ಶಿಕಾರಿಗೆ ಮಕ್ಕಳನ್ನೇ ಗಾಳಕ್ಕೆ ಸಿಕ್ಕಿಸಿದರಾಯಿತು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಆ ಹೊತ್ತು ಅದೇಕೋ ನಾನು ಕಛೇರಿಗೆ ಹೋಗಿರಲಿಲ್ಲ. ಅದಾವುದೋ ದಾಖಲೆಯ ಅಧ್ಯಯನ ಮಾಡಿಕೊಂಡು ಮನೆಯಲ್ಲೇ ಇದ್ದೆ. ಆಗಿನ್ನೂ ಇದಕ್ಕೆ ವರ್ಕ್‌ ಫ್ರಂ ಹೋಂ ಎನ್ನುವ ಹೆಸರಿದೆ ಅಂತ ಗೊತ್ತಿರಲಿಲ್ಲ. ಮನೆಯಲ್ಲಿದ್ದೀರಲ್ಲ, ಮಗಳು ಶಾಲೆಯಿಂದ ಬರುತ್ತಾಳೆ ಅವಳನ್ನ ಬರಮಾಡಿಕೊಳ್ಳಿ ಅಂತ ಹೆಂಡತಿಯ ನಿರ್ದೇಶನವಿತ್ತು. ಸರಿ ಬಾಗಿಲಲ್ಲಿ ನಿಂತಿದ್ದೆ.

ಶಾಲಾ ವಾಹನದಿಂದ ಕೆಳಗಿಳಿದ ಮಗಳ ಕೈಯಲ್ಲೊಂದು ಕರಪತ್ರ. ಮಗಳಿಳಿದ ಮೇಲೆ ಮುಂದೆ ಹೋದ ವಾಹನದತ್ತ ಕೈಯಲ್ಲಿದ್ದ ಕರಪತ್ರವನ್ನೇ ಆಡಿಸಿ ತನ್ನ ಗೆಳತಿಯರಿಗೆ ವಿದಾಯ ಹೇಳಿದಳು. ವಾಹನದಲ್ಲಿದ್ದ ಇವಳ ಸಹಪಾಠಿಗಳೂ ತಮ್ಮ ಕೈಯಲ್ಲಿದ್ದ ಕರಪತ್ರವನ್ನೇ ಅವರೂ ಬೀಸಿ ಬೀಸಿ ಬೈ ಬೈ ಕೂಗಿದರು. 

‘ಅದೇನದು ಪಾಂಪ್ಲೆಟ್‌ ತರ ಇದೆಯಲ್ಲʼ ಕೇಳಿದೆ.

‘ನಿಂಗಲ್ಲʼ ಎಂದವಳೇ, ಮನೆಯೊಳಗೆ ಹೋಗಿ ತನ್ನ ಬೂಟು ಕಳಚುವುದಕ್ಕೆ ಮುನ್ನವೇ ಕರಪತ್ರವನ್ನ ಅವಳಮ್ಮನೆದುರು ಹಿಡಿದು ʼಅಮ್ಮ ಇದು ನಿನಗೇ ಕೊಡಬೇಕು ಅಂತ ಸ್ಕೂಲ್‌ನಲ್ಲಿ ಹೇಳಿದ್ದಾರೆʼ ಎಂದು ಕೊಟ್ಟಳು. ಇವಳಮ್ಮ ಅದನ್ನ ತೆಗೆದುಕೊಂಡು ಒಮ್ಮೆ ಕಣ್ಣಾಡಿಸಿ ಕೈಯಲ್ಲಿ ಹಿಡಿದುಕೊಂಡೇ ಅಡುಗೆ ಮನೆಯತ್ತ ನಡೆದಳು. ‘ಬ್ಯಾಗ್‌ ಟೇಬಲ್‌ ಹತ್ತಿರ ಇಟ್ಟು, ಯೂನಿಫಾರಂ ತೆಗೆದು ಬಟ್ಟೆ ಬದಲಿಸಿ, ಕೈಕಾಲು ತೊಳ್ಕೊಂಡು ತಕ್ಷಣ ಬಾ. ಮೊದಲು ಹಾಲು ಕುಡಿದು, ಬಿಸ್ಕತ್‌ ಬಾಳೆಹಣ್ಣು ತಿಂದು, ತಡ ಮಾಡದೆ ಹೋಂ ವರ್ಕ್‌ ಮೊದಲು ಮುಗಿಸಿ ಆಮೇಲೆ ಕಾರ್ಟೂನ್‌… ಆಟ… ಅಪ್ಪ ಮನೇಲೇ ಇದೆ ಅಂತ ಸೈಕಲ್‌ ಹೊಡೆಯಕ್ಕೆ ಓಡಬೇಡ…ʼ

ಇದೆಲ್ಲಾ ದಿನಾ ಹೇಳುವುದೇ. ನನಗೂ ಮನೆಗೆ ಬಂದ ಕೂಡಲೇ ಇದೇ ಇರುತ್ತೆ. ಸ್ವಲ್ಪ ಬೇರೆ ತರಹ. ನನ್ನ ಕುತೂಹಲ ತಡೆಯಲಾಗಲಿಲ್ಲ. ಅದೇನದು ಆ ಪಾಂಪ್ಲೆಟ್‌ ಮಗಳು ತಂದಿರೋದು? ನನಗಲ್ಲ. ಈ ಅಮ್ಮ ಕೈಯಲ್ಲೇ ಹಿಡಿದು ಹೋಗಿಬಿಟ್ಟಳು. ಅದರಲ್ಲೇನಿದೆ. ನನ್ನ ಕುತೂಹಲ ಏರುತ್ತಾ ಇತ್ತು. ಈ ಮಗಳು ‘ನಿಂಗಲ್ಲʼ ಅಂತ ಹೇಳಿದ ಮೇಲೆ ನಾನು ಸುಮ್ಮನಿರಬೇಕಿತ್ತು. ಆದರೆ ಆಗಲಿಲ್ಲ. 

ಮಗಳು ಬಟ್ಟೆ ಬದಲಿಸಲು ಅತ್ತ ಹೋದಾಗ, ಕೇಳಿಯೇ ಬಿಟ್ಟೆ, ‘ಏನದು..?ʼ

‘ಯಾವುದೋ ಬ್ಯೂಟಿ ಪಾರ್ಲರ್‌ದು…ʼ ಅವಳದೆಷ್ಟು ಅನಾಸಕ್ತಿಯಿಂದ ಹೇಳಿದಳೆಂದರೆ, ನಾನದರತ್ತ ನೋಡುವ ಅವಶ್ಯಕತೆ ಇಲ್ಲ, ಸುಮ್ಮನೆ ನಿನ್ನ ಕೆಲಸಕ್ಕೆ ಹೋಗು ಎಂಬ ನಿರ್ದೇಶನವೂ ಇತ್ತೇನೋ ಎನ್ನುವುದು ನನ್ನ ಅನುಮಾನ. 

ಸಂಜೆಯ ಹೊತ್ತಿಗೆ ಆ ಕರಪತ್ರ ಹೇಳುವವರು ಕೇಳುವವರಿಲ್ಲದೆ ಒಂದು ಕುರ್ಚಿಯ ಮೇಲೆ ಬಿದ್ದಿತ್ತು. ಹತ್ತಿರದಲ್ಲಿ ಮಗಳಿರಲಿಲ್ಲ. ಅವರಮ್ಮನೂ ಕಾಣಲಿಲ್ಲ. ನನ್ನ ಕುತೂಹಲ ಖಂಡಿತ ಮರೆಯಾಗಿರಲಿಲ್ಲ. ‘ಹೋಗಿ ಇಲ್ಲಿಂದʼ ಎಂದ ಕಾರಣ ಸುಮ್ಮನೆ ಹೋಗಿದ್ದೆ. ಈಗ ಅನಾಯಾಸವಾಗಿ ಸಿಕ್ಕಿದೆ. 

ವಿಶೇಷವೇನಿಲ್ಲ. ಅದು ಹೊಸ ಬ್ಯೂಟೀ ಪಾರ್ಲರ್‌ ಜಾಹೀರಾತು ಕರೆ ಪತ್ರ. ಅಲ್ಲಿ ದೊರೆಯುವ ಸೇವೆಗಳ ಪಟ್ಟಿ. ಅಷ್ಟೇ ತಾನೆ ಎಂದುಕೊಂಡು ಇನ್ನೇನು ಕೆಳಗಿಡಬೇಕು, ಆಗ ಅದರಲ್ಲಿದ್ದ ಒಂದು ವಾಕ್ಯ ಗಮನ ಸೆಳೆಯಿತು. ‘ಕುಟುಂಬ ಸಮೇತರಾಗಿ ಬನ್ನಿ ರಿಯಾಯಿತಿ ಪಡೆಯಿರಿʼ. ಕುಟುಂಬ ಎಂದರೆ ನನಗೂ ಇದರಲ್ಲಿ ಆಹ್ವಾನ ಇದೆ ಎಂದುಕೊಂಡು ಮುಖದಲ್ಲೊಂದು ನಗು ಮೂಡಿತ್ತು. ಆಗಲೇ ನನ್ನ ಹೆಂಡತಿ ಬಂದವಳು, ʼಏನದು ಅದನ್ನೋದಿಕೊಂಡು ನಗ್ತೀದ್ದೀರಲ್ಲ?ʼ ಕೇಳೇಬಿಟ್ಟಳು. 

‘ಕುಟುಂಬ ಸಮೇತ ಹೋದರೆ ರಿಯಾಯಿತಿ…ʼ ಎಂದು ನಾನು ಮಾತು ಮುಗಿಸುವ ಮೊದಲೇ, ‘ಇಂತಹದ್ದನ್ನ ಶಾಲೆಯಲ್ಲಿ ಮಕ್ಕಳಿಗೆ ಯಾರು ಕೊಟ್ಟಿದ್ದು, ಯಾಕೆ ಕೊಟ್ಟಿದ್ದು, ಹೀಗೆಲ್ಲಾ ಕೊಡಬಾರದು ಅಂತ ಹೇಳ್ತೀರೇನು ಅಂದುಕೊಂಡರೆ, ಕುಟುಂಬ ಸಮೇತ ಹೋದರೆ ರಿಯಾಯಿತಿ ಅನ್ನೋದು ಮಾತ್ರಾ ಕಣ್ಣಿಗೆ ಬಿತ್ತಾ. ಆಹಾಹ!ʼ ಎಂದು ಮರ್ಮಕ್ಕೆ ಬಾಣ ಬಿಟ್ಟಳು. 

ಆಗ ಜಾಗೃತವಾಯಿತು ಮಕ್ಕಳ ಹಕ್ಕುಗಳು, ಗ್ರಾಹಕರ ಹಕ್ಕುಗಳು ಮತ್ತು ಪತ್ರಿಕೋದ್ಯಮ, ಸಾರ್ವಜನಿಕ ಸಂಪರ್ಕ ಅಧ್ಯಯನದಲ್ಲಿ ಕಲಿತಿದ್ದ ಜಾಹೀರಾತು ನೀತಿ ಸಂಹಿತೆ, ಇತ್ಯಾದಿ. ಬ್ಯೂಟಿ ಪಾರ್ಲರ್‌ ಕರಪತ್ರವನ್ನ ‘ಅಧ್ಯಯನʼ ಮಾಡಲು ಅಭ್ಯಂತರವಿಲ್ಲ ಎಂಬ ಇಂಗಿತ ಕಂಡವನೇ ಅದರಲ್ಲಿದ್ದ ಪ್ರತಿಯೊಂದು ಅಕ್ಷರವನ್ನೂ, ಪದಗಳನ್ನೂ, ವಾಕ್ಯಗಳನ್ನೂ ಅವುಗಳ ನಡುವಿನ ಅರ್ಥಗಳನ್ನೂ ಕೆದಕಲಾರಂಭಿಸಿದ್ದೆ. ಹೆಂಡತಿ ಸುಮ್ಮನೆ ಇದ್ದಿದ್ದರೆ ಇಷ್ಟೊಂದು ಕೆಣಕು ತಿಣುಕು ಇರುತ್ತಿರಲಿಲ್ಲವೇನೋ?

ಕರಪತ್ರದ ಒಕ್ಕಣಿಕೆ ಮಕ್ಕಳನ್ನು ಉದ್ದೇಶಿಸಿಯೇ ಇತ್ತು. ಭಾಷೆಯೂ ಹಾಗೆಯೇ ನವಿರಾಗಿ ಸರಳವಾಗಿತ್ತು. ‘ನಿಮ್ಮ ತಾಯಿಯನ್ನು ಕರೆದುಕೊಂಡು ಬಂದರೆ ಮಾತ್ರ ನಿಮಗೆ ಉಚಿತ ಸೇವೆ. ನಿಮ್ಮ ಕುಟುಂಬದವರೆಲ್ಲಾ ಬಂದರೆ ವಿಶೇಷ ರಿಯಾಯಿತಿ ಪಡೆದು ನಮ್ಮ ಲೌಂಜ್‌ನ ಆತಿಥ್ಯವನ್ನೂ ಸವಿಯಿರಿʼ. ಇದೊಂದು ರೀತಿ ಗ್ರಾಹಕರನ್ನು ಸೆಳೆಯುವ ಹೊಸ ವಿಧಾನ ಎಂದುಕೊಂಡೆ. ಕರಪತ್ರದ ಕೆಳ ಬಲ ಮೂಲೆಯಲ್ಲಿ ತ್ರಿಕೋನಾಕೃತಿಯಲ್ಲಿ ನೀಲಿ ಬಣ್ಣದ ಹಿನ್ನೆಲೆಯಲ್ಲಿ ಪ್ರಾಯೋಜಕರು: … ಮದಿರಾ ಮತ್ತು ದೂರವಾಣಿ ಸಂಖ್ಯೆ ಜೊತೆಗೆ ವಿಳಾಸ. ಬ್ಯೂಟಿ ಪಾರ್ಲರ್‌ದ್ದು ಕೂಡಾ ಅದೇ ವಿಳಾಸ. ಒಂದೇ ಕಟ್ಟಡದಲ್ಲಿ ಬ್ಯೂಟಿ ಪಾರ್ಲರ್‌ ಮತ್ತು ಈ ಮದ್ಯದಂಗಡಿ. ಇರಬಹುದು ಎಂದು ಆ ಪತ್ರವನ್ನು ಮತ್ತೆ ತೆಗೆದುಕೊಂಡು ನೋಡತೊಡಗಿದೆ.

ಹೌದಲ್ವ. ಶಾಲೆಯಲ್ಲಿ ಮಕ್ಕಳಿಗೆ ಈ ಕರಪತ್ರ ಯಾಕೆ ಕೊಟ್ಟರು. ಅದಕ್ಕೆ ಶಾಲೆ ಹೇಗೆ ಒಪ್ಪಿಗೆ ಕೊಟ್ಟಿತು. ಆಯಿತು ಯಾವುದೋ ಬ್ಯೂಟಿ ಪಾರ್ಲರ್‌ ಜಾಹೀರಾತು ಕರಪತ್ರ ಎಂದುಕೊಂಡರೂ, ಮಕ್ಕಳಿಗೆ ಉಚಿತ ಸೇವೆಯ ಆಮಿಷ ಒಡ್ಡಿ ತಾಯಂದಿರನ್ನು ಸೆಳೆಯುವ ತಂತ್ರ ಸೂಕ್ತವಲ್ಲ. ಇಷ್ಟರ ಮೇಲೆ ಕುಟುಂಬದ ಸದಸ್ಯರೆಲ್ಲರೂ ಹೋದರೆ ರಿಯಾಯಿತಿ! ಜೊತೆಗೆ ಈ ಕರಪತ್ರವನ್ನು ಮದ್ಯದಂಗಡಿಯವರು ಪ್ರಾಯೋಜಿಸಿದ್ದನ್ನು ಶಾಲೆಯವರು ಗಮನಿಸಲಿಲ್ಲವೆ. ಈ ಎರಡು ಉದ್ಯಮಗಳು ತಳಕು ಹಾಕಿಕೊಂಡಿರುವುದು ನೈತಿಕವಾಗಿ ಎಷ್ಟು ಸರಿ…  ಮಕ್ಕಳೇನಾದರೂ ಅಲ್ಲಿಗೇ ಹೋಗಬೇಕು ಎಂದು ಮನೆಯವರಿಗೆಲ್ಲಾ ದುಂಬಾಲು ಬಿದ್ದರೆ, ಹಠ ಮಾಡಿದರೆ…

ಪುಣ್ಯವಶಾತ್‌ ನಮ್ಮ ಮಗಳು ಕರಪತ್ರದ ಮೋಡಿಗೆ ಬೀಳಲಿಲ್ಲ. ನಾವೂ ಅದರ ಆಕರ್ಷಣೆಗೆ ಈಡಾಗಲಿಲ್ಲ. ಆದರೆ ಕರಪತ್ರ ಈಗ ಅಧಿಕೃತವಾಗಿ ನನ್ನ ಕೈಗೆ ಬಂತು. ಮುಂದಿನೆರಡು ದಿನಗಳಲ್ಲಿ ಐ.ಎ.ಎಸ್‌. ಅಧಿಕಾರಿ ಶ್ರೀ ಲೂಕೋಸ್‌ ವಲ್ಲತ್ತ ರೈ ಅವರೊಡನೆಯ ಒಂದು ಸಭೆಯ ನಂತರ ಮಾತನಾಡುತ್ತಾ ಕರಪತ್ರವನ್ನು ಅವರೆದುರು ಇಟ್ಟು ವಿಚಾರ ಪ್ರಸ್ತಾಪಿಸಿದೆ. ಅದರ ಮೇಲೆ ಕಣ್ಣಾಡಿಸಿದ ಅವರು, ‘…unethical trade and advertisement practice’ ಎಂದು ಯಾರನ್ನೋ ಉದ್ದೇಶಿಸಿ ಸಣ್ಣದಾಗಿ ಬೈದುಕೊಂಡರು. ʼಇವರಿಗೆ ಬುದ್ಧಿ ಹೇಳಬೇಕು. ನೋಡೋಣ ನನ್ನ ಇಲಾಖೆಯಿಂದ ಪ್ರಯತ್ನಿಸ್ತೀನಿʼ ಎಂದರು. 

ನಾನು ಸಮಯ ಮಾಡಿಕೊಂಡು ಶಾಲೆಗೆ ಹೋಗಿ ಇಂತಹದೊಂದು ಕರಪತ್ರವನ್ನು ಮಕ್ಕಳಿಗೆ ಹಂಚಲು ಶಾಲೆಯವರು ಅನುಮತಿ ಕೊಟ್ಟಿದ್ದು ಸೂಕ್ತವಲ್ಲ ಎಂದು ಮುಖ್ಯ ಶಿಕ್ಷಕಿಯವರಿಗೆ ಹೇಳಿದೆ. ತಪ್ಪಾಗಿದೆ ಎಂದು ಹೇಳಿ ಹೀಗೆ ಇನ್ನೊಮ್ಮೆ ಜರುಗುವುದಿಲ್ಲ ಎಂದು ಅವರು ಭರವಸೆ ನೀಡಿದರು. 

***

ಮಕ್ಕಳನ್ನೇ ಗಾಳಕ್ಕೆ ಸಿಕ್ಕಿಸಿಕೊಂಡು ದೊಡ್ಡವರೆಂಬ ಮಿಕಗಳನ್ನು ಶಿಕಾರಿ ಮಾಡುವ ತಂತ್ರ ಹೊಸತೇನಲ್ಲ. 

ಬಿಸ್ಕತ್ತು, ಚಾಕೊಲೇಟ್‌, ಹಾಲಿಗೆ ಬೆರೆಸುವ ಪುಡಿ, ಆಟದ ಸಾಮಾನುಗಳ ಜಾಹಿರಾತುಗಳಲ್ಲಿ ಮಕ್ಕಳನ್ನು ತೋರಿಸುತ್ತಾರೆ, ಕಷ್ಟಪಟ್ಟು ಒಪ್ಪಿಕೊಳ್ಳೋಣ. ಆದರೆ  ಬಹುತೇಕ ದೊಡ್ಡ ದೊಡ್ಡ ಉದ್ದಿಮೆಗಳು ಮತ್ತು ವಸ್ತು ಸೇವೆ – ಕಾರು, ಟೀವಿ, ಮನೆ ಸಾಲ, ಮನೆ/ಫ್ಲಾಟು, ನಿವೇಶನ, ಫ್ರಿಡ್ಜು, ಏರ್‌ ಕಂಡಿಷನರ್‌, ಟೈರು, ಟ್ಯೂಬು, ಬಣ್ಣ, ಬಟ್ಟೆ, ಪ್ರವಾಸ, ಮಾಲುಗಳು, ಮೇಳಗಳು… ಪಟ್ಟಿ ಬೆಳೆಸುತ್ತಾ ಹೋಗಬಹುದು – ಇಂಥವುಗಳ ಪ್ರಚಾರಕ್ಕೂ ಮಕ್ಕಳನ್ನು ಎದುರಿಟ್ಟು ದೊಡ್ಡವರ ಮೇಲೆ ಪ್ರಭಾವ ಬೀರುವ ಯತ್ನ ಮಾಡುತ್ತವೆ. ಇದೊಂದು ದೊಡ್ಡ ಪ್ರಚಾರ ಮತ್ತು ಮಾರಾಟ ವಿಜ್ಞಾನ ತಂತ್ರ.

ಭಾರತದ ವಿವಿಧ ನ್ಯಾಯಾಲಯಗಳಲ್ಲಿ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲೂ ಕಾಲಕಾಲಕ್ಕೆ ಬೇರೆ ಬೇರೆ ಮೊಕದ್ದಮೆಗಳಲ್ಲಿ ‘ಜಾಹೀರಾತುಗಳಲ್ಲಿ ಮಕ್ಕಳ ಚಿತ್ರಗಳನ್ನು ಬಳಸುವುದು ಮತ್ತು ಮಕ್ಕಳ ಮೇಲೆ ಪ್ರಭಾವ ಬೀರುವುದನ್ನು ತಡೆಯಬೇಕು, ನಿಷೇಧಿಸಬೇಕುʼ ಎಂದು ನಿರ್ದೇಶನಗಳನ್ನು ನೀಡಿದ್ದಾರೆ. ಬಹಳ ಮುಖ್ಯವಾಗಿ ತಂಪು ಪಾನೀಯ ಮತ್ತು (ಅನಗತ್ಯವಾದ) ಕುರುಕಲು ತಿಂಡಿ/ಆಹಾರ (ಜಂಕ್‌ ಫುಡ್‌) ಜಾಹೀರಾತುಗಳನ್ನು ಶಾಲೆಗಳಲ್ಲಿ ಹಾಕಬಾರದು ಮತ್ತು ಶಾಲೆಗಳಲ್ಲಿ ಇವುಗಳನ್ನು ಮಾರಬಾರದು, ಇವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಟ್ಟಪ್ಪಣೆಯೂ ಇದರಲ್ಲಿ ಸೇರಿದೆ.  

ಹೀಗಿದ್ದರೂ ಈ ಪೇಯ ಕುಡಿದರೆ, ಆ ಲೇಹ್ಯ ತಿಂದರೆ, ಈ ಮಾತ್ರೆ ತೆಗೆದುಕೊಂಡರೆ ಮಕ್ಕಳ ಎಡಗಡೆಯದೋ, ಬಲಗಡೆಯದೋ, ಮುಂದಿನದೋ, ಹಿಂದಿನದೋ ಮಿದುಳು ಚುರುಕಾಗುತ್ತದೆ, ನೆನಪಿನ ಶಕ್ತಿ ಹೆಚ್ಚುತ್ತದೆ… ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತದೆ, ಇಲ್ಲವೇ ಈ ಪೇಯವನ್ನು ಹಾಕಿಕೊಂಡು ಹಾಲು ಕುಡಿದರೆ ಮಕ್ಕಳು ಎತ್ತರವಾಗುತ್ತಾರೆ ಅಥವಾ ಜಿಂಕೆಯಂತೆ ಓಡುತ್ತಾರೆ, ಅವರ ಆರೋಗ್ಯ ವೃದ್ಧಿಸುತ್ತದೆ ಇತ್ಯಾದಿ ಜಾಹೀರಾತುಗಳು ಈಗಲೂ ಚಲಾವಣೆಯಲ್ಲಿವೆ. 

ಇಂತಹ ಜಾಹೀರಾತುಗಳು ಅತ್ಯಂತ ಅಪಾಯಕಾರಿ. ಇಂತಹವುಗಳನ್ನು ನಿರ್ಮಿಸುವವರು, ಭಾಗವಹಿಸಿ ಭರವಸೆ ನೀಡುವವರು, ಜಾಹೀರಾತು ಪ್ರಕಟಿಸುವವರು ಎಲ್ಲರೂ ಇದರಲ್ಲಿ ಜವಾಬುದಾರರು. ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆ ೧೯೪೦ರ ಮತ್ತು  ಅದರ ಕೆಳಗೆ ರೂಪಿಸಿದ ೧೯೪೫ರ ನಿಯಮಗಳಲ್ಲಿ ಸ್ಪಷ್ಟವಾಗಿ ಇಂತಹ ʼಸುಳ್ಳು ಭರವಸೆಗಳು – ರೋಗ ತಡೆ, ರೋಗ ನಿವಾರಣೆ, ಶಕ್ತಿ ವರ್ಧನೆʼ ಜಾಹೀರಾತುಗಳನ್ನು ಕೊಡಬಾರದು ಎಂದು ನಿಷೇಧಿಸುತ್ತದೆ. ಇದರಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಸುಳ್ಳು ಭರವಸೆಗಳನ್ನು ಕೊಡಬಾರದು ಎಂದು ಇರುವುದು ಮುಖ್ಯ. 

ಕೇರಳದ ಔಷಧಗಳ ತಯಾರಕನೊಬ್ಬ ತನ್ನದೊಂದು ನಿರ್ದಿಷ್ಟ ಔಷಧಿ ಏಡ್ಸ್‌ ಸೋಂಕನ್ನು ನಿಯಂತ್ರಿಸುತ್ತದೆ ಎಂದು ಭರವಸೆ ಕೊಟ್ಟಿದ್ದ. ಈ ರೀತಿಯ ಸುಳ್ಳು ಭರವಸೆಯನ್ನು ಕೇರಳದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಮೊಕದ್ದಮ್ಮೆಯೊಂದು ಪ್ರಶ್ನಿಸಿತ್ತು. ಇಂತಹ ಜಾಹೀರಾತಷ್ಟೇ ಅಲ್ಲ ಈ ಔಷಧದ ತಯ್ಯಾರಿ ಮತ್ತು ಮಾರಾಟವನ್ನೇ ಕೇರಳ ಉಚ್ಚ ನ್ಯಾಯಾಲಯ ನಿಷೇಧಿಸಿ ಮುಂದಿನ ದಿನಗಳಲ್ಲೂ ಇಂತಹ ದಾರಿ ತಪ್ಪಿಸುವ ಜಾಹೀರಾತುಗಳನ್ನು ಕುರಿತು ಎಚ್ಚರಿಕೆ ವಹಿಸಬೇಕು ಎಂಬ ಇಂತಿತವನ್ನು ವ್ಯಕ್ತಪಡಿಸಿತ್ತು (೨೦೦೨). 

ಹಾಗೆಯೇ ಒಂದು ನಿಮಿಷದ ಜಾಹೀರಾತಿನ ಚಿತ್ರದಲ್ಲಿ ಪ್ರಖ್ಯಾತ ತಾರಾ ನಟನೋ ನಟಿಯೋ ಹತ್ತು ಬಾಟಲಿ ತಂಪು ಪಾನೀಯ ಕುಡಿದಂತೆಯೂ ಅದೇ ಅವರ ಜೀವನೋತ್ಸಾಹಕ್ಕೆ ಮತ್ತು ಅವರ ಯಶಸ್ಸಿಗೆ ಕಾರಣವೆಂಬಂತೆ ಬಿಂಬಿಸಲಾಗುತ್ತದೆ. ಅದೇ ರೀತಿ ಇನ್ನೊಂದು ತಂಪು ಪಾನೀಯದ ಜಾಹೀರಾತಿನಲ್ಲಿ ಖ್ಯಾತ ನಟನೊಬ್ಬ ತಂಪು ಪಾನೀಯದ ಒಂದು ಬಾಟಲ್‌ಗಾಗಿ ತನ್ನ ಜೀವವನ್ನೇ ಪಣಕ್ಕಿಟ್ಟು ಎದ್ದು ಬಿದ್ದು ಬಾಟಲು ಕೈಯಲ್ಲಿ ಹಿಡಿದು ಗೆದ್ದು ಬರುತ್ತಾನೆ ಎಂಬಂತೆ ಬಿಂಬಿಸಲಾಗುತ್ತದೆ. ಅವನ ಸಂಗಡಿಗರೆಲ್ಲರೂ ಅವನ ಧೈರ್ಯ ಸಾಹಸಕ್ಕೆ ಚಪ್ಪಾಳೆ ತಟ್ಟಿ ಸಂತೋಷಿಸುತ್ತಾರೆ.

ಇಂತಹ ಸುಳ್ಳು ಅಥವಾ ನಕಲಿ ಚಿತ್ರಣ ‘ಮಕ್ಕಳ ಜೀವಕ್ಕೇ ಎರವಾಗುವ ಸಾಧ್ಯತೆ ಇದೆʼ ಎಂದು  ಜಾಹೀರಾತು ನಿಯಂತ್ರಣ ನಿಯಮಗಳು ಸ್ಪಷ್ಟಪಡಿಸುತ್ತವೆ. ಆದರೂ ಇಂತಹ ಜಾಹೀರಾತುಗಳು ಅದೇ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯುತ್ತವೆ. [ಜಾಹೀರಾತಿನ ಮೊದಲಿಗೋ ಕೊನೆಗೋ ಸರ್ವೆಸಾಮಾನ್ಯವಲ್ಲದ ವಿನ್ಯಾಸದ ಚಿಕ್ಕ ಅಕ್ಷರಗಳಲ್ಲಿ ಈ ಸಾಹಸವನ್ನು ಮಾಡಲು ನೀವು ಪ್ರಯತ್ನಿಸಬೇಡಿ,  ಇವನ್ನು ತರಬೇತಿ ಹೊಂದಿದ ನುರಿತ ವ್ಯಕ್ತಿಗಳು ನಿಯಂತ್ರಿತ ಸನ್ನಿವೇಶದಲ್ಲಿ ಅಭಿನಯಿಸಿದ್ದು ಎಂದು ಬರೆದು ಬಿಟ್ಟರಾಯಿತು ಅನುಮತಿ ಸಿಕ್ಕೇಬಿಡುತ್ತದೆ!]

ವೈದ್ಯರು, ಹೆಸರಾಂತರು, ಆಟಗಾರರು, ನಟರು, ಪ್ರಭಾವಿಗಳು ಔಷಧ ಅಥವಾ ಪೌಷ್ಟಿಕ ಆಹಾರ, ಲಾಭದಾಯಕ ಉದ್ದಿಮೆ, ಹೂಡಿಕೆ, ದೊಡ್ಡ ಬಡ್ಡಿಯ ಭರವಸೆಯೇ ಮೊದಲಾದ ಜಾಹೀರಾತುಗಳಲ್ಲಿ ಬಂದು ಭರವಸೆಗಳನ್ನು ಕೊಡಬಾರದು/ ಹೇಳಬಾರದು, ಅಥವಾ ‘ಜಾಹೀರಾತಿನಲ್ಲಿನ ವಸ್ತು /ಸೇವೆ ಇತ್ಯಾದಿಗಳ ಪರವಾಗಿ’ ನಿಲ್ಲಬಾರದು ಎಂದು ಸ್ಪಷ್ಟ ನಿಷೇಧವಿದೆ… ಸುಳ್ಳು ಹೇಳಬಾರದು, ಸುಳ್ಳು ಭರವಸೆ ಕೊಡಬಾರದು. ಆದರೂ ನಮ್ಮ ಅನೇಕ ಸೆಲೆಬ್ರಿಟಿಗಳು ಈಗಲೂ ಇಂತಹ ಕಡೆ ಚಿನ್ನ ಅಡವಿಟ್ಟು ಸಾಲ ತೆಗೆದುಕೊಂಡು ಉದ್ಧಾರವಾಗಿ ಎನ್ನುತ್ತಾರೆ (ಪ್ರಶ್ನಿಸಿದರೆ, ಸಾಲ ಎಲ್ಲಿ ಸಿಗುತ್ತದೆ ಎಂದು ಅಷ್ಟೆ ನಾವು ಹೇಳುವುದು. ಉದ್ಧಾರ ಆಗುವುದು ಬಿಡುವುದು ನಿಮ್ಮ ಕೈಯಲ್ಲಿದೆ ಎಂದು ಜಾರಿಕೊಳ್ಳುತ್ತಾರೆ). 

ಈಗೀಗ ಸ್ವಾಮೀಜಿಗಳು, ಗುರುಗಳು, ಸ್ವಯಂಘೋಷಿತ ದೇವಮಾನವರೇ ಜಾಹೀರಾತಿನಲ್ಲಿ ಬಂದು ತಮ್ಮದೇ ಡೋಲು ಬಡಿದು ಲೇಹ್ಯ ಕಷಾಯ ತಿಂಡಿ ತೀರ್ಥ ಬಟ್ಟೆಬರೆ ಔಷಧಗಳನ್ನು ಮಾರುತ್ತಾರೆ! ತಮ್ಮ ಶಾಲೆ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಪುಸಲಾಯಿಸುತ್ತಾರೆ.

ಆದರೆ ಜಾಹೀರಾತುಗಳಲ್ಲಿ ಯಾವುದೋ ಮಕ್ಕಳ ಬಾಯಿಂದ ಇಲ್ಲದ್ದನ್ನು ಹೇಳಿಸುವುದು ಅಥವಾ ದೊಡ್ಡವರು ಭರವಸೆ ಕೊಡುವಾಗ ಮಕ್ಕಳು ನಗುತ್ತಾ ನಿಲ್ಲುವುದು ಎಷ್ಟು ಸರಿ? ದೊಡ್ಡವರಿಗೆ ಜಾಹೀರಾತಿನಲ್ಲಿ ತಮ್ಮ ನಟನೆ ಮತ್ತು ನಿರ್ದಿಷ್ಟ ವಸ್ತು/ಸೇವೆಗೆ ತಾವು ಬೆಂಬಲಿಸಿದರೆ ಅದರ ಕಾರ್ಯ-ಕಾರಣಗಳೇನಾಗುತ್ತದೆ ಎಂಬ ಅರಿವು ಇರುತ್ತದೆ ಎಂದು ಅಂದುಕೊಳ್ಳೋಣ. ಆದರೆ ಈ ಎಲ್ಲ ವಿವರಗಳನ್ನು ಮಕ್ಕಳಿಗೆ ಕೊಟ್ಟಿರುವ ಮತ್ತು ಆ ಮಕ್ಕಳಿಂದ ಒಪ್ಪಿಗೆ ಪಡೆದಿರುವ ಸಾಧ್ಯತೆಗಳು ಬಹಳ ಕಡಿಮೆ. ಜೊತೆಗೆ ೧೮ ವರ್ಷದೊಳಗಿನ ಮಕ್ಕಳಿಂದ ಒಪ್ಪಿಗೆ ಪಡೆದಿದ್ದರೂ ಅದು ನ್ಯಾಯಬದ್ಧವಲ್ಲ. (ಒಪ್ಪಂದ ಕಾಯಿದೆ). 

ಜಾಹೀರಾತುಗಳಲ್ಲಿ ಮಕ್ಕಳನ್ನು ಭಿಕ್ಷುಕರಂತೆ, ಬಡವರಂತೆ ತೋರಿಸುವುದು, ಮಕ್ಕಳ ಮೇಲೆ ದೌರ್ಜನ್ಯ ಮಾಡುವುದನ್ನು, ಬಾಲ್ಯವಿವಾಹ, ಮಕ್ಕಳನ್ನು ಪೆದ್ದರಂತೆ ಕಾಣಿಸುವುದೇ ಮೊದಲಾದುವನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಹಾಗೆಯೇ ಮಕ್ಕಳಿಗೆ ತಂಬಾಕು (ಸಿಗರೇಟ್‌, ಬೀಡಿ, ಗುಟ್ಕಾ ಇತ್ಯಾದಿ), ಮದ್ಯ /ಮಾದಕ ವಸ್ತುಗಳನ್ನು ಮಾರುವುದು, ಕೊಡುವುದು ಅಥವಾ ಅಂತಹ ಜಾಹೀರಾತುಗಳಲ್ಲಿ, ಚಿತ್ರಣದಲ್ಲಿ ಮಕ್ಕಳಿರುವಂತೆ ತೋರಿಸುವುದು ನಿಷೇಧಿತ.

ಈ ಹಿಂದೆ ದೊಡ್ಡ ಪ್ರಚಾರ ಪಡೆದಿದ್ದ ಎರಡು ಜಾಹೀರಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

1) ಟ್ರಾನ್ಸಿಸ್ಟರ್‌ ರೇಡಿಯೋ ಒಂದನ್ನು ಹೆಗಲಲ್ಲಿ ಹಿಡಿದುಕೊಂಡು ಟೀ ತುಂಬಿದ ಲೋಟಗಳಿರುವ ಟ್ರೇ ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಹಾಡು ಕೇಳುತ್ತಾ ಕುಣಿಯುತ್ತಾ ಹೋಗುವ ಹುಡುಗನೊಬ್ಬ ಕ್ರಿಕೆಟ್‌ ಮೈದಾನಕ್ಕೇ ನೇರವಾಗಿ ಬಂದು ಆಟವಾಡುವವರಿಗೆ ಟೀ ಕೊಡುತ್ತಾನೆ;

2) ಬೈಕ್‌ ಮೇಲೆ ಬರುವ ತರುಣನೊಬ್ಬ ಹಾಗೇ ಬಂದು ಶೂ ಪಾಲಿಶ್‌ ಮಾಡುವ ಹುಡುಗನೆದುರು ಕಾಲಿಡುತ್ತಾನೆ. ಬಲಗಾಲಿನ ಶೂ ಪಾಲಿಶ್‌ ಆದ ಮೇಲೆ ಹಾಗೇ ಮುಂದೆ ಹೋಗಿ ತಿರುಗಿ ಬಂದು ಎಡಗಾಲಿನ ಶೂ ಮುಂದಿಡುತ್ತಾನೆ. ಅವನಿಗೆ ತನ್ನ ಬೈಕ್‌ನಿಂದ ಇಳಿಯಲು ಕೂಡಾ ಇಷ್ಟವಿಲ್ಲ, ಅಷ್ಟು ಪ್ರೀತಿ ಬೈಕ್‌ ಮೇಲೆ ಎಂದು ತೋರಿಸುವ ಉದ್ದೇಶ ಅದು! ಆದರೆ ಶೂ ಪಾಲಿಶ್‌ ಮಾಡುವ ಮಕ್ಕಳು ಸಾಲಿನಲ್ಲಿ ಕುಳಿತಿರುವುದನ್ನು ಸ್ಪಷ್ಟವಾಗಿ ಜಾಹೀರಾತು ದೃಷ್ಯ ತೋರಿಸುತ್ತಿತ್ತು.

3) ಸಾಂಪ್ರದಾಯಿಕವಾಗಿ ಕೈಮಗ್ಗದಿಂದಲೇ ನಮ್ಮ ರೇಷ್ಮೆ ಸೀರೆಗಳನ್ನು ನೇಯಲಾಗುತ್ತಿದೆ ಎಂದು ಜಾಹೀರಾತು ನೀಡುವ ಉದ್ದಿಮೆಯವರು, ಹಳ್ಳಿಯ ಒಂದು ನೇಯ್ಗೆಯವರ ಮನೆಯ ಎದುರು ಭವ್ಯವಾದ ರೇಷ್ಮೆ ಸೀರೆಯುಟ್ಟ ರೂಪದರ್ಶಿ ಮತ್ತು ಅದೇ ಮನೆಯ ಜಗಲಿಯ ಮೂಲೆಯೊಂದರಲ್ಲಿ ತೀರಾ ಹರಕಲು ಬಟ್ಟೆ ಹಾಕಿಕೊಂಡಿರುವ ಹುಡುಗನೊಬ್ಬನ ಚಿತ್ರವನ್ನು ಬಳಸುತ್ತಿದ್ದರು.

4) ನಗರದ ಯಾವುದೋ ಝಗಮಗಿಸುವ ಮಾರುಕಟ್ಟೆಯ ರಸ್ತೆಯಲ್ಲಿ ಅಂಗಡಿಯೆದುರು ತರುಣಿಯೊಬ್ಬಳು ತನ್ನ ಕಾರಿನಿಂದ ಇಳಿಯುತ್ತಾಳೆ ಮತ್ತು ಆಗ ಅವಳೆದುರು ಬರುವ ಬಲೂನು ಮಾರುವ ಹುಡುಗನೊಬ್ಬನ ಕೆನ್ನೆಗೆ ಹೊಡೆದು ಎದುರಿರುವ ಅಂಗಡಿಯೊಳಗೆ ಹೋಗುತ್ತಾಳೆ. ಹುಡುಗ ಹೊಡೆಸಿಕೊಂಡ ನಂತರ ಕಾಣುವುದೇ ಇಲ್ಲ. ಬದಲಿಗೆ ಚಿತ್ರದಲ್ಲಿ ಕಾಣಸಿಗುವ ವಾಕ್ಯ, ‘ನಿಮ್ಮ ಸ್ವಭಾವವನ್ನು ತೋರಿಸಿʼ. 

ಇದೆಂತಹ ವಿಲಕ್ಷಣವಾದ ಜಾಹೀರಾತುಗಳು ಮತ್ತು ಮಕ್ಕಳನ್ನು ಪ್ರತಿಬಿಂಬಿಸುವ ವಿಧಾನ, ಇವು ಅಕ್ಷ್ಯಮ್ಯ ಇದು ಪ್ರಮುಖವಾಗಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 19ರ ಉಲ್ಲಂಘನೆ – ಮಕ್ಕಳಿಗೆ ಹೊಡೆದು, ಬೈದು, ನಿರ್ಲಕ್ಷಿಸಿ, ಕಿರುಕುಳ ಕೊಡುವುದು, ಅಥವಾ ದುಡಿಸಿ ತೊಂದರೆ, ಹಿಂಸೆ ಕೊಡುವುದು ಮತ್ತು ಅವುಗಳನ್ನು ವೈಭವೀಕರಿಸುವುದು, ಇದು ಶಿಕ್ಷಾರ್ಹ ಎಂದು ನಾವು ಒಂದಷ್ಟು ಜನ ಸಂಬಂಧಿತರೆಲ್ಲರಿಗೂ ಪತ್ರಗಳ ಮುಖೇನ ಪ್ರತಿಭಟನೆ ವ್ಯಕ್ತಪಡಿಸಿದ್ದೆವು. ಇವುಗಳಲ್ಲಿ ಮೊದಲೆರೆಡು ಜಾಹೀರಾತುಗಳನ್ನು ಸಂಬಂಧಿಸಿದವರು ಹಿಂದಕ್ಕೆ ತೆಗೆದುಕೊಂಡರು. 

ನಿಷೇಧವಿರುವ ಕೆಲವು ಪ್ರಮುಖವಾದ ವಸ್ತು ಮತ್ತು ಸೇವೆಗಳು: ಮಕ್ಕಳಿಗೆ ತಾಯಿಯ ಹಾಲಿನ ಬದಲು ಪರ್ಯಾಯ ಹಾಲಿನ ಪುಡಿ, ಬಾಟಲು, ನಿಪ್ಪಲ್‌, ಶಿಶು ಆಹಾರ ಮತ್ತು ಗರ್ಭದಲ್ಲಿರುವ ಮಗುವಿನ ಲಿಂಗ ಪತ್ತೆ ಹಾಗೂ ಗರ್ಭಸ್ರಾವ ಮಾಡಿಸುವುದು. ಇದು ಅಷ್ಟು ಸುಲಭವಾಗಿ ಆಗಲಿಲ್ಲ. ತಾಯಿಯ ಹಾಲಿನ ಪ್ರಾಮುಖ್ಯತೆ, ಅದರ ಹಿಂದಿರುವ ಅರ್ಥಶಾಸ್ತ್ರ (ಕುಟುಂಬಗಳ ಮೇಲೆ ಮತ್ತು ಅದರ ಮೂಲಕ ಇಡೀ ದೇಶದ ಅರ್ಥವ್ಯವಸ್ಥೆ ಮೇಲಾಗುವ ಹಾನಿ), ವಿದೇಶೀ ವಿನಿಮಯ ಈ ಎಲ್ಲದವುಗಳನ್ನು ಕುರಿತು ಸಂಶೋಧನೆ ಮತ್ತು ವಾಸ್ತವಾಂಶಗಳನ್ನು ನ್ಯಾಯಾಲಯಗಳೆದುರು ತಂದದ್ದರಿಂದ ಮತ್ತು ಸರ್ಕಾರ ಮುಂದಾಗಿ ಕಾನೂನು ತರುವಂತೆ ಆಯಿತು. ಅದೇ ರೀತಿ ಗರ್ಭದಲ್ಲಿರುವ ಭ್ರೂಣದ ಲಿಂಗ ಪತ್ತೆ ಮತ್ತು ಅದು ಹೆಣ್ಣಾಗಿದ್ದಲ್ಲಿ ಆಗುವ ಬಲವಂತದ ಗರ್ಭಸ್ರಾವ ವಿರುದ್ಧ ಈಗಲೂ ನಡೆದಿರುವ ಹೋರಾಟ.

ಗರ್ಭಸ್ರಾವ ಮಾಡಿಸಿಕೊಳ್ಳುವುದು ಸಂಬಂಧಿಸಿದವರ ಆಯ್ಕೆ ಮತ್ತು ಹಕ್ಕು. ಆದರೂ, ತಾವು ಲಿಂಗ ಪತ್ತೆ ಮಾಡುತ್ತೇವೆ, ಹೆಣ್ಣಾಗಿದ್ದಲ್ಲಿ ಗರ್ಭಸ್ರಾವ ಮಾಡುತ್ತೇವೆ ಬನ್ನಿ ಬನ್ನಿ ಎಂದು ಜಾಹೀರಾತು ಕೊಡುವುದಕ್ಕೆ ನಿಷೇಧವಿದೆ. ದುರಾದೃಷ್ಟವಶಾತ್‌ ಈ ಕಾಯಿದೆ ಎಷ್ಟೇ ಪ್ರಗತಿಪರವಾಗಿದ್ದರೂ, ಭ್ರೂಣಲಿಂಗ ಪತ್ತೆ ಮತ್ತು ಗರ್ಭಸ್ರಾವದ ಸೇವೆಗಳು ಗುಟ್ಟಾಗಿ ನಡೆಯುತ್ತವೆ. 

ಈಗಲೂ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಶಾಲಾ ಮಕ್ಕಳನ್ನೇ ತಮ್ಮ ವಸ್ತುಗಳ ಮಾರಾಟಕ್ಕೆ ಗುರಿ ಗುಂಪುಗಳನ್ನಾಗಿಸಿಕೊಂಡಿದ್ದಾರೆ. ಶಾಲೆಗೆ ಬಂದು ಹಲ್ಲು ಪರೀಕ್ಷೆ ಮಾಡುತ್ತಾರೆ. ತಮ್ಮ ಕಂಪನಿಯ ಸ್ಯಾಂಪಲ್‌ ಟೂತ್‌ ಬ್ರಷ್‌, ಪೇಷ್ಟು ಉಚಿತವಾಗಿ ಕೊಡುತ್ತಾರೆ. ಮಕ್ಕಳಿಗೆ ಕೈ ತೊಳೆದುಕೊಳ್ಳುವ ಪ್ರಾಮುಖ್ಯತೆ ತಿಳಿಸುತ್ತಾರೆ. ತಮ್ಮ ಕಂಪನಿಯ ಸೋಪು ಹಂಚುತ್ತಾರೆ. ಮಾಸಿಕ ಮುಟ್ಟಿನ ದಿನಗಳಲ್ಲಿ ಶುಚಿತ್ವದ ಬಗ್ಗೆ ತಿಳಿಸಲು ಬಂದ ಕಂಪನಿಯವರು ತಮ್ಮ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ಹಂಚುತ್ತಾರೆ. ಕಂಪನಿಯ ಹೆಸರಿರುವ ಬಿಸ್ಕತ್ತು, ಹಾಲಿನ ಪೇಯ ಕೊಡುವುದಂತೂ ಸಾಮಾನ್ಯ. ವಾಸ್ತವವಾಗಿ ಇಂತಹವುಗಳಿಗೆ ನಿಷೇಧವಿದ್ದರೂ, ಪಾಪ ಶಾಲಾ ಪ್ರಾಂಶುಪಾಲರಿಗೆ, ಮುಖ್ಯ ಶಿಕ್ಷಕರಿಗೆ ಇವು ತಿಳಿದಿರುವುದಿಲ್ಲ. ಈ ಕಂಪನಿಗಳ ಮಾರಾಟ ಪ್ರಚಾರ ಪ್ರತಿನಿಧಿಗಳಿಗೆ ಸುಗ್ಗಿ. 

ಒಂದೆರಡು ವರ್ಷಗಳ ಹಿಂದೆ ‘ಹೆಸರಾಂತ ನಟರೊಬ್ಬರು ಮದ್ಯದ ಜಾಹೀರಾತು ಮತ್ತು ಆನ್ಲೈನ್ ಇಸ್ಪೀಟ್ ಆಟದ ಜಾಹೀರಾತಿ’ನಲ್ಲಿ ಇರುವುದನ್ನು ಆಕ್ಷೇಪಿಸಿ ನಾನು ಫೇಸ್ಬುಕ್ ಬರಹ ಹಾಕಿದ್ದೆ. ಇದು ಮಕ್ಕಳು ಮತ್ತು ಯುವಜನರನ್ನು ತಪ್ಪು ದಾರಿಗೆ ಎಳೆಯುತ್ತದೆ, ತಾವು ಹೀಗೆ ಮಾಡಬಾರದು ಎಂದೂ ಬರೆದಿದ್ದೆ. ಆ ನಟನ ಅಭಿಮಾನಿಗಳಿಗೆ ಇದು ಇರಿಸುಮುರಿಸಾಗಿತ್ತಂತೆ. ಅದು ನಟನಿಗೆ ನಾನು ಮಾಡಿದ ಅವಮಾನ ಎಂದು ವಾದಕ್ಕಿಳಿದಿದ್ದರು. (ಅವರಿನ್ನೂ ಆ ಜಾಹೀರಾತುಗಳಲ್ಲಿದ್ದಾರೆ). ಅಷ್ಟೇ ಅಲ್ಲ, ಈಗೀಗ ನಟರು, ಆಟಗಾರರು (ಆಟ ಅಂದರೆ ಕ್ರಿಕೆಟ್ ಮಾತ್ರ ಅಲ್ಲವೆ!) ಬಂದು ಆನ್ಲೈನ್ ರಮ್ಮಿ ಆಡಲು ಆಹ್ವಾನಿಸುತ್ತಾರೆ.  ಇಂಥ ಪ್ರಲೋಭನೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಬಲಿಯಾಗಿದ್ದಾರೆ.

ಮಕ್ಕಳನ್ನು ಗಾಳಕ್ಕೆ ಸಿಕ್ಕಿಸಿ ದೊಡ್ಡ ಮಿಕವನ್ನು ಹಿಡಿಯುವ ಪದ್ಧತಿ ಈಗ ಹಳೆಯದಾಗಿದೆ. ಈಗೀಗ ಪಾತ್ರ ಅದಲು ಬದಲಾಗಿದೆ! ಅಪ್ಪ ಅಮ್ಮನನ್ನು ಗಾಳಕ್ಕೆ ಸಿಕ್ಕಿಸಿ ಮಕ್ಕಳನ್ನು ಸೆಳೆಯುವ ಜಾಹೀರಾತುಗಳು ಬೆಳೆಯುತ್ತಿವೆ. ನಿಮ್ಮ ಮಗುವನ್ನು ಈ ಶಾಲೆಗೋ, ಆ ಕಾಲೇಜಿಗೋ ಇಲ್ಲವೇ ಈ ಕೋಚಿಂಗ್‌ ಸಂಸ್ಥೆಗೋ ಅಥವಾ ಇಂತಹದೊಂದು ಆನ್‌ಲೈನ್‌ ಕಾರ್ಯಕ್ರಮಕ್ಕೋ  ಸೇರಿಸಿ… ಆಗ ನೋಡಿ ನಿಮ್ಮ ಮಗು ಸಾಧಿಸುವ ಶೈಕ್ಷಣಿಕ ಪ್ರಗತಿ. ನಿಮ್ಮನ್ನು ಮೀರಿಸಿ ಬೆಳೆಯುತ್ತಾರೆ…! ಗಾಳಕ್ಕೆ ಸಿಕ್ಕಿ ವಿಲವಿಲ ಒದ್ದಾಡುವ ಅಪ್ಪ-ಅಮ್ಮ  ಮಡಗಬೇಕು ಸಾವಿರಾರು ರೂಪಾಯಿಗಳ ಶುಲ್ಕ. 

ದೊಡ್ಡವರು ಒತ್ತಡಕ್ಕೆ ಬೀಳುತ್ತಾರೋ, ಮಕ್ಕಳೇ ಮನೆಯವರ ಮೇಲೆ ಒತ್ತಡ ಹೇರುತ್ತಾರೋ ಅಂತೂ ಅವರಿಗೆ ಇವರು, ಇವರಿಗೆ ಅವರು ಗಾಳಕ್ಕೆ ಸಿಕ್ಕಿಸಿದ ಆಮಿಷಗಳು. ಈ ಕೊರೋನಾ ಕಾಲದಲ್ಲಂತೂ ಈ ಉದ್ದಿಮೆಗೆ ಎಲ್ಲರೂ ಮಿಕಗಳು!

ಕೊನೆಯದಾಗಿ: ಮಕ್ಕಳಿಗೆ ಇಂತಹ ಜಾಹೀರಾತುಗಳಿಂದ, ಪ್ರಚಾರದಿಂದ ತೊಂದರೆಯಾಗುತ್ತಿದೆ ಎನಿಸಿದರೆ ಖಂಡಿತಾ ನಾವು ಸಂಬಂಧಿಸಿದವರಿಗೆ ದೂರು ಕೊಡಬಹುದು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮತ್ತು ಹತ್ತಿರದ ಗ್ರಾಹಕ ಸುವಿಧಾ ಕೇಂದ್ರಕ್ಕೆ ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕುಂದುಕೊರತೆಗಳ ಪ್ರಾಧಿಕಾರಕ್ಕೆ ದೂರು ಕೊಡಬೇಕು [Grievances Against Misleading Advertisements (GAMA)]
http://gama.gov.in.  

‍ಲೇಖಕರು Admin

July 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: