ವೀರಪ್ಪನ್‌ ‘ಪ್ರತಿಭಾ ಸಂಪನ್ನ’..!

ಡಾ ಶೈಲಜಾ ಬಾಗೇವಾಡಿ

ಮೂಲತಃ ವಿಜಯಪುರದವರಾದ ಡಾ.ಶೈಲಜಾ ಬಾಗೇವಾಡಿ, ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ.

‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ – ಕೃಪಾಕರ ಸೇನಾನಿ ಇವರಿರ್ವರ ಅನುಭವ ಕಥನ ಒಂದೇ ಗುಕ್ಕಿನಲ್ಲಿ ಓದಿ ಬಿಡಬಹುದು. ದಂತಚೋರ,ಕಾಡುಗಳ್ಳ ವೀರಪ್ಪನ್ ಲೇಖಕರನ್ನು ಬಂಧಿಸಿ ಸೆರೆಯಾಳಾಗಿ ಇಟ್ಟುಕೊಂಡು ಜೊತೆಗೆ ಇನ್ನೂ ನಾಲ್ವರು ಇವರೊಂದಿಗೆ ಕರೆದೊಯ್ದು ಬಂಡಿಪುರ ಕಾಡಿನಲ್ಲಿ ಕೂಡಿಟ್ಟ ಹದಿನಾಲ್ಕು ದಿನಗಳನ್ನು ಸಸ್ಯ ಶಾಸ್ತ್ರಜ್ಞ ವಿಜ್ಞಾನಿ, ಛಾಯಾಚಿತ್ರ ಗ್ರಾಹಕರ ಅನುಭವ ಮೂಸೆಯಲ್ಲಿ ಭಯಾನಕ ರೂಪ ತಾಳದೆ, ವೀರಪ್ಪನ್ ಅವನ ಇನ್ನೊಂದು ಮುಖವನ್ನು ಬಿಂಬಿಸುತ್ತ ಜೊತೆಗೆ ಹಾಸ್ಯ ಪ್ರಜ್ಞೆ ಯಿಂದ, ವಾಸ್ತವದ ಚಿತ್ರಣ ನೀಡುವಲ್ಲಿ ಲೇಖಕರ ಲೇಖನಿ ಅದ್ಭುತ ಕೆಲಸ ಮಾಡಿದೆ.

ವೀರಪ್ಪನ್ ಅಂದರೆ ಕ್ರೂರಿ, ಕಾಡನ್ನು ಲೂಟಿಮಾಡುತ್ತ, ಆನೆಗಳನ್ನು ಸಂಹರಿಸುತ್ತ ಅಟ್ಟಹಾಸ ಮೆರೆಯುಯತ್ತ ಕಾಡಿನ ಅನಭಿಷಕ್ತ ದೊರೆ ಎಂದೆ ಬಿಂಬಿತವಾಗಿದ್ದ. ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಸರಕಾರಕ್ಕೆ ಕಗ್ಗಂಟಾಗಿ ಕಂಡಿದ್ದ, ಈತನನ್ನು ಸೆರೆಹಿಡಿಯಲು ಕೋಟ್ಯಾಂತರ ಹಣ ಸರ್ಕಾರ ವ್ಯಯಮಾಡಿತ್ತು. ಈತ ಜೀವಂತ ಇದ್ದಾಗಲೆ ದಂತಕತೆಯಾಗಿದ್ದ, ಅದರಲ್ಲೂ ಕನ್ನಡದ ಮೇರುನಟ ರಾಜಕುಮಾರ ನನ್ನು ಒತ್ತೆಯಾಳಾಗಿ ಕರೆದೊಯ್ದಾಗ ಮತ್ತೆ ಹಲವು ಊಹಾಪೋಹಗಳಿಗೆ ಆಹಾರ ಆದದ್ದು ಸತ್ಯ. ಆದರೆ ಕೃಪಾಕರ ಸೇನಾನಿಯ ದೃಷ್ಟಿಯಲ್ಲಿ ಆತನ ಚಿತ್ರಣ ಸಂಪೂರ್ಣ ಬುಡಮೇಲಾಗುವಂತಿದೆ.

ವೀರಪ್ಪನ್  ಕುರಿತು ಓದುಗರು ತಮ್ಮ ಅಭಿಪ್ರಾಯ ಬದಲಿಸಿ ಪೂರ್ವಾಗ್ರಹ ಪೀಡಿತ ರಾಗದೆ ಇನ್ನೊಂದು ಮಗ್ಗುಲಿನಿಂದ ವಿವೇಚನೆ, ವಿಶ್ಲೇಷಣೆ ಮಾಡಲು ಹಚ್ಚುತ್ತದೆ. ಆತನಲ್ಲೂ ಮಾನವೀಯತೆ ಇದೆ, ಆತನು ಕೂಡ ನಾಗರಿಕ ಸಮಾಜಕ್ಕೆ ತೆರೆದುಕೊಳ್ಳಲು ಬಯಸುತ್ತಾನೆ, ಅವನಲ್ಲೂ ಪ್ರತಿಭೆ ಇದೆ ಹೀಗೆ ಬೇರೆಯದೆ ನೋಟ ನೀಡಿರುವ ಇಬ್ಬರು ಲೇಖಕರು ಎಲ್ಲೊ ಒಂದುಕಡೆ ಸಮಾಜ, ವ್ಯವಸ್ಥೆ, ರಾಜಕೀಯ ಸ್ವ ಹಿತಾಸಕ್ತಿ ಹಾಗೂ ಅಧಿಕಾರ ಷಾಹಿ ಆತನನ್ನು ಕುಖ್ಯಾತ ನನ್ನಾಗಿಸಿತು ಎಂಬ ನಿಲುವಿಗೆ ಬರಬಹುದು. 

ಬಂಡಿ ಪುರದ ಅರಣ್ಯದ ರಾತ್ರಿ ಹೊತ್ತಿನಲ್ಲಿ ಪರಿಸರ ವಿಜ್ಞಾನಿ ಹಾಗೂ ಛಾಯಾಚಿತ್ರ ಗ್ರಾಹಕರ ಅಪಹರಣ ದೊಂದಿಗೆ ಅನುಭವ ಕಥನ ಬಿಚ್ಚಿಕೊಳ್ಳುತ್ತ ಇಬ್ಬರು ಜುಗಲ್ ನಂತೆ ಒಬ್ಬರಾದ ಮೇಲೆ ಒಬ್ಬರು ತಮ್ಮ ಅನುಭವ ಹೇಳುತ್ತ ಅದರಲ್ಲೂ ಕೃಪಾಕರ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಹಾಸ್ಯ ಪ್ರಜ್ಞೆಯನ್ನು ಮೆರೆಯುವ ಅವರ ನಿರೂಪಣೆಯಲ್ಲಿನ ವ್ಯಂಗ್ಯ,ವೀರಪ್ಪನ್ ಮನೆ ಬಾಗಿಲಿಗೆ ಬಂದಾಗಲು ಸಮಯ ಪ್ರಜ್ಞೆ ತೋರಿದ್ದು ಎಲ್ಲವೂ ಮೆಚ್ಚುವಂತದ್ದೆ. ಕಾಡು ಇವರಿರ್ವರ ಉಸಿರಾಗಿದ್ದರೂ ಅವರು ಕಾಣದೆ ಇರುವ ಅರಿಯದೆ ಇರುವ ಅನೂಹ್ಯ ಸಂಗತಿಗಳು ವೀರಪ್ಪನ್ ಮೂಲಕ ಅರಿತಾಗ ಆತ ಕಾಡಿನ ಸಂತನಾಗಿ, ಗುರುವಾಗಿ ಕೆಲವೊಮ್ಮೆ ಅವಧೂತನಾಗಿ ಕಾಣುತ್ತಾನೆ.

ಇನ್ನೂ ಲೇಖಕರ ಮೂಲಕ ಆತನಿಗೆ ಕೂಡ ಸಾಕಷ್ಟು ಮಾಹಿತಿ ಗೊತ್ತಾದಾಗ ಶಿಷ್ಯ ನ ರೀತಿಯಲ್ಲಿ ಕುಳಿತು ಸಹಜ ಕೂತುಹಲದಿಂದ ಕೇಳುತ್ತ ಅಪ್ಪಟ ಮುಗ್ಧ ಮನಸ್ಸಿನ ಅಮಾಯಕ ನಾಗಿ ಕಾಣುತ್ತಾನೆ. ಅವನಿಗೆ ತಮಿಳು ಬಿಟ್ಟು ಮಿಕ್ಕ ಬಾಷೆ ಗೊತ್ತಿಲ್ಲ ಹೊರ ಜಗತ್ತಿನ ಅರಿವಿಲ್ಲ ಲೌಕಿಕ ಜ್ಞಾನವಿಲ್ಲ ಅದನ್ನು ತಿಳಿದ ಇವರು ಹಲವು ಬಾರಿ ಮಜಾ ತಗೊಂಡಿದ್ದು ಉಂಟು. ಆದರೆ ಕೆಲವೊಮ್ಮೆಆತನ ರೌದ್ರ ಅವತಾರ ಕಂಡು ಭಯ ಪಟ್ಟದ್ದು ಸಹಜ. ಪ್ರಾರಂಭದಲ್ಲಿ ಸೆರೆಯಾಳದ ಇವರು ಕೆಲವೆ ದಿನಗಳಲ್ಲಿ ಆಪ್ತರಾಗುತ್ತ ಬಿಡುಗಡೆ ಆಗುವ ಸಂದರ್ಭದಲ್ಲಿ ಇಡೀ ತಂಡವೆ ಭಾವುಕರಾದದನ್ನು ನೋಡಿದಾಗ ಯಾವ ಮನುಷ್ಯ ನು ದುಷ್ಟನಲ್ಲ ಸಮಯ ಸಂದರ್ಭ ಆತನನ್ನು ಆ ರೀತಿ ಮಾಡಿಸುತ್ತದೆ. ವೀರಪ್ಪನ್ ದೃಷ್ಟಿಯಲ್ಲಿ ಅದುವೆ ವಿಧಿ.

‌ಕೃಪಾ, ಸೇನಿ ಎಂದು ಕರೆಯುತ್ತ ಅವರಿಂದ ತಿಳಿಯುತ್ತ, ತನ್ನ ಹಲವು ಅವತಾರ ಅವರಿಗೆ ತೋರಿಸುವ ಮೂಲಕ ವೀರಪ್ಪನ್ ಒಬ್ಬ ಅದ್ಭುತ ಪ್ರತಿಭಾ ಸಂಪನ್ನ ನಾಗಿ ಕಾಣುತ್ತಾನೆ. ಪಕ್ಷಿಗಳ ಕೂಗನ್ನು ಗುರುತಿಸುವ, ಅನೇಕ ಪ್ರಾಣಿಗಳ ಧ್ವನಿಯನ್ನು ಅನುಕರಿಸುವ, ಸಂಗೀತದಲ್ಲಿ ಆಸಕ್ತಿ ಮೇಲಾಗಿ ನೃತ್ಯ ಮಾಡುವ ಕಲಾರಸಿಕನಾಗಿ ಕಾಣುವ ಈತ ಕಾಡುಗಳ್ಳ ಎಂಬುದನ್ನೇ ಮರೆಯುತ್ತೇವೆ. ಒತ್ತೆಯಾಳುಗಳನ್ನು ಅತಿಥಿ ದೇವೋಭವ ಎಂದು ಸತ್ಕರಿಸುವ ಪರಿ ಅನನ್ಯ. ಮಹಾಭಾರತ ಓದುತ್ತಾನೆ, ಪೂಜೆ ಯಲ್ಲಿ ನಂಬಿಕೆಯಿದೆ ಕೆಲವೊಮ್ಮೆ ಭಾವುಕನಾಗುತ್ತ ತನ್ನ ಗತಜೀವನದ ಸಂಗತಿ ತೆರೆದಿಡುತ್ತ ತನಗೆ ಕ್ಷಮೆ ನೀಡಿದರೆ ಸರಕಾರಕ್ಕೆ ಶರಣಾಗತಿ ಆಗುತ್ತೆನೆಂದು ಹೇಳಿ ಎಲ್ಲರನ್ನೂ ಬಿಡುಗಡೆ ಮಾಡಿದ. ಆದರೆ ನಾಡಿಗೆ ಬಂದ ನಂತರ ಲೇಖಕರ ಪ್ರಾಮಾಣಿಕ ಪ್ರಯತ್ನ ಸಫಲ ವಾಗಲಿಲ್ಲ. ಅದು ವಿಪರ್ಯಾಸ ಮತ್ತು ದುರಂತ. ಆತನಲ್ಲೂ ಮನುಷ್ಯ ಸಹಜ ಭಾವನೆ ಇದ್ದದ್ದನ್ನು ದಾಖಲಿಸಿದ ಲೇಖಕರು ಜೊತೆಗೆ ಕಾಡಿನ ಒಟ್ಟು ಅನುಭವ ಒಂದೇ ಉಸಿರಿನಲ್ಲಿ ಓದಿಸಿಕೊಂಡು ಹೋಗುವ ಕಥನ ನಮ್ಮನ್ನು ಕೆಲವೊಮ್ಮೆ ನಗಿಸುತ್ತ, ಉಸಿರು ಬಿಗಿಹಿಡಿಯುವಂತೆ ಮಾಡುತ್ತ, ಕುತೂಹಲಕಾರಿಯಾಗಿ ವಿವರಣೆ ನಮ್ಮನ್ನು ಸೆರೆಹಿಡಿಯುತ್ತದೆ.

ವೀರಪ್ಪನ್ ಒಬ್ಬನೆ ಕಾಡುಗಳ್ಳನಲ್ಲ ಆತನ ಹೆಸರಿನಿಂದ ಹಲವರು ಇಂತಹ ಕೃತ್ಯ ಎಸಗುತ್ತಿದ್ದು,ಆತನ ಹೆಸರನ್ನು ಬಳಸಿದ್ದು ತಿಳಿದು ಬರುತ್ತದೆ.ಪತ್ರಿಕೆ ಮಾಧ್ಯಮ ಇಲ್ಲಸಲ್ಲದ ಕತೆ ಹೆಣೆಯುತ್ತಾ ಎಲ್ಲರೂ ಅವಕಾಶವಾದಿಗಳಾಗಿ ಕಾಣುತ್ತಾರೆ. ಕಾಡನ್ನು ಬಿಟ್ಟು ನಾಡನ್ನು ಕಾಣದ ಅವನನ್ನು ಎಲ್ಲರೂ ತಮಗಿಷ್ಟದಂತೆ ಚಿತ್ರಿಸಿದ್ದು ಸತ್ಯ. ಒಟ್ಟಾರೆಯಾಗಿ ಮೂರು ನಾಲ್ಕು ದಶಕ ಕಾಡಿನ ದೊರೆಯಾಗಿ ಮೆರೆದ ವೀರಪ್ಪನ್ ಆತನ ಅಂತ್ಯ ಪ್ರಸ್ತುತ ಇತಿಹಾಸ. 

‍ಲೇಖಕರು Admin

October 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Dr.Suvarna M Hiremath

    ಡಾ. ಶೈಲಜಾ ಮೇಡಂ ಅವರು ನೀಡಿರುವ ಮಾಹಿತಿ ಹಾಗು ವೀರಪ್ಪನ ಕುರಿತಾಗಿ ಹೇಳಿದ ಹೊಸ ವಿಚಾರ ಅರ್ಥ ಪೂರ್ಣವಾದುದು.

    ಪ್ರತಿಕ್ರಿಯೆ
  2. Dr.Suvarna M Hiremath

    ವೀರಪ್ಪನ ಬಗ್ಗೆ ಇದ್ದ ದಂತ ಕಥೆ ಜೊತೆಗೆ, ಅವನ ಅಸ್ತಿತ್ವ ಕ್ಕೆ ನ್ಯಾಯ ಒದಗಿಸಿರುವುದು ಇಲ್ಲಿ ಮುಖ್ಯ ಎನಿಸುತ್ತದೆ.
    ಡಾ. ಶೈಲಜಾ ಬಾಗೇವಾಡಿ ಮೇಡಂ ಅವರಿಗೆ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: