ಭಾಷೆ, ಸಂಸ್ಕೃತಿ, ದಲ್ಲಾಳಿಗಳು, ಆತ್ಮವಿಮರ್ಶೆ ಇತ್ಯಾದಿ
ಸಾಹಿತ್ಯ, ಸಂಸ್ಕೃತಿ, ರಾಜಕೀಯ, ಹೀಗೆ ಯಾವುದೇ ವಿಚಾರವನ್ನಾದರೂ ಸರಿ, ಗಂಭೀರವಾಗಿ, ವಿಮರ್ಶಾತ್ಮಕಾಗಿ ತೂಗಿನೋಡುವ , ಚಿಂತಿಸುವ ಪ್ರೊ.ಎಚ್.ಎಸ್. ರಾಘವೇಂದ್ರರಾವ್ ವಿಮರ್ಶಕರೆಂದೇ ಖ್ಯಾತರಾಗಿದ್ದಾರೆ. ಅನುವಾದಕರಾಗಿಯೂ ಅವರ ಕೊಡುಗೆ ಮೌಲಿಕವಾದದ್ದು. ರಿಲ್ಕ್ ಕವಿತೆಗಳನ್ನು ಅವರು ಇತ್ತೀಚೆಗೆ ಕನ್ನಡಕ್ಕೆ ತಂದಿದ್ದು ಅವರ ಕಾವ್ಯ ಪ್ರೀತಿಯನ್ನು ತೋರಿಸುತ್ತದೆ.
ರಾಘವೇಂದ್ರ ರಾವ್ ಅವರ ಮುಂದೆ ಗಂಭೀರ ಪ್ರಶ್ನೆಗಳನ್ನು ಇಟ್ಟು ಸಂವಾದವನ್ನು ನಡಿಸಿರುವವರು ಯುವ ತಲೆಮಾರಿನ ಬರಹಗಾರ ಡಾ.ಟಿ.ಎನ್. ವಾಸುದೇವಮೂರ್ತಿ ಅವರು.
ವಾಸುದೇವ ಮೂರ್ತಿ: ಇಂದು ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ. ಆದ್ದರಿಂದ ಅವರ ಸ್ಮರಣೆಯೊಂದಿಗೇ ಈ ಸಂವಾದವನ್ನು ಪ್ರಾರಂಭಿಸಬೇಕೆಂದು ಬಯಸುತ್ತೇನೆ. ಯಾವುದೋ ಸಂದರ್ಭದಲ್ಲಿ ತೇಜಸ್ವಿಯವರು “ಪ್ರತಿಯೊಂದು ಭಾಷೆಗೂ ಒಂದು ಹುಟ್ಟು, ವಿಕಾಸ ಮತ್ತು ಅವನತಿ ಇರುತ್ತದೆ. ಇಂದು ಕನ್ನಡ ತನ್ನ ಆಯುಷ್ಯ ಕಳೆದುಕೊಂಡು ಅವನತಿ ಸನ್ನಿಹಿತವಾಗಿದ್ದರೆ ಏನು ಮಾಡಲು ಸಾಧ್ಯ?” ಎಂದಿದ್ದರು.
ಅವರ ಮಾತುಗಳಲ್ಲಿ ನಿರಾಶೆ, ಸಿನಿಕತನಗಳಿರಲಿಲ್ಲ. ಒಬ್ಬ ನಿಷ್ಠುರ ವಾಸ್ತವವಾದಿಯಂತೆ ಆ ಮಾತುಗಳನ್ನು ನುಡಿದಿದ್ದರು. ಆದರೆ ಕನ್ನಡಿಗರಾದ ನಮಗೆ ಅವರ ಆ ಭವಿಷ್ಯವಾಣಿ ನಿರಾಶೆಯನ್ನಷ್ಟೇ ಉಂಟು ಮಾಡಬಹುದು. ಕನ್ನಡ ನಿಜವಾಗಿಯೂ ಸಾಯುತ್ತಿದೆಯೇ? ಒಬ್ಬ ಭಾಷಾವಿಜ್ಞಾನದ ಮೇಷ್ಟರಾದ, ಸಂಸ್ಕೃತಿ ಚಿಂತಕರಾದ ನೀವು ಕನ್ನಡಕ್ಕೆ ಮತ್ತು ಕನ್ನಡದಂತಹ ಭಾರತೀಯ ಭಾಷೆಗಳಿಗೆ ಭವಿಷ್ಯವಿದೆ ಎಂದು ಭಾವಿಸುವಿರಾ?
ಎಚ್.ಎಸ್. ರಾಘವೇಂದ್ರರಾವ್: ಹಿರಿಯರಾದ ತೇಜಸ್ವಿಯವರ ಮಾತಿನಲ್ಲಿ ನಿಷ್ಠುರವಾದ ಸತ್ಯವಿದೆ. ಹಲವು ಭಾಷೆಗಳು ಈಗ ಇಲ್ಲವಾಗಿವೆ. ಭಾಷೆಯ ಆಯುಷ್ಯಕ್ಕೆ ಹಲವು ನೆಲೆಗಳಿವೆ. ದಿನಬಳಕೆಯ ಮಾತಾಗಿ ಉಳಿದಿರುವುದು, ತನ್ನೊಳಗೆ ಇರುವ ತಿಳಿವಳಿಕೆಯ ಬಲದಿಂದ ಶೈಕ್ಷಣಿಕವಾಗಿ ಮಾತ್ರ ಬಳಕೆಯಾಗುತ್ತಿರುವುದು, ದೈನಂದಿನ ಬದುಕಿನ ಕೆಲವು ಸಂದರ್ಭಗಳಲ್ಲಿ ಉಳಿದುಕೊಂಡು ಉಳಿದ ಕಡೆ ಕಾಣೆಯಾಗುವುದು ಇತ್ಯಾದಿ.
ಭಾಷೆಯ ಅವನತಿ ಆಗದಿದ್ದರೂ ಅದರ ಬಳಕೆಯ ವಲಯಗಳು ಹಿಗ್ಗಬಹುದು ಅಥವಾ ಕುಗ್ಗಬಹುದು. ಭಾಷೆಯ ಅಳಿವು ಉಳಿವುಗಳ ಹಿಂದೆ ರಾಜಕೀಯ ಮತ್ತು ಸಾಮಾಜಿಕವಾದ ಕಾರಣಗಳಿವೆ. ನಮ್ಮ ಕಾಲದಲ್ಲಿ ಇಡೀ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳು ಎಲ್ಲೋ ಇರುವ ಯಾವುದೋ ಭಾಷೆಯ ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತವೆ.
ಆದರೆ, ಈ ಸಂದರ್ಭದಲ್ಲಿ, ‘ಅವನತಿ ಸನ್ನಿಹಿತವಾಗಿದ್ದರೆ ಏನು ಮಾಡಲು ಸಾಧ್ಯ?’ ಎಂಬ ನಿಲುವು ಅನಗತ್ಯ. ರಾಜಕೀಯ ಇಚ್ಛಾಶಕ್ತಿ ಮತ್ತು ಸೂಕ್ತವಾದ ‘ಭಾಷಾಯೋಜನೆ’ಗಳಿಂದ ಸನ್ನಿವೇಶವನ್ನು ಸರಿಪಡಿಸಲು ಸಾಧ್ಯ. ಒಟ್ಟು ಕನ್ನಡ ಮತ್ತು ಇಂಗ್ಲಿಷ್ ಗಳ ತಿಳಿವಳಿಕೆಯು ಪರಸ್ಪರ ಪೋಷಕವಾಗಿ ಕೆಲಸ ಮಾಡುತ್ತಿದ್ದ ಸನ್ನಿವೇಶವು ಇತ್ತು ಮತ್ತು ಇರಲು ಸಾಧ್ಯ. ಬದಲಾಗಿ ಅವುಗಳನ್ನು ಬಲ್ಲವರು ಒಂದರಿಂದ ಇನ್ನೊಂದು ದ್ವೀಪಗಳಂತೆ ದೂರವಾಗುತ್ತಿದ್ದಾರೆ.
ಇದು ಶಿಕ್ಷಣ, ಸಾರ್ವಜನಿಕ ಸಂಪರ್ಕ, ಆಡಳಿತ ಮುಂತಾದ ಕ್ಷೇತ್ರಗಳಿಂದ ಜನಸಾಮಾನ್ಯರನ್ನು ದೂರವಿಡುವ ಹುನ್ನಾರದ ಭಾಗ. ಇದನ್ನು ಜನಪರವಾದ ಹೋರಾಟಗಳ ಮೂಲಕ ಮಾತ್ರವೇ ಪರಿಹರಿಸಲು ಸಾಧ್ಯ. ಇಂಗ್ಲಿಷ್ ತಿಳಿವಳಿಕೆಯು ಮುನ್ನಡೆಗೆ ಅನಿವಾರ್ಯವಾದ ಅಗತ್ಯವೆಂಬ ಭಾವನೆಯನ್ನು ಸರಿಪಡಿಸಬೇಕು. ಹಾಗೆಂದು ಕೇವಲ ಕನ್ನಡವನ್ನು ಮಾತ್ರ ಕಲಿಯಬೇಕೆಂಬ ನಿಲುವು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ. ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಭಾಷೆಯ ಕಲಿಕೆ ಎರಡೂ ಅಗತ್ಯವೆಂಬ ನಿಲುವು ನನ್ನದು.
ತೇಜಸ್ವಿಯವರು ಸರಿಯಾಗಿಯೇ ಗುರುತಿಸಿದಂತೆ, ತಂತ್ರಜ್ಞಾನದೊಂದಿಗೆ ಸಂಘರ್ಷವನ್ನು ಬೆಳೆಸಿಕೊಳ್ಳುವ ಬದಲು ಅದನ್ನು ಕನ್ನಡದ ಮುನ್ನಡೆಗೆ ನೆರವಾಗುವಂತೆ ಬಳಸಿಕೊಳ್ಳಬೇಕು. ಆ ಕೆಲಸ ಬೇರೆ ಬೇರೆ ನೆಲೆಗಳಲ್ಲಿ ನಡೆಯುತ್ತಿದೆ. ಕನ್ನಡಕ್ಕೆ ಕೊನೆಗಾಲ ಬಂದಿದೆಯೆಂದು ನಾನು ಭಾವಿಸುವುದಿಲ್ಲ. ಹಾಗೆಂದು ಮರಳಿನಲ್ಲಿ ತಲೆಮರೆಸಿಕೊಂಡ ಉಷ್ಟ್ರಪಕ್ಷಿಯಂತಹ ಮೌನವೂ ಅಪಾಯಕಾರಿಯೇ.
ಕನ್ನಡವನ್ನು ಕಾಪಿಡುವ, ಬದಲಿಸುವ ಮತ್ತು ಹೊಸ ಅಗತ್ಯಗಳಿಗೆ ತಕ್ಕಂತೆ ಅದನ್ನು ಅಳವಡಿಸಿಕೊಳ್ಳುವ, ಸಂಸ್ಕೃತಿಯ ವಾಹಕವಾಗಿ ಅದನ್ನು ಕಾಪಾಡಿಕೊಳ್ಳುವ ಕೆಲಸದಲ್ಲಿ ಎಲ್ಲರೂ ಒಟ್ಟಾಗಿ ತೊಡಗಿಕೊಳ್ಳಬೇಕು. ಆ ಕೆಲಸವನ್ನು ಸ್ವತಃ ತೇಜಸ್ವಿಯವರೇ ಹಲವು ಬಗೆಗಳಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ಏನೇ ಆದರೂ ಕನ್ನಡವೇ ಇಲ್ಲವಾಗಿ ಈ ಭೂಪ್ರದೇಶದಲ್ಲಿ ವಾಸಿಸುವರೆಲ್ಲರೂ ದೈನಂದಿನ ವ್ಯವಹಾರಗಳಿಗಾಗಿ ಬೇರೆ ಯಾವುದೋ ಭಾಷೆಯನ್ನು ಬಳಸುವ ದಿನಗಳು ಹತ್ತಿರದಲ್ಲಂತೂ ಕಾಣುತ್ತಿಲ್ಲ. ಈ ಭಾಷೆಗೆ ತಾಳಿಕೆಯ ಗುಣ ಇದೆ.
ವಾಸುದೇವ ಮೂರ್ತಿ: ‘ನಮ್ಮ ಸಾಹಿತ್ಯ ಎದುರಿಸುತ್ತಿರುವ ಬಿಕ್ಕಟ್ಟುಗಳೇನು?ʼ ಎಂಬ ಪ್ರಶ್ನೆಯೇ ಬಹಳ ಕ್ಲೀಷೆಯದ್ದಾಗಿದೆ. ಏಕೆಂದರೆ ಪಂಪ ರನ್ನಾದಿಗಳ ಕಾಲದಿಂದಲೂ ಸಾಹಿತ್ಯ ಸಮಕಾಲೀನ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಇಂದಿನತನಕ ಬೆಳೆದು ಬಂದಿದೆ. ಇದಕ್ಕೆ ರನ್ನನ “ಶ್ರೀಯುತನೊಳುದಾರತೆ, ವಾಕ್ ಶ್ರೀಯುತನೊಳಮತ್ಸರತ್ವಂ..”, ಇತ್ಯಾದಿ ಪದ್ಯಗಳನ್ನು ಉದಾಹರಿಸಬಹುದು. ಬಸವಣ್ಣ, ಕುಮಾರ ವ್ಯಾಸರುಗಳಲ್ಲೂ ಇಂತಹ ಬಿಕ್ಕಟ್ಟು, ಒಳತೋಟಿಗಳಿಗೆ ಸ್ಪಂದಿಸುವ ಸಾಲುಗಳನ್ನು ಕಾಣಬಹುದು. ಒಂದು ಜೀವಂತ ಸಂಸ್ಕೃತಿ ಎಲ್ಲ ಕಾಲದಲ್ಲೂ ಬಿಕ್ಕಟ್ಟುಗಳಿಗೆ ಸ್ಪಂದಿಸುತ್ತ ಬಿಕ್ಕಟ್ಟುಗಳನ್ನು ಎದುರಿಸುತ್ತಲೇ ಇರುತ್ತದೆಯೇ ಅಥವಾ ನಮ್ಮ ಕಾಲದ ಬಿಕ್ಕಟ್ಟಿನಲ್ಲಿ ವಿಶೇಷವಾದ, ನಿರ್ಣಾಯಕವಾದ ಸಂಗತಿಯೇನಾದರೂ ಇದೆಯೇ?
ಎಚ್.ಎಸ್. ರಾಘವೇಂದ್ರರಾವ್: ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯು ‘ಶಿಖರಗಳು’ ಮತ್ತು ‘ಸಮತಲ’ಗಳಿಂದ ರೂಪಿತವಾಗಿರುತ್ತದೆ. ಯಾವುದು ಶಿಖರ ಮತ್ತು ಯಾವುದು ಸಮತಲ ಎನ್ನುವ ತೀರ್ಮಾನಗಳು ಕಾಲದಿಂದ ಕಾಲಕ್ಕೆ ಬದಲಾಗಬಹುದಾದರೂ ಎಲ್ಲ ಕಾಲಕ್ಕೂ ಸಲ್ಲುವ ಕೆಲವಾದರೂ ಕೃತಿಗಳು ಭಾಷೆಯ ಒಡಲಿನಲ್ಲಿ ಮೂಡಿಬರುತ್ತವೆ.
ಸಾಹಿತ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ಅದರಾಚೆಗಿನ ಸಂಗತಿಗಳಿಂದಲೂ ರೂಪಿವಾಗುತ್ತವೆ. ಆದರೆ, ಆ ಬಿಕ್ಕಟ್ಟುಗಳನ್ನು ಮೀರುವ ಬಗೆಗಳು ‘ನುಡಿಕಲೆ’ಯಲ್ಲಿ ಕಂಡುಕೊಳ್ಳುವ ಹೊಸ ಸಾಧ್ಯತೆಗಳಲ್ಲಿಯೇ ಇರುತ್ತವೆ. ಭಾಷೆಯು ತನ್ನೊಳಗಡೆಯೇ ಹುದುಗಿಸಿಕೊಂಡಿರುವ, ನಿರಂತರವಾಗಿ ಪಡೆದುಕೊಳ್ಳುತ್ತಿರುವ ಸಾಧ್ಯತೆಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ನುಡಿ ಕಲಾವಿದರು ಎಡೆಬಿಡದೆ ಮಾಡಬೇಕು, ಮಾಡುತ್ತಾರೆ.
ಹೀಗೆ ನೋಡಿದಾಗ ಸಮಸ್ಯೆಗಳೇ ಸವಾಲುಗಳಾಗಿ ಪರಿಣಮಿಸಿ ಹೊಸ ಸೃಷ್ಟಿಗೆ ಕಾರಣವಾಗುತ್ತವೆ. ನಮ್ಮ ಕಾಲದ ಬಿಕ್ಕಟ್ಟುಗಳು ನಮ್ಮ ಕಾಲಕ್ಕೆ ವಿಶಿಷ್ಟವಾಗಿರುವುದು ಸಹಜ. ವೈಯಕ್ತಿಕವಾಗಿ ನನಗೆ ಕಳೆದ ಅರವತ್ತು ವರ್ಷಗಳೂ ನನ್ನ ಕಾಲವೇ.. ಹಲವು ಹಂತಗಳಲ್ಲಿ ಅದು ಕಂಡುಕೊಂಡ ಸರಿ ದಾರಿ, ತಪ್ಪು ದಾರಿಗಳನ್ನು ನೋಡುತ್ತಾ ಬಂದ ನಾನು ಆಶಾವಾದಿಯಾಗಿಯೇ ಇದ್ದೇನೆ.
ಹೊಸ ಶತಮಾನದಲ್ಲಿ ಮತ್ತು ಅದಕ್ಕಿಂತ ಸ್ವಲ್ಪ ಮೊದಲು ಬರೆಯತೊಡಗಿದ ಹಲವು ಹಿನ್ನೆಲೆಗಳ ತರುಣ ತರುಣಿಯರು ಇಕ್ಕಟ್ಟುಗಳನ್ನು ಗುರುತಿಸಿದ, ಮೀರಿದ ಬಗೆಯನ್ನು ನಾನು ಕಂಡಿದ್ದೇನೆ. ಬಹಳ ಜನರೇನಲ್ಲ, ಕೆಲವರು ಮಾತ್ರ. ಅದು ಯಾವಾಗಲೂ ಇರುವುದು ಹಾಗೆಯೇ. ಹಲವರು ಬರೆಯುತ್ತಾರೆ, ಕೆಲವರು ಉಳಿಯುತ್ತಾರೆ. ‘ಬಂಗಾರ’ ಮತ್ತು ‘ಕಾಗೆ ಬಂಗಾರ’ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸವು ಹಲವು ಕಾರಣಗಳಿಂದ ಹಿಂದೆ ಉಳಿಯುತ್ತದೆ, ಕಾಲಕ್ರಮದಲ್ಲಿ ಸರಿ ಹೋಗುತ್ತದೆ. ನಿದರ್ಶನಗಳನ್ನು ಓದುಗರು ಕಂಡುಕೊಳ್ಳಬೇಕೇ ವಿನಾ ನಾನು ಇಲ್ಲಿ ಹೇಳುವುದು ಸರಿಯಲ್ಲ.
ಈ ಕಾಲಕ್ಕೆ ವಿಶಿಷ್ಟವಾದ ಬಿಕ್ಕಟ್ಟುಗಳಲ್ಲಿ ಸಾಮಾಜಿಕ/ರಾಜಕೀಯ ಸರಿತನಕ್ಕೂ ‘ಕಲೆ’ಗೂ ಇರುವ ಅಂತರವನ್ನು ಗುರುತಿಸದೆ ಇರುವುದು, ಸಾಹಿತ್ಯ ಶಿಕ್ಷಣದ ಸ್ವರೂಪದಲ್ಲಿ ಆಗಿರುವ ಬದಲಾವಣೆಯ ಪರಿಣಾಮವಾಗಿ ಪರಂಪರೆಯೊಂದಿಗೆ ಹುಟ್ಟಿಕೊಂಡಿರುವ ಬಿರುಕು, ಆಧುನಿಕ ತಂತ್ರಜ್ಞಾನ ಹಾಗೂ ಸಂವಹನ ವಿಧಾನಗಳನ್ನು ಬಳಸಿಯೂ ಅವುಗಳ ಸಂಗಡ ಹೊಂದಾಣಿಕೆ ಮಾಡಿಕೊಳ್ಳದೆ ಇರುವ ಸವಾಲುಗಳು ಮುಖ್ಯವಾದವು.
ಅಷ್ಟೇ ಮುಖ್ಯವಾಗಿ, ‘ಐಡೆಂಟಿಟಿ’ಗಳನ್ನು ಒಳಗೊಳ್ಳುವ ಹಾಗೂ ಮೀರುವ ಸೃಜನಶೀಲ ಬಗೆಗಳ ಹುಡುಕಾಟಗಳು ನಿರಂತರವಾಗಿ ನಡೆಯಬೇಕಾಗಿದೆ. ಬಿಡುಗಡೆಯೆಂದು ತಿಳಿದುದೇ ಬಂಧನವಾಗಿ ಕಲಾವಿದರು ವಕೀಲರಾಗಿ ಬದಲಾಗುವ ದುರಂತವನ್ನು ನಾವು ನೋಡುತ್ತಿದ್ದೇವೆ. ಸಾಹಿತ್ಯಕಲೆಯ ಮೂಲದ್ರವ್ಯವಾದ ಭಾಷೆಯು ಅನುಭವ, ಭಾವನೆ ಮತ್ತು ವಿಚಾರಗಳನ್ನು ಹರಿಯಬಿಡುವ ಕೊಳವೆಯೋ ತುಂಬಿಕೊಡುವ ಪಾತ್ರೆಯೋ ಅಲ್ಲ. ಅದು ಕೊಳಲೂ ಹೌದು, ಹಾಡೂ ಹೌದು. ಶಬ್ದವು ನಾದವಾಗುವಂತೆ, ಲೋಕವು ಭಾಷೆಯಾಗುವುದೇ ಭಾಷೆಯು ಲೋಕವಾಗುವುದೇ ನಿಜವಾದ ಸಾಹಿತ್ಯದ ಮೂಲ ಚಿಲುಮೆ.
ಆಗ ಲೋಕವೂ ಹೊಸದು, ಭಾಷೆಯೂ ಹೊಸದು. ಅದು ಲೋಕದ ಅಪ-ವ್ಯಾಖ್ಯಾನವಲ್ಲ, ವಿಶಿಷ್ಟ ವ್ಯಾಖ್ಯಾನ. ಈಗ ಬರೆಯುತ್ತಿರುವ ತರುಣ ತರುಣಿಯರು ಎಲ್ಲ ಅಡೆ ತಡೆಗಳನ್ನು ಮೀರಿಯೂ ‘ಕನ್ನಡವನ್ನು ಕನ್ನಡಿಸು’ವರೆಂಬ ನಂಬಿಕೆ ನನಗಿದೆ. ಬರವಣಿಗೆಯ ಬಾಗಿಲುಗಳು ಮುಕ್ತವಾಗಿ ತೆರೆದುಕೊಳ್ಳುತ್ತಿರುವ ಹಲವು ಅನುಕ್ತ ಲೋಕಗಳು ಅದರಲ್ಲಿಯೂ ‘ಹೆಣ್ಣು ದನಿ’ಗಳು ನಮಗೆ ನಿಜವಾಗಿಯೂ ಹೊಸದನ್ನು ಕೊಡಲಿವೆ. ಅನುಮಾನವಿಲ್ಲ. ಸೂರ್ಯನ ಬೆಳಕಿನಲ್ಲಿಯೂ, ‘ಅನ್ಯವನ್ನು ಒಳಗೊಂಡ ನನ್ನತನ’ದ ಕಿರು ಹಣತೆಯನ್ನು ಕಾಪಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.
ವಾಸುದೇವ ಮೂರ್ತಿ: ಇಂದು ವಿಭಿನ್ನ ಐಡಿಯಾಲಜಿಯವರ ನಡುವೆ ಸಂವಾದ ನಡೆಯುತ್ತಿಲ್ಲ, ವಿವಿಧ ಪಂಥಿಗಳು ದಾಯಾದಿಗಳಂತೆ ಪರಸ್ಪರರನ್ನು ಮತ್ಸರ, ಅಸಹನೆಗಳಿಂದ ಕಾಣುವ ವಾತಾವರಣವಿಂದು ನಿರ್ಮಾಣವಾಗಿದೆ. ರಾಜಕಾರಣವನ್ನು ಬಿಟ್ಟು ಸಾಹಿತ್ಯಿಕ ಸಾಮಾಜಿಕ ಚಿಂತನೆ ಇರಲಾರದು ಎಂದು ಲೋಹಿಯಾ ಹೇಳುತ್ತಾರೆ. ಆದರೆ ಇಂದಿನ ಸಾಹಿತಿಗಳ ಸೈದ್ಧಾಂತಿಕ ಬದ್ಧತೆ, ಬಡಿದಾಟಗಳನ್ನು ನೋಡಿದರೆ ನಾವೆಲ್ಲೋ ಲೋಹಿಯಾ ಚಿಂತನೆಯನ್ನು ಅಜೀರ್ಣ ಮಾಡಿಕೊಂಡಿದ್ದೇವೆ ಎನಿಸುತ್ತದೆ. ಸಾಹಿತ್ಯ-ರಾಜಕಾರಣಗಳ ನಡುವಿನ ಸಂಬಂಧ-ವ್ಯತ್ಯಾಸಗಳ ಔಚಿತ್ಯವನ್ನು ನೀವು ಹೇಗೆ ಪರಿಭಾವಿಸುತ್ತೀರಿ?
ಎಚ್.ಎಸ್. ರಾಘವೇಂದ್ರರಾವ್: ಈ ಪ್ರಶ್ನೆಯಲ್ಲಿ ನೀವು ತಲುಪಿರುವ ಕೆಲವು ತೀರ್ಮಾನಗಳನ್ನು ನಾನು ಒಪ್ಪುವುದಿಲ್ಲ. ಸಮಾಜದಲ್ಲಿ ಅಂತೆಯೇ ವೈಚಾರಿಕತೆಯಲ್ಲಿ ಪರಸ್ಪರ ವಿರುದ್ಧವಾದ ಹಿತಾಸಕ್ತಿಗಳ ನಡುವೆ ಇರುವುದು ಸಂಘರ್ಷವೇ ವಿನಾ ಹೊಂದಾಣಿಕೆಯಲ್ಲ. ಎಲ್ಲರೂ ಮನುಷ್ಯರೇ ಎಂಬ ಸತ್ಯವು ಹಲವು ಕಾರಣಗಳಿಂದ ಮೂಡಿಬಂದಿರುವ ವೈಷಮ್ಯಗಳನ್ನು ಅಳಿಸಿ ಹಾಕುವುದಿಲ್ಲ.
ಐಡಿಯಾಲಜಿಗಳ ನಡುವಿನ ಹೊಂದಾಣಿಕೆಗಳು ಅವುಗಳ ನಾಶಕ್ಕೆ ಕಾರಣವಾಗಬಾರದು. ಹಿಂಸೆಯನ್ನು ನಿರಾಕರಿಸಿ ಅಹಿಂಸಾತ್ಮಕವಾದ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನಗಳು ಕೂಡ ‘ರಕ್ತರಹಿತ’ವಾದ, ‘ಆಡಳಿತ ವ್ಯವಸ್ಥೆ’ಯಿಂದಲೇ ನಡೆಯುವ ಹಿಂಸೆಯನ್ನು ಗಮನಕ್ಕೆ ತಂದುಕೊಳ್ಳುವುದಿಲ್ಲ. ಆದ್ದರಿಂದ ಇಂದು ನಿಜವಾದ ಹೋರಾಟಗಾರರು ಮತ್ತು ಹುಸಿ ಹೋರಾಟಗಾರರ ನಡುವಿನ ಅಂತರವನ್ನು ಕಂಡುಕೊಳ್ಳುವುದೇ ಸಮಸ್ಯೆಯಾಗಿದೆ.
ಪರ ಮತ್ತು ವಿರುದ್ಧ ಇರುವ ತಂಡಗಳು ‘ಪಕ್ಷ ರಾಜಕೀಯ’ದ ಹುಸಿ ವಾಸ್ತವದಲ್ಲಿ ಸಿಕ್ಕಿಕೊಂಡು ತಮ್ಮ ತಮ್ಮ ‘ಕಂಫರ್ಟ್ ಜೋನು’ಗಳಲ್ಲಿ ಇದ್ದಾರೆ. ಇದಕ್ಕೆ ಲೋಹಿಯಾ, ಮಾರ್ಕ್ಸ್ ಅಥವಾ ಅಂತಹವರನ್ನು ಗುರಿಮಾಡುವ ಅಗತ್ಯವಿಲ್ಲ. ‘ಅವ ನಮ್ಮವ’ ಮತ್ತು ‘ಅವನಾರವ’ ಎಂಬ ನಿಲುವುಗಳು ಅಸಹಿಷ್ಣುಗಳಾದ ಚರ್ಚಾಪಟುಗಳನ್ನು ರೂಪಿಸುತ್ತಿರುವುದು ನಿಜ. ಹಾಗೆಂದುಕೊಂಡು ಎಲ್ಲ ಐಡಿಯಾಲಜಿಗಳ ಕಲಸುಮೇಲೋಗರವನ್ನು ರೂಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ಯಾವುದೇ ಐಡಿಯಾಲಜಿಯು ಚಲನಶೀಲವಾಗಿರುವುದು ಅತ್ಯಗತ್ಯ. ಅವು ಸ್ಥೂಲವಾದ ಧೋರಣೆ ಮತ್ತು ವಿಶ್ಲೇಷಣೆಗಳನ್ನು ನೀಡುತ್ತವೆಯೇ ಹೊರತು ಸಾರ್ವಕಾಲಿಕವಾದ ಪರಿಹಾರಗಳನ್ನಲ್ಲ. ವಿಭಿನ್ನವಾದ ದೇಶ ಕಾಲ ಸಂದರ್ಭಗಳಲ್ಲಿ ಐಡಿಯಾಲಜಿಗಳನ್ನು ಮಾರ್ಪಡಿಸಿಕೊಂಡು ಹೊಸ ಆಯಾಮಗಳನ್ನು ಸೇರಿಸಬೇಕಾಗುತ್ತದೆ. ಯಾವುದೇ ಪಕ್ಷ ಅಥವಾ ವ್ಯಕ್ತಿಯು ಹೀಗೆಯೇ ಇರಬೇಕು. ಇಲ್ಲವಾದರೆ ಕಾಲದ ಹೊಳೆಯಲ್ಲಿ ಕೊಚ್ಚಿಹೋಗುತ್ತವೆ.
ನಮ್ಮ ಸಮುದಾಯಗಳು ಕೂಡ ಗಾಂಧಿ, ಲೋಹಿಯಾ, ಅಂಬೇಡ್ಕರ್, ಮಾರ್ಕ್ಸ್ ಮುಂತಾದವರನ್ನು ಒಂದುಗೂಡಿಸುವ ಪ್ರಯತ್ನದಲ್ಲಿದೆ. ಸಮಸ್ಯೆಯಿರುವುದು ಅಸ್ಮಿತೆಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಅಂಶದೃಷ್ಟಿಯನ್ನು ಬೆಳೆಸಿಕೊಳ್ಳುವುದರಲ್ಲಿ. ನಮ್ಮ ನಂತರದ ಪೀಳಿಗೆಗಳವರು ಅತಿರೇಕದಿಂದ ಸಮತೋಲನದ ಕಡೆಗೆ ಚಲಿಸುವರೆಂಬ ನಂಬಿಕೆ ನನಗಿದೆ. ಸಮಸ್ಯೆಯಿರುವುದು ಅನುಯಾಯಿಗಳಿಗಿಂತ ಹೆಚ್ಚಾಗಿ ನಾಯಕರಲ್ಲಿ.
ಸಾಹಿತ್ಯ ಮತ್ತು ರಾಜಕಾರಣಗಳ ನಡುವಿನ ಸಂಬಂಧವನ್ನು ಬೇರೆಯೇ ನೆಲೆಯಲ್ಲಿ ನೊಡಬೇಕು. ಸಾಮಾಜಿಕ, ಸಾಹಿತ್ಯಿಕ ಚಿಂತನೆಗಳ ಅಂತರಾಳದಲ್ಲಿಯೂ ಮನುಷ್ಯ ಸಂಬಂಧಗಳ, ವರ್ಗ ಸಂಬಂಧಗಳ ರಾಜಕೀಯ ಇರುತ್ತದೆ ಎಂಬ ಲೋಹಿಯಾ ಅವರ ಮಾತು ನಿಜ. ಆದರೆ, ಸ್ವತಃ ಲೋಹಿಯಾ ಅವರು ತನ್ನನ್ನು ಸಾಹಿತಿಯೆಂದು ಕರೆದುಕೊಳ್ಳಲಿಲ್ಲ.
ನಮ್ಮ ಕಾಲದಲ್ಲಿ ಹೋರಾಟಗಾರರು ಸಾಹಿತಿಗಳು, ಅವರು ಮಾತ್ರವೇ ಸಾಹಿತಿಗಳು ಮತ್ತು ಉಳಿದವರ ಬರವಣಿಗೆಯು ನಿರ್ಲಕ್ಷಿತವಾಗಬಹುದು ಎನ್ನುವ ನೆಲೆಗಟ್ಟು ನಿಧಾನವಾಗಿ ರೂಪಿತವಾಗುತ್ತಿದೆ. ಸಾಹಿತ್ಯದ ಬಗ್ಗೆ ಬರೆಯುವುದು ಸಾಹಿತ್ಯವನ್ನೇ ಬರೆಯುವುದಕ್ಕಿಂತ ಉಪಯುಕ್ತವಾಗುತ್ತಿದೆ. ಈ ಸನ್ನಿವೇಶಕ್ಕೆ ‘ಅತಿ-ಪ್ರತಿಕ್ರಿಯೆ’ಯೆನ್ನುವಂತೆ ಸಾಮಾಜಿಕ ಸಂಗತಿಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆಯುವ ‘ಸೌಂದರ್ಯನಿಷ್ಠ’ರ ಪಡೆಯೂ ತಯಾರಾಗಿದೆ. ಆದರೆ, ಸಾಮಾಜಿಕ/ರಾಜಕೀಯ ವಾಸ್ತವಗಳನ್ನು ಕಲಾವಿದನಾಗಿ ಒಳಗೆ ತೆಗೆದುಕೊಂಡು, ತನ್ನ ಮೂಲದ್ರವ್ಯವಾದ ಭಾಷೆಯೆಂಬ ಮಣ್ಣನ್ನು ಮಿದ್ದು ಮಿದ್ದು ಹೊಸ ದರ್ಶನವನ್ನು ಕೊಡುವ ಕೆಲಸ ಹಿನ್ನೆಲೆಗೆ ಸರಿಯುತ್ತಿದೆ.
ಕನ್ನಡದ ಶ್ರೇಷ್ಠ ಕಲಾವಿದರೆಲ್ಲರೂ ಈ ಅಗ್ನಿದಿವ್ಯವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಆದರೆ, ಇಂದು ಸ್ವಲ್ಪ ಮಟ್ಟಿಗೆ ಹುಸಿ ಹೋರಾಟಗಾರರು ಹಾಗೂ ಹುಸಿ ಸಾಹಿತಿಗಳು ಮುನ್ನೆಲೆಗೆ ಬಂದಿದ್ದಾರೆ. ಇಂತಹ ಸನ್ನಿವೇಶದಲ್ಲಿ ‘ಪರಸ್ಪರ ಸಹಕಾರ ಸಂಘ’ಗಳು ರೂಪಿತವಾಗುವುದೂ ಸಹಜ ಮತ್ತು ಅಪಾಯಕರ. ಅದರ ಜೊತೆಗೆ ಕಲೆ ಹಾಗೂ ಕಲಾವಿದರು ‘ಸರ್ಕಾರೀ ಪೇಟ್ರನೇಜ್’ ಎಂಬ ದರಿ ಮತ್ತು ಖಾಸಗಿ ಪೇಟ್ರನೇಜ್’ ಎಂಬ ಹುಲಿಗಳಿಂದ ದೂರವಿದ್ದು ತಮ್ಮತನವನ್ನು ಕಾಪಾಡಿಕೊಳ್ಳುವ ಸವಾಲನ್ನು ಎದುರಿಸಬೇಕಾಗಿದೆ.
ವಾಸುದೇವ ಮೂರ್ತಿ: ನಾವು ಬಹುತ್ವದ ಮಾತನಾಡುತ್ತೇವೆ. ಆದರೆ ಸದ್ಯಕ್ಕೆ ನಮ್ಮ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ ಬಹುತ್ವಕ್ಕಿಂತಲೂ ಧ್ರುವೀಕರಣವೇ ಹೆಚ್ಚಾಗಿ ಕಾಣಿಸುತ್ತಿದೆ. ಉದಾಹರಣೆಗೆ, ಬಲಪಂಥ-ಎಡಪಂಥ, ಹಿಂದೂತ್ವ-ಸೆಕ್ಯೂಲರ್ ಇತ್ಯಾದಿ. ಹೀಗೆ ಧ್ರುವೀಕೃತವಾದ ಚಿಂತನೆಗಳು ಕಾಲಾಂತರದಲ್ಲಿ ತಮ್ಮದೇ ಅಂತರ್ವೈರುದ್ಧ್ಯಗಳಿಂದ ಬಿರುಕುಗೊಂಡು ಬಹುತ್ವಕ್ಕೆ ದಾರಿ ಮಾಡಕೊಡಬಹುದೇ? ಅಥವಾ ಈ ಧ್ರುವೀಕರಣ ಸಾಂಸ್ಕೃತಿಕ ವೈವಿಧ್ಯದ ಮಟ್ಟಿಗೆ ಆತಂಕಕಾರಿಯೇ?
ಎಚ್.ಎಸ್. ರಾಘವೇಂದ್ರರಾವ್: ಇದು ಸ್ವಲ್ಪ ಮಟ್ಟಿಗೆ ಮೂರನೆಯ ಪ್ರಶ್ನೆಯ ಮುಂದುವರಿಕೆ. ಸಮಾಜದಲ್ಲಿ ಮತ್ತು ಸಮುದಾಯಗಳ ನಡುವೆ ಬಹುತ್ವ ಇರುತ್ತದೆ. ಅಷ್ಟೇ ಅಲ್ಲ, ಅವುಗಳ ನಡುವೆ ‘ಮೇಲು-ಕೀಳು’ಗಳ ವ್ಯತ್ಯಾಸವೂ ಇರುತ್ತದೆ. ಈ ತಾರತಮ್ಯಗಳು, ಸಾಮಾಜಿಕ ವಿಷಮತೆಗಳ ಫಲವಾಗಿ ಉಂಟಾಗುತ್ತವೆ. ಆದ್ದರಿಂದ ಎಲ್ಲ ಕಾಲದಲ್ಲಿಯೂ ಬಹುತ್ವವಿದ್ದರೂ ಅವುಗಳಿಗೆ ಸಮಾನ ಮನ್ನಣೆ ಇರುವುದಿಲ್ಲ.
ಕಷ್ಟ ಸುಖಗಳನ್ನು ಹಂಚಿಕೊಳ್ಳುವ ಮನುಷ್ಯ ಸಹಜ ಗುಣವೂ ಈ ಬಹುತ್ವದ ಜೊತೆಯಲ್ಲಿಯೇ ಇರುತ್ತದೆ. ಒಂದು ಮಟ್ಟದ ಸಹಿಷ್ಣುತೆಯೂ ಇರುತ್ತದೆ. ತಾತ್ವಿಕ ವಿರೋಧ ಮತ್ತು ಸಹಿಷ್ಣುತೆಗಳ ನಡುವೆ ಸಮತೋಲನವನ್ನು ಸಾಧಿಸುವುದು ಕಷ್ಟಸಾಧ್ಯ. ಆಗ ವೈಯಕ್ತಿಕ ನಡವಳಿಕೆಯ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಅನ್ಯರ ಸ್ವಾತಂತ್ರ್ಯವನ್ನು ಗೌರವಿಸಬೇಕಾಗುತ್ತದೆ. ಆಗಲೂ ಗಾಂಧೀಜಿಯವರಂತೆ ಅನ್ಯರ ಮನ ಒಲಿಸುವ ಕೆಲಸದಲ್ಲೂ ತೊಡಗಿರಬೇಕಾಗುತ್ತದೆ. ಇದು ಸಹಜ ಸ್ಥಿತಿ.
ಆದರೆ, ರಾಜಕೀಯ ಹಿತಾಸಕ್ತಿಗಳು ಕಾರ್ಯಪ್ರವೃತ್ತವಾದಾಗ ಧ್ರುವೀಕರಣದ ಅಪಾಯ ಅಧಿಕವಾಗುತ್ತದೆ. ಇಂದು ಎಡ, ಬಲ, ಹಿಂದೂ, ಸೆಕ್ಯುಲರ್, ಇಸ್ಲಾಮಿಕ್ ಮುಂತಾದ ಪದಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಂಡು ಲೇಬಲ್ಲುಗಳಾಗಿವೆ. ನೂರಕ್ಕೆ ನೂರರಷ್ಟು ಬಂಡವಾಳಶಾಹಿಯನ್ನು ಸಮರ್ಥಿಸುವ ಬಿ.ಜೆ.ಪಿ. ಅಥವಾ ಕಾಂಗ್ರೆಸ್ ಪಕ್ಷಗಳನ್ನು ಸಮರ್ಥಿಸುವವರು ಎಡಪಂಥೀಯರಾಗುವುದು ಹೇಗೆ?
ಧರ್ಮ. ಜಾತಿ, ಕೋಮು, ಆಸ್ತಿಕತೆ, ನಾಸ್ತಿಕತೆ, ಅಸ್ಪೃಶ್ಯತೆಗಳ ಬಗ್ಗೆ ಖಚಿತವಾದ ನಿಲುವು ತಳೆಯದೆ, ನುಡಿ-ನಡೆ ಹಾಗೂ ಅಂತರಂಗ-ಬಹಿರಂಗಗಳ ವ್ಯತ್ಯಾಸವನ್ನು ಬದಿಗಿಟ್ಟು ಆಡುವ ಎಲ್ಲ ಮಾತುಗಳೂ ಹುಸಿಯೇ ಸರಿ. ಜೀವನ ಕ್ರಮಕ್ಕೂ ಸಾಂಸ್ಕೃತಿಕ ವೈವಿಧ್ಯಕ್ಕೂ ನಿಕಟವಾದ ಸಂಬಂಧವಿದೆ. ಆದ್ದರಿಂದ ನಮ್ಮ ಸಮಾಜದಲ್ಲಿ ಸಾಂಸ್ಕೃತಿಕ ವೈವಿಧ್ಯವನ್ನು ನಾಶ ಮಾಡುತ್ತಿರುವುದು ಆಧುನಿಕತೆ ಹಾಗೂ ಜಾಗತೀಕರಣಗಳು. ಇವನ್ನು ಸೋಲಿಸುವುದು ಕಷ್ಟ. ಇವುಗಳನ್ನು ಎದುರಿಸುವಷ್ಟು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ ಹಾಗೂ ತಿಳಿವಳಿಕೆಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.
ವಾಸುದೇವ ಮೂರ್ತಿ: ಇಂದಿನ ಯುವಜನತೆಯಲ್ಲಿ ವ್ಯಕ್ತಿಪೂಜೆಯ ವ್ಯಸನ ವಿಶೇಷವಾಗಿ ಕಾಣಿಸುತ್ತಿದೆ. ದೇವತೆಗಳಿಂದ ಮೊದಲಾಗಿ ಹುಲುಮನುಷ್ಯರವರೆಗೆ ನಮಗೆ ಸರಿಯೆನಿಸಿದವರನ್ನು ಆರಿಸಿಕೊಂಡು ಪ್ರಶ್ನಾತೀತವಾಗಿ ಆರಾಧಿಸುವ, ಪೂಜಿಸುವ ಈ ಪ್ರವೃತ್ತಿ ತಂದೊಡ್ಡುವ ಅಪಾಯಗಳೇನು ಎಂಬುದನ್ನು ನಮಗೆ, ನಿರ್ದಿಷ್ಟವಾಗಿ ನಮ್ಮ ಯುವಜನತೆಗೆ, ಮನಗಾಣಿಸುವಿರೇ?
ಎಚ್.ಎಸ್. ರಾಘವೇಂದ್ರರಾವ್: ಇದು ಕೇವಲ ಯುವಜನತೆಗೆ ಸೀಮಿತವಾದ ವ್ಯಸನವಲ್ಲ. ಹಿರಿಯರೇ ಇಂತಹುದೇ ಮಾದರಿಗಳನ್ನು ಹಾಕಿಕೊಟ್ಟಿದ್ದಾರೆ. ಇದು ನಿಜವಾಗಿಯೂ ಗೌರವಕ್ಕೆ ಅರ್ಹರಾದವರನ್ನು ಗೌರವಿಸುವ ಪ್ರವೃತ್ತಿಯೂ ಅಲ್ಲ. ಆರಾಧಿಸುವುದು ಅನುಕರಿಸುವುದಕ್ಕಿಂತ ಸುಲಭ. ಅನುಕರಣೆಯು, ಹಿರಿಯರನ್ನು ವಿಮರ್ಶಾತ್ಮಕವಾಗಿ ಒಳಗೊಂಡು ನಾವು ಬೆಳೆಯುವುದಕ್ಕಿಂತ ಸುಲಭ. ಇಂದು ನಾವು ದೊಡ್ಡವರನ್ನು ನಮ್ಮ ನಿಜವಾದ ಅಜೆಂಡಾಗಳನ್ನು ಮುಚ್ಚಿಡುವ ಸ್ವ-ರಕ್ಷಣೆಯ ಗುರಾಣಿಗಳಂತೆ ಬಳಸಿಕೊಳ್ಳುತ್ತಿದ್ದೇವೆ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಯಾರೂ ಇದಕ್ಕೆ ಅಪವಾದವಾಗಿ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ನಾವು ಪೂಜಿಸುವ ವ್ಯಕ್ತಿಗಳು ಅನೇಕ ಸಲ ‘ಸೆಕ್ಟೇರಿಯನ್’ ಹೀರೋಗಳಾಗಿರುತ್ತಾರೆ. ‘ಅಸ್ಮಿತೆಯ’ ರಾಜಕಾರಣವು ಕೂಡ ಇಂಥ ವ್ಯಕ್ತಿಗಳನ್ನು ರೂಪಿಸಲು ನೆರವಾಗುತ್ತದೆ. ವ್ಯಕ್ತಿಗಳನ್ನು ಸಾರಾಸಗಟಾಗಿ ಒಪ್ಪಿಕೊಂಡು ಅಥವಾ ತಿರಸ್ಕರಿಸಿ ನೋಡುವ ವಿಧಾನವು ಅವರ ಸಂಕೀರ್ಣತೆಯನ್ನು ಕಂಡುಕೊಳ್ಳಲು ಅಡ್ಡಿಯಾಗುತ್ತದೆ. ಅದೂ ಅಲ್ಲದೆ, ದಿನದಿನಕ್ಕೂ ಬದಲಾಗುತ್ತಿರುವ ಜೀವನ ಸನ್ನಿವೇಶದಲ್ಲಿ ಯಾರೊಬ್ಬರ ಮಾತುಗಳೂ ಎಲ್ಲ ಕಾಲಕ್ಕೂ ಸರಿಯಾದ ಪರಿಹಾರಗಳನ್ನು ಕೊಡಲಾರವು.
ಆದ್ದರಿಂದ ವ್ಯಕ್ತಿಪೂಜೆಯು ಸ್ವಂತಿಕೆ, ಸ್ವಾವಲಂಬನೆಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ವ್ಯಕ್ತಿಗಳಿಗಿಂತ ವಿಚಾರಗಳು ಮುಖ್ಯ ಎಂಬ ತಿಳಿವಳಿಕೆಯು ಈ ಪ್ರವೃತ್ತಿಯನ್ನು ಕಡಿಮೆ ಮಾಡುತ್ತಿದೆ. ಸರಿಯಾದ ಶಿಕ್ಷಣದ ಅಭಾವವು ಇಂತಹ ವ್ಯಕ್ತಿಪೂಜೆಯನ್ನು ಪೋಷಿಸುತ್ತದೆ. ನಾಯಕರ ಹೆಸರಿನಲ್ಲಿ ಸ್ವಂತ ಬೇಳೆ ಬೇಯಿಸಿ ಕೊಳ್ಳುವವರೆಲ್ಲರೂ ಇಂತಹ ಆರಾಧನೆಯನ್ನು ಬೆಳೆಸುತ್ತಾರೆ. ಇಂತಹ ಹೀರೋಗಳು ಮೂಡಿಬರುವ ಕ್ಷೇತ್ರಗಳು ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಿವೆ. ಸಮೂಹ ಮಾಧ್ಯಮಗಳು ಮತ್ತು ಆರ್ಥಿಕ ಹಿತಾಸಕ್ತಿಗಳು ಕೂಡ ಇಂತಹ ಹೀರೋಗಳನ್ನು ಹುಟ್ಟುಹಾಕುತ್ತವೆ.
ಇವರು ಕ್ರೀಡೆ, ಚಲನಚಿತ್ರ, ಮನರಂಜನೆ ಮುಂತಾದ ನೆಲೆಗಳಿಂದ ಮೂಡಿ ಬರುತ್ತಿರುವುದು ಇದಕ್ಕೆ ಸಾಕ್ಷಿ. ಮನುಷ್ಯನ ಸ್ವಭಾವದಲ್ಲೇ ಸೇರಿ ಹೋಗಿರುವ ವ್ಯಕ್ತಿಪೂಜೆಯ ಅಪಾಯಗಳನ್ನು ತಿಳಿದುಕೊಂಡು ಅವುಗಳನ್ನು ಮೀರುವುದು ಕಷ್ಟ ಸಾಧ್ಯವಾದ ಕೆಲಸ. ಅದಕ್ಕೆ ಒಂದಿಷ್ಟು ವಿವೇಕ ಒಂದಿಷ್ಟು ಸಿನಿಕತೆ ಬೇಕೇನೋ. ಪ್ರತಿಯೊಬ್ಬರಿಂದಲೂ ಕಲಿಯಬೇಕಾದ್ದು ಇರುವಂತೆಯೇ ಕಲಿಯಬಾರದ್ದೂ ಇರುತ್ತದೆ. ವ್ಯಕ್ತಿಪೂಜೆಯ ಭರಾಟೆಯಲ್ಲಿ ತಮ್ಮ ಪಾಡಿಗೆ ತಾವು ಮಹತ್ವದ ಕೆಲಸ ಮಾಡುತ್ತಿರುವ ಅಂತಹ ‘ಪ್ರಭಾವಲಯ’ ಮತ್ತು ‘ಪ್ರಭಾವವಲಯ’ಗಳು ಇಲ್ಲದ ಎಷ್ಟೋ ಜನರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ.
ವಾಸುದೇವ ಮೂರ್ತಿ: ಕನ್ನಡದ ಪ್ರವರ್ಧನೆಯ ವಿಷಯದಲ್ಲಿ ಸರ್ಕಾರ ಎಲ್ಲಿ ಎಡವಿದೆ? ಈ ಕುರಿತಾದ ಸರ್ಕಾರದ ನೀತಿಯಲ್ಲಿ ತಮ್ಮ ಪ್ರಕಾರ ಯಾವ ಬದಲಾವಣೆ, ಸುಧಾರಣೆಗಳಾಗಬೇಕು?
ಎಚ್.ಎಸ್. ರಾಘವೇಂದ್ರರಾವ್: ಇಂತಹ ವಿಷಯಗಳ ಬಗ್ಗೆ ಬೀಸುಮಾತುಗಳನ್ನು ಆಡುವುದರಲ್ಲಿ ನನಗೆ ನಂಬಿಕೆಯಿಲ್ಲ. ಹಾಗೆಯೇ ಪ್ರತಿಯೊಂದು ವಿಷಯದ ಬಗ್ಗೆಯೂ ಸಮಗ್ರವಾದ ಪರಿಹಾರಗಳನ್ನು ನೀಡುವ ಶಕ್ತಿ ನನಗಿದೆಯೆಂದು ನಾನಾದರೂ ಯಾಕೆ ತಿಳಿಯಬೇಕು? ಇಂಡಿಯಾ ಯಾವುದೇ ಭಾಷೆಗೆ ಸೀಮಿತವಾದ ದೇಶವಲ್ಲ. ಭಾಷೆಗಳ ಆಧಾರದ ಮೇಲೆ ವಿಂಗಡಿತವಾದ ರಾಜ್ಯಗಳಲ್ಲೂ ಅನೇಕ ಭಾಷೆಗಳನ್ನು ಬಲ್ಲವರು ವಾಸವಾಗಿದ್ದಾರೆ.
ಬೇರೆ ಬೇರೆ ರಾಜ್ಯಗಳ ನಡುವಿನ ವಲಸೆ ಮತ್ತು ವ್ಯವಹಾರಗಳ ಮೇಲೆ ಖಚಿತವಾದ ಕಟ್ಟು ಪಾಡುಗಳೇನೂ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರವನ್ನು ಹಂಚಿಕೊಂಡಿರುವ ರೀತಿಯಲ್ಲಿಯೇ ಪರಾವಲಂಬನೆಯಿದೆ, ಬಿಕ್ಕಟ್ಟುಗಳಿವೆ. ಅಷ್ಟೇ ಮುಖ್ಯವಾಗಿ ಆಳುವ ವರ್ಗಗಳು ತಮ್ಮ ಮೇಲುಗೈಯನ್ನು ಉಳಿಸಿಕೊಳ್ಳಲು ಉನ್ನತ ವಿದ್ಯಾಭ್ಯಾಸ, ಇಂಗ್ಲಿಷ್, ಆಧುನಿಕ ತಂತ್ರಜ್ಞಾನ ಮುಂತಾದವನ್ನು ಆಯುಧಗಳಂತೆ ಬಳಸುತ್ತಾರೆ. ಇವು ಸಮಾನತೆಯ ಮಾತಾಡುತ್ತಲೇ ಅಸಮಾನತೆಯನ್ನು ಬಿತ್ತಲು ನೆರವಾಗುತ್ತವೆ. ಅಂತೆಯೇ ಭಾಷೆಯ ಬಗ್ಗೆ ಭಾವುಕವಾಗಿ ಮಾತನಾಡುತ್ತಲೇ ಸಾಮಾನ್ಯರಾದ ಭಾಷಿಕರನ್ನು ಶೋಷಿಸುವ ಕೆಲಸ ನಡೆಯುತ್ತದೆ.
ಕರ್ನಾಟಕದ ರಾಜಕೀಯವು ಪ್ರಾದೇಶಿಕ ಸಂಸ್ಕೃತಿ ಅಥವಾ ಭಾಷಿಕ ಸಂಸ್ಕೃತಿಯನ್ನು ಅವಲಂಬಿಸಿಲ್ಲ. ಇಲ್ಲಿನದು ಒಂದೇ ಭಾಷೆಯನ್ನು ಬಳಸುವ ವಿವಿಧ ಜಾತಿಯ ಅಸ್ಮಿತೆಗಳ ಮತ್ತು ಅವುಗಳ ಆರ್ಥಿಕ ಸಂಪನ್ಮೂಲಗಳ ರಾಜಕೀಯ. ಆದ್ದರಿಂದಲೇ, ನಮ್ಮ ರಾಜಕಾರಣಿಗಳಿಗೆ ಭಾಷೆಯು ಜೀವನ್ಮರಣಗಳ ಪ್ರಶ್ನೆಯಲ್ಲ. ಶಿಕ್ಷಣ, ಆರೋಗ್ಯ, ಮನರಂಜನೆ, ಪುಸ್ತಕ ಪ್ರಕಾಶನ, ಮಾಧ್ಯಮ ಮುಂತಾದ ಕ್ಷೇತ್ರಗಳು ಸಂಪೂರ್ಣವಾಗಿ ಖಾಸಗೀ ವಲಯದ ಹಿಡಿತದಲ್ಲಿವೆ.
ಅವರಿಗೆ ಭ್ರಮೆಗಳನ್ನು ಬಿತ್ತುವ ಕಾರ್ಖಾನೆಗಳ ಸ್ಥಾಪನೆಯಲ್ಲಿ ಆಸಕ್ತಿ. ಉದ್ಯೋಗದಾತರಿಗೆ ಮತ್ತು ಶಿಕ್ಷಣದಾತರಿಗೆ ಕನ್ನಡವನ್ನು ಬಳಸುವ ಯಾವುದೇ ಉಮೇದು ಇಲ್ಲ. ಅಗ್ಗದ ಬೆಲೆಗೆ ಸಿಗುವ ವಲಸೆ ಕಾರ್ಮಿಕರ ಮೇಲಿನ ಅವಲಂಬನೆ, ಅಂತೆಯೇ ಅನ್ಯದೇಶಗಳು/ಅನ್ಯರಾಜ್ಯಗಳ ಹಣಹೂಡಿಕೆಗೆ ಕೈಚಾಚಿ ನಿಂತಿರುವ ನಮ್ಮ ಸರ್ಕಾರವು ಕನ್ನಡದ ಬೆಳವಣಿಗೆಯನ್ನು ಆದ್ಯತೆಯಾಗಿ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ.
ಭಾಷೆ ಮತ್ತು ಸಂಸ್ಕೃತಿಗಳ ಹೆಸರಿನಲ್ಲಿ ಕೊಡುತ್ತಿರುವ ಕೋಟಿಗಟ್ಟಲೆ ಹಣ ಕೂಡ ‘ಸಂಸ್ಕೃತಿ ದಲ್ಲಾಳಿ’ಗಳ ಕೈಯಲ್ಲಿ ಅಪವ್ಯಯವಾಗುತ್ತದೆ. ಅಧಿಕಾರಶಾಹಿಯೂ ಅವರೊಂದಿಗೆ ಕೈಜೋಡಿಸುತ್ತದೆ. ಕನ್ನಡದ ಮತ್ತು ಕರ್ನಾಟಕದಲ್ಲಿ ಮಾತ್ರವೇ ಇರುವ ಹತ್ತು ಹಲವು ಭಾಷೆಗಳ ನಿಜವಾದ ಬೆಳವಣಿಗೆಯು ಕಷ್ಟವಾಗುತ್ತಿದೆ. ಶಿಕ್ಷಣದ ಸಂಪೂರ್ಣ ರಾಷ್ಟ್ರೀಕರಣ, ಸಮರೂಪದ ಶಿಕ್ಷಣ, ಇಂಗ್ಲಿಷ್ ಭಾಷೆಯ ಕಲಿಕೆಗೆ ಅವಕಾಶವಿರುವ ಕನ್ನಡ ಮಾಧ್ಯಮ, ಆಡಳಿತ ಮತ್ತು ನ್ಯಾಯಾಂಗಗಳ ಕನ್ನಡೀಕರಣ ಮತ್ತು ಸಂಪನ್ಮೂಲಗಳ ಪ್ರಾಮಾಣಿಕವಾದ ಬೆಳವಣಿಗೆಗಳನ್ನು ಸರ್ಕಾರವು ಅಳವಡಿಸಿಕೊಳ್ಳಬೇಕು.
ಇದಕ್ಕೆ ಅಗತ್ಯವಾದ ಇಚ್ಛಾಶಕ್ತಿಯನ್ನು ಅದಕ್ಕೆ ಅನಿವಾರ್ಯವಾಗಿಸುವುದು ನಮ್ಮೆಲ್ಲರ ಹೊಣೆ, ಕನ್ನಡದ ಇಂಗ್ಲಿಷ್ ಅನ್ನು ಯಾವಾಗ, ಹೇಗೆ, ಯಾರು ಕಲಿಸಬೇಕು ಎನ್ನುವುದು ಆ ವಿಷಯವನ್ನು ಬಲ್ಲ ತಜ್ಞರು ತೀರ್ಮಾನಿಸಬೇಕೇ ಹೊರತು ದುರಾಶೆ ತುಂಬಿದ ಖಾಸಗಿ ಶಾಲೆಗಳಾಗಲೀ ಪ್ರವಾಹಪತಿತರಾದ ಪೋಷಕರಾಗಲೀ ಅಲ್ಲ. ಕಾನೂನಿಗೆ ಅಂಟಿಕೊಂಡು ಕೂಡುವ ನ್ಯಾಯಾಂಗಕ್ಕೆ ಮಾರ್ಗದರ್ಶನ ಮಾಡಬೇಕಾದ ಹೊಣೆಯೂ ಶಾಸಕಾಂಗಕ್ಕೆ ಇರುತ್ತದೆ.
ವಾಸುದೇವ ಮೂರ್ತಿ: ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಹೇಳುವುದಾದರೆ, ಕನ್ನಡ ಅಧ್ಯಯನ, ವಿಮರ್ಶೆ, ಸಂಶೋಧನೆಗಳ ಭವಿಷ್ಯ ಏನಾಗಬಹುದು?
ಎಚ್.ಎಸ್. ರಾಘವೇಂದ್ರರಾವ್: ಸುಮಾರು ಐವತ್ತು ವರ್ಷಗಳಿಂದ ಈ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸುತ್ತಾ ಬಂದಿರುವ ನನಗೆ ಅಧ್ಯಯನದ ವಿಕೇಂದ್ರೀಕರಣವು ಈ ಕಾಲದ ಮುಖ್ಯ ಲಕ್ಷಣವೆಂದು ತೋರುತ್ತಿದೆ. ಹೀಗೆ ಆಗುವುದು ಮೇಲುನೋಟಕ್ಕೆ ಅರಾಜಕತೆಯೆಂದು ತೋರಿದರೂ ವಾಸ್ತವವು ಹಾಗಿರುವುದಿಲ್ಲ. ವಿಶ್ವವಿದ್ಯಾಲಯಗಳು, ಸಾಹಿತ್ಯಕ ಚಳುವಳಿಗಳು, ಪ್ರಭಾವಶಾಲಿಗಳಾದ ಸಾಹಿತಿಗಳು, ಐಡಿಯಾಲಜಿಗಳು ಯಾವುದೂ ಇಂದಿನ ಅಧ್ಯಯನವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿಲ್ಲ. ಅವು ಗುಂಪುಗಳಾಗಿ ಅಸ್ತಿತ್ವದಲ್ಲಿದ್ದರೂ ಅವುಗಳ ನಡುವೆ ಪರಸ್ಪರ ಸ್ಪರ್ಧೆ ಮತ್ತು ಅನುಮಾನಗಳಿವೆ.
ಸೃಜನಶೀಲ ಸಾಹಿತಿಗಳು ತಮ್ಮದೇ ಕಿರುದಾರಿ/ಒಳದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅಧ್ಯಯನಗಳು ಸಾಹಿತ್ಯ ವಿಮರ್ಶೆಯ ಖಚಿತವಾದ ಶಿಸ್ತು ಮತ್ತು ಪರಿಭಾಷೆಗಳನ್ನು ಕಳೆದುಕೊಂಡು ಹೆಚ್ಚು ಜನರನ್ನು ತಲುಪುತ್ತಿವೆ. ಸಂಸ್ಕೃತಿ ಅಧ್ಯಯನದ ಹೆಸರಿನಲ್ಲಿ ‘ಸಾಹಿತ್ಯ’ವೆಂಬ ಪರಿಕಲ್ಪನೆಯೇ ಮುರುನಿರೂಪಣೆಯನ್ನು ಪಡೆಯುತ್ತಿದೆ. ಕಿರಿಯರಿಗೆ ಪ್ರೋತ್ಸಾಹ ನೀಡುವ ಹೆಸರಿನಲ್ಲಿ ಆತ್ಮವಿಮರ್ಶೆಯನ್ನು ಮರೆಮಾಡುವ, ಅತಿಯಾದ ಆತ್ಮವಿಶ್ವಾಸವನ್ನು ಬೆಳೆಸುವ ಧೋರಣೆಯು ಕಾಣಿಸಿಕೊಂಡಿದೆ.
ಸಾಹಿತ್ಯ ಸೃಷ್ಟಿಗೆ ಸರಿಸಮನಾದ ಓದು ನಡೆಯುತ್ತಿದೆಯೆಂದು ತೋರುತ್ತಿಲ್ಲ. ಯಾವುದನ್ನು ಓದಬೇಕು, ಯಾಕೆ ಓದಬೇಕು ಮತ್ತು ಹೇಗೆ ಓದಬೇಕು ಮುಂತಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗದೆ ಗೊಂದಲಗಳು ಹುಟ್ಟಿಕೊಂಡಿವೆ. ಇತರ ಭಾಷೆಗಳಿಂದ ಆಗುವ ಆಮದು ಕೂಡ ಅಜೆಂಡಾಗಳ ಪರಿಣಾಮವಾಗುವ ಭಾಷಾಂತರದ ಸಂಸ್ಕೃತಿ ರಾಜಕೀಯವು ಎಂದಿನಂತೆ ಈಗಲೂ ಇದೆ. ಇದೆಲ್ಲದರ ನಡುವೆ ಇಂಗ್ಲಿಷ್ ನಲ್ಲಿ ಬರೆಯುವ, ಓದುವ ‘ಎಲಿಟಿಸ್ಟ್’ ಲೇಖಕರನ್ನು ವಿಜೃಂಭಿಸುವ, ಅನುಕರಿಸುವ ಸಂಭ್ರಮಿಸುವ ಹಬ್ಬಗಳೂ ನಡೆಯುತ್ತಿವೆ.
ಸರ್ಕಾರಗಳು ಮಾಡುತ್ತಿರುವ ಅಧಿಕಾರ/ಹಣ ಹಂಚಿಕೆಗಳಾಗಲೀ ಕಾರ್ಪೊರೇಟ್ ವಲಯಗಳ ಪಂಚತಾರಾ ತಮಾಷಾಗಳಾಗಲೀ ನಿಜವಾದ ಸೃಜನಶೀಲತೆ ಮತ್ತು ಅಧ್ಯಯನಕ್ಕೆ ನೆರವು ನೀಡುವುದಿಲ್ಲ. ಲೋಕಾಂತದ ಅನುಸಂಧಾನವೂ ಸೃಜನಶೀಲ ಏಕಾಂತದಲ್ಲಿಯೇ ನಡೆಯಬೇಕು. ಇಂಥ ತೊಡಗುವಿಕೆಗೆ ಈ ಕಾಲವು ಹಿಂದೆಂದಿಗಿಂತ ಹೆಚ್ಚು ಅಡಚಣೆಗಳನ್ನು ಉಂಟುಮಾಡಿದೆ.
ಸಾಹಿತ್ಯ ವಿಮರ್ಶೆಗಿಂತ ಭಿನ್ನವಾದ ಶಾಸ್ತ್ರಗಳನ್ನು ಅಧ್ಯಯನ ಮಾಡಿದವರು ಕನ್ನಡದಲ್ಲಿ ಬರೆಯುವ ಹಾಗೂ ಸಾಹಿತ್ಯವನ್ನು ಆಕರಗಳಾಗಿ ಬಳಸಿಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ. ‘ಪಾಶ್ಚಾತ್ಯ ತಿಳಿವಳಿಕೆ’ ಮತ್ತು ‘ದೇಸೀ ತಿಳಿವಳಿಕೆ’ಗಳ ನಡುವೆ ಸಂಘರ್ಷ ಮತ್ತು ಸಂಯೋಜನೆಗಳ ರಾಜಕಾರಣವನ್ನು ಮೀರಿದ ಅನುಸಂಧಾನ ನಡೆಯಬೇಕಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗೆಗಿನ ಧೋರಣೆಯನ್ನು ಇನ್ನಷ್ಟು ವಸ್ತುನಿಷ್ಠವಾಗಿ ಪರಿಶೀಲಿಸಬೇಕಾಗಿದೆ.
‘ಕನ್ನಡ’ವನ್ನು ಕಳೆದುಕೊಳ್ಳುತ್ತಿರುವ ನಮ್ಮದೇ ಮಕ್ಕಳು, ಮೊಮ್ಮಕ್ಕಳನ್ನು ಒಳಗೊಳ್ಳುವ ಬಗೆಗಳನ್ನು ಹುಡುಕಬೇಕಾಗಿದೆ. ಇದೆಲ್ಲವನ್ನೂ ಬೇರೆ ಯಾರೋ ಮಾಡಬೇಕೆಂದು ಆಕ್ಷೇಪಣೆ ಮಾಡುವುದಲ್ಲ. ನಮ್ಮ ನಮ್ಮ ಮಿತಿಗಳೊಳಗೆ ನಾವೇ ಮಾಡಬೇಕಾಗಿದೆ. ಮನ್ನಣೆಯ ಭ್ರಮೆ ಇಲ್ಲದೆಯೂ ಮಾಡಬೇಕಾಗಿದೆ. ನಾನು ಭವಿಷ್ಯದ ಬಗ್ಗೆ ನಂಬಿಕೆ ಕಳೆದುಕೊಂಡವನಲ್ಲ.
ವಾಸುದೇವ ಮೂರ್ತಿ: ನೀವು ಗಮನಿಸಿದಂತೆ ಇಂದಿನ ಕನ್ನಡ/ಕನ್ನಡೇತರ ಸೃಜನಶೀಲ ಸಾಹಿತ್ಯದಲ್ಲಿ ಹೊಸ ಪ್ರಯೋಗಗಳೇನಾದರೂ ಆಗುತ್ತಿವೆಯೇ? ಕನ್ನಡದಲ್ಲಿ ಆಗುತ್ತಿಲ್ಲವೆಂದಾದಲ್ಲಿ ಅದಕ್ಕೆ ಕಾರಣಗಳೇನಿರಬಹುದು? ನಮ್ಮ ಪ್ರಯೋಗಶೀಲತೆಗೆ ಸಹಾಯಕವಾಗಬಹುದಾದ ಬೆಳವಣಿಗೆಗಳು ಅನ್ಯಭಾಷೆಗಳಲ್ಲಿ ಏನಾದರೂ ಕಂಡಿದೆಯೇ? ಕಂಡು ಬಂದಿದ್ದಲ್ಲಿ ದಯವಿಟ್ಟು ವಿವರಿಸಿ, ಅದು ಹೊಸ ತಲೆಮಾರಿನ ಕವಿಗಳಿಗೆ ಉಪಯುಕ್ತವಾಗಬಹುದು.
ಎಚ್.ಎಸ್. ರಾಘವೇಂದ್ರರಾವ್: ಸಾಹಿತ್ಯ ಪ್ರಕಾರಗಳ ನಡುವಿನ ಗಡಿಗೆರೆಗಳು ಶಿಥಿಲವಾಗುವುದು ಮತ್ತು ಕಲ್ಪನೆಯ ಬದಲಾಗಿ ವಾಸ್ತವದ ಮೇಲಿನ ಅತಿಯಾದ ಅವಲಂಬನೆಗಳನ್ನು ಈ ಕಾಲದ ಬರವಣಿಗೆಯ ಮುಖ್ಯ ಲಕ್ಷಣವೆಂದು ಕರೆಯಬಹುದು. ಅನುಭವಗಳನ್ನು ಮೀರುವ ಹಾಗೂ ಮರುರೂಪಿಸುವ ‘ಭಾಷಿಕ ಕಲ್ಪನಾತ್ಮಕತೆ’ ಇಂದು ಬಹಳ ಅಪರೂಪವಾಗುತ್ತಿದೆ.
ಕೆಲವೇ ಕೆಲವು ಕವಿಗಳು ಮತ್ತು ಕಥನಕಾರರು ಈ ಗುಟ್ಟನ್ನು ತಿಳಿದುಕೊಂಡು ಬರೆಯುತ್ತಿದ್ದಾರೆ. ಅವರು ಸುಲಭ ಸಂವಹನದ ಗಾಡಿಜಾಡಿಗೆ ಬೀಳುವುದಿಲ್ಲ. ನಿರಂತರವಾದ ಓದಿನಿಂದ ಸೃಜನಶೀಲತೆಯ ಊಟೆಗಳನ್ನು ನವೀಕರಿಸಿಕೊಳ್ಳುತ್ತಿದ್ದಾರೆ. ಅನುವಾದಗಳನ್ನು ಓದುವುದು ಮತ್ತು ಮಾಡುವುದು ಎರಡೂ ಈ ಹೊಸ ಹುಟ್ಟಿಗೆ ನೆರವಾಗುತ್ತವೆ. ಭಾಷೆಯ ಬಳಕೆಯ ಹೊಸ ಬಗೆಗಳನ್ನು ಗುರುತಿಸುವುದು ಮತ್ತು ಹಳೆಯ ಬಗೆಗಳನ್ನು ಹೊಸದಾಗಿ ಬಳಸಿಕೊಳ್ಳುವುದು ಎರಡೂ ನಡೆಯಬೇಕು. ಉಪಭಾಷೆಗಳನ್ನು ಬಳಸುವ ಉಮೇದನ್ನು ಕಥೆಗಾರರ ಹಾಗೆ ಕವಿಗಳು ತೋರಿಸುತ್ತಿಲ್ಲ.
‘ಕಾಡ ಮೂಲಕವೆ ಪಥ ಆಗಸಕ್ಕೆ’ ಎಂದ ಹಾಗೆ ಅಮೂರ್ತದ ಹುಡುಕಾಟವೂ ಐಂದ್ರಿಯಿಕವಾದ, ಮೂರ್ತವಾದ ಸಂಗತಿಗಳ ಮೂಲಕವೇ ನಡೆಯಬೇಕು. ಪ್ರಯೋಗಶೀಲತೆಯು ಹೊರಗಿನ ಪ್ರೇರಣೆಗಳಿಗಿಂತ ಹೆಚ್ಚಾಗಿ ಲೇಖಕನ ಒಳಗಿನ ಅಗತ್ಯಗಳಿಂದಲೇ ಮೂಡಿಬರಬೇಕು. ಬರವಣಿಗೆ ಮಾಡುವವರು, ಕೇವಲ ಓದುಗರಿಗಿಂತ ಭಿನ್ನವಾದ, ತಮ್ಮದೇ ಓದಿನ ಬಗೆಗಳನ್ನು ರೂಪಿಸಿಕೊಳ್ಳಬೇಕು.
ಅದು ಕೇವಲ ಪುಸ್ತಕದ ಓದಲ್ಲ, ಲೋಕದ ಓದು. ಇಂದ್ರಿಯಗಳ ಮೂಲಕ ಓದಿದ ಲೋಕವನ್ನು ಭಾಷೆಯ ಮೂಲಕ ಕಟ್ಟುವ ಹೊಸ ಬಗೆಗಳ ಹುಡುಕಾಟವೇ ಎಲ್ಲ ಪ್ರಯೋಗಶೀಲತೆಯ ಗುಟ್ಟು. ಇದಕ್ಕೆ ಅಗತ್ಯವಾದ ಪಾಠಗಳು ಇಂದು ಬರೆಯುತ್ತಿರುವ, ಹಿಂದೆ ಬರೆದಿರುವ ಎಲ್ಲರಿಂದಲೂ ಸಿಗುತ್ತವೆ.
ವಾಸುದೇವ ಮೂರ್ತಿ: ನಿಮ್ಮ ವಿಮರ್ಶೆಯ ವಿವೇಕಕ್ಕೆ ಸಮಕಾಲೀನ ತಾತ್ವಿಕ ಒತ್ತಡಗಳಾಚೆಗೂ ನಿಂತು ಅವಲೋಕಿಸಬಲ್ಲ ಗುಣ ಇದೆ. ಬಂಡಾಯ ಮತ್ತು ನವ್ಯದ ಪ್ರಭಾವ ಇದ್ದ ಕಾಲದಲ್ಲಿ ರಚಿತವಾದ ನಿಮ್ಮ ವಿಶ್ಲೇಷಣೆ ಕೃತಿಯನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಆ ಗುಣ ನಿಮ್ಮ ಇತ್ತೀಚಿನ ಬರಹಗಳಲ್ಲೂ ಕಾಣಿಸುತ್ತದೆ. ಈ ತಾತ್ವಿಕ ನಿರ್ಲಿಪ್ತತೆಗೆ ಪ್ರೇರಣೆಯೇನು? ಕವಿ ಕಲ್ಪನೆ ಪಡೆದುಕೊಳ್ಳುವ ಪ್ರೇರಣೆಗೂ ವಿಮರ್ಶಾ ದೃಷ್ಟಿ ಪಡೆದುಕೊಳ್ಳುವ ಪ್ರೇರಣೆಗೂ ವ್ಯತ್ಯಾಸಗಳೇನಾದರೂ ಇರುತ್ತವೆಯೇ?
ಎಚ್.ಎಸ್. ರಾಘವೇಂದ್ರರಾವ್: ನಾನು ಮೊದಲಿನಿಂದಲೂ ನಿರ್ದಿಷ್ಟವಾದ ತಾತ್ವಿಕ, ರಾಜಕೀಯ ಹಾಗೂ ಸಾಮಾಜಿಕ ನಿಲುವುಗಳನ್ನು ಹೊಂದಿರುವವನು. ನಿರ್ವಾತದಿಂದಲೇ ನಿಷ್ಪಕ್ಷಪಾತಿಯಾದೆನೆನ್ನುವುದು ಸಾಧ್ಯವೂ ಅಲ್ಲ, ಸರಿಯೂ ಅಲ್ಲ. ಆದರೆ ಈ ನಿಲುವುಗಳು ಐಡಿಯಾಲಜಿಗೆ ಅಂಟಿಕೊಂಡ ಹಟಮಾರಿತನವಾಗದೆ ಮುಕ್ತತೆ ಮತ್ತು ಚಲನಶೀಲತೆಗಳನ್ನು ಕಾಪಾಡಿಕೊಳ್ಳಬೇಕು. ಸಾಹಿತ್ಯದ ಬಗ್ಗೆ ಬರೆಯುವಾಗ ಹೊಸ ಸಾಧ್ಯತೆಗಳಿಗೆ ಕುರುಡಾಗಬಾರದು. ಅನ್ಯವಾದುದರ ಬಗ್ಗೆಯೂ ತಾಳ್ಮೆ ಮತ್ತು ತೆರೆದ ಮನ ಬೇಕು.
ನನ್ನ ಪೀಳಿಗೆಯ ವಿಮರ್ಶಕರು ನವ್ಯ, ದಲಿತ-ಬಂಡಾಯ, ನವೋದಯ ಮತ್ತು ನವೋದಯಪೂರ್ವ ಬರವಣಿಗೆಗಳನ್ನು ಯಾವುದೇ ಚಳುವಳಿಯ ಒತ್ತಡಗಳಿಂದ ಬಿಡಿಸಿಕೊಂಡು ನೋಡುವ ಸವಾಲನ್ನು ಎದುರಿಸಬೇಕಾಯಿತು. ನಾನು ಯಾರ ಅಥವಾ ಯಾವುದರ ವಕ್ತಾರನೂ ಅಲ್ಲ, ಹಾಗೆ ಆಗಬಾರದು ಎನ್ನುವ ನಿಲುವು ನಮ್ಮನ್ನು ರೂಪಿಸಿತು. ಯಾವುದೇ ಸಾಹಿತಿ ಅಥವಾ ಬರವಣಿಗೆ ನಮಗೆ ಆದರ್ಶವಾಗಿಬಿಟ್ಟರೆ ಮುಕ್ತತೆ ಸಾಯುತ್ತದೆ.
ಸಮಸ್ಯೆ ಇರುವುದು ಗುಂಪುಗಾರಿಕೆಯಲ್ಲಿಯೇ ಹೊರತು ಸೈದ್ಧಾಂತಿಕ ಬದ್ಧತೆಯಲ್ಲಿ ಅಲ್ಲ. ಇದು ಸಾಧ್ಯವಾಗಲು ಸೃಜನಶೀಲತೆಯ ಬಗ್ಗೆ ಗೌರವ ಮತ್ತು ವಿಮರ್ಶೆಯ ವಿನಯ ಬೇಕು. ನಿಷ್ಠುರತೆ ಮತ್ತು ವಿನಯಗಳು ಪರಸ್ಪರ ವಿರುದ್ಧವಲ್ಲವೆಂದು ನಾನು ನಂಬಿದ್ದೇನೆ. ಲೇಖಕ ಮತ್ತು ವಿಮರ್ಶೆ ಇಬ್ಬರಿಗೂ ಒಂದೇ ಬಗೆಯ ಪ್ರೇರಣೆಗಳಿದ್ದರೂ ಅವು ಬರವಣಿಗೆಯಲ್ಲಿ ಸಾಕ್ಷಾತ್ಕಾರವಾಗುವ ಬಗೆ ಬೇರೆ. ಸೃಜನಶೀಲ ಕೃತಿಗಳಿಗೆ ಸಹಜವಾಗಿಯೇ ಬರುವ ಸಂಕೀರ್ಣತೆ ಮತ್ತು ಬಹುತ್ವಗಳನ್ನು ವಿಮರ್ಶೆಯು ಬುದ್ಧಿಪೂರ್ವಕವಾಗಿ ಪಡೆಯಬೇಕಾಗುತ್ತದೆ. ಇದು ವ್ಯಕ್ತಿತ್ವದ ‘ಇಂಟೆಗ್ರಿಟಿ’ಯ ಪ್ರಶ್ನೆಯೂ ಹೌದು.
ವಾಸುದೇವ ಮೂರ್ತಿ: ನಿಮ್ಮ ವಿಶ್ಲೇಷಣೆ, ಹಾಡೇ ಹಾದಿಯ ತೋರಿತು ಮುಂತಾದ ವಿಮರ್ಶಾ ಬರಹಗಳನ್ನು ಓದಿದಾಗ ಪ್ರಕಾರ, ಛಂದಸ್ಸು, ಶಿಲ್ಪ, ಕವಿಯ ವೈಯಕ್ತಿಕ ಬದುಕಿನ ವಿವೇಚನೆ ಇವೆ ಮುಂತಾದ ಪರಿಕರಗಳು ಹೆಚ್ಚಾಗಿ ನಿಮ್ಮ ಬರವಣಿಗೆಯಲ್ಲಿ ಕಾಣಿಸುತ್ತದೆ. ಇದಕ್ಕೆ ನಿಮ್ಮ ಗುರು ಜಿ ಎಸ್ ಎಸ್ ಅವರ ಪ್ರಭಾವವು ಇರಬಹುದು. ಏಕೆಂದರೆ ಆ ದಿನದ ನಿಮ್ಮ ಬರಹಗಳಲ್ಲಿ ಅವರ ಆಶಯ ಆದ್ಯತೆಗಳೇ ಪ್ರಧಾನವಾಗಿ ಕಾಣಿಸುತ್ತದೆ. ಅನಂತರದ ಬರಹಗಳಲ್ಲಿ (ನಮಸ್ಕಾರ, ನಿಜವು ತೋರದಲ್ಲ ಮುಂತಾದವು) ಸಾಮಾಜಿಕ ಕ್ರಿಯೆಯ ಅವಲೋಕನ, ಕವಿಕೃತಿಯ ಮೂಲಕವೇ ಹೊಮ್ಮುವ ತಾತ್ವಿಕ ಆಕೃತಿಗಳ ಅನ್ವಯ ಇವು ಹೆಚ್ಚಾಗಿ ಕಾಣಿಸುತ್ತದೆ. ನಿಮ್ಮ ಬರವಣಿಗೆ ಹಾಗು ವೈಚಾರಿಕ ದೃಷ್ಟಿಕೋನದಲ್ಲಿ ಆಗಿರುವ ಪ್ರಮುಖ ಪಲ್ಲಟಗಳನ್ನು ನಿಮ್ಮ ಮಾತುಗಳಲ್ಲೇ ಕೇಳುವ ಬಯಕೆ..
ಎಚ್.ಎಸ್. ರಾಘವೇಂದ್ರರಾವ್: ವಿಜ್ಞಾನದ ವಿದ್ಯಾರ್ಥಿಯಾದ ನಾನು ಹಲವು ಬಗೆಯ ಪ್ರಭಾವಗಳಿಗೆ ಒಳಗಾದವನು. ಪಾಶ್ಚಾತ್ಯ ಚಿಂತನೆಯ ವಿಭಿನ್ನ ನೆಲೆಗಳಲ್ಲಿ ಆಸಕ್ತಿಯಿಟ್ಟುಕೊಂಡವನು. ಸಾಹಿತ್ಯದ ಆಕೃತಿ ಮತ್ತು ಆಶಯಗಳ ನಡುವೆ ಇರುವ ಅವಿನಾ ಸಂಬಂಧವನ್ನು ಮೊದಲಿನಿಂದಲೂ ನಂಬಿರುವವನು. ಅವೆರಡನ್ನೂ ಸಾಮಾಜಿಕ ವಾಸ್ತವ ಮತ್ತು ಸೃಜನಶೀಲ ಅಂತರಂಗಗಳ ಕೂಡುವಿಕೆಯು ರೂಪಿಸುತ್ತದೆ.
ಕಳೆದ ಐವತ್ತು ವರ್ಷಗಳಲ್ಲಿ ಆದ ಹಲವು ಬಗೆಯ ಬದಲಾವಣೆಗಳನ್ನು ಗಮನಿಸುತ್ತಾ, ಅವುಗಳನ್ನು ಒಳಗೊಂಡರೂ ಶರಣಾಗದೆ ಬರೆಯಬೇಕೆನ್ನುವುದು ನನ್ನ ಆದರ್ಶ. ನೀವು ಪ್ರಸ್ತಾಪಿಸುತ್ತಿರುವ ವಿಭಿನ್ನ ನೆಲೆಗಳು ಮೊದಲಿನಿಂದಲೂ ಇದ್ದರೂ ಕಾಲದಿಂದ ಕಾಲಕ್ಕೆ ಅವುಗಳಿಗೆ ನೀಡುವ ಆದ್ಯತೆಯ ಪ್ರಮಾಣದಲ್ಲಿ ಏರುಪೇರುಗಳು ಆಗಿರುತ್ತವೆ. ಬರವಣಿಗೆಯು ಪೆಡಸಾಗದೆ ಎಲ್ಲರಿಗೂ ತಲುಪುವಂತೆ ಇರಬೇಕೆನ್ನುವುದು ನಾನು ಗುರುಗಳಾದ ಶಿವರುದ್ರಪ್ಪನವರಿಂದ ಕಲಿತ ಪಾಠ.
ಸಂಕೀರ್ಣತೆ ಮತ್ತು ಸರಳತೆಗಳು ಶತ್ರುವಲ್ಲ. ಬರವಣಿಗೆಯು ಭಾಷೆಯು ಪಾರಿಭಾಷಿಕವಾದ ಅಕಡೆಮಿಕ್ ಸ್ವರೂಪದಿಂದ ಬಿಡಿಸಿಕೊಂಡು ಹೆಚ್ಚು ಚಿತ್ರಕವಾಗುವುದು ಓದುಗರ ವ್ಯಾಪ್ತಿಯಲ್ಲಿ ಆದ ವಿಸ್ತಾರ ಮತ್ತು ಸೆಮಿನಾರ್ ಭಾಷಣಗಳಿಂದ ಕಲಿತ ಪಾಠ. ನನ್ನ ಪೀಳಿಗೆಯ ಕೆಲವು ಲೇಖಕರು ವಿಚಾರಸಂಕಿರಣ ಮುನ್ನುಡಿ ಮತ್ತು ಮಾಧ್ಯಮಗಳ ಒತ್ತಡಕ್ಕೆ ಸಿಕ್ಕಿಕೊಂಡು ‘ಅಸೈನ್ ಮೆಂಟ್’ ವಿಮರ್ಶಕರಾದೆವೆಂಬ ಕೊರಗು ನನ್ನನ್ನು ಕಾಡಿದೆ. ಈ ಬಗ್ಗೆ ಇದಕ್ಕಿಂತ ಹೆಚ್ಚು ಹೇಳುವುದು ಸರಿಯಲ್ಲ.
ವಾಸುದೇವ ಮೂರ್ತಿ: ಈಚೆಗೆ ನೀವು ಅನ್ಯಭಾಷೆಯ ಕಾವ್ಯಗಳನ್ನು ಅನುವಾದಿಸುವುದರಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದೀರಿ. ಅದು ʼಕಪ್ಪು ಕವಿತೆ..ʼ ಇರಬಹುದು ಅಥವಾ ರಿಲ್ಕ್ ಪದ್ಯಗಳ ಅನುವಾದ “ಮಂಜಿನ ಶಿವಾಲಯ”ವಿರಬಹುದು. ಈ ಅನುವಾದಗಳ ಹಿಂದಿರುವ ನಿಮ್ಮ ಪ್ರಯತ್ನ, ಪರಿಶ್ರಮಗಳನ್ನು ಗಮನಿಸಿದರೆ ಅದು ನೀವು ಸುಮ್ಮನೆ ಹವ್ಯಾಸಕ್ಕೆ ಮಾಡಿದ ಬರವಣಿಗೆಯಂತೆ ತೋರುವುದಿಲ್ಲ. ಕನ್ನಡ ಕಾವ್ಯ ಸಂವೇದನೆಯಲ್ಲಿ ನಿಮಗೆ ಯಾವುದೋ ಕೊರತೆ ಕಂಡುಬಂದಿದ್ದು ಅದನ್ನು ತುಂಬಿಸುವ ಪ್ರಯತ್ನದಂತೆ ನನಗದು ಕಾಣಿಸಿತು. ಈ ಅನುವಾದಗಳ ಹಿಂದೆ ಅಂತಹ ತಾತ್ವಿಕ ಆಶಯವೇನಾದರೂ ಉಂಟೇ? ವಿವರಿಸಿ.
ಎಚ್.ಎಸ್. ರಾಘವೇಂದ್ರರಾವ್: ಹೌದು. ನಾನು 1982 ರಷ್ಟು ಹಿಂದಿನಿಂದಲೇ (‘ಬಾಲಮೇಧಾವಿ’- ಜರ್ಮನ್ ಕಥೆಗಳ ಅನುವಾದ) ಮಾಡುತ್ತಿದ್ದರೂ ಈಚಿನ ವರ್ಷಗಳಲ್ಲಿ ಅದರ ಪ್ರಮಾಣ ಜಾಸ್ತಿಯಾಗಿದೆ. ಕೇವಲ ಕವಿತೆ ಮಾತ್ರವಲ್ಲ, ಕಮೂ, ಮಾರ್ಕೆಸ್ ಮತ್ತು ಕಟ್ಸೀ ಅಂತಹ ಬಹು ದೊಡ್ಡ ಲೇಖಕರ ಮೂರು ಕಾದಂಬರಿಗಳನ್ನು ಅನುವಾದಿಸಿದ್ದೇನೆ.
‘ಸ್ವ-ಅಭಿವ್ಯಕ್ತಿ’ಯನ್ನು ಪೋಷಿಸುವ ಸೃಜನಶೀಲ ಬರವಣಿಗೆಗೆ ಬೇಕಾದ ಸಲಕರಣೆಗಳು ಇಲ್ಲವೆನಿಸಿದಾಗ, ಬೇರೆಯವರ ಬರವಣಿಗೆಯನ್ನು ಅವಲಂಬಿಸುವ ವಿಮರ್ಶೆಯಿಂದ ದಣಿವು ಎನಿಸಿದಾಗ ನಾನು ಕಂಡುಕೊಂಡ ಅರೆ-ಸೃಜನಶೀಲ ಹಾದಿಯೆಂದರೆ ಅನುವಾದ. ಇದರಿಂದ ನನ್ನ ಭಾವಕೋಶ ಮತ್ತು ಭಾಷಿಕ ಕಲ್ಪನೆಗಳಿಗೆ ಹೊರಹರಿವು ಸಿಗುತ್ತದೆ. ಅದಕ್ಕಿಂತ ಮುಖ್ಯವಾಗಿ ನನಗಿಂತ ಬಹು ದೊಡ್ಡ ಮನಸ್ಸುಗಳ ಸಾಧನೆಯನ್ನು ನನ್ನ ಭಾಷಿಕರೊಂದಿಗೆ ಹಂಚಿಕೊಳ್ಳುವ ಈ ಅವಕಾಶ ಮುದ ನೀಡುತ್ತದೆ. ಇದರ ಜೊತೆಗೆ ನನ್ನ ಕಣ್ಣು ಕನ್ನಡ ಭಾಷೆಯಲ್ಲಿ ಬರುತ್ತಿರುವ ಬರವಣಿಗೆಗೆ ಅಗತ್ಯವೆಂದು ನನಗೆ ತೋರುವ ಮಾದರಿಗಳ ಹುಡುಕಾಟದಲ್ಲಿಯೂ ಇರುತ್ತದೆ.
ನಮ್ಮ ಕೊರತೆಗಳನ್ನು ಅನುಕರಣೆಯಿಂದ ಅಲ್ಲ, ವಿಭಿನ್ನ ಬಳಕೆಯಿಂದ ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಮಹಾಭಾರತ, ರಾಮಾಯಣಗಳಿಂದ ಮೊದಲಾಗಿ ‘ಇಂಗ್ಲಿಷ್ ಗೀತ’ಗಳವರೆಗೆ ಈ ಬಗೆಯ ಒಳಹರಿವು ಕನ್ನಡವನ್ನು ಶ್ರೀಮಂತವಾಗಿಸಿದೆ. ಯಾವುದೇ ಅನುವಾದವು ಕೇವಲ ಖುಷಿಗೆ ಮಾಡುವ ಕೆಲಸವಾಗದೆ ಒಳಗಿನ ಮತ್ತು ಹೊರಗಿನ, ಸ್ವಂತದ ಮತ್ತು ಸಂಸ್ಕೃತಿಯ ಸಾಧ್ಯತೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ದುಡಿಯಬೇಕು.
ಕನ್ನಡದ ನೆಲಮೂಲ ಸಂಸ್ಕೃತಿಯನ್ನು ಕಂಡುಕೊಳ್ಳುವ ಹಾಗೂ ಕಟ್ಟುವ ಪ್ರಯತ್ನಗಳು ಕೂಡ ‘ಅನ್ಯ’ವನ್ನು ನಿರಾಕರಿಸದೆ ನಮ್ಮ ಅಗತ್ಯಗಳಿಗೆ ತಕ್ಕಂತೆ ಕಟ್ಟಿಕೊಳ್ಳುವ ಬಗೆಯ ಕಡೆ ನನ್ನ ಒಲವಿದೆ. ಇದರಲ್ಲಿ ನನಗೆ ಕುವೆಂಪು ಅವರೇ ಬಹು ದೊಡ್ಡ ಮಾದರಿ. ಅದೂ ಅಲ್ಲದೆ ನಮ್ಮ ನಡುವೆ ಮೂಲಭಾಷೆಗಳ ಸಂಪರ್ಕ ಸಾಧಿಸಲು ಆಗದಿರುವ, ಆದರೂ ಅಲ್ಲಿನ ಸಾಹಿತ್ಯದಲ್ಲಿ ತೀವ್ರವಾಗಿ ಆಸಕ್ತರಾದವರ ಬಹು ದೊಡ್ಡ ಸಮುದಾಯವಿದೆ. ನನ್ನಂಥವರದು ಮಧ್ಯವರ್ತಿಯ ಕೆಲಸ.
ವಾಸುದೇವ ಮೂರ್ತಿ: ನೀವು ಜೆ. ಕೃಷ್ಣಮೂರ್ತಿಯವರ ಉಪನ್ಯಾಸಗಳನ್ನು ಅನುವಾದಿಸಿದ್ದೀರಿ. ಬೇಂದ್ರೆ ಸಹ ಜೆ.ಕೃಷ್ಣಮೂರ್ತಿಯನ್ನು ಮೆಚ್ಚಿಕೊಂಡಿದ್ದರು. ಕುವೆಂಪು, ಬೇಂದ್ರೆಯಂತಹ ಕವಿಗಳ ಆಧ್ಯಾತ್ಮಿಕ ಪ್ರಭಾವದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಇನ್ನು ನವ್ಯ ಸಾಹಿತಿಗಳ ಕಾಳಜಿಯಲ್ಲೂ ಆಧ್ಯಾತ್ಮಿಕ ಹುಡುಕಾಟದ ಲಕ್ಷಣಗಳುಂಟು. ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ, ಇದನ್ನು ಬಯಸಿರಲಿಲ್ಲ, ಮುಂತಾದ ಶೀರ್ಷಿಕೆಗಳಲ್ಲಿ ಅಧ್ಯಾತ್ಮದ ಅಥವಾ ನಿರ್ಲಿಪ್ತತೆಯ ಧ್ವನಿ ಇದೆ.
ಲಂಕೇಶರ ಕೆಲವು ನೀಲು ಪದ್ಯಗಳಲ್ಲಿ ಜೆ಼ನ್ ಹಾಯ್ಕುಗಳ ಹೊಳಹುಗಳಿವೆ. ಇಂದು ಬರುತ್ತಿರುವ ಕವಿತೆಗಳಲ್ಲಿ ಈ ಬಗೆಯ ಆಧ್ಯಾತ್ಮಿಕ ಸೆಳೆತ ನಿಮಗೆ ಕಂಡು ಬಂದಿದೆಯೇ? ಕಾರ್ಪೊರೇಟ್ ಗುರು ಪರಂಪರೆ ಸೃಷ್ಟಿಯಾಗಿರುವ ಇಂದಿನ ಕಾಲದಲ್ಲಿ ನಮ್ಮ ಹೊಸಕವಿಗಳ ಆಧ್ಯಾತ್ಮಿಕ ಆಯ್ಕೆಗಳು ಮತ್ತು ಪ್ರಶ್ನೆಗಳು ಯಾವುದಾಗಿರಬೇಕು?
ಎಚ್.ಎಸ್. ರಾಘವೇಂದ್ರರಾವ್: ನೀವು ಕೇಳಿರುವುದು ಮಹತ್ವದ ಪ್ರಶ್ನೆ. ಇದು ಜೆ.ಕೆ.ಯವರಿಗೆ ಅಥವಾ ನಮ್ಮ ಕಾಲದ ಹಿರಿಯ ಅನುಭಾವಿ/ಚಿಂತಕರಿಗೆ ಸೀಮಿತವಾದ ಸಂಗತಿಯಲ್ಲ. ಸಾಹಿತ್ಯದ ಮೂಲಭೂತ ಹಂಬಲಗಳು ಮತ್ತು ಹುಡುಕಾಟಕ್ಕೆ ಸಂಬಂಧಿಸಿದ್ದು. ಪಂಪನಿಂದ ಹಿಡಿದು ಇಂದಿನವರೆಗೆ ಕವಿಮನದ ಹುಡುಕಾಟವು ಸೃಷ್ಟಿ, ಸೃಷ್ಟಿಕರ್ತ, ಬಾಳಿನ ಉದ್ದೇಶ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಿದೆ. ಇದಕ್ಕೂ ಧರ್ಮಕ್ಕೂ ನಡುವೆ ಹೊಕ್ಕಳಬಳ್ಳಿಯ ಸಂಬಂಧ ರುವುದು ಅನಿವಾರ್ಯವಲ್ಲ.
ಆಧ್ಯಾತ್ಮಿಕ ಅರಸುವಿಕೆಯು ಧರ್ಮದ ಗಡಿಗೆರೆಗಳನ್ನು ವಿಸ್ತರಿಸುತ್ತದೆ, ಮೀರುತ್ತದೆ. ನಾಸ್ತಿಕತೆಯೂ ಅದಕ್ಕೆ ಹೊರತಲ್ಲ. ಪು.ತಿ.ನ. ಅವರು ಹೇಳಿದ ಹಾಗೆ, “ಏನೇತಕೆ ಎಂಬುದೆ ಹವ್ಯಾಸ, ಅದನುಳಿದಾಗದು ಪದವಿನ್ಯಾಸ.’ ಇಂಥ ಪ್ರಶ್ನೆಗಳನ್ನು ನವೋದಯ, ನವ್ಯಗಳ ಕವಿಗಳು ಮಾತ್ರವಲ್ಲ, ಇಂದು ಗಂಭೀರವಾಗಿ ಬರೆಯುತ್ತಿರುವ ಕವಿ-ಕವಯತ್ರಿಯರು ಕೂಡ ತಮ್ಮ ದೇಶ, ಕಾಲ, ಸಂದರ್ಭಗಳಿಗೆ ಅನುಗುಣವಾಗಿ ಕೇಳಿಕೊಳ್ಳುತ್ತಿರುವರೆಂದು ನಾನು ತಿಳಿದಿದ್ದೇನೆ.
ಆ ಬಗೆಯ ಆಂತರಂಗಿಕ ಶೋಧನೆಯಲ್ಲಿ ತೊಡಗಿರುವವರು ಕಾರ್ಪೊರೇಟ್ ಗುರುಗಳಿಗೆ ಮರುಳಾಗುವ ಸಂಭವ ಕಡಿಮೆ. ಅನುಭಾವ, ಆಧ್ಯಾತ್ಮ, ಭಕ್ತಿ ಮುಂತಾದ ಪರಿಕಲ್ಪನೆಗಳು ಅವರಿಗೆ ಬಾಹಿರವಾದರೂ ಅವರ ಹುಡುಕಾಟಕ್ಕೆ ಭಂಗ ಬರದೆ ಇರಬಹುದು. ಭೋಗಲಾಲಸೆ ಮತ್ತು ದುರಾಸೆಗಳು ಹುಟ್ಟಿಸುವ ದುಃಖ ಕೋಪಗಳು, ಸಂವೇದನಶೀಲರಾದ ಎಲ್ಲ ಕವಿಗಳಲ್ಲೂ ಒಳಮುಖಿಯಾದ ವಿಷಾದ ಮತ್ತು ಚಿಂತನೆಗಳನ್ನು ಮೂಡಿಸುತ್ತದೆ. ಅವರು ಆ ತಳಮಳಗಳನ್ನು ಬರವಣಿಗೆಯಲ್ಲಿ ತೋಡಿಕೊಳ್ಳುತ್ತಾರೆ ಮತ್ತು ಧ್ಯಾನಶೀಲವಾದ ಬರವಣಿಗೆಯ ಮೂಲಕವೇ ಉತ್ತರಗಳನ್ನೂ ಹುಡುಕುತ್ತಾರೆ.
ನರಸಿಂಹಸ್ವಾಮಿಯವರು ಹೇಳಿದ ‘ಇಹದ ಪರಿಮಳದ ಹಾಡು’ ಅವರಿಗೆ ನಿಕಟವೆಂದು ತೋರುತ್ತದೆ. ಇಂದ್ರಿಯಾನುಭವಗಳ ಮೆಟ್ಟಿಲಿನಿಂದಲೇ ಅಮೂರ್ತದ ಕಡೆಗೆ ಚಲಿಸುವ ಎಲ್ಲ ಹುಡುಕಾಟವೂ ಆಧ್ಯಾತ್ಮವೆಂದೇ ನಾನು ತಿಳಿಯುತ್ತೇನೆ. ನನ್ನ ಸಮಕಾಲೀನರು ಮತ್ತು ನನಗಿಂತ ಕಿರಿಯರೂ ಆದ ಅನೇಕ ಲೇಖಕರು ಈ ಬಗೆಯ ಕಾವ್ಯಾತ್ಮಕವಾದ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.
ಒಂದು ಅರ್ಥಪೂರ್ಣ ಚರ್ಚೆ. ಬಹಳ ದಿನಗಳ ನಂತರ ಪಂಥರಹಿತವಾಗಿ ಸಾಹಿತ್ಯದ ಬಗೆಗಿನ ಒಳನೋಟಗಳನ್ನು ನೀಡಿದ ಬರಹ. ಧನ್ಯವಾದಗಳು ಸಂದರ್ಶಕರಿಗೂ, ಎಚ್. ಎಸ್. ಆರ್. ಅವರಿಗೂ….
ಸೊಗಸಾದ ಪ್ರಶ್ನೋತ್ತರಗಳು… ಎಚ್.ಎಸ್. ಆರ್ ಸರ್ ನಿಮಗೊಂದು ಶರಣು… ಯಾವ ಕಡೆಗೂ ಸೈಡ್ ತೆಗೆದುಕೊಳ್ಳದೆ ಸವಿಸ್ತಾರವಾಗಿ ಮಾತಾಡಿದ್ದೀರಿ ಸರ್…