ಶರಣು ಹುಲ್ಲೂರು ಓದಿದ ‘ಅಭಿನಯ ಕಲಿಸಲು ಸಾಧ್ಯವಿಲ್ಲ’

ಶರಣು ಹುಲ್ಲೂರು

ಯಾವುದು ಹೌದು, ಅದು ಅಲ್ಲ ಎನ್ನುವ ತಾತ್ವಿಕ ತತ್ವದ ಕೃತಿ ‘ಅಭಿನಯ ಕಲಿಸಲು ಸಾಧ್ಯವಿಲ್ಲ’

ಇತ್ತೀಚಿನ ದಿನಗಳಲ್ಲಿ ನಕಾರಾತ್ಮಕ ಭಾವ ಸೂಸುವ ಸಂಗತಿಗಳೇ ಹೆಚ್ಚು ಗಮನ ಸೆಳೆಯುತ್ತಿವೆ. ಸಿನಿಮಾ ಶೀರ್ಷಿಕೆಯಾಗಲಿ, ಸಾಹಿತ್ಯ ಕೃತಿಯೇ ಇರಲಿ ‘ಯಾವುದು ಹೌದು, ಅದು ಅಲ್ಲ’ ಅಂತ ಹೇಳುವ ಮೂಲಕ ಚಿತ್ತವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಅದು ಗೆಲುವಿನ ಸೂತ್ರವೂ ಅನಿಸಿದೆ. ಹಾಗಾಗಿ ‘ಯಾವುದು ಅಲ್ಲ, ಅದನ್ನು ಹೌದು’ ಆಗಿಸುವ ಔದಾರ್ಯ ಶುರುವಾದ ಕಾಲಘಟ್ಟದಲ್ಲಿ ನನ್ನ ಕಣ್ಣಿಗೆ ಬಿದದ್ದು ಮೌನೇಶ್ ಬಡಿಗೇರ ಅವರ “ಅಭಿನಯ ಕಲಿಸಲು ಸಾಧ್ಯವಿಲ್ಲ” ಎನ್ನುವ ಕೃತಿ.

ಈ ಹಿಂದೆ ಹಾಡೊಂದರಲ್ಲಿ ಜಯಂತ್ ಕಾಯ್ಕಿಣಿ ‘ಆಹಾ ಎಂತಹ ಮಧುರ ಯಾತನೆ’ ಎಂಬ ಸಾಲುಗಳನ್ನು ಬರೆದಿದ್ದರು. ಯಾತನೆಗೂ ಮಧುರತೆ ಸ್ಪರ್ಶ ನೀಡಿದ್ದು ಆ ಹೊತ್ತಿನಲ್ಲಿ, ಆ ಕ್ಷಣಕ್ಕೆ ಅಚ್ಚರಿ ಮೂಡಿಸಿತ್ತು. ಈ ಕೃತಿ ಕೂಡ ನೋಡಿದಾಕ್ಷಣ ಮತ್ತೆ ಆ ಸಾಲುಗಳನ್ನೇ ನೆನಪಿಸಿತು.

ಅಭಿನಯ ಕಲಿಸಲು ಸಾಧ್ಯವಿಲ್ಲವಾ? ಸಾಧ್ಯ ಇದೆ ಅಂತಾದರೆ, ಅದರದ್ದೇ ಆದ ಆಯಾಮವಿದೆ. ಸಾಧ್ಯವಿಲ್ಲ ಅಂತಾದರೆ ಅದಕ್ಕೊಂದು ಲಾಜಿಕ್ಕಿದೆ. ಎರಡೂ ತುದಿ ಮೊದಲನ್ನು ಈ ಕೃತಿಯಲ್ಲಿ ಚರ್ಚಿಸುತ್ತಾ ಹೋಗಿದ್ದಾರೆ ಮೌನೇಶ. ಸ್ವತಃ ತಾವೂ ಅಭಿನಯ ಕಲಿತು, ಕಲಿಸಿ ಇಂಥದ್ದೊಂದು ನಿಲುವು ತಾಳುವುದು ಇದೆಯಲ್ಲ ಅದು ಮೌನದೊಳಗೆ ಶಬ್ದ ಹುಡುಕುವ ಸಾಹಸ. ಅಂತಹ ಸಾಹಸಕ್ಕೆ ಕೈಹಾಕುವ ಹುಂಬು ಧೈರ್ಯ ಮಾಡಿ, ಸೂಕ್ತ ಪಟ್ಟುಗಳ ಮೂಲಕ ಗೆಲುವನ್ನು ನಿರೂಪಿಸುತ್ತಾರೆ. ಅಭಿನಯ ಕಲಿಸಲು ಏಕೆ ಸಾಧ್ಯವಿಲ್ಲ ಎನ್ನುವ ಜಟಿಲ, ಜಂಜಡ ಗತಿಯನ್ನು ಸರಳೀಕರಿಸಿದ್ದಾರೆ. ಹಾಗಾಗಿ ಈ ಪುಸ್ತಕ ಅಭಿನಯ ಕಲಿಯಲು ಹೊರಡುವ ಕಲಿಕಾರ್ಥಿಗೆ ವಿಭಿನ್ನ ಕೈಪಿಡಿ ಆಗುವುದಂತೂ ಸತ್ಯ.

ರಂಗಭೂಮಿ ಯಾವಾಗಲೂ ಹೊಸ ಸಾಧ್ಯತೆಗಳನ್ನೇ ಸೃಷ್ಟಿಸುತ್ತಾ, ಸದಾ ಚಲನಶೀಲವಾಗಿ, ಉದಾರವಾದಿಯಾಗಿ, ತನ್ನನ್ನು ತಾನೇ ಮುರಿದುಕಟ್ಟುವ ಪ್ರಕ್ರಿಯೆಗೆ ಒಳಗಾಗುವಂಥದ್ದು. ಹಾಗಾಗಿ ಹಿಂದೆ ಅಭಿನಯ ಕಲಿಸುವಂಥದ್ದು ಆಗಿರಲಿಲ್ಲ. ರಕ್ತಗತವಾಗಿಯೇ ಅದು ಹರಿದು ಬಂದಿತ್ತು. ಕಾಲ ಸರಿದಂತೆ ಅದು ಕಲಿಕೆಯ ಭಾಗವಾಯಿತು. ಮತ್ತೆ ಇದೀಗ ಕಲಿಸಬೇಕಾ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೂತಿದೆ. ಆ ಎಲ್ಲ ಪ್ರಶ್ನೆಗೆ ಇಲ್ಲಿ ಉತ್ತರವಿದೆ.
ಈ ಕೃತಿ ಸರಳವಾಗಿ ಓದಿಸಿಕೊಳ್ಳುತ್ತಲೇ, ಅಭಿನಯದ ಹಲವು ಮಜಲುಗಳನ್ನು ತೆರೆದಿಡುತ್ತದೆ. ಅಭಿನಯ ಯಾರೇ ಕಲಿಸಲಿ, ಕಲಿಯಬೇಕಾದವರು ನಾವೇ ಎನ್ನುವ ಸರಳ ಸೂತ್ರದೊಂದಿಗೆ ನಾಂದಿ ಹಾಡುತ್ತದೆ. ಅಷ್ಟರ ಮಟ್ಟಿಗೆ ಹೊಸಬಗೆಯ ಈ ಕೃತಿ ಓದುಗನನ್ನು ಆವರಿಸಿಕೊಳ್ಳುತ್ತದೆ.

ಈ ಕೃತಿಯಲ್ಲಿ ಹಲವು ಅಧ್ಯಾಯಗಳಿದ್ದು, ಅಭಿನಯದ ಮೊದಲ ಪಾಠದಿಂದ ಶುರುವಾಗುವ ಅಧ್ಯಾಯದ ಪರ್ವ ಅಭಿನಯ ಕಲೆ, ಅಭಿನಯದ ಅಂಗಗಳು, ರಸದ ಆಸ್ವಾದಕ್ಕೆ ಅಡ್ಡಿಯಾಗುವ ಏಳು ವಿಘ್ನಗಳು, ಕ್ಯಾಮೆರಾ ಅಭಿನಯ ಮತ್ತು ನಾಟಕ ಅಭಿನಯ ಹೀಗೆ ಅಭಿನಯಕ್ಕೆ ಬೇಕಾದ ಎಲ್ಲ ಸಿದ್ಧ ಸಂಗತಿಗಳನ್ನು ಒಳಗೊಂಡಿದೆ. ಹಾಗಂತ ಈ ಪುಸ್ತಕವನ್ನು ಕೇವಲ ಅಭಿನಯದಲ್ಲಿ ಆಸಕ್ತಿ ಇರುವವರಿಗೆ ಮಾತ್ರ ಅಂತಲ್ಲ, ಓದುವ ಆಸಕ್ತರೆಲ್ಲರೂ ಅಪ್ಪಿಕೊಳ್ಳಬೇಕಾದ ಕೃತಿ.

ಹೆಸರಾಂತ ನಟ ಅಚ್ಯುತ್ ಕುಮಾರ್, ಇದೊಂದು ಒಳ್ಳೆಯ ಕೃತಿಯೆಂದು ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಸುಪ್ರಸಿದ್ಧ ಲೇಖಕ, ರಂಗಕರ್ಮಿ ಕೆ.ವಿ.ಅಕ್ಷರ ಈ ಕೃತಿಯ ಹೊಸ ಸಾಧ್ಯತೆಯ ಕುರಿತು ಮುನ್ನುಡಿಯಲ್ಲಿ ಬರೆದಿದ್ದಾರೆ. ಸಮಮನಸ್ಸಿನ ರಂಗಗೆಳೆಯರು ಕಟ್ಟಿರುವ ಥಿಯೇಟರ್ ತತ್ಕಾಲ್ ಬುಕ್ಸ್ ನಿಂದ ಕೃತಿಯನ್ನು ಹೊರತರಲಾಗಿದೆ. ಇದೇ ಜುಲೈ 17 ರಂದು ಬೆಂಗಳೂರಿನ ಹನುಮಂತ ನಗರದ ಕೆ.ಎಚ್.ಕಲಾಸೌಧದಲ್ಲಿ ಬೆಳಗ್ಗೆ 10.30ಕ್ಕೆ ಬಿಡುಗಡೆ ಆಗಲಿದೆ.

‍ಲೇಖಕರು Admin

July 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: