ವಿಶಾಲ್ ಮ್ಯಾಸರ್
—
ಅದ್ಯಾಕೋ ಗೊತ್ತಿಲ್ಲ
ಮೋಡಗಳು ಒಳಗೊಳಗೇ ಗುಮ್ಮನಗುಸುಗನಂತೆ ಗುದುಮುರುಗಿ ನಡೆಸಿ
ಇತ್ತ ಸುರಿಯದೆಯೂ ಅತ್ತ ಸರಿಯದಯೂ
ಒಪ್ಪಂದವಾಗಿ ತೆಕ್ಕೆ ಬಡಕೊಂಡು
ಹಂಗೆ ಕವಿದುಕೊಂಡು ಕತ್ತಲೆ ಮೂಡಿದೆ
ಇನ್ಯಾಕೋ ಗೊತ್ತಿಲ್ಲ
ಭೂಮ್ತಾಯಿಯ ಎದೆ ಕಿಸಿದು ಬಿಟ್ಟು ಹಸುರಿನ ಪಿಸುರೆ ತಪ್ಪಿ
ಇತ್ತ ನಗದೆಯು ಅತ್ತ ಅಳದೆಯು
ಬೊಚ್ಚುಬಾಯಿಯ ಮುದುಕಿಯಂತೆ ಸುಕ್ಕುಗಟ್ಟಿದ ತುಟಿಗಳನ್ನು ತೆರದೆ ಇದೆ
ಮತ್ಯಾಕೋ ಗೊತ್ತಿಲ್ಲ
ಗಾಳಿಯೂ ಯಾತರದೋ ಹಾಳುಮೂಳು ಬೆನ್ನಿನ ಗೂನಾಗೆ ಹೊತ್ತು ತಂದು
ಇತ್ತ ಸೆರಗಂಟು ಉಚ್ಚದೆ
ಅತ್ತ ನುಂಗಿ ನೀರುಕುಡಿಯದೆಯೂ
ಬಿಸಿತುಪ್ಪದಂತ ಒಗಟೊಂದರ ಹೊಲಿಗೆಗೆ ಸಿಕ್ಕಿ ಮಾತು ಕಳೆದುಕೊಂಡಿದೆ
ಹೀಗ್ಯಾಕೋ ಗೊತ್ತಿಲ್ಲ
ಹೊತ್ತಲ್ಲದ ಹೊತ್ತಾಗೆ
ದೋ ದೋ ಅಂತ ಕಣ್ಣೀರು ಸುರಿದೇ ಬಿಟ್ಟರೆ…?
ಅಪ್ಪಿದ ಮೋಡಗಳು ಹಿಂಗಿ ಹಗುರವಾಗುತ್ತದೆ
ಬಾಯ್ ಬಿಟ್ಟ ನೆಲವು ದಾಹ ತೀರಿಸಿಕೊಳ್ಳುತ್ತದೆ
ಇನ್ನು ಗಾಳಿಯ ಕತೆ
ಮಾತು ಅಡದೆಯು ಹೊಲಿಗೆ ಬಿಚ್ಚಿ ತುಸು ಹೊತ್ತು ಬೆಚ್ಚನ ಉಸಿರು ಬಿಡುತ್ತದೆ
0 ಪ್ರತಿಕ್ರಿಯೆಗಳು