ಶಾಲಿನಿ ರುದ್ರಮುನಿ ಓದಿದ ‘ಮಂಜಿನ ಮಧುಶಾಲೆ’

ಶಾಲಿನಿ ರುದ್ರಮುನಿ 

ನಿತ್ಯ ಪರಿವರ್ತನಾ ಶೀಲ ಸಮಾಜಕ್ಕೆ ಸಾಹಿತ್ಯ ಯಾವಾಗಲೂ ದಿಕ್ಸೂಚಿ ಮತ್ತು ಮಾರ್ಗದರ್ಶಿ. ಬರವಣಿಗೆ ತನ್ನ ಅನುಭವವನ್ನ ತನ್ನೊಳಗು ವಿಸ್ತರಿಸುತ್ತಾ ಅದನ್ನ ತನ್ನ ಬರಹದ ಮೂಲಕ ಇಡೀ ಲೋಕಾಗುವ ಪ್ರಕ್ರಿಯೆಗೆ ಲೇಖಕರನ್ನ ಪ್ರೇರೇಪಿಸುತ್ತದೆ. ಕುವೆಂಪು ಅವರ ಮಾತಿನಂತೆ “ಕವಿಯ‌ ಹೃದಯ ಒಂದು ವೀಣೆ ಲೋಕವದನು ಮಿಡಿವುದು” ಅಂತ ಹೇಳಿದಾರೆ. ಸೃಜನಶೀಲ ಸಾಹಿತಿಗೆ ಲೋಕದ ಎಲ್ಲ ಆಗು ಹೋಗುಗಳಿಗು ಸ್ಪಂದಿಸಿ ಅದೇ ಅಂತಃಕರಣದಿಂದ ಬರವಣಿಗೆಯ ಮುಖೇನಾ ಓದುಗರನ್ನ ತಲುಪುತ್ತಾನೆ.

ಆತ್ಮೀಯ ಗೆಳತಿ ಡಾ ಶುಭಶ್ರೀ ಪ್ರಸಾದ ಕೂಡ ಈಗಾಗಲೇ ಕನ್ನಡ ಸಾರಸ್ವತಲೋಕಕ್ಕೆ ತನ್ನದೇ ಆದ ಕೊಡುಗೆಗಳನ್ನ ಸಮರ್ಪಿಸುತ್ತಿದ್ದಾರೆ. ತಮ್ಮ ಕೃತಿಗಳ ಮೂಲಕ, ತಮ್ಮ ಚೆಂದದ ದನಿಯ ನಿರೂಪಣೆ ಮತ್ತು ದೂರದರ್ಶನ /ಆಕಾಶವಾಣಿಯ ಚಿಂತನ ಕಾರ್ಯಕ್ರಮದ ಮೂಲಕ, ಸಹೃದಯ ಸಾಹಿತ್ಯಬಂಧುಗಳಿಗೆಲ್ಲ ಪರಿಚಿತರು. ಅವರ ಕಥೆಗಳು, ಕವನಗಳು, ಲಲಿತ ಪ್ರಬಂಧಗಳು ಬ್ಯಾಂಕ್ ಡೈರಿಯ ಬರಹಗಳೆಲ್ಲ ನಾಡಿನ ಅನೇಕ ಪ್ರತಿಕೆಗಳಲ್ಲಿ ಪ್ರಕಟವಾಗಿ ತನ್ನದೇ ಓದುಗರ ಬಳಗವನ್ನ ಆಕರ್ಷಿಸಿವೆ ಮತ್ತು ತುಂಬಾ ಅಪ್ಯಾಯತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಅವರ ಬರಹಗಳನ್ನ ತುಂಬಾ ಅಸ್ಥೆಯಿಂದ ಓದುವ ಸಾಲಿನಲ್ಲಿ ನಾನೂ ಒಬ್ಬಳು. ಅವರು ಕೃಷಿ ಮಾಡಿದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಒಂದು ಅಂಶ ಸ್ಪಷ್ಟವಾಗಿ ಗೋಚರಿಸತ್ತೆ. ಅವರ ನೇರವಂತಿಕೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ತಮ್ಮ ಅನುಭವಗಳನ್ನ ಬರಹಗಳ ಮೂಲಕ ಅಭಿವ್ಯಕ್ತಗೊಳಿಸುವ ಚೆಂದದ ಶೈಲಿ ಇವರಿಗಿದೆ. ಕಲ್ಪನೆಗಳಿಗೆ ಹೆಚ್ಚು ಒತ್ತು ಕೊಡದೆ, ವಾಸ್ತವಿಕ ನೆಲೆಗಟ್ಟಿನಲ್ಲಿ ವಿನಮ್ರವಾಗಿ, ಬರೆವುದು ಇವರ ಶೈಲಿ. ಬ್ಯಾಂಕ್ ಉದ್ಯೋಗಿಗಳಾಗಿ ವೃತ್ತಿಯಾಚೆ ಈಚೆಗಿನ ಒತ್ತಡಕ್ಕೆ ಮಣಿಯದೆ ತಮ್ಮ ಭಾವಧಾತುವಿಗೆ ದಕ್ಕಿದ ಎಲ್ಲರನ್ನೂ ಎಲ್ಲವನ್ನೂ ಅದು ವ್ಯಕ್ತಿಯಾಗಿರಲಿ, ಪ್ರಾಣಿಗಳಾಗಿರಲಿ, ಘಟನೆಗಳಾಗಿರಲಿ, ನೇರವಾಗಿ ಅಷ್ಟೇ ಅಪ್ಯಾಯತೆಯಿಂದ ಸೂಕ್ಷ್ಮ ಗ್ರಹಿಕೆಯಿಂದ ಅತ್ಯಂತ ಸಂಯಮದಿಂದ, ಸಹಜವಾಗಿ ಸರಳವಾಗಿ ತಮ್ಮ ಅನುಭವಗಳ ಅನುಭೂತಿಯನ್ನ ಬರವಣಿಗೆಯಲ್ಲಿ ದಾಖಲಿಸುತ್ತಾ ಹೋಗ್ತಾರೆ.

ಈಗಾಗಲೇ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಪ್ರವಾಸ ಕಥನಗಳು ತನ್ನದೇ ಆದ ಕೊಡುಗೆಗಳನ್ನ ಕೊಟ್ಟಿವೆ. ಪೂರ್ಣಚಂದ್ರ ತೇಜಸ್ವಿಯವರ ʼಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿʼ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ʼಅಮೇರಿಕದಲ್ಲಿ ಗೊರೂರುʼ, ಶಿವರಾಮ ಕಾರಂತರ ʼಅಪೂರ್ವ ಪಶ್ಚಿಮʼ ಅಪೂರ್ವವಾದ ಪ್ರವಾಸ ಕಥನಗಳು. ಅದರಲ್ಲೂ ಶಿವರಾಮ ಕಾರಂತರ ʼಹುಚ್ಚು ಮನಸ್ಸಿನ ಹತ್ತು ಮುಖʼ ಆತ್ಮಕಥನ ಬಹುತೇಕ ಪ್ರವಾಸ ಕಥನಗಳನ್ನೊಳಗೊಂಡಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ʼಅಮೇರಿಕಾ ಅಮೇರಿಕಾʼ, ವಿ ಕೃ ಗೋಕಾಕ ಅವರ ಬರೆವ ಓಲೆಗಳ ಪ್ರವಾಸ ಕಥನ, ಕೆ ಆರ್ ಕಾರಂತರ ‘ಪ್ರವಾಸಿಯ ಪತ್ರಗಳುʼ ಇನ್ನೂ ಮುಂತಾದ ಪ್ರವಾಸ ಕಥನಗಳು ಕನ್ನಡ ಸಾಹಿತ್ಯಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿ ವಿಜಂಭಿಸುತ್ತಿವೆ. ಜೊತೆಗೆ ಓದುಗರನ್ನ ತಾದಾತ್ಮ್ಯವಾಗಿ ಓದಿಸಿಕೊಂಡು ಹೋಗುವಂತಹ ಪ್ರವಾಸ ಕಥನಗಳು. ಬಿ ಜಿ ಎಲ್ ಸ್ವಾಮಿಯವರ ‘ಅಮೇರಿಕಾದಲ್ಲಿ ನಾನು’, ಜೊತೆಗೆ ಕೆ ಬಿ ಪ್ರಭುಪ್ರಸಾದ ಅವರ ʼದೇಗುಲದ ಹಾದಿಯಲ್ಲಿʼ ಪ್ರೌಢಶಾಲೆಯಲ್ಲಿ ಓದಿದ ಪ್ರವಾಸ ಕಥನಗಳು ಮತ್ತು ನನ್ನ ಓದನ್ನ ಮತ್ತೆ ಮತ್ತೆ ಗಟ್ಟಿಗೊಳಿಸಿದ ಆಕರ್ಷಕ ಕೃತಿಗಳು ಇವು.

ಮಹಿಳಾ ಪ್ರವಾಸ ಕಥನಗಳು ಸಹ ಕನ್ನಡ ಸಾರಸ್ವತಲೋಕದಲ್ಲಿ ಲೋಕಾರ್ಪಣೆಗೊಂಡು ಸಾಧನೆ ಕೌಶಲಗಳಿಂದ ಗಮನಸೆಳೆದಿವೆ. ಇತ್ತೀಚೆಗಷ್ಟೇ ಹುಬ್ಬಳ್ಳಿಯ ಶಿವಲಿಂಗಮ್ಮ ಕಟ್ಟಿಯವರನ್ನ ಭೇಟಿಯಾದಾಗ ಅವರ ಪ್ರವಾಸ ಕಥನ ʼಬೆಳಕಿನೆಡೆಗೆʼ ಕೊಟ್ಟರು ಓದಿದೆ. ಹಾಗೆ ನೇಮಿಚಂದ್ರ ಅವರ ʼಪೆರುವಿನ ಪವಿತ್ರ ಕಣಿವೆʼ ಮತ್ತು ʼಒಂದು ಕನಸಿನ ಪಯಣʼ, ಮತ್ತು ಹೇಮಲತಾ ಮಹಿಷಿಯರೊಂದಿಗಿನ ಯುರೋಪಿನ ಪ್ರವಾಸ ಕಥನ ಇತ್ತೀಚಿನ ನನ್ನ ಓದು. ನಾನು ಓದುವ ಹವ್ಯಾಸವುಳ್ಳವಳಾಗಿ ನನ್ನನ್ನು ಬಹು ಆಕರ್ಷಿಸುವುದು ಕಾದಂಬರಿ, ಆತ್ಮಕಥನಗಳು ಮತ್ತು ಪ್ರವಾಸಕಥನಗಳು. ಪ್ರವಾಸಕಥನಗಳು ಅತ್ಯಂತ ಖುಷಿ ಕೊಡುವ ಓದು ನನಗೆ. ದೇಶ ವಿದೇಶಗಳ ಸುತ್ತಾಟ ನಮ್ಮ ಹಣ ಮತ್ತು ಸಮಯದ ಹೊಂದಾಣಿಕೆಗಳನ್ನ ಕೇಳತ್ತೆ. ಅದೇ ಇಂತಹ ಪ್ರವಾಸ ಕಥನಗಳು ಎರಡನ್ನೂ ಉಳಿಸಿ ಮುಂದಿನ ನಮ್ಮ ಸುಖ ಪಯಣಕ್ಕೆ ಮಾರ್ಗದರ್ಶಕವಾಗಿ ನಿಲ್ಲುತ್ತೆ.

ಇತ್ತೀಚಿನ ದಿನಮಾನಗಳಲ್ಲಿ ಪ್ರವಾಸ ಎನ್ನುವುದು ನಮ್ಮ ಸಂಪರ್ಕ ಮಾಧ್ಯಮಗಳಿಂದ ಇಡೀ ವಿಶ್ವವೇ ಕುಗ್ಗಿದಂತೆ ಕಾಣತ್ತೆ. ಇಡೀ ಪ್ರಪಂಚವನ್ನ ಸುತ್ತಿ ಬರುವವರ ಸಂಖ್ಯೆ ತುಸು ಹೆಚ್ಚೆ ಎನ್ನಬಹುದು. ಪ್ರವಾಸ ಕಥನಗಳಲ್ಲಿ ಬಹುತೇಕ ನಮಗೆ ನಮ್ಮ ಮತ್ತು ಅನ್ಯ ನೆಲದ ಸಂಸ್ಕೃತಿ, ಜೀವನ ಶೈಲಿ ವಿಧಿ ವಿಧಾನ, ಆಹಾರಪದ್ದತಿ, ನೆಲ ಜಲ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ವೈಜ್ಞಾನಿಕವಾಗಿ ಹೇಗೆಲ್ಲ ಭಿನ್ನವಾದ ಮೌಲ್ಯಗಳು ಮತ್ತು ಏನೆಲ್ಲ ಸಾಮ್ಯತೆಯನ್ನ ಹೊಂದಿವೆ ಎಂಬ ವಿಶ್ಲೇಷಣೆಯಿಂದ, ಪರಿಶೀಲನಾ ದೃಷ್ಟಿಯಿಂದ ಮಾಹಿತಿ ಕಣಜಗಳಾಗಿ ಭಿನ್ನವಾದ ಸಾಹಿತ್ಯಿಕ ನೆಲೆ ಹೊಂದಿರುತ್ತವೆ‌ ಮತ್ತು ಅತ್ಯಂತ ಮಹತ್ವಪೂರ್ಣ ಅನ್ನಿಸುತ್ತವೆ.

ಪಂಪ ಹೇಳಿರುವಂತೆ “ಇದು ನಿಚ್ಚಂ ಪೊಸತುರ್ಣವೊಂಬಲ್ ” ಸಾಗರವು ಯಾವಾಗಲೂ ಬತ್ತದೇ ಇರುವುದರಿಂದ ಅದು ಪ್ರಾಚೀನ, ಜೊತೆಗೆ ಪ್ರತಿನಿತ್ಯ ಹೊಸ ನೀರು ಸಮುದ್ರಕ್ಕೆ ಸೇರುತ್ತಲೇ ಇರತ್ತೆ. ಹಾಗಾಗಿ ಅದು ನಿತ್ಯ ನೂತನ. ಇಂತಹ ಸಾಹಿತ್ಯ ಸಾಗರದ ಚರಿತ್ರೆಗೆ ಶುಭಶ್ರಿಯವರ ಈ ಪ್ರವಾಸ ಕಥನ ಕೊಡುಗೆಯಾಗಿದೆ.

ಶುಭಶ್ರಿಯವರ ಪ್ರವಾಸ ಕಥನ ʼಮಂಜಿನ ಮಧುಪಾತ್ರೆʼ ಮೊದಲ ಪುಟದಿಂದ ಕೊನೆಯಪುಟದವರೆಗು ಮೊಗೆದಂತೆಲ್ಲ ಅಂಗೈಯಲ್ಲಿಟ್ಟ ಮಂಜಿನಂತೆ ತನ್ನ ಅನುಭವದ ಭಾವದೊಳಗೆ ಓದುಗನನ್ನ ಕರಗಿಸಿ ಮತ್ತೆ ಮನದಲ್ಲಿ ಅದೇ ಪಯಣದ ಅನುಭವದ ಅನುಭೂತಿಯಲ್ಲಿ ಘನೀಕರಿಸತ್ತೆ. ಸಹಜವಾಗಿ ನೇರವಾಗಿ ಅಷ್ಟೇ ಸರಳವಾಗಿ ತಮ್ಮ ಅನುಭವವನ್ನ ಇಲ್ಲಿ ದಾಖಲಿಸ್ತಾರೆ. ಅವರ ಅನುಭವದ ಅನುಭೂತಿಯ ಪ್ರತಿ ತುತ್ತನ್ನ ಮಂಜಿನ ಮಧುಪಾತ್ರೆಯಿಂದ ಹದವಾದ ರುಚಿಯೊಂದಿಗೆ ಓದುಗನ ತಾಟಿನಲ್ಲಿ ಅಷ್ಟೇ ಅಪ್ಯಾಯತೆಯಿಂದ ಈ ಕೃತಿಯಲ್ಲಿ ಬಡಿಸಿದ್ದಾರೆ.
ಮಾನವ ಪ್ರವಾಸ ಪ್ರಿಯ. ಪ್ರವಾಸ ಎಂಬುದು ಮಾನವ ಸಹಜ ಗುಣ. ನಮ್ಮ ಸಂಸ್ಕಾರ ಸಂಸ್ಕೃತಿಗಳು ಎಷ್ಟೇ ಮುಂದುವರೆದರು ನಮಗೆ ನಾವಿರುವ ಸ್ಥಳದಿಂದ ಆಚೆ ನೋಡಿ ಬರುವ ಆಸೆ ಕುತೂಹಲ ಎಲ್ಲ.

ಖರೆ! ಈ ಮಂಜಿನ ಮಧುಪಾತ್ರೆಯಲ್ಲಿ ಪ್ರವಾಸ ಕಥನ ಕೃತಿಯಲ್ಲಿ ಇರಲೇಬೇಕಾದ ಬಹುತೇಕ ಪ್ರಾಥಮಿಕ ಅಂಶಗಳೆಲ್ಲವು ಇಲ್ಲಿದೆ. ಇಲ್ಲಿ ಲೇಖಕಿ ತಮಗೆ ಖುಷಿ ಕೊಡುವಂತಹ ನಮ್ಮ ಅನುಭವಕ್ಕೆ ದಕ್ಕಿದ ಭಾವಗಳು, ಬವಣೆಗಳನ್ನೆಲ್ಲ ಯಾರೊಂದಿಗಾದರು ಹಂಚಿಕೊಳ್ಳುವ ಸಹಜ ನಡೆಯಲ್ಲಿ‌‌ ಪ್ರವಾಸಿಗರಿಗೆ ಕೆಲವು ಮಾಹಿತಿಗಳು, ಜೊತೆಗೆ ತಾವು ಮಾಡಿಕೊಂಡ ಪಯಣದ ತಯಾರಿ, ಪಯಣ ಗೊತ್ತಾದ ದಿನಾಂಕದಿಂದ ಪಯಣದ ದಿನದವರೆಗಿನ ಸಿದ್ಧತೆಯಲ್ಲಿನ ಉತ್ಸಾಹ, ಹುಮ್ಮಸ್ಸು. ತಮ್ಮ ನಿತ್ಯದ ಧಾವಂತ ಒತ್ತಡದ ಸಂಗತಿಗಳಿಗೆ ಬ್ರೇಕ್ ಹಾಕಿ, ಶಿಮ್ಲಾ ಪ್ರವಾಸವೇ ಯಾಕೆ ಮತ್ತು ಹೇಗೆಲ್ಲ ಚೇತೋಹಾರಿಕೆ, ಚೈತನ್ಯದಾಯಕವಾಗಿಸಿಕೊಂಡರು. ಜೊತೆಗೆ ತಮ್ಮೊಟ್ಟಿಗೆ ಗೆಳತಿಯನ್ನು ಜೊತೆಯಾಗಿಸಿಕೊಂಡು ಮಾಡಿಕೊಂಡ ತಯಾರಿಗಳ ಪಟ್ಟಿ ನಿಜಕ್ಕೂ‌ ಕುತೂಹಲ, ಖುಷಿ ಕೊಡುವ ಸಂಗತಿಗಳು. ಓದುಗನಲ್ಲಿ ಕೂಡ ಶಿಮ್ಲಾ ಪ್ರವಾಸಕ್ಕೆ ಕೊನೆ ದಿನದವರೆಗು ತಮ್ಮೊಟ್ಟಿಗೆ ಮಾನಸಿಕವಾಗಿ ಸಿದ್ದಗೊಳಿಸ್ತಾರೆ.

ತಮ್ಮ ಆಹಾರಾಭ್ಯಾಸಕ್ಕೆ ಸರಿಹೊಂದುವ ತಿಂಡಿತಿನಿಸುಗಳನ್ನ ಅಸ್ಥೆಯಿಂದ ಜೋಡಿಸಿಟ್ಟುಕೊಳ್ಳುವ ಮುಂಜಾಗ್ರತೆಯ ಕ್ರಮದ ಸಲುವಾಗಿ, ತಕ್ಷಣದ ಹಸಿವನ್ನ ನೀಗಿಸುವ ನಿಟ್ಟಿನಲ್ಲಿ ಮನೆಯಲ್ಲೆ ತಯಾರಿಸಿದ ಮಾವಿನ ತೊಕ್ಕು, ಚಟ್ನಿಪುಡಿ, ಸಾಸ್ ಹೀಗೆ ಸಣ್ಣ ಸಣ್ಣ ಸಂಗತಿಗಳ ಮಾಹಿತಿ ತಿಳಿಸುತ್ತಾರೆ. ಉತ್ತರ ಭಾರತದ ಚಳಿಯ ವಾತಾವರಣಕ್ಕೆ ಬೇಕಾದ ಉಡುಗೆ ತೊಡುಗೆಗಳ ಜೋಡನೆ. ಸಾಕಷ್ಟು ತಯಾರಿಗಳ ಜೊತೆಗೆ ಒಂದಷ್ಟು ಸಂಗ್ರಹಿಸಿ ಇಟ್ಡುಕೊಳ್ಳಲೆಬೇಕಾದ ಪಟ್ಡಿಯನ್ನ ಪ್ರವಾಸಿಗರಿಗೆ ಕೊಡ್ತಾರೆ. ಪಯಣದ ಮೊದಲ ದಿನದ ಅನುಭವೇ ರೋಚಕವಾಗಿ ಕಟ್ಟಿಕೊಡ್ತಾರೆ. ವಿಮಾನ ನಿಲ್ದಾಣದಲ್ಲಾದ ಗಡಬಡ್ , ನಿಗದಿತ ಸಮಯಕ್ಕೆ ವಿಮಾನ ಹತ್ತುವ ಸಮಯದಲ್ಲಿ ಚೆಕ್ ಇನ್ನಲ್ಲಾದ ಅವಾಂತರ. ಅವಸರದಲ್ಲಿ ಓಡಿ ಹೋಗಿ ಕೊನೆಗು ವಿಮಾನದಲ್ಲಿ ನಿರುಮ್ಮಳಾಗಿ ಕುಳಿತ ಕಚಗುಳಿಯ ನಗೆಬುಗ್ಗೆಯ ಅನುಭವ ಓದುಗನಲ್ಲೂ ನಗೆ ಉಕ್ಕಿಸತ್ತೆ. ಜೊತೆಗೆ ಪ್ರವಾಸಿಗರಿಗೊಂದು ಸಮಯ ಪ್ರಜ್ಞೆಯ ಅನುಭವವನ್ನ ಕಾಯ್ದಿರಿಸಿಕೊಳ್ಳುವಂತೆ ಮಾಡತ್ತೆ.

ಬರಿ ಪಯಣದ ನೇರ ವಿವರಣೆ ಕೊಡದೆ ಅಲ್ಲಿನ ಸ್ಥಳ ಪುರಾಣಗಳ ಬಗ್ಗೆ ಮಾಹಿತಿಗಳ ವಿವರಣೆಯೊಟ್ಟಿಗೆ ಚಿತ್ರ ಸಹಿತವಾಗಿ ದಾಖಲಿಸಿದ್ಧಾರೆ ಕೃತಿಯ ಪುಟಗಳಲ್ಲಿ. ಕುಲು, ಮನಾಲಿ ಕಣಿವೆಯ ಬಿಯಾಸ್ ನದಿ ಬಗ್ಗೆ, ವಸಿಷ್ಠ, ಹಿಡಂಬಳ ಬಗ್ಗೆ, ಭೇಟಿ ನೀಡಿದ ದೇವಸ್ಥಾನಗಳು ಅದರ ಶೈಲಿ, ಅಲ್ಲಿನ ಮನೆಗಳ ವಾಸ್ತು ಶೈಲಿ ಬಗ್ಗೆ ಅತ್ಯಂತ ಮನೋಜ್ಞ ವಾಗಿ ಆ ಪರಿಸರದ ಚಿತ್ರಣವನ್ನ ಕಟ್ಟಿಕೊಡ್ತಾರೆ. ಹಿಂದೂ ಪುರಾಣದ ಪ್ರಕಾರ ಮನುಜನ ಹುಟ್ಟಿಗೆ ಕಾರಣನಾದ ಮನುವಿನ ದೇಗುಲದ ಬಗೆಗಿನ ಮಾಹಿತಿಯನ್ನ ದಾಖಲಿಸ್ತಾರೆ.

ಇಡೀ ಪ್ರಕೃತಿಯ ಸೌಂದರ್ಯ “ಸರಳತನವೆಲ್ಲವೂ ಸೌಂದರ್ಯದ ಗಣಿ” ಎಂಬಂತೆ ಅಲ್ಲಿನ ಜನರ ಸರಳ ಜೀವನ ಪ್ರಕೃತಿಗೆ ಹತ್ತಿರವಿರುವ ಅವರ ಬದುಕನ್ನ ತಿಳಿಸಿಕೊಡುವ ಸಂಗತಿಗಳನ್ನ ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಪುರಾಣ ಐತಿಹಾಸಿಕಗಳಲ್ಲಿ ಬರುವ ಸಂಧರ್ಭ ಆ ಸ್ಥಳದ ವಿಶೇಷಗಳನ್ನ ಪ್ರವಾಸಿಗರ ಮನದಲ್ಲಿ ಅಚ್ಚಳಿಯುವಂತೆ ತಿಳಿಸಿದ್ಧಾರೆ. ಜೊತೆಗೆ ಪ್ರಕೃತಿಯಲ್ಲಿನ ಅಚ್ಚರಿಯ ಸಂಗತಿಗಳ ಬಗೆಗಿನ ವಿವರಣೆ ಅದು ಬಿಸಿನೀರು ಮತ್ತು ತಣ್ಣೀರಿನ ಕೊಳಗಳ ಮಾಹಿತಿಯನ್ನ ಕೊಡ್ತಾರೆ. ಮನಾಲಿಯ ಬುದ್ಧಿಸ್ಟ್‌ ಸೊಸೈಟಿ ಬಗೆಗಿನ ಮಾಹಿತಿ ಆ ಹಸಿರಿನೊಂದಿಗೆ ಮನಸ್ಸಿಗೆ ತಂಪೆರೆಯತ್ತದೆ. ಜೊತೆಗೆ ಅಲ್ಲಿನ ಜನರನ್ನ ಮಾತಾಡಿಸಿ ಅವರ ಜೀವನ ಶೈಲಿಯ ತಿಳಿಯುವ ಕುತೂಹಲ ಖುಷಿ ಕೊಡತ್ತೆ. ಪರವೂರಿನಲ್ಲಿ ಮಾತೃ ಭಾಷೆಗೆ ಮನಸೋಲುವ ಬಗೆ ಅಪ್ಯಾಯತೆ ಉಂಟಾಗುತ್ತದೆ.

ಕಣಿವೆಯಲ್ಲಿ ಮಂಜಿನಾಟ ಆಡಿ ಮಕ್ಕಳಂತೆ ಸಂಭ್ರಮಿಸುವುದರ ಜೊತೆಗೆ ಪ್ರಬುದ್ದತೆಯಿಂದ ರೋಚಕವಾಗಿ ಸೋಲಾಂಗ್ ಕಣಿವೆಯನ್ನ ಓದುಗರಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಅಲ್ಲಿಂದ ಚಂಡೀಗಡ ಒಂದು ಸುಂದರ ವ್ಯವಸ್ಥಿತ ನಗರ, ರಾಕ್ ಗಾರ್ಡನ್, ರೋಸ್ ಗಾರ್ಡನಗಳ ವಿವರಣೆ, ಅಲ್ಲಿನ ಸುಸಜ್ಜಿತ ರಸ್ತೆಗಳು ತಮ್ಮ ಅನುಭವ ಎಲ್ಲವನ್ನ ಸವಿವರವಾಗಿ ಸವಿದು ಪ್ರವಾಸಿಗರಿಗೆ ಚಂಡೀಗಡದ ಸೌಂದರ್ಯ ಮತ್ತದರ ಅಚ್ಚುಕಟ್ಟುತನವನ್ನ ಪದಗಳಲ್ಲಿ ಕಟ್ಟಿಕೊಡ್ತಾರೆ. ಮತ್ತೆ ಅದೇ ಉತ್ಸಾಹದಲ್ಲಿ ಓದುಗನಿಗೂ ಆದಷ್ಟು ಬೇಗ ಕುಲು ಮನಾಲಿ ವಲಯದ ಬಗ್ಗೆ ವ್ಯಾಮೋಹ ಉಂಟಾಗಿ ತಾನು ಪ್ರವಾಸ ಕೈಗೊಳ್ಳುವ ಯೋಜನೆಗೆ ಲೇಖಕಿಯ ಬರಹ ಆಪ್ತವಾಗುತ್ತದೆ. ಜೊತೆಗೆ ಅಲ್ಲಿ ಭೇಟಿಯಾದ ಹಸಿಹಸಿ ಬಾಣಂತಿಯ ವಿವರಣೆಗೆ ಮನಸ್ಸು ಒಂದು ಕ್ಷಣ ಆರ್ದ್ರ ಗೊಂಡು ಹಸಿ ಹಸಿಯಾಗತ್ತೆ.

ಪ್ರವಾಸದಲ್ಲಿ ಆದ ಆಯಾಸವೆಲ್ಲವೂ ಕಟ್ಟಿಕೊಡುವ ಪದಗಳಲ್ಲಿ ನಿರಾಯಸವಾಗಿ ವಿವರಿಸಿ. ಅನಿರೀಕ್ಷಿತ ಅನುಭವಗಳಿಂದಾದ ತೊಂದರೆಗಳ ವಿವರಣೆಯೊಟ್ಡಿಗೆ ನಿವಾರಿಸಿಕೊಳ್ಳುವ ಬಗೆಯ ಸಮಯೋಚಿತ ಮಾಹಿತಿಗಳು ಕೂಡ ಇಲ್ಲಿವೆ.

ಪ್ರವಾಸದಲ್ಲಿ ಸವೆದ ದಾರಿಯನ್ನ ಸವಿದ ರೀತಿಯಲ್ಲಿ, ನೇರವಾಗಿ ಸಹಜತನದಲ್ಲಿ ಶುಭಶ್ರಿ ಕೃತಿಯ ಉದ್ದಕ್ಕೂ ಓದುಗನ ಕೈ ಹಿಡಿದು ಪಯಣಿಸುತ್ತಾರೆ. ಒಬ್ಬ ಮಾರ್ಗದರ್ಶಕರಾಗಿ ಪ್ರವಾಸಿಗರಿಗೆ ಕೈಪಿಡಿಯಾಗಿ ಈ ಕೃತಿ ಉಪಯುಕ್ತ ಮಾಹಿತಿಯನ್ನ ಒದಗಿಸುತ್ತದೆ ನಿರುದ್ವಿಗ್ನವಾಗಿ.

‍ಲೇಖಕರು Admin

November 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: