ಶಾಮಲಾಪುರದ ದಸರಾ..

ತಮ್ಮಣ್ಣ ಬೀಗಾರ

**

ಮಂಡಲಗಿರಿ ಪ್ರಸನ್ನ ಅವರ ಹೊಸ ಕಾದಂಬರಿ ‘ಹಳ್ಳಿ ಹಾದಿಯ ಹೂವು’.

ವಸು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಸಾಹಿತಿ ತಮ್ಮಣ್ಣ ಬೀಗಾರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಬಾಲ್ಯವೆನ್ನುವುದು ಹಾಗೆಯೇ. ಅದು ಒಂದು ರೀತಿಯ ಖುಷಿಯ ಒರತೆಯಾಗಿ ನಮ್ಮ ಬದುಕಿನುದ್ದಕ್ಕೂ ಇರುತ್ತದೆ. ಬಾಲ್ಯವನ್ನು ನೆನಪಿಸಿಕೊಳ್ಳುತ್ತಲೇ ಅದರೊಂದಿಗೆ ಅನುಸಂಧಾನದಲ್ಲಿ ತೊಡಗಿದೆವೆಂದರೆ ನಾವು ಓಡಾಡಿದ ಊರು, ಸುತ್ತಾಡಿದ ಬೆಟ್ಟ ಗುಡ್ಡಗಳು, ಈಜಾಡಿದ ಹಳ್ಳಕೆರೆಗಳು, ಶಾಲೆಯ ಗೆಳೆಯರು, ಶಿಕ್ಷಕರು, ಪ್ರೀತಿಯಲ್ಲಿ ಅದ್ದಿ ಅದ್ದಿ ನಮ್ಮನ್ನು ತೊಯ್ಯಿಸಿದ ಅಜ್ಜ, ಅಜ್ಜಿ, ಅಮ್ಮ, ಅಪ್ಪ ಯಾವುದೋ ಕುತೂಹಲ ಘಟನೆಗಳು, ನಾವು ನೋಡಿದ ಜಾತ್ರೆ ಬಯಲಾಟ ನಾಟಕದಂತ ಸಂಗತಿಗಳು, ಆಟದಲ್ಲಿ ತೋರಿದ ಯಶಸ್ಸು ಹೀಗೆ ನೆನಪಾಗುತ್ತಲೇ ಹೋಗುತ್ತವೆ. ಇದೆಲ್ಲ ನನಗೆ ಮತ್ತೆ ಮತ್ತೆ ನೆನಪಾದದ್ದು ಮಂಡಲಗಿರಿ ಪ್ರಸನ್ನ ಅವರ ‘ಹಳ್ಳಿ ಹಾದಿಯ ಹೂವು’ ಮಕ್ಕಳ ಕಾದಂಬರಿ ಓದಿದಾಗ. ಹೌದು. ಈಗ ಕನ್ನಡದ ಮಕ್ಕಳ ಸಾಹಿತ್ಯ ಹೊಸತನಕ್ಕೆ ಹೊರಳಿಕೊಂಡು ವಿಭಿನ್ನ ರೀತಿಯಲ್ಲಿ ವಿಸ್ತಾರಕ್ಕೆ ಚಾಚಿಕೊಳ್ಳಲು ಪ್ರಯತ್ನಿಸುತ್ತಿದೆ.

ಅನೇಕ ಬರಹಗಾರರು ತಮ್ಮ ಬಾಲ್ಯದ ನೆನಪುಗಳೊಂದಿಗೆ ಸಾಗುತ್ತಾ ಅದನ್ನು ಕಥೆಯಾಗಿಸುವ, ಪ್ರಬಂಧವಾಗಿಸುವ, ಕಾದಂಬರಿಯಾಗಿಸುವ ಅಥವಾ ಇನ್ಯಾವುದೋ ರೀತಿಯಲ್ಲಿ ಮಕ್ಕಳ ಪ್ರೀತಿಯ ಉಣಿಸಾಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇಲ್ಲೂ ಮಂಡಲಗಿರಿ ಪ್ರಸನ್ನ ಅವರು ತಮ್ಮ ಬಾಲ್ಯದ ನೆನಪಿನ ಎಳೆಯನ್ನು ಹಿಡಿದು ಮಕ್ಕಳಿಗಾಗಿ ಕಾದಂಬರಿ ರಚಿಸುವ ಪ್ರಯತ್ನ ಮಾಡಿದ್ದಾರೆ. ಶಾಮ ಎಂಬ ಬಾಲಕನ ಊರಾದ ಎಡದೂರು ಹಾಗೂ ಅವನ ಅಜ್ಜಿಯ ಊರಾದ ಸೋಮಲಾಪುರ ಎನ್ನುವ ಹಳ್ಳಿಯ ನಡುವೆ ಅರಳಿಕೊಳ್ಳುವ ಕಥೆ ನಲವತ್ತು ಐವತ್ತು ವರ್ಷಗಳ ಹಿಂದಿನ ಹಳೆಯ ಬದುಕು ಹಾಗೂ ಮಕ್ಕಳ ಸಂಗತಿಗಳನ್ನು ಅನಾವರಣಗೊಳಿಸುತ್ತದೆ. ಯಡದೂರಿನಲ್ಲಿರುವ ಮಾವುಕೆರೆ, ಗುಬ್ಬಿ, ಬೆಟ್ಟ, ಆಂಜನೇಯ ಗುಡಿಗಳೆಲ್ಲ ಶಾಮ ಎಂಬ ಬಾಲಕನ ಕಣ್ಣೋಟದಲ್ಲಿ ನಾವು ಅವನ್ನು ಕಾಣುವಂತೆ ಮಾಡಿದ್ದಾರೆ ಲೇಖಕರು.

ಶಾಮನ ತಂದೆ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು. ಅವರದು ಸಿಡುಕು ಸ್ವಭಾವ. ಅವರ ಸಿಡುಕಿಗೆ ಗುರಿಯಾಗುತ್ತಿದ್ದ ಶಾಮ ಅಜ್ಜಿಯ ಮನೆಯಲ್ಲಿನ ಪ್ರೀತಿ ಹಾಗೂ ಅಲ್ಲಿ ಸಿಗುವ ಸ್ವಾತಂತ್ರ್ಯ ಹಂಬಲಿಸುತ್ತಾ ಪ್ರೀತಿ ಹಾಗೂ ಸ್ವಾತಂತ್ರ್ದದ ಸಂಭ್ರಮವನ್ನು ಎಲ್ಲಾ ಮಕ್ಕಳಿಗೂ ದಾಟಿಸುತ್ತಾನೆ. ಎಡದೂರು ಸಣ್ಣ ಪಟ್ಟಣದಂತಹ ಊರು. ಅಲ್ಲಿ ವಿದ್ಯುತ್, ಬಸ್ಸು ಮೊದಲಾದ ಮೂಲ ಸೌಲಭ್ಯಗಳೆಲ್ಲ ಇವೆ. ದೊಡ್ಡ ಶಾಲೆ ಇದೆ. ಆಡಲು ಗೆಳೆಯರೆಲ್ಲ ಇದ್ದಾರೆ. ಆದರೆ ಅಪ್ಪನಿಂದ ಪದೇ ಪದೇ ಬೈಯ್ಯಿಸಿಕೊಳ್ಳುತ್ತಾ ಶಿಕ್ಷೆಗೆ ಒಳಗಾಗುವ ಶಾಮ ಅಜ್ಜಿ ಮನೆ ಇಷ್ಟಪಡುವುದು ಸಹಜವಾದರೆ, ಹಳ್ಳಿಯ ಪರಿಸರದ ಅಜ್ಜಿಯ ಮನೆಯ ಊರಾದ ಶಾಮಲಾಪುರ ಶಾಮನನ್ನು ಒಳ ಅಂತರಂಗದಿಂದಲೇ ಆಕರ್ಷಿಸುವುದು ವಿಶೇಷ.

ಶಾಮಲಾಪುರದ ದಸರಾ ಹಬ್ಬ- ಬನ್ನಿಮುಡಿಯುವ ಕಾರ್ಯಕ್ರಮ, ಬಯಲಾಟ, ಈಜಾಡಲು ಇರುವ ಹಳ್ಳ, ಮೀನು ಹಿಡಿಯುವ ಆಟ, ಪುಟ್ಟ ಕರುವಿನೊಂದಿಗಿರುವ ಹಸುವಿನ ಹಾಲು ಕರೆಯುವುದು, ಆಂಜನೇಯ ಸ್ವಾಮಿ ದೇವಸ್ಥಾನ, ಸೂರ್ಯಸ್ತ ನೋಡುವುದನ್ನೆಲ್ಲ ತಂದಿಟ್ಟು ಶಾಮನಿಗೆ ಆಕರ್ಷಣೆ ಆಗುವ ಸಂಗತಿಗಳೆಲ್ಲ ಓದುಗರಿಗೂ ಆಸಕ್ತಿ ಆಗುವಂತೆ ಮಾಡಿದ್ದಾರೆ ಲೇಖಕರು. ಅಜ್ಜಿ, ತಾತ, ಚಿಕ್ಕಮ್ಮ, ಆಕಳು- ಆಡು, ಹೂ ತೋಟ, ಬೆಳ್ಳಕ್ಕಿಗಳೆಲ್ಲ ಶಾಮನನ್ನು ಪ್ರೀತಿಯಿಂದ ಹಿಡಿದಿಡುವ ಸಂಗತಿಗಳು. ಕೋಪಿಷ್ಟ ಪಂಡಿತರಾದ ಶಿಕ್ಷಕ ನರಸಿಂಹಾಚಾರ್ಯರ ಟೋಪಿ ಬಿದ್ದುಹೋದಾಗ ಮಕ್ಕಳು ನಕ್ಕಿದ್ದರಿಂದ ಉಂಟಾದ ಪ್ರಸಂಗ, ಕಸ್ತೂರಿ ಟೀಚರ್ ನೀಡಿದ ಹೋಂವರ್ಕ್ ಪ್ರಸಂಗ, ಶಾಮಲಾಪುರಕ್ಕೆ ಹೋಗುವಾಗ ಶಾಮ ಬಸ್ಸಿನಲ್ಲಿ ಕಂಡ ಕನಸು, ಶಾಮನ ಅಜ್ಜನ ಕುರುಡುತನದ ಹಿಂದಿರುವ ಕಥೆ, ಭೀಮ ಮತ್ತು ಗೆಳೆಯರೊಂದಿಗೆ ಶಾಮ ಕೆರೆ ಸುತ್ತಿ ಬಂದಾಗ ಉಂಟಾದ ಸಂಗತಿಗಳೆಲ್ಲ ಕಾದಂಬರಿಯನ್ನು ಹೆಚ್ಚು ಆಕರ್ಷಕಗೊಳಿಸುತ್ತವೆ ಎನ್ನಬಹುದು. ಈ ಕಾದಂಬರಿಯಲ್ಲಿಬರುವ ಅಜ್ಜಿ, ಮಾವ, ಚಿಕ್ಕಮ್ಮ, ಅಮ್ಮ ಮೊದಲಾದವರು ತೋರಿಸುವ ಪ್ರೀತಿಗಳೆಲ್ಲ ಮಕ್ಕಳು ಪ್ರೀತಿಯಲ್ಲಿ ಹೇಗೆಲ್ಲಾ ಒಂದಾಗುತ್ತಾರೆ ಎಂದು ಹೇಳುತ್ತಾ ಅವರ ಬದುಕಿನಲ್ಲಿ
ಅದು ಹೇಗೆ ಖುಷಿಯ ನೆನಪಾಗಿ ಉಳಿಯುತ್ತದೆ ಎಂಬುದನ್ನೂ ನಮಗೆ ಹೇಳುತ್ತದೆ.

ಆರನೇ ತರಗತಿಯವರೆಗೆ ಯಡದೂರಿನಲ್ಲಿ ಓದುವ ಶಾಮ ಏಳನೇ ತರಗತಿ ಓದಲು ಶಾಮಲಾಪುರಕ್ಕೆ ಹೋಗುವುದು ಅಲ್ಲಿ ಒಂದು ವರ್ಷ ಕಳೆದು ಅನಿವಾರ್ಯವಾಗಿ ಊರಿಗೆ ಮರಳುವದರೊಂದಿಗೆ ಮುಗಿಯುವ ಕಥೆ ಶಾಮನ ಸುತ್ತಲೂ ಅರಳುವ ಕಾದಂಬರಿಯಾಗಿ ರೂಪ ಪಡೆದಿದೆ. ಇದರಲ್ಲಿರುವ ಹದಿಮೂರು ಅಧ್ಯಾಯಗಳಲ್ಲಿ ಯಾವುದೇ ಅಧ್ಯಾಯವನ್ನು ಪ್ರತ್ಯೇಕವಾಗಿ ಓದಿದರೂ ಒಂದು ಪ್ರಸಂಗದ ಓದಾಗಿ ಖುಷಿಪಡಬಹುದು ಎಂದೂ ನನಗೆ ಅನಿಸುತ್ತದೆ. ಕಾದಂಬರಿಯುದ್ದಕ್ಕೂ ಬರುವ ಹಳ್ಳಿಯ ಚಿತ್ರಣ, ಮಕ್ಕಳ ಸುತ್ತಲಿನ ವಿವಿಧ ರೀತಿಯ ಆಗುಹೋಗುಗಳೆಲ್ಲ ಮಕ್ಕಳ ಜೊತೆ ಹಿರಿಯರಿಗೂ ಸಂತಸ ತರುತ್ತವೆ. ಎಲ್ಲರೂ ಮಕ್ಕಳನ್ನು ಪ್ರೀತಿಸುವವರೇ. ಆದರೆ ಮಕ್ಕಳೊಂದಿಗಿನ ಪ್ರೀತಿ ಹೇಗೆಲ್ಲಾ ಇರಬೇಕು ಅದು ಮಕ್ಕಳಲ್ಲಿ ಒಳಿತಿನ ಆನಂದವನ್ನು ಹೇಗೆ ಬೆಳೆಸುತ್ತದೆ ಎಂಬುದನ್ನು ಹೇಳುವಲ್ಲಿ ಈ ಕಾದಂಬರಿಯ ಯಶಸ್ಸು ಅಡಗಿದೆ. ಈ ಯಶಸ್ಸಿನ ಕಾದಂಬರಿಯನ್ನು ಮಕ್ಕಳು ಹಿರಿಯರೆಲ್ಲ ಓದಿ ಸಂತಸ ಪಡುವುದರೊಂದಿಗೆ ಮಂಡಲಗಿರಿ ಪ್ರಸನ್ನ ಅವರನ್ನು ಅಭಿನಂದಿಸಲಿ.

‍ಲೇಖಕರು Admin MM

May 29, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: