ಶಮಾ ಜಮಾದಾರ ಕಥೆ- ಜಗದ ಗೊಂದಲ ಬೇಡಾ ನನಗೆ…

ಶಮಾ ಜಮಾದಾರ

ಯಾಕ್..ಏನಾತು.. ನಿದ್ದಿ ಬರ್ವಾತೇನ.. ಕಾಲ್ ಒತ್ತಲೇನು, ಬಾಯ್ಯಾರ ಯಾಕೋ ಇನ್ನ ಬರಲಿಲ್ಲ ನೋಡ, ಒಂದ ಸೂಜಿನಾರ ಮಾಡತಿದ್ರು..ಆ ನೋವಿನ ಗುಳಿಗಿ ನುಂಗತಿಯೇನ, ನಿದ್ಯರ ಬರ್ತೈತಿ..

ಹೂಂ..ಸಾಕ ಸಾಕ ಮಾರಾಯ್ತಿ ಎಷ್ಟರ ವಟಗುಡತಿ, ತಲಿ ಮದಲ ಸಿಡ್ಯಾಕತ್ತೇತಿ ಹಂತಾದರಾಗ ನಿಂದೊಂದ ಪಿರಿಪಿರಿ. ಎಲ್ಲಿ ನಿದ್ದಿ ಹಚ್ಚಿ ಒಮ್ಯೆ ಮಲಗೂದಿನ್ನ ಕುಣ್ಯಾಗನ. ರಾಮ್ಯಾ ಏನರ ಫೋನ ಹಚ್ಚಿದ್ದೇನ.. ರೊಕ್ಕಾ ತುಗೊಂಡ ಬರ್ತನಿ ಅಂದಿದ್ದಾ..ನಿನ್ನಿ.

ಅಂವೆಲ್ಲಿ ಬರ್ತಾನು.. ನಿನ್ನ ಸೊಸಿ ಬಿಟ್ರ ಅಲ್ಲೇನ ಬರಾಂವ. ನಿಮ್ಮಪ್ಪಗ ದೊಡ್ಡ ರೋಗ ಬಂದೇತಿ.. ಹ್ವಾದಗೀದಿ.. ಮಕ್ಕಳಾ ಮರೀ.. ನೆಪ್ಪ ಇರ್ಲಿ.. ಸಾಯಾವ್ರ ಜೋಡಿ ಸಾಯೂದೈತೇನ.. ಅಂದಳಂತ ಮುಕುಳಿ ಮುಚಗೊಂಡ ಕುಂತಾನ ಮನ್ಯಾಗನ..

ಯಪ್ಪಾ ಎಂತಾ ವ್ಯಾಳ್ಯಾ ತಂದ್ಯೊ ಹನಮಪ್ಪಾ..ಹಡದ ತಂದೀ ತಾಯಿ ಎಡ್ಡ ಬಿದ್ದಾವ ದೂರ..ಮಗಾ ಆಗಿ ಬಂದ ನೋಡವಲ್ಲಾ..ಹೇಂತಿ ಮಾತ ಕೇಳಿ.. ಹಡಸಿಗಂಡ ಮನ್ಯಾಗ ಕುಂತಾನಂತ..ಸಾವಂತ್ರೀ..ರೊಕ್ಕಕರ ಏನ ಮಾಡ್ದೀ..ನನಗೂ ಹಸೂ ಆಗೇತಿ..ಹರೇವತ್ ಒಂದ ಇಡ್ಲಿ ತಿನಿಸಿ ಕುಂತಕ್ಕೀ..ಇನ್ನೂಮಟ್ಟಾ ಏನೂ ತಂದಿಲ್ಲಲ್ಲ..ನೀನೂ ಉಂಡಂಗಿಲ್ಲ..ಎಂಥಾ ಸುಮಾರ ಹಣೆಬಾರೋ ದೇವರ..ಎಂದು ಅಳತೊಡಗುವ ಗಂಡನನ್ನು ಗದರಿಸಿದಳು ಸಾಂವಕ್ಕಾ.

ಯಾಕಳತಿ.. ಒಂದಸವನ.. ಈಗಟ ಉಸರ ಬಂದೇತಿ.. ಸುಮ್ಮೀರ ನಿನ ಹೇಸಿ.. ಹೋಗಲಿ ಬಿಡ ಅತ್ತ, ಮಕ್ಳಾ ಮರಿ ಇರಾವ್ರ ಅವ್ರಾ ಅಂಜತಾರ. ಜೀಂವಾ ಉಳದ್ರಾ ಸಾಕ.. ಮುಂದ ನೋಡೂನಂತ. ನೀರ ಕುಡೀ.. ಒಂದ್ಯಾಡ ಕಾಳ… ಎಂದಾಗ, ಆ ಯಜಮಾನ ಅಳುತ್ತಲೇ ಅತ್ತ ಹೊರಳಿ ಮಲಗಿದ.

ಮಗಳಿಗರ ಫೋನ ಹಚ್ಚಿ ಮಾತಾಡಿ ನೋಡಬೇಕ.. ಅಳ್ಯಾನ ಕೈಯ್ಯಾಗ ಸ್ವಲುಪ ರೊಕ್ಕಾ ಅರ ಕಳಸ ಅಂತ ಹೇಳಿ ನೋಡ್ಬೇಕಂತ.. ಎಲೀಚೀಲಾಗಿನ ಚೋಪಡಿ ತಗದ ಕೈಯಾಗ ಹಿಡಕೊಂಡ.. ಬಾಜೂ ಪೇಷೇಂಟ್ ದೇಖರೇಕಿ ಹುಡುಗನ ಮುಂದ ನಿಂತು.. ಯಪ್ಪಾ, ಇದರಾಗ ನನ್ನ ಮಗಳ ನಂಬರೈತಿ ಏನಪಾ.. ಒಂದೀಟ ಫೋನ ಹಚ್ಚಿ ಕೊಡ ನನಮಗನ, ನಿನಗ ಪುಣ್ಯಾ ಬರ್ತೈತ್ಯೊ ನನ ಕೂಸ.. ಎಂದಳು ದೈನೈಶಿ ದನಿಯಲ್ಲಿ.

ನಿನ್ನ ಮಗಳ ಹೆಸರೇನಬೇ..ಎಂದು ಚೋಪಡಿ ತಗದು ಹುಡುಕತೊಡಗಿದ ಆ ಹುಡುಗ. ರತ್ನವ್ವ.. ಅಂತೈತಿ ನೋಡ ತಮ್ಮಾ.. ಎಂದಾಗ.. ಹೂಂನಬೇ ಯಮ್ಮಾ, ಕುರಬೇಟ ರತ್ನವ್ವ ಅಂತೈತಿ ಅದ ಏನಬೇ.. ಅಂದ. ಹೂಂಯಪ್ಪಾ.. ಅದ.. ಅದ ನೋಡ ಅಂದಳು ಮುಖವರಳಿಸಿ. ಹುಡುಗ ಅಲ್ಲಿರುವ ನಂಬರ್ ಡೈಯಲ್ ಮಾಡತೊಡಗಿದ.

ರಿಂಗ್ ಆದರೂ ಯಾರೂ ಎತ್ತಲಿಲ್ಲ. ಮತ್ತೆ ಮತ್ತೆ ರಿಂಗ್ ಮಾಡಿದಾಗ.. ಫೋನ್ ಆ ಕಡೆಯಿಂದ ಹಲೋ..ಎಂದಿತು ಗಂಡು ದನಿ. ಯಾರೆಪ್ಪ ಮಾತಾಡೂದ..ನಾ ಸಾಂವಕ್ಕಾ.. ದವಾಖಾನಿದಿಂದ..ಅಯ್ಯ.. ಅತ್ತಿ.. ಮಾಂವ ಹೋಗ್ಯ ಬಿಟ್ಟೇನ.. ಬೇ, ಏ ರತ್ನೀ ನಿಮ್ಮಪ್ಪ.. ಸತ್ನಂತಲೇ.. ಏ ನಿನ್ನ ಖೋಡಿ ನನ್ನ ಮಾತರ ಕೇಳ ನಿನ್ನ, ಅಂವ್ಯಾಕ ಸಾಯ್ತಾನ..ನಿನ್ನ ಮಾರಿ ಮಣ್ಣಾಗಡಗಲಿ..ಅತ್ತ ಕಡೆಯಿಂದ ಭೋ..ರ್ಯಾಡಿ ಅಳುವ ಶಬ್ದ.. ಥಟ್ಟನೆ ಫೋನಿಟ್ಟಳು ಸಾಂವಕ್ಕಾ.

ಅವಳ ಕಣ್ಣ ತುಂಬಾ ನೀರು ತುಂಬಿ ಕೆನ್ನೆಗಿಳಿದವು. ಕಣ್ಣು ಒರೆಸುತ್ತಾ ಗಂಡನೆಡೆಗೆ ಓಡುನಡೆಯಲ್ಲಿ ಹೋಗಿ.. ನಿಂತಳು. ಕಾಲುಗಳನ್ನು ಎತ್ತಿ ಒಗೆಯುತ್ತಾ.. ಅತ್ತಿತ್ತ ಹೊರಳಾಡುತ್ತಾ ಮಲಗಿದ್ದ ಯಜಮಾನ. ಧೈರ್ಯದಿಂದ ಮತ್ತೆ ಸಾವಕಾಶವಾಗಿ ಹೊರಗೆ ಬಂದಳು. ಹಸಿವೆಯಿಂದ ಅವಳಿಗೆ ಕಷ್ಟವಾಗುತ್ತಿತ್ತು. ನಿತ್ರಾಣಳಾದ ಸಾಂವಕ್ಕ, ಅಲ್ಲೇ ಒಂದು ಕಡೆಗೆ ಸುಮ್ಮನೆ ಕೂತಳು. 

ಆಸ್ಪತ್ರೆಯ ಆ ಕಡೆಗೆ, ದಾದಿಯರು ಗಡಿಬಿಡಿಯಲ್ಲಿ ಓಡಾಡುತ್ತಿದ್ದರು. ಕೊನೆಯ ಉಸಿರಿಗಾಗಿ ಚಡಪಡಿಸುತ್ತಿರುವ ದೇಹಕ್ಕೆ ಆಕ್ಸಿಜನ್ ಕೊಡುವ ಹರಸಾಹಸ ನಡೆದಿತ್ತು. ಆದರೂ ಎಳೆದು ಉಸಿರಾಡುವ ಕ್ಷಮತೆ ಇರದೇ ದೇಹಗಳು ತಣ್ಣಗಾಗುತ್ತಿದ್ದವು. ದಿನಾಲು ಈ ದೃಶ್ಯ ಸಾಮಾನ್ಯವಾಗಿತ್ತು. 

ನಡೆಯುತ್ತಾ ಬಂದು ಮಲಗಿದವರು ಏಳುತ್ತಲೇ ಇರಲಿಲ್ಲ. ಮುಂಜಾನೆ ವೈದ್ಯರ ಠಸ್ಸುಪಿಸ್ಸು ಇಂಗ್ಲೀಷ್ ಮಾತುಗಳು ಸಾಂವಕ್ಕಳಿಗೆ ಏನೋ ಒಂದು ಅಂದಾಜು ಸುದ್ದಿ ಕೊಟ್ಟಿದ್ದವು. ಅವರ ಮುಖಭಾವಗಳು.. ಯಜಮಾನನ ಸುಧಾರಿಸದ ಆರೋಗ್ಯದ ಬಗ್ಗೆ ನಿರಾಸೆಯನ್ನೇ ಬಿತ್ತಿದ್ದವು. ಬೆಳೆದ ಗೋದಿ ಚೀಲಗಳನ್ನು ಮಾರಾಟ ಮಾಡಿ ಬರುವಾಗ ಜೊತೆಗೆ.. ಜಡ್ಡನ್ನೂ ತಂದಿದ್ದ ಆರವತ್ತರ ಇಳಿವಯಸ್ಸಿನ ಯಜಮಾನ. ಜವಾರಿ ಮಂದಿ ನಾವ್.. ನಮಗೇನ ಆಕ್ಕೇತಿ ಬಿಡ ನಿನ್ನ.. ಅನಕೋಂತ.. ಒಂದ ವಾರ ಶೆರೆ ಕುಡುದ ಗುಡ್ಡದ ಹೊಲದಾಗ ಬಿದ್ದಾಂವ.. ಉಸುರ ಕೈಕೊಟ್ಟಾಗನ ಗಾಬರಿಬಿದ್ದ.. ಸರಕಾರಿ ದವಾಖಾನೇಕ ಹೋದರ.. ಕರೋನಾ ಬಂದೈತಿ ಅಂತ..ಜಿಲ್ಲಾ ದವಾಖಾನೇಕ ತಂದ ಒಗದ.. ಈಗ ಹದ್ನೈದ ದಿನಾ ಆಗೇತಿ. ಸಾಂವಕ್ಕಗ ಪಾಪ, ಗಂಡನ ಸೇವಾ ಮಾಡಾಕ ತಂದ ಯಜಮಾನನ ಹತ್ತೇಕ ಇಟ್ಟಾರ.. ಅಕೀಗೂ ದಿನ್ನಾ ನಾಕೈದ ಗುಳಿಗಿ ನುಂಗಸ್ತಾರ..ಅಕೀ ಗಟ್ಟಿ ಹೆಣಮಗಳ..ಇನ್ನೂ ಮಟ ಕೊಸಕ ಅಂದಿಲ್ಲ.. ಆದರ ಇಂದ ಯಾಕೋ, ಅಕೀ ಧೈರ್ಯೆ.. ಕುಸದೈತಿ. ನಿನ್ನಿ ಇದ್ದಂಗ ಇಂದಿಲ್ಲ ಯಜಮಾನ. ಕೈಯಾಗ ರೊಕ್ಕ ಇಲ್ಲ. ದವಾಖಾನೆ ಸಪ್ಪನ ಊಟ..ಸೇರೂದಿಲ್ಲ. ಹಸಕೊಂಡ ಕುಂತರ ನಂಗ ಉಳಿಗಾಲವಿಲ್ಲ.. ಅಂದ್ಕೊಂಡು, ಕೌಂಟರ್ ಕಡೀಗ ಬಂದ ಊಟದ ಪಾಕೀಟ ಇಸಕೊಂಡು ಅಲ್ಲೇ ಕುಂತು ಗಬಗಬ ತಿಂದು ನೀರು ಕುಡಿದಳು. 

ಯಮ್ಮಾ, ನಿಮ್ಮ ಮನೀಯೋರ ಫೋನ್ ಬೇ.. ತಗೋ ಎಂದು ಆ ಹುಡುಗ ಫೋನ ತಂದು ಕೊಟ್ಟಾಗ.. ಹಲೋ ಅಂದ್ಲು. ಆ ಕಡೀಂದ ಮಗಳ ದನಿ ಬಂತು. ಯವ್ವಾ ಎಪ್ಪಾ ಹ್ವಾದಂತಲ್ಲ ಬೇ ಎಂದು ಹಾಡಿಕೊಂಡು ಅಳುತ್ತಿದ್ದಳು.. ಏ.. ನಮ್ಮವ್ವಾ..ಇನ್ನ ಸತ್ತಿಲ್ಲ ಹಡದವ್ವಾ.. ಕರಗಾಲನ ತಂದ, ಕೊಲ್ಲಾಕ ಕುಂತಿರೇನ ನನ್ನ ಗಂಡನ.. ಎಂದು ಇವಳೂ ದನಿ ತೆಗೆದಳು. ಅಷ್ಟರಲ್ಲಿ.. ದವಾಖಾನಿ ಹುಡುಗ್ರು ಬಂದು ಬೈದಾಗ.. ಸೊರ್ರ..ಸೊರ್ರ..ಅನಕೊಂತ ಸುಮ್ಮಾದಳು.

ನನಗ ಕೈಯಾಗ ರೊಕ್ಕ ಇಲ್ಲೇನವಾ.. ಮಲಿಕಾಜೀ ಕೈಯಾಗ ಕೊಟ್ಟ ಕಳಸ ಹರೇವತ್ತ.. ನಿಮ್ಮಣ್ಣಗ ಹೇಳಿ ಸಾಕಾತ.. ಅವನ ಹೇಂತಿ.. ಕೆಂತಿ ತಕ್ಕೊಂಡ ಕುಂತಾಳ ನನಮಗಳ, ನೀನರೇ ನಿನ್ನ ಗಂಡನ ಕಳಸ ಬೇ..ಮರೀಬ್ಯಾಡ್.

…ಮೂರ ದಿನಾ ಆತಬೇ ಗಂಟ ಬಿದ್ದ ಅಂವಗ.. ಅಲ್ಲಿ ಕಳಿಸಿ.. ನೀ ರಂಡಿಮುಂಡಿ ಆಗಬೇಕಂದಿಯೇನ, ಸಾಯಾಕತ್ತನ ನಿಮ್ಮಪ್ಪ ಒಬ್ಬಾಂವ ಸಾಯಲಿ ಬಿಡ..ಆಗೇತಿ ಹೋಗೇತಿ ಅಂವದ. ನನ್ನ್ಯಾಕ ಕಳಿಸಿ ಸಾಯಹೊಡ್ಯಾಕ ನಿಂತಿದಿ ಅಂತ.. ಬೇದ ಬಿಟ್ಟ ಬೇ ಯವ್ವಾ,

ಅಯ್ಯೋ ನನ ಶಿವನಾ, ಮಾವನ ಮಾಲ ಸಿಗುವಾಗ.. ಓಡೋಡಿ ಬರತಿದ್ದ ನಿನ್ನ ಗಂಡಾ.. ಈಗ ಮಾವನ ಚಿಂತಿ ಇಲ್ಲೇನ ಅಂವಗಾ, ಹೊಟ್ಯಾಗ ಹುಟ್ಟಿದ ಮಗಾನ ಹೇಂತಿ ಸೀರ್ಯಾಗ ಕುಂತಾನ.. ಅಳ್ಯಾಗ ಏನ ಹೇಳೂದ ಬಿಡವಾ..

ತಂಗಿ ನೀನರ ಬಂದ ಹೋಗ ನನ ಕೂಸ, ನಿಮ್ಮಪ್ಪ ಭಾಳ ನೆನಸ್ತಾನ ಬೇ.. ಅಯ್ಯ ಯವ್ವಾ, ಹೊಟ್ಟ್ಯಾಗ ಕೂಸ ಇಟಗೊಂಡ ಹೆಂಗಬೇ ಬರಲಿ..ನನ್ನ ಅತ್ತಿ ಮಾವ ಕಳಸ್ಯಾರೇನ ಬೇ..

ಆತ ಬಿಡವಾ.. ಆದೂ ಖರೇನ ಐತಿ..ದೇವರಿಟ್ಟಾಂಗ ಆಗಲಿ..ಎಂದು ಒತ್ತರಿಸಿ ಬರುವ ಅಳು ನುಂಗುತ ಫೋನ್ ಕಟ್ ಮಾಡಿದಳು.

ಇರಪಾಕ್ಷಿ ಕಡ್ಯಾವ್ರ ಯಾರದರೀ.. ಎಂದು ಕೂಗಿದಾಗ.. ಇಹಕ್ಕೆ ಬಂದ ಸಾಂವಕ್ಕ ಲಗುಬಗೆಯಿಂದ ಒಳಗೆ ಓಡಿದಳು. ಲಗೂನ ಈ ಇಂಜೆಕ್ಷನ್ ತರಬೇಕ್ರೀ.. ಹೋಗ್ರೀ ಬೇಗ.. ಎಂದು ನರ್ಸ್ ಚೀಟಿ ಕೈಯಲ್ಲಿ ತುರುಕಿದಳು. ಕೈಯಲ್ಲಿ ಕಾಸಿಲ್ಲದೇ ಸುಮ್ಮನೆ ನಿಂತಳು ಸಾಂವಕ್ಕ. ಕಣ್ಣೀರು ದಳದಳನೇ ಇಳಿದವು.

ಅವಳ ಗಂಡ..ಚಡಪಡಿಸುತ್ತಿದ್ದ. ಇವಳಿಗಾಗಿ ಸುತ್ತಲೂ ನೋಡುತ್ತಿದ್ದ. ಆದರೆ ಸಾಂವಕ್ಕ ಅವನಿಂದ ಮರೆಯಾಗಿ ದೂರ ನಿಂತಳು. ಯವ್ವಾ ಸೌಂದತ್ತಿ ಯಲ್ಲವ್ವಾ..ಅಂವನ ಲಗೂನ ಕರಕೋ ತಾಯಿ, ಭಾಳ ತ್ರಾಸ ಕೊಡಬ್ಯಾಡ.. ನಮ್ಮವ್ವಾ.. ನಿನ್ನ ಪಾದಕ ಉಧೋ.. ಉಧೋ.. ಯಲ್ಲವ್ವಾ.. ಎಂದು ಕಾಣದ ದೇವಿಗೆ ಕೈಮುಗಿದಳು.

…ಮತ್ತೆ ಓಡಿ ಬಂದಳು ನರ್ಸ್.. ತಂದ್ರೇನು ಔಷಧಿ.. ಬೇಗ ಹೋಗ್ರೀ..ಅಂದಾಗ, ಅಳುತ್ತಾ ಕೈಮುಗಿದಳು. ಅವಳ ಪರಿಸ್ಥಿತಿ ಅವಳಿಗೂ ಅರ್ಥ ಆಯ್ತು. ಅವಳ ಕಣ್ಣ ಕೊನೆಗೆ ಕಣ್ಣೀರ ಹನಿ..ಜಾರಲು ಸಿದ್ಧವಾಗಿತ್ತು.

ನೀರು.. ನೀರು ಎನ್ನುತ್ತಿದ್ದ.. ಗಂಡನತ್ತ ಓಡಿದ ಸಾಂವಕ್ಕ, ಗಂಡನಿಗೆ ನೀರು..ಹಾಕಿದಳು ಆದರೆ ಒಳಗೆ ಇಳಿಯದೇ ಕಟಬಾಯಿಯಿಂದ ಹೊರಗೆ ಬಂತು ನೀರು. ಯವ್ವಾ ತಾಯಿ ಎಲ್ಲವ್ವಾ..ಎಂದು ಕೆಳಗೆ ಕುಸಿದು ಕುಳಿತಳು.. ಸಾಂವಕ್ಕ. ಅವಳನ್ನು ಹೊರಗೆ ಕುಳ್ಳಿರಿಸಿ..ಆಸ್ಪತ್ರೆ ಸಿಬ್ಬಂದಿ.. ಇರಪಾಕ್ಷಿಯ ದೇಹಕ್ಕೆ ಬಿಳಿ ಬಟ್ಟೆ ಮುಚ್ಚಿದರು. ಎಲ್ಲದಕ್ಕೂ ಸಾಂವಕ್ಕ ಹೆಬ್ಬೆಟ್ಟು ಒತ್ತಿ.. ಸುಮ್ಮನೆ ಕೂತಳು. ಮುಂಜಾನೆ ವೈದ್ಯರು ಬಂದ ನಂತರ ಅಧಿಕೃತವಾಗಿ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಯಿತು. ಮನೆಗೆ ತಿಳಿಸಬೇಕೆನಿಸಲಿಲ್ಲ.. ಆ ತಾಯಿಗೆ. ತಿಳಿಸಿದರೂ..ಅವರು ಬರುವರೆನ್ನುವ ಭರವಸೆ ಇದ್ದಿಲ್ಲ ಅವಳಿಗೆ. ಕಲ್ಲಾದಳು ಅವಳು. ಎಲ್ಲಾ ಕಾರ್ಯ ಮುಗಿದ ನಂತರ.. ಆಸ್ಪತ್ರೆಯ ಗಾಡಿ ಅವಳನ್ನು ಊರಿಗೆ ತಂದು ಬಿಟ್ಟಿತು. ಮನೆಗೆ ಹೋಗಬೇಕೆನಿಸಲಿಲ್ಲ. ಹೋದರೂ ಅಲ್ಲಿ ದೊರೆಯುವ ಸ್ವಾಗತ ಹೇಗಿರಬಹುದೆಂಬ ಕಲ್ಪನೆ ಅವಳಿಗಿತ್ತು.

ಗುಡ್ಡದ ಹೊಲದ ಗುಡಿಸಲಲ್ಲಿ.. ಹೋಗಿ.. ಸುಮ್ಮನೆ ಮಲಗಿದಳು. ನಿದ್ದೆಯ ಮಂಪರು.. ಸಾಂವಂತ್ರೀ.. ಇರಪಾಕ್ಷಿಯ ದನಿ.. ಕೇಳಿದಂತಾಯ್ತು. ನಡೀ ನೀನೂ.. ಇಲ್ಲಿ ಯಾರೂ ನಮ್ಮೋರಿಲ್ಲಲೇ..ನಡೀ.. ನಡಿ. ಅಲ್ಲಿ ಎಷ್ಟ ಚೆಂದೈತಿ ನೋಡ ನಡಿ.. ಹಸುವು ನೀರಡಿಕಿ.. ಇಲ್ಲ ಯಾವ ಚಿಂತಿನೂ ಇಲ್ಲ.. ನಡೀ ಬಂದ ಬಿಡ.. ಎನ್ನುತ್ತಾ ಮುಂದೆ ಹೊರಟವನ ಹಿಂದೆ.. ಸಾಂವಂತ್ರೀ.. ನಡೆದಿದ್ದಳು.. ಈ ಜಗವನ್ನೇ ಬಿಟ್ಟು.

‍ಲೇಖಕರು Admin

October 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: