ವೈ-ಫೈ ಇಲ್ಲದ ಮೇಲೆ…

ಶಿವ ಹಿತ್ತಲಮನಿ 

ಮಗಳು ಶಾಲೆ ಆರಂಭವಾಗಿ ಒಂದು ಗಂಟೆಯ ನಂತರ ಲ್ಯಾಪ್ ಟಾಪಿನ ಮುಂದೆ ಧ್ಯಾನಸ್ಥ ಅವಸ್ಥೆಯಲ್ಲಿ ಕುಳಿತಿದ್ದಳು.

ಕಳೆದ ಒಂದುವರೆ ವರ್ಷದಿಂದ ಶಾಲೆ, ಸಂಗೀತ ಕ್ಲಾಸ್, ಗೆಳೆಯರೊಟ್ಟಿಗೆ ಹರಟೆ, ಕೊನೆಗೆ ಟೈಕೊಂಡೋ ಕ್ಲಾಸ್ ಸಹ ಆನಲೈನ್ ನಲ್ಲಿ ಮಾಡಿ ಮಾಡಿ ಮಗಳಿಗೆ ಸಾಕಾಗಿರಬಹುದೆನಿಸಿ ಮಗಳ ಕಡೆ ನೋಡಿದೆ. ಎದ್ದು ಬಂದು ಹೇಳಿದಳು ‘ನಮ್ಮ ಟೀಚರ್ ಮನೆಯಲ್ಲಿ ವೈ-ಫೈ ಸಿಗ್ತಾನೆ ಇಲ್ಲವಂತೆ, ಪಾಪ ಇಂಟರನೆಟ್ ಹೋಗಿದೆ. ಅದಕ್ಕೆ ಕ್ಲಾಸ್ ನಿಲ್ಲಿಸಿ, ಸೆಲ್ಫ್ ಸ್ಟಡಿ ಮಾಡೋಕೆ  ಹೇಳಿದ್ದಾರೆ’.

ಹೊರಗೆ ಬಂದರೆ ಮಗ ಫೋನ್ ಹಿಡಿದುಕೊಂಡು ಫೋನಿನಲ್ಲಿದ್ದ ಯಾವ ಅಪ್ ನಿಂದ ಗರಾಜಿನ ಬಾಗಿಲು ತೆಗೆಯಬಹುದೆಂಬ ಪ್ರಯತ್ನದಲ್ಲಿದ್ದ. ಕೊನೆಗೆ ಆ ಅಪ್ ಸಿಕ್ಕು, ಅದನ್ನು ಒತ್ತಿದ್ದಾಗ ಗರಾಜು ಬಾಗಿಲು ಜರುಗತೊಡಗಿತು.

ಗರಾಜು ಬಾಗಿಲು ಮೇಲೆ ಹೋಗುತ್ತಿದ್ದಂತೆ ದೂರದಲ್ಲಿ ಕಿಂ ಕ್ರಮ ಕಿಮ್ ಕಿಮ್ ಶಬ್ದ…

೧೯೯೬-೯೭ ರ ಇಂಜಿನೀಯರ್ ಓದುತ್ತಿದ್ದಾಗಿನ ಸಮಯ. ಅದೊಂದು ದಿನ ಕ್ಲಾಸ್ ಮುಗಿಸಿ ಬರುವಾಗ ಗೆಳೆಯರು ದಾವಣಗೆರೆಯ ಡೆಂಟಲ್ ಕಾಲೇಜ್ ಹತ್ತಿರ ಶುರುವಾದ ಅದ್ಯಾವುದೋ ‘ಇಂಟರನೆಟ್ ಸೆಂಟರ್’ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ನಮಗೆ ಈ ಹೊಸ ತಂತ್ರಜ್ಞಾನದ ಅರಗಿಸಿಕೊಳ್ಳದಿದ್ದರೆ ಹೇಗೆ ಎನ್ನುವ ಸದುದ್ದೇಶದಿಂದ ಆ ಇಂಟರನೆಟ್ ಸೆಂಟರಿಗೆ ಭೇಟಿಕೊಡುವ ನಿರ್ಧಾರವಾಯ್ತು.

ಅಲ್ಲಿಗೆ ಹೋದಾಗ ಆ ಸೆಂಟರನವನು ಥೇಟ್ ನಾಸಾ ವಿಜ್ಞಾನಿಗಳು ರಾಕೆಟ್ ತಂತ್ರಜ್ಞಾನ ಹೇಳಿಕೊಡುವರಂತೆ, ಹೇಗೆ ಬ್ರೌಸರ್ ತೆರೆಯುವುದು ಎಂಬುದನ್ನು ತೋರಿಸಿಕೊಟ್ಟ. ಕಾಲೇಜಿನಲ್ಲಿ ಯಾರೋ ‘ಯಾಹೂ ಮೇಲ್’ ಎಂಬ ‘ವೆಬ್ ಸೈಟ್’ ಬಗ್ಗೆ ಹೇಳಿದ್ದರಿಂದ ನಮ್ಮ ಶ್ರೀಗಣೇಶ ಅದೇ ಸೈಟ್ ನಿಂದ ಆರಂಭಮಾಡಿದ್ದಾಯ್ತು. ಆ ಸೈಟ್ ತೆರೆದು ಅದರಲ್ಲಿ ಯಾಹೂ ಇಮೇಲ್ ಮಾಡುವಷ್ಟರಲ್ಲಿ ಅರ್ಧ ಗಂಟೆಯಾಗಿ ಹೋಗಿತ್ತು. ಇಂಟರನೆಟ್ ಜಾಲಾಡಲು ಗಂಟೆಗೆ ೮೦ ರೂಪಾಯಿ. ಅದೊಂದು  ಭಾರೀ ಮೊತ್ತವಾಗಿದ್ದ ಸಮಯವದು. ಆದ್ದರಿಂದ ೪೦ ರೂಪಾಯಿ ನೀಡಿ ಮೊದಲ ಇಂಟರನೆಟ್ ಅನುಭವ ಪಡೆದಿದ್ದಾಯ್ತು.

ಕ್ರಮೇಣ ಇಂಟರನೆಟ್ ಜಾಲಾಡುವ ನಮ್ಮ ಆಸಕ್ತಿ ಈಗ ಹವ್ಯಾಸವಾಗಿ ಬದಲಾಗಿತ್ತು. ಅದಕ್ಕೆ ತಕ್ಕಂತೆ ಕಾಲೇಜಿನ ಹತ್ತಿರವೇ ಇನ್ನೊಂದು ಸೆಂಟರ್ ಆರಂಭವಾಗುವುದೇ. ನಮ್ಮ ಕಾಲೇಜಿನ ಎಲ್ಲ ಯುವ ಜನತೆ ಈ ಸ್ಥಳದ ಸುತ್ತ ಗಿರಕಿ ಹೊಡೆಯುವ ರಹಸ್ಯ ಬಯಲಾಗಲು ಹೆಚ್ಚು ದಿನ ಬೇಕಾಗಲಿಲ್ಲ. ‘ದೇಸಿ’ ಹೆಸರಿನಿಂದ ಶುರುವಾಗುತ್ತಿದ್ದ ವೆಬ್ ಸೈಟ್ ನಮ್ಮ ಹೈಕಳುಗಳ ನಿತ್ಯ ಭೇಟಿಯ ತಾಣವಾಗಿತ್ತು. ಅಲ್ಲಿನ ಫೋಟೋವೊಂದನ್ನು ತೆರೆದರೆ, ಕಂಪ್ಯೂಟರ್ ಪರದೆಯ ಮೇಲೆ ಮೊದಲು ತಲೆ ಮೂಡಿ, ತೆವಳುವ ವೇಗದಲ್ಲಿ ಒಂದೊಂದೇ ಫ್ರೇಮ್ ಮೂಡಿ, ಪಾದ ಮುಟ್ಟುವಷ್ಟರಲ್ಲೇ ೫ ನಿಮಿಷವಾದರೂ ಬೇಕಾಗುತ್ತಿತ್ತು.

ನಮ್ಮೆಲ್ಲರದು ಎಂತಹ ತಾಳ್ಮೆ-ಶ್ರದ್ಧೆ. ಅಂತಹ ೪-೫ ಫೋಟೋ ನೋಡುವಷ್ಟರಲ್ಲೇ ಮತ್ತೆ ಅರ್ಧ ಗಂಟೆ. ಈ ಸಮಸ್ಯೆಗೆ ಬಹಳ ಯೋಚನೆ ಮಾಡಿ ಇನ್ನೊಂದು ದಾರಿ ಕಂಡುಹಿಡಿಯಲಾಯಿತು. ಒಂದೆರೆಡು ಪ್ಲಾಫಿ ಡಿಸ್ಕ್ ತೆಗೆದುಕೊಂಡು ಹೋಗಿ ಅದರಲ್ಲಿ ಚಿತ್ರಗಳನ್ನು ದೌನ್ ಲೋಡ್ ಮಾಡಿಕೊಂಡು ನಂತರ ಕಂಪ್ಯೂಟರ್ ಇರುವ ಯಾರದೋ ರೂಮಿಗೆ ಹೋಗಿ ನೋಡುವ ಕಾರ್ಯಕ್ರಮಗಳಾದವು.

ಮುಂದೆ ಸರ್ಕಾರಿ ವಿ.ಎಸ್.ಏನ್.ಎಲ್ ನವರು ಮನೆಗಳಿಗೆ ಇಂಟರನೆಟ್ ಕೊಡುವ ನಿರ್ಧಾರ ಮಾಡಿದ್ದು ಒಂದು ಮಹತ್ತ್ವದ ಘಟ್ಟ. ನಮ್ಮ ನೆಚ್ಚಿನ ಗೆಳೆಯ ಶರತ್ ಮನೆಯಲ್ಲೇ ಇಂಟರನೆಟ್ ಸಂಪರ್ಕ ತೆಗೆದುಕೊಂಡಿದ್ದರು. ಆದರೆ ಒಂದು ಸಮಸ್ಯೆ ಎಂದರೆ ಮನೆಯ ದೂರವಾಣಿ ಮತ್ತು ಇಂಟರನೆಟ್ ಒಂದೇ ಲೈನ್ ನಲ್ಲಿದ್ದವು. ಅಂದರೆ ಇಂಟರನೆಟ್ ಜಾಲಾಡುವಾಗ ಫೋನ್ ಕರೆ ಬಂದರೆ, ಇಂಟರನೆಟ್ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಆದ್ದರಿಂದ ನಮ್ಮ ಜಾಲಾಟ ರಾತ್ರಿಯ ಸಮಯ ನಡೆಯುತ್ತಿತ್ತು.

ಆ ನೀರವ ರಾತ್ರಿಯಲ್ಲಿ ಮೋಡಮ್ ಆನ್ ಮಾಡಿದಾಗ ಅದು ಕಿಂ ಕ್ರಮ ಕಿಮ್ ಕಿಮ್ ಎಂಬ ಕಿವಿಗೆ ಸೀಸ ಹಾಕಿದಂತಹ ಶಬ್ದ ಮಾಡುತಿತ್ತು. ಕೊನೆಗೆ ಹಾಗೂ ಹೀಗೂ ಸಂಪರ್ಕ ಸಿಕ್ಕು, ನಾವು ಜಾಲಾಡುವಷ್ಟರಲ್ಲೇ ಮತ್ತೆ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಮತ್ತೆ ಮೋಡಮ್ ಜೊತೆ ಹೊಡೆದಾಟ ಮತ್ತು ಕರ್ಕಶ ಶಬ್ದದೊಂದಿಗೆ ಹೋರಾಟ. ಕಂಪ್ಯೂಟರನಿಂದ ಮೋಡಮ್ ಗೆ ಕೇಬಲ್ ಸರಿಯಾಗಿ ಸಿಗಿಸಲಾಗಿದೆಯೇ, ಮೋಡೆಮ್ ಪಾಸ್ ವರ್ಡ್ ಸರಿಯಿದಿಯೇ ಇತ್ಯಾದಿ ಸಂಶೋಧನೆ ಮಧ್ಯರಾತ್ರಿಗಳಲ್ಲಿ ನಡೆಯುತಿತ್ತು.

ಅವಾಗಲೆಲ್ಲ ‘ಎಂ.ಐ.ಆರ್.ಸಿ’ ಎಂಬ ಚಾಟ್ ನಮ್ಮ ತಂಗುದಾಣ. ಅಲ್ಲಿ ಯಾವುದೋ ದೇಶ-ಊರಿನಲ್ಲಿದ್ದವರೊಂದಿಗೆ ‘ಚಾಟ್’ ಮಾಡಿದ ಪುಳಕ. ನಂತರ ‘ಯಾಹೂ ಚಾಟ್’ ಬಂದು ಅದು ಪ್ರಚಲಿತವಾಗಿದ್ದು ನೋಡಿ ತಂತ್ರಜ್ಞಾನದ ಹೇಗೆ ಬದಲಾಗುತ್ತಿದೆ ಎಂದು ಮಾತಾಡಿಕೊಂಡ ನೆನಪು. ಹಾಗೇ ಯು.ಸ್.ಮೇಲ್ ನಲ್ಲಿ ಒಂದು ಇಮೇಲ್ ಖಾತೆ ತೆರೆದು ಪಕ್ಕದಲ್ಲೇ ಕುಳಿತ ಗೆಳೆಯನಿಗೆ ಕಳಿಸಿ ಅವನಿಗೆ ತಲುಪಿತಾ ಎಂದು ಪರೀಕ್ಷಿಕೊಂಡು ಖುಷಿ ಪಡುತಿದ್ದ ಸಮಯವದು

ಆ ಸಮಯದಲ್ಲಿ ಬಂದ ಚಲನಚಿತ್ರ ‘ದಿಲ್ ಹಿ ದಿಲ್ ಮೇ’ …

ಕಾಲೇಜಿನ ಲವ್ ಸ್ಟೋರಿಗೆ ಇಂಟರನೆಟ್ ಪ್ರೇಮದ ಲೇಪನ ನೀಡಿದ ಚಿತ್ರ. ನಾವುಗಳೆಲ್ಲಾ ಅವಾಗ ಬಹುತೇಕ ಚಾಟ್ ರೂಮುಗಳಲ್ಲಿ, ಇಂಟರನೆಟ್ಟಿನ ಗಲ್ಲಿಗಲ್ಲಿಗಳಲ್ಲಿ ಕಾಲ ಕಳೆಯುತ್ತಿದ್ದ ಸಮಯದಲ್ಲೇ ಅದಕ್ಕೆ ಹತ್ತಿರವಾದ ಕತೆಯಿಂದಲೋ ಅಥವಾ ಸೋನಾಲಿ ಬೇಂದ್ರೆ ಇದ್ದರು ಎನ್ನುವ ಕಾರಣಕ್ಕೋ ಬಾರೀ ಇಷ್ಟವಾಗಿಬಿಟ್ಟ ಚಿತ್ರವದು.

ಈ ಕಡೆ ನಮ್ಮದೇ ಪಿಚ್ಚರ್ ಬಿಡುತಿತ್ತು.

ಕಾಲೇಜಿನ ಕೊನೆಯ ವರ್ಷ ಗ್ರೂಪ್ ಪ್ರಾಜೆಕ್ಟ್ ಸಮಯ. ನಮ್ಮ ಗುಂಪಿನಲ್ಲಿ ನಾವು ಮೂವರು ಹುಡುಗರು ಮತ್ತು ಒಬ್ಬ ಹುಡುಗಿ. ಪ್ರಾಜೆಕ್ಟ್ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇಂಟರನೆಟ್ ಸಾಕಷ್ಟು ಜಾಲಾಡುವುದು, ಬೇಕಾದ ಮಾಹಿತಿಯನ್ನು ಪ್ಲಾಫಿ ಡಿಸ್ಕ್ ಗೆ ಹಾಕಿಕೊಳ್ಳುವುದು, ನಂತರ ನಮ್ಮ ಗುಂಪಿನಲ್ಲಿದ್ದ ಹುಡುಗಿ ಆ ಪ್ಲಾಫಿಯಿಂದ ಮಾಹಿತಿಗಳನ್ನು ಕಲೆಹಾಕಿ ಪ್ರಾಜೆಕ್ಟ್ ಗೆ ಬೇಕಾದ ರಿಪೋರ್ಟ್ ಮಾಡುವುದು ನಡೆಯುತ್ತಿತ್ತು.

ಅಂತಹ ಒಂದು ದಿನ ಒಂದು ಎಡವಟ್ಟು ಆಗಿಬಿಡ್ತು. ನಮ್ಮ ಪ್ರಾಜೆಕ್ಟ್ ನ ಹುಡುಗ ಮೇಲೆ ಹೇಳಿದ ‘ದೇಸಿ’ ಸಾಮಾಗ್ರಿಗಳನ್ನು ತನ್ನ ಸ್ವಂತ ಸಮಯದಲ್ಲಿ ನೋಡುವುದಕ್ಕೆ ಪ್ಲಾಫಿ ಡಿಸ್ಕ್ ಗೆ ಹಾಕಿಕೊಂಡು, ನಂತರ ಪ್ರಾಜೆಕ್ಟ್ ಸಂಬಂಧಿಸಿದ ಮಾಹಿತಿಯನ್ನು ಇನ್ನೊಂದು ಪ್ಲಾಫಿ ಡಿಸ್ಕ್ ಗೆ ಹಾಕಿಕೊಂಡು ಬಂದ. ಪ್ರಾಜೆಕ್ಟ್ ಹುಡುಗಿಗೆ ಕೊಡುವಾಗ ಪ್ಲಾಫಿ ಡಿಸ್ಕ್ ಗಳು ಅದಲು ಬದಲಾಗಿ, ಯಾವ ಪ್ಲಾಫಿ ಕೊಡಬಾರದಿತ್ತೋ ಅದನ್ನೇ ಕೊಟ್ಟುಬಿಟ್ಟ. ಆ ಹುಡುಗಿ ಪ್ಲಾಫಿ ತೆರೆದಾಗ ನಾವೆಲ್ಲಾ ಕಂಪ್ಯೂಟರಿನ ಮುಂದೆ ಜೊತೆಗೆ ಕುಳಿತಿದ್ದೆವು.

ಕಂಪ್ಯೂಟರಿ ಪರದೆ ಮೇಲೆ ಬೇರೆಯದೇ ಬಂದದ್ದು ನೋಡಿ ನಮಗಂತೂ ಗಾಬರಿ ಮತ್ತು ಆತಂಕ. ಹುಡುಗಿ ಶಾಂತತೆಯಿಂದ ಪ್ಲಾಫಿ ವಾಪಸ್ ಮಾಡಿ ‘ಇದು ರಾಂಗ್ ಪ್ಲಾಫಿ’ ಅಂದಷ್ಟೇ ಹೇಳಿದ್ದು. ನಂತರ ಪ್ರಾಜೆಕ್ಟ್ ಪ್ಲಾಫಿ ತಗೆದುಕೊಂಡು ಕೆಲಸ ಮುಂದುವರೆಸಿದ್ದು, ನಮ್ಮ ಹುಡುಗ ನಂತರ ಹಲವು ದಿನ ಆ ಹುಡುಗಿ ಕಣ್ಣು ತಪ್ಪಿಸಿ ಓಡಾಡಿದ್ದು ಎಂತಹ ಕತೆ! ನಾವು ಇದು ಎಲ್ಲರಿಗೂ ಗೊತ್ತಾಗಿ ನಮ್ಮ ಗ್ರಹಚಾರ ಕಾದಿದೆ ಅಂದುಕೊಂಡರೆ, ಆ ಹುಡುಗಿ ಕಾಲೇಜು ಮುಗಿಯುವವರೆಗೆ ಅದರ ಬಗ್ಗೆ ಒಂದು ಮಾತನ್ನು ಹೇಳಿರಲಿಲ್ಲ ! ಕಾಲೇಜು ಮುಗಿಯುವವರೆಗೆ ಆ ಸಂಗತಿ ಬೇರೆ ಯಾರಿಗೂ ಗೊತ್ತೇ ಇರಲಿಲ್ಲ !

ವಿ.ಎಸ್.ಏನ್.ಎಲ್ ಇಂಟರನೆಟ್ ಬಂದ ನಂತರ, ಅದರ ಸಂಪರ್ಕಕ್ಕೆ ಅರ್ಜಿ ಹಾಕಿ ವಾರಾನುಗಟ್ಟಲೆ ಕಾಯುತ್ತಿದ್ದದ್ದು, ಸಂಪರ್ಕ ವೇಗ ಎಷ್ಟಾದರೂ ನಿಧಾನವಾಗಿರಲಿ, ಸಿಕ್ಕಿದ್ದೇ ಸೀರುಂಡೆ ಎಂದು ಅದರಲ್ಲೇ ಖುಷಿಪಟ್ಟ ದಿನಗಳು.

ಆಮೇಲೆ ಗಲ್ಲಿಗೊಂದರಂತೆ ಇಂಟರನೆಟ್ ಕೆಫೆಗಳು ಮತ್ತು ಬ್ರೌಸಿಂಗ್ ಸೆಂಟರಗಳು ತಲೆ ಎತ್ತಿದವು. ಮೊದಮೊದಲು ಕೇವಲ ಮೋಜು, ತಮಾಷೆಯ ತಾಣಗಳು ಈಗ ಕೆಲಸ ಹುಡುಕಲು, ರೈಲು ಟಿಕೆಟ್ ಬುಕ್ ಮಾಡಲು.. ಹೀಗೆ ಅನೇಕ ಉಪಯೋಗಿ ಕೆಲಸಗಳ ತಾಣಗಳಾದವು. ಕೊನೆಗೂ ಅನೇಕ ಕಂಪನಿಗಳು ಇಂಟರನೆಟ್ ಸಂಪರ್ಕ ಕೊಡಲು ಆರಂಭಿಸಿ ವ್ಯಾಪ್ತಿ ಹೆಚ್ಚಾಗತೊಡಗಿತ್ತು.

ನಂತರ ಬಂದದ್ದು ಡಾಂಗಲ್ಗಳು. ಕಂಪ್ಯೂಟರಗೆ ತೋರುಬೆರಳಿನಷ್ಟು ಉದ್ದದ ಡಾಂಗಲ್ ತೊಡಿಸಿದರೆ, ಈಗ ಇಂಟರನೆಟ್ ಕುಳಿತಲ್ಲಿಯೇ ಸಿಗಲಾರಂಭಿಸಿತು.

ಕೊನೆಗೆ ಅಡಿಯಿಟ್ಟಿದ್ದು ವೈ-ಫೈ. ಯಾವುದೇ ಕೇಬಲ್ ಅಥವಾ ಡಾಂಗಲ್ ಇಲ್ಲದೆ ಇಂಟರನೆಟ್ ಗೆ ತಾನಾಗಿಯೇ ಬಂದದ್ದು ಸಂಚಲನ ಮೂಡಿಸಿತ್ತು. ಕ್ರಮೇಣ ವೈ-ಫೈ ಸ್ಪಾಟ್ ಗಳು ಎಲ್ಲೆಡೆ ಪಸರಿಸಿ, ಜನರಿಗೆ ಇನ್ನೂ ಹತ್ತಿರವಾಗಿತ್ತು.

ಕ್ರಮೇಣ ಬೆಲೆ ಇಳಿದು ಕೊನೆಕೊನೆಗೆ ಜಾಲಾಡಲು ಗಂಟೆಗೆ ೧೦-೨೦ ರೂಪಾಯಿಗೂ ಬಂದಾಗಿತ್ತು. ಬ್ರೌಸಿಂಗ್ ಸೆಂಟರಗಳು ಮೊದಲಿದ್ದ ಗತ್ತು-ವೈಯಾರ ಕಳೆದುಕೊಳ್ಳಲಾರಂಭಿಸಿದ್ದವು. ಆಮೇಲೆ ಒಂದು ದಿನ ಮೊಬೈಲ್ ಫೋನುಗಳ ಕ್ರಾಂತಿಯಾಯಿತು. ಸ್ಮಾರ್ಟ್ ಫೋನುಗಳು ಮತ್ತು ಅದರಲ್ಲಿ ಇಂಟರನೆಟ್ – ಸಂಕ್ರಮಣ ಕಾಲ. ಮೂಲೆಮೂಲೆಯಲ್ಲೂ ಸಂಪರ್ಕ. ನಿಜಕ್ಕೂ ಇಂಟರನೆಟ್ ಜನಜೀವನದ ಹಾಸುಹೊಕ್ಕಾಗಿದ್ದು ಈವಾಗಲೇ…

ನಂತರದ್ದು ಗೊತ್ತಿದ್ದ ಕತೆ.. ಯಾವ ರೀತಿ ಆಟ, ಊಟ, ಪ್ರಯಾಣ, ಬ್ಯಾಂಕ್, ಸರ್ಕಾರಿ ಕೆಲಸ ಇತ್ಯಾದಿಗಳು ಎಲ್ಲಾ ಇಂಟರನೆಟ್ ಅಂಗಳಕ್ಕೆ ಹೊಕ್ಕಿದು, ವೈ-ಫೈ ಸರ್ವಾಂತರ್ಯಾಮಿ ಆಗಿದ್ದು.

*****
ಈಗ ಗ್ಯಾರೇಜು ಬಾಗಿಲು ಬಿಟ್ಟು, ಮಗ ಮನೆಯ ಎ.ಸಿ ಶುರುಮಾಡಲು ಫೋನಿನಲ್ಲಿ ಅಪ್ ತಿರುವುತ್ತಿದ್ದ.

ಮಗಳು ಕೇಳಿದಳು ‘ಇಂಟರನೆಟ್ ವೈ-ಫೈ ಇಲ್ಲದಿದ್ದಾಗ ಅದು ಹೇಗಿತ್ತು ನಿಮ್ಮಗಳ ಜೀವನ ‘ ?

ಆಗ ನೆನಪಾಗಿದ್ದು ಪರೀಕ್ಷೆ ಫಲಿತಾಂಶಗಳನ್ನು ನಾವು ನೋಡುತ್ತಿದ್ದ ರೀತಿ. ಮೂರು ಗಂಟೆ ಪಯಾಣ ಮಾಡಿ ಧಾರವಾಡದ ಕಾಲೇಜಿಗೆ ಹೋಗಿದ್ದು, ಹೋಗುವಾಗ ಬರಿ ಸಿ.ಇ .ಟಿ. ಫಲಿತಾಂಶವೇ ತಲೆಯಲ್ಲಿ ಓಡುತ್ತಿದ್ದು, ನಂತರ ಅಲ್ಲಿ ಹಾಕಿದ್ದ ಸೂಚನಾ ಫಲಕದಲ್ಲಿ  ಫಲಿತಾಂಶ ನೋಡಿದ್ದು. ಅವೆಲ್ಲಾ ಹಿತವಾದ ಯಾತನೆಗಳು  !

ಈಗ ಎಲ್ಲಾ ತರದ ಫಲಿತಾಂಶಗಳ ಬೆರಳ ತುದಿಯಲ್ಲೇ , ಫಲಿತಾಂಶದ ಬೇಗೆಯನ್ನೂ ಅದರ ಅನುಭೂತಿಯನ್ನು ಅನುಭವಿಸಲಿಕ್ಕೂ ಆಗದ ತ್ವರಿತ ಜೀವನಕ್ರಮ..

ಆಗ ಎಲ್ಲಾದರೂ ಹೊಸ ಜಾಗಕ್ಕೆ, ಯಾವುದಾದರೂ ಮನೆ ಹುಡುಕಿಕೊಂಡು ಹೋಗುವ ದಾರಿಯಲ್ಲಿದ್ದವರಿಗೆ ವಿಳಾಸ ಕೇಳಿ, ಅವರು ‘ಸೀದಾ ಹೋಗಿ ಆಮೇಲೆ ಬಲಕ್ಕೆ ತಿರುಗಿ ಆಮೇಲೆ ಎಡಕ್ಕೆ ಹೋಗಿ ಆಮೇಲೆ ಅಲ್ಲಿ ದೊಡ್ಡ ಆಲದ ಮರದ ಪಕ್ಕ ಗಲ್ಲಿಯಲ್ಲಿ ಹೋಗಿ’ ಎಂದು ಕೇಳಿಸಿಕೊಳ್ಳುವುದೇ ಚೆಂದವಾಗಿತ್ತು. ಹುಡುಕುವುದರಲ್ಲಿ ಮತ್ತು ಕಳೆದುಹೋಗುವುದರಲ್ಲಿ ಒಂದು ಮಜವಿರುತ್ತಿತ್ತು.

ಈಗ ಕಳೆದುಹೋಗಬೇಕೆಂದರೂ ಗೂಗಲ್ ಬಿಡುವುದಿಲ್ಲ !

ಅಷ್ಟರಲ್ಲಿ ಮಗಳ ಟೀಚರ್ ಮೆಸೇಜ್ ಕಳಿಸಿದ್ದರು ವೈ-ಫೈ ಮರಳಿ ಬಂದಿದೆ ಎಂದು.

ಹೋಗುವಾಗ ಮಗಳು ಕೇಳಿದಳು ‘ಇಂಟರನೆಟ್/ವೈ-ಫೈ ಸಂಪರ್ಕ ಇಲ್ಲದಿದ್ದ ಕಾಲದಲ್ಲಿ ಈ ಕೊರೋನಾ ಪರಿಸ್ಥಿತಿ ಬಂದು, ಜನರು ಮನೆಯಲ್ಲಿ ತಿಂಗಳುಗಟ್ಟಲೇ ಇರಬೇಕಾದ ಸ್ಥಿತಿ ಇದ್ದರೆ ಏನಾಗುತ್ತಿತ್ತು ?’

‍ಲೇಖಕರು Admin

November 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: