ಶಶಿಕಲಾ ಬಾಯಾರ್ ಲೋಕದಲ್ಲಿ..

ಶ್ಯಾಮಲಾ ಮಾಧವ

ಶಶಿಕಲಾ ಬಾಯಾರ್ ಅವರ ಬಾಯಾರಿನ  ತೋಟದ ಮನೆಯಲ್ಲಿ  ಪ್ರಕೃತಿ ಸಿರಿ ಹಾಗೂ ಕಲಾ ಸಿರಿಯು ಅವರ ಹೃದಯ ಸಿರಿಯೊಡನೆ ಮೇಳೈಸಿದ ಆತಿಥ್ಯದ ಅನುಭವವನ್ನು ಹಂಚಿಕೊಳ್ಳದಿರುವುದೆಂತು? ಬಾಯಾರಿಗೆ  ಹೋಗೋಣ ಬನ್ನಿ; ಶಶಿಕಲಾ ನಿಮ್ಮನ್ನು ಕರೆ ತರಲು ಹೇಳಿದ್ದಾರೆ, ಎಂದು ಜೊತೆಗೆ ಕರೆದೊಯ್ದವರು, ಗೆಳತಿ ಲೇಖಕಿ ಬಿ.ಎಂ.ರೋಹಿಣಿ. ಜೊತೆಗೆ ನಮ್ಮ ‘ಕರಾವಳಿ ಲೇಖಕಿಯರ ಸಂಘ’ದ ಇನ್ನಷ್ಟು ಗೆಳತಿಯರು.

ಏರಿಳಿದು ಸುತ್ತಿ ಸುಳಿವ ಗುಡ್ಡ, ಬೆಟ್ಟ, ಕಾಡು, ಮೇಡಿನ ದಾರಿಯಲ್ಲಿ ಸಾಗಿ ಆ ತೋಟದ ಮನೆ ಸೇರಿದ್ದೇ ಶಶಿಕಲಾರ ಪ್ರೀತಿ, ಸ್ನೇಹದ ಹೊನಲಲ್ಲಿ ನಾನು ತೇಲಿ ಹೋಗಿದ್ದೆ. ವಿಶಾಲ ಅಂಗಣದಂಚಿನ ಹಣ್ಣಿನ ಮರಗಳು, ಮನೆಯ ಸುತ್ತಲೂ ಹರಡಿ ನಿಂತ  ಅಡಿಕೆ, ಜಾಯಿಕಾಯಿ ತೋಟ, ಅಂಗಣದ ತುದಿಯಲ್ಲಿ ಈ ಬೆಳೆಯನ್ನು ಬಿಸಿಲಿಗೆ ಹರವುವ ಮಂಚ;  ಮನೆಯ ಹೊರಚಾಚಿಕೊಂಡ ಅಂಕಣದಲ್ಲಿ ಶ್ರೀಪತಿರಾಯರ ತಮ್ಮ ಕೃಷ್ಣರಾಜನ ಕೊಳಲು ತಯಾರಿಕಾ ಕೋಣೆ, ಮನೆಯ ಗೋಡೆಗಳಲ್ಲಿ ನೋಡುಗರ ಕಣ್ಣು ಕೀಲಿಸುವಂಥಾ ಶಶಿಕಲಾರ ಚಿತ್ರ, ಕಸೂತಿ ಕಲೆಯ  ಫ್ರೇಮ್ ಹಾಕಿದ ಪಟಗಳು.

ಬಾಯಾರಿಕೆ, ತಿಂಡಿ ಸಮಾರಾಧನೆಯ ಬಳಿಕವೂ ಆ ಒಲೆಗಳ ಮೇಲೆ ಮಹಾಗಾತ್ರದ ಎರಡು ಇಡ್ಲಿ ಪಾತ್ರೆಗಳಲ್ಲಿ ಬೇಯುತ್ತಿದ್ದ ಕೊಟ್ಟಿಗೆಯ ಸುವಾಸನೆಯೊಡನೇ ಹೊರಗಿಳಿದು ತೋಟ ಸುತ್ತಲು ಹೊರಟೆವು.. ಅಡಿಗೆ ಮನೆಯೆದುರು ಹಬ್ಬಿ ಮೊದಲಿಂದಲೂ ತೂಗುತ್ತಿರುವ ಕುಂಬಳಕಾಯಿ ಬಳ್ಳಿಗಳು; ಮೆಣಸಿನ ಗಿಡಗಳು; ಬಸಳೆ ಚಪ್ಪರ; ಗುಲಾಬಿ, ಕೆಂಪು ಯಥೇಚ್ಛ ಹೂಗಳನ್ನು ಹೊತ್ತು ಗುಲಾಬಿ ಗಿಡಗಳು; ನಕ್ಷತ್ರ ರಾಶಿಯಂತೆ ಹೂ ಹೊತ್ತ ಜಾಜಿ ಪೊದೆಗಳು!. ಮನೆಗೂ, ಆ ವಿಶಾಲ ತೋಟಕ್ಕೂ ನೀರುಣಿಸುತ್ತಿದ್ದ ಗುಂಪೆಯನ್ನೂ ಕಂಡು, ತೋಟದ ತುದಿಯಲ್ಲಿ ಜಲಪಾತ ಸೃಷ್ಟಿಸಿದ ತೊರೆಯನ್ನೂ ಕಂಡು. ಮನೆಗೆ ಮರಳಿದ ಬಳಿಕ ಹಿತ್ತಿಲ ಬೆಳೆಯಿಂದಲೇ ಸುಗ್ರಾಸ ಭೋಜನ! ಉಂಡ ಬಳಿಕ ಆಶಯನ ತಬಲಾ ವಾದನಕ್ಕೆ ರೋಹಿಣಿ ಹಾಡಿನ ಸಾಥ್ ನೀಡಿದರು.. ಶ್ರೀಪತಿ ರಾಯರು ಕುಳಿತು ಆಲಿಸುತ್ತಿದ್ದರು. ಕೊಳಲು ಕೊಳ್ಳಲು ಉತ್ತರ ಭಾರತದಿಂದ ಬಂದ ಕಲಾವಿದರಿಂದ ವೇಣುಗಾನವನ್ನೂ ಸವಿಯುವಂತಾಯ್ತು.

ನಮ್ಮ ಮೂರನೆಯ ಭೇಟಿಯಲ್ಲಿ ಮನೆಯ ವಿನ್ಯಾಸ ಬದಲಾಗಿತ್ತು. ಅಗತ್ಯವಿದ್ದ ಬದಲಾವಣೆಗಳನ್ನು ತಾನೇ ರೂಪಿಸಿ  ಚೊಕ್ಕ, ಚಂದ, ಅನುಕೂಲಕರವಾಗಿ ಮಾರ್ಪಡಿಸಿದ ಮನೆಯೊಡೆಯ ಶ್ರೀಪತಿ ರಾಯರು, ಏನೋ ಅಗತ್ಯ ಕೆಲಸ ಪರದಲ್ಲೂ ಕಾದಿತ್ತೆಂಬಂತೆ ಎರಡೇ ತಿಂಗಳ ಅಸೌಖ್ಯದ ಕೊನೆಗೆ ಹೊರಟು ಹೋಗಿದ್ದಾರೆ. ಮನೆ, ತೋಟ, ಮಕ್ಕಳು, ಮೊಮ್ಮಕ್ಕಳ ಪ್ರೀತಿಯ ಆಸರೆ ಶಶಿಕಲಾರನ್ನು ಆಘಾತದಿಂದ ಚೇತರಿಸುತ್ತಿದೆ.

ಕಾಲೇಜ್ ವಿದ್ಯಾರ್ಥಿಗಳ ತಂಡವೊಂದು ಶಶಿಕಲಾರ ಕಲಾ ನೈಪುಣ್ಯದ ವರದಿ ಹಾಗೂ ಸಂದರ್ಶನಕ್ಕಾಗಿ ಬಂದಿತ್ತು. ಮನೆ, ತೋಟದ ಇಷ್ಟೆಲ್ಲಾ ಜವಾಬ್ದಾರಿಯ ನಡುವೆಯೂ ಅಪಾರ ತಾಳ್ಮೆ, ಶ್ರದ್ಧೆ, ವಿಶೇಷ ಪರಿಣತಿಯ ಶಶಿಕಲಾರ ಬೆರಳುಗಳಲ್ಲಿ ಮೂಡುವ  ಕಸೂತಿ ಕಲೆಯಲ್ಲಿ  ಕನ್ನಡದ ಹಿರಿಯ ಸಾಹಿತಿಗಳೂ, ಅವರ ಪುಸ್ತಕಗಳ ಮುಖಪುಟಗಳೂ, ಸುತ್ತಣ ಪ್ರಕೃತಿ ಚಿತ್ರಗಳೂ ಮೈತಳೆದಿವೆ.

ಅವರ ಪತ್ರ ಲೇಖನದ ಸೊಬಗು ‘ಉದಯವಾಣಿ’ಯಲ್ಲಿ ತೆರೆದುಕೊಂಡಾಗಲೇ ನಾನು ಶಶಿಕಲಾ ಸ್ನೇಹವಲಯದಲ್ಲಿ ಸೇರಿ ಹೋಗಿದ್ದೆ. ಪೆರ್ಲ ಕೃಷ್ಣ ಭಟ್ಟರ ಮಗಳಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳಲ್ಲಿ  ತನ್ನನ್ನೇ ತಾನು ತೆರೆದು ಕೊಳ್ಳುತ್ತಿರುವ ಶಶಿಕಲಾರ ಮಾತು, ಬರಹಗಳೂ  ಕಲಾವಂತಿಕೆಯ ಪ್ರತಿಕೃತಿಗಳು.ಅವರ ಪತ್ರಗಳು ಬದುಕಿಗೇ ಬರೆದಂಥ ಪ್ರೇಮ ಪತ್ರಗಳು ಎಂದೂ, ಹಾಗೆಂದೇ ಅವು ಅಪೂರ್ವವಾದ ಜೀವನಸತ್ವದಿಂದಲೂ, ಕರುಣೆಯಿಂದಲೂ ಕಂಗೊಳಿಸುತ್ತಿವೆ ಎಂದೂ ಜಯಂತ್ ಕಾಯ್ಕಿಣಿ ಅವರು  ಬರೆದಿದ್ದಾರೆ.

ಕಥೆಗಾರರಾಗಿದ್ದ ಶ್ರೀಪತಿ ರಾವ್, ಶಶಿಕಲಾರ ಮಕ್ಕಳು ಹರ್ಷ ಹಾಗೂ ಚಿನ್ಮಯ. ಕವಿಯಾಗಿ ಕವನ ಸಂಕಲನ ಪ್ರಕಟಿಸಿರುವ ಹರ್ಷ ಹಳೆಯ ತೋಟದ ಮನೆಯಲ್ಲಿ ವಾಸವಾಗಿದ್ದು, ಅಲ್ಲಿ ಅಮ್ಮಮ್ಮ ತನಗೇ ಇರಲೆನ್ನುವ ಮುದ್ದು ಮೊಮ್ಮಗಳು. ಇಲ್ಲಿ ಅಮ್ಮಮ್ಮನನ್ನು ಬಿಡಲಾರದ ಚಿನ್ಮಯನ ಮಕ್ಕಳು ಅಭಿರಾಮ ಮತ್ತು ಅಭಿನಂದ. ಕೃಷ್ಣರಾಜರ ಮಗ ಆಶಯ ಕವಿಯಷ್ಟೇ ಅಲ್ಲ, ಪ್ರಾವೀಣ್ಯ ಪಡೆಯುತ್ತಿರುವ ತಬಲಾ ವಾದಕ ಕೂಡಾ. ಮೂವರೂ ಮಕ್ಕಳು ಚಿತ್ರಕಲಾಸಕ್ತರು; ಪ್ರತಿಭಾವಂತರು. ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಮನೆಯ ಕಿರಿಯ ಸೊಸೆಯಂದಿರು ನಿವೇದಿತಾ ಹಾಗೂ ಸ್ಮಿತಾ  ಕೂಡಾ ಅದೇ ಸುಸಂಸ್ಕಾರ ಸ್ವರೂಪರು.

ತಮ್ಮನ ಮಗಳು ಅಪೂರ್ವ ಕಲಾನಿಧಿಯಾಗಿದ್ದ ಹದಿನೆಂಟರ ಹರೆಯದ ಚೆಲುವಿನ ಖನಿ ಅಪೂರ್ವಳನ್ನು ಕಳಕೊಂಡ ಬೆನ್ನಿಗೇ ಪತಿ ಶ್ರೀಪತಿರಾಯರನ್ನೂ ಕಳಕೊಂಡು ಬೇಗುದಿಯ ಆಳಕ್ಕಿಳಿದಿದ್ದ ಶಶಿಕಲಾ  ಹೇಗೋ ಚೇತರಿಸುತ್ತಿದ್ದಾರೆ. ಅವರ ಚೈತನ್ಯದ ಚಿಲುಮೆ ಎಂದೂ ಬತ್ತದಿರಲಿ, ಕಲೆ, ಸಾಹಿತ್ಯ ಅಲ್ಲಿ ಸದಾ ಚಿಗುರೊಡೆದು ನಳನಳಿಸುತ್ತಿರಲಿ ಎಂದೇ ನಮ್ಮ ಆಶಯ.

 

‍ಲೇಖಕರು avadhi

December 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: