ವಿವೇಕ ರೈ ಅವರಿಗೆ ಕನ್ನಡಿ- ಒಡನಾಟದ ನೆನಪುಗಳು

ನರೇಂದ್ರ ರೈ ದೇರ್ಲ

ಎಷ್ಟೋ ಬಾರಿ ಪಾಠ ಮಾಡಿದವರೆಲ್ಲಾ ಮೇಷ್ಟ್ರಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವುದಿಲ್ಲ. ಕೊಠಡಿಯೊಳಗೆ ಪಾಠ ಮಾಡಿದವರೆಲ್ಲ ಗುರುಗಳಾಗಿ ಒಳಗಡೆ ಇಳಿಯುವುದು, ಉಳಿಯುವುದು ಅವರಲ್ಲಿರುವ ಜ್ಞಾನ, ಸಜ್ಜನಿಕೆ, ವರ್ಚಸ್ಸಿನಿಂದ. ಹಾಗೆ ನನಗೆ ಗುರುಗಳಾದವರು ಪ್ರೊ. ಬಿ. ಎ. ವಿವೇಕ ರೈ. ನಾನವರ ನೇರ ವಿದ್ಯಾರ್ಥಿಯಲ್ಲ. ತರಗತಿಯ ಹೊರಗಡೆಯ ಶಿಷ್ಯ. ಅವರು ಮುಖ್ಯಸ್ಥರಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಡಾ. ಚಿನ್ನಪ್ಪ ಗೌಡರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದೆ.

ನನ್ನ ಮೌಖಿಕ ಪರೀಕ್ಷೆಯ ದಿನ ವಿಭಾಗ ಮುಖ್ಯಸ್ಥರಾಗಿದ್ದ ರೈಯವರು ‘ದೇರ್ಲ ಈವರೆಗೆ ತೇಜಸ್ವಿ, ಬೈರಪ್ಪ, ನರಸಿಂಹಸ್ವಾಮಿ ಪುತಿನ… ಮೊದಲಾದವರಿಗೆ ಪತ್ರಕರ್ತರಾಗಿ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ಇವತ್ತು ನೀವು ಅವರಿಗೆ ಎಸೆಯಿರಿ’ ಎಂದಾಗ ಅದೊಂದೇ ಕಾರಣವಾಗಿಯೋ ಏನೂ ಅದೇ ವಿಭಾಗದ ವೈಚಾರಿಕ ಚಿಂತನೆಯ ಡಾ.ಶೆಟ್ಟರು ನನ್ನನ್ನು ಅವತ್ತು ದೆಪ್ಪದೀಡ ಮಾಡಿದ್ದರು. ಇರಲಿ, ಇವತ್ತು ಮಂಗಳೂರಲ್ಲಿ ಪ್ರೊ. ಅವರ 5 ಪುಸ್ತಕಗಳು ಏಕಕಾಲದಲ್ಲಿ ಬಿಡುಗಡೆಗೊಂಡವು. ಕಾರ್ಯಕ್ರಮಕ್ಕೆ ಬಂದವರನ್ನೆಲ್ಲ ರೈಯವರೇ ಬಾಗಿಲಲ್ಲಿ ನಿಂತು ಸ್ವಾಗತಿಸುತ್ತಿದ್ದರು.

ವೇದಿಕೆಯಲ್ಲಿ ನಾಲ್ಕುಮಂದಿ ಮಾಜಿ ಕುಲಪತಿಗಳು. ಎಲ್ಲರೂ ತೀರಾ ವೈಚಾರಿಕ, ವಿಮರ್ಶಾತ್ಮಕವಾಗಿ ಮಾತನಾಡದೆ ಪ್ರೊಫೆಸರ್ ಜೊತೆಗಿನ ನೆನಪುಗಳನ್ನು ಹಂಚಿಕೊಂಡದ್ದು ಕಾರ್ಯಕ್ರಮವನ್ನು ತುಂಬಾ ಆತ್ಮೀಯಗೊಳಿಸಿತು. ವಿವೇಕರೈಯವರಿಗೆ ಇದೀಗ 75. ಸಾಹಿತ್ಯ ಮತ್ತು ಶೈಕ್ಷಣಿಕ ಅಧಿಕಾರದ ಉನ್ನತ ಸ್ಥಾನವನ್ನು ಅಲಂಕರಿಸಿದ ಅವರ ಜಾಗದಲ್ಲಿ ಬೇರೆ ಯಾರೇ ಇರುತ್ತಿದ್ದರೂ ಇಂದು ಸಾವಿರಾರು ಪುಟದ ಒಂದು ಅಭಿನಂದನ ಗ್ರಂಥ ಜೊತೆಗೆ ಒಂದಷ್ಟು ಕುಶಾಲುತೋಪುಗಳು ಸಿಡಿಯುತ್ತಿದ್ದವು.

ಹಾಗಂತ ಆ ಆಸೆ ರೈಯವರ ವಿದ್ಯಾರ್ಥಿಗಳಲ್ಲಿ ಅಭಿಮಾನಿಗಳಲ್ಲಿ ಒಡನಾಡಿಗಳಲ್ಲಿ ಇರಲಿಲ್ಲವೆಂದಲ್ಲ. ಇತ್ತು. ರೈಯವರು ಅವೆಲ್ಲವನ್ನು ಸಾರಾಸಗಟಾಗಿ ವಿರೋಧಿಸಿ ಇವತ್ತು ತನ್ನದೇ ಐದು ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ, ತನ್ನೊಂದಿಗೆ ಸಂವಾದ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಹಗುರವಾಗಿದ್ದಾರೆ.

ಜೊತೆಗೆ ಇಂಥ ಸನ್ಮಾನ ಅಭಿಮಾನಪ್ರಿಯ ಹುಚ್ಚು ಪರಂಪರೆಗೆ ಒಂದು ಹೊಸ ಮಾದರಿಯನ್ನು ತೋರಿದ್ದಾರೆ. ‘ಒಡನಾಟದ ನೆನಪುಗಳು’ ಸಂಪಾದಿಸಿದವರು ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್. ಇಲ್ಲಿ ಐದು ಜನರು ರೈ ಅವರ ಶೈಕ್ಷಣಿಕ ಕಾರ್ಯ ವಿನ್ಯಾಸ, ಆಡಳಿತ ಚತುರತೆಯನ್ನು ಮತ್ತು ಆ ಕಾರಣಕ್ಕಾಗಿ ತಾವು ಅವರನ್ನು ಮೆಚ್ಚಿಕೊಂಡ, ಅನುಕರಿಸಿದ ವಿವರಗಳನ್ನು ದಾಖಲಿಸಿದ್ದಾರೆ.

ಇದೊಂದೇ ಪುಟ್ಟ ಪುಸ್ತಕ ಸಾಕು, ಅಭಿನಂದಿಸಲು ಹಾತೊರೆಯುವವರಿಗೆ. ಇಲ್ಲಿಯ ಯಾವ್ದೇ ಬರಹಗಳು ನಿರಾಶೆಗೊಳಿಸುವುದಿಲ್ಲ. ಆದರೆ ಇಲ್ಲಿ ‘ನನ್ನದೂ ಒಂದು ಪುಟ್ಟ ಬರಹ ಇರಬೇಕಿತ್ತು’ ಎಂದು ಅನಿಸುವುದು ಮಾತ್ರ ಸತ್ಯ. ರೈಯವರು ನೂರು ತುಂಬುವ ಹೊತ್ತಿಗೆ ಮತ್ತಷ್ಟು ಹೊತ್ತಗೆಯನ್ನು ಬಿಡುಗಡೆಗೊಳಿಸಲಿ. ಆಗಲೂ ಅವು ಅವರನ್ನು ಅಭಿನಂದಿಸುವ ಪರ್ಯಾಯಗಳೇ ಆಗಲಿ ಎಂದು ಆಶಿಸುವೆ.

‍ಲೇಖಕರು Admin

January 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: