ಶಾಲೆಗೆ ಧಿಡೀರ್‌ ರಜೆ, ಮಕ್ಕಳು ಮತ್ತು ಪೋಷಕರಿಗೆ ಗಡಿಬಿಡಿ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಜುಲೈ ೩೧ ಸೋಮವಾರ, ವರ್ಷ ೨೦೦೦. 

ಬಿಡುವಿನ ಭಾನುವಾರ  ಮುಗಿದು  ಮಾರನೇ ದಿನ ಎಂದಿನಂತೆ ಬೆಳಗಾಗಿತ್ತು. ನಾವೆದ್ದ ಕೂಡಲೇ ಇನ್ನೂ ಸಕ್ಕರೆ ನಿದ್ದೆಯಲ್ಲಿದ್ದ ಪ್ರಾಥಮಿಕ ಶಾಲೆಯಲ್ಲಿ ಎರಡನೆ ತರಗತಿ ಕಲಿಯುತ್ತಿದ್ದ ಮಗಳನ್ನೆಬ್ಬಿಸಿ ಶಾಲೆಗೆ ಕಳುಹಿಸಲು ಸಿದ್ಧ ಮಾಡುವ ಅವಸರ ಒಂದು ಕಡೆ, ಕಛೇರಿ, ಕೆಲಸಗಳಿಗೆ ಹೊರಡಲು ನಮ್ಮ ಧಾಂಗುಡಿ ಇನ್ನೊಂದೆಡೆ.   

ಇನ್ನೂ ಹರಿಯದ ನಿದ್ದೆಯಲ್ಲೇ ಇದ್ದ ಮಗಳನ್ನ ಹೆಚ್ಚೂಕಡಿಮೆ ಓಡಿಸಿಕೊಂಡು, ಎತ್ತಿಕೊಂಡು ಬೆಂಗಳೂರಿನ ಜಯನಗರ ೯ನೇ ಬ್ಲಾಕ್‌ನಲ್ಲಿದ್ದ ನಮ್ಮ ಮನೆಯ ಬೀದಿಯ ತುದಿಯನ್ನು ೮.೦೫ಕ್ಕೆ ತಲುಪಿದಾಗ ಸದ್ಯ ಇನ್ನೂ ಅವಳನ್ನು ಶಾಲೆಗೆ ಕರೆದೊಯ್ಯುವ ರಾಜು ಅವರ ವಾಹನ ಬಂದಿರಲಿಲ್ಲ. ಅಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ ಮಕ್ಕಳ ಕೈಹಿಡಿದು ನಿಂತಿದ್ದ ಅಪ್ಪ, ಅಮ್ಮ, ತಾತ, ಅಜ್ಜಿ, ಅಣ್ಣ, ಅಕ್ಕಗಳ ಪರಿಚಿತ ಮುಖಗಳೆಡೆ ಮುಗುಳ್ನಗೆ ಬೀರಿ ಮತ್ತೊಮ್ಮೆ ಕೈಗಡಿಯಾರ ನೋಡಿಕೊಂಡೆ. ೮.೧೦ರ ಆಸುಪಾಸಿನಲ್ಲಿ ರಾಜು ಅವರ ವಾಹನ ಬಂದದ್ದೇ ನಾವೆಲ್ಲಾ ಸ್ನೇಹಪೂರ್ವಕ ಸ್ಪರ್ಧೆಯಲ್ಲಿ ನಮ್ಮ ನಮ್ಮ ಮಕ್ಕಳನ್ನು ವಾಹನದೊಳಕ್ಕೆ ನುಗ್ಗಿಸಿದ ಕೂಡಲೇ ನಾನು ಹಿಂತಿರುಗಿ ಕೂಡಾ ನೋಡದೆ ಮನೆಗೆ ಓಡಿದ್ದೆ. ಸ್ನಾನ ಮಾಡಿ ಸಿದ್ಧವಾಗಿ, ಉಪಾಹಾರ ಮುಗಿಸಿ, ಚೀಲಗಳನ್ನೆತ್ತಿಕೊಂಡು ಸ್ಕೂಟರ್‌ ಏರಿ ನಾನೂ ಲಕ್ಷ್ಮೀ ಕಛೇರಿಗೆ ಓಡಬೇಕಿತ್ತು. ಆ ದಿನ ಏಕೋ ಏನೋ ಸ್ವಲ್ಪ ತಡವಾಯಿತು. ನಾವು ಮನೆ ಬಿಡುವುದರೊಳಗೆ ೯ರ ಗಂಟೆ ಹೊಡೆದಾಗಿತ್ತು. ಇಬ್ಬರೂ ಒಬ್ಬರಿಗೊಬ್ಬರು ತಡ ನಿನ್ನಿಂದ ನನ್ನಿಂದ ಎಂದುಕೊಂಡೇ ಬಾಗಿಲು ದಾಟಿದ್ದೆವು.  

ಮನೆಯಿಂದ ಹೊರಟು ಎರಡು ಮೂರು ನಿಮಿಷದಲ್ಲಿ ನಮ್ಮ ಎಂದಿನ ರಸ್ತೆಯಲ್ಲಿ ಮುಂದೋಡುತ್ತಿದ್ದಂತೆಯೇ, ಮಾಮೂಲಿಯಂತೆ ಎದುರಾದ ಬಸ್‌ ನಿಲ್ದಾಣ, ಅಲ್ಲಿ ಹಸುಗಳು, ನಾಯಿಗಳು, ಆಟೋಗಳು, ಅರ್ಧ ರಸ್ತೆ ಆಕ್ರಮಿಸಿಕೊಂಡಿರುವ ಬಸ್‌ಗಳು, ದ್ವಿಚಕ್ರ ವಾಹನಗಳು, ಒಂದೆರಡು ಕಾರುಗಳು, ಕಛೇರಿ, ಕೆಲಸಗಳಿಗೆ ಹೋಗಲು ಬಸ್‌ ಹಿಡಿಯುವ ಜನ, ಮಕ್ಕಳು, ಬಾಳೇಹಣ್ಣು ತರಕಾರಿ ಮಾರುವವರ ತಳ್ಳು ಗಾಡಿಗಳು… ಅವುಗಳ ಮಧ್ಯ ನಾವು ದಾರಿ ಮಾಡಿಕೊಂಡು ಹೋಗಲೇಬೇಕು. ಆಗಲೇ ನನ್ನ ಕಣ್ಣಿಗೆ ಢಾಳಾಗಿ ಏನೋ ಕಂಡಿತು. ನಮ್ಮ ಮಗಳ ಶಾಲೆಯ ಸಮವಸ್ತ್ರ ಧರಿಸಿದ್ದ ಕೆಲವು ಮಕ್ಕಳು ಎದುರಿನಿಂದ ಬರುತ್ತಿದ್ದಾರೆ. ಅರೆ! ಇದೇನಿದು ೮.೪೫ಕ್ಕೆ ಶಾಲೆಯ ಪ್ರಾರ್ಥನೆ ಮುಗಿದು ತರಗತಿಗಳು ಆರಂಭವಾಗಿರಬೇಕು. ಈ ಮಕ್ಕಳೇಕೆ ಹೀಗೆ ಬರುತ್ತಿದ್ದಾರೆ? ತಡವಾಯಿತೆಂದು ಶಾಲೆಯೊಳಕ್ಕೆ ಬಿಟ್ಟುಕೊಳ್ಳದ ಮಕ್ಕಳಿರಬಹುದು ಎಂದುಕೊಂಡೆ. ಲಕ್ಷ್ಮೀ ಕೂಡಾ ಈ ಮಕ್ಕಳೇಕೆ ಇಲ್ಲಿ ಹೀಗೆ ಎಂದು ನನ್ನನ್ನೇ ಕೇಳಿದಳು.   

ಇನ್ನೂ ಕೊಂಚ ಮುಂದೆ ಹೋದಾಗ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಬೇರೆ ಶಾಲೆಗಳ ಸಮವಸ್ತ್ರ ಧರಿಸಿದ್ದ ಮಕ್ಕಳು ನಿಧಾನವಾಗಿ ಕಾಲೆಳೆದುಕೊಂಡು ಬರುತ್ತಿದ್ದಾರೆ! ಇದೇಕೆ ಹೀಗೆ ಹೋಗುತ್ತಿದ್ದಾರೆ? ಒಂದು ಮಗುವನ್ನು ತಡೆದು ಕೇಳಿದೆವು. ‘ರಜಾ ಕೊಟ್ಟುಬಿಟ್ರು! ಇವತ್ತು ಸ್ಕೂಲ್‌ ಇಲ್ಲ… ಎಲ್ಲ ಮಕ್ಕಳನ್ನೂ ಮನೆಗೆ ಕಳಿಸಿಬಿಟ್ರು…ʼ. 

ಯಾಕೆ?

ಅಷ್ಟು ಹೊತ್ತಿಗೆ ಒಂದು ಆಟೋಗೆ ಕಟ್ಟಿದ್ದ ಮೈಕ್‌ನಲ್ಲಿ ಏನೋ ಕೂಗುತ್ತಿದ್ದುದು ಕಿವಿಗೆ ಬಿದ್ದಿತು. ಅಲ್ಲಿನ ವಾತಾವರಣದಲ್ಲಿ ಏನೋ ಗಡಿಬಿಡಿ ಗಲಿಬಿಲಿಯನ್ನ ನಾವು ಆಗ ಗಮನಿಸಿದೆವು. ‘…ಅಪಹರಣವಾಗಿದೆ. ವೀರಪ್ಪನ್‌ ನೆನ್ನೆ ರಾತ್ರಿ… ತಾಳವಾಡಿಯ ಗಾಜನೂರಿನಲ್ಲಿ…ʼ ಆಗ ಗಮನವಿಟ್ಟು ಕೇಳಿದೆವು. 

‘ವರನಟ ರಾಜಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ್ದಾನೆ…ʼ 

ಸುತ್ತಮುತ್ತಲು ಏನಾಗುತ್ತಿತ್ತೋ ನಮ್ಮ ತಲೆಗೆ  ಹೋಗಲೇ ಇಲ್ಲ.  ಎದುರಿದ್ದುದು ಒಂದೇ ವಿಚಾರ. ಸ್ಕೂಲ್‌ಗೆ ರಜೆ ಕೊಟ್ಟಿದ್ದಾರೆ ಎಂದರೆ ನಮ್ಮ ಮಗಳು ಮನೆಗೆ ಹೇಗೆ ಹಿಂದಕ್ಕೆ ಬರುತ್ತಾಳೆ? ಬೇರೆ ಯಾವುದೇ ಆಲೋಚನೆ ಬರುವ ಮೊದಲೇ ಧಿಡೀರ್‌ ಎಂದು ಸ್ಕೂಟರ್‌ ಹಿಂದಕ್ಕೆ ತಿರುಗಿಸಿಕೊಂಡು ಮನೆಗೆ ದೌಡು. ಮಗುವೇನಾದರೂ ತಾನೇ ಮನೆಯತ್ತ ಹೊರಟುಬಿಟ್ಟಿದ್ದರೆ, ಅವಳಿಗೆ ಮನೆಯ ತನಕ ಬರುವ ರಸ್ತೆ ಗೊತ್ತಿದೆಯೋ ಇಲ್ಲವೋ, ವ್ಯಾನ್‌ ರಾಜು ಕರೆದುಕೊಂಡು ಬರುತ್ತಾರೋ ಇಲ್ಲವೋ… ವ್ಯಾನ್‌ನವರು ಮಗಳನ್ನು ದಿನವೂ ಇಳಿಸುವ ಸ್ಥಳಕ್ಕೆ ಹೋಗಿ ಲಕ್ಷ್ಮೀ ಕಾಯುವುದು, ನಾನು ಶಾಲೆಗೆ ಹೋಗಿ ವಿಚಾರಿಸುವುದು ಎಂದು ಮನೆಯತ್ತ ಹೋಗುತ್ತಾ ಯೋಜಿಸಿದೆವು. 

‘ಯಾಕೆ ನೀವಿಬ್ಬರೂ ವಾಪಸ್‌, ಅವನ್ಯಾಕೆ ಹಾಗೆ ಹೋದ?ʼ ಎಂದು ಅಮ್ಮ ಕೇಳುತ್ತಿದ್ದರೆ, ‘ಲಕ್ಷ್ಮೀ ಎಲ್ಲ ಹೇಳ್ತಾಳೆ’ ಎನ್ನುತ್ತಲೇ ಓಡಿದೆ.

ನಾನು ಶಾಲೆಯ ಹತ್ತಿರ ಹೋಗುವಷ್ಟರಲ್ಲಿ ಶಾಲೆಯ ದೊಡ್ಡ ಗೇಟ್‌ ಬಳಿ ನೂರಾರು ಪೋಷಕರು ಜಮಾಯಿಸಿದ್ದರು. ನನ್ನ ಸ್ಕೂಟರ್‌ ಅನ್ನು ಅದ್ಯಾವ ಮೂಲೆಯಲ್ಲಿ ಹೇಗೆ ನಿಲ್ಲಿಸಿದೆನೋ ಗೊತ್ತಿಲ್ಲ. ಅಂತೂ ನಾನೂ ಆ ಗುಂಪಿನಲ್ಲಿ ಒಬ್ಬನಾಗಿ ಗೇಟ್‌ ಹತ್ತಿರಕ್ಕೆ ಒತ್ತರಿಸಿದೆ. ಗೇಟ್‌ ಹಾಕಿತ್ತು. ಹಿಂದೆ ನಿಂತಿದ್ದ ಒಂದಷ್ಟು ಟೀಚರ್‌ಗಳು ಅದೇನೋ ಹೇಳುತ್ತಿದ್ದರು. ಹೊರಗಿದ್ದ ದೊಡ್ಡವರು ಏನೋ ಕೂಗುತ್ತಿದ್ದರು. ಒಂದೂ ಗೊತ್ತಾಗಲಿಲ್ಲ. ನನಗೆ ನಮ್ಮ ಮಗು ತಕ್ಷಣ ಬೇಕು ಅಷ್ಟೆ. ನಾನೂ ಕೂಗತೊಡಗಿದನೆಂದು ಕಾಣುತ್ತದೆ! 

ಕೆಲ ಕ್ಷಣಗಳಲ್ಲಿ ಗೊತ್ತಾಗಿದ್ದು, ಹೈಸ್ಕೂಲ್‌ ಮಕ್ಕಳಲ್ಲಿ ಯಾರಿಗೆ ತಾವೇ ಮನೆಗೆ ಹೋಗುವ ಸಾಮರ್ಥ್ಯ ಇದೆಯೋ ಅಂತಹವರನ್ನು ಹೋಗಲು ಬಿಟ್ಟಿದ್ದಾರೆ. ಪ್ರಾಥಮಿಕ ಶಾಲೆಯ ಮಕ್ಕಳನ್ನು ಅವರ ಪೋಷಕರು ಬಂದರೆ ಮಾತ್ರ ಬಿಡುತ್ತಿದ್ದರು. ಮಾಮೂಲಿಯಂತೆ ವ್ಯಾನ್‌ನಲ್ಲಿ ಬಂದು ಹೋಗುವ ಮಕ್ಕಳು ವ್ಯಾನ್‌ನವರ ಜೊತೆ ಅವರವರ ತಂಡಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. 

ನಾನೀಗ ವ್ಯಾನ್‌ನಲ್ಲಿ ಮಗಳು ಮನೆಗೆ ಬರಲಿ ಎಂದು ಕಾಯಬೇಕೋ, ‘ಇಕೋ ನಾನು ನನ್ನ ಮಗುವಿನ ಪೋಷಕ, ನನ್ನ ಮಗುವನ್ನು ಬಿಟ್ಟುಕೊಡಿʼ ಎಂದು ಕೇಳಬೇಕೋ? ಎಂತಹ ದೊಡ್ಡ ಗೊಂದಲ. ಬಿಟ್ಟು ಹೋದರೆ, ಮನೆಯಲ್ಲಿ ಎದುರಿಸಬೇಕಾದ ನೂರೆಂಟು ಪ್ರಶ್ನೆಗಳಿಗೆ ಸಮಾಧಾನ ಹೇಳುವುದು ಕಷ್ಟ. ಇಲ್ಲೆ ನಿಂತು ಈ ದೊಡ್ಡ ಗಲಿಬಿಲಿಯ ಗುಂಪಿನಲ್ಲಿ ಗೇಟಿನ ತನಕ ಹೋಗಿ, ನನ್ನ ಮಗಳ ಹೆಸರು, ಅವಳ ತರಗತಿ ವಿವರ ಕೊಟ್ಟು, ನನ್ನ ಪರಿಚಯ ಹೇಳಿ, ಆ ಮಗಳನ್ನು ಯಾರಾದರೂ ಕರೆತರುವಂತೆ ಕೇಳಿಕೊಳ್ಳಬೇಕು. ಆಗುತ್ತೋ ಇಲ್ಲವೋ ಅವರು ಒಪ್ಪುತ್ತಾರೋ ಇಲ್ಲವೋ… ಹೇಗೆ ಕೇಳುವುದು. 

ಆಗಲೇ ಮಗಳು ಹೋಗಿ  ಬರುವ ವ್ಯಾನ್‌ ನಡೆಸುವ ರಾಜು ಅವರೇ ಕಣ್ಣಿಗೆ ಬೀಳಬೇಕೆ? ʼಏ! ನೀವ್ಯಾಕೆ ಹೆದ್ರಿಕೊಂಡು ಬಂದ್ರಿ. ನಾನೇ ಜೋಪಾನವಾಗಿ ಮನೆ ಹತ್ರ ಬಿಡ್ತಿದ್ದೆ. ಏನು, ಈಗ ನೀವೇ ಕರ್ಕೊಂಡು ಹೋಗ್ತೀರಾ? ಅವ್ಳನ್ನೇ ಕೇಳ್ತೀನಿ ತಾಳಿ. ಅವಳು ನಿಂಜೊತೆ ಬರ್ತೀನಿ ಅಂದ್ರೆ ಕರ್ಕೊಂಡು ಹೋಗಿʼ ಎಂದವರೇ ಅದು ಹೇಗೋ ಆ ಜನಜುಂಗುಳಿಯಲ್ಲಿ ನುಸುಳಿ, ಗೇಟ್‌ ಹತ್ತಿರ ಹೋಗಿ ಯಾರಿಗೆ ಏನು ಹೇಳಿದರೋ, ಮೂರ್ನಾಲ್ಕು ನಿಮಿಷದಲ್ಲಿ ನಮ್ಮ ಮರಿ, ಹೆಗಲೇರಿದ ಸ್ಕೂಲ್‌ ಬ್ಯಾಗ್‌, ಕೈಯಲ್ಲಿ ಊಟದ ಚೀಲ, ಇನ್ನೂ ತಿನ್ನುತ್ತಿದ್ದ ಚಾಕೋಲೇಟ್‌ ಹಿಡಿದುಕೊಂಡು ಇಷ್ಟಗಲ ಕಣ್ಣು ತೆರೆದುಕೊಂಡು ರಾಜು ಅಂಕಲ್‌ ಕೈ ಹಿಡಿದು ಪ್ರತ್ಯಕ್ಷಳಾದಳು.

ʼರಜಾ ಅಂತೆ. ನಾನು ವ್ಯಾನ್‌ನಲ್ಲೇ ಬರ್ತಿದ್ದೆʼ ಎನ್ನುತ್ತಲೇ ಏನೋ ಕತೆ ಹೇಳಿಕೊಂಡು ಬಂದು ಸ್ಕೂಟರ್‌ ಏರಿದಳು.    

ಆ ದಿನ ನಾವಿಬ್ಬರೂ ಪೋಷಕರು ನಮ್ಮ ನಮ್ಮ ಕಛೇರಿಗೆ ಫೋನ್‌ ಮಾಡಿ ರಜೆ ಹೇಳಿದೆವು. ಅಲ್ಲಿಂದ ಸಿಕ್ಕ ಮಾಹಿತಿ, ಹೆಚ್ಚೂ ಕಡಿಮೆ ಯಾರೂ ಬಂದಿಲ್ಲ! ಒಂದು ತರಹ ನೆಮ್ಮದಿ. ಟೀವಿ ವಾರ್ತಾವಾಹಿನಿಗಳು, ʼಅಪಹರಣದ ಸುದ್ದಿ ಕೇಳುತ್ತಿದ್ದಂತೆಯೇ ನಗರ ಹೇಗೆ ಸ್ತಬ್ಧವಾಯಿತುʼ ಎಂದು ಸಡಗರದಿಂದ ಸುದ್ದಿ ಬಿತ್ತರಿಸುತ್ತಿದ್ದವು!

ಇಷ್ಟಾದ ಮೇಲೆ ನನ್ನ ತಲೆಯಲ್ಲಿ ಪ್ರಶ್ನೆಯೊಂದು ಪುಟ್ಟದಾಗಿ ಮೂಡಿ ದೊಡ್ಡದಾಗಿ ಬೆಳೆಯಲಾರಂಭಿಸಿತು. 

ಹೀಗೆ ಧಿಡೀರ್‌ ಎಂದು ಶಾಲೆಗೆ ರಜೆ ಘೋಷಿಸುವುದು ಸರಿಯೆ? 

ಹೀಗೆ ಮಾಡುವುದರಿಂದ ಯಾರಿಗೆ ಏನು ಪ್ರಯೋಜನ?  ಅದೆಷ್ಟು ಜನರಿಗೆ ಕಷ್ಟವಾಗುತ್ತದೆ. ಎಲ್ಲರ ಮನೆಯಲ್ಲಿ ಪೋಷಕರು ಅಥವಾ ದೊಡ್ಡವರು ಸದಾಕಾಲ ಮನೆಯಲ್ಲೇ ಇರುತ್ತಾರೆಂದಿಲ್ಲ.  ಶಾಲೆಗೆ ದಿಡೀರ್ ರಜೆ ಕೊಟ್ಟಿದ್ದಾರೆ ಎಂದರೆ ಎಲ್ಲೋ ಇರುವ ಪೋಷಕರು ಅದೆಷ್ಟು ಆತಂಕಕ್ಕೆ ಒಳಗಾಗುತ್ತಾರೆ. 

ಒಂದೇ ಎರಡೇ. ನೂರಾರು ಪ್ರ‍ಶ್ನೆಗಳು, ಮಕ್ಕಳ ಹಕ್ಕುಗಳು, ಮಕ್ಕಳ ಮೇಲಾಗಬಹುದಾದ ಅನ್ಯಾಯಗಳು, ದೌರ್ಜನ್ಯ, ಹಿಂಸೆ, ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬ ಸ್ಪಷ್ಟ ನೀತಿ ನಿಯಮ ಇಲ್ಲವೆ… ಹೀಗೇ ಸ್ವಗತದಲ್ಲಿ ಯೋಚಿಸಲಾರಂಭಿಸಿದೆ. ಆಗಾಗ್ಗೆ ನನ್ನ ಅಂತರಂಗದ ಯೋಚನೆ ಮಾತಿನಲ್ಲಿ ಪ್ರಕಟವಾದಾಗ ಅಪ್ಪ, ಲಕ್ಷ್ಮೀ, ಅಮ್ಮ ಸೇರುತ್ತಿದ್ದರು. ಮಗಳೂ ಸೇರಿದ್ದಳೋ ಇಲ್ಲವೋ ಈಗ ನೆನಪಿಲ್ಲ. 

ಹೊರಗಡೆ ಮೈಕ್‌ ಕಟ್ಟಿಕೊಂಡು ಕೂಗುತ್ತಿದ್ದವರ ಆಟೋ ಮನೆಯ ಹತ್ತಿರದ ಮುಖ್ಯರಸ್ತೆಗೆ ಆಗಾಗ್ಗೆ ಬಂದಾಗಲೆಲ್ಲಾ ಆಕ್ರೋಶದ ಘೋಷಣೆ ಕೇಳುತ್ತಲೇ ಇತ್ತು, ʼ… ಕನ್ನಡ ಭಾಷೆಗೆ ಅವಮಾನ. ಕನ್ನಡ ನಾಡಿಗೆ ಮೋಸ. ಇದು ಕೇವಲ ನಮ್ಮ ವರನಟ ರಾಜ್‌ಕುಮಾರ್‌ ಅವರ ಅಪಹರಣವಲ್ಲ, ನಮ್ಮ ರಾಜ್ಯದ ಮೇಲೆ ಮಾಡಿರುವ ದಾಳಿʼ. 

***

೨೫ ಜುಲೈ ೨೦೦೮. 

ಬೆಂಗಳೂರಿನಲ್ಲಿ ಮಧ್ಯಾಹ್ನ ೧ ಗಂಟೆ ೨೦ ನಿಮಿಷದಿಂದ ೩ ಗಂಟೆಯೊಳಗೆ ಏಳು ಬಾಂಬ್‌ ಸಿಡಿತಗಳು. 

ಬಸವೇಶ್ವರ ವೃತ್ತದ ಬಳಿಯಿರುವ ಬಹು ಅಂತಸ್ತಿನ ಕಟ್ಟಡ ಹೈಪಾಯಿಂಟ್‌ ೪ರಲ್ಲಿರುವ ನಮ್ಮ ಕಛೇರಿಯಲ್ಲಿದ್ದವರಿಗೆ ಸಿಡಿತದ ʼಸದ್ದುʼ ನಿಜವಾಗಿಯೂ ಗೊತ್ತಾಗಿದ್ದು, ನನಗೆ ಮನೆಯಿಂದ ಫೋನ್‌ ಬಂದಾಗಲೇ. 

ಟಿವಿ ೯ ಮತ್ತು ಸುವರ್ಣಾ ನ್ಯೂಸ್‌ನವರು ʼಈಗ ತಾನೆ ಬಂದ ಸುದ್ದಿʼ ಎಂದು ಊರಿಗೆಲ್ಲಾ ಬಾಂಬ್‌ ಸಿಡಿಸಿದ್ದರಂತೆ. ನಮ್ಮ ಕಛೇರಿಯಲ್ಲಿ, ಕಛೇರಿಯಿದ್ದ ಕಟ್ಟಡದಲ್ಲಿ ಕೆಲಸ ಮಾಡುವವರ ಮನೆಯವರಿಗೆಲ್ಲ ಹೀಗೆ ಬೆಂಗಳೂರಲ್ಲಿ ಬಾಂಬ್‌ ಎಂದು ಮೊದಲು ಗೊತ್ತಾಗಿತ್ತು! ನಮ್ಮ ಕಟ್ಟಡದಲ್ಲಿ ಮೊಬೈಲ್‌ ಇದ್ದವರಿಗೆಲ್ಲಾ ಮನೆಗಳಿಂದ ಎಚ್ಚರಿಕೆ ಕರೆ ಬರುತ್ತಿತ್ತು. ʼತಕ್ಷಣ ಹೊರಟು ಬಾʼ. ಜೊತೆಗೆ ಎಸ್. ಎಂ.ಎಸ್‌.ಗಳು. ʼಸ್ಟಾರ್ಟ್‌ ಇಮ್ಮೆಡಿಯಟ್‌ಲಿ. ಬಾಂಬ್‌ ಸ್ಕೇರ್‌ ಇನ್‌ ಬ್ಯಾಂಗ್ಲೂರ್‌ʼ. ಜೊತೆಗೆ, ಇದೇನೆಂದು ತಿಳಿದುಕೊಳ್ಳಲು ನಾವು ಯತ್ನಿಸುತ್ತಿರುವಂತೆಯೇ ದೂರದ ಹೈದರಾಬಾದ್‌ನಿಂದ ಗೆಳೆಯರೊಬ್ಬರು ಫೋನ್‌ ಮಾಡಿದ್ದು, ʼವಾಸು ಏನಾಯ್ತು? ನೀವೆಲ್ಲಾ ಸೇಫ್‌ ತಾನೆ?ʼ

ಕಟ್ಟಡದ ಜನರೆಲ್ಲಾ ನಮ್ಮ ನಮ್ಮ ಮಹಡಿಯ ಆವರಣದಲ್ಲಿ ನಮ್ಮ ನಮ್ಮ ಬಾಂಬ್‌ ಜ್ಞಾನ ತೋರಿಸಲು ಸೇರಿಬಿಟ್ಟಿದ್ದೆವು. ಆಗಲೇ ಯಾರೋ ಹೇಳಿದರು ʼಕೇಳಿಸಿತು ಸರ್.‌ ದೊಡ್ಡ ಶಬ್ದ… ಭಯ ಆಯ್ತುʼ. ಕೇಳಿಸಿತಂತೆ! ನನಗೆ ಗೊತ್ತಿಲ್ಲ. ನಮಗೆ ಹತ್ತಿರದಲ್ಲಿ ಆದ ಸಿಡಿತ ಸುಮಾರು ಎರಡು ಮೂರು ಕಿಲೋಮೀಟರ್‌ ದೂರದಲ್ಲಿರುವ ವಿಠಲ ಮಲ್ಯ ರಸ್ತೆಯಲ್ಲಿ ಎಂದು ಮಾರನೇ ದಿನ ಪೇಪರ್‌ ಓದಿದಾಗ ಸರಿಯಾಗಿ ತಿಳಿದಿದ್ದು.  

ಕಟ್ಟಡದ ಜನರೊಡನೆ ಬಾಂಬ್ ಘಟನೆಯ  ಸಾಮಾನ್ಯ ಜ್ಞಾನ ಪಡೆದು ಮತ್ತೆ ಕಛೇರಿ ಕೋಣೆಯ ಒಳಗೆ ಬಂದಾಗ ಗಮನಿಸಿದೆ. ನನ್ನ‌ ಕಛೇರಿಯ ಏಳೆಂಟು ಜನರಲ್ಲಿ ಅರ್ಧದಷ್ಟು ಮಂದಿ ಹೆಚ್ಚೂಕಡಿಮೆ ಈಗೇನು ʼಇರುವುದೋ ಹೊರಡುವುದೋ?ʼ ಎಂಬಂತೆ ನನ್ನನ್ನು ನೋಡಿದರು. 

ಮರು ಮಾತಿಲ್ಲದೆ ತಲೆ ಆಡಿಸಿದ್ದೆ. ಯಾರ ಬಳಿ ವಾಹನವಿದೆ, ಯಾರಲ್ಲಿ ಇಲ್ಲ, ಬಸ್‌ ಸಿಗದಿದ್ದರೆ ಯಾರು ಯಾರನ್ನು ಅವರವರ ಮನೆಯ ಬಳಿ ಬಿಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ತಕ್ಷಣವೇ ಯೋಜಿಸಲಾಯಿತು.

ಶಾಲೆಗೆ ಹೋಗುವ ವಯಸ್ಸಿನ ಮಗಳಿದ್ದ ಸಹೋದ್ಯೋಗಿಯೊಬ್ಬರು, ಹೆಚ್ಚೂ ಕಡಿಮೆ ಕಣ್ಣೀರು ಹಾಕಿಕೊಂಡು ಹೇಳಿದ್ದು ನನ್ನನ್ನ ಒಂಭತ್ತು ವರ್ಷಗಳ ಹಿಂದಕ್ಕೆ ಒಯ್ಯಿತು. 

ʼಸ್ಕೂಲ್‌ಗೆ ರಜ ಕೊಟ್ಬಿಟ್ಟಿದ್ದಾರಂತೆ ಸರ್‌. ನನ್ನ ಮಗಳು ದಿನಾ ಸ್ಕೂಲ್‌ನಿಂದ ಅಲ್ಲೇ ಹತ್ತಿರದ ಸಂಗೀತದ ಟೀಚರ್‌ ಮನೆಗೆ ಹೋಗಿರ್ತಾಳೆ. ನಾನು ಆಫೀಸಿನಿಂದ ಮನೆಗೆ ಹೋಗಬೇಕಾದರೆ ಅಲ್ಲಿಂದ ಅವಳನ್ನ ಮನೆಗೆ ಕರದ್ಕೊಂಡು ಹೋಗೋದು. ಇವತ್ತು ಏನ್ಮಾಡ್ತಾಳೋ ಗೊತ್ತಿಲ್ಲ. ನನ್ನ ಗಂಡ ಇವತ್ತು ಊರಲ್ಲಿ ಇಲ್ಲ. ನಾನು ಈಗ ಎಲ್ಲಿಗೆ ಹೋಗಬೇಕೋ ಗೊತ್ತಾಗ್ತಿಲ್ಲ. ಸ್ಕೂಲ್‌ಗ್ಯಾಕೆ ರಜ ಕೊಡ್ಬೇಕು…? ಸಂಜೆ ತನಕ ಮಾಮೂಲಿಯಂತೆ ನೋಡ್ಕೋಳ್ಳೋಕೆ ಆಗಲ್ವ?ʼ

***

ಬೆಂಗಳೂರಿನಲ್ಲಿ ಆಮೇಲೂ ಕೆಲವು ಬಾರಿ ಇಂತಹ ಬಾಂಬ್‌ ಸ್ಫೋಟಗಳು ಹಗಲಿನಲ್ಲೇ ಆದವು. ಭಯೋತ್ಪಾದನೆಗೆ ಕಾರಣವಾದವು. ಕೆಲವು ಬಾರಿ ವಿವಿಧ ಕಾರಣಗಳಿಗೆ ಕೆಲವು ಬಡಾವಣೆಗಳಲ್ಲಿ ಇದ್ದಕ್ಕಿದ್ದ ಹಾಗೆ ಯಾವುದಾವುದೋ ಕಾರಣಗಳಿಗೆ ಗಲಭೆಗಳು ಆಗಿವೆ. ಒಂದಷ್ಟು ಜನ ರೊಚ್ಚಿಗೆದ್ದು ಕಲ್ಲು ತೂರಿ, ಬೆಂಕಿ ಹಚ್ಚಿ, ಅವರಿವರಿಗೆ ಹೊಡೆದು ಬಡಿದು ಭಯ ಉಂಟು ಮಾಡಿದ್ದಾರೆ. ಅಲ್ಲಿಗೆ ಪೊಲೀಸರು ಬಂದು ಜನರನ್ನು ನಿಯಂತ್ರಿಸಲು ಯತ್ನಿಸಿದ್ದಾರೆ. ಒಮ್ಮೊಮ್ಮೆ ಅಶ್ರುವಾಯು ಸಿಡಿಸುವುದು, ಲಾಠಿ ಚಾರ್ಜ್‌ ಮಾಡುವುದು ಅಥವಾ ಗುಂಡು ಹಾರಿಸಿದ್ದಾರೆ. ಜನರ ಪ್ರತಿಭಟನೆ, ಗದ್ದಲ, ಗಲಭೆ, ಪೊಲೀಸರಿಂದ ಪ್ರತಿಬಲ ಪ್ರಯೋಗ ಈ ಎಲ್ಲವೂ  ಜನರಲ್ಲಿ ಆತಂಕ, ಗಾಬರಿ, ಭಯ ಉಂಟು ಮಾಡುವುದು ಸಹಜ. ಹೀಗೆಲ್ಲಾ ಆದಾಗ, ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಶಾಲೆಗಳನ್ನು ನಿರ್ವಹಿಸುವವರ ಪಾಡು…! 

ಇಂತಹ ಸಂದರ್ಭಗಳಲ್ಲಿ ಅನೇಕ ಶಾಲೆಗಳು ತಕ್ಷಣವೇ ಪೋಷಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸಿ ʼಬನ್ನಿ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿʼ ಎಂದು ನಿರ್ದೇಶಿಸಿವೆ! ಕೆಲವು ಶಾಲೆಗಳು ಇನ್ನೂ ಮುಂದೆ ಹೋಗಿ ಮಕ್ಕಳನ್ನು ಇಂತಹ ತುರ್ತು ಸಂದರ್ಭಗಳಲ್ಲಿ ಶಾಲೆಯಿಂದ ಮಧ್ಯದಲ್ಲೇ ಕರೆದುಕೊಂಡು ಹೋಗಬೇಕೆಂದರೆ ನೀವೇ ಪೋಷಕರು ಎಂದು ʼಶಾಲೆ ಕೊಟ್ಟಿರುವ ಗುರುತು ಚೀಟಿʼ ತರಬೇಕು ಎಂದು ಏರ್ಪಾಟು ಮಾಡಿದವು. ಅನೇಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು ಕೂಡಾ.  

೨೦೦೦ದಲ್ಲಿ ರಾಜ್‌ಕುಮಾರ್‌ ಅಪಹರಣ ಆಗಿದ್ದ ಸಂದರ್ಭದಲ್ಲಿ ನನಗೆ ಆಗಿದ್ದ ಗಲಿಬಿಲಿ ೨೦೦೮ರಲ್ಲಿ ಆಗಲಿಲ್ಲ. ನಿಜ. ಕಾರಣ, ಅಷ್ಟು ಹೊತ್ತಿಗೆ ಮಗಳು ಹತ್ತನೇ ತರಗತಿ ದಾಟಿದ್ದಳು. ಮನೆಗೆ ಕ್ಷೇಮವಾಗಿ ಹಿಂದಿರುಗುವ ಬಗೆ ಅವಳಿಗೆ ಗೊತ್ತಿತ್ತು. 

ನಾನು ಏಳನೇ ತರಗತಿಯಲ್ಲಿದ್ದಾಗ, ಆಗ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್‌ ಅಲಿ ಅಹಮದ್ ಅವರು ನಿಧನರಾದ ವಾರ್ತೆ ಶಾಲೆಯ ಪ್ರಾರ್ಥನೆ ಮುಗಿದ ಮೇಲೆ, ನಾವೆಲ್ಲಾ ತರಗತಿಗಳಿಗೆ ಹೋಗಿ ಕುಳಿತ ಮೇಲೆ ಬಂದಿತಂತೆ. ಇನ್ನೇನು, ರಜೆ ಘೋಷಿಸಿದರು. ರಾಷ್ಟ್ರೀಯ ಶೋಕ. ಮತ್ತೊಮ್ಮೆ ಎಲ್ಲರೂ ಬಯಲಿನಲ್ಲಿ ನಿಂತು ಸುದ್ದಿ ಕೇಳಿ, ಮೌನ ಆಚರಿಸಿ ಮನೆಗಳಿಗೆ ಹೆಜ್ಜೆ ಹಾಕಿದೆವು. ಅದು ೧೯೭೭. ಈಗಿನ ಕಾಲದಲ್ಲಿಯಷ್ಟು ಗಾಬರಿಯಿರಲಿಲ್ಲ. ಆದರೂ ಆಗಾಗ್ಗೆ ಯಾರಾದರೂ ಗಣ್ಯರು ನಿಧನರಾದಾಗ ಸರ್ಕಾರ ಧಿಡೀರ್‌ ಎಂದು ರಜೆ ಘೋಷಿಸುವ ಪರಿಪಾಟ ಈಗಲೂ ನಿಂತಿಲ್ಲ. 

ಮಂಡ್ಯದಲ್ಲಿ ಒಮ್ಮೆ ರೈತರ ಹಕ್ಕುಗಳಿಗಾಗಿ ಒಂದು ಹೋರಾಟ ನಡೆದಿತ್ತು. ಕೇವಲ ಘೋಷಣೆಗಳನ್ನು ಮಾತ್ರ ಕೂಗಿ ಪ್ರತಿಭಟನೆಗೆ ಕುಳಿತ್ತಿದ್ದ ಗುಂಪು ಅದಾವುದೋ ಕಾರಣಕ್ಕೆ ಕೆರಳಿತ್ತು. ಇದ್ದಕ್ಕಿದ್ದ ಹಾಗೆ ಕಲ್ಲು ತೂರಾಟ, ವಾಹನಗಳನ್ನು ಪುಡಿಗುಟ್ಟಿಸುವುದು, ಬೆಂಕಿ ಹಚ್ಚುವ ತನಕ ಹೋಯಿತು. ಪೊಲೀಸ್‌ ಬಲ ಪ್ರಯೋಗಕ್ಕೆ ಇಳಿದರು. ಜನ ಓಡಿದರು. ಪ್ರತಿಭಟನಾಕಾರರು ಹತ್ತಿರದಲ್ಲೇ ಇದ್ದ ಶಾಲೆಯ ಮೈದಾನದಲ್ಲಿ ಸೇರಿಕೊಂಡರು. ಅಲ್ಲಿಗೂ ಹೋದ ಪೊಲೀಸರು ಲಾಠಿ ಎತ್ತಿದ್ದರು. ಕೆ

ಲವು ಪ್ರತಿಭಟನಾಕಾರರು ಶಾಲಾ ಕಟ್ಟಡವನ್ನೂ ಹೊಕ್ಕಿದ್ದರು. ತರಗತಿಗಳಿಗೆ ನುಗ್ಗಿದ್ದವರನ್ನು ಹೊರಗೆಳೆದುಕೊಂಡು ಬಂದು ಪೊಲೀಸರು ಲಾಠಿ ಆಡಿಸಿದರು. ಇಂತಹದೊಂದು ಕಣ್ಣಮುಂದೆಯೇ ಆದದ್ದು ಅನೇಕ ಮಕ್ಕಳಿಗೆ ಗಾಬರಿ ಭಯ ಉಂಟು ಮಾಡಿತು. ಶಿಕ್ಷಕರಿಗೆ ದಿಗ್ಭ್ರಮೆ. ಈ ವಿಚಾರ ಕೇಳಿದ ಪೋಷಕರಿಗೆ ಜಂಘಾಬಲವೇ ಉಡುಗಿ ಹೋದಂತೆ. ಒಂದಷ್ಟು ದಿನ ಶಾಲೆಯನ್ನೇ ಮುಚ್ಚಿಬಿಟ್ಟಿದ್ದರು. 

ವಾಸ್ತವವಾಗಿ ಆ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಒಂದಷ್ಟು ಕಾಲ ವ್ಯಕ್ತಿಗತ, ವೃಂದ ಮತ್ತು ಸಮೂಹ ಆಪ್ತಸಮಾಲೋಚನೆ ಸಹಾಯ ಮಾಡಬೇಕಿತ್ತು. 

***

ಬೆಂಗಳೂರಿನಲ್ಲಿ ೨೦೦೮ರಲ್ಲಿ ಬಾಂಬ್‌ಗಳು ಸಿಡಿದ ನಂತರ ತನಿಖೆಗಳು ನಡೆಯಿತು. ಒಂದಷ್ಟು ಜನರ ಬಂಧನ, ವಿಚಾರಣೆ, ಬಾಂಬ್‌ ಸ್ಫೋಟದ ಹಿಂದಿನ ವಿಚಾರ, ಪ್ರಚಾರ, ತರ್ಕ ನೂರೆಂಟು ನಡೆದವು. ಇವೆಲ್ಲದರ ನಡುವೆ ನನ್ನ ಗಮನ ಸೆಳೆದದ್ದು,  ಬೆಂಗಳೂರಿನ ಐ.ಟಿ. ಕಂಪನಿಗಳ ಮೇಲೆ ಈ ಬಾಂಬ್‌ ಸ್ಫೋಟದ ಪರಿಣಾಮ ಏನು ಎಂದು ಪತ್ರಿಕೆಗಳಲ್ಲಿ ಬಂದ ಹತ್ತಾರು ವರದಿಗಳು. ಬಾಂಬ್‌ ಸ್ಫೋಟವಾದ ಬೆನ್ನಲ್ಲೇ, ಸರ್ಕಾರವೇ ಮುಂದೆ ನಿಂತು ಹೇಳಿದ್ದು, ‘ಈ ಬಾಂಬ್‌ ಸ್ಫೋಟ ಐ.ಟಿ. ಕಂಪನಿಗಳನ್ನು ಗುರಿಯಾಗಿಸಿ ಆಗಿದ್ದಲ್ಲʼ. ದೊಡ್ಡ ದೊಡ್ಡ ಐಟಿ ಕಂಪನಿಗಳೂ ಕೊಟ್ಟ ಹೇಳಿಕೆ, ‘ಈ ಬಾಂಬ್‌ ಸ್ಫೋಟದಿಂದ ತಮ್ಮ ಕಂಪನಿಗಳ ಮೇಲೆ ಏನೂ ಪ್ರಭಾವವಿಲ್ಲʼ. ಆದರೆ ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ನನ್ನದೇ ಗೆಳೆಯರು, ಬಂಧುಗಳು ಹೇಳಿದ್ದು, ‘ಅಲ್ಲೆಲ್ಲೋ ಬಾಂಬ್‌ ಹೊಡೆದ ತಕ್ಷಣವೇ ಉದ್ಯೋಗಿಗಳಲ್ಲಿ ಬಹುತೇಕರು ಮನೆಗೆ ಹೋಗ್ತೀವಿ ಅಂತ ಎದ್ದಿದ್ದರುʼ ಎಂದು. ಅದೇ ಸಮಯದಲ್ಲಿ ಶೇರು ಮಾರುಕಟ್ಟೆಯಲ್ಲಿ ಬೆಲೆ ಧಿಡೀರ್‌ ಎಂದು ಇಳಿಯಿತಂತೆ. ಆ ಕಾಲಕ್ಕೆ ಸ್ವಲ್ಪ ಇಳಿಜಾರಿಯಲ್ಲಿದ್ದ ಐಟಿ ಕಂಪನಿಗಳ ಸಾಕಷ್ಟು ಸಂಪತ್ತು ಕೆಲವೇ ಗಂಟೆಗಳಲ್ಲಿ ಕರಗಿತ್ತಂತೆ. ಈ ಬಾಂಬ್‌ ಪ್ರಕರಣ ಆದ ಕೆಲವೇ ಗಂಟೆಗಳಲ್ಲಿ ಕೇಂದ್ರದ ಗೃಹ ಸಚಿವರು ʼಬೆಂಗಳೂರಿನಲ್ಲಿರುವ ಐಟಿ ಕಂಪನಿಗಳಿಗೆ ಮುಂದಿನ ದಿನಗಳಲ್ಲಿ ವಿಶೇಷವಾದ ಭದ್ರತೆಯನ್ನು ಒದಗಿಸಲಾಗುತ್ತದೆʼ ಎಂದು ಹೇಳಿಕೆ ಕೊಟ್ಟಿದ್ದರು!

ಆಗ ಇಂತಹದೊಂದು ಚಿಂತನೆ, ಆಲೋಚನೆಯ ಹೇಳಿಕೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಅಥವಾ / ಮತ್ತು ಶಿಕ್ಷಣ ಸಚಿವರು, ಜೊತೆಗೆ ಗೃಹ ಸಚಿವರೇ ʼಮಕ್ಕಳು, ಶಾಲೆʼಗಳ ಬಗ್ಗೆ ಕೊಡಲಿಲ್ಲವಲ್ಲ ಎಂದು ನಿಜವಾಗಿಯೂ ನಾನು ಯೋಚಿಸಿದ್ದೆ. ಕೆಲವು ಸ್ನೇಹಿತರು, ಸಮಾನ ಮನಸ್ಕರ ಬಳಿ ಹೇಳಿಕೊಂಡಿದ್ದೆ ಕೂಡಾ. ಗಲಭೆಗಳಾದರೆ ಮಕ್ಕಳನ್ನು ಶಾಲೆಗಳು ಮತ್ತು ಪೊಲೀಸರು, ಒಟ್ಟಿನಲ್ಲಿ ಸರ್ಕಾರ ಹೇಗೆ ನಡೆಸಿಕೊಳ್ಳಬೇಕು. ಯಾವುದೇ ಮಕ್ಕಳಿಗೆ ತೊಂದರೆಯಾಗದಂತೆ, ಪೋಷಕರಿಗೆ ಗಲಿಬಿಲಿಯಾಗದಂತೆ ಯಾರಿಗೂ ಅಡಚಣೆಯಾಗದಂತೆ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಂಡು ಅವರವರ ಮನೆಗಳಿಗೆ ತಲುಪಿಸುವ ಖಾತರಿಯನ್ನು ಕೊಡುವುದು ಹೇಗೆ? ಈ ಬಗ್ಗೆ ಏನಾದರೂ ಚಿಂತನೆ ಇದೆಯೆ? ನೀತಿ ನಿಯಮ ರೂಪಿಸಲಾಗಿದೆಯೆ?

ಯೂರೋಪು, ಅಮೇರಿಕ, ಕೆನಡಾದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದು ಶಾಲೆಗಳಿಗೆ ನುಗ್ಗಿ ಮಕ್ಕಳನ್ನು ಕೊಂದ ಸುದ್ದಿಯನ್ನು ಆಗಾಗ್ಗೆ ಓದಿರುತ್ತೇವೆ. ಕೆಲವು ಚಲನಚಿತ್ರಗಳಲ್ಲಿ ಭಯೋತ್ಪಾದಕರು ಶಾಲಾ ಮಕ್ಕಳನ್ನು ಒತ್ತೆ ಇಟ್ಟುಕೊಳ್ಳುವ ಕತೆ ನೋಡಿರುತ್ತೇವೆ. ನೈಜೀರಿಯಾ, ಇಥಿಯೋಪಿಯಾದ ಶಾಲೆಗಳ ಮೇಲೆ ಉಗ್ರರು ದಾಳಿ ಮಾಡಿ ಮಕ್ಕಳನ್ನು ಅಪಹರಣ ಮಾಡಿದ ಸುದ್ದಿ ಓದಿದಾಗ ನಾವು ಇಲ್ಲೇ ನಡುಗಿದ್ದೇವೆ. ನೊಬೆಲ್‌ ಪ್ರಶಸ್ತಿಗೆ ಭಾಜನಳಾದ ಹೆಣ್ಣು ಮಕ್ಕಳ ಹಕ್ಕು, ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲಳ ಬದುಕಿನಲ್ಲಿ ಆದ ದಾಳಿ ಜನಜನಿತ. ಭಾರತದಲ್ಲಿ ಇಂತಹ ಪ್ರಕರಣಗಳು ಅಷ್ಟಿಲ್ಲ ಅಥವಾ ವರದಿಯಾಗಿಲ್ಲ. 

ಮಳೆಗೆ ಶಾಲೆಯ ಹೆಂಚಿನ ಮಾಡು ಸೋರುವುದು ಅಥವಾ ಇನ್ನೂ ದೊಡ್ಡ ಮಳೆಗಳಾದಾಗ ಪ್ರವಾಹದ ನೀರು ಶಾಲೆಯ ಕೋಣೆಗಳಿಗೆ ನುಗ್ಗುವುದು, ಇಲ್ಲವೇ ಶಾಲೆಗಳ ಕಟ್ಟಡಗಳು ಕುಸಿದು ಬೀಳುವುದು, ಶಾಲೆಯಲ್ಲಿಟ್ಟ ಮಧ್ಯಾಹ್ನದ ಊಟದ ಆಹಾರ ಧಾನ್ಯ ತಿನ್ನಲು ಹೆಗ್ಗಣಗಳು ಓಡಾಡುವುದು, ಅದನ್ನು ಹಿಡಿಯಲು ಹಾವು ನುಗ್ಗುವುದು… ಶಾಲೆಯ ತರಗತಿಯ ಕಿಟಕಿಯ ಕಂಬಿಗೆ ಅಕ್ಕಪಕ್ಕದವರು ತಮ್ಮ ಹಸು, ಮೇಕೆ, ಎತ್ತು ಕಟ್ಟುವುದು… ಇಂತಹವನ್ನು ನೋಡಿರುತ್ತೇವೆ, ಕೇಳಿರುತ್ತೇವೆ.  

ಪ್ರಜೆಗಳಾದ ಮಕ್ಕಳಿಗೂ ಹಕ್ಕುಗಳಿವೆ, ಆ ಹಕ್ಕುಗಳನ್ನು ಗೌರವಿಸುತ್ತಲೇ ರಕ್ಷಿಸುವ ಜವಾಬ್ದಾರಿ ಸಮಾಜ ಮತ್ತು ಸರ್ಕಾರದ್ದು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೨೬ ಮಕ್ಕಳಿಗೆ ಯಾವುದೇ ನಿರ್ಲಕ್ಷ್ಯವಿಲ್ಲದೆ ಸಾಮಾಜಿಕ ಭದ್ರತೆ, ರಕ್ಷಣೆ ಒದಗಿಸಲು ಸರ್ಕಾರಗಳನ್ನು ಆಗ್ರಹಿಸುತ್ತದೆ. ಮಕ್ಕಳಿಗೆ ಎಂತಹದೇ ಮಾನಸಿಕ ನೋವು, ಕಿರುಕುಳ, ಹೆದರಿಕೆ ಆಗದಂತಹ ಸಾಮಾಜಿಕ ಪರಿಸರವನ್ನು ಸ್ಥಾಪಿಸಲೂ ವಿಶ್ವಸಂ‍ಸ್ಥೆ ಆಗ್ರಹಿಸುತ್ತದೆ. ಭಾರತ ೨೦೧೩ರಲ್ಲಿ ಹೊರಡಿಸಿರುವ ‘ರಾಷ್ಟ್ರೀಯ ಮಕ್ಕಳ ನೀತಿʼಯಂತೂ ದೇಶದ ಎಲ್ಲ ಮಕ್ಕಳಿಗೆ ಎಂತಹದೇ ಆತಂಕ, ತೊಂದರೆ, ಹಿಂಸೆ ಇಲ್ಲದ ಬಾಲ್ಯವನ್ನು ಖಾತರಿ ಪಡಿಸುತ್ತೇವೆ ಎಂದು ಮಾತು ಕೊಟ್ಟಿದೆ. 

ಇಂತಹವನ್ನು ಶಾಲಾ ಮಕ್ಕಳಿಗೆ ಖಾತರಿ ಮಾಡುವುದು ಹೇಗೆ?

ಶಿಕ್ಷಕ ವರ್ಗ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಮಕ್ಕಳ ಹಕ್ಕುಗಳನ್ನು ಕುರಿತು ನಾವು ನಡೆಸುವ ತರಬೇತಿ, ಕಾರ್ಯಾಗಾರಗಳಲ್ಲಿ ‘ಮಕ್ಕಳ ಹಕ್ಕುಗಳ ದೃಷ್ಟಿಕೋನʼ ಎಂಬ ಚರ್ಚೆ ಮುಖ್ಯವಾದುದು. ಇದೊಂದು ರೀತಿ ಮಕ್ಕಳ ಹಕ್ಕುಗಳ ಕನ್ನಡಕ ಹಾಕಿಕೊಂಡು, ವಯಸ್ಕರ ಅನುಭವ, ಜವಾಬ್ದಾರಿ, ತಿಳಿವಳಿಕೆ ಇಟ್ಟುಕೊಂಡು ಶಾಲೆಯ ಆವರಣದಲ್ಲಿ ಮತ್ತು ಆಟದ ಮೈದಾನ ಮತ್ತು ವಿವಿಧಡೆ ನೋಡುವಂತೆ, ಓಡಾಡುವಂತೆ ಮತ್ತು ಇತರ ವಯಸ್ಕರನ್ನು ಗಮನಿಸುವಂತೆ ಕಲ್ಪಿಸಿಕೊಳ್ಳುವುದು (ಸಿಮ್ಯುಲೇಷನ್).‌ (ನೀವೂ ಒಮ್ಮೆ ಹೀಗೆ ಪ್ರಯತ್ನಿಸಿ).  ಇಂತಹ ಅನೇಕ ಚರ್ಚೆಗಳಲ್ಲಿ, ಶಾಲೆಗಳ ನೀರಿನತೊಟ್ಟಿಗೆ ಮಕ್ಕಳು ಬೀಳುವುದು, ವಿದ್ಯುತ್‌ ಆಘಾತವಾಗುವುದು, ಲಡ್ಡಾಗಿದ್ದರೂ ಬಿಡದೆ ಬಳಸುವ ಮೇಜು ಕುರ್ಚಿ ಮುರಿದು ಬೀಳುವುದು, ಮಹಡಿಯಿಂದ ಮಕ್ಕಳು ಆಯತಪ್ಪಿ ಬೀಳುವುದು, ಶಾಲಾ ವಾಹನದ ಅಪಘಾತ, ಮಕ್ಕಳಿಗೆಂದು ತಯಾರಿಸಿದ್ದ ಆಹಾರ ವಿಷವಾಗುವುದು… ೩೧ ಜುಲೈ ೨೦೦೦ದ ನನ್ನ ಅನುಭವ ಪ್ರಾಸಂಗಿಕವಾಗಿ ಬಂದು ಹೋಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾದವರೂ ತಮ್ಮ ಬಾಲ್ಯದ ಮತ್ತು ತಮ್ಮ ಶಾಲೆಗಳಲ್ಲಿ ಆದದ್ದು, ತಾವು ಓದಿದ್ದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಇಂತಹ ಮಾತುಕತೆಯ ಮುಂದಿನ ಹಂತ ಶಾಲೆಗಳಲ್ಲಿ ‘ಮಕ್ಕಳ ಹಕ್ಕುಗಳ ರಕ್ಷಣಾ ನೀತಿʼಯ ಅವಶ್ಯಕತೆಯತ್ತ ಹೆಜ್ಜೆ ಹಾಕುವುದು.

ಮಕ್ಕಳ ಹಿತದೃಷ್ಟಿ, ಭದ್ರತೆ, ಮಕ್ಕಳ ಪರವಾದ ದೃಷ್ಟಿಕೋನದೊಡನೆ ಮಕ್ಕಳ ರಕ್ಷಣಾ ನೀತಿ ಮತ್ತು ಅದನ್ನು ತಮ್ಮ ಶಾಲೆಗಳಲ್ಲಿ ಅಳವಡಿಸಿ ಜಾರಿ ಮಾಡುವ ಕುರಿತು ಜವಾಬ್ದಾರಿ ಅರಿತುಕೊಳ್ಳಲು ಸಂಬಂಧಿಸಿದವರಿಗೆಲ್ಲ ತರಬೇತಿ ಇಂದಿನ ಅವಶ್ಯಕತೆ. ವಿವಿಧ ಪರಿಸ್ಥಿತಿಗಳು, ಸಂದರ್ಭಗಳು, ಆವರಣಗಳಲ್ಲಿ ಆಡಳಿತ ವರ್ಗ ಮತ್ತು ವಯಸ್ಕರು ಸಮಚಿತ್ತರಾಗಿ ಆಲೋಚಿಸುವುದು ಮತ್ತು ಮಕ್ಕಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವುದೂ ಇದರಲ್ಲಿ ಸೇರಿದೆ.  ಜೊತೆಗೆ ಈ ಕುರಿತು ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೂ ಈ ಎಲ್ಲ ವಿಚಾರಗಳನ್ನು ತಲುಪಿಸಬೇಕಿದೆ.    

***

ಇಷ್ಟೆಲ್ಲಾ ಚರ್ಚೆ ಮಾಡಿದರೂ ಈಗಲೂ ನಾನು ಅಲ್ಲಲ್ಲಿ ಕಾಣುವುದು, ‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡೋಣʼ ಎಂಬಂತಹ ಧೋರಣೆಯನ್ನೇ! ಕರ್ನಾಟಕ ರಾಜ್ಯ ಸರ್ಕಾರ ‘ಶಾಲಾ ಮಕ್ಕಳ ರಕ್ಷಣಾ ನೀತಿ’ಯನ್ನು ಹೊರಡಿಸಿ ಸಾಕಷ್ಟು ವರ್ಷಗಳೇ ಕಳೆದಿವೆ. ಶಾಲಾ ಸಮಯ, ಕಟ್ಟಡ, ಶಿಕ್ಷಕರು ಮತ್ತು ಇತರರ ನೇಮಕ, ತರಬೇತಿ, ಶಾಲೆಯಲ್ಲಿನ ವ್ಯವಸ್ಥೆಗಳು, ಮಕ್ಕಳ ರಕ್ಷಣೆ, ರಜೆ, ಸ್ಕೂಲ್‌ ಬಸ್‌, ಮಕ್ಕಳ ಮೇಲೆ ಆಗಬಹುದಾದ ದೌರ್ಜನ್ಯ, ಹಿಂಸೆ, ಶಿಕ್ಷೆ, ಶೋಷಣೆ, ತಾರತಮ್ಯ, ಅವಮಾನ, ಹೀಗೆ ಹತ್ತು ಹಲವು ಸಂಗತಿಗಳಲ್ಲಿ ‘ಏನನ್ನು ಮಾಡಬೇಕು, ಏನು ಮಾಡಬಾರದುʼ ಎನ್ನುವ ಸ್ಪಷ್ಟ ನಿರ್ದೇಶನಗಳಿವೆ. 

ಆದರೂ ಈ ‘ನೀತಿಯನ್ನುʼ ಒಪ್ಪಿಕೊಳ್ಳುವ, ಅಳವಡಿಸಿಕೊಳ್ಳುವ ಮನೋಭಾವ ಇನ್ನೂ ಅಷ್ಟಾಗಿ ಬೆಳೆದಿಲ್ಲ. ‘ನಮ್ಮ ಶಾಲೆಯಲ್ಲಿ ಹೀಗೆಲ್ಲಾ ಆಗುವುದಿಲ್ಲ. ನಮ್ಮ ವ್ಯವಸ್ಥೆ ಅತ್ಯುತ್ತಮವಾಗಿದೆ, ನಮ್ಮ ಶಿಕ್ಷಕ ವರ್ಗ ಬಹಳ ಒಳ್ಳೆಯವರು, ನಮ್ಮ ಸಮುದಾಯದಲ್ಲಿ ಇಂತಹದೆಲ್ಲಾ ಆಗುವುದಿಲ್ಲ. ನಮ್ಮ ಸರ್ಕಾರ ಹೀಗೆಲ್ಲಾ ಆಗಲು ಬಿಡುವುದಿಲ್ಲ. ನಮ್ಮ…ʼ 

ಈ ನೀತಿಯನ್ನು ಒಮ್ಮೆ ಪರಿಶೀಲಿಸಲಾದರೂ, ಎಲ್ಲ ಶಾಲೆಗಳು, ಸಮುದಾಯಗಳು ‘ಶಾಲಾ ಮಕ್ಕಳ ರಕ್ಷಣಾ ನೀತಿʼಯ ಕನ್ನಡಿಯೊಳಗೆ ತಮ್ಮನ್ನು ಕಾಣಬೇಕು.  

ಮುಂದಿನ ಬಾರಿ ಉಚ್ಚ ನ್ಯಾಯಾಲಯದಲ್ಲೋ, ಸರ್ವೋಚ್ಚ ನ್ಯಾಯಾಲಯದಲ್ಲೋ ಯಾವುದೊ ಮುಖ್ಯ ವಿಚಾರಕ್ಕೆ ತೀರ್ಪು ಬಂದಾಗ, ಯಾರೋ ಮುಖ್ಯರೋ, ಅಮುಖ್ಯರನ್ನೋ ಬಂಧಿಸಿದಾಗ ಅಥವಾ ದುರಾದೃಷ್ಟವಶಾತ್ ಯಾರೋ ಕೊಂದಾಗ, ಶಾಲೆಗಳಿಗೆ ರಜೆ ಘೋಷಿಸಿ ಮುಚ್ಚುವ ಮೊದಲು ಇದು ಮಕ್ಕಳ ಹಿತ ಕಾಪಾಡುತ್ತದೋ ಇಲ್ಲವೋ ಎಂದು ಪರಾಮರ್ಶೆ ಮಾಡಬೇಕು. ಇದು ಕೇವಲ‌ ಶಾಲೆಗಳದ್ದೊಂದೇ ಜವಾಬ್ದಾರಿಯಲ್ಲ. ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯೂ ಸೇರಿದಂತೆ ಸ್ಥಳೀಯ ಆಡಳಿತದ ಹೊಣೆಯೂ ಮುಖ್ಯವಾಗಿದೆ.

ನಿಮ್ಮ ಆಲೋಚನೆ ಈಗ ಎತ್ತ ಸಾಗಿದೆ?  

‍ಲೇಖಕರು Admin

July 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: