ವಿ ಗಾಯತ್ರಿ ಓದಿದ ’ಹರಿವಾಣ ತುಂಬಿದ ತೆನೆ’

ವಿ ಗಾಯತ್ರಿ

’ಹರಿವಾಣ ತುಂಬಿದ ತೆನೆ’ ಎಂಬುದೊಂದು ಅಪೂರ್ವ ಪುಸ್ತಕ. ರಾಗಿ ಲಕ್ಷ್ಮಣಯ್ಯನವವರಿಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಮಂಡ್ಯದ ’ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ’ ಹೊರತಂದಿರುವ ೪೦೦ ಪುಟಗಳ ಸಂಸ್ಮರಣಾ ಗ್ರಂಥ. ಆತ್ಮೀಯರಾದ ಬೋರಯ್ಯನವರು (ಸಮಿತಿಯ ಅಧ್ಯಕ್ಷರು) ಮಂಡ್ಯದಿಂದ ಕಳಿಸಿದ್ದಾರೆ.

ಹಾರ್ಡ್ ಬೌಂಡ್ ಪುಸ್ತಕದ ಗಾತ್ರ ಮತ್ತು ಬಾರ ನೋಡಿ ಗಾಬರಿಯಾದರೂ, ಓದಲು ಪ್ರಾರಂಭಿಸಿದ ಮೇಲೆ ಪುಸ್ತಕ ಮುಚ್ಚಿಡಲು ಮನಸ್ಸೇ ಆಗಲಿಲ್ಲ. ಸುಮಾರು ೭೦ಕ್ಕೂ ಹೆಚ್ಚು ಲಕ್ಷ್ಮಣಯ್ಯನವರ ಒಡನಾಡಿಗಳು ಮತ್ತು ಅಭಿಮಾನಿಗಳು ಬರೆದ ಆಸಕ್ತಿಯುತ ಲೇಖನಗಳು ಇಲ್ಲಿ ಶೋಭಿಸುತ್ತಿವೆ.

ತಳಿ ವಿಜ್ಞಾನಿ ಡಾ. ಶರಣಬಸವೇಶ್ವರ ಅಂಗಡಿಯವರ ಸುಮಾರು ೪೦ ಪುಟಗಳ ಸುದೀರ್ಘ ಲೇಖನವು, ಲಕ್ಷ್ಮಣಯ್ಯನವರ ವ್ಯಕ್ತಿತ್ವ ಮತ್ತು ಅವರು ಅಭಿವೃದ್ಧಿಪಡಿಸಿದ ರಾಗಿ ತಳಿಗಳ ವಿರಾಟ್ ದರ್ಶನವನ್ನು ಪ್ರಾರಂಭದಲ್ಲೇ ಮಾಡಿಸುತ್ತದೆ. ತಾಂತ್ರಿಕ ನಿಖರತೆ ಮತ್ತು ಸೂಕ್ಷ್ಮ ಸಂವೇದನೆಗಳೆರಡೂ ಹದವಾಗಿ ಬೆರೆತ ಈ ಲೇಖನ ಅಂಗಡಿಯವರ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಮೂಡುವಂತೆ ಮಾಡುತ್ತದೆ. ಇಂತಹ ಅಪರೂಪದ ಲೇಖನವನ್ನು ಕೊಟ್ಟ ಅವರನ್ನು ಇಲ್ಲಿ ಅಭಿನಂದಿಸಲೇಬೇಕು.

ಸಸ್ಯಶಾಸ್ತ್ರವನ್ನು ಒಂದು ವಿಷಯವನ್ನಾಗಿ ಮಾತ್ರ ಒಳಗೊಂಡ ವಿಜ್ಞಾನ ಪದವಿ (ಕೃಷಿ ವಿಜ್ಞಾನ ಪದವಿಯಲ್ಲ) ಪಡೆದ ಲಕ್ಷ್ಮಣಯ್ಯನವರು ಮುಂದೆ ಇಡೀ ವಿಶ್ವದ ತಳಿ ವಿಜ್ಞಾನಿಗಳೇ ನಿಬ್ಬೆರಗಾಗುವ ರೀತಿಯಲ್ಲಿ ಅಸಾಧಾರಣ ರಾಗಿ ತಳಿಗಳನ್ನು ಅಭಿವೃದ್ಧಿಪಡಿಸಿದ್ದು ಹೇಗೆ? ಪ್ರಾಯಶಃ ಈ ಪ್ರಶ್ನೆಗೆ ಸ್ವತಃ ಲಕ್ಷ್ಮಣಯ್ಯನವರನ್ನೂ ಒಳಗೊಂಡಂತೆ ಯಾರೂ ಉತ್ತರಿಸಲಾರರೇನೋ. ಇವರೊಬ್ಬ ಮಾಮೂಲಿ ತಳಿ ವಿಜ್ಞಾನಿಯಾಗಿದ್ದರೆ ಇದನ್ನು ಅರ್ಥ ಮಾಡಿಕೊಳ್ಳಬಹುದಿತ್ತೇನೋ. ಆದರೆ ರಾತ್ರಿಯೆಲ್ಲಾ ರಾಗಿ ಹೊಲದಲ್ಲಿ ಸೇರಿಕೊಂಡು, ’ಸಸಿಗೆ ಯಾವ ಸರಿ ರಾತ್ರಿಯಲ್ಲಿ ಕೀಟ ಬಂತು’,’ ಪರಾಗರೇಣು ಅಂಡಾಶಯದ ಮೇಲೆ ಸರಿಯಾಗಿ ಮೂರು ಗಂಟೆಗೆ ಉದುರಿತಾ ಅಥವಾ ಮೂರುವರೆಯಾಗಿತ್ತಾ?’ ಎಂದು ಕಣ್ಣಿಗೆ ಎಣ್ಣೆಯನ್ನೂ, ತಲೆಗೆ ಹುಳವನ್ನೂ ಬಿಟ್ಟುಕೊಂಡು ಆ ರಾಗಿ ಲೋಕದಲ್ಲೇ ಬೆರೆತು ಹೋದ ಅವರಿಗೆ ದಕ್ಕಿದ ಕಾಣ್ಕೆಗಳೇನೋ ಬಲ್ಲವರಾರು? ಹಾಗಿಲ್ಲದಿದ್ದರೆ, ವೃತ್ತಿ ಜೀವನವಿಡೀ ಮಂಡ್ಯದ ವಿ.ಸಿ ಫಾರಂ ಬಿಟ್ಟು ಕದಲದ ಲಕ್ಷ್ಮಣಯ್ಯನವರನ್ನು ಹುಡುಕಿಕೊಂಡು ಆಫ್ರಿಕಾ ಮೂಲದ ೯೦೦ ರಾಗಿ ತಳಿಗಳು ಅಮೆರಿಕದಿಂದ ಪ್ರಯಾಣಿಸಿ ಇವರ ಮಡಿಲು ತಲುಪುತ್ತವೆ ಎಂದರೆ ಏನರ್ಥ? ಇವರ ಸಂಶೋಧನೆಗೆ ಒಳಪಡಲು ಹಂಬಲಿಸಿ ಬಂದ ಆ ಬೀಜಗಳ ಮೈದಡವಿ ಮುದ್ದಿಸಿ, ಅವುಗಳನ್ನು ಸ್ಥಳೀಯ ತಳಿಗಳೊಂದಿಗೆ ಸಂಕರಿಸಿ, ಆಫ್ರಿಕಾದ ಹೆಸರೂ ಉಳಿಯುವಂತೆ ’ಇಂಡಾಫ್’ ಎಂದು ಹೆಸರಿಟ್ಟು ೮-೧೦ ಅಸಾಧಾರಣ ಸರಣಿ ತಳಿಗಳನ್ನೇ ಅಭಿವೃದ್ಧಿ ಪಡಿಸುತ್ತಾರೆ ಲಕ್ಷ್ಮಣಯ್ಯ.

ರಾಜ್ಯದಲ್ಲಿ ರಾಗಿ ಬೆಳೆಯುವ ರೈತರು ಅತಿಯಾಗಿ ಇಷ್ಟಪಟ್ಟ ತಳಿಗಳು ಈ ಇಂಡಾಫ್ ರಾಗಿ ತಳಿಗಳು. ಮಳೆಯಾಶ್ರಿತ ಮತ್ತು ನೀರಾವರಿ ಬೇಸಾಯವೆರಡಕ್ಕೂ ಹೊಂದಿಕೊಳ್ಳುವ, ಅತ್ಯಧಿಕ ಇಳುವರಿಯ ಜೊತೆಗೆ ಉತ್ತಮ ಮೇವನ್ನೂ ಕೊಡುವ, ಒಂದು ಹಂಗಾಮು ತಪ್ಪಿದರೆ ಮಗದೊಂದು ಹಂಗಾಮಿಗೂ ಬೆಳೆಯಬಹುದಾದ ರೈತಸ್ನೇಹಿ ತಳಿಗಳು ಇವು.

ಲಕ್ಷ್ಮಣಯ್ಯನವರಿಗೇಕೆ ಈ ರಾಗಿಯ ಹಂಬಲ? ಎಕರೆಗೆ ಕೆಲವೇ ಚೀಲ ಇಳುವರಿ ಕೊಡುತ್ತಿದ್ದ ರಾಗಿಯನ್ನು ಸುಧಾರಣೆ ಮಾಡಿ, ಇದನ್ನೇ ನೆಮ್ಮಿಕೊಂಡ ಅತೀ ಸಣ್ಣ, ಮಳೆಯಾಶ್ರಿತ ರೈತರ ಮತ್ತು ಎರಡನೇ ಹೊತ್ತಿನ ಊಟಕ್ಕೆ ಹಂಬಲಿಸುತ್ತಾ ಒಪ್ಪತ್ತೇ ಉಣ್ಣುವವರ ಬದುಕಿನಲ್ಲಿ ಒಂದು ಸಣ್ಣ ಬದಲಾವಣೆಯನ್ನಾದರೂ ತರಬೇಕು ಎನ್ನುವ ಲಕ್ಷ್ಮಣಯ್ಯನವರ ಇನ್ನಿಲ್ಲದ ತುಡಿತವೇ ಅವರನ್ನು ರಾಗಿ ತಳಿ ವಿಜ್ನಾನಿಯಾಗಿಸಿತು ಎಂದರೆ ನಂಬಲು ಸಾಧ್ಯವೇ? ನಂಬುವುದು ಕಷ್ಟವೇ. ಏಕೆಂದರೆ ಸಸ್ಯ ತಳಿ ವಿಜ್ಞಾನ ಕ್ಷೇತ್ರದಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ವಿದ್ಯಮಾನವೇ ನಡೆಯುತ್ತಿದೆ.

ತಾವು ಅಭಿವೃದ್ಧಿಪಡಿಸಿದ ಸಂಕರಣ (ಹೈಬ್ರಿಡ್), ಕುಲಾಂತರಿ ತಳಿಗಳ ತಂದೆ ತಾಯಿಗಳನ್ನು (parent line) ತಮ್ಮಲ್ಲೇ ಬಂಧಿಸಿಟ್ಟುಕೊಂಡು, ಪ್ರತಿ ಸಲ ರೈತರು ದುಬಾರಿ ಬೆಲೆ ತೆತ್ತು ತಮ್ಮಿಂದಲೇ ಬೀಜ ಕೊಳ್ಳುವಂತೆ ಮಾಡುತ್ತಿರುವ ಸುಲಿಗೆಕೋರ ಬ್ರೀಡರ್ ಗಳ ಲೋಕದಲ್ಲಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತುಹೋದ ಲಕ್ಷ್ಮಣಯ್ಯನವರಂಥ ಅಸಾಮಾನ್ಯರನ್ನು ಊಹಿಸಿಕೊಳ್ಳುವುದು ಅಸಾಧ್ಯ.

ಲಕ್ಷ್ಮಣಯ್ಯನವರು ಕೂಡ ಎರಡು ರಾಗಿ ತಳಿಗಳನ್ನು ಸಂಕರಣಗೊಳಿಸಿಯೇ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದು. ಆದರೆ ಅವರು ಇತರ ಬ್ರೀಡರ್ ಗಳಂತೆ ಅವುಗಳ ತಂದೆ ತಾಯಿಗಳನ್ನು ತಮ್ಮಲ್ಲೇ ಬಚ್ಚಿಟ್ಟುಕೊಳ್ಳಲಿಲ್ಲ. ಸಂಕರಣಗೊಂಡ ಬೀಜವನ್ನು ಅನೇಕ ಹಂಗಾಮುಗಳಲ್ಲಿ ಮತ್ತೆ ಮತ್ತೆ ಬಿತ್ತಿ, ಆಯ್ಕೆ ಮಾಡಿ ಬೆಳೆಸುತ್ತಾ ಅಂತಿಮವಾಗಿ ಅದನ್ನು ರೈತರ ಕೈಗೇ ಕೊಟ್ಟುಬಿಟ್ಟರು. ಮುಂದೆ ರೈತರೇ ತಾವು ಹಾಕಿದ ಆ ಬೀಜವನ್ನು ಬಿತ್ತನೆಗೆ ಎತ್ತಿಟ್ಟುಕೊಳ್ಳಲು ಬರುವ ಹಾಗೆ ಲಕ್ಷ್ಮಣಯ್ಯ ಅದನ್ನು ಓಪಿ (ಮುಕ್ತ ಪರಾಗಸ್ಪರ್ಶಿ) ಬೀಜವಾಗಿ ಅಭಿವೃದ್ಧಿಪಡಿಸುತ್ತಿದ್ದರು.

೪೦-೫೦ ವರ್ಷಗಳ ಕಾಲ ಛಲಬಿಡದೆ, ಒಂದಿಷ್ಟೂ ಏಕಾಗ್ರತೆ ಕಳೆದುಕೊಳ್ಳದೆ, ರಾತ್ರಿ-ಹಗಲುಗಳ ವ್ಯತ್ಯಾಸ ಅರಿಯದಂತೆ ಮಾಡಿದ ತಪಸ್ಸು ಇದು. ಇದರಲ್ಲಿ ಅಡಗಿದ್ದ ತಂತ್ರಜ್ಞಾನವೇನೂ ಸಾಮಾನ್ಯವಾದುದಲ್ಲ. ಸ್ವಕೀಯ ಪರಾಗಸ್ಪರ್ಶಿಯಾದ ರಾಗಿಯನ್ನು ಮತ್ತೊಂದು ತಳಿಯೊಂದಿಗೆ ಪರಕೀಯ ಪರಾಗಸ್ಪರ್ಶಕ್ಕೆ ಒಳಪಡಿಸಿ ಸುಧಾರಿತ ತಳಿ ಅಭಿವೃದ್ಧಿಪಡಿಸುವುದು ಬಲು ಕಷ್ಟ ಎಂಬ ಕಾರಣದ ಜೊತೆಗೆ, ರಾಗಿಯಂತಹ ’ಅಗ್ಗದ’ ಬೆಳೆಗೆ ತಮ್ಮ ’ಅಮೂಲ್ಯ’ವಾದ ಸಮಯವನ್ನು ವ್ಯಯಿಸಲು ವಿಜ್ಞಾನಿಗಳು ಸಿದ್ಧರಿರಲಿಲ್ಲ. ಆದರೆ ರಾಗಿಯನ್ನು ಸುಧಾರಣೆ ಮಾಡಿಯೇ ತೀರಬೇಕೆಂಬ ಪಣತೊಟ್ಟ ಲಕ್ಷ್ಮಣಯ್ಯನವರು, ೧೯೩೪ರಲ್ಲೇ ಅಯ್ಯಂಗಾರ್ ಎನ್ನುವ ವಿಜ್ಞಾನಿ ಸೂಚಿಸಿದ್ದ ’ಕಾಂಟ್ಯಾಕ್ಟ್ ಮೆಥೆಡ್’ ಮೊರೆಹೋಗುತ್ತಾರೆ.

ಎರಡು ವಿಭಿನ್ನ ಗುಣಗಳ ಎರಡು ತಳಿಗಳನ್ನು ಒಟ್ಟಿಗೆ ಬೆಳೆದು ಹೂಬಿಡುವ ಕಾಲಕ್ಕೆ ಅವುಗಳ ತೆನೆಗಳನ್ನು ಒಟ್ಟಿಗೆ ಸೇರಿಸಿ ದಾರದಿಂದ ಕಟ್ಟಿ ಕಾಗದದ ಕವರಿನಿಂದ ಮುಚ್ಚಿ ಪರಕೀಯ ಪರಾಗಸ್ಪರ್ಶವಾಗುವಂತೆ ಮಾಡುತ್ತಾರೆ. ಇದು ನೂರಕ್ಕೆ ನೂರು ಭಾಗ ಯಶಸ್ವಿಯಾಗುತ್ತದೆ.

ಕೊನೆಯಲ್ಲಿ: ಅನೇಕ ರೈತರು ತಮಗೆ ಇಂಡಾಫ್ ರಾಗಿ ಸಿಗುತ್ತಿಲ್ಲವೆಂದೂ, ಅದು ಊಟಕ್ಕೂ, ಮೇವಿಗೂ ಅತ್ಯುತ್ತಮವಾಗಿತ್ತೆಂದೂ ಹೇಳುತ್ತಾ, ಕೃಷಿ ಇಲಾಖೆಯ ಮೂಲಕ ಅದನ್ನು ಮತ್ತೆ ರೈತರಿಗೆ ಕೊಡುವಂತೆ ಒತ್ತಾಯಿಸಲು ಕೇಳುತ್ತಿರುತ್ತಾರೆ. ಲಕ್ಷ್ಮಣಯ್ಯನವರಂಥ ಮೇದಾವಿಗಳ ೫೦ ವರ್ಷಗಳ ಸಾಧನೆಯನ್ನು ಒಂದೆರಡೇ ವರ್ಷದಲ್ಲಿ ಒರೆಸಿ ಹಾಕಿಬಿಡಬಲ್ಲ ಅಸಾಧಾರಣ ಸಾಮರ್ಥ್ಯಕ್ಕೆ ಸರ್ಕಾರಕ್ಕೆ ತಲೆಬಾಗಲೇ ಬೇಕಲ್ಲವೇ!

‍ಲೇಖಕರು Admin

July 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: