ರಾಮಾಂಜಿನಯ್ಯ ವಿ
ನಿರುತ್ತರ, ಮಿಲನ ಪತಂಗ ಹಾಗೂ ಡೈಸಿರಾತ್ರಿ ಪಯಣದಿಂದ ಬಳಲಿದ ದೇಹಕ್ಕೆ ಉತ್ಸಾಹ ನೀಡಿದ ಮೂಡಿಗೆರೆಯ ಕಾಫೀ ಹೀರಿ, ಹ್ಯಾಂಡ್ ಪೋಸ್ಟಿನಿಂದ ಬಲಕ್ಕೆ ತಿರುಗಿ ಈ ಕಡೆಗೆಲ್ಲೋ ‘ನಿರುತ್ತರ’ವಿರುವುದೆಂದು ನಡೆಯತೊಡಗಿದೆವು. ಡೈಸಿಯೂ ಬಿರುಬಿರನೆ ನಡೆಯುತ್ತಿದ್ದಳು. ತಂಪಾದ ಗಾಳಿಗೆ ಅವಳ ಗುಂಗರು ಕೂದಲು ಕೆದರುತ್ತಿತ್ತು. ನೋಟವೆಲ್ಲಾ ಕಾನನದ ಕಡೆಗಿತ್ತು.
ದಟ್ಟ ಹಸುರು ತೋಟಗಳ ನಡುವಿನ ಎತ್ತರದ ಮರಗಳು ನಿದ್ದೆ ಮಾಡುತ್ತಿದ್ದವು. ಎದುರುಗಡೆ ಬಲಕ್ಕೆ ಕಾಣಿಸಿದ ಕೃಷಿ ವಿಗ್ನಾನ ಕೇಂದ್ರ ಮೂವತ್ತು ನಲವತ್ತು ವರ್ಶಗಳ ಹಿಂದಿನ ಏಲಕ್ಕಿ ತಳಿ, ಇಲ್ಲಿನ ಕೀಟಜಗತ್ತು, ಈ ಜಗತ್ತಿನ ಸುತ್ತಲಿನ ನಿಗೂಢ ಮನುಷ್ಯರನ್ನ ನೆನಪಿಸುತ್ತಿತ್ತು.
ಪಕ್ಕದಲ್ಲೆಲ್ಲಾ ಕಾಡಿನಂತಿದ್ದ ಕಾಫೀ ತೋಟದ ನಡುವಿನಿಂದ ಎರಡು ಅಲ್ಪ ಧ್ವನಿಯ ಸ್ವರ-ಒಂದು ಧೀರ್ಘ ಧ್ವನಿ ಸ್ವರಗಳಿಂದ ಕೂಡಿದ್ದ “ಟ್ವುಟೂ ಟ್ವುಟೂ ಟೂ….ಟು” ಎಂಬ ಕೂಗಿಗೆ ನಮ್ಮ ಪಕ್ಕದಲ್ಲೇ ಇದ್ದ ಪೊದೆಯಿಂದ ಇನ್ನೊಂದು ಹಕ್ಕಿ ಪ್ರತಿಕ್ರಿಯೆಯಾಗಿ ಅದೇ ತೆರನಾದ ಕೂಗನ್ನ ಹೊಮ್ಮಿಸುತ್ತಿತ್ತು. “ಡೈಸಿ ನಿಲ್ಲೂ..” ಎಂದೆ. ಎರಡು ನಿಮಿಷ ನಡೆದಾಡದೆ ಒಂದು ಕಡೆ ನಿಂತಾಗ, ಅವು ಒಂದೊಂದಾಗಿ ಒಂದು ಕಡೆಯಿಂದ ದಾರಿಯ ಇನ್ನೊಂದು ಕಡೆಗೆ ತೋಟಕ್ಕೆ ಹಾರತೊಡಗಿದವು.

ನಮ್ಮ ಬಯಲು ಸೀಮೆಯ ಕಡೆ ಕಾಣದ ಇವುಗಳ ಹೆಸರು “ಉಬ್ಬು ಕಂಠದ ಹರಟೆಮಲ್ಲ(puff throated babbler)”. ಗುಂಪಲ್ಲಿ ಇರುವ ಇವು ಹರಟೆ ಹೊಡೆಯುತ್ತಾ,ಕೀಟಗಳನ್ನು ಹಿಡಿದು ತಿನ್ನುತ್ತಾ ಜೀವಿಸುತ್ತವೆ.ಡೈಸಿಯ ಕ್ಯಾಮರಾ ಧ್ವನಿ ಮಾಡಿತು. ಅಂದದ ಒಂದೆರಡು ಚಿತ್ರಗಳ ಸೆರೆಹಿಡಿದು,ಮುಂದೆ ಸಾಗುತ್ತಾ ಕೈಮರವೆಂಬ ಜಾಗದ ಮನೆಗಳ ವರೆಗೂ ಚಲಿಸಿ,ಹಾದಿ ತಪ್ಪಿದ ಅರಿವಾಗಿ ವಾಪಸ್ಸು ಹ್ಯಾಂಡ್ ಪೋಸ್ಟಿನಿಂದ ಎಡಕ್ಕೆ ಸಾಗಿ ಬೈರಾಪುರದ ಕಡೆಗೆ ದಾರಿ ಸಾಗಿದ ಹಾಗೆ ನಡೆದಾಗ ಎಡಬದಿಗೆ ಹಳದಿ ಬಣ್ಣ ಬಳಸಿಕೊಂಡ ‘ನಿರುತ್ತರ’ದ ಗೇಟು ಸ್ವಾಗತಿಸಿತು.
ಎರಡು ನಿಮಿಷ ನಿಂತು ನಮ್ಮನ್ನ ಸದಾ ತಿದ್ದುವ ಶಾಲೆಯ ಮಾಸ್ಟರು ಅಲ್ಲದಿದ್ದರೂ ನಮಗೆಲ್ಲರಿಗೂ ಮಾಸ್ಟರ್ ಆದಂತಹ ತೇಜಸ್ವಿ ಹಾಗೂ ಅವರನ್ನ ಶೇಪ್ಹೌಟ್ ಮಾಡಿದ ರಾಜೇಶ್ವರಿ ಅಮ್ಮನವರನ್ನ ನೆನೆದು, ಅಲ್ಲಿನ ಸುತ್ತಲಿನ ಚಿಲಿಪಿಲಿ ಗಾನದೆಡೆಗೆ ಗಮನಕೊಟ್ಟಾಗ ಅದ್ಬುತವಾದ ಪಕ್ಷಿಸಂಪತ್ತು ಕಾಣಿಸುತ್ತಿತ್ತು. ಇಲ್ಲಿನಂತಹ ಕಾಡಿಗೇ ಸೀಮಿತವಾದ ನಾಚಿಕೆ ಸ್ವಭಾವದ, ವೆಲ್ವೆಟ್ ಬಣ್ಣದ ವಸ್ತು ಮುಖದ ಎದುರು ಇದೆಯೇನೋ ಎಂಬಂತ ಕಲ್ಪನೆ ಮೂಡಿಸುವ “ವೆಲ್ವೆಟ್ ಮುಖದ ನಟ್ಯಾಚ್” ಹಕ್ಕಿಯ ದರ್ಶನವಾಯ್ತು. ಕೆಂಪು ಬೀಕ್, ಕಪ್ಪು ಹಣೆ,ನೀಲಿಯ ಮೇಲ್ಬಾಗ, ಕೆಳಬಾಗ ಬಿಳಿ, ಮರದ ಕಾಂಡ ಕೊಂಬೆಗಳಲ್ಲಿ ತಲೆಕೆಳಗು ಮಾಡಿ ಕೆಳಮುಖವಾಗಿ ಜಿಗಿಯುತ್ತಾ ಕೀಟಾನ್ವೇಷಣೆ ಮಾಡುತ್ತಿರುತ್ತದೆ.
ಹೀಗೆ ಇತ್ಯಾದಿ ಹಲವು ವಿಶೇಷತೆಗಳುಳ್ಳ ಹಲವು ಹಕ್ಕಿಗಳಾದ ಬಿಳಿ ಹೊಟ್ಟೆಯ ಮರಕುಟಿಕ, ಜೇಡರಬೇಟೆ ಹಕ್ಕಿ, ಕಪ್ಪು ಹಿಂಗತ್ತಿನ ಮೊನಾರ್ಚ್, ಪರ್ವತ ಮೈನಾ, ಬಿಳಿ ಕದುಗ ಇವುಗಳನ್ನ ವೀಕ್ಷಿಸಿ ಅದನ್ನ ‘ಇಂಡಿಯನ್ ಇ-ಬರ್ಡ್’ ಎಂಬ ತಾಣದಲ್ಲಿ ದಾಖಲು ಮಾಡಿ, ಇಲ್ಲಿಗೆ ಬಂದುದರ ಮೂಲ ಉದ್ದೇಶ ಮುಗಿಸಿ, ಅಲ್ಲಿಂದ ಎತ್ತಿನ ಬುಜದ ದುರ್ಗಮ ಕಾಡಿನ ಕಡೆ ಡೈಸಿ ಬೈಕ್ ತಿರುಗಿಸಿದಳು. ಅಲ್ಲಿನ ಕೀಟಗಳ ಹುಡುಕುವುದು ನಮ್ಮ ಮೂಲ ನಿರೀಕ್ಷೆಯಾಗಿತ್ತು.

ಕಾಲ್ನಡಿಗೆ ಶುರುವಾಗುತ್ತಿದ್ದಂತೆ ರಣ ಬಿಸಿಲಿನ ಅನುಭವ. ಬೆಂಗಳೂರು, ಮತ್ತಿತ್ತರ ಕಡೆಗಳಿಂದ ಬಂದಂತಹ ಹಲವು ಪ್ರವಾಸಿಗಳು ಬಿರು ಹೆಜ್ಜೆಗಳನ್ನಿಡುತ್ತಾ ಸಾಗುತ್ತಿದ್ದರು. ಕೆಲವರ ಸೆಲ್ಪಿಗಳು, ರೀಲ್ಸ್ಗಳು ನಡೆಯುತ್ತಿತ್ತು. ಹರುಸು ಹೊದಿಕೆಯ ಕಾಡು ಮಾತ್ರ ಡಿಂಮ್ಮನೆ ತೂಕಡಿಕೆಯಲ್ಲಿತ್ತು. ಬಿಸಿಲು ಹೆಚ್ಚಾದ್ದರಿಂದ ಹಕ್ಕಿಗಳು, ಕೀಟಗಳು ಸ್ತಬ್ದವಾಗಿ ಒಂದೆಡೆ ನೆಲಸಿ ವಿಶ್ರಮಿಸುತ್ತಿದ್ದವು. ದೂರದ ಎತ್ತಿನ ಬುಜದಂತೆ ಕಾಣುವ ಆ ಬೆಟ್ಟದ ಬುಜ “ಈ ಬಿಸಿಲಲ್ಲಿ ನನ್ನ ತಲುಪಿ ನೋಡುವ” ಎನ್ನುವ ಸವಾಲೆಸೆದಂತೆ ಕಾಣುತ್ತಿತ್ತು. ಅಲ್ಲಲ್ಲಿ ಸಣ್ಣ ಸಣ್ಣಗೆ ಬೆಳೆದಿದ್ದ ಈಚಲು ಹಣ್ಣಿನ ಗೊಂಚಲುಗಳ ಅರಿಶಿಣ ಬಣ್ಣದ ಹಣ್ಣುಗಳ ಮೂಲ ಯಾವ ಹಕ್ಕಿಯ ಹಿಕ್ಕೆಯೋ! ಕೆಲವು ಹಣ್ಣಾಗಿದ್ದವುಗಳನ್ನು ಡೈಸಿ ಹುಡುಕಿ ತಂದಳು. ರುಚಿಕರವಾಗಿತ್ತು.
ಬೆಳಕಿನ ಕಿರಣಗಳನ್ನ ನೆಲಕ್ಕೆ ತಾಕದ ಹಾಗೆ ಹರಡಿದ್ದ ತುಸು ದಟ್ಟ ಹಸುರಿನ ಎಲೆಗಳ ಚಾವಣಿ(canopy)ಯ ಕೆಳಗಿನ ನೆಲದಲ್ಲಿ ತೇವಾಂಶವಿದ್ದ ಕಾರಣ ತಂಪಾಗಿತ್ತು. ಕೈಹಿಡಿದು ಜಗ್ಗುತ್ತಾ ಡೈಸಿ “ಹೇ, ನಿಂಗೇನು ಅನ್ನಿಸುತ್ತಿಲ್ಲವಾ?” ಎಂದಳು ವಾರೆ ನೋಟದಿಂದ.”ಅನ್ನಿಸ್ತಿದೆ. ಮೇಲೆ ಬಿಸಿ ಪಕ್ಕದಲ್ಲಿ ಬೆವರಿನ ಘಮಲು””ಅಷ್ಟೇನಾ””ಅ..ಲ್ಲಾ.. ಇನ್ನೂ…”
ಮಾತು ಕೊನೆಯಾಗಲೇ ಇಲ್ಲ, ಅಷ್ಟರಲ್ಲೇ,ಯಾವುದೋ ಜೀವಿ ಹಾವಿನ ತಲೆ ಹೆಡೆ ಬಿಚ್ಚಿದ ಹಾಗೆ ಭಾಸವಾಗಿ, ಒಮ್ಮೆಲೇ ಬೆಚ್ಚಿದ ಡೈಸಿ “ಅರೇ ಇಲ್ಲೇನೊ ಇದೆ” ಎಂದು ಚೀರಿದಳು. ಬೆಚ್ಚಿ ಹಿಂದೆ ಸರಿದಾಗ ನನ್ನ ಕೈ ಡೈಸಿಯ ಕೈಯನ್ನ ಗಟ್ಟಿಯಾಗಿ ಹಿಡಿದಿತ್ತು. ನಿಧಾನಕ್ಕೆ ಕಣ್ಣರಳಿಸಿ ನೋಡಿದೆವು. ಅಂಗೈ ಅಗಲದ ಹಸಿರೆಲೆ, ಬಲಿತ ಕಾಂಡ ನಡುವೆತ್ತರಕ್ಕೆ ಬೆಳೆದು ನಿಂತು ಈ ವಿಶ್ವದ ವಿಶೇಷ ಜೀವಿಯ ನೆಲೆಗೆ ಸಾಕ್ಷಿಯಾಗಿತ್ತು ಈ ಯಾವುದೋ ಜಾತಿಯ ಕಾಡು ಗಿಡ! ಅದರ ಮುಂದಿನ ರೆಕ್ಕೆಗಳು(forewings) ತ್ರಿಭುಜಾಕೃತಿಯಂತೆ. ಎರಡೂ ಕಡೆಯ ಮೇಲ್ಬಾಗದ ಅಂಚಿಗೆ ವಿಸ್ತರಣೆಯಿದ್ದು, ಕಪ್ಪು ಕಣ್ಣುಗಳುಳ್ಳ ಒಂದು ಹಾವಿನ ತಲೆಯ ಹಾಗೆ ಕಾಣಿಸಿತು. ಇಡೀ ರೆಕ್ಕೆಗಳೇ ಹಾವಿನಂತೆ ಕಂಡರೂ ನಿಧಾನಕ್ಕೆ ಗಮನಿಸಿದರೆ ಇಂದೊಂದು ದೈತ್ಯ ಚಿಟ್ಟೆ ಎಂದು ತಿಳಿಯಬಹುದಿತ್ತು. ಆದರೆ ಇದು ಚಿಟ್ಟೆಯಲ್ಲ. ಇದು ವಿಶ್ವದಲ್ಲೇ ದೊಡ್ಡದಾದ ಪತಂಗ! ಇದನ್ನ ಟಿ.ವಿ, ಪುಸ್ತಕಗಳಲ್ಲಿ, ನಮ್ಮ ಕಾಲೇಜಿನ ಕೀಟಶಾಸ್ತ್ರದ ತರಗತಿಗಳಲ್ಲಿ ಕೇಳಿದ್ದೆವೇ ವರೆತೂ ಕಣ್ಣಿಂದ ಕಂಡಿರಲಿಲ್ಲ.

ದೊಡ್ಡದಾದ ವಿಶಾಲ ರೆಕ್ಕೆಗಳು. ರೆಕ್ಕೆಗಳ ಮೊದಲ ಹೊರ ಅರ್ಧ ಕೆಂಪು ಗಂದು ಬಣ್ಣಕ್ಕೆ ಇದ್ದರೆ ಒಳ ಅರ್ಧ ಗಾಢ ಕಂದು ಬಣ್ಣದ್ದು. ಒಳ-ಹೊರ ಭಾಗವ ವಿಭಾಗಿಸುವ ಅಲೆಗಳಂತ ಬಿಳಿಯ ಬಣ್ಣದ ಪಟ್ಟಿ ಕಾಣುತ್ತಿತ್ತು. ಮೇಲಿನಿಂದ ಕೆಳಗೆ ಮೂರು ಬಿಳಿಯ ನಿರಾಕಾರದ ಮಚ್ಚೆಗಳು. ಹೊರ ಅಂಚಿನ ಉದ್ದಕ್ಕೂ ಅಲೆಯಾಗಿ ಹರಡಿರುವ ಕಪ್ಪು, ಬಿಳಿ, ಪಿಂಕ್, ತಿಳಿನೀಲಿ ಬಣ್ಣದ ಬಾರ್ಡರ್ ಗೆರೆಗಳು. ದೊಡ್ಡ ಗಾತ್ರದ ಹಾಗೂ ವಿಶೇಷವಾಗಿ ಕಾಣುವ ಎರಡು ಆಂಟೆನಾ. ದಪ್ಪನಾದ ಹೊಟ್ಟೆ. (ಕೆಳಗಿನ ಚಿತ್ರ ಗಮನಿಸಿ) ಸುಮಾರು 8-9 ಇಂಚಿನ ಅಗಲವಾದ ರೆಕ್ಕೆಯನ್ನ ಹೊಂದಿರುವ ಪ್ರಪಂಚದ ಅತಿದೊಡ್ಡ ಪತಂಗವಾದ ಇದರ ಹೆಸರು “ಅಟ್ಲಾಸ್ ಪತಂಗ” (Atlas moth).ಇದನ್ನ ನೋಡುತ್ತಾ ಡೈಸಿ ಕಣ್ಣುಗಳು ಹೊಳೆಯುತ್ತಿದ್ದವು. ನಾನು ಆ ಚಂದ್ರನಂತಿದ್ದ ಹೊಳಪು ಕಣ್ಣುಗಳನ್ನ ಸೆರೆಯಿಡಿಯುತ್ತಿದ್ದೆ.
“ಅರೇ, ಐದ್ ಮಾರ್ಕ್ ಮಿಸ್ ಮಾಡಿಕೊಂಡ್ನಲ್ಲಾ..” ಎಂದು ಬೊಬ್ಬೆ ಶುರುವಿಟ್ಟಳು”ಏನ್ ಡೈಸೀ…? ನಿಧಾನ ನಿಧಾನ ಅದು ಹಾರಿ ಹೋಗೋದೂ…””ಕೀಟ ಸಂಗ್ರಹಣೆ ಮಾಡುವಾಗ ಇದು ಸಿಗಬಾರದಿತ್ತೇ… ಮಿಸ್ ಆಯ್ತಲ್ಲಾ ಐದು ಮಾರ್ಕ್ಸು..”ಬೇಸರಿಸಿಕೊಳ್ಳುತ್ತಿದ್ದಳು.ನಗುತ್ತಾ, “ಬಿಡೇ, ಹೀಗ ಸಿಕ್ಕಿದೆಯಲ್ಲಾ..” ಎನ್ನುತ್ತಾಅದರ ನಾನಾ ರೀತಿಯ ಭಂಗಿಗಳಿಂದ ಪೋಟೋ ಕ್ಲಕ್ಕಿಸುವ ಸಾಹಸ ಮಾಡುತ್ತಾ ಗಮನಿಸಿದರೆ ಅದಕ್ಕೆ ತಲೆ ಭಾಗದ ಅಂಗಗಳ ಯಾವ ಚಲನೆಯೂ ಕಾಣಿಸುತ್ತಿರಲಿಲ್ಲ.ವಿಶೇಷವೆಂದರೆ ಇವುಗಳಿಗೆ ಬಾಯಿ ಎಂಬ ಅಂಗವೇ ಇರುವುದಿಲ್ಲ. ಸಾಯುವ ತನಕ ಆಹಾರ ಸೇವನೆಯೂ ಮಾಡುವುದಿಲ್ಲ. ಮತ್ತೇನಿದರ ಕೆಲಸ? ಮತ್ತೇಗೆ ಇದು ಬದುಕುತ್ತದೆ? ಎಂಬ ಕುತೂಹಲ ನಮಗೆಲ್ಲರಿಗೂ ಬರುತ್ತದೆ. ಹೌದು ಇದು ಬದುಕುವುದೇ ಹೆಣ್ಣಿನ ಮಿಲನಕ್ಕಾಗಿ!ಮಿಲನವೇ ಇದರ ಮೂಲ ಉದ್ದೇಶ. ಇದನ್ನ ಪೂರೈಸಲು ಸಹಾಯ ಮಾಡಲು ವಿಶೇಷವಾಗಿ ರೂಪುಗೊಂಡಿರುವ ‘ಆಂಟೇನಾ’ ನೋಡುವುದಕ್ಕೆ ಗರಗಸದ ಚೂಪು ಹಲ್ಲುಗಳ ಹಾಗೆ.
ಸುಮಾರು ಕಿಲೋ ಮೀಟರ್ಗಳ ದೂರದಿಂದ ಹೆಣ್ಣು ಪತಂಗ ಹೊರಸೂಸುವ ಫೆರಮೋನ್ಗಳನ್ನ ಗ್ರಹಿಸಿ ಅಲ್ಲಿಯತನಕ ಹುಡುಕಿಕೊಂಡು ಹೋಗಿ (ಅದೂ ಸಹ ರಾತ್ರಿ ಮಾತ್ರ ಹಾರುವುದು. ಬೆಳಗ್ಗೆ ಕಡಿಮೆ) ಹೆಣ್ಣು ಪತಂಗದೊಡನೆ ಮಿಲನವಾದ ನಂತರ ಇದರ ಜೀವನ ಸಾರ್ಥಕ ಹಾಗೂ ಅಂತ್ಯದ ಕ್ಷಣಗಣನೆ.
ಲಾರ್ವಾವಸ್ತೆಯ ಸಮಯದಲ್ಲಿ ಶೇಖರವಾಗುವ ಕೊಬ್ಬಿನ ಅಂಶ ಹೊಟ್ಟೆಯ ಆಸುಪಾಸಿನಲ್ಲಿ ಇರುತ್ತದೆ. ಅದು ಗೂಡಿನಿಂದ (ಕಕೂನ್) ಹೊರ ಜಗತ್ತಿಗೆ ಬಂದಾಗ ರೆಕ್ಕೆಗಳನ್ನ ಪಡೆದು ಬಾಯಿಯನ್ನ ಪಡೆಯದೆ ಬಂದಿರುತ್ತದೆ. ಇದರ ಜೀವಿತಾವಧಿ ಬಹಳ ಕಡಿಮೆ. ಸುಮಾರು ಒಂದು ವಾರ ಅಥವಾ ಎರಡು ವಾರ! ಶೇಖರವಾಗಿರುವ ಕೊಬ್ಬಿನ ಶಕ್ತಿಯೇ ಇದು ಹಾರಲು, ಜೀವಿಸಲು ಮೂಲಾಧಾರ. ಹಾಗಾಗಿ ಇದರ ಒಂದೊಂದು ರೆಕ್ಕೆ ಬಡಿತಕ್ಕೂ ಬೆಲೆ ತೆತ್ತುವುದು. ಮಿತಿಯಾದ ಶಕ್ತಿ ಬಳಕೆಯು ಇದರ ಜವಾಬ್ದಾರಿಯಾಗಿರುತ್ತದೆ.
“Attacus atlas” ಎಂಬ ವೈಗ್ನಾನಿಕ ಹೆಸರು. ಅಟ್ಲಾಸ್ ಪತಂಗದ ರೆಕ್ಕೆಗಳಿಗೆ ಹೋಲಿಸಿದರೆ ಹೊಟ್ಟೆಯ ಭಾಗ ತುಂಬಾ ಚಿಕ್ಕದು. ಹೆಣ್ಣು ಪತಂಗ ಗಂಡಿಗಿಂತ ಗಾತ್ರದಲ್ಲಿ ದೊಡ್ಡದು. ಈ ವ್ಯತ್ಯಾಸವನ್ನ ಲೆಪೆಡಾಪ್ಟರಾ (leps)ಗಳಲ್ಲಿ ಸಾಮಾನ್ಯವಾಗಿ ಗಮನಿಸಬಹುದು. ಕಾಡುಗಳಲ್ಲಿ ಮಾತ್ರ ಕಾಣುವ ಇವುಗಳಲ್ಲಿ ಹೆಣ್ಣು ಗೂಡಾವಸ್ತೆಯಿಂದ ಹೊರಬಂದಾಗ ಗಾಳಿಯ ಚಲನೆ ಉತ್ತಮವಾಗಿರುವ ಕಡೆ ಆವಾಸವನ್ನ ಹುಡುಕುತ್ತದೆ. ಇದರ ಹಿಂದಿನ ಸೋಜಿಗವೆಂದರೆ ತಾನು ಹೊರಬಿಡುವ ಪೆರಮೋನುಗಳು ಉತ್ತಮವಾಗಿ ಹರಡಿ, ಚಲಿಸಿ ಗಂಡಿಗೆ ತಲುಪಬೇಕು ಹಾಗೂ ಆ ಗಂಡು ತನ್ನನ್ನು ಹುಡುಕಿಕೊಂಡು ಬಂದು ಮಿಲನವಾಗಬೇಕು ಸಂತತಿ ಮುಂದುವರೆಯಬೇಕು ಎಂಬುದು.
ಇಂತಿಪ್ಪ ಪತಂಗದ ನಾನಾ ಚಿತ್ರಗಳನ್ನ ಸರೆಯಿಡಿಯುತ್ತಿದ್ದ ಡೈಸಿಗೆ ಅದನ್ನ ಅಲ್ಲಿಂದ ಎಬ್ಬಿಸಿ ಅದು ಹಾರುವಾಗ ಅದರ ಅಂದವನ್ನ ನೋಡುವ ಮನಸ್ಸಾಯಿತು.
“ಏ ಬೇಡ ಮಾರಾಯ್ತಿ, ಅದು ವಿಶ್ರಾಂತಿ ಮಾಡ್ತಿದೆ””ಹೆದುರುಪುಕ್ಲ ಅದು ‘ಮಾತ್’ ಕಣಪ್ಪಾ ಕಚ್ಚಲ್ಲಾ” “ಆದ್ರೂ ಬೇಡ್ವೇ..” ಎಂಬ ನನ್ನ ಗೋಳನ್ನ ಸಹಿಸುತ್ತಾ, ಮನ್ನಿಸುತ್ತಾ, “ಸರಿ ಓಕೆ..” ಎಂದೇಳುತ್ತಾ ನೋಡುತ್ತಿದ್ದಳು.ಇವತ್ತಿನ ಪಯಣದ ಸಾರ್ಥಕ ಭಾವ ಅವಳ ಮುಖದಲ್ಲಿತ್ತು. ಅಂಗೈ ಹಿಡಿದಿದ್ದ ಕೈಯಲ್ಲಿ ಉತ್ಸಾಹದ ಒಲವಿತ್ತು… ಜೊತೆಗೆ ಬೆವರೂ..
0 ಪ್ರತಿಕ್ರಿಯೆಗಳು