ವೈದೇಹಿಯವರು ಮನೆಗೆ ಕರೆಸಿ ಕೊಟ್ಟ ಪುಸ್ತಕ…

ಸುಧಾ ಆಡುಕಳ

ಸಾಹಿತಿ ವೈದೇಹಿಯವರು ಮನೆಗೆ ಕರೆಸಿ ಕೊಟ್ಟ ಪುಸ್ತಕವಿದು. ಅವರ ಇತ್ತೀಚೆಗಿನ ಕವನ ಸಂಕಲನ. ಪದ್ಯಗಳೋ ಬರಹಗಳೋ ಎಂಬ ಗೊಂದಲದೊಂದಿಗೆ ಮನದ ನೋವನ್ನು ಹಾಡಾಗಿಸದೇ ಹೋಗಬಾರದೆಂಬಂತೆ ಬರೆದ ನೋವಲದ್ದಿದ ಕವಿತೆಗಳ ಗುಚ್ಛವಿದು. ಅವರೊಳಗಿನ ಹೆಣ್ಮನವನ್ನು, ತಾಯ್ತನವನ್ನು ಇತ್ತೀಚೆಗಿನ ಹೆಣ್ಣ ಮೇಲಿನ ಕ್ರೌರ್ಯ ಕಲಕಿದೆ. ಎಲ್ಲೆಂದರಲ್ಲಿ, ಯಾರೆಂದರವರು, ಹೊತ್ತುಗೊತ್ತಿಲ್ಲದೇ ಹೆಣ್ಣನ್ನು ಹೊಸಕುವ ವಿದ್ಯಮಾನವನ್ನು ಕಂಡು ಪರಿಹಾರ ಗಾಣದ ತಾಯೊಬ್ಬಳ ತಹತಹಿಕೆ ಇಲ್ಲಿನ ಹೆಚ್ಚಿನ ಕವನಗಳನ್ನು ಆವರಿಸಿದೆ.

ನಿನ್ನೆ ಇಷ್ಟೊತ್ತಿಗೆ ಇಲ್ಲಿದ್ದಳು
ಇಂದೆಷ್ಟು ಕರೆದರೂ ಓಗೊಡದೆ ಹೋದಳು
ಹಾಡಿನಂತಹ ಹುಡುಗಿ ಹಾಡಿ ದಾರಿಯಲಿ
ಕಳೇವರ ಬಿಸುಟು ಕಣ್ ಮರೆಯಾದಳು

ಒಮ್ಮೆ ಬೊಬ್ಬಿಡು
ಅಯ್ಯೋ! ಬಾಯಿ,
ಸತ್ತಿದೆ!

ಬಂದಳೆ?
ಅಮ್ಮ! ಅಮ್ಮ್ಮ್ಮ!
ಸಧ್ಯ! ಬಂದಳೆ!

ಸಣ್ಣದೊಂದು ಬ್ಲೇಡು
ಚೀಲದೊಳಗಿಡು
ಎಲ್ಲ ಬೇಕಾದೀತು, ಸಮಯದಲ್ಲಿ

ದೇಹವಲ್ಲ ಇದು ಗೇಃ
ಯೋನಿಯಷ್ಟೇ ಅಲ್ಲ, ಜೀವ,
ಹೆಣ್ಣಷ್ಟೇ ಅಲ್ಲ, ಆತ್ಮ
ನಾನಷ್ಟೇ ಅಲ್ಲ, ನೀನೂ
ತಿಳಿಯದೆ?

ಹೀಗೆ ಸಾಲುಗಳು ಸರಳವಾಗಿದ್ದರೂ ಚೂಪಾಗಿ ಎದೆಯೊಳಗೆ ಇರಿಯುತ್ತಲೇ ಸಾಗುತ್ತವೆ. ಮಾತಾಡಲು ಬಾಯಿಲ್ಲದ ಬಾಲೆಯೊಬ್ಬಳ ಕಥೆ ಹೇಳುವ ಮೂಕಸಾಕ್ಷಿ ಕವಿತೆ ಬೆಚ್ಚಿಬೀಳಿಸುತ್ತದೆ.

ಪೂಜೆ ತಕ್ಷಣ ನಿಲ್ಲಿಸಿ – ಮಗು ಸತ್ತಿದೆ
ದೇಶ ಸೂತಕದಲ್ಲಿದೆ
ಭಾಷೆ ತಿಳಿಯದೆ ನಿಮಗೆ?

ಮಗಳ ಪತಿಗೃಹಕೆ ಕಳಿಸಿ ಹಾಡುವ ಋಣಮುಕ್ತಿಯ ಹಾಡು ವೈದೇಹಿಯವರ ಕ್ಲಾಸಿಕ್. ಗಾಂಧಿ ಕೇಸ್ ಸಂಕಲನದಲ್ಲಿ ನನ್ನಿಷ್ಟದ ಪದ್ಯ. ಕೆಲವು ಮಕ್ಕಳ ನಾಟಕದ ಹಾಡುಗಳೂ ಇಲ್ಲಿವೆ. ಅವುಗಳ ಕೇಳ್ವಿಯ ಸುಖ ದಕ್ಕಿಸಿಕೊಳ್ಳಬೇಕು.

ಕೊನೆಯಲ್ಲಿ ದತ್ತಾತ್ರೇಯ ಜನನದ ಬಗ್ಗೆ ಅವರಮ್ಮ ಹಾಡುತ್ತಿದ್ದ ಚರಿತ್ರೆಯ ಹಾಡನ್ನು ನೀಡಿದ್ದಾರೆ. ಮೇಲ್ನೋಟಕ್ಕೆ ಭಕ್ತಿಯ ವಿಜ್ರಂಭಣೆಯೆನಿಸುವ ಈ ಹಾಡುಗಳೊಳಗಿನ ವೈಚಾರಿಕತೆ ನನ್ನನ್ನು ಸದಾ ಸೆಳೆಯುತ್ತದೆ. ಬೆತ್ತಲ ನೋಡಲು ಬಂದ ತ್ರಿಮೂರ್ತಿಗಳನ್ನು ಮಗುವಾಗಿಸುವ ಕ್ರಾಂತಿಗಿಂತ ಇನ್ನೇನು ಬೇಕು ಹೆಣ್ಣ ಬಣ್ಣಿಸಲು? ನಮ್ಮ ಅಮ್ಮಂದಿರು ಹಾಡುತ್ತಿದ್ದ ಇಂಥ ಅನೇಕ ಚರಿತೆಗಳು ಈಗಲೂ ನನಗೆ ಬಾಯಿಪಾಠವಿದೆ. ಎಲ್ಲವೂ ವೈಚಾರಿಕವಾಗಿಲ್ಲದಾಗ್ಯೂ ಅಷ್ಟುದ್ದದ ಪದ್ಯವನ್ನು ನೆನಪಿಟ್ಟುಕೊಳ್ಳುವ ಮತ್ತು ಕತೆಯ ಮೂಲಕ ಕಾವ್ಯ ಓದಿನ ರುಚಿ ಹತ್ತಿಸಿದ ಇಂಥ ಅನೇಕ ಹಾಡುಗಳು ನೆನಪಾದವು.

ಸಾಕಿನ್ನು ಮರುಳು, ಏಳು,
ನಡೆ ಒಳಗೆ – ಮುಸ್ಸಂಜೆ
ದೀಪ ಹಚ್ಚು
ಹೌದು, ಕತ್ತಲು ಕಳೆಯಲು ದೀಪ ಹಚ್ಚಬೇಕು….

‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: