ವೈದೇಹಿ ಕಂಡಂತೆ ‘ಊರೆಂಬ ಉದರ’

ನೆನಪುಗಳ ತೇರು

ವೈದೇಹಿ, ಮಣಿಪಾಲ


ಲೇಖಕಿ ಪ್ರಮೀಳಾ ಸ್ವಾಮಿ ಅವರು ಇಲ್ಲಿ ನೆನೆಯಹೊರಟಿರುವುದು, ತನ್ನ ಚೇತನದ ಸುಖೋಷ್ಣತೆಯನ್ನು ಮುಚ್ಚಟೆಯಾಗಿ ಕಾಪಾಡಿದ ತನ್ನೂರಿನ ತಂಪುನೆನಪು ನೆಳಲುಗಳನ್ನು, ತನ್ನ ತವರು ಕುಟುಂಬವನ್ನು ಹಾಗೂ ಬಳ್ಳಿಯಂತೆ ಪರಸ್ಪರ ಹೆಣೆದು ಬದುಕಿದ ಹಳ್ಳಿಯ ಹತ್ತಾರು ಸಮಸ್ತರ ಇನ್ನೂ ಮಸಳಿಸದೇ ಇರುವ ಗಾಢಸ್ಮೃತಿಗಳನ್ನು, ಇವತ್ತಿಗೂ ತನ್ನನ್ನು ಕ್ರಿಯಾಶೀಲವಾಗಿ ಉಳಿಸಿರುವ ತನ್ನ ಸಮುದಾಯದ ಊಟ ಉಪಹಾರ ವಿಶೇಷಗಳನ್ನು.

‘ಊರೆಂದರೆ ಊರು, ನಮ್ಮೂರು’ ಎಂಬಂತೆ ಯಾರೇ ಆದರೂ ಕನಸು ಕಾಣುವಂತಹ ಊರದು. ಅಲ್ಲಿ ಸ್ನಾನ ಸಂಧ್ಯಾವಂದನೆಗೆ, ವಸ್ತ್ರ ಪ್ರಕ್ಷಾಲನೆಗೆ, ವಿಹಾರಕ್ಕೆ, ಸುಖದುಃಖ ವಿನಿಮಯಕ್ಕೆ ಕೈನೀಡಿ ಕರೆಯುವ ನಿರಂತರದ ಒಂದು ಹೊಳೆ, ಬೀಸು ವೃಕ್ಷಗಳು ಕಳಿಸುವ ಸುಗಂಧಯುತ ಗಾಳಿ… ಕೇರಿ, ಅಗ್ರಹಾರ, ಸರಳ ಬದುಕನ್ನು ಉಸಿರಾಡುವ ಹಬ್ಬದುಲ್ಲಾಸದ, ಉತ್ಸವ ಪರಿಷೆಗಳಲ್ಲಿ ಮೈಮರೆವ ಜನಪದರು – ಹೀಗೆ.

ಘನ ನೆನಪುಗಳೆಂದರೆ ಚಾವಡಿಯ, ಅದರಾಚೆಯ ನೆನಪುಗಳೇ ಎಂಬ ಪ್ರಚ್ಛನ್ನ ನಂಬಿಕೆಯಲ್ಲಿ ಓದಿಕೊಂಡು ಬಂದವರು ನಾವು. ಆದರೆ ಉದರವಿಲ್ಲದೆ ಊರೆಲ್ಲಿ? ಮನ ಮಿದುಳು ಜನವೆಲ್ಲಿ ಜಗವೆಲ್ಲಿ? ಯಾಕೋ, ಬದುಕಿನ ನೆನಪುಗಳ ವಿಚಾರ ಬರುವಾಗ ಅಲ್ಲಿ ತಮ್ಮನ್ನು ಬೆಳೆಸಿದ ಊಟೋಪಚಾರದ ವಿಚಾರವಾಗಲೀ ವಿವರಗಳಾಗಲೀ ಪ್ರಧಾನವೆನಿಸವು. ಎಂದರೆ ವಿವರಗಳಲ್ಲಿಯೂ ವರ್ಗಭೇದವಿರುತ್ತದೆ. ಮಹಿಳೆಯರ ಜೀವನಿಧಿಯಾಗಿ ಒಡಗೂಡಿಕೊಂಡು ಬಂದ ಅಡುಗೆ ಕಸೂತಿ ರಂಗವಲ್ಲಿ ಇನ್ನಿತರ ಕಲಾ ಪ್ರಕಾರಗಳಿಗೆ ಯಾವತ್ತೂ ಅಡ್ಡಪಂಕ್ತಿಯೇ. ಮನೆ ಬದುಕನ್ನು ಇಷ್ಟಪಡುವವರನ್ನೂ ಅನಿವಾರ್ಯವಾಗಿ ಒಪ್ಪಿಕೊಂಡಿರುವವರನ್ನೂ ಅಧೀರಗೊಳಿಸುವ ‘ಅಡುಗೆ ಮನೆಯಲ್ಲೇ ಮುಗಿದು ಹೋಗುವ’ ಆತಂಕ, ಕೀಳರಿಮೆ ಮತ್ತು ಭೀತಿಯ ಮೂಲಕಾರಣ, ಹೆಚ್ಚಾಗಿ, ಈ ಪರಿಭೇದ.

ಆದರೆ ಇಲ್ಲಿ ಲೇಖಕಿ ತನ್ನೂರು ಹೇಮಗಿರಿಯ ಉತ್ಸವ ಹಬ್ಬ ನಿತ್ಯನೈಮಿತ್ಯಿಕಗಳೊಂದಿಗೇ, ತನ್ನ ಸಂಕೇತಿ ಸಮುದಾಯದ ಅಡುಗೆಮನೆಯವರೆಗೂ ನಮ್ಮನ್ನು ಕರೆದೊಯ್ದಿದ್ದಾರೆ. ಎಂದರೆ ತಾನು ಹುಟ್ಟಿ ಬೆಳೆದ ಊರು-ಮನೆಯ ಸಂಸ್ಕೃತಿ ಸ್ಮೃತಿ, ಅಲ್ಲಿನ ಜನಪದ ಜಗಳ ನಡೆನುಡಿ ಇತ್ಯಾದಿಗಳ ಜೊತೆಗೇ ಸರಾಗವಾಗಿ ತನ್ನ ಸಮುದಾಯದ ಊಟೋಪಚಾರದ ಬಗೆ, ಬಗೆಬಗೆ, ರುಚಿಶುಚಿ, ತಯಾರಿ, ಮಸಾಲೆ ವಿವರಗಳ ಸಮೇತ ನೆನಪುಗಳ ತೇರನ್ನೇ ಅಭಿಮಾನದಿಂದ ಹೊರಡಿಸಿದ್ದಾರೆ. (ಅನೇಕ ಸುಂದರ ‘ಬಹು’ಗಳ ಈ ದೇಶವನ್ನು ಬಂದಳಿಕೆಯಂತೆ ಬಾಧಿಸುವ ಜಾತಿ ವಿಜಾತಿ ಉಪಜಾತಿಗಳ ವಿಷವಿಷಮ ಪರಿಣಾಮಗಳ ಹೊಡೆತದ ನಡುವೆಯೂ ಇಣುಕುವ ಬೆಳಕಿನ ಮಿಣುಕೆಂದರೆ ಪ್ರಾಯಶಃ ಇದೊಂದೇ, ಬಹುರುಚಿ.) ೧೩೬

ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ.

ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ. ಗೆಳೆಯ ಗೆಳತಿಯರು, ಬಾಲಮ್ಮಾಮಿ, ಸುಬ್ಬಮ್ಮ, ಸಾವಿತ್ರಮ್ಮ, ಸತ್ಯಮೇಷ್ಟ್ರು, ಶಾಮಣ್ಣಿ ಮಾವಯ್ಯನಂತಹ ಹಲವರು, ತುಂಬಿದ ಮನೆಯ ಸಕಲ ಕಾರ್ಯ ಸಂಕೀರ್ಣದ ಎಡೆಯಲ್ಲಿ ತನ್ನ ಕುಸುರಿಕಲೆಯಲ್ಲಿ ತಲ್ಲೀನಳಾಗುವ ತಾಯಿ, ನಿಬಿಡ ನಿತ್ಯಗಳಲ್ಲಿ ಮುನ್ಮುಂದೆ ಸಾಗುತ್ತ ಅಂತಿಮವಾಗಿ ಒಬ್ಬಂಟಿ ಪಯಣದಲ್ಲಿ ಮುಕ್ತಾಯವಾಗುವ ಇಹದ ಯಾತ್ರೆಗಳು – ಓದುತ್ತ ಮನಸ್ಸು ಒಳಮುಖವಾಗುತ್ತದೆ.

ಜೀವನದಲ್ಲಿ ಹೋರಾಟಗಳಿಗೆ ಮುಕ್ತಾಯ ಮತ್ತು ಪ್ರತಿಫಲ ಎಂಬುದು ಇದೆಯೇ? ಇದ್ದೇ ಇದೆ ಎಂದು ಎದೆತಟ್ಟಿ ಹೇಳುವವರಾದರೂ ಇರುವರೆ? ಅದಕ್ಕೆ ಆಧಾರವೆಲ್ಲಿದೆ? ಬಹುತೇಕ, ಹೋರಾಟಕ್ಕೆ ಹೋರಾಟವೇ ಆದಿ ಮತ್ತು ಅಂತ್ಯವಷ್ಟೆ?

ಕೊನೆಯಲ್ಲಿ ಕೃತಿ ರಚನೆಯ ಕಾರಣ ಕುರಿತಾದ ತನ್ನ ವೈಯಕ್ತಿಕ ಅನುಭವದ ಚಿಂತನ ಅನುಬಂಧದೊಂದಿಗೆ ಈ ವಿಶಿಷ್ಟ ಸ್ಮೃತಿಕೋಶವನ್ನು ನೀಡಿರುವ ಶ್ರೀಮತಿ ಪ್ರಮೀಳಾ ಸ್ವಾಮಿ ಇದುವರೆಗೆ ಸುಮ್ಮನೇ ಇದ್ದದ್ದಾದರೂ ಯಾಕಂತೆ?

ಕೆಲ ಪ್ರಶ್ನೆಗಳು, ಪ್ರಶ್ನೆಗಳು ಮಾತ್ರ.

‍ಲೇಖಕರು avadhi

August 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: