ಶಿಕ್ಷಣ ಮತ್ತು ಭಾಷಾ ಬೋಧನೆ

ಗೀತಾ ಡಿ ಸಿ

ನಮ್ಮ ಸರ್ಕಾರ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಈ ಸಂಬಂಧ ಪದವಿ ಮಟ್ಟದಲ್ಲಿ ಭಾಷಾ ಬೋಧನೆಗೆ ಸಂಬಂಧಿಸಿದಂತೆ ಅದರಲ್ಲೂ ಕನ್ನಡ ಭಾಷೆಗೆ ಕುತ್ತು ಬಂದೀತೆಂಬ ಆತಂಕದಲ್ಲಿ ಕೆಲವು ಅನುಮಾನಗಳು, ಪ್ರಶ್ನೆಗಳೆದ್ದು, ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳುವ ಪ್ರಕಟಣೆ ಹೊರಬಿದ್ದ ಒಂದೇ ದಿನದಲ್ಲಿ ಕರ್ನಾಟಕದ ವಿಶ್ವವಿದ್ಯಾಲಗಳ ಮುಖ್ಯಸ್ಥರು, ಪಠ್ಯ ರಚನಾ ಸಮಿತಿಯ ಸದಸ್ಯರು, ಕಾಲೇಜಿನ ಅಧ್ಯಾಪಕರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ನಾಡಿನ ಕೆಲವು ಚಿಂತಕರು ಪ್ರತಿಕ್ರಿಯಿಸಿದ್ದಾರೆ. ಪದವಿ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷಾ ಬೋಧನೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆಗಳೂ ಅಲ್ಲಲ್ಲಿ ಹರಿದಾಡಿವೆ. ಈ ಕುರಿತ ಪುಟ್ಟ ಚಿಂತನೆ ಇಲ್ಲಿದೆ.

ಹೊಸ ಶಿಕ್ಷಣ ನೀತಿಯಿಂದಾಗಿ ಕನ್ನಡ/ ಇತರೆ ಭಾಷೆಗಳನ್ನು ಪದವಿ ಮಟ್ಟದಲ್ಲಿ ಬೋಧಿಸುವವರಿಗೆ ಕೆಲಸವಿಲ್ಲದಂತಾಗುತ್ತದೆ ಎನ್ನುವುದು ಒಂದಾದರೆ, ಪದವಿ ಹಂತದ ವಿದ್ಯಾರ್ಥಿಗಳ ಸ್ವತಂತ್ರ ಆಲೋಚನಾಕ್ರಮಕ್ಕೆ, ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ ಎನ್ನುವುದು ಮತ್ತೊಂದು. ಹಾಗೆ ನೋಡಿದರೆ, ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಇತರ ಐಚ್ಛಿಕ ವಿಷಯಗಳು ವ್ಯವಹಾರ ಜಗತ್ತಿಗೆ ಬೇಕಾದ ಅಧ್ಯಯನದ ಕಡೆ ಗಮನಹರಿಸಿದರೆ, ಭಾಷಾ ಪಠ್ಯಗಳು ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳ ಮನೋಭಾವವನ್ನು, ಚಿಂತನೆಗಳನ್ನು, ಆಲೋಚನಾಕ್ರಮವನ್ನು ವಿಸ್ತರಿಸಿ, ಶ್ರೀಮಂತಗೊಳಿಸುವುದಲ್ಲದೆ, ಸಮಾಜ ಸದಾ ಜೀವಂತಿಕೆಯನ್ನು ಕಾಯ್ದುಕೊಳ್ಳಬೇಕೆನ್ನುವುದರತ್ತ ಗಮನಸೆಳೆಯುತ್ತವೆ.

ವಿದ್ಯಾರ್ಥಿಗಳು ಪದವಿ ತರಗತಿಗಳವರೆಗೂ ಕಲಿತ  ಭಾಷೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಬುದ್ಧವಾಗಿ ಹಾಗೂ ಸ್ವತಂತ್ರವಾಗಿ ಆಲೋಚಿಸುವ ಹಾಗೂ ಬರೆಯುವ ಸಾಮರ್ಥ್ಯವನ್ನುಗಂಭೀರವಾಗಿ ಪರಿಗಣಿಸಿ ರೂಢಿಸಿಕೊಳ್ಳುವುದೇ ಪದವಿ ತರಗತಿಗಳಲ್ಲಿ. (ಇದಕ್ಕೆ ತೀರಾ ಅಪರೂಪಕ್ಕೆ ಕೆಲವು ಅಪವಾದಗಳಿರಬಹುದು) ಹೀಗಿರುವಾಗ, ಪದವಿ ತರಗತಿಗಳಲ್ಲಿ ಭಾಷಾ ಬೋಧನೆಗೇ ಪೆಟ್ಟು ಬಿದ್ದರೆ, ಆಗಷ್ಟೇ ಹೊಸ ಬದುಕಿನ ಬಗೆಗೆ, ಜಗತ್ತಿನ ಆಗುಹೋಗುಗಳ ಬಗೆಗೆ ಬೆರಗು ಗಣ್ಣಿನಿಂದ ನೋಡುವ, ಕಾಣುವ, ಕಂಡುಕೊಳ್ಳುವತ್ತ ಹೆಜ್ಜೆ ಇಡುವ ವಿದ್ಯಾರ್ಥಿಗಳ  ಸ್ವತಂತ್ರ ಮನೋಭಾವಕ್ಕೆ ಪೆಟ್ಟು ಬೀಳುತ್ತದೆ. ಇದರ ಪರಿಣಾಮವಾಗಿ ಭವಿಷ್ಯದಲ್ಲಿ ಒಂದು ಸಮಾಜದ ಆಲೋಚನಾಕ್ರಮಕ್ಕೇ ಪೆಟ್ಟು ಬಿದ್ದಂತಾಗುತ್ತದೆ!

ಪದವಿ ಹಂತದಲ್ಲಿ ಅಧ್ಯಯನದ ಜೊತೆ ಜೊತೆಗೆ ಬರವಣಿಗೆ ಕೂಡ ಮುಖ್ಯವಾಗುತ್ತದೆ. ಒಂದು ಭಾಷೆ ಕಾಲಕಾಲಕ್ಕೆ ಮಾತು ಮತ್ತು ಬರಹದ ಮೂಲಕ ಚಾಲನೆಯಲ್ಲಿದ್ದಾಗ ಮಾತ್ರ ಜೀವಂತಿಕೆಯಿಂದಿರುತ್ತದೆನ್ನುವುದು ತಿಳಿದ ವಿಷಯವೇ ಆಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ, ಕೊಳ್ಳಲು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲಕ ಅವಕಾಶವನ್ನು ಸೃಷ್ಟಿಸಿಕೊಂಡಿದ್ದೇವೆ.

ಒಂದು ವೇಳೆ ಹೀಗೆ ಅಧಿಕೃತವಾಗಿ ರೂಢಿಸಿಕೊಳ್ಳದಿದ್ದರೆ, ಕನ್ನಡ ಈ ವೇಳೆಗಾಗಲೇ ಉಸಿರು ಕಳೆದುಕೊಳ್ಳುತ್ತಿತ್ತೋ ಏನೊ. ಯಾಕೆಂದರೆ, ಈಗ ಮುನ್ನೆಲೆಗೆ ಬಂದಿರುವ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಕ್ರಮದಿಂದಾಗಿ ಕನ್ನಡದ ಓದು, ಬರವಣಿಗೆ ಇಂದಿನ ಪೀಳಿಗೆಯವರಲ್ಲಿ ಬಹುತೇಕ ಏದುಸಿರು ಬಿಡುತ್ತಿರುವುದನ್ನು ಗಮನಿಸುತ್ತಿದ್ದೇವೆ. 

ಒಂದು ಭಾಷೆಯ ಉಳಿಕೆಗೆ ಬರವಣಿಗೆಯನ್ನು ರೂಢಿಸಿಕೊಳ್ಳಬೇಕಾಗಿರುವುದೂ ಮುಖ್ಯವಾಗುತ್ತದೆ. ಇಂಥದನ್ನು ಕಡೆಗಣಿಸಿದರೆ ನಮ್ಮ ಸಮಾಜದ ಯಾವುದೇ ಕ್ಷೇತ್ರದ ವರದಿಯಾದಿಯಾಗಿ ಒಂದು ಭಾಷೆಯ ಎಲ್ಲಾ ದಾಖಲಾತಿಗಳಿಗೂ ಹೊಡೆತ ಬೀಳುತ್ತದೆ. ಇದರಿಂದಾಗಿ ನಿಧಾನವಾಗಿ ಒಂದು ಭಾಷೆಯು ಅವನತಿಯ ಹಾದಿ ಹಿಡಿಯುವುದರಲ್ಲಿ ಸಂಶಯವಿಲ್ಲ.

ಈಗಾಗಲೇ ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒತ್ತುಕೊಟ್ಟು, ಪದವಿಮಟ್ಟಕ್ಕೆ ಬಂದರೂ ಒಂದು ವಾಕ್ಯವನ್ನೂ ಯಾಕೆ ಒತ್ತಕ್ಷರ, ದೀರ್ಘಾಕ್ಷರಗಳಿರುವ ತಮ್ಮ ಹೆಸರನ್ನೂ ಕನ್ನಡದಲ್ಲಿ ಬರೆಯಲು ಬಾರದ ಸ್ಥಿತಿಗೆ ವಿದ್ಯಾರ್ಥಿಗಳನ್ನು ತಲುಪಿಸಿದ್ದೇವೆ. ಕೇವಲ ಅಂಕಗಳನ್ನು ಗಮನದಲ್ಲಿಟ್ಟುಕೊಂಡು ಇತ್ತ ಇಂಗ್ಲಿಷೂ ಬಾರದ, ಕನ್ನಡದಲ್ಲೂ ಪ್ರಬುದ್ಧತೆಯನ್ನು ಸಾಧಿಸಲಾಗದ ಹಂತಕ್ಕೆ ವಿದ್ಯಾರ್ಥಿಗಳನ್ನು ತಳ್ಳಿದ್ದೇವೆ.  ಇಂತಹ ಸ್ಥಿತಿಗೆ ಕಾರಣ ಇದುವರೆಗೂ ಸರ್ಕಾರಗಳು ಶಿಕ್ಷಣ ಮಾಧ್ಯಮದ ಬಗ್ಗೆ ತೆಗೆದುಕೊಂಡ ನಿಲುವುಗಳ ಪರಿಣಾಮವೇ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಈಗ ಪದವಿ ತರಗತಿಯಲ್ಲಿರುವ ಭಾಷಾ ಬೋಧನೆಯಲ್ಲಿ ಯಾವ ಬದಲಾವಣೆ ಇಲ್ಲ ಎನ್ನುವ ವರದಿಗಳು ಉನ್ನತ ಶಿಕ್ಷಣ ಸಚಿವರಿಂದ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ಇದರ ಸಾದಕ-ಬಾದಕಗಳೇನು ಎಂಬುದನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಇದುವರೆಗೂ ವಿದ್ಯಾರ್ಥಿಗಳು ಎರಡು ವರ್ಷಗಳ ಪಿ.ಯು.ಸಿ. ತರಗತಿಗಳಲ್ಲಿ ಭಾಷಾ ಪಠ್ಯಗಳನ್ನು ಅಭ್ಯಾಸ ಮಾಡುತ್ತಿದ್ದರು.

ಈಗ ಹೊಸ ಶಿಕ್ಷಣ ನೀತಿಯಲ್ಲಿ ಅಲ್ಲಿನ ಒಂದು ವರ್ಷವನ್ನು ಪದವಿಗೆ ರವಾನಿಸಿದ್ದಾರೆ. ಅಂದರೆ, ಪದವಿಯಲ್ಲಿ ನಾಲ್ಕು ವರ್ಷ. ಇದರಲ್ಲಿ ಈ ಮೊದಲಿನಂತೆ ಎರಡು ವರ್ಷ ಕನ್ನಡ/ ಭಾಷಾ ಬೋಧನೆಯನ್ನು ಕಲಿಸುವ ಅವಕಾಶವಿದೆ ಎನ್ನುತ್ತಿದ್ದಾರೆ. ಇದರ ಪ್ರಕಾರ, ಎರಡನೇ ಪಿ.ಯು.ಸಿ. ತರಗತಿಯ ಒಂದು ವರ್ಷ ಹಾಗೂ ಈಗಿರುವ ಪದವಿ ಹಂತದ ಮೊದಲ ವರ್ಷ ವಿದ್ಯಾರ್ಥಿಗಳು ಭಾಷಾ ಪಠ್ಯಗಳನ್ನು ಅಭ್ಯಾಸ ಮಾಡುತ್ತಾರೆ ಎಂದಾಯಿತು. 

ಆದರೆ, ವಿದ್ಯಾರ್ಥಿಗಳು ಈಗ ಕಲಿಯುತ್ತಿರುವ ಪದವಿ ಹಂತದ ಎರಡನೆಯ ವರ್ಷದಲ್ಲಿ ಭಾಷಾ ಪಠ್ಯದ ಕಲಿಕೆಗೆ ಕಾಲಿಡುವ ಮೊದಲೇ, ಪ್ರಬುದ್ಧವಾಗಿ ಆಲೋಚಿಸುವ ಹಂತಕ್ಕೆ ಬರುವ ಮೊದಲೇ–ಭಾಷಾ ತರಗತಿಗಳಿಂದ ವಂಚಿತರಾಗುತ್ತಾರೆ ಎಂದಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ನಮ್ಮ ಕನ್ನಡ ಭಾಷಾ ಬಳಕೆ ಹಾಗೂ ಉಳಿಕೆಯ ದೃಷ್ಟಿಯಿಂದ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಪದವಿ ಹಂತದ ನಾಲ್ಕೂ ವರ್ಷಗಳಿಗೆ ಭಾಷಾ ಪಠ್ಯಗಳ ಬೋಧನೆಯಿರುವುದು ಉಚಿತವೆನಿಸುತ್ತದೆ. ಇದೇ ನಿಯಮದನುಸಾರ, ಪದವಿ ತರಗತಿಗಳಲ್ಲಿ ಈಗ ಭಾಷಾ ಪಠ್ಯಗಳನ್ನು ಕಲಿಸುತ್ತಿರುವ ಮಾದರಿಯಂತೆಯೇ ಇಂಜಿನಿಯರಿಂಗ್, ಮೆಡಿಕಲ್ ಓದುವ ಕನ್ನಡ ವಿದ್ಯಾರ್ಥಿಗಳಿಗೂ ಭಾಷಾ ಪಠ್ಯಗಳನ್ನು ಕಡ್ಡಾಯಗೊಳಿಸಿ  ಓದಿಸುವ ಅಗತ್ಯವಿದೆ ಎಂಬುದನ್ನೂ ಮನಗಾಣಬೇಕಾಗಿದೆ.

ವಚನಕಾರರನ್ನು ಮೊದಲುಗೊಂಡು, ಬಿಎಂಶ್ರೀ, ಡಿವಿಜಿ, ಕುವೆಂಪು, ಬೇಂದ್ರೆಯಾದಿಯಾಗಿ ಕನ್ನಡಕ್ಕೆ ಹೊಡೆತ ಬಿದ್ದಾಗಲೆಲ್ಲಾ ಅದನ್ನು ಉಳಿಸಿ, ಬೆಳೆಸಿ ಅನುಷ್ಠಾನಕ್ಕೆ ತರುವಲ್ಲಿ ಎಷ್ಟೆಲ್ಲಾ ಶ್ರಮಪಟ್ಟಿದ್ದಾರೆನ್ನುವುದು  ಕನ್ನಡ ಭಾಷೆಯ ಅಗತ್ಯವನ್ನು ಕುರಿತ ಅವರೆಲ್ಲರ ಬರಹಗಳನ್ನು ಗಮನಿಸಿದರೆ ತಿಳಿಯುತ್ತದೆ. ಬರೀ ಬರೆದದ್ದು ಮಾತ್ರವಲ್ಲ, ಆ ಬಗ್ಗೆ ಅಂದಿನ ಆಡಳಿತ ವ್ಯವಸ್ಥೆಯನ್ನು/ಸರ್ಕಾರಗಳನ್ನು ಎಚ್ಚರಿಸುತ್ತಾ ಬಂದಿರುವುದನ್ನು ಮರೆಯುವಂತಿಲ್ಲ.

ನಮ್ಮ ಹಿರಿಯರು ಇಷ್ಟೆಲ್ಲಾ ಕಟ್ಟಿ, ಬೆಳೆಸಿರುವ ಸಂಪದ್ಭರಿತವಾಗಿರುವ ನಮ್ಮ ಕನ್ನಡ ಭಾಷೆಯನ್ನು, ಆ ಮೂಲಕ ನಮ್ಮ ಸಾಂಸ್ಕೃತಿಕ ಲೋಕದ ಸೊಬಗನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರದ್ದಾಗಿದೆ.

ಕಲಿಕೆಯ ಆರಂಭದ ಹಂತದಿಂದಲೇ ಕನ್ನಡ ಸಮಾಜದ ಭವಿಷ್ಯಕ್ಕಾಗಿ ನಮ್ಮೆಲ್ಲ ಲಿಂಗ, ಜಾತಿ, ವರ್ಗ, ಮತ, ಧರ್ಮ, ಪಂಥ, ವಾದ, ಸಿದ್ಧಾಂತ.. ಇಂಥವುಗಳನ್ನೆಲ್ಲಾ ಬದಿಗೊತ್ತಿ ಮಕ್ಕಳಿಗೆ ಯಾವುದೇ ಭೇದಭಾವವಿಲ್ಲದಂತೆ ಎಳವೆಯಿಂದಲೇ ಕಲಿಸುವ ಕೆಲಸವಾಗಲೇಬೇಕಾಗಿದೆ. ಈ ಹಂತದಲ್ಲಿ ಮಕ್ಕಳಿಗೆ ಕಲಿಸಲು ನಿರಿತ ಶಿಕ್ಷಕರೇ ಆಗಿರಬೇಕಾಗುತ್ತದೆ. ಸರ್ಕಾರಿ ವಲಯದ ಶಿಕ್ಷಕರಿಗೆ ಮಕ್ಕಳಿಗೆ ಕಲಿಸುವ ಕೆಲಸಕ್ಕಿಂತ ಹೆಚ್ಚಾಗಿ, ಊರಿನ ಉಸಾಬರಿಗಳನ್ನೆಲ್ಲ ಅವರ ತಲೆಗೇ ಕಟ್ಟುವ ಪರಿಪಾಠವಿದೆ!

ಈ ಜಂಜಾಟದಲ್ಲಿ ಮಕ್ಕಳಿಗೆ ಅವರು ಕಲಿಸುವುದಾದರೂ ಏನನ್ನು? ಇನ್ನು ಖಾಸಗಿ ವಲಯದಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಸಿಕ್ಕವರನ್ನೆಲ್ಲಾ ನೇಮಿಸಿ, ಕಾಟಾಚಾರಕ್ಕೆ ಭಾಷೆಯನ್ನು ಕಲಿಸುವ ಕೆಲಸವಾಗುತ್ತಿರುವುದು ದುರಂತವಲ್ಲದೆ ಮತ್ತೇನು? ತೀರಾ ಅಪರೂಪಕ್ಕೆ ಕೆಲವು ಅಪವಾದಗಳಿದ್ದಾವು) ತಳಪಾಯ ಸರಿಯಿದ್ದರೆ ತಾನೆ, ಅದರ ಮೇಲೆ ಕಟ್ಟಿದ ಕಟ್ಟಡವೂ ಭದ್ರವಾಗಿರುವುದು? ಆದ್ದರಿಂದ ಪದವಿ ಹಂತಕ್ಕೆ ಬಂದ ವಿದ್ಯಾರ್ಥಿಗಳು ಭವಿಷ್ಯದ ಸಮಾಜವನ್ನು ಕುರಿತು ಪ್ರಭುದ್ಧವಾಗಿ ಆಲೋಚಿಸುವಷ್ಟು ಬೆಳೆಯಲು ಅನುಕೂಲವಾಗುವಂತೆ ಶಿಕ್ಷಣ ಕಲಿಕೆಯ ಆರಂಭದಿಂದಲೇ ನಾವು ಅನುವು ಮಾಡಿಕೊಡಬೇಕಾಗುತ್ತದೆ.

ಇಲ್ಲವಾದಲ್ಲಿ ಈಗಿನಂತೆ ಜಡಗೊಂಡು, ಉರುಹೊಡೆದು ಯಂತ್ರಗಳಂತೆ ಕೇವಲ ಅಂಕಗಳ ಕಡೆಗೆ ಗಮನಕೊಟ್ಟು ಹೇಗೋ ತರಗತಿಯಿಂದ ತರಗತಿಗೆ ತಳ್ಳಿಸಿಕೊಂಡು ಸಲೀಸಾಗಿ ಪದವಿ ಪ್ರಮಾಣ ಪತ್ರಗಳನ್ನೂ ಪಡೆಯುವಂತಾಗುತ್ತದೆ! ಭವಿಷ್ಯದಲ್ಲಿ ಮಕ್ಕಳು ಕ್ರಿಯಾಶೀಲತೆಯಿಂದಿರದೆ, ಯಾವ ಉತ್ಸಾಹ, ಲವಲವಿಕೆ ತೋರದೆ, ದುಡಿಯುವ ಯಂತ್ರಗಳೊಂದಿಗೆ ತಾವೂ ಯಂತ್ರಗಳಂತೆ ಬದುಕಿ, ಜಡಗೊಂಡು ಬದುಕಬೇಕಾಗುತ್ತದೆ.

ಇದೀಗ ಹೊಸ ಶಿಕ್ಷಣ ನೀತಿಯಲ್ಲಿ ಏನೇ ಬದಲಾವಣೆಗಳನ್ನು ತರಲಿ. ಅಲ್ಲಿ ನಮ್ಮ ಭಾಷೆಯ ಮೂಲಕವೇ ಮಕ್ಕಳು/ ವಿದ್ಯಾರ್ಥಿಗಳು ಗ್ರಹಿಸಿ, ಕಲಿಯುವಂತಾಗಬೇಕು. ಪ್ರಬುದ್ಧವಾಗಿ ಆಲೋಚಿಸುವಂತಾಗಬೇಕು, ಚಿಂತಿಸುವಂತಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವಿವೇಕವಂತರಾಗಿ ಬೆಳೆಯಲು ಅವಕಾಶವನ್ನು ಒದಗಿಸಿಕೊಡಬೇಕು. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲಿ, ಕೀಳರಿಮೆಯಿಲ್ಲದೆ, ಗೌರವದಿಂದ, ಘನತೆಯಿಂದ, ಆತ್ಮವಿಶ್ವಾಸದಿಂದ ಬದುಕುವುದನ್ನು ಕಲಿಯುವಂತಾಗಬೇಕು. ತಮ್ಮ ತಮ್ಮ ಬದುಕುಗಳನ್ನು ನೆಮ್ಮದಿಯಿಂದ ಬದುಕುವಂತಾಗಬೇಕು. 

ನಮ್ಮ ಸಂವಿಧಾನದ ಉದ್ದೇಶವೂ ಇದೇ ಆಗಿದೆಯಲ್ಲವೆ? ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳಾದರೂ ಇಂಥದನ್ನು ಇನ್ನೂ ರೂಢಿಸಿಕೊಳ್ಳಲಾಗಿಲ್ಲವೆಂದರೆ, ಏನೆಲ್ಲಾ, ಎಷ್ಟೆಲ್ಲಾ ಸಾಧನೆಯಗೈದರೂ ಪ್ರಯೋಜನವಾದರೂ ಏನು? ಇಂಥದ್ದನ್ನು ಹಿರಿಯರೆನಿಸಿಕೊಂಡವರು, ಜವಾಬ್ದಾರಿಯುತವಾಗಿ ಇನ್ನಾದರೂ ಮುಂದಿನ ಪೀಳಿಗೆಗೆ ಅಗತ್ಯವಾಗಿ ತಲುಪಿಸದಿದ್ದರೆ, ಮುಂದೊಂದು ದಿನ ಅವರ ಅರಿವಿಗೆ ಬಂದು, ಅವರೆಂದಿಗೂ ನಮ್ಮನ್ನು ಕ್ಷಮಿಸಲಾರರು.

ಕೇವಲ ಸರ್ಕಾರ, ಶಿಕ್ಷಣ ವ್ಯವಸ್ಥೆ ಮಾತ್ರವಲ್ಲ, ಮಕ್ಕಳ ಭವಿಷ್ಯದ ಬಗೆಗೆ ನಿರ್ಧರಿಸುವ ತಂದೆ-ತಾಯಂದಿರು, ಪೋಷಕರು, ಭಾಷಾಪಠ್ಯಗಳನ್ನು ಬೋಧಿಸುವ ಶಿಕ್ಷಕರು, ಅಧ್ಯಾಪಕರು, ಕನ್ನಡವನ್ನು ಕುರಿತು ಚಿಂತಿಸುವ ಎಲ್ಲ ಚಿಂತಕರೂ ಈ ಜವಾಬ್ದಾರಿಯಲ್ಲಿ ಪಾಲುದಾರರಾಗಿರುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ಈಗಲಾದರೂ ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರೂ ಒಟ್ಟಾಗಿ ಕೈ ಜೊಡಿಸಲೇಬೇಕಾಗಿದೆ.

ಇಲ್ಲಿ ಪದವಿ ತರಗತಿಗಳಿಗೆ ಭಾಷಾ ಬೋಧನೆಯ ಅಗತ್ಯ ಮತ್ತು ಒತ್ತಾಯವೇಕೆಂದರೆ, ಈ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುವಷ್ಟು ಬೆಳೆದಿರುತ್ತಾರೆ. ಈ ಹಂತದಲ್ಲಿ ಭಾಷಾ ಪಠ್ಯಗಳು ಸಮಾಜದ ಆಗುಹೋಗುಗಳ ಬಗೆಗೆ ಬೆಳಕು ಚೆಲ್ಲಿದಾಗ, ವಿದ್ಯಾರ್ಥಿಗಳ ಚಿಂತನಾ ಸಾಮರ್ಥ್ಯ ವೃದ್ಧಿಸುತ್ತದೆ. ಜೊತೆಗೆ ವ್ಯಾವಹಾರಿಕ ಜಗತ್ತಿಗೆ ಹಾಗೂ ಉನ್ನತ ಶಿಕ್ಷಣಕ್ಕೆ, ಅಲ್ಲಿನ ಹೊಸ ಹೊಸ ಸಂಶೋಧನೆಗಳಿಗೆ ಬೇಕಾಗುವ ಭಾಷಾ ಸಾಮರ್ಥ್ಯವನ್ನು ಕಟ್ಟಿಕೊಳ್ಳಲು, ಹೆಚ್ಚಿಸಿಕೊಳ್ಳಲು/ ರೂಢಿಸಿಕೊಳ್ಳಲು ಸಹಾಯವಾಗುತ್ತದೆ. 

ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು  ಪದವಿ ಹಂತದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಬೆಳೆಸಬೇಕಾಗುತ್ತದೆ. ಇದೆಲ್ಲವನ್ನೂ ಸಾಧ್ಯವಾಗಿಸಲು ಪದವಿ ತರಗತಿಗಳಲ್ಲಿ ಕಡ್ಡಾಯವಾಗಿ ನಾಲ್ಕೂ ವರ್ಷಗಳಲ್ಲಿ ಭಾಷಾ ಪಠ್ಯಗಳ ಮೂಲಕ ಸಾಂಸ್ಕೃತಿಕ ಚಿಂತನೆಗಳನ್ನು ಕುರಿತು ಬೋಧಿಸಬೇಕಾಗುತ್ತದೆ. ಈ ಕುರಿತು ಆತುರಾತುರವಾಗಿ ನಿರ್ಧಾರ ಕೈಗೊಳ್ಳದೆ, ಗಂಭೀರವಾಗಿ ಆಲೋಚಿಸಿ ಜಾರಿಗೆ ತರುವ ಜವಾಬ್ದಾರಿ ಸರ್ಕಾರ/ ಶಿಕ್ಷಣ ಇಲಾಖೆಯದ್ದಾಗಿರುತ್ತದೆ.

‍ಲೇಖಕರು Admin

July 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: