ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’ ಮತ್ತು ಬಿ.ಜಿ.ಸತ್ಯಮೂರ್ತಿಯವರಿಗೆ ‘ಚಡಗ ಸಂಸ್ಮರಣಾ ಪುರಸ್ಕಾರ’ವನ್ನು ಘೋಷಿಸಲಾಗಿದೆ.
ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಸಾಹಿತಿ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯು ಆಯ್ಕೆಯಾಗಿದೆ. ಸಾಹಿತ್ಯ ಮತ್ತು ಸಂಘಟನೆಯ ಕ್ಷೇತ್ರಗಳಲ್ಲಿ ಚಡಗರ ಒಡನಾಡಿಯಾಗಿದ್ದ ಬಿ ಜಿ ಸತ್ಯಮೂರ್ತಿಯವರ ಜೀವಮಾನ ಸಾಧನೆಯನ್ನು ಪರಿಗಣಿಸಿ, ಅವರಿಗೆ ‘ಚಡಗ ಸಂಸ್ಮರಣಾ ಪುರಸ್ಕಾರ’ವನ್ನಿತ್ತು ಗೌರವಿಸಲಾಗುವುದೆಂದೂ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ ಎನ್ ಭಾಸ್ಕರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಶಶಿಧರ ಹಾಲಾಡಿಯವರ `ಅಬ್ಬೆ’ ಕಾದಂಬರಿಯು ಅಪರೂಪದ ಸಸ್ಯವೈವಿಧ್ಯಗಳಲ್ಲಿ ಮತ್ತು ಅಷ್ಟೇ ಅಪರೂಪದ ದಂತಕತೆಯಂತೆ ಇರುವ ಅಬ್ಬೆ ಜೇಡ ಮತ್ತಿತರ ಜೀವ ವೈವಿಧ್ಯಗಳಲ್ಲಿ ಆಸಕ್ತನಾದ ಬ್ಯಾಂಕ್ ನೌಕರನೊಬ್ಬ, ಪರಿಸರವನ್ನು ಅವಲಂಬಿಸಿರುವ ಮನುಷ್ಯಜೀವಿಯು, ಪರಿಸರದಲ್ಲಿನ ವಿಷಜಂತುಗಳಿಗಿಂತ ಹೆಚ್ಚು ಅಪಾಯಕಾರಿಯಾಗಬಲ್ಲ ಎಂಬ ಕಟುಸತ್ಯವನ್ನು ಕಂಡುಕೊಳ್ಳುವ ಕಥೆಯನ್ನು ಹೇಳುತ್ತದೆ. ಬಿ ಜಿ ಎಲ್ ಸ್ವಾಮಿಯವರೂ ಪೂರ್ಣಚಂದ್ರ ತೇಜಸ್ವಿಯವರೂ ಸೃಷ್ಟಿಸಿ ಕೈಬಿಟ್ಟ ನಿಗೂಢ ಜಗತ್ತುಗಳ ಮುಂದುವರಿಕೆಯಂತೆ ಕಾಣಿಸುವ ಇಲ್ಲಿನ ವಸ್ತು ಮತ್ತು ನಿರೂಪಣೆಯ ಸ್ನಿಗ್ಧತೆ ಮತ್ತು ಗಹನತೆಗಳನ್ನು ಗುರುತಿಸಿ, ಮೂವರು ತೀರ್ಪುಗಾರರ ಸಮಿತಿಯು ಈ ಕಾದಂಬರಿಯನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆಯೆಂದು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಕೋಟದಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
0 ಪ್ರತಿಕ್ರಿಯೆಗಳು