ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ. ನಾವೇನು ತಪ್ಪು ಮಾಡಿದ್ದೇವೆ? ಇದು ಕರ್ನಾಟಕದ ವಿವಿಧ ಭಾಗದ ಜನರ ಸಾಮಾನ್ಯ ಆಕ್ರೋಶ! ಈ ಭಾವನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶಕ್ತಿ ನಮಗಿಲ್ಲವಾದರೂ, ನಾವು ಮಾಡುವ ಕೆಲಸದಲ್ಲಿಯೇ ಆ ನಿಟ್ಟಿನಲ್ಲಿ ಒಂದೆರಡು ಹೆಜ್ಜೆ ಇಡಬಹುದಾ ಅಂತ ಭಾವಿಸಿ ಕೈಗೊಂಡ ಯೋಜನೆಯೇ ಈ ಉತ್ತರಪರ್ವ.
ಈ ಯೋಜನೆ ಅಡಿಯಲ್ಲಿ ಉತ್ತರ ಕರ್ನಾಟಕದ ಲೇಖಕರ ಹತ್ತು ಕೃತಿಗಳನ್ನು ಪ್ರಕಟಿಸುತ್ತಿದ್ದೇವೆ. ಅಷ್ಟು ಮಾತ್ರವಲ್ಲದೆ, ಉತ್ತರ ಕರ್ನಾಟಕದ ಲೇಖಕರನ್ನು ಬೆಂಗಳೂರಿಗೆ ಆಹ್ವಾನಿಸಿ, ಆ ಕೃತಿಗಳ ಬಿಡುಗಡೆ ಸಮಾರಂಭವನ್ನು ಬೆಂಗಳೂರಿಗರ ಸಮ್ಮುಖದಲ್ಲಿ ಬಿಡುಗಡೆಗೊಳಿಸುತ್ತಿದ್ದೇವೆ. ಕರ್ನಾಟಕದ ಆ ಭಾಗದವರನ್ನು ಈ ಭಾಗದವರ ಜೊತೆ ಮುಖಾಮುಖಿಯನ್ನಾಗಿಸುತ್ತಿದ್ದೇವೆ ಎನ್ನುತ್ತಾರೆ ವೀರಲೋಕದ ಮುಂದಾಳು ವೀರಕಾಪುತ್ರ ಶ್ರೀನಿವಾಸ್.
ರಾಜಧಾನಿಯಲ್ಲಿರುವವರು ಮಾತ್ರ ಮುಖ್ಯರಲ್ಲ, ಪ್ರತಿಭಾವಂತರಲ್ಲ ಎಂಬುದನ್ನು ಸೂಚ್ಯವಾಗಿ ಹೇಳಲು ಹೊರಟಿದ್ದೇವೆ. ಇದೊಂದು ರೀತಿ ಉಳಿದ ಭಾಗದ ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ.
ಈ ಮಹತ್ತರ ಯೋಜನೆಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣದ ನಡುವೆ ಸೇತುವೆಯಂತೆ ಬದುಕುತ್ತಿರುವ ಮತ್ತು ಬರೆಯುತ್ತಿರುವ ರಾಗಂ ಅವರನ್ನು ಸಂಪಾದಕರನ್ನಾಗಿಸಿದ್ದೆವು. ಈ ಯೋಜನೆಗೆ ಸುಮಾರು ನೂರು ಕೃತಿಗಳು ಬಂದಿದ್ದವು. ಓದುಗರಿಗೆ ಒಳ್ಳೆಯದನ್ನೇ ನೀಡಬೇಕೆಂಬ ಉದ್ದೇಶದಿಂದ ಮೂರು ಹಂತದ ಆಯ್ಕೆ ಪ್ರಕ್ರಿಯೆ ನಡೆಸಿ, ನೂರರಲ್ಲಿ ಹತ್ತು ಕೃತಿಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಅವು ಯಾವುವೆಂದರೆ…
- ಶೇಕ್ಷಾವಲಿ ಮಣಿಗಾರ – ಆ ವದನ
- ಮರ್ತುಜಾಬೇಗಂ ಕೊಡಗಲಿ – ಪರಸ್ಪರ ಮತ್ತಿತರ ಕೃತಿಗಳು
- ಡಾ.ಸದಾಶಿವ ದೊಡಮನಿ – ಇರುಳ ಬಾಗಿಲಿಗೆ ಕಣ್ಣ ದೀಪ
- ರವೀಂದ್ರ ಮುದ್ದಿ – ವರದಾ ತೀರದ ಕಥೆಗಳು
- ಸಿ.ವಿ.ವೀರುಪಾಕ್ಷ – ಖದೀಜಾ
- ಶ್ರೀಧರ ಗಸ್ತಿ – ಚಂದ್ರಾ ಲೇಔಟ್
- ಪ್ರಕಾಶ ಗಿರಿಮಲ್ಲನವರ – ಜನನಾಯಕ
- ಬಿಜೆ ಪಾರ್ವತಿ ವಿ. ಸೋನಾರೆ – ಓಡಿ ಹೋದಾಕಿ
- ಕವಿತಾ ಹೆಗಡೆ ಅಭಯಂ – ಇತ್ತ ಹಾಯಲಿ ಚಿತ್ತ
- ನವ್ಯ ಆರ್ ಕತ್ತಿ – ಮಾಯಾ ಗುಹೆ
ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ದಿ: 04-08-2024 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ, ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಸುರೇಶ, ಲೇಖಕರಾದ ರಾಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್ ಅವರು ಇರಲಿದ್ದಾರೆ.
0 ಪ್ರತಿಕ್ರಿಯೆಗಳು