ವೀರೇಂದ್ರ ನಾಯಕ್ ಚಿತ್ರಬೈಲು ಓದಿದ ‘ಊರು ಹೇಳದ ಕಥೆ’

ವೀರೇಂದ್ರ ನಾಯಕ್ ಚಿತ್ರಬೈಲು

ಊರೆಂದರೆ ಹಾಗೆಯೇ, ಅಲ್ಲಿ ಗಲ್ಲಿಗೊಂದು ಕಥೆಯಿದೆ, ಹಾದಿಗೊಂದು ಕಥೆಯಿದೆ, ಬೆಟ್ಟಗುಡ್ಡ, ತೊರೆ, ಕಾಡು, ಕಣಿವೆ ಹೀಗೆ ಪ್ರತಿಯೊಂದು ಸ್ಥಳ, ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿಯೂ ಹತ್ತಾರು ಕಥೆಗಳಿರುತ್ತವೆ. ಆ ಕಥೆಗಳಿಗೆ ಕೆಲವು ಉಪಕಥೆಗಳು, ಅವುಗಳಿಗೆ ಬೆಸೆದುಕೊಂಡಿರುವ ಕೆಲವು “ಅಜ್ಜಿ ಕಥೆಗಳು”.

ಹೀಗೆ, ಹೇಳಿದ್ದು, ಹೇಳಲಾರದ್ದು, ಹೇಳಬಾರದ್ದು, ಬಾಯ್ಬಿಟ್ಟು ಹೇಳದೇ ಇದ್ದರೂ ಇಡೀ ಊರಿಗೇ ತಿಳಿದದ್ದು, ಒಟ್ಟಿನಲ್ಲಿ ಪ್ರತೀಕ್ಷಣವೂ ಒಂದಷ್ಟು ಹೊಸಕಥೆಗಳು ಹುಟ್ಟುತ್ತಲೇ ಇರುತ್ತವೆ. ಈ ರೀತಿಯ ಕಥೆಗಳ ಬೆನ್ನುಹತ್ತಿ ಹೊರಟವರು ಯಶಸ್ವಿನಿ ಕದ್ರಿ.

“ಊರು ಹೇಳದ ಕಥೆ”, ಲೇಖಕಿಯ ಮೊದಲ ಕೃತಿ. ಇದು ಕಥಾಸಂಕಲನದ ಹೆಸರೂ ಹೌದು, ಈ ಸಂಕಲನದಲ್ಲಿರುವ ಒಂದು ಕಥೆಯ ಹೆಸರೂ ಹೌದು. ಈ ಕೃತಿಯನ್ನು ಓದುತ್ತಾ ಹೋದಂತೆ ಅಲ್ಲಲ್ಲಿ ತೇಜಸ್ವೀಯವರು ಇಣುಕು ಹಾಕಿದರೆ, ಮತ್ತೆ ಕೆಲವೊಮ್ಮೆ ಗೊರೂರರ “ನಮ್ಮ ಊರಿನ ರಸಿಕರು”, ಕೃತಿ ನೆನಪಾಗುತ್ತದೆ.

ಒಂದೆರಡು ಕಡೆಗಳಲ್ಲಿ ಸುಮ್ಮ ಸುಮ್ಮನೆ “ಚೊರೆ” ಮಾಡುವ ನನ್ನಜ್ಜಿ ಕಂಡದ್ದೂ ಇದೆ. ಆದರೆ, “ಇಂದಿನ ಹೊಸ ಬರಹಗಾರರಲ್ಲಿ ಗಟ್ಟಿತನವಿಲ್ಲ, ಅವರ ಬರಹ ಕೇವಲ ಆನ್ಲೈನ್ ಗೆ ಮಾತ್ರ ಸೀಮಿತ”, ಎಂದು ಹೇಳುವವರಿಗೆ ಸವಾಲಾಗಿ ನಿಲ್ಲಬಲ್ಲ ಕೃತಿಯಿದು. ಇಲ್ಲಿ ಲೇಖಕಿ ಹರಟೆಯ ರೂಪದ ನಿರೂಪಣೆಯಲ್ಲಿಯೇ ಜಿಜ್ಞಾಸೆಗಳನ್ನು ಹುಟ್ಟುಹಾಕಿ, ನಮಗರಿವಿಲ್ಲದಂತೆಯೇ ನಮ್ಮ ಮನಸ್ಸಿನನಲ್ಲಿ ಮಂಥನ ನಡೆಯುವಂತೆ ಮಾಡುತ್ತಾರೆ.

ಈ ಸಂಕಲನದಲ್ಲಿ ನನಗೆ ಅತೀ ಪ್ರಿಯವಾದದ್ದು “ಹುಲಿ ಮತ್ತು ಗುಡ್ಡ”, ಎನ್ನುವ (ಮೂಢ?) ನಂಬಿಕೆ ಹಾಗೂ ವಾಸ್ತವಗಳ ನಡುವಿನ ಗೆರೆಯನ್ನು ತೊಡೆದುಹಾಕುವ ಕಥೆ. ಸುಮ್ಮನೆ ಲಘುಹರಟೆಯಂತೆ ಸಾಗುವ ಈ ಕಥೆ ಕೊನೆಗೆ ಏಕಾಏಕಿ ಗಂಭೀರವಾದಂತೆ ತೋರುತ್ತದೆ. “ಹುಲಿ ನಿಂತಿತ್ತು.

ನೀತಿ ನಿಯತಿಗಳ ಹಂಗು ಮೀರಿ, ಆಕಾಶ ಮುಟ್ಟುವ ಗಾತ್ರದ, ಹಿಂದೊಮ್ಮೆ ಕಂಡ ಕೆಚ್ಚಿನ ಹುಲಿಯಾಗಿರಲಿಲ್ಲ ಅದು. ಅದರ ಬೆನ್ನು ಕುಸಿದಿತ್ತು. ತಲೆ ಬಾಗಿತ್ತು, ಕಣ್ಣುಗಳು ಕಾಲನ್ನೇ ದಿಟ್ಟಿಸುತ್ತಿದ್ದವು. ಪೂವಪ್ಪ ಆಶ್ಚರ್ಯದಿಂದ ಅದರ ಕಾಲಿನ ಕಡೆಗೆ ಲೈಟ್ ಬೀರಿದ. ಅದರ ಉಗುರುಗಳುದ್ದಕ್ಕೂ ದಪ್ಪನೆಯ ಬಡ್ಡುಬಡ್ಡಾದ ಚಿನ್ನದ ಹೊದಿಕೆ ಕಂಡಿತು”, ಎನ್ನುವ ರೂಪಕ ಓದುಗರ ಮನಸ್ಸನ್ನು ತಣ್ಣಗೆ ಸ್ಪರ್ಷಿಸದೇ ಇರದು.

“ಒಬ್ಬ ನಾಯಕನ ಪ್ರಸಂಗ”, ಕಥೆಯಲ್ಲಿ ಲೇಖಕಿ ತನಗಿರುವ ಯಕ್ಷಗಾನದ ಜ್ಞಾನವನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ರಂಗದಲ್ಲಿ ರಂಗಾಗಿ ಅಭಿನಯಿಸುವ ಕಲಾವಿದ ತಾನು ಯಾಂತ್ರಿಕವಾಗಿರುವ ವಾಸ್ತವತೆಯ ಅರಿವಿನ ಸುತ್ತ ಹೆಣೆದ ಕಥೆ ಸೊಗಸಾಗಿದೆ.

ಆಜಾದಯ್ಯನ ಕಥೆ ಸಮಕಾಲೀನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ತೋರುತ್ತದೆ. ಲಲಿತ ಪ್ರಬಂಧದಂತಿರುವ “ಜಲಜಗಂಧಿನಿ”ಯ ಕಥೆ ಓದುಗರ ಮುಖದಲ್ಲಿ ನಗುತರಿಸದೇ ಇರದು. ಹೀಗೆ ಈ ಸಂಕಲನದಲ್ಲಿರುವ ಇಪ್ಪತ್ತೊಂದು ಕಥೆಗಳು ವಿಭಿನ್ನ ಕಥಾಹಂದರವನ್ನು ಹೊಂದಿವೆ. ಬಹುತೇಕ ಕಥೆಗಳು ಓದುಗನ ತೃಷೆಯನ್ನು ನೀಗಿಸುವಲ್ಲಿ ಯಶಸ್ವಿಯೂ ಆಗಿವೆ.

ಅನುಭವವೇದ್ಯ ವಿಚಾರಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿರುವ ಲೇಖಕಿ, ಇನ್ನು ಮುಂದಿನ ದಿನಗಳಲ್ಲಿ ಅನುಭವಾತೀತ ವಿಚಾರಗಳನ್ನು ಹೇಗೆ ಪ್ರಸ್ತುತಪಡಿಸಬಹುದು ಎನ್ನುವ ಕುತೂಹಲ ಒಬ್ಬ ಓದುಗನಾಗಿ ನನಗಂತೂ ಖಂಡಿತಾ ಇದೆ. ಹಿರಿಯ ಬರಹಗಾರ ಡಾ. ಬಿ. ಎ. ವಿವೇಕ ರೈಗಳ ಮುನ್ನುಡಿಯೊಂದಿಗೆ, ಸೊಗಸಾದ ಮುದ್ರಣ ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿವೆ. ಈ ರೀತಿಯ ಬರಹಗಾರರನ್ನು ಓದಿ, ಪ್ರೋತ್ಸಾಹಿಸುವುದು ಬಹುಶಃ ಓದುಗರಾಗಿ ನಮ್ಮೆಲ್ಲರ ಜವಾಬ್ದಾರಿ.

‍ಲೇಖಕರು Admin

January 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: