ಪ್ರತಿಕ್ರಿಯೆಗೆ ಸ್ವಾಗತ
ನಿಮ್ಮ ಪ್ರತಿಕ್ರಿಯೆಗಳನ್ನು [email protected] ಗೆ ಕಳಿಸಿಕೊಡಿ
ಗಿರಿಜಾ ಶಾಸ್ತ್ರಿ
ಮೊನ್ನೆ ಗೆಳತಿ ಭಾಗ್ಯ ಫೋನಿನಲ್ಲಿ ಮಾತನಾಡುವಾಗ ‘ಓಡಿ ಹೋಗುವವಳು ಹಾಲಿಗೆ ಹೆಪ್ಪುಹಾಕಿ ಹೋಗ್ತಾಳಾ?’ ಎನ್ನುವ ಗಾದೆಯನ್ನು ಹೇಳಿದ್ದರು. ನಾವು ಆ ಕ್ಷಣಕ್ಕೆ ಹೊಟ್ಟೆ ತುಂಬಾ ನಕ್ಕಿದ್ದೆವು. ಈಗ ಎನಿಸುತ್ತದೆ ಇಂತಹ ಗಾದೆಗಳನ್ನು, ಜೋಕುಗಳನ್ನೆಲ್ಲಾ ನಾವು ಪ್ರೋತ್ಸಾಹಿಸಬಾರದು. ಸಾಮಾನ್ಯವಾಗಿ ನನಗೆ ಇಂತಹ ಜೋಕುಗಳು ನಗೆಯನ್ನುಂಟುಮಾಡುವುದಿಲ್ಲ ಬದಲಾಗಿ ಕೋಪವನ್ನೇ ತರಿಸುತ್ತವೆ. ಬಹಳ ಜೋಕುಗಳು ಹೀಗೆ ಹೆಂಗಸರ ಮೇಲೆಯೇ ಇರುತ್ತವೆ. ಹೆಣ್ಣಿನ ಸಹವಾಸದಿಂದ ಬೇಸತ್ತ ಗಂಡಿನ ಜೋಕುಗಳು ಅವು.
ಹೀಗೆ ನಮ್ಮ ಸ್ನೇಹಿತರೊಬ್ಬರು ನನ್ನ ಕಾಲೆಳೆಯಲೆಂದೇ ಸ್ತ್ರೀವಿರೋಧಿಯಾದ ಇಂತಹ ಜೋಕುಗಳನ್ನು ನನಗೆ ವಾಟ್ಸಾಪ್ ನಲ್ಲಿ ಕಳಿಸುತ್ತಿರುತ್ತಾರೆ. ‘ನೀವು ಹೀಗೆಯೇ ಸ್ತ್ರೀವಿರೋಧಿ ಜೋಕುಗಳನ್ನು ಕಳಿಸುತ್ತಿದ್ದರೆ, ಇನ್ನು ಮೇಲೆ ಇದೇ ತರಹ counter ಜೋಕುಗಳನ್ನು ಪುರುಷರ ಮೇಲೆ ನಾನೇ ರಚಿಸಿ ದಿನಕ್ಕೊಂದು ವಾಟ್ಸಾಪ್ ನಲ್ಲಿ ಬಿಡುತ್ತೇನೆ ನೋಡಿ’ ಎಂದು ಧಮ್ಕಿ ಹಾಕಿದ್ದೇನೆ. ಹೌದು ಪುರುಷ ವಿರೋಧಿ ಜೋಕುಗಳು ನಮ್ಮಲ್ಲಿ ಹೆಚ್ಚಾಗಿ ಇಲ್ಲ. ಯಾಕೆಂದರೆ ಸ್ತ್ರೀಯರು ಪುರುಷ ವಿರೋಧಿಗಳಲ್ಲ. ಹಾಗೆಂದು ಎಲ್ಲಾ ತಮಾಷೆಗಳನ್ನು ಹೆಂಗಸರು ನೋಡಿಕೊಂಡು, ಸಹಿಸಿಕೊಂಡು ಬಾಯಿ ಮುಚ್ಚಿಕುಳಿತಿರುತ್ತಾರೆ ಎಂದೂ ಅಲ್ಲ.
ಕೆಲವೊಮ್ಮೆ ಏಟಿಗೆ ಎದಿರೇಟು ಕೊಡಲೇ ಬೇಕಾಗುತ್ತದೆ. ತಮಾಷೆ ಮಾಡುವವರ ಬಾಯಿ ಮುಚ್ಚಿಸಲು! ಈ ಮೂಲಕ ತಮ್ಮ ಪ್ರಾಧಾನ್ಯತೆಯನ್ನು ಮೆರೆಯಲು ಯತ್ನಿಸುವವರಿಗೆ ಬುದ್ದಿಕಲಿಸಲು ಮೊದಲಾದರೆ ಕೇವಲ ಪತ್ರಿಕೆಗಳಲ್ಲಿ ಇವು ಕಾಣಿಸಿಕೊಳ್ಳುತ್ತಿದ್ದವು. ಈಗೀಗ ವಾಟ್ಸಾಪ್, ಫೇಸ್ ಬುಕ್ ವೇದಿಕೆಗಳಿಂದಾಗಿ ಇವುಗಳ ಹಾವಳಿ ಇನ್ನೂ ಹೆಚ್ಚಿವೆ. ನಮ್ಮ ಸಮಾಜದಲ್ಲಿ ಹೆಂಗಸರ ಮೇಲೆಯೇ ಹೆಚ್ಚು ತಮಾಷೆಯ ಮಾತುಗಳೂ ಗಾದೆಗಳೂ ಬೈಗುಳಗಳೂ ಇವೆ.
ಇಬ್ಬರು ಗಂಡಸರು ಪರಸ್ಪರ ಜಗಳವಾಡುವಾಗಲೂ ಅವರು ತಮ್ಮ ಪರಸ್ಪರರ ಮನೆಯ ಹೆಂಗಸರನ್ನು ಮುಂದಿಟ್ಟುಕೊಂಡೇ ಬೈದಾಡುತ್ತಾರೆ. ಆ ಪಾಪದ ಹೆಂಗಸರು ಎಲ್ಲೋ ಅಡುಗೆ ಮನೆಯಲ್ಲಿ ಕಾಳು ಬೇಳೆ ಹೊಂದಿಸುವುದರಲ್ಲಿ ಹೈರಾಣಾಗುತ್ತಿರುತ್ತಾರೆ. ಈಗ ಹಾಲಿಗೆ ಹೆಪ್ಪುಹಾಕುವ ಗಾದೆಯ ವಿಚಾರವನ್ನೇ ತೆಗೆದು ಕೊಳ್ಳಿ. ಹಾಲಿಗೆ ಹೆಪ್ಪು ಹಾಕುವುದು ಹೆಣ್ಣಿನ ಜವಾಬ್ದಾರಿ. ಅದು ಗಂಡಿನ ಕೆಲಸವೇನಲ್ಲವಲ್ಲ? ಓಡಿ ಹೋಗುವುದು ಬೇಜವಾಬ್ದಾರಿ. ಈ ಓಡಿ ಹೋಗುವ ಶಬ್ದದಲ್ಲಿಯೇ ಒಂದು ರೀತಿಯ ಸಾಮಾಜಿಕ ಹೇವರಿಕೆ ಇದೆ. ಅದು ಹೆಣ್ಣಿನ ಬಗೆಗೆ ಇರುವ ಹೇವರಿಕೆಯೂ ಹೌದು.
ಈ ಹೇವರಿಕೆಯೇ ಬೇಜವಾಬ್ದಾರಿಯ ರೂಪ ಪಡೆದುಕೊಂಡಿದೆ. ಗಂಡು ಓಡಿ ಹೋಗಲು ಸಾಧ್ಯವಿಲ್ಲ. ‘ಅವರ ಮಗ ಓಡಿಹೋದನಂತೆ’ ( ಮನೆ ಬಿಟ್ಟು ಓಡಿಹೋಗುವುದು ಬೇರೆ) ಎಂದು ಯಾರೂ ಹೇಳುವುದಿಲ್ಲ. ಅವನು ಓಡಿಸಿಕೊಂಡು ಹೋಗುತ್ತಾನೆ ಅಷ್ಟೇ. ಅವರಿಬ್ಬರೂ ಓಡಿ ಹೋಗಿ ಮದುವೆಯಾದರಂತೆ ಎಂಬ ಮಾತುಗಳು ಇದ್ದರೂ ಓಡಿ ಹೋಗುವವಳು ಮಾತ್ರ ಹೆಣ್ಣೇ ಆಗಿರುತ್ತಾಳೆ. ಹೀಗೆ ಓಡಿಹೋಗಿ ಮದುವೆಯಾದ ಹೆಣ್ಣಿನ ಗುರುತು ಎಂದಿಗೂ ಓಡಿಹೋದ ಸ್ಟೇಟಸ್ ಜೊತೆಗೇ ಅಂಟಿಕೊಂಡಿರುತ್ತದೆ.
ಅಪ್ಪ ಅಮ್ಮ ಹೇಳಿದ ವರನನ್ನು ವಿಧೇಯತೆಯಿಂದ ಮದುವೆಯಾದ ಹೆಣ್ಣಿನ ಬಗೆಗೆ ಮಾತಾನಾಡುವಾಗ ‘ನಿಮ್ಮ ಮಗಳನ್ನು ಎಲ್ಲಿಗೆ/ ಯಾರಿಗೆ ಕೊಟ್ಟಿರಿ?’ ಎನ್ನುವ ಮರ್ಯಾದೆಯ ಭಾಷೆ. ಅದೇ ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದವಳ ಬಗ್ಗೆ ಮಾತನಾಡುವಾಗ ‘ಆ ….ನ ಕಟ್ಕೊಂಡಿದ್ದಾಳಲ್ಲಾ/ಮಾಡ್ಕೊಂಡಿದ್ದಾಳಲ್ಲಾ ಅವಳಾ?’ ಒಂದು ಮಾಡಿಕೊಟ್ಟಿರುವುದಾದರೆ ಇನ್ನೊಂದು ಮಾಡಿಕೊಂಡಿರುವುದು. ನಮ್ಮ ಸಮಾಜದ ಭಾಷೆಯಲ್ಲಿ ಎರಡಕ್ಕೂ ಬಹಳ ಅರ್ಥವ್ಯತ್ಯಾಸಗಳಿವೆ.
ಒಂದು ಪುರಸ್ಕೃತ ಇನ್ನೊಂದು ತಿರಸ್ಕೃತ.ಇಂತಹ ಸಾಮಾಜಿಕ ಪೂರ್ವಾಗ್ರಹಗಳು ಎಷ್ಟೋ ಇವೆ.ಈಗೀಗ ಅವು ಮೇಲುನೋಟಕ್ಕೆ ಬದಲಾಗುತ್ತಿರುವಂತೆ ಕಾಣುತ್ತಿವೆ. ಆದರೂ ಮೂಲಭೂತವಾಗಿ ಇವುಗಳ ಪರಿಕಲ್ಪನೆಗಳ ಮಾತ್ರ ಇನ್ನೂ ಬದಲಾಗಿಲ್ಲ. ಅವು ಬದಲಾದ ರೂಪಗಳಲ್ಲಿ (ಉದಾ: ಜೋಕುಗಳು) ಕಾಣಿಸಿಕೊಳ್ಳುತ್ತಿವೆ.
ನಮ್ಮ ಬೈಗುಳಗಳ ಬಗೆಗೆ ಅಧ್ಯಯನ ನಡೆದಿರುವುದಾಗಿ ಕೇಳಿದ್ದೇನೆ. ಆದರೆ ನಮ್ಮ ಗಾದೆಗಳನ್ನು, ಬೈಗುಳಗಳನ್ನು ಈಗ ಹರಿಯಬಿಡುತ್ತಿರುವ ಸ್ತ್ರೀವಿರೋಧಿ ಜೋಕುಗಳನ್ನು ಸಾಮಾಜಶಾಸ್ತ್ರೀಯ ವಿಧಾನದಲ್ಲಿ ಅಧ್ಯಯನ ಮಾಡಿದರೆ ಒಂದು ಒಳ್ಳೆಯ ಸಂಶೋಧನೆಯಾಗಬಹುದು.
ಗಿರಿಜಾ ಮೇಡಂ, ಸರಿಯಾಗಿದೆ ಪ್ರತಿಪಾದನೆ.
ನಾನು ಈ ಗಾದೆ, ‘ ಓಡಿ ಹೋದವ…’ ತೀರ ಇತ್ತೀಚೆಗೆ ಕೇಳಿದ್ದು. ಆಗ ನನಗೆ ನೀವು ಬರೆದಂತೆಯೇ ಅನ್ನಿಸಿತ್ತು.