ಶಶಿಧರ ಹಾಲಾಡಿ ಓದಿದ ‘ನಮ್ಮಲ್ಲೆ ಮೊದಲು’


ಶಶಿಧರ ಹಾಲಾಡಿ

ಈ ಸಂಕಲನದಲ್ಲಿರುವ, ಸುಲಭವಾಗಿ ಓದಿಸಿಕೊಳ್ಳುವ ಬರಹಗಳನ್ನು ಓದಿ ನಾನು ನಿಜಕ್ಕೂ ವಿಸ್ಮಯಪಟ್ಟಿದ್ದೇನೆ. ಈ ವಿಸ್ಮಯಕ್ಕೆ ಕಾರಣಗಳು ಹಲವು. ಮೊದಲನೆಯ ಮತ್ತು ಪ್ರಮುಖ ಕಾರಣವೆಂದರೆ, ದಿನನಿತ್ಯದ, ಮೇಲ್ನೋಟಕ್ಕೆ ಕ್ಷುಲ್ಲಕ ಎನಿಸುವ ಘಟನೆಗಳನ್ನು, ವಿದ್ಯಮಾನಗಳನ್ನು ಆಯ್ದುಕೊಳ್ಳುವ ಲೇಖಕರು, ಅದಕ್ಕೆ ಅಂದವಾದ ರೆಕ್ಕೆ ಪುಕ್ಕ ಜೋಡಿಸಿ, ಚೌಕಟ್ಟಿನೊಳಗೆ ಕೂರಿಸುವ ಪರಿ ಬೆರಗು ಹುಟ್ಟಿಸುವಂತಹದ್ದು. ಇಲ್ಲಿರುವ ಹೆಚ್ಚಿನ ಬರಹಗಳು ಸ್ವಂತ ಅನುಭವಗಳೆಂಬಂತೆ ರೂಪುಗೊಂಡು ಆಪ್ಯಾಯಮಾನ ಎನಿಸುತ್ತವೆ.

ಜೊತೆಗೆ, ಇಲ್ಲಿನ ಬರಹಗಳಲ್ಲಿ ಲೇಖಕರು ತಮ್ಮನ್ನು ತಾವೇ ಲೇವಡಿಗೆ, ವ್ಯಂಗ್ಯಕ್ಕೆ, ಹಾಸ್ಯಕ್ಕೆ ಒಳಪಡಿಸಿಕೊಳ್ಳುವ ಆರೋಗ್ಯಕರ ಶೈಲಿಯೂ ಗಮನಸೆಳೆಯುತ್ತದೆ. ನಮ್ಮ ಸುತ್ತಲಿನ ಸಮಾಜದ, ನೆರೆಹೊರೆಯವರ ವರ್ತನೆಯಲ್ಲಿ ಕಾಣುವ ಕುಂದುಕೊರತೆಗಳನ್ನು ಹಾಸ್ಯಕ್ಕೆ ಒಳಪಡಿಸುವಾಗ, ಅವರನ್ನು ದೂರುವ ಬದಲಿಗೆ, ತಾವೇ ಹಾಸ್ಯ ಮಾಡಿಕೊಂಡು, ಪರೋಕ್ಷವಾಗಿ ಒಟ್ಟು ಸಮಾಜವನ್ನು ನಿಕಶಕ್ಕೆ ಒಳಪಡಿಸುವ ವಿಧಾನ ಮೆಚ್ಚುಗೆ ಮೂಡಿಸುತ್ತದೆ.

ಈ ಸಂಕಲನವು ಮೂಡಿಸುವ ಇನ್ನೊಂದು ವಿಸ್ಮಯವೆಂದರೆ, ಲೇಖಕ ರವಿ ಮಡೋಡಿಯವರ ಬಹುಮುಖ ಪ್ರತಿಭೆಯು ಇಲ್ಲಿ ಪ್ರಕಟಗೊಂಡ ಪರಿ. ವೃತ್ತಿಯಲ್ಲಿ ಹಿರಿಯ ತಂತ್ರಜ್ಞರಾಗಿರುವ ರವಿ ಮಡೋಡಿಯವರಿಗೆ ಸಹಜವಾಗಿಯೇ ಬಿಡುವಿಲ್ಲದ ಕೆಲಸ. ಈ ಕಾಲಮಾನದಲ್ಲಿ ನಮ್ಮ ನಾಗರಿಕತೆ ಸಾಧಿಸಿರುವ ತಂತ್ರಜ್ಞಾನದ
ಪರಾಕಾಷ್ಠೆಯಿಂದಾಗಿ, ಒಮ್ಮೊಮ್ಮೆ ದೂರದೇಶದ ಸಮಯವನ್ನು ಹೊಂದಿಸಿಕೊಂಡು, ಕೆಲಸ ಮಾಡುವ ಅನಿವಾರ್ಯತೆ. ಅಂತಹ ಯಾಂತ್ರಿಕ ಮತ್ತು ತುಸು ಕಠಿಣವೆನಿಸುವ ದಿನಚರಿಯ ನಡುವೆಯೂ, ರವಿ ಮಡೋಡಿಯವರಿಗೆ ಇಂತಹ ಪ್ರಬಂಧಗಳನ್ನು ರಚಿಸಲು ಸಾಧ್ಯವಾಗಿದೆ ಎಂಬುದೇ ವಿಸ್ಮಯ. ಇಲ್ಲಿನ ಪ್ರಬಂಧಗಳಲ್ಲಿ ಕಾಣುವ ನವಿರಾದ ಹಾಸ್ಯ, ತಮ್ಮನ್ನು ತಾವೇ ತಮಾಷೆಗೊಳಪಡಿಸಿಕೊಳ್ಳುವಿಕೆ, ಬರಹದ ಚೌಕಟ್ಟು ಎಲ್ಲವೂ ರವಿ ಮಡೋಡಿಯವರ ಕೃತು ಶಕ್ತಿಗೊಂದು ಪುರಾವೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದೇ ಸಮಯದಲ್ಲಿ, ಅವರು ಮಲೆನಾಡಿನ ಅಜ್ಞಾತ ಕಲಾವಿದರ ಮಾಹಿತಿಯನ್ನು ಕಲೆಹಾಕಿ, ಅದಕ್ಕೆ ಬರಹ ರೂಪ ನೀಡಿ, ಪುಸ್ತಕದಲ್ಲಿ ಸಂಗ್ರಹಿಸಿ ಪ್ರಕಟಿಸಿದ್ದಾರೆ ಎಂಬ ವಿಚಾರ ತಿಳಿದಾಗ, ಇನ್ನಷ್ಟು ಬೆರಗು ಮೂಡುತ್ತದೆ, ಅವರ ಕುರಿತು ಹೆಮ್ಮೆ ಎನಿಸುತ್ತದೆ. ಸಾಹಿತ್ಯ ರಚನೆಯಲ್ಲಿ ಬೇರೆ ಬೇರೆ ರಂಗದಲ್ಲಿರುವವರು ತೊಡಗಿಕೊಳ್ಳಬೇಕು, ಆಗಲೇ ಒಟ್ಟು ಸಾಹಿತ್ಯ ವೈವಿಧ್ಯಮಯ ಮತ್ತು ಸಶಕ್ತ ಎನಿಸುತ್ತದೆ ಎಂಬ ಆಶಯಕ್ಕೆ ಪೂರಕವಾಗಿದೆ ರವಿ ಮಡೋಡಿಯವರು ಸಾಹಿತ್ಯಕ ಅಭಿಯಾನ. ಇದರ ಜತೆಯಲ್ಲೇ, ಅವರು ಯಕ್ಷಗಾನ ಕಲಾವಿದರೂ ಹೌದು, ಬಣ್ಣ ಬಣ್ಣದ ದಿರಿಸು ಧರಿಸಿ, ರಂಗದ ಮೇಲೆ ನರ್ತನವನ್ನೂ ಮಾಡಬಲ್ಲರು, ಅರ್ಥಗಾರಿಕೆಯನ್ನೂ ಮಾಡಬಲ್ಲರು ಎಂಬ ವಿಚಾರವು ಇನ್ನಷ್ಟು ವಿಸ್ಮಯವನ್ನು ಹುಟ್ಟಿಸುತ್ತದೆ!

ರವಿ ಮಡೋಡಿಯವರ ಸಾಹಿತ್ಯಕ ಕೃಷಿ ಇನ್ನಷ್ಟು ವಿಪುಲವಾಗಿ, ಗಟ್ಟಿಯಾಗಿ ರೂಪುಗೊಳ್ಳಲಿ ಎಂದು ಆಶಿಸುತ್ತೇನೆ. ಇಲ್ಲಿನ ಬರಹಗಳನ್ನು ಕಂಡಾಗ ಅನಿಸುವುದಿಷ್ಟೇ ಈ ಲೇಖಕ ಕನ್ನಡ ಸಾಹಿತ್ಯಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಗಮನಾರ್ಹ ಕೊಡುಗೆ ನೀಡಬಲ್ಲರು, ಆ ಶಕ್ತಿ ಅವರಲ್ಲಿದೆ.

‍ಲೇಖಕರು Admin

November 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: