ಸಂಕೇತದತ್ತ
**
ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ್ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ್ ಎಂದರೆ ಸಾಕು. ಅವ್ರಾ? ಅಂತಾರೆ!
ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ. ಹಾಗೆಯೇ ನಾರಾಯಣ್ ಅವರದ್ದೂ ಒಂದು ಸ್ಟೈಲ್ ಇದೆ.
ಈ ಹಿರಿಯ ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಅವರು ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಇದೇ 20ರ ಜನವರಿ, 2024 ರ ಶನಿವಾರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದವರು ತುಮಕೂರಿನ ರಾಜನ್ ಅವರು ತಮ್ಮ ಮಗ ದಿ|| ಜಿ ಕೃಷ್ಣಕಾಂತ್ ಅವರ ನೆನಪಲ್ಲಿ ಕೊಡುವ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ.
ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಮೂಲದ ನಾರಾಯಣ್ ಅವರು ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ತದನಂತರ ಕಾರ್ಟೂನ್ ಕಡೆಗೆ ವಾಲಿದರು. ಅಲ್ಲಿಂದ ಇಲ್ಲಿಯವರೆಗೂ ಕಾರ್ಟೂನ್ ಬರೆಯುವುದರಲ್ಲಿ ನಿರತರಾಗಿದ್ದಾರೆ.
ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಅಲ್ಲಿನ ‘ರೇಷ್ಮೆ ಕೃಷಿ’ ಮಾಸ ಪತ್ರಿಕೆಗೆ ಕಾರ್ಟೂನ್ ಮಾಡುತ್ತಿದ್ದರು. ನಂತರ ಕಾರ್ಪೋರೇಷನ್ ಬ್ಯಾಂಕ್ನಲ್ಲಿ ಉದ್ಯೋಗ ಆಗಲ್ಲೂ ಕಾರ್ಟೂನನ್ನು ಬಿಡದೇ ಅಭ್ಯಾಸ ಮಾಡುತ್ತಿದ್ದರು.
ನಾಡಿನ ಖ್ಯಾತ ವ್ಯಂಗ್ಯಚಿತ್ರಗಾರರಾದ ಬಿ ವಿ ರಾಮಮೂರ್ತಿ, ನರೇಂದ್ರ, ನಾಡಿಗ್, ಕೆ ಆರ್ ಸ್ವಾಮಿ, ಪ್ರೇಮ್ ಕುಮಾರ್, ಹುಬ್ಳೀಕರ್, ಎಸ್ಸೆಸ್ ಆನಂದ್, ಗುಜ್ಜಾರಪ್ಪ ಹಾಗೂ ವಿ ಆರ್ ಸಿ ಶೇಖರ್ ಹೀಗೆ ಎಲ್ಲರೂ ನಾರಾಯಣ್ ಅವರಿಗೆ ಸ್ಫೂರ್ತಿಯಾದರಂತೆ. 1974 ರಲ್ಲಿ ‘ಮಲ್ಲಿಗೆ’ಯಲ್ಲಿ ಮೊದಲ ಕಾರ್ಟೂನ್ ಪ್ರಕಟವಾಯ್ತಂತೆ. ಸತತ ಐದು ದಶಕಗಳು ಅದೇ ಗುಂಗಲ್ಲಿ ಇದ್ದು ಕಾರ್ಟೂನ್ ಬರೆಯುತ್ತಿರುವುದು ಅವರ ಸಾಧನೆಯೇ ಸರಿ.
ಹೀಗೆ ನಾರಾಯಣ್ ಹಾಗೂ ಅವರ ಕಾರ್ಟೂನ್ ನಂಟಿನ ಬಗ್ಗೆ ಅವರನ್ನೇ ಮಾತನಾಡಿಸಿದಾಗ ಹಲವಾರು ಗತಕಾಲದ ನೆನಪುಗಳು ಬಿಚ್ಚಿಕೊಂಡವು. ಅವನ್ನು ಅವರ ಮಾತಲ್ಲೇ ತಿಳಿಯುವ.
ಆ ದಿನಗಳಲ್ಲಿ ವ್ಯಂಗ್ಯಚಿತ್ರಕಾರರ ಸಂಪರ್ಕ ಹೇಗಾಯ್ತು?
ಆಗಿನ್ನೂ ನಾನು ತುಂಬಾ ಚಿಕ್ಕವನು, ರೇಷ್ಮೆ ಇಲಾಖೆಯಲ್ಲಿ ಹಂಗಾಮಿಯಾಗಿ ಮಲ್ಟಿ ಸ್ಟೋರಿ ಬಿಲ್ಡಿಂಗ್ನಲ್ಲಿ ಕೆಲಸ ಮಾಡ್ತಿದ್ದೆ. ಆ ದಿನಗಳಲ್ಲೇ ಬೆಂಗಳೂರಿನ ಕಾವೇರಿ ಭವನ ಆವರಣದಲ್ಲಿ ಆಗಾಗ ನರೇಂದ್ರ ಅವರು, ಗುಜ್ಜಾರಪ್ಪ, ರಿಗ್ರೇಟ್ ಅಯ್ಯರ್ ಹಾಗೂ ಹಲವಾರು ವ್ಯಂಗ್ಯಚಿತ್ರಕಾರರು ಅಲ್ಲಿಗೆ ಬಂದು ಮೀಟಿಂಗ್ ಮಾಡ್ತಿದ್ರು. ನಾನು ನನ್ನ ಆಫೀಸಿಂದ ನೇರ ಅಲ್ಲಿಗೆ ಬರ್ತಿದ್ದೆ. ಅಲ್ಲದೇ ಆಗಾಗ ನರೇಂದ್ರ ಅವರ ಆಫೀಸ್ಗೆ ಹೋಗಿ ಕೂತ್ಕಳ್ತಿದ್ದೆ. ಉಡುಪಿಯಲ್ಲಿ ನಡೆದ ಸಮ್ಮೇಳನಕ್ಕೆ ಹೋಗಲೇ ಬೇಕೆಂದು ಮನೆಯಲ್ಲಿ ಹಠ ಕೂಡ ಮಾಡಿದ್ದೆ ಆದ್ರೂ ಕಳಿಸಿರಲಿಲ್ಲ. ಹಾಗಾಗಿ ಸಮ್ಮೇಳನಗಳಲ್ಲಿ ಭಾಗವಹಿಸಬೇಕೆಂಬ ಹಠ ಬಂದಿತ್ತು. ಕೆಲಸಕ್ಕೆ ರಜ ಹಾಕಿ ಹೋಗ್ತಿದ್ದೆ. ಆ ಸಮಯದಲ್ಲಿ ಎಂ. ವಿಶ್ವನಾಥ್ ಅವರ ಮನೆಗೆ ಹೋಗಿ ಅಲ್ಲಿಂದ ಸ್ಮರಣೀಯ ಸಂಚಿಕೆಗಳನ್ನು ತೊಗೊಂಡು ಸಮ್ಮೇಳನಕ್ಜೆ ಸಾಗಿಸಿದ್ದೆ. ಸಂಘದ ಕೆಲಸ ಮಾಡಲು ಖುಷಿ. ಹೀಗೆ ಸಂಪರ್ಕ ಬೆಳೀತು.
ತಾವು ಸೇವೆಯಲ್ಲಿದ್ದಾಗಲೂ ಕಾರ್ಟೂನ್ ಬರೀತಿದ್ರಾ?
ನಾನು ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಕೆಲಸ ಮಾಡುವಾಗಲೂ ಕಾರ್ಟೂನ್ ಬರೀತಿದ್ದೆ. ಅದ್ರೆ ಟೈಮ್ ಮಾಡ್ಕೊಳ್ಳೋದು ಕಷ್ಟ ಆಗ್ತಿತ್ತು. ಹಾಗಿರುವಾಗಲೂ ಒಂದು ಪತ್ರಿಕೆಗೆ ಪ್ರತಿದಿನ ಕಾರ್ಟೂನ್ ಮಾಡ್ತಿದ್ದೆ. ಬೆಳಗ್ಗೆಯಿಂದಾನೇ ಕಾರ್ಟೂನ್ಗೆ ಐಡಿಯಾ ಹುಡುಕ್ತಾ ಆಫೀಸ್ ಕೆಲ್ಸ ಮಾಡೋದು. ನಂತರ ಪೇಪರ್ನಲ್ಲಿ ಬರೆದು ಸ್ಕ್ಯಾನ್ ಮಾಡಿ ಫೋಟೋಶಾಪ್ನಲ್ಲಿ ಕಲರ್ ಮಾಡಿ ಇಮೇಲ್ ಮಾಡೋದು. ಹೀಗೆ ಸತತ ಒಂದು ವರ್ಷ ಮಾಡಿದ್ದೆ.
ಸಾಲ ವಸೂಲಿಯ ಕೆಲಸಕ್ಕೆ ಹಾಕಿದ್ರು. ಆಗ ವ್ಯಾನ್ನಲ್ಲಿ ಓಡಾಡ್ತಾ ಡ್ಯೂಟಿ ಮಾಡಬೇಕಾಯ್ತು. ಕಾರ್ಟೂನ್ ಮಾಡೋದು ಆಗ ಸ್ವಲ್ಪ ಕಷ್ಟ ಆಗೋದು. ಆದ್ರೂ ಕಲರ್ ಪೇಸ್ಟೆಲ್ ಹಾಗೂ ಪೆನ್ಸಿಲ್ಗಳಲ್ಲೇ ಕಲರ್ ಮಾಡಿ ಇಮೇಲ್ ಮಾಡ್ತಿದ್ದೆ. ಬಿಟ್ರೆ ಹೋಗ್ಬಿಡುತ್ತೆ ಅನ್ನೋ ಭಯ! ಜ್ಯೂನಿಯರ್ ಸ್ಟ್ಯಾಫ್ಗಳೆಲ್ಲಾ ಕಿಚಾಯಿಸೋರು ಆದ್ರೂ ಕಾರ್ಟೂನ್ ಪ್ರೇಮ ಬಿಟ್ಟಿರಲಿಲ್ಲ. ಇಷ್ಟೆಲ್ಲಾ ಕಷ್ಟ ಪಟ್ಟು ಬರೆದ್ರೂ
ಒಂದು ಪೈಸೆಯೂ ಸಿಗಲಿಲ್ಲ. ಕಾರ್ಟೂನ್ ಬರಿದಿದ್ದೇ ಸಿಕ್ಕ ಖುಷಿ!
ಇನ್ಯಾವ್ಯಾವ ಪತ್ರಿಕೆಗಳಿಗೆ ಕಾರ್ಟೂನ್ ಬರೀತಿದ್ರಿ?
ಆರಂಭದ ದಿನಗಳಲ್ಲಿ ‘ಲೋಕವಾಣಿ’ಗೆ ಮೂರ್ನಾಲ್ಲು ತಿಂಗಳು ಕಾರ್ಟೂನ್ ಬರೆದಿದ್ದೆ. ಆಗ ಬಟರ್ ಪೇಪರ್ ಮೇಲೆ ರೋಟ್ರಿಂಗ್ ಪೆನ್ನಿನಲ್ಲಿ ಬರೀಬೇಕಿತ್ತು. ತಪ್ಪಂತು ಆಗುವಂತೆಯೇ ಇಲ್ಲ. ಅನುಭವ ಕೂಡ ಇಲ್ಲ. ಪ್ರಿಂಟ್ ಆಗ್ತಿತ್ತು. ಬೇರೆ ಸಂಪಾದಕರು ಬಂದ ನಂತರ ದುಡ್ಡು ಕೊಡಲಿಲ್ಲ. ನಿಂತು ಹೋಯ್ತು.
‘ಬಯಲು ಸೀಮೆ’ ಪತ್ರಿಕೆಗೆ ಬರೆದೆ, ಅಲ್ಲಿ ಆಗಷ್ಟು ಈಗಷ್ಟು ಒಂದಷ್ಟು ದುಡ್ಡು ಸಿಕ್ತು.
ಆರಂಭದ ದಿನಗಳಲ್ಲಿ ಪ್ರಕಟವಾದ ತಮ್ಮ ಕಾರ್ಟೂನ್ಗಳಿಗೆ ತಕ್ಕ ಸಂಭಾವನೆ ಸಿಗ್ತಿತ್ತಾ?
ನಾನು ವಿದ್ಯಾರ್ಥಿಯಾಗಿದ್ದಾಗಲೇ ಕಾರ್ಟೂನ್ ಬರೀತಿದ್ದೆ. ಅವು ಪ್ರಕಟವೂ ಆಗೋದು. ಒಂದು ಕಾರ್ಟೂನ್ ಪ್ರಕಟವಾದ್ರೆ ‘ಮಲ್ಲಿಗೆ’ಯಲ್ಲಿ ಐದು ರುಪಾಯಿ, ‘ಪ್ರಜಾಮತ’ದಲ್ಲಿ ಮೂರು ರುಪಾಯಿ, ರಾಗಸಂಗಮದಲ್ಲಿ ಹತ್ತು ರುಪಾಯಿ ಕೊಡೋರು. ಕಾರ್ಟೂನ್ ಪ್ರಕಟವಾಗಿದ್ರೆ ಓಚರ್ಗೆ ಸಹಿ ಹಾಕಿಸಿಕೊಂಡು ದುಡ್ಡು ಕೊಡೋರು. ಸುಧಾದಲ್ಲಿ ಪ್ರಕಟವಾದ್ರೆ ನಮ್ಮ ವಿಳಾಸಕ್ಕೆ ಮನಿಯಾರ್ಡರ್ ಬರೋದು. ಕಾಂಪ್ಲಿಮೆಂಟರಿ ಕಾಪಿ ಕೂಡ ಬರೋದು! ಎಷ್ಟು ಖುಷಿ ಇತ್ತು ಗೊತ್ತಾ?
ತಾವು ಒಂದು ಧಾರಾವಾಹಿಯಲ್ಲಿ ಕೂಡ ನಟಿಸಿದ್ರಿ ಅಲ್ವಾ?
ಅದು ಅಚಾನಕ್ಕಾಗಿ ಆಗಿದ್ದಷ್ಟೇ. ‘ಉಲ್ಟಾಪಲ್ಟಾ’ ಚಿತ್ರದ ನಿರ್ದೇಶಕರಾದ ಎನ್ ಎಸ್ ಶಂಕರ್ ಅವರ ‘ಬದುಕು ಜಟಕಾ ಬಂಡಿ’ ಧಾರಾವಾಹಿಯ ಒಂದು ದೃಶ್ಯವನ್ನು ನಮ್ಮ ಬ್ಯಾಂಕ್ನಲ್ಲಿ ಶೂಟಿಂಗ್ ಮಾಡಿದ್ರು. ಬ್ಯಾಂಕ್ನಲ್ಲಿ ಇದ್ದೋರನ್ನೇ ಸಹ ಕಲಾವಿದರಂತೆ ಬಳಸಿಕೊಂಡಿದ್ದರು. ಆಗ ನಾನೂ ಆ ದೃಶ್ಯದಲ್ಲಿ ನಟಿಸಿದ್ದೆ. ಅದನ್ನು ನಾನು ಇವತ್ತೂ ನೋಡಿಲ್ಲ. ಅದ್ರೆ ಅದು ಪ್ರಸಾರವಾದ ನಂತರ ಜನ ನನ್ನನ್ನು ಗುರುತಿಸಿ ಮಾತಾಡಿಸುತ್ತಿದ್ದರು. ಒಂಥರ ಹೆಮ್ಮೆ ಅನ್ಸೋದು. ಅದೂ ಆಯ್ತು!
ಎನ್ ಎಸ್ ಶಂಕರ್ ಅವರು ಕೆಲಸ ಮಾಡುತ್ತಿದ್ದ ‘ಸುದ್ದಿ ಸಂಗಾತಿ’ಯಲ್ಲೂ ನನ್ನ ಒಂದು ಕಾರ್ಟೂನ್ ಪ್ರಕಟವಾಗಿತ್ತು. ಆಗದು ಬುಕ್ ಫಾರ್ಮ್ ನಲ್ಲಿ ಬರ್ತಿತ್ತು!
ಇಂಗ್ಲೀಷ್ ಪತ್ರಿಕೆಯಲ್ಲೂ ಕಾರ್ಟೂನ್ ಪ್ರಕಟವಾಗಿತ್ತು ಎಂದಿದ್ರಿ. ಅದರ ಬಗ್ಗೆ ಹೇಳಿ.
ಟೈಮ್ಸ್ ಆಫ್ ವಿಜಯನಗರ ಹಾಗೂ ಟೈಮ್ಸ್ ಆಫ್ ಬನಶಂಕರಿ ಅಂತಾ ಇಂಗ್ಲಿಷ್ ಪೇಪರ್ ಇತ್ತು. ಅದಕ್ಕೆ ಕಾರ್ಟೂನ್ ಕೊಡ್ತಿದ್ದೆ. ಅದರ ಕಾಲಂ ಸೈಜ್ಗೆ ಸರಿಯಾಗಿ ಸ್ಕೆಚ್ ಪೆನ್ನಲ್ಲಿ ಕಾರ್ಟೂನ್ ಬರೆದು ಅದನ್ನು ಬಟರ್ ಪೇಪರನ್ನಲ್ಲಿ ಪ್ರಿಂಟ್ ಮಾಡಿಸಿ ಕೊಡ್ತಿದ್ದೆ. ಕನ್ನಡದಲ್ಲಿ ಬರೆದದ್ದನ್ನು ಅವರೇ ಇಂಗ್ಲಿಷ್ಗೆ ತರ್ಜುಮೆ ಮಾಡಿ ಪ್ರಕಟಿಸೋರು. ಅದಕ್ಕೆ ದುಡ್ಡು ಕೂಡ ಕೊಡೋರು!
ಈಗೆಲ್ಲಾ ಮೊಬೈಲ್ ಹಾಗೂ ಟ್ಯಾಬ್ನಲ್ಲೇ ಕಾರ್ಟೂನ್ ಬರೀತರಲ್ಲಾ ಅದರ ಬಗ್ಗೆ ತಮ್ಮ ಅಭಿಪ್ರಾಯವೇನು?
ಮಾಡ್ಲೀ ಬಿಡಿ ಅದು ಒಳ್ಳೇದೆ, ಕ್ಟಾಲಿಟಿ ಕೂಡ ಇರುತ್ತೆ, ಆದ್ರೆ ಮೊದಲು ಪೇಪರ್ನಲ್ಲಿ ಬರೆದು ಪ್ರಾಕ್ಟೀಸ್ ಮಾಡಿರಬೇಕು, ಅನಾಟಮಿ ಸ್ಟಡಿ ಮಾಡಿರಬೇಕು. ಬೇಗ ಆಗೋದು ಮುಖ್ಯ ಅಲ್ಲ. ಎಷ್ಟು ಪರಿಣಾಮಕಾರಿ ಅನ್ನೋದು ಮುಖ್ಯ. ನಾನೂ ಕಂಪ್ಯೂಟರ್ನಲ್ಲಿ ಅಷ್ಟಿಷ್ಟು ಮಾಡ್ತೀನಿ. ಅದ್ರೆ ಪೇಪರ್ ಮೇಲೆ ರೋಟ್ರಿಂಗ್ ಪೆನ್ನಿನಲ್ಲಿ ವರ್ಕ್ ಮಾಡಿ, ಕಲರ್ ಮಾಡೋ ಖುಷಿನೇ ಬೇರೆ.
ಈಗಿನ ನಿವೃತ್ತಿ ಜೀವನದಲ್ಲಿ ತಮ್ಮ ವ್ಯಂಗ್ಯಚಿತ್ರಗಳ ರಚನಾ ಕಾರ್ಯ ಹೇಗಿದೆ?
ದಿನಕ್ಕೊಂದು ಬರೆಯಲೇ ಬೇಕೆಂದು ನಿರ್ಧರಿಸಿದ್ದೀನಿ. ಪೇಪರ್ ಮೇಲೆ ಬರೆಯೋದೇ ನನಗೆ ಅಭ್ಯಾಸ. ಲೈನ್ ವರ್ಕ್ ಆದ್ಮೇಲೆ ಫ್ಯೂಝಿ ಕಲರ್ ಹಾಕ್ಬಿಟ್ರೆ ಅದೇನೋ ಖುಷಿ.
ಪತ್ರಿಕೆ ಕಳಿಸೋದು, ಪ್ರಿಂಟ್ ಆಗೋದು ಬೇರೆ. ಆದ್ರೆ ಕಾರ್ಟೂನ್ ಬರೆದು ಮುಗಿಸಿದ ಮೇಲೆ ಸಿಗೋ ಆನಂದವೇ ಬೇರೆ. ಅದು ಸಾಕು!
ದಿನದ ಮನೆಯ ಕೆಲಸಗಳನ್ನು ಮಾಡಿದ ಸುಸ್ತು, ದಣಿವು ಎಲ್ಲವೂ ಮಾಯವಾಗಿ ಬಿಡುತ್ತೆ! ಹೊಸ ಹುರುಪು, ಉಲ್ಲಾಸ ಸಿಗುತ್ತೆ. ಅದಕ್ಕಿಂತ ಇನ್ನೇನು ಬೇಕು?
ಆಗ ಮಡದಿಯ ಹಾಗೂ ಈಗ ಮಗ-ಸೊಸೆಯ ಸಹಕಾರವು ನನ್ನ ಜೊತೆಗಿದೆ.
ಕಾರ್ಟೂನಿನಿಂದ ಹೆಚ್ಚು ದುಡ್ಡು ಸಿಕ್ಕಿಲ್ಲಾ ಆದ್ರೆ ಸಾಕಷ್ಟು ನೆಮ್ಮದಿ, ಆನಂದ ಸಿಕ್ಕಿದೆ. ಹೆಚ್ಚು ವ್ಯಂಗ್ಯಚಿತ್ರಕಾರ ಗೆಳೆಯರ ಸಂಪರ್ಕ ಸಿಕ್ಕಿದೆ ಅಷ್ಟು ಸಾಕು!
0 ಪ್ರತಿಕ್ರಿಯೆಗಳು