ರಂಜನಿ ಪ್ರಭು
**
ನನ್ನ ‘ಮೇಘವಿನ್ಯಾಸ’ ಸಿ ಡಿ ಯಲ್ಲಿರುವ ‘ನಿನ್ನ ಪ್ರೀತಿ’ ಕವಿತೆಗೆ ಉಪಾಸನಾ ಮೋಹನ್ ಅವರು ಸೊಗಸಾದ ಸ್ವರ ಸಂಯೋಜನೆ ಮಾಡಿದ್ದಾರೆ. ಮೇಘನಾ ಭಟ್ ಅವರು ಅತ್ಯಂತ ಮಧುರವಾಗಿ ಹಾಡಿದ್ದಾರೆ. ಈ ಕವಿತೆಯ ಸಾಲುಗಳು ಪ್ರಭುವಿಗಂತೂ ಬಲು ಪ್ರಿಯ. ‘ಜಿ.ಎನ್.ಮೋಹನ್ ಅವರ ‘ಬಹುರೂಪಿ’ ಪ್ರಕಾಶನದಿಂದ ಪ್ರಕಟಗೊಂಡಿರುವ ‘ವೈಶಾಖದ ಹನಿಗಳು’ ಎಂಬ ನನ್ನ ಮೂರನೆಯ ಕವನ ಸಂಕಲನದ ಮೊಟ್ಟಮೊದಲ ಕವಿತೆ ‘ನಿನ್ನ ಪ್ರೀತಿ’.
ಕವಿತೆಯಾಗಿ ವಿಮರ್ಶಕರ, ಹಾಡಾಗಿ ಕೇಳುಗರ ಮನಗೆದ್ದಿರುವ ‘ನಿನ್ನ ಪ್ರೀತಿ’ಯನ್ನು ಒಂದು ಗೀತಚಿತ್ರವಾಗಿ ಪ್ರಸ್ತುತ ಪಡಿಸಬೇಕೆಂಬುದು ಮಗಳು ಅನ್ವಿಯ ಬಹು ದಿನಗಳ ಬಯಕೆ. ಲಂಡನ್ ನ ಛೆಲ್ಸಿ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅನ್ವಿಪ್ರಭು ಭರತನಾಟ್ಯ ವಿದುಷಿ ಹಾಗೂ ಇಂಗ್ಲೀಷ್ ಕವಯಿತ್ರಿಯೂ ಹೌದು. ಅವಳು ಈಗ ಲಂಡನ್ ನಲ್ಲಿಯೇ ನೆಲೆಸಿರುವುದರಿಂದ ನಾವು ಇತ್ತೀಚೆಗೆ ‘ಗ್ಲೋಬಲ್ ಟ್ಯಾಲೆಂಟ್ ‘ ವೀಸಾ ಪಡೆದು ಲಂಡನ್ ಗೆ ಬಂದ ಮೇಲಷ್ಟೇ ಈ ಗೀತಚಿತ್ರದ ಕುರಿತ ಚಿಂತನೆ ಮುಂದುವರಿದು ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ.
ಲಂಡನ್ ನಗರಿಯ ಕೆಲ ಪ್ರೇಕ್ಷಣೀಯ ತಾಣಗಳಲ್ಲಿ ಈ ಗೀತಚಿತ್ರದ ಚಿತ್ರೀಕರಣ ಮೂರು ದಿನಗಳ ಕಾಲ ನಡೆದಿದೆ. ಈ ಗೀತಚಿತ್ರದಲ್ಲಿ ಅನ್ವಿಯೇ ರೂಪದರ್ಶಿ. ತಾಂತ್ರಿಕ ನಿರ್ದೇಶನ ಪ್ರಭುವಿನದಾದರೆ ಸಹಾಯ ನಿರ್ದೇಶನ ನನ್ನದು! ಕ್ಷಣಕ್ಕೊಮ್ಮೆ ಸ್ವರೂಪವೇ ಬದಲಾಗಿ ಬಿಡುವ ಲಂಡನ್ ನ ವಾತಾವರಣದಲ್ಲಿ ಚಿತ್ರೀಕರಣ ನಡೆಸುವುದು ಸವಾಲಿನ ಕೆಲಸವೇ ಸರಿ! ನಾವು ಸ್ವೆಟರ್—ಕೋಟ್ ಗಳನ್ನು ಧರಿಸಿ ಬೆಚ್ಚಗಿದ್ದರೂ ರೂಪದರ್ಶಿ ಅನ್ವಿಗೆ ಗಡಗಡ ನಡುಗುತ್ತಲೇ ರೊಮ್ಯಾಂಟಿಕ್ ಆಗಿ ಅಭಿನಯಿಸುವ ಸವಾಲು!
ನಮ್ಮ ಪ್ರಯತ್ನಕ್ಕೆ ನಿಸರ್ಗದ ಹಾರೈಕೆಯೆಂಬಂತೆ ಜಡಿ ಮಳೆಯ ನಡುವೆಯೂ ಆಕಾಶ ಸೂರ್ಯಾಸ್ತಕ್ಕೆ ಕಿತ್ತಳೆ ಬಣ್ಣಕ್ಕೆ ತಿರುಗಿದ್ದಷ್ಟೇ ಅಲ್ಲ, ಅನಿರೀಕ್ಷಿತವಾಗಿ ಸೊಗಸಾದ ಕಾಮನಬಿಲ್ಲೇ ಪೂರ್ಣವಾಗಿ ಆಗಸದಲ್ಲಿ ಮೂಡಿಬಿಟ್ಟಿತು! ‘ನಿನ್ನ ಪ್ರೀತಿ’— ಈ ಪ್ರೇಮಗೀತಚಿತ್ರವನ್ನು ಲೋಕಾರ್ಪಣೆ ಮಾಡಲು ವ್ಯಾಲಂಟೇನ್ ದಿನಕ್ಕಿಂತಲೂ ಸೂಕ್ತ ಸಂದರ್ಭ ಒದಗುವುದಾದರೂ ಉಂಟೇ? ಇಂದು ನಮ್ಮ ಮಗಳು ಅನ್ವಿಯ ಈ ಕನಸು ನಿಮ್ಮ ಮಡಿಲು ಸೇರುತ್ತಿದೆ! ಪ್ರೀತಿಯಿಂದ ನೋಡಿ. ಹರಸಿ ಹಾರೈಸಿ.
ಗೀತಚಿತ್ರದ ವಿಡಿಯೋ ಇಲ್ಲಿದೆ-
Credits : Lyrics – Ranjini Prabhu Music – Upasana Mohan
Singer – Meghana Bhat
Direction / Technical Supervision – Srinivasa Prabhu
Featuring – Anvi Prabhu
Shot on iPhone 15 Pro
Anvi Prabhu website – https://itsanviofficial.wixsite.com/a…
0 Comments