ನಿಸಾರ್ ಸರ್ : ಶಿಲುಬೆ ಏರಿದ್ದಾನೆ ಜೀಸಸ್..

ಕೆ ಎಸ್ ನಿಸಾರ್ ಅಹಮದ್

ರೇಖೆ: ಪ ಸ ಕುಮಾರ್

ಶಿಲುಬೆ ಏರಿದ್ದಾನೆ ಜೀಸಸ್ ಗೋಡೆಯಲ್ಲಿ
ಬಾಗಿದ ಶಿರ
ಕುತ್ತಿಗೆಯಲಿ ಉಬ್ಬಿದೊಂದು ನರ
ಯಾತನೆಗೂ ನಲ್ವಾತನೇ ನುಡಿವ ಮುಖ ಮುದ್ರೆ
ತೆರೆದೆದೆ
ಎನ್ನುವಂತಿದೆ
ಕೊಲೆಗಡುಕ ಬರಬ್ಬನ ವಕಾಲತ್ತು ನಡೆಸಿದವರೇ
ಎಡಕ್ಕೊಬ್ಬ ಬಲಕ್ಕೊಬ್ಬ ಕಳ್ಳನ ತೂಗಿ ಸನ್ಮಾನಿಸಿದವರೇ
ಮನ್ನಿಸಲಿ ನಿಮ್ಮನ್ನ ಆ ದೇವರೇ !

ನೀವು ಬಡಿದ ಸುತ್ತಿಗೆಗಳು
ಮೊಳೆಗಳು
ಮುಕುಟ ಹೆಣೆದ ಮುಳ್ಳುಗಳು
ಹಬ್ಬಿಸಿದ ಸುಳ್ಳುಗಳು
ರೋಮನರ ಕಿವಿಡೆಬ್ಬಿಸುವ ಕೊಂಬುಗಳು
ಕಾಲರಾಯನ ಗುಜರಿ ಸೇರಿಲ್ಲ
ವೇಷ ಮರೆಸಿವೆ ಅಷ್ಟೇ,ಈ ಎಲ್ಲ ಕೇಡುಗಳು
ರೈಫೆಲ್ಲ್ಲು ಟ್ಯಾಂಕು ಬಾಂಬು ಗ್ರನೆಡಗಳು
ಅವಕ್ಕೆ ಚಲನೆಯೊದಗಿಸಿವೆ
ನಿಮ್ಮವೇ ಬಲಿಷ್ಠ ಕೈಯಿಗಳು
ಎದೆಯಾಳದ ಮುಯ್ಯಿಗಳು

ಇರುವತನಕ ನಿಮ್ಮ ಸಾಮ್ರಾಜ್ಯ
ಆಗುತ್ತೇನೆ ಕ್ರೋಧ ತಿಳಿಗೆಡಿತನಕ್ಕೆ ಆಜ್ಯ
ಬಂದೆ ತೀರುತ್ತದೆ ದೈವೀ ರಾಜ್ಯ
ಎನ್ನುವಂತೆ ಏರಿದ್ದಾನೆ ಶಿಲುಬೆ

ಇಗರ್ಜಿ ಮಸಜಿದು ದೇವಸ್ಥಾನ ಮಠಗಳಲ್ಲಿ
ಮತಮತದ ಮತಿರಹಿತ ಹಟಗಳಲಿ
ಕೋರ್ಟು ಠಾಣೆ ಠಾಣೆಗಳಲ್ಲಿ
ಕಣ್ಬೆಳಕ ಕಿತ್ತೆಸೆದು ಕುರುಡುಗೊಳಿಸುವ
ನಮ್ಮ ಬಂದಿಖಾನೆಗಳಲ್ಲಿ
ದವಾಖಾನೆಗಳ ಕೋಣೆಕೋಣೆಗಳಲ್ಲಿ
ಮಾಹೆಗೊಂದಾವರ್ತಿ ಹಣತೆ ಹೊತ್ತಿಸಿಕೊಳದ
ದಲಿತವಾಸದ ಸೋಗೆಬಿಲಗಳಲ್ಲಿ

ದಿನನಿತ್ಯ ಶಿಲುಬೇಯೇರಿದ್ದಾನೆ ಜೀಸಸ್
ಅಸಂಖ್ಯ ಕ್ರಿಸ್ಮಸ್ಸುಗಳ ಹರಸಿ
ಶೋಷಿತರ ಕಂಬನಿಯನೊರೆಸಿ
ಸತ್ಯಕ್ಕೆ ಹೊಸ ಕವಲುಗಳ ತೆರೆಸಿ

‍ಲೇಖಕರು Admin

May 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. S.p.vijaya Lakshmi

    Preethiya Kavi Nisar Ahammadare, sundara kavithe… dhanyavaadagalu…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: