ವ್ಯಾಸರಿಗೆ ವ್ಯಾಸರೇ ಸಾಟಿ..

ಕ್ಷಿತಿಜ್ ಬೀದರ್

ಕನ್ನಡದ ಅಪರೂಪದ ಅಪೂರ್ವ ಕತೆಗಾರರು ಎಂ. ವ್ಯಾಸರು. ಕವಿ ಅಂಕಣಕಾರರು  ಕೂಡ . ಅವರ ೭೯ ನೇ ಹುಟ್ಟು ಹಬ್ಬದ ( ೨೨.೦೧.೧೯೪೧) ಸಂದರ್ಭದಲ್ಲಿ ನನ್ನದೊಂದು ಕಿರು ಸ್ಮರಣೆ.

೬೮ ವರ್ಷ ಬದುಕಿದ ಎಂ.ವ್ಯಾಸರು ಕಾಸರಗೋಡಿನ ಮನ್ನಿಪಾಡಿ ಗ್ರಾಮದ ಗಡಿಯನ್ನು ದಾಟದ ಅಜ್ಞಾತ ಕತೆಗಾರರಾಗಿಯೇ  ಕಣ್ಮರೆಯಾದರಲ್ಲಾ…! ‘ಸಾವು  ಬದುಕಿನ ಕೊನೆಯಲ್ಲ, ಅದು ಕೇವಲ ಬದುಕಿನ ರೂಪಾಂತರ ‘ಎಂದಿದ್ದರು. ಪ್ರಶಸ್ತಿ, ಪ್ರಸಿದ್ಧಿ, ಅಕಾಡೆಮಿಕ್ ವಲಯದ ಮಾನ್ಯತೆಗಳಿಂದ ದೂರವೇ ಉಳಿದವರು…!

ಬದುಕಿನ ಪ್ರತಿ ಕ್ಷಣಗಳನ್ನು ತೀವ್ರವಾಗಿ ಅನುಭವಿಸುವ ಚಡಪಡಿಕೆಯಲ್ಲಿ ನೋವಿನ ರಸಭರಿತ ಕತೆಗಳನ್ನು ಉಣಬಡಿಸಿದ ತಪ್ತ ಹೃದಯದ ಸಂವೇದನಾಶೀಲತೆ. ಸದ್ದುಗದ್ದಲಗಳಿಂದ ದೂರವಿದ್ದು ತಮ್ಮಷ್ಟಕ್ಕೆ ತಾವೇ ಚಿಂತನೆಯಲ್ಲಿ ತೊಡಗಿ, ಅಂತರ್ಮುಖಿ ಸಾಹಿತಿಯಾಗಿ  ಕತೆಗಳ ಬರೆದವರು. ಹೊಸ ದೃಷ್ಟಿಯಲ್ಲಿ ಅಭ್ಯಾಸ ಮಾಡಬೇಕಾದ ಅಗತ್ಯವಿದೆ. ಸಾಹಿತಿಗಳ ಜಗತ್ತಿನಲ್ಲಿ ಅಸೂಯೆ ಪಡದ, ಒಂದಿಷ್ಟೂ ರಾಜಕೀಯ ಮಾಡದ ಅಪರೂಪದ ಕತೆಗಾರರಾಗಿದ್ದರು. ‘ಕತೆಯ ಪಾತ್ರಗಳು ಸಾಯುವಂತೆ ನನ್ನ ಕತೆಗಳು ಓದುಗರು ಓದಿದ ಬಳಿಕ ಸತ್ತು ಹೋಗಲಿ’ ಎನ್ನುತ್ತಿದ್ದ ವ್ಯಾಸರ ಕತೆಗಳು ಇನ್ನೂ ಜೀವಂತವಾಗುಳಿದದ್ದು ಅವರ ಕೃತಿಗಳ ಮೂಲಕ ಅಭಿಮಾನಿಗಳ  ಚಿಂತನೆಯಲ್ಲಿ ಎನ್ನುವುದು ನಿರ್ವಿವಾದವೇ. ಕನ್ನಡ ಕಥಾ ಜಗತ್ತಿಗೆ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಬರೆದ ಸುಮಾರು ಮುನ್ನೂರಕ್ಕೂ ಹೆಚ್ಚು ಕತೆಗಳನ್ನು ನೀಡಿದ ಎಂ. ವ್ಯಾಸರದು ವಿಭಿನ್ನವೂ ವಿಶಿಷ್ಟವೂ ಆದ ಒಂಟಿ ನಡಿಗೆಯಾಗಿತ್ತು.ತಮ್ಮ ಬರಹಗಳ ಮೂಲಕವೇ ತಮ್ಮನ್ನು ಪ್ರಕಟಪಡಿಸಿಕೊಂಡವರು. ಓದುಗರ ಮನಸ್ಸಿಗೆ ಆಪ್ತತೆಯನ್ನೊದಗಿಸುವ ಶೈಲಿ ಅನನ್ಯವಾದುದು. ಭಾವನೆಗಳ ಆಗರವೇ ಮನಸ್ಸು.ಅದರ ವಿಕ್ಷಿಪ್ತತೆಯನ್ನು ಅನಾವರಣಗೊಳಿಸಿದ ವ್ಯಾಸರ ಎರಡಕ್ಷರ ಶೀರ್ಷಿಕೆಯ ಕಥಾವಸ್ತುಗಳು ತೀವ್ರ ಭಾವುಕತೆಯಿಂದ ಗಮನ ಸೆಳೆಯುತ್ತವೆ .

ಕಂಬನಿ (೧೯೬೫), ಕೃತ (೧೯೯೮),ತಪ್ತ (೨೦೦೯), ಕೆಂಡ (೨೦೦೯), ಅಸ್ತ್ರ (೨೦೦೯), ಕಾಂತ (೨೦೧೦), ದಡ (೨೦೧೦), ಓಟ (೨೦೧೧)… ಇವು ಕಥಾಸಂಕಲನಗಳು, ಸ್ನಾನ (೨೦೦೨) ಕಿರು ಕಾದಂಬರಿ , ಸುಳಿ ಮತ್ತು ಕ್ಷೇತ್ರ ಎಂಬ ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ. ‘ಕೃತ ‘ ಕಥಾಸಂಕಲನವು ಮಂಗಳೂರು, ಕಣ್ಣೂರು ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿದೆ. ಮಾನವ ಬದುಕಿನ ವಿಷಾದ ಭಾವವೇ ವ್ಯಾಸರ ಮೂಲ ಕಥಾವಸ್ತು …! ನಿಗೂಢ ಮನಸ್ಸಿನ ಸ್ಥಿತಿಯ ಅನಾವರಣ…! ಸಂಕೀರ್ಣ ಸಂಬಂಧ, ಕ್ಲಿಷ್ಟ ಪರಿಸ್ಥಿತಿ, ಧರ್ಮ ಸಂಕಟ, ಅನಪೇಕ್ಷಿತ ಸನ್ನಿವೇಶ, ನಿಗೂಢ ಕ್ಷಣಗಳು.. ಇವು ಎಂ. ವ್ಯಾಸರ ಕಥಾ ಹಂದರದ ವಿಶೇಷತೆಗಳು. ಬದುಕಿನ ವಿಪರ್ಯಾಸ ಚಿಂತನೆಗಳು, ಪಾತ್ರಗಳ ಅಸಂಗತ ಧೋರಣೆ, ಫ್ಯಾಂಟಸಿ ಎನ್ನುವ ನಿರೂಪಣೆ, ಆತ್ಮದ ಮಲಿನ ಪ್ರತಿಬಿಂಬ ಇವು ನಾನು ಗುರುತಿಸಿದ ಕಥಾ ಆಶಯದ ಮಜಲುಗಳು. ಅವರ ಕತೆಗಳಲ್ಲಿ ಹೆಚ್ಚಾಗಿ ಅನೈತಿಕ ಸಂಬಂಧವನ್ನು  ಕಾಣುತ್ತೇವೆ. ಇದು ತೀರಾ ಸಹಜ ಎನ್ನುವಂತೆ ಜರುಗಿ ಬಿಡುತ್ತದೆ. ಸಂಪ್ರದಾಯ ಕುಟುಂಬಗಳಲ್ಲಿ ಇದು ಒಳ ಮಾರ್ಗ ಹುಡುಕುವ ಪರಿಯನ್ನು ಬಯಲು ಮಾಡಿದಂತಿದೆ. ಮನಸ್ಸಿನ ಬಿಡುಗಡೆಯ ಸಂಕೇತವಾಗಿ ಕತೆಗೆ ತಿರುವು ನೀಡುವ, ಬೆರಗುಗೊಳಿಸುವ ನಿರೂಪಣೆಯನ್ನು  ಕಾಣಬಹುದಾಗಿದೆ. ಇವರ ಕಥಾಲೋಕದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಸೋಲಿನ ದವಡೆಯಲ್ಲೂ ಬದುಕಬೇಕೆಂಬ ಆಸೆ ಚಿಗುರಿಸುವ,ಕಾಮದಲ್ಲೂ ವಿಜೃಂಭಿಸುವ, ಸಾವಿನಲ್ಲೂ ಜೀವ ಚೈತನ್ಯ ಮೂಡಿಸಿ ಮೋಡಿ ಮಾಡುವ ಬದುಕಿನ ವಿವಿಧ ಮುಖಗಳ ವಾಸ್ತವ ದರ್ಶನ ಮಾಡಿಸುತ್ತವೆ.

‘ಉಷಾಕಿರಣ’ ಪತ್ರಿಕೆಯಲ್ಲಿ ೬೫ ವಾರ ಕಾಲ ‘ಜನಪಥ’ ಅಂಕಣವನ್ನು  ಬರೆದು ‘ಅಂಕಣಕಾರರು’ ಎಂದೆನಿಸಿಕೊಂಡರು. ‘ಅಜಂತ’ ಎಂಬ ಮಾಸಪತ್ರಿಕೆ, ‘ನಾಡಪ್ರೇಮಿ’ ಎಂಬ ವಾರಪತ್ರಿಕೆಗೆ ಸಂಪಾದಕರಾಗಿದ್ದರು .

ಎಂ.ವ್ಯಾಸರ ಕತೆಗಳು ಸಾಹಿತ್ಯದ ಯಾವ ವಿಭಾಗಕ್ಕೆ ಸೇರುತ್ತವೆ ಎನ್ನುವ  ಡಾ.ನಾ. ಮೊಗಸಾಲೆಯವರ ಚಿಂತನೆ. (ಕಾಂತ ಕಥಾಸಂಕಲನ ) ಅದಕ್ಕೆ ಈಶ್ವರಯ್ಯನವರು, ‘ ಅವರ ಕತೆಗಳು ಯಾವುದೇ ಸಿದ್ಧ ಅಳತೆಗೋಲಿನ ಕಕ್ಷೆಯೊಳಗೆ ಬರುವಂಥವುಗಳಲ್ಲ, ಜನಪ್ರಿಯ ಸೂತ್ರಗಳಲ್ಲಿ ಹೆಣೆಯಲ್ಪಟ್ಟವುಗಳು ಅಲ್ಲ, ವಸ್ತು, ಶೈಲಿ, ತಂತ್ರಗಳಲ್ಲಿ ವಿಶಿಷ್ಟವಾಗಿವೆ ‘ ಎಂಬ  ಅಭಿಪ್ರಾಯ. (ಕೃತ ಕಥಾಸಂಕಲನ ) “ಎಂ. ವ್ಯಾಸ ಕಥಾ ಶೈಲಿ” ಎಂದು ಪ್ರತ್ಯೇಕವಾಗಿ ಗುರುತಿಸುವ ಛಾಪು ಮೂಡಿಸುತ್ತವೆ. ಕನ್ನಡದ ಕತೆಗಾರರಲ್ಲಿಯೇ ಪ್ರತ್ಯೇಕವಾಗಿ ನಿಲ್ಲುವಂಥವರ ಬಗ್ಗೆ , ‘ತಾನು ಉರಿಯುತ್ತಲೇ ಪಡೆದ ಸ್ವಯಂ ದೀಪಕತೆ’ ಎನ್ನುತ್ತಾರೆ ಲಕ್ಷ್ಮೀಶ ತೋಳ್ಪಾಡಿಯವರು (ತಪ್ತ, ಕಥಾ ಸಂಕಲನ). ವಾಸ್ತವ ಪ್ರಪಂಚದೊಳಗೆ ಒದಗಬಹುದಾದ ಅತಿರೇಕದ ಮೂಟೆಯೇ ಅವರ ಕತೆಗಳಲ್ಲಿ ಅನಾವರಣಗೊಳ್ಳುತ್ತವೆ ಎನ್ನುತ್ತಾರೆ ಡಾ.ನಾ. ದಾಮೋದರ ಶೆಟ್ಟಿ (ದಡ, ಕಥಾ ಸಂಕಲನ ). ಇಡೀ ಜಗತ್ತು ಬದಲಾಗುತ್ತಿದ್ದರೂ, ನೆಲ ಕಚ್ಚಿ ನಿಂತು ತಮ್ಮದೇ ಮೌಲ್ಯಗಳಿಗೆ ಅಂಟಿಕೊಂಡ ಜನ ಅಲ್ಲಿಯ ಜೀವ ಸೆಲೆಗಳು, ಬದುಕುವ ಹಟಗಳು ಮರೆಯಾದಂತೆ ಕಂಡು ಬಂದರೂ ಆಳದಲ್ಲಿ ಉಸಿರಾಡುವ ಮೌಲ್ಯಗಳು – ವ್ಯಾಸರ ಕತೆಗಳಲ್ಲಿ ಎಷ್ಟೊಂದು ಜೀವಂತ. ಬದುಕೆಂಬುದು, ಸೃಜನಶೀಲತೆ ಎನ್ನುವುದು ವ್ಯಾಸರಿಗೆ ಒಂದು ಶೋಧವೇ ಹೊರತು ಆಟಿಕೆಯಲ್ಲ, ತಂತ್ರಗಾರಿಕೆಯೂ ಅಲ್ಲ’ ಎಂದು ಜಿ.ಪಿ. ಬಸವರಾಜು ಹೇಳುತ್ತಾರೆ ( ಕೆಂಡ, ಕಥಾ ಸಂಕಲನ).  ಒಂದು ಸಲ ಸುಮ್ಮನೆ ಕಾಸರಗೋಡಿಗೆ ಬಂದು ಆ ನಿಮ್ಮ ದುರ್ಗಾಪುರ,ಶಂಕರೀ ನದಿ, ಶಂಕರ ಗುಡ್ಡ ಅವೆಲ್ಲ ಎಲ್ಲಿವೆ ಅಂತ ನಿಮ್ಮನ್ನು ಪ್ರೀತಿಯಿಂದ ಪೀಡಿಸಬೇಕು ಅನ್ನಿಸುತ್ತಿದೆ ‘ ಎನ್ನುತ್ತಾರೆ ರವಿ ಬೆಳಗೆರೆ ( ಸ್ನಾನ, ಕಿರು ಕಾದಂಬರಿ).
ಶಂಕರೀ ನದಿ, ಶಂಕರ ಗುಡ್ಡದ ಬಗ್ಗೆ ಎಂ.ವ್ಯಾಸರು ಹೇಳಿಕೊಂಡಿರುವುದೇನು…?

 

ಶಂಕರೀ ನದಿ  ನನ್ನ ಸುಖದ ಹೊಳೆ
ದುಃಖದ ಹೊಳೆ ಪ್ರಶಾಂತ ಸರೋವರ
ನನ್ನ ಉಗಮ ನನ್ನ ಅಲ್ಲೋಲ ಕಲ್ಲೋಲ ಸಮುದ್ರ
ಶಂಕರೀ ನದಿಯಲ್ಲಿ  ನೀರು ಬತ್ತಿದರೆ
ಇನ್ನೊಂದು ಕ್ಷಣದಲ್ಲಿ  ನೆರೆ ಬರುತ್ತದೆ
ಶಂಕರಗುಡ್ಡ ನನ್ನ ಅಹಂಕಾರ
ನನ್ನ ಎತ್ತರ ನನ್ನ ಕೀರ್ತಿ, ನನ್ನ ನಿಶ್ಚಲತೆ,
ದುರ್ಗಾಪುರ ನನ್ನ ರಂಗ, ರಣರಂಗ,
ನನ್ನ ಅಹಂಕಾರ, ನನ್ನ ಕ್ರಿಯಾಕ್ಷೇತ್ರ
ನನ್ನ ರುದ್ರ ಭೂಮಿ, ನನ್ನ ತೊಟ್ಟಿಲು’ ನನ್ನ ಮಡಿಲು
ವಾಸ್ತವವಾಗಿ ಇವೆಲ್ಲ ಇಲ್ಲ
ನಾನು ಕೂಡ ನನ್ನ ಕಲ್ಪನೆ                  ( ಕೆಂಡ)

ಇದು ಅಲ್ಲಮನಂತೆ ಅವರ ಬಯಲು ಭಾವದ ದ್ಯೋತಕ ಎಂದೆನಿಸುವುದಿಲ್ಲವೇ…?

ಒಂದೆಡೆ  ಅವರು ಸ್ವಯಂ ವಿಶ್ಲೇಷಣೆ ಮಾಡಿಕೊಂಡ ಬಗೆ ಹೀಗಿದೆ:
‘ನನ್ನ ಮನಸ್ಸಿಗೆ ಮನಸ್ಸಿನ ದಾರಿಗಳಿಗೆ ಮನಸ್ಸಿನ ಆಮೋದ ಪ್ರಮೋದಗಳಿಗೆ ವೈಭವ, ಅಭಾವಗಳಿಗೆ ನನ್ನದೇ ರೀತಿಯಲ್ಲಿ ಆಕಾರ ಕೊಡಲು ಯತ್ನಿಸುತ್ತಿದ್ದೆ.  ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಕಂಪನಗಳು ನಿಜಕ್ಕೂ ಕೇಳಿಸುತ್ತವೆಯೇ…?  ಹತಾಶೆಯ ಆಳವನ್ನು ಅರಿತವನೇ ನಿಜವಾದ  ಕ್ರಿಯಾಶೀಲ ಕವಿ ಕಥೆಗಾರ ಎನ್ನುವುದನ್ನು ಒಪ್ಪಿದ, ಮನಸ್ಸುಗಳ ಒಡೆಯರೇ  ಪ್ರಕೃತಿ ಪುರುಷರು. ಇವರೇ ಸುಖ ಸ್ವಾರ್ಥಿಗಳು. ಇದರಾಚೆ ಬದುಕಿಲ್ಲ. ಈ ವಿಶಿಷ್ಟ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕ ದೃಷ್ಟಿಯೇ ನನ್ನನ್ನು ಸಾಹಿತ್ಯ ಪ್ರಪಂಚದಲ್ಲಿ ಒಂಟಿ ಪ್ರಯಾಣಿಕನನ್ನಾಗಿಸಿತು. ಇದಕ್ಕಾಗಿಯೇ ನಾನು ಗುರುತಿಸಲ್ಪಟ್ಟಿದ್ದೇನೆ ಮತ್ತು ಅವಗಣಿಸಲ್ಪಟ್ಟಿದ್ದೇನೆ ‘ ಎಂದು ಹೇಳಿಕೊಳ್ಳುವ ಎಂ. ವ್ಯಾಸರ ಧೋರಣೆಯಂತೆ ಕನ್ನಡ ಕಥಾ ಜಗತ್ತು ಅವರನ್ನು ಅವಗಣಿಸಬೇಕೇ ಎನ್ನುವುದೇ ನನ್ನ ಈಗಿನ ಪ್ರಶ್ನೆ…!?*

‍ಲೇಖಕರು avadhi

January 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: