ಶಾರದಾ ಅಂಚನ್ ಓದಿದ ತುಳು ಕಾದಂಬರಿ ‘ದೆಂಗ’

ತುಳು ಮಣ್ಣಿನ ಕಮ್ಮೆನ ಹಾಗು ತಂತ್ರವಿಜ್ಞಾನದ ಅನಾವರಣ

ಶಾರದಾ ಎ ಅಂಚನ್

ಪ್ರತಿಷ್ಠಿತ ಪಣಿಯಾಡಿ ಪುರಸ್ಕೃತ ಕಾದಂಬರಿ ದೆಂಗ -ತುಳು ಭಾಷೆಯಲ್ಲಿ ಉದಿಸಿ ಬಂದ ಒಂದು ಅಪರೂಪದ ಕಾದಂಬರಿ. ಕಾದಂಬರಿಯ ವಿಷಯಗಳ ಬಗ್ಗೆ ಲೇಖಕಿ ಒಂದೂವರೆ ವರುಷಗಳ ಕಾಲ ವಿಶೇಷವಾಗಿ ಅಭ್ಯಸಿಸಿ ಬರೆದಿದ್ದು , ಈ ಕೃತಿಗೆ ಪಣಿಯಾಡಿ ಪ್ರಶಸ್ತಿ ದೊರಕಿದ್ದು ಆಕೆಯ ಶ್ರಮಕ್ಕೆ ಸಿಕ್ಕಿದ ಪ್ರತಿಫಲ ಎನ್ನಬಹುದು. ಈ ಕಾದಂಬರಿ ಓದುತ್ತಿರುವಂತೆ ಅರಿವಾದದ್ದು ತುಳು ಸಂಸ್ಕೃತಿಯ ಚಿತ್ರಣ ಮತ್ತು ಆಧುನಿಕ ಸಮಾಜದ ಅತ್ಯುನ್ನತ ತಂತ್ರವಿಜ್ಞಾನದ ಹೂರಣ .ಈ ಕೃತಿಯನ್ನು ಸ್ವತಃ ಲೇಖಕಿಯೇ ಕನ್ನಡಕ್ಕೂ ಅನುವಾದಿಸಿದರೆ ಕನ್ನಡ ಸಾರಸ್ವತ ಲೋಕದ ಒಂದು ಶ್ರೇಷ್ಠ ಕಾದಂಬರಿಯಾಗಿ ಜನಮಾನಸದಲ್ಲಿ ಉಳಿಯಬಹುದು ಎಂದು ನನ್ನ ಅನಿಸಿಕೆ.

ಕಾದಂಬರಿಯ ಶೀರ್ಷಿಕೆ ದೆಂಗ -ಅಂದರೆ ತುಳುವರ ಅಡುಗೆ ಮನೆಯಲ್ಲಿ ಹಿಂದಿನ ಕಾಲದಲ್ಲಿ ಅಡುಗೆ ಕೋಣೆಯ ಒಲೆಯ ಮೇಲಕ್ಕೆ ಸಮನಾಗಿ ಒಂದು ಹಲಗೆಯನ್ನು ನೇತುಹಾಕಿ ಅದರ ಮೇಲೆ ಮನೆಯ ಅತ್ಯವಶ್ಯಕ ವಸ್ತುಗಳಾದ ದಿನಸಿ ಪದಾರ್ಥ,ಒಣಮೀನು, ಉಪ್ಪಿನ ಕಾಯಿ, ಮೆಣಸು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುಡುವ ಒಂದು ಜಾಗ. ಮನೆಯ ಅಡುಗೆ ಮನೆಯಲ್ಲಿ ಅಡುಗೆಗೆಂದು ಒಲೆ ಹತ್ತಿಸಿದಾಗ ಅದರಿಂದ ಹೊರಬರುವ ಹೊಗೆಯಿಂದ ಮೇಲೆ ದೆಂಗದಲ್ಲಿ ಇದ್ದ ನಿತ್ಯ ಬಳಕೆಯ ವಸ್ತುಗಳು ಹಾಳಾಗದೆ ಬಾಳಿಕೆ ಬರುತ್ತಿದ್ದವು.

ಲೇಖಕಿ ಈ ಕಾದಂಬರಿಗೆ “ದೆಂಗ” ಎಂದು ಹೆಸರಿಟ್ಟ ಕಾರಣಗಳನ್ನು ಅವಲೋಕಿಸುವಾಗ ಇಲ್ಲಿ ಬರುವ ಕಥಾನಾಯಕಿ ಸಿರಿಮಾಳ ಮನಸ್ಸಿಲ್ಲಿ ಒಂದರ ಮೇಲೊಂದರಂತೆ ಭದ್ರವಾಗಿ ಕುಳಿತ ಹತ್ತು ಹಲವು ವಿಚಾರಗಳು, ಯೋಚನೆಗಳು,ಚಿಂತೆಗಳು.ಈ ಕಾದಂಬರಿಗೆ ಮುನ್ನುಡಿ ಬರೆದ ಹಿರಿಯ ಸಾಹಿತಿ, ಜಾನಪದ ಸಂಶೋಧಕರಾದ ಪ್ರೊ.ಡಾ.ವಿವೇಕ್ ರೈ ಅವರು ಬರೆದ ಸುದೀರ್ಘ ಮುನ್ನುಡಿಯಲ್ಲಿ ಲೇಖಕಿ ಈ ಕೃತಿಗೆ ‘ದೆಂಗ’ ಹೆಸರು ಇಟ್ಟ ಕಾರಣವನ್ನು ವಿಶ್ಲೇಷಿಸುತ್ತಾ “ನಮ್ಮ ಮನಸ್ಸು, ಮೆದುಳು ಎನ್ನುವುದು ಕೂಡಾ ಒಂದು ದೆಂಗದಂತೆ, ಅದರೊಳಗೆ ಏನೆಲ್ಲ ಉಂಟು,ಇಲ್ಲ ಎಂದು ನಮಗೆ ತಿಳಿದಿರುವುದಿಲ್ಲ.

ಕೆಲವೊಂದನ್ನು ನಾವು ತುಂಬಿಸುತ್ತಾ ಹೋಗುತ್ತೇವೆ, ಕೆಲವು ತಾನಾಗಿಯೇ ತುಂಬಿಕೊಳ್ಳುತ್ತವೆ. ಅದರಲ್ಲಿ ಕೆಲವನ್ನು ಹೊರಗೆ ಬಿಸಾಡಬೇಕೆಂದರೆ ಅವು ಹೊರ ಹೋಗಲಾರದು, ನಮ್ಮ ಬಾಲ್ಯದಿಂದ ಹತ್ತು ಹಲವು ವಿಚಾರಗಳು ಬೇಡವೆಂದು ಭಾವಿಸಿದರೂ ಬೇಡವಾದದ್ದು ನಮ್ಮ ಮೆದುಳಿನೊಳಗೆ ಭದ್ರವಾಗಿದೆ .ಅವಾಗ ಅದಕ್ಕೇ ಬೇರೆ ಬೇರೆ ವಿಚಾರಗಳನ್ನು ತುಂಬಿಸಿ ಬೇಡವಾದದನ್ನು ಅಡಿಗೆ ತಳ್ಳುವುದು, ಕೆಲವನ್ನು ಮೇಲಕ್ಕೆ ಹಾಕುವುದು, ಹಾಗಾಗಿ ಈ ಕಾದಂಬರಿಗೆ ‘ದೆಂಗ’ ಎಂದು ಲೇಖಕಿ ಅಕ್ಷಯ ಶೆಟ್ಟಿ ಹೆಸರಿಟ್ಟಿರಬಹುದು” ಎಂದಿದ್ದಾರೆ.

ತುಳುನಾಡೆಂದರೆ ಅಗೆದಷ್ಟೂ ಸಿಗುವ, ಮುಗಿಯದ ವಿಚಾರಧಾರೆಗಳ, ಕಟುಕಟ್ಟಳೆಗಳ ಪುಷ್ಕಳ ನೆಲೆವೀಡು.ಈ ಮಣ್ಣಿನ ಗುಣವನ್ನು ಈ ಮಣ್ಣಿನಲ್ಲಿ ಹುಟ್ಟಿ ಬೆಳೆದವ ಮಾತ್ರ ಅರಗಿಸಿಕೊಳ್ಳಬಲ್ಲ ವಿನಹ: ಹೊರಗಿನಿಂದ ಬಂದು ಅದೆಷ್ಟು ಸಂಶೋಧನೆ ಮಾಡಿದರೂ, ಅಭ್ಯಸಿದರೂ ಅದು ನೀರ ಮೇಲಿನ ಗುಳ್ಳೆಯಂತೆ. ತುಳುಮಣ್ಣಿನ ಕಾರ್ನಿಕ ಅಳಿಯಲಾರದ್ದು.

ತುಳು ನಾಡಿನಲ್ಲಿ ಹುಟ್ಟಿ, ಮುಂದಕ್ಕೆ ನಾನಾ ಕಾರಣಗಳಿಂದ ಬೇರೆ ಯಾವ ರಾಜ್ಯದಲ್ಲೋ ದೇಶದಲ್ಲೋ ನೆಲೆಯಾಗಿ ತುಳುನಾಡನ್ನು ಮರೆತೇ ಬಿಡುವವರು ಹಲವು ಮಂದಿ. ಆದರೆ ಆ ಮಣ್ಣಿನಲ್ಲಿ ಅನಾದಿ ಕಾಲದಿಂದ ನೆಲೆ ನಿಂತ ಸತ್ಯ ದೈವಗಳು ದೂರಕ್ಕೆ ಹೋಗಿ ನೆಲೆಸಿದ ತನ್ನ ಮಣ್ಣಿನ ಮಕ್ಕಳನ್ನು ಮರೆಯದು. ತನ್ನ ಸಾನದ ಮಂಚವಿಗೆ ಒಂದು ಗಿಂಡೆ ನೀರು, ಒಂದು ಎಸಳು ಹೂವಿಡುವವರು ಯಾರೂ ಇಲ್ಲ ಎಂದು ಸತ್ಯ ದೈವಗಳಿಗೆ ತಿಳಿದಾಗ ಅವುಗಳು ದೂರವಿದ್ದವರನ್ನು ಯಾವ ರೀತಿಯಿಂದಾದರೂ ತನ್ನತ್ತ ಕರೆತರುತ್ತವೆ ಎನ್ನುವುದಕ್ಕೆ ಸಾಕ್ಷಿ ಈ ಕಾದಂಬರಿ. ಲೇಖಕಿ ಕಾದಂಬರಿಯನ್ನು ವೈಜ್ಞಾನಿಕ ಹಿನ್ನೆಲೆಯನ್ನಿಟ್ಟುಕೊಂಡು ಚಿತ್ರಿಸಿದ್ದರೂ ಅವರ ಮೂಲ ಆಶಯ ಕೊಡ ಇದೇ ಇರಬಹುದು ಎನ್ನುವುದು ನನ್ನ ಅನಿಸಿಕೆ.

ಈ ಕಾದಂಬರಿಯ ಕಥಾಸಾರವೆಂದರೆ ಮೂಲ ತುಳುನಾಡಿನ ಹುಡುಗಿ ಸಿರಿಮಾ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಹೆತ್ತವರೊಂದಿಗೆ ನೆಲೆ ನಿಂತವಳು. ಆಕೆಯ ಹೆತ್ತವರು ತುಳುನಾಡು ಬಿಟ್ಟು ಬಹಳಷ್ಟು ವರುಷಗಳೇ ಕಳೆದಿವೆ . Anthropology (ಮಾನವ ಸಮಾಜಗಳು ಮತ್ತು ಸಂಸ್ಕೃತಿಗಳ ಅಧ್ಯಯನ ಮತ್ತು ಅವುಗಳ ಅಭಿವೃದ್ಧಿ) ವಿದ್ಯಾರ್ಥಿನಿ ಸಿರಿಮಾಗೆ ಕಲ್ಚರಲ್ ಸ್ಟಡಿ ಮಾಡುವ ಟಾಪಿಕ್ ಸಿಕ್ಕಿದಾಗ ನಿನ್ನ ಮೂಲ ಊರಿನ ಬಗ್ಗೆಯೇ ಸಂಶೋಧನೆ ಮಾಡೆಂದು ಆಕೆಯ ಗೈಡ್ ಕೊಟ್ಟ ಸೂಚನೆಯ ಪ್ರಕಾರ ಆಕೆಗೂ ಇದೇ ಸರಿಯೆಂದು ಕಂಡುಬಂದು ತನ್ನ ದೇಶವಾದ ಇಂಡಿಯನ್ ಕಲ್ಚರ್ ಸ್ಟಡಿ ಮಾಡಲೆಂದು ತನ್ನ ಹುಟ್ಟೂರಾದ ತುಳುನಾಡ ತೊಟ್ಟಿಲಬೀಡಿಗೆ ಹೆತ್ತವರೊಂದಿಗೆ ಬರುತ್ತಾಳೆ.

ಬರೀ ೩ ತಿಂಗಳ ಪ್ರಾಜೆಕ್ಟ್ ಗೆಂದು ಆಕೆಯ ಹೆತ್ತವರಾದ ಸಿಂಚನ ಹಾಗೂ ತಂದೆ ಋಗ್ವೇದ್ ಮಗಳೊಂದಿಗೆ ಊರಿನ ಹಾದಿ ತುಳಿಯುತ್ತಾರೆ. ಸಿಂಚನಾಳ ತವರೂರ ಮನೆ ತೊಟ್ಟಿಲಬೀಡು .ಅಲ್ಲಿ ಆಕೆಯ ಅಜ್ಜಿಯ ಅಕ್ಕ ಬಲ್ಲಾಳ್ತಿ (ಕೊರೊಪೊಲ್) ಆ ತೊಟ್ಟಿಲ ಬೀಡಿನಲ್ಲಿ ಜೀವಂತವಾಗಿರುವ ಬೀಡಿನ ಏಕೈಕ ವಾರಸುದಾರತಿ. ತಿಮ್ಮಪ್ಪ ಆ ಬೀಡಿನ ಕೆಲಸದಾಳು. ಬೂಬ ಬೀಡಿನ ಮೂಲದವನು ಹಾಗೂ ದಾಮಣ್ಣ ಆ ಬೀಡಿನ ದೈವದೇವರ ಚಾಕರಿಯನ್ನು ಮಾಡುತ್ತಾ ಬರುತ್ತಿರುವವ.

ಬೀಡಿನ ದೈವ ಜುಮಾದಿ. ಬಹಳಷ್ಟು ವರುಷಗಳಿಂದ ಈ ಬೀಡಿನ ದೈವ ಜುಮಾದಿಯ ಚಾಕರಿ ಮಾಡುವವರು ಯಾರೂ ಇಲ್ಲ ಎಂದು ಕೊರಗುತ್ತಿದ್ದ ಬಲ್ಲಾಳ್ತಿ ಗೆ ಮೊಮ್ಮಗಳು ಹಾಗು ಆಕೆಯ ಮಗಳು ಸಿರಿಮಾ ಬಂದುದನ್ನು ನೋಡಿ ಬಹಳ ಸಂತಸವಾಗುತ್ತದೆ.ಈ ಬೀಡಿನಲ್ಲಿ ಬೆಳಕು ಬೆಳಗಿತು, ದೈವ ಜುಮಾದಿ ತನ್ನ ಸೇವೆಗೆಂದು ಇವರನ್ನು ಕರೆಸಿದ ಎಂದು ಖುಷಿಯಿಂದ ಬೀಗುತ್ತಾಳೆ ಆಕೆ. ಅವರಿಗೆ ಬೇಕುಬೇಕಾದ ಸವಲತ್ತುಗಳನ್ನು ಒದಗಿಸುತ್ತಾಳೆ.

ಬಲ್ಲಾಳ್ತಿಗೆ ಸಿರಿಮಾಳನ್ನು ಕಂಡು ವಿಪರೀತ ಅಚ್ಚರಿ ಮತ್ತು ಸಂತೋಷ .ಯವ್ವನದಲ್ಲೇ ವಿಧಿವಶಳಾದ, ತಾನು ಮಗಳಂತೆ ಸಾಕಿದ ತನ್ನ ಅಣ್ಣನ ಮಗಳಾದ ‘ಸಿರಿಯಕ್ಕೆ’ ಯ ತದ್ರೂಪು ಇರುವ ಸಿರಿಮಾಳನ್ನು ಕಂಡು ಬಾರಿ ಬಾರಿ ನೀನೇ ನನ್ನ ಸಿರಿಯಕ್ಕೆ ಎಂದು ಕೊಂಡಾಟ ಮಾಡಲಾರಂಭಿಸುತ್ತಾಳೆ. ಮರಣವಾಗಿ ಬಹಳ ವರುಷ ಕಳೆದರೂ ಜೋಪಾನವಾಗಿಟ್ಟಿದ್ದ ಆಕೆಯ ಸೀರೆ- ರವಕೆಯನ್ನು ಸಿರಿಮಾಗೆ ತೊಡಿಸಿ ಸಂಭ್ರಮ ಪಡುತ್ತಾಳೆ.ಇತ್ತ ಸಿರಿಮಾಳ ಸಂಶೋಧನೆಗೆ, ತೊಟ್ಟಿಲ ಬೀಡಿನ ಪೂರ್ವಜರ ಬದುಕನ್ನು ತೆರೆದಿಡಲು ಮುಂದೆ ಬಂದವಳು ಎoಕಮ್ಮ. ಆಕೆ ಬೀಡಿನ ಎಲ್ಲಾ ವಿಚಾರಗಳನ್ನು ತಿಳಿದಿರುವವಳು, ಬೀಡಿನ ಚಾಕರಿ ಮಾಡುವ ದಾಮಣ್ಣನ ತಾಯಿ. ತನ್ನ ಲ್ಯಾಪ್-ಟಾಪ್, ಟೇಪ್ ರೆಕಾರ್ಡರ್, ಬರೆಯಲು ಕಾಗದ ಇತ್ಯಾದಿಗಳೊಂದಿಗೆ ಸಿರಿಮಾ ಎoಕಮ್ಮನೊಂದಿಗೆ ವಿಷಯ ಸಂಗ್ರಹಿಸಲು ಮುಂದಾಗುತ್ತಾಳೆ.

ತೊಟ್ಟಿಲ ಬೀಡಿನ ಹಿರಿಯ ವ್ಯಕ್ತಿ ಭೀಮ ಬಲ್ಲಾಳ, ಹೆಂಡತಿ ಸಂಕಮ್ಮ,ಅವರ ನಾಲ್ಕು ಮಕ್ಕಳು, ಬೀಡಿನ ಇನ್ನೊಂದು ಮಗ್ಗುಲಲ್ಲಿ ಬಲ್ಲಾಳರರ ಚಿಕ್ಕಮ್ಮ , ತನ್ನ ಯವ್ವನದ ಮಗಳು ಸುಧಾಮಣಿಯೊಂದಿಗೆ ವಾಸವಾಗಿದ್ದರು. ಭೀಮ ಬಲ್ಲಾಳರಿಗೆ ಸುಧಾಮಣಿ ತಂಗಿ. ಬಲ್ಲಾಳರ ಮನೆಗೆ ಬಂದು ಹೋಗುತ್ತಿದ್ದ ಸುಧಾಮಣಿ ಮತ್ತು ಭೀಮ ಬಲ್ಲಾಳರ ನಡುವೆ ಅನೈತಿಕ ಸಂಭಂದವಿದ್ದದ್ದು ಇಡೀ ಬೀಡಿಗೆ ತಿಳಿದದ್ದು ಆಕೆ ಬಸಿರಾದ ನಂತರವೇ. ತಂಗಿಯನ್ನೇ ಭೋಗಿಸಿದ ಎಂದು ಬೀಡಿಗೆ ಬೀಡೆ ಛೀಮಾರಿ ಹಾಕಿದಾಗ, ಹೆಂಡತಿ ಸಂಕಮ್ಮ ತನ್ನ ಮಕ್ಕಳೊಂದಿಗೆ ತವರುಮನೆ ತೆರಳಿದರೆ, ಭೀಮ ಬಲ್ಲಾಳರು ಅವಮಾನದಿಂದ ಕೊರಗಿ ಸಾಯುತ್ತಾರೆ.

ಆ ಸಂದರ್ಭದಲ್ಲಿ ಆ ತೊಟ್ಟಿಲ ಬೀಡಿನ ಮನೆಗೆ ಬಂದು ನಿಂತವರು ಬಲ್ಲಾಳರ ತಂಗಿ ಕೊರೊಪೊಲ್ ಬಲ್ಲಾಳ್ತಿ. ಸುಧಾಮಣಿಯ ಗರ್ಭ ತೆಗೆಯಲೆಂದು ಆಕೆಯ ತಾಯಿ ಯಾವ ಯಾವ ಕಷಾಯ ಕೊಟ್ಟರೂ ಏನೂ ಉಪಯೋಗವಾಗದೆ, ಬೆಳೆದ ಗರ್ಭ ಕೆಳೆಗೆ ಬೀಳಲೇ ಇಲ್ಲ. ಹಾಗಾಗಿ ಮನೆಯೊಳಗೇ ಕೂಡಿಟ್ಟ ಸುಧಾಮಣಿ ಹೆಣ್ಣು ಮಗುವೊಂದನ್ನು ಹೆತ್ತು ಯಾರೂ ಇಲ್ಲದ ಸಮಯ ನೋಡಿ ಮಗುವನ್ನು ಪೊದೆಯೊಂದರಲ್ಲಿ ಬಿಸಾಕಿ ತಾನು ಕೆರೆಗೆ ಬಿದ್ದು ಸಾಯುತ್ತಾಳೆ. ಅತ್ತು ಕರೆಯುತಿದ್ದ ಆ ಮಗುವನ್ನು ಕಂಡು ಎತ್ತಿ ತಂದ ಎಂಕಮ್ಮ ಮಗುವನ್ನು ಬೀಡಿನ ಬಲ್ಲಾಳ್ತಿಯ ಕೈಯಲ್ಲಿಡುತ್ತಾರೆ.

ಸಹೋದರ ಸಂಬಂಧದಿಂದ ಹುಟ್ಟಿದ ಮಗುವಾದರೂ ತನ್ನ ಅಣ್ಣನ ಮಗುವನ್ನು ತನ್ನ ಮಗುವಂತೆ ಸಾಕಿದ ಬಲ್ಲಾಳ್ತಿ ಮಕ್ಕಳಿಲ್ಲದ ತನ್ನ ಕೊರತೆಯನ್ನು ಆ ಮಗುವಿನ ಮೂಲಕ ಈಡೇರಿಸಿಕೊಳ್ಳುತ್ತಾರೆ. ಆ ಹುಡುಗಿ ಬೆಳೆದು ದೊಡ್ಡವಳಾಗಿ ಕಾರಣಾಂತರದಿಂದ ನಡು ಯವ್ವನದಲ್ಲೇ ದೇವರ ಪಾದ ಸೇರಿದಾಗ ನೋವಿನಿಂದ ಕುಗ್ಗಿ ಹೋಗುತ್ತಾರೆ. ಕೊರಗುತ್ತ ಜೀವನ ಸಾಗಿಸುತ್ತಿದ್ದ ಬಲ್ಲಾಳ್ತಿಗೆ ಬಹಳ ವರುಷಗಳ ಬಳಿಕ ಆಕೆಯದೇ ತದ್ರೂಪನ್ನು ಹೊತ್ತು ತನ್ನ ಸಂತಾನದ ಕುಡಿಯಾಗಿ ಬೀಡಿಗೆ ಕಾಲೂರಿದ ಸಿಂಚನ ಳೊಂದಿಗೆ ಬಂದ ಸಿರಿಮಾಳನ್ನು ಕಂಡಾಗ ಸಿರಿಯಕ್ಕೆಯೇ ಪುನರ್ಜನ್ಮವೆತ್ತಿ ಬಂದಿದ್ದಾಳೆ ಎನ್ನುವ ಭ್ರಮೆಯಿಂದ ಅತಿರೇಕದಿಂದ ವರ್ತಿಸುತ್ತಾರೆ.

ಈ ಎಲ್ಲಾ ವಿಚಾರಗಳನ್ನು ಸಿರಿಮಾ ಎಂಕಮ್ಮಳ ಬಾಯಿಯಿಂದ ಕೇಳುತ್ತಿದ್ದಂತೆಯೇ ಅವಳ ಸಂಶೋಧನೆಯ ಉತ್ಸಾಹ ಕುಗ್ಗಿ ತಪ್ಪು ಮನೋಭಾವನೆಯಿಂದ ಕುಬ್ಜಳಾಗುತ್ತಾಳೆ. ಅನೈತಿಕ ಸಂಭಂದದಿಂದ ಜನಿಸಿದ ಸಿರಿಯಕ್ಕೆಯನ್ನು ತನ್ನದೇ ತದ್ರೂಪ ಎಂದು ಹೇಳುವ ಅಜ್ಜಿಯ ಮಾತುಗಳನ್ನು ಎಣಿಸಿ ಎಣಿಸಿ ಸಿರಿಮ ಮಾನಸಿಕವಾಗಿ ಕುಗ್ಗಿ ಅದೇ ಯೋಚನೆಯಲ್ಲಿ ಮಾನಸಿಕ ಅಸ್ವಸ್ಥಳಾಗುತ್ತಾಳೆ. ಸಿರಿಮಾ ತೊಟ್ಟಿಲ ಬೀಡಿಗೆ ಬಂದಾಗಿನಿಂದಲೂ “ನೀನು ಯಾತಕ್ಕೆ ಇಲ್ಲಿಗೆ ಬಂದೆ? “ಎಂದು ಯಾರೋ ಪ್ರಶ್ನಿಸಿದಂತಾಗುವುದು, “ಎರಡು ಕಣ್ಣುಗಳು ಆಕೆಯನ್ನೇ ದಿಟ್ಟಿಸುವುದು” ಈ ಎಲ್ಲ ವಿದ್ಯಮಾನಗಳಿಂದಲೂ ಬೆದರದೆ ದೃಢ ಮನಸ್ಸಿನಿಂದ ತನ್ನ ಸಂಶೋದನೆಯಲ್ಲಿ ನಿರತಳಾಗಿದ್ದರೂ, ಪೂರ್ವಜರ ಕಥೆ ತಿಳಿದಂದಿನಿಂದ ಮಾತ್ರ ಮೌನವಾಗುತ್ತಾಳೆ.

ಆಕೆಯ ರೆಕಾರ್ಡಿಂಗ್ ಮಾಡುವ ರೇಡಿಯೋ ಎಲ್ಲೋ, ಆಕೆಯ ಲ್ಯಾಪ್ ಟಪ್ ಎಲ್ಲೋ, ಆಕೆ ಬರೆದಿಟ್ಟ ಪೇಪರ್ಸ್ ಇವೆಲ್ಲಾ ಗಾಳಿಗೆ ಹಾರಿ ಹೋಗುತ್ತವೆ. ಅರ್ಥಾತ್ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ಸೂಚಿಸುವ ಅರ್ಥ ಇಲ್ಲೇ ಲೇಖಕಿ ಕೊಟ್ಟಿದ್ದಾರೆ. ಹೆತ್ತವರೊಂದಿಗೆ ನ್ಯೂಜೆರ್ಸಿಗೆ ಹಿಂತಿರುಗಲು ಒಪ್ಪದ ಮಗಳನ್ನು ಅಲ್ಲೇ ಬಿಟ್ಟು ತೆರಳಿದ ದಂಪತಿಯರು ಅಲ್ಲಿ ತಮ್ಮ ಆಪ್ತರಾದ ಖ್ಯಾತ ಸೈಕಿಯಾಟ್ರಿಸ್ಟ್ ಡಾ.ಕೊಲಂಬೋ ಅವರಿಗೆ ತಮ್ಮ ಮಗಳ ವಿಚಾರ ಹೇಳಿದಾಗ ಅವರು ಭಾರತದ ದಿಲ್ಲಿಯ ಏಮ್ಸ್ ಹಾಸ್ಪಿಟಲ್ ವೈದ್ಯರಾದ ಡಾ.ಡೇವಿಡ್ ಬಳಿ ಈ ಕೇಸ್ ನ್ನು ಹ್ಯಾಂಡಲ್ ಮಾಡಲು ಹೇಳುತ್ತಾರೆ. ಡಾ.ಡೇವಿಡ್ ಮೂಲಕ ಈ ಕೇಸ್ ಬಗ್ಗೆ ರೀಸರ್ಚ್ ಮಾಡಲು ದಿಲ್ಲಿಯಿಂದ ಬಂದ ಇಬ್ಬರು ಗೆಳೆಯರು ಡಾ.ಇಸಾಕ್ ಮತ್ತು ಮಿ.ಶೋದ್. ಡಾ.ಇಸಾಕ್ ಸೈಕಿಯಾಟ್ರಿಸ್ಟ್ ನಲ್ಲಿ ಉನ್ನತ ಅಧ್ಯಯನ ಮಾಡುತಿದ್ದರೆ ಶೋದ್ ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡುತಿದ್ದ.

ಶೋದ್ ಮೂಲತಃ ತುಳುನಾಡಿನ ಸುರತ್ಕಲ್ ನವನಾದ್ದರಿಂದ ಈತನಿಂದ ಸಿರಿಮಾಳ ಕೇಸ್ ಪರಿಹರಿಸಲು ಬಹಳಷ್ಟು ಸುಲಭ ಎಂದು ಭಾವಿಸಿದ ಡಾ.ಇಸಾಕ್ ಸಿರಿಮಾಳ ಮನಸ್ಸನ್ನು ಅಧ್ಯಯನ ಮಾಡಿ ರಿಪೋರ್ಟ್ ನನಗೆ ಕಳಿಸೆಂದು ಮೊದಲು ಅವನನ್ನು ತೊಟ್ಟಿಲ ಬೀಡಿಗೆ ಕಳಿಸುತ್ತಾನೆ. ತೊಟ್ಟಿಲ ಬೀಡಿಗೆ ಬಂದ ಶೋದ್ ಸಿರಿಮಾಳ ಚಟುವಟಿಕೆಗಳ ಮಾಹಿತಿಯನ್ನು,ಆಕೆಯ ಮಾನಸಿಕ ಸ್ಥಿತಿಯನ್ನು ಡಾ.ಇಸಾಕ್ ಗೆ ತಿಳಿಸುತಿದ್ದ. ಡಾ.ಇಸಾಕ್ ಗೆ ಸಿರಿಮಾಳ ಲೈವ್ ಕನ್ಸಲ್ಟ್ ಮಾಡಿಸುತ್ತಿದ್ದ.

ಈ ಮೂಲಕ ಆಕೆಯನ್ನು ಸರಿಪಡಿಸಲು ಅಸಾಧ್ಯವಾದಾಗ ಡಾ.ಇಸಾಕ್ ತಾನು ಕೂಡ ಸಿರಿಮಾಳ ಮಾನಸಿಕ ಚಿಕಿತ್ಸೆಗಾಗಿ ತೊಟ್ಟಿಲ ಬೀಡಿಗೆ ಬಂದು ಸೇರುತ್ತಾನೆ. ಡಾ.ಡೇವಿಡ್ ಅವರ ಸಹಕಾರದೊಂದಿಗೆ ಅವರಿಬ್ಬರೂ ಒಟ್ಟಾಗಿ ಆಕೆಯ ಮೈಂಡ್ ಸ್ಟಡಿ ಮಾಡುತ್ತಾರೆ. ಕಂಪ್ಯೂಟರ್ ತಂತ್ರಜಾನದ ಮೂಲಕ ಆಕೆಯ ಮನಸ್ಸಿನಲ್ಲಿದ್ದ ಭಾವನೆಗಳನ್ನು, ಯೋಚನೆಗಳನ್ನು, ಆಕೆಯ ಮನಃಪಟಲದಲ್ಲಿ ಕಾಡುತ್ತಿರುವ ರೂಪಗಳನ್ನು ಕಂಪ್ಯೂಟರ್ ಪರದೆಯಲ್ಲಿ ಚಿತ್ರಿಸಿ ಅದನ್ನು ಪ್ರಿಂಟಾಗಿ ಹೊರತೆಗೆದಾಗ ಬಂದದ್ದು ಸಿರಿಮಾಳಂತೆಯೇ ಕಾಣುವ ಸಿರಿಯಕ್ಕೆಯ ಚಿತ್ರ ಹಾಗೂ ದೈವ ಜುಮಾದಿಯ ಚಿತ್ರ.

ಆ ಮೂಲಕ ತಿಳಿದು ಬಂದದ್ದು ಆಕೆಯ ಅಂತರಾಳದಲ್ಲಿ ಅದುಮಿದ್ದ ತನ್ನದೇ ತದ್ರೂಪದ ಸಿರಿಯಕ್ಕೆಯ ಕಲ್ಪನೆ ಹಾಗೂ ಜುಮಾದಿಯ ಬಗ್ಗೆ ಆಕೆಗಿದ್ದ ಭಯ,ಹಾಗೂ ಜುಮಾದಿ ಆಕೆಗೆ ನೀಡುತಿದ್ದ ಅಭಯ. ಇವೆಲ್ಲವನ್ನು ತಂತ್ರಜಾನದ ಮೂಲಕ ಹೊರತೆಗೆದ ಈ ಮೂವರೂ ಸಿರಿಮಾಳನ್ನು ಮುಂಚಿನಂತೆಯೇ ನಾರ್ಮಲ್ ಆಗಿರಿಸುವಲ್ಲಿ ಸಫಲರಾಗುತ್ತಾರೆ. schizophrenia (ಆಲೋಚನೆ, ಭಾವನೆ ಮತ್ತು ನಡವಳಿಕೆಯ ನಡುವಿನ ಸಂಬಂಧದಲ್ಲಿನ ಸ್ಥಗಿತವನ್ನು ಒಳಗೊಂಡಿರುವ ಒಂದು ರೀತಿಯ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯು ದೋಷಯುಕ್ತ ಗ್ರಹಿಕೆ, ಅನುಚಿತ ಕ್ರಿಯೆಗಳು ಮತ್ತು ಭಾವನೆಗಳು ಹಾಗೂ ವಾಸ್ತವ ಮತ್ತು ವೈಯಕ್ತಿಕ ಸಂಬಂಧಗಳಿಂದ ಫ್ಯಾಂಟಸಿ ಮತ್ತು ಭ್ರಮೆಗೆ ಒಳಗಾಗುವುದು)ದಿಂದ ಬಳಲುತ್ತಿರುವ ಸಿರಿಮಾಳ ಮಾನಸಿಕ ಉಪಚಾರಕ್ಕಾಗಿ ಸೈಕೊಥೆರಪಿ, ಸೈಕೋ ಅನಾಲಿಸಿಸ್, ಕೌನ್ಸಿಲ್ಲಿಂಗ್. ಮೈಂಡ್ ರೀಡರ್ ಸಿಸ್ಟಮ್. ಎಲೆಕ್ಟ್ರೋಡ್ ಸೆಟ್ಟಿಂಗ್ ಲ್ಯಾಬ್ ನ ತಯಾರಿ,ಆರ್ಟಿಫಿಷಿಯಲ್ ಇಂಟೆಲಿಜೆನ್ಸ್,ಹೀಗೆ ವಿಧ ವಿಧದ ತಂತ್ರಜಾನದ ಮೂಲಕ ಆಕೆಯ ಮಾನಸಿಕ ಕಾಯಿಲೆಯನ್ನು ಸರಿಪಡಿಸಿದ ಡಾ.ಡೇವಿಡ್ ತಂಡ, ಸಿರಿಮಾ ತನ್ನ ಬೀಡಿಗೆ ಹಾಳು ಹೆಸರು ತಂದ ಭೀಮ ಬಲ್ಲಾಳರನ್ನು ಅವರು ಹುಟ್ಟುವ ಮೊದಲೇ ಅವರನ್ನು ಕೊಲ್ಲಲು ಆಗುತ್ತದೆಯೇ ಎನ್ನುವ ಒಂದು ಸೈಕೊಲಾಜಿಕಲ್ ಪ್ರಯತ್ನವಾದ “ಗ್ರಾಂಡ್ ಫಾದರ್ ಪೆರಡಾಕ್ಸ್ ವರ್ಕ್” ಎಂಬುದಕ್ಕೆ ಕೂಡಾ ಪ್ರಯತ್ನಿಸಿದ್ದ ವಿಷಯ ತಿಳಿದು ಬರುತ್ತದೆ.

ಈ ರೀತಿ ಅವಳ ಮನಸ್ಥಿತಿಯನ್ನು ಪತ್ತೆ ಹಚ್ಚಿ ಅವಳ ಅಂತರಂಗದಲ್ಲಿ ಮಡುಗಟ್ಟಿದ್ದ ಅಸ್ವಸ್ಥತೆ ಯನ್ನು ನೀಗಿಸುತ್ತಾರೆ . ಈ ಕಾದಂಬರಿಯಯಲ್ಲಿ ಮಾನಸಿಕ ಕಾಯಿಲೆಯನ್ನು ಪತ್ತೆ ಹಚ್ಚುವ ಇಂತಹ ಅತ್ಯಾಧುನಿಕ ತಂತ್ರಜಾನನಗಳ ಸುಧೀರ್ಘ ವಿವರಣೆಯೊಂದಿಗೆ ಕಾದಂಬರಿ ಬಹಳ ಕೌತುಕವಾಗಿ ಮೂಡಿ ಬಂದಿದೆ ಹಾಗೂ ಲೇಖಕಿ ಈ ಕಾದಂಬರಿ ಬರೆಯಲು ಸುದೀರ್ಘ ಸಮಯ ತೆಗೆದುಕೊಂಡ ಹಿನ್ನೆಲೆ ಹಾಗೂ ಇಂತಹ ಒಂದು ಕಾದಂಬರಿ ಬರೆಯುವ ಮೊದಲು ಅವರೂ ಈ ವಿಷಯದಲ್ಲಿ ಬಹಳಷ್ಟು ಸಂಶೋಧನೆ ನಡೆಸಿದ್ದಾರೆ ಎನ್ನುವುದೂ ತಿಳಿಯುತ್ತದೆ..

ಸಿರಿಮಾ ಹೊರದೇಶದಲ್ಲಿ ಹುಟ್ಟಿ ಬೆಳೆದರೂ, ಅವಳ ಹುಟ್ಟೂರ ನೆಲದ ಸವಿ ಅವಳನ್ನು ತೊಟ್ಟಿಲ ಬೀಡಿಗೆ, ಜುಮಾದಿಯ ನೆಲೆಗೆ ಕರೆತಂದಿತು. ಬೀಡಿನ ಜುಮಾದಿಯೇ ಅವಳನ್ನು ಇಲ್ಲಿಗೆ ಕರೆತಂದಿತೆಂದರೂ ಉತ್ಪ್ರೇಕ್ಷೆಯಲ್ಲ. ತಾಯಿಯ ಮೂಲವಾದ ತೊಟ್ಟಿಲ ಬೀಡಿನ ಗುತ್ತಿನ ಮನೆಯ ಬಗ್ಗೆ ಸಂಶೋಧನೆ ಮಾಡಬೇಕೆಂದು ಬಯಸಿದ್ದ ಸಿರಿಮಾಳಿಗೆ, ತನ್ನ ಪೂರ್ವಜರಿಂದ ನಡೆದ ಕೆಲವು ತಪ್ಪುಗಳು ಆಕೆಯನ್ನು ತಲೆ ತಗ್ಗಿಸುವಂತೆ ಮಾಡಿತು.. ಅಜ್ಜಿ ತೋರಿಸಿದ ಸಿರಿಯಕ್ಕೆಯ ಫೋಟೋ ತನ್ನಂತೆಯೇ ಇದ್ದುದನ್ನುಕಂಡು ತಾನೂ ಈ ಅನೈತಿಕತೆಯ ಒಂದು ಪಾಲು ಎಂದು ಕೊರಗುವಂತಾಯಿತು. ಯಾವ ಬೀಡಿನ ಬಗ್ಗೆ ಹೆಮ್ಮೆಯಿಂದ, ಸಂತಸದಿಂದ ಈ ಲೋಕಕ್ಕೆ ತಿಳಿಸಬೇಕೆಂದಿದ್ದಳೋ, ಅದೇ ಬೀಡಿನ ವಿಚಾರಗಳನ್ನು ತಿಳಿದು ನಾಚಿಕೆ ಮುಳ್ಳಿನಂತೆ ಮುದುಡಿ ಹೋದಳು ಆಕೆ.. ಮಾನಸಿಕ ರೋಗಿಯಾದಳು.

ಆ ಸಂದರ್ಭದಲ್ಲಿ ಅವಳನ್ನು ಪ್ರೀತಿಯಿಂದ ಕಂಡು ಸರಿಪಡಿಸಲೆತ್ನಿಸಿದ ಶೋದ್ ಅರಿವಿಲ್ಲದಂತೆಯೇ ಅವಳ ಅಂತರಂಗದ ಮೆಲುದನಿಯಾದ. ಮೊದಮೊದಲು ಅವನ ಮಾನಸಿಕ ಥೆರಪಿಗಳಿಗೆ ಸ್ಪಂದಿಸದ ಸಿರಿಮಾ ನಂತರ ಅವನು ಹೇಳಿದ ಹಾಗೆ ಕೇಳಲಾರಂಭಿಸಿದಳು. ಹಾಗಾಗಿ ನಾನಾ ಥೆರಪಿಗಳ ಮೂಲಕ ಅವಳು ಖಿನ್ನತೆಯಿಂದ ಹೊರ ಬರುವಂತಾಯಿತು.ಅವಳಲ್ಲಿ ಜೀವಕಳೆ ತುಂಬಿದ ಶೋದ್ ಮುಂದಕ್ಕೆ ಸಿರಿಮಾಳ ಜೀವನಾಡಿಯಾಗುತ್ತಾನೆ. ಅವರಿಬ್ಬರ ಗೆಳೆತನ ಪ್ರೀತಿಯಾಗಿ ಮೊಳೆತು ಮುಂದಕ್ಕೆ ಇವರಿಬ್ಬರೂ ಕೇಂಜವ ಹಕ್ಕಿಗಳಂತೆ ರೆಕ್ಕೆಗೆ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತಾರೆ.

ಈ ಕಾದಂಬರಿಯಲ್ಲಿ ತುಳುನಾಡಿನ ಸಂಸ್ಕೃತಿ,ಕಟ್ಟುಕಟ್ಟಳೆಗಳನ್ನು ಲೇಖಕಿ ಚೆನ್ನಾಗಿ ತೆರೆದಿಟ್ಟಿದ್ದಾರೆ. ಬಹುಶ: ಲೇಖಕಿಯ ಜನನವಾದಾಗ ಈ ತುಳುನಾಡಿಗೆ ಆಧುನಿಕತೆಯ ಹವಾಮಾನ ಬಿಸಿ ಬಹಳಷ್ಟು ಮೂಲ ಪದ್ದತಿಗಳು,ಕಟ್ಟಳೆ ಗಳು, ಜೀವನದ ಕ್ರಮಗಳಲ್ಲಿ ಬದಲಾವಣೆಯಾಗಿದ್ದರೂ, ತನ್ನ ಹಿರಿಯರ ಮೂಲಕ ಆ ದಿನಗಳ ಬೆಗ್ಗೆ ತಿಳಿದುಕೊಂಡು ಅದನ್ನು ತನ್ನ ಬರವಣಿಗೆಯಲ್ಲಿ ಅಳವಡಿಸಿಕೊಂಡು ತುಳುನಾಡ ಬದುಕ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಅವರ ಪ್ರಯತ್ನಕ್ಕೆ ತಲೆಬಾಗಬೇಕಿದೆ.

ಜೊತೆಗೆ ಈ ಕಾದಂಬರಿಯ ಅರ್ಧದಷ್ಟು ಭಾಗ ವ್ಯಕ್ತಿಯೊಬ್ಬನ ಮೆದುಳಿನಲ್ಲಾಗುತ್ತಿರುವ ಭಾವನೆಗಳು, ಯೋಚನೆಗಳು, ನೆಗೆಟಿವಿಟಿ, ಮಲ್ಟಿಪಲ್ ಪೆರ್ಸನಾಲಿಟಿಯನ್ನು ಕಂಡು ಹಿಡಿವ ಆಧುನಿಕ ತಂತ್ರಜ್ಞಾನ,ಮೆಂಟಲ್ ರೀಡಿಂಗ್, ಬಿಹೇವಿಯರಲ್ ಥೆರಫಿ, schizophrenia ದಿಂದ ಬಳಲುತ್ತಿರುವ ರೋಗಿಯೊಬ್ಬಳನ್ನು ಸಾಮಾನ್ಯ ಸ್ಥಿತಿಗೆ ತರುವ ಅತ್ಯಾಧುನಿಕ ಸೌಕರ್ಯ ಸಲಕರಣೆ, ಇನ್ನಿತರ ಥೆರಪಿಗಳ ಸುಧೀರ್ಘ ಚಿತ್ರಣವಿದೆ. ಲೇಖಕಿಯ ಈ ಶ್ರಮಕ್ಕೆ ಎರಡು ಮಾತಿಲ್ಲ. ತುಳುವಿನಲ್ಲಿ ಮೂಡಿ ಬಂದ ವೈಜ್ಞಾನಿಕ ಹಿನ್ನಲೆಯ ಜೊತೆಗೆ ತುಳು ಸಂಸ್ಕೃತಿಯ ಚಿತ್ರಣವನ್ನು ಬರೆದ ಕಾದಂಬರಿ ಇದೇ ಮೊದಲು ಎಂದರೆ ತಪ್ಪಾಗದು. ಡಾ. ವಿವೇಕ್ ರೈ ಅವರು ಕೂಡ ಈ ಮಾತನ್ನು ಹೇಳುತ್ತಾ “ಬಹುಶ: ಹತ್ತು ವರುಷದ ಹಿಂದೆ ಇಂತಹ ಒಂದು ಕಾದಂಬರಿ ಬರೆಯಲು ಸಾಧ್ಯವಾಗದ ವಿಚಾರ” ಎಂದಿದ್ದಾರೆ.

ಮೂಲತಃ ತುಳುನಾಡಿನವರಾದ ಸಿರಿಮಾ ಹಾಗೂ ಶೋದ್ ಕಾರಣಾಂತರಗಳಿಂದ ಪರದೇಶಗಳಿಗೆ ಹೋಗಿ ನೆಲೆಯಾದರೂ ತಮ್ಮ ಹುಟ್ಟೂರಿಗೆ ಬಂದು ಜೊತೆಯಾಗುವುದು ಕಾದಂಬರಿಯ ವಿಶೇಷ ತಿರುವು, ಸಿರಿಮಾ ಮಾನಸಿಕ ಅಸ್ವಸ್ಥಳಾಗಿರುವಾಗ ಬಾರಿ ಬಾರಿ ಜುಮಾದಿಯನ್ನು ಕರೆವ ಬಲ್ಲಾಳ್ತಿಯ ಭಯಭಕ್ತಿ ತುಳುವನಾಡಿನ ಸತ್ಯ ದೈವಗಳ ಶಕ್ತಿಯನ್ನು ಅರುಹುತ್ತದೆ. ಆ ಮೂಲಕ ಮಾನಸಿಕ ರೋಗಿಯಾದ ಸಿರಿಮಾ ಜುಮಾದಿಯ ಆಶೀರ್ವಾದದಿಂದಲೇ ಸಾಮಾನ್ಯ ಸ್ಥಿತಿಗೆ ಬರುತ್ತಾಳೆ, ಸಿರಿಮಾಳ ಹೃದಯದಲ್ಲಿ ಜುಮಾದಿಯ ಬಗ್ಗೆ ಇದ್ದ ಭಕ್ತಿಯಿಂದಾಗಿ, ಜುಮಾದಿಯೇ ಅವಳನ್ನು ರಕ್ಷಿಸಿತು ಎನ್ನುವುದೂ ಸತ್ಯ. ಹಾಗಾಗಿ ಆಧುನಿಕತೆಯ ಗಾಳಿ ಬೀಸಿದ್ದರೂ ಸೂರ್ಯ ಚಂದ್ರರಿರುವವರೆಗೆ ಈ ತುಳುನಾಡಿಗೆ ಈ ಸತ್ಯದೈವಗಳೇ ಅಭಯದ ಹಸ್ತಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆ ತುಳು ನಾಡಿನ ಮಣ್ಣಿನ ಕಮ್ಮೆನ ಮತ್ತು ಆಧುನಿಕ ತಂತಜ್ಞಾನ ಇವೆರಡರನ್ನೂ ಒಟ್ಟಿಗೆ ಆಸ್ವಾದಿಸಲು ಅನುವು ಮಾಡಿಕೊಟ್ಟ ಅಕ್ಷಯ ಶೆಟ್ಟಿಯವರಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು.

‍ಲೇಖಕರು Admin

June 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: