ಶತಮಾನದ ಕವಿಯ ಕಾಡುವ ಕವಿತೆಗಳು..

ಮೆಹಬೂಬ್ ಮಠದ

ನಮ್ಮ ಬದುಕಿನ ಭಿತ್ತಿಯಲಿ

ನೀವು ಅಡ್ಡಾದಿಡ್ಡಿ ಗೀಚಿದ ಗೀರು

ಲಾಂಛನಗಳ ಒರೆಸಿ ಹಾಕಬೇಕಿದೆ

ನಮಗೆ ಬೇಕಾದ ಹಾಡನು

ನಾವೇ ಬರೆದುಕೊಳ್ಳುತ್ತೇವೆ

ಎಂದು,

 ಸ್ಥಾಪಿತ ಹಿತಾಸಕ್ತಿಗಳು, ಪುರೋಹಿತಷಾಹಿ ವರ್ಗಗಳ ಮನುಷ್ಯ ವಿರೋಧಿ ಯೋಚನೆಗಳ ಮುಖಕ್ಕೆ ಹೊಡಿದಂತೆ ಬರೆಯುವ ಯುವ ಕವಿ ವಿಠ್ಠಲ ದಳವಾಯಿಯವರು ಸಮಕಾಲೀನ ರಾಜಕೀಯ – ಸಾಮಾಜಿಕ ಸೂಕ್ಷ್ಮಗಳನ್ನು ಹಿಡಿದಿಟ್ಟುಕೊಂಡು ಕೆಂಡದುಂಡೆಗಳಂತ ಕವಿತೆಗಳನ್ನು ಬರೆಯುವಂಥವರು. ಇವರ ಮೊದಲ ಕವನ ಸಂಕಲನ ‘ಬೋಧಿ ನೆರಳಿನ ದಾರಿ’ ಯಿಂದಲೆ ಅಪಾರ ಭರವಸೆಯನ್ನು ಹುಟ್ಟಿಸಿದ ಅಪ್ಪಟ ಹಳ್ಳಿಗಾಡಿನ ಪ್ರತಿಭೆ ಇವರು. ಇವರ ಮೊದಲ ಕವನ ಸಂಕಲನ ಪ್ರಕಟವಾಗಿ ಬರೋಬ್ಬರಿ ಒಂದು ದಶಕದ ನಂತರ ‘ರಮ್ಯಯುಗದ ಕಾವ್ಯ ಹಾಗೂ ದೃಶ್ಯಕಲೆಯ ಇತಿಹಾಸದ ತೇಜಸ್ಸಿನ ವ್ಯಕ್ತಿತ್ವವಾಗಿ ಪರಿಗಣಿಸಲ್ಪಟ್ಟ ಕವಿ ವಿಲಿಯಂ ಬ್ಲೇಕ್’ ನ ಕವಿತೆಗಳ ಕನ್ನಡನುವಾದದ ‘ಕಾಡ ಹೂವಿನ ಹಾಡು’ ಕವನ ಸಂಕಲನ ಪ್ರಕಟವಾಗಿದೆ.

‘ನನ್ನ ಉತ್ಸಾಹಿ ತರುಣ ಗೆಳೆಯರಾದ ವಿಠ್ಠಲ ದಳವಾಯಿಯವರು ಇದೀಗ ಹರಸಾಹಸ ಕೆಲಸವೊಂದನ್ನು ಮಾಡಿ ಮುಗಿಸಿದ್ದಾರೆ. ಮತ್ತು ಆ ಕೆಲಸದಲ್ಲಿ ಪುರಾಣಗಳು ಕಥಿಸುವ ಹರನ ಪರಿಶ್ರಮವು ಕಣ್ಣಿಗೆ ಎದ್ದು ಕಾಣುವಂತಿದೆ. ಇಲ್ಲದಿದ್ದರೆ ವಿಲಿಯಂ ಬ್ಲೇಕ್ ರಂತಹ ಸರಳ, ಸಂಕೀರ್ಣ ಮತ್ತು ಸಂದಿಗ್ಧ ಕವಿಯನ್ನು ಕನ್ನಡಕ್ಕೆ ತರುವುದು ಸಾಧ್ಯವಾಗುತ್ತಿರಲಿಲ್ಲ’ ವೆಂದು ಈ ಕೃತಿಗೆ ಮೌಲಿಕ ಮುನ್ನುಡಿ ಬರೆದಿರುವ ಕತೆಗಾರರು ಮತ್ತು ಅನುವಾದಕರಾದ ಕೇಶವ ಮಳಗಿಯವರು ಬರೆಯುತ್ತಾರೆ ಅವರ ಮಾತುಗಳೇ ವಿಠ್ಠಲರವರು ತೆಗೆದುಕೊಂಡ ಸವಾಲು ಎಂಥದ್ದು ಎಂದು ಹೇಳುತ್ತವೆ. ‘ಬ್ಲೇಕನ ಕವಿತೆಗಳು ಮುಗುದರನ್ನು ಮುಟ್ಟಬಲ್ಲವಾದರೂ ವಿದ್ವಾಂಸರಿಗೂ ಕಗ್ಗಂಟಾಗಬಲ್ಲವು. ಅವನ ಕವಿತೆಗಳನ್ನು ಅನುವಾದಿಸುವುದು ಸರಳ ಆದರೆ ಸುಲಭವಲ್ಲ. ಅಂಥ ತರ್ಜುಮೆಯ ಅಗ್ನಿಪರೀಕ್ಷೆಗೆ ತಮ್ಮೊನ್ನೊಡ್ಡಿಕೊಂಡಿರುವ ವಿಠ್ಠಲ ದಳವಾಯಿ ಅಭಿನಂದನಾರ್ಹರು’ ಎಂದು ಹಿರಿಯ ಕವಿಗಳಾದ ಎಚ್.ಎಸ್. ಶಿವಪ್ರಕಾಶರು ಇವರ ಕಾವ್ಯ ಕೌಶಲವನ್ನು ಮೆಚ್ಚಿಕೊಂಡಿದ್ದಾರೆ.

ತೀರ ಚಿಕ್ಕವನಿದ್ದಾಗಲೇ ನನ್ನ ತಾಯಿ ತೀರಿಕೊಂಡಳು

ತಂದೆ ನನ್ನನ್ನು ಧಣಿಗೆ ಮಾರಿದಾಗ ನಾಲಿಗೆಯಿಂದ

ಉದುರುವ ಪದವೊಂದೇ : ಅಳು! ಅಳು! ಅಳು!

ಮುದುರಲು ಹಾಸಿಗೆ: ಗುಡಿಸಿದ ಕುಲುಮೆಯ ಧೂಳು

ಹತ್ತೊಂಭತ್ತನೆ ಶತಮಾನದ ಅಂಚಿನವರೆಗೂ ಕೂಡ ತುಂಬಾ ಚಿಕ್ಕ ಚಿಕ್ಕ ಮಕ್ಕಳನ್ನು ಕಾರ್ಖಾನೆಗಳ ಕೊಳವೆಗಳನ್ನು ಸ್ವಚ್ಛ ಮಾಡುವ ಅತ್ಯಂತ ಅಪಾಯಕಾರಿ ಮತ್ತು ಅಮಾನವೀಯ ಕೆಲಸಕ್ಕೆ ಬಳಸಿಕೊಳ್ಳಲಾಗುತಿತ್ತು ಮತ್ತು ಅದಕ್ಕಾಗಿ ಪೋಷಕರು ಹಾಗೂ ಚರ್ಚುಗಳು ಅನಾಥ ಮಕ್ಕಳನ್ನು ಅಕ್ಷರಷಃ ಪ್ರಾಣಿಗಳಂತೆ ಮಾರುಕಟ್ಟೆಯಲ್ಲಿ ಮಾರುತಿದ್ದರು ಅಂಥ ಅನಾಥ ಮಗುವನ್ನು ಅವನ ತಂದೆಯೇ ಮಾರುತ್ತಾನೆ ಆಗ ಕಾರ್ಖಾನೆಯಲ್ಲಿನ ನರಕ ಸದೃಶ ಸನ್ನಿವೇಶವನ್ನು ನೆನೆದು ತಾಯಿ ಕಳೆದುಕೊಂಡ ಕರುವಿನಂತೆ ಅಳುವ ಮಗುವಿನ ಆರ್ತನಾದವನ್ನು ಕವಿ ಓದುಗರ ಕರುಳು ಕೂಡ ಅಳುವಂತೆ ಬರೆಯುತ್ತಾನೆ. ಅಮ್ಮನಿಲ್ಲದೆ ಅಂಗಳದಲ್ಲಿ ಆಡಲೂ ಭಯ ಪಡುವ ಮಗುವೊಂದು ಸಾವು ಕುಣಿವ ಕೊಳವೆ ಸ್ವಚ್ಛ ಮಾಡುವುದನ್ನು ನೆನೆದರೆ ಸಾಕು ಬೆನ್ನ ಮೂಳೆಯಿಂದ ಹುಟ್ಟುವ ಭಯ ನಮ್ಮನು ನಡುಗಿಸುತ್ತದೆ.

ಚುಕ್ಕೆಗಳು ಚೂರಿ ಕಿರಣಗಳ ತೂರುವಾಗ

ಕರಿ ಮೋಡಗಳು ಕಣ್ಣೀರು ಸುರಿವಾಗ

ಆತ ತನ್ನ ಕೆಲಸ ನೋಡಿ ತಾನೇ ನಕ್ಕನೆ?

ಕುರಿಮರಿ ಮಾಡಿದವನೇ ನಿನ್ನ ಕರ್ತನೆ?

ರೌದ್ರಮಯ ಸೌಂದರ್ಯದ ಸೃಷ್ಟಿಯಾದ ಹುಲಿ ಮತ್ತು ಅದನ್ನು ಸೃಷ್ಟಿಸಿದ ಸೃಷ್ಟಿಕರ್ತನ ಕುರಿತ ಬ್ಲೇಕನ ಈ ಕವಿತೆ ವಿಶ್ವಪ್ರಸಿದ್ಧವಾದದ್ದು. ಹೌದು ರಣ ಭೀಕರ ಕಾನನದ ಯಾವುದೋ ಕಪ್ಪು ಬಂಡೆಯ ಮೇಲೆ ತನ್ನೆಲ್ಲ ಚೆಲುವನ್ನು ಹರವಿಕೊಂಡು ಮಲಗಿರುವ ಹುಲಿಯನ್ನು ನೋಡುವುದೇ ಒಂದು ದಿವ್ಯಾನುಭೂತಿ. ಬೇಟೆಗೆ ಹೊರಟ ಹುಲಿಯ ಕಣ್ಣುಗಳಲ್ಲಿನ ಹಸಿವು ಮತ್ತು ರೌದ್ರತೆಯನ್ನು ನೋಡಿದಾಗ ಎಂಥ ಎಂಟೆದೆಯವರ ಧೈರ್ಯವೂ ತಕ್ಷಣ ಕರಗುತ್ತದೆ. ಮುಗ್ಧತೆಯನ್ನೇ ಉಂಡುಟ್ಟು ಬದುಕುವ ಬಡಪಾಯಿ ಕುರಿಮರಿ ಮತ್ತು ಇಡೀ ಕಾಡನ್ನು ತನ್ನ ಒಂದೇ ಒಂದು ಘರ್ಜನೆಯಿಂದ ಪತರುಗುಟ್ಟುವಂತೆ ಮಾಡುವ ಹುಲಿಯನ್ನು ನಿಜಕ್ಕೂ ಒಬ್ಬನೇ ಸೃಷ್ಟಿಸಿದನೇ ಎಂದು ಕವಿ ಆ ಹುಲಿಯನ್ನೇ ಕೇಳುತ್ತಾನೆ.

ಫಾದರ್,

ಗೂಡಿನ ಕಿಂಡಿಯಲಿ ಗುಟುಕು ಹೆಕ್ಕುವ ಗುಬ್ಬಿಯಷ್ಟೇ

ನಿಮ್ಮ ಮೇಲೆ ನನ್ನ ಪ್ರೀತಿ ಅಸಲಿ

ಮಕ್ಕಳನ್ನು ಚರಂಡಿಯೊಳಗಿನ ಕ್ರಿಮಿ ಕೀಟಗಳಿಂಗಿಂತಲೂ ಕೇವಲವಾಗಿ ನೋಡುವ ಚರ್ಚುಗಳು ಮತ್ತು ಹಣದಾಸೆಗಾಗಿ ಒಡಹುಟ್ಟಿದ ಸಣ್ಣ ವಯಸ್ಸಿನ ಮುಗ್ಧ ತಮ್ಮಂದಿರನ್ನು ಮನೆಯ ಗುಜರಿ ವಸ್ತುಗಳಂತೆ ಮಾರಾಟ ಮಾಡುವ ಹಿರಿಯ ಸಹೋದರರ ಕ್ರೌರ್ಯವನ್ನು ಪುಟ್ಟ ಮಗುವೊಂದು ಅಸಾಧ್ಯ ಕೋಪ ಮತ್ತು ಆಕ್ರೋಶದಿಂದ ತನ್ನೆಲ್ಲ ಶಕ್ತಿ ಬಳಸಿ ಸಾವ ಘಳಿಗೆಯಲ್ಲೂ ಪ್ರತಿರೋಧಿಸುವ ಮಗುವೊಂದರ ಕೆಂಡ ತುಂಬಿದ ಮಾತುಗಳಿವು. ಆದರೆ ಕೊನೆಗೆ ತಮ್ಮನ್ನು ಪ್ರಶ್ನಿಸುವ ಮಗುವನ್ನು ಆ ನೀಚರು ಹಾಳೆ ತುಂಡನ್ನು ಸುಟ್ಟಷ್ಟೇ ನಿರ್ಭಾವುಕರಾಗಿ ಬೂದಿ ಮಾಡುತ್ತಾರೆ. ಅಂಥ ಅಸಂಖ್ಯಾತ ಮಕ್ಕಳ ಆರ್ತನಾದ ಕವಿಯ ಹೃದಯವನ್ನು ಮತ್ತೆ ಮತ್ತೆ ಕಲಕುತ್ತಲೇ ಇದೆ.

ನಾನು ಕುಣಿಯುವೆ

ಕುಡಿಯುವೆ ಹಾಡುವೆ

ಕಾಣದ ಕೈಯೊಂದು

ನನ್ನ ರೆಕ್ಕೆಯ ಕತ್ತರಿಸುವವರೆಗೆ

ಕಣ್ಣ ಮುಂದೆ ಝೊಂಯ್ಯನೆ ಹಾರಾಡುವ ನೊಣವನ್ನು ನೋಡಿದಾಗ ನಾವು ಸುಮ್ಮನೆ ಕೈಯಿಂದ ಓಡಿಸಿ ಅದನ್ನು ನಿರ್ಲಕ್ಷಿಸುತ್ತೇವೆ ಆದರೆ ಬ್ಲೇಕ್ ನ ಜೀವಪರ ಚಿಂತನೆ ಆ ನೋಣದ ಮೂಲಕ ನಮಗೆ ಅಧ್ಯಾತ್ಮದ ಪಾಠ ಮಾಡುತ್ತದೆ. ನಾನಲ್ಲವೇ ನಿನ್ನಂತೆ ಒಂದು ನೊಣ/ಅಥವಾ ನೀನಲ್ಲವೇ ನನ್ನಂತೆ ಒಬ್ಬ ಮನುಷ್ಯ ಎನ್ನುವ ಸಾಲುಗಳು ಬದುಕಿನ ನಶ್ವರತೆಯನ್ನು ಎದೆಗೆ ನಾಟುವಂತೆ ತೋರಿಸಿಕೊಡುತ್ತವೆ.

ಹಿಂಡು ಹಿಂಡಾಗಿ ಛಳಿ ಮಳೆ ಗಾಳಿಯನ್ನು ಲೆಕ್ಕಸಿದೆ ಊರು ಅಡವಿಯೆಂಬುದನ್ನೂ ನೋಡದೆ ತಮ್ಮ ಹಸಿವು ತುಂಬಿಕೊಳ್ಳಲು ಮೇಯುವ ಕುರಿಗಳ ಮಂದೆಗೆ ಯಾವ ಭಯವೂ ಕಾಡುವುದಿಲ್ಲ ಏಕೆಂದರೆ ಅವು ನಂಬಿರುವುದು ತಮ್ಮ ಪಾಲಿನ ತಂದೆತಾಯಿ ಎಲ್ಲವೂ ಆದ ಕುರುಬನನ್ನು. ಈ ಕವಿತೆ ಓದುವಾಗ ಅದೆಷ್ಟು ಸರಳ ಎನಿಸುತ್ತದೆ ಆದರೆ ಅದರ ಅದರ ಅರ್ಥ ಅಗಾಧವಾದದ್ದು. ಹೀಗೆಯೆ ಪವಿತ್ರ ಗುರುವಾರ, ವಸಂತ ಋತುವಿಗೆ, ಪ್ರೇಮದ ತೋಟ,ಮುಗುಳು ನಗು, ಸುತ್ತ ಇಬ್ಬನಿಯ ತೇವ ಸೇರಿದಂತೆ ಪ್ರತಿ ಕವಿತೆಯೂ ತನ್ನದೇ ವಿಶಿಷ್ಟ ಕುಸುರಿಯಿಂದ ನಮ್ಮನ್ನು ಆವರಿಸುತ್ತವೆ ಮತ್ತು ಕಾಡುತ್ತದೆ.

ತಮ್ಮ ಗಂಭೀರ ಓದು ಮತ್ತು ಗಟ್ಟಿಯಾದ ಬರವಣಿಗೆಯಿಂದ, ನಮ್ಮನ್ನು ಪ್ರೇರೇಪಿಸುವ ಯುವ ಕವಿ ವಿಠ್ಠಲ ದಳವಾಯಿಯವರು ‘ಕಾಡ ಹೂವಿನ ಹಾಡು’ ಕೃತಿಯ ಮೂಲಕ ಕನ್ನಡ ಓದುಗರು ವಿಲಿಯಂ ಬ್ಲೇಕ್ ನನ್ನು ಓದುವಂತೆ ಮಾಡಿದ್ದಾರೆ ಅವರ ಸಶಕ್ತ ಅನುವಾದ ಈ ಕವಿತೆಗಳನ್ನು ಕನ್ನಡ ಓದುಗರ ಹೃದಯ ತಟ್ಟುವಂತೆ ಮಾಡಿವೆ. ಇಂಥ ಅಪರೂಪದ ಮತ್ತು ಮಹತ್ವದ ಪ್ರಕಟಣೆಗೆ ಮನಸು ಮಾಡಿದ ‘ಸಮಕಾಲೀನ ಓದು ಬರಹ’ ದ ರೂವಾರಿಗಳಾದ ಕವಿ ಅನುವಾದಕರಾದ ಮೆಹಬೂಬ್ ಮುಲ್ತಾನಿ ಮತ್ತು ಕವಿ ಭುವನಾ ಹಿರೇಮಠರು ಅಭಿನಂದನಾರ್ಹರು.

—–

‍ಲೇಖಕರು avadhi

June 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: