಕ್ರಮವಿಲ್ಲದಿರುವಾಗ ಪ್ರತಿಭಟನೆಯ ಅಗತ್ಯ ಬೀಳುವುದಿಲ್ಲ ರಿಚಾ ‘

‘ಸರಿ‌ ಗುಡ್ ನೈಟ್ ‘

ತಾನೂ ಬ್ಲಾಂಕೆಟ್ ಮೈಮೇಲೆಳೆದುಕೊಂಡಳು ರಿಚಾ.

* * * *

‘ಲಾಕ್ ಡೌನ್ ನ‌ ಸಮಯದಲ್ಲಿ ಒಂದೇ ಊರಿನಲ್ಲಿರುವ ಹಾಲಿ ಪ್ರೇಮಿಗಳಿಗೇ ಭೇಟಿ‌ ಸಾಧ್ಯವಾಗದ ಸ್ಥಿತಿಯಲ್ಲಿ ಮಾಜಿ ಪ್ರೇಮಿಗಳಿಬ್ಬರು ಹದಿನಾಲ್ಕು ದಿನ ಒಂದೇ ಹೋಟೆಲ್ ನಲ್ಲಿ (ಒಂದೇ ರೂಮ್ ಎನ್ನುವುದೇ ಸೂಕ್ತ) ಕಾಲ ಕಳೆದ ರೋಚಕ ಸ್ಟೋರಿಯನ್ನು ನಾವು ನಿಮಗೆ ತೋರಿಸ್ತೀವಿ – ‘ ವ್ಯಾಲಂಟೈನ್ಸ್ ಇನ್ ದ ಟೈಮ್ ಆಫ್ ಕ್ವಾರಂಟೈನ್ ‘ ಎಂಬ ಸ್ಪೆಷಲ್ ಕಾರ್ಯಕ್ರಮ ಟಿವಿಯಲ್ಲಿ ಎರಡು ದಿನಗಳ ನಂತರ ಬರುತ್ತಿದ್ದುದನ್ನು ಚನ್ನಗಿರಿಯ ಮನೆಯಲ್ಲಿದ್ದ ವಿವೇಕ್ ಆಗಲಿ , ಶಿವಮೊಗ್ಗದಲ್ಲಿದ್ದ ರಿಚಾ ಆಗಲಿ ನೋಡಲೇ ಇಲ್ಲ. ಹೋಟೆಲ್ ನ ರಸ್ತೆ ಪಕ್ಕದ ರೂಮಿನಲ್ಲಿದ್ದ ಸ್ವತಃ ಪ್ರೇಮಿಯೂ ಆಗಿದ್ದ ಆ ಯುವ ಪತ್ರಕರ್ತ ಕ್ವಾರಂಟೈನ್ ನಲ್ಲಿದ್ದೇ ಈ ಪ್ರೇಮಿಗಳ ಕ್ವಾರಂಟೈನ್ ಸ್ಟೋರಿಯನ್ನ ತನ್ನ ವಾಹಿನಿಗೆ ತಲುಪಿಸಿದ್ದ.

* * * *

ಹದಿನಾಲ್ಕು ದಿನದಲ್ಲಿ ಮೊಬೈಲ್ ನಂಬರ್ ಕೂಡ ಎಕ್ಸ್ ಚೇಂಜ್ ಮಾಡಿಕೊಳ್ಳದ ಈ ವ್ಯಾಲಂಟೈನ್ಸ್ ಗಳು ಮಾತ್ರ ತಲಾ ಒಂದೊಂದು ಸುಳ್ಳು ಹೇಳಿದ್ದರು…

ತನ್ನ ಹೆಂಡತಿ ತೋಟದ ಮನೆಯಲ್ಲಿ ಕರೆಂಟ್ ಶಾಕ್ ಹೊಡೆದು ಸತ್ತಿದ್ದಳೆಂಬ ಕಾರಣಕ್ಕೋ ಏನೋ ವಿವೇಕ್ ತಾನು ಮದುವೆಯೇ ಆಗಲಿಲ್ಲ ಎಂದದ್ದು ಅವನಾಡಿದ ಸುಳ್ಳು.

ಮತ್ತು

ಮದುವೆಯಾದ ಆರು ತಿಂಗಳಲ್ಲಿಯೇ ಪ್ಲೇನ್ ಕ್ರಾಷ್ ನಲ್ಲಿ ಸುಹಾಸ್ ಕಣ್ಮರೆಯಾಗಿದ್ದರೂ ಅವನೊಬ್ಬ ಇಂಟರ್ ನ್ಯಾಷನಲ್ ಪೈಲಟ್ ಆಗಿದ್ದಾನೆ ಎಂದದ್ದು ಅವಳ ಸುಳ್ಳು…

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ… ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು…

‍ಲೇಖಕರು avadhi

May 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: