ವಿಭಿನ್ನ ಕಥಾವಸ್ತುವಿನ ‘ಬಂಜೆತನ ಬಯಸಿದವಳು’

ಗೀತಾ ಕುಂದಾಪುರ

ಸಂಪಾದಕ, ಕಥೆಗಾರ, ಅನುವಾದಕ, ಪತ್ರಕರ್ತ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಸುಮಾರು 2-3 ದಶಕಗಳ ಹಿಂದೆ ಬರೆದ ಕಥೆಗಳ ಸಂಗ್ರಹವಿದು, ಹಾಗೆಂದಾಗ ಇದು ಪ್ರಸ್ತುತ ಕಾಲಕ್ಕೆ ಪ್ರಸ್ತುತವೇ ಅನ್ನುವ ಅನುಮಾನ ಬರುವುದು ಸಹಜ. ಪುಸ್ತಕ ಕೈಗೆತ್ತಿಕೊಂಡ 5 ನಿಮಿಷಕ್ಕೇ ಅನುಮಾನ ದೂರವಾಗುತ್ತದೆ, ಬಹಳ ಪ್ರಬುದ್ಧವಾದ ಸಮಕಾಲೀನ ಕಥೆಗಳು. ಇಲ್ಲಿರುವ ಎಲ್ಲಾ ಕಥೆಗಳೂ ಒಂದಲ್ಲ ಒಂದು ಪತ್ರಿಕೆಯಲ್ಲಿ ಪ್ರಕಟವಾದವುಗಳೇ…

14 ಕಥೆಗಳ ಕಥಾ ಗುಚ್ಚ, ಪುಸ್ತಕದ ಶೀರ್ಷಿಕೆಯೇ ಆಕರ್ಷಕ. ಪ್ರತಿಯೊಂದೂ ಕತೆಯೂ ಒಂದು ಮತ್ತೊಂದಕ್ಕಿಂತ ಭಿನ್ನ.

ಕತೆಗಳಲ್ಲಿ ಕತೆ ಇದೆ, ಎಲ್ಲಿಯೂ ಭಾವನೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗಿ ‘ಕತೆ’ ನಮ್ಮಿಂದ ದೂರವಾಗಿ ಉಳಿದಿಲ್ಲ, ಅಂತೆಯೇ ಭಾವನೆಗಳು, ಒಳ ತುಡಿತಗಳಿಲ್ಲದೆ ಕೇವಲ ಘಟನೆಗಳಿಂದ ಕೂಡಿಲ್ಲ. ಎಲ್ಲವೂ ಕತೆಗೆ ತಕ್ಕಂತೆ, ಪಾತ್ರಗಳಿಗೆ ತಕ್ಕಂತೆ ಹಿತಮಿತವಾಗಿ ಇದೆ.  ಕತೆಯ ಪರಿಸರವೂ ಒಂದು ಮತ್ತೊಂದಕ್ಕಿಂತ ಭಿನ್ನ, ನಗರದ ಆಫೀಸು, ಕಾಲೇಜು, ಗ್ರಾಮ ಪ್ರದೇಶ, ಹಳ್ಳಿ ಎನ್ನುತ್ತಾ ಕತೆಗಳು ಎಲ್ಲಾ ಕಡೆ ಹುಟ್ಟಿ ಬೆಳೆಯುತ್ತವೆ.

‘ಎನ್ನೇಬಿ’ಯವರು ಕತೆ ಹೇಳುವ ಪರಿಯೇ ಚಂದ, ಸೂಕ್ಷ್ಮವಾಗಿ ಪಾತ್ರಗಳನ್ನು ಪರಿಚಯಿಸಿ, ಸಂಭಾಷಣೆಯೊಂದಿಗೆ ಘಟನೆಗಳನ್ನು ಕಟ್ಟಿಕೊಡುತ್ತಾ, ಮುಂದೇನು ಎನ್ನುವ ಕುತೂಹಲ ಕೆರಳಿಸುತ್ತಾ ಸಾಗಿ ಕೊನೆಯಲ್ಲಿ ತಿರುವಿನೊಂದಿಗೆ ಕತೆಯನ್ನು ಮುಗಿಸುತ್ತಾರೆ. ಇದರಲ್ಲಿ ಕತೆಯಾಗಲಿ, ಘಟನೆಗಳಾಗಲಿ ಸತ್ಯಕ್ಕೆ ಹತ್ತಿರವಾಗಿದೆಯೇ ಎನ್ನುವ ಕುತೂಹಲ ಬೇಡ, ಕತೆ ಎಂದರೆ ಕಾಲ್ಪನಿಕ ತಾನೇ ಹಾಗೆಯೇ ತೆಗೆದುಕೊಂಡರೆ ಸಾಕು. ಕತೆಗೊಂದು ಅಂತ್ಯ ಸಾವಲ್ಲ, ಸಾವು ಪರಿಹಾರವೂ ಅಲ್ಲ, ಒಂದೆರಡು ಕಡೆ ಕೊನೆಯಲ್ಲಿ ಸಾವು ಬಂದರೂ ಅದು ಸಹಜವಾಗಿಯೇ ಹೊರತು ಪರಿಹಾರವಾಗಿ ಅಲ್ಲ.

‘ಎನ್ನೇಬಿ’ಯವರು ಗೆಲ್ಲವುದು ಕಥೆಯ ಪ್ರಸ್ತುತಿಯಲ್ಲಿ, ಇಲ್ಲೇ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಕಣ್ಣಿಗೆ ಕಟ್ಟಿದಂತಹ ನಿರೂಪಣೆ, ಚುರುಕು ಸಂಭಾಷಣೆ, ಕಥಾವಸ್ತುವಿನಲ್ಲಿರುವ ನವೀನತೆಯೇ ಕಥೆಗಳ ಗೆಲುವಿಗೆ ಕಾರಣ.

ಕಥಾಸಂಕಲದಲ್ಲಿರುವ ಹೆಚ್ಚಿನವು ಪುರುಷ ಪ್ರಧಾನ ಕಥೆಗಳು. ಗಂಡಸಿನ ಹಲವು ಮುಖಗಳನ್ನು ಮುಲಾಜಿಲ್ಲದೆ ನಮ್ಮೆದುರು ತೆರೆದಿಡುತ್ತಾರೆ.  ಕಥಾನಾಯಕ ಎಲ್ಲಿಯೂ ಸಿಡಿದೇಳುವುದಿಲ್ಲ, ಆದರ್ಶವನ್ನು ಹೇಳುತ್ತಿಲ್ಲ, ಒಂದು ಚೌಕಟ್ಟಿನಲ್ಲಿದ್ದುಕೊಂಡೇ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ಅದೇ ಹೆಣ್ಣನ್ನು ಕ್ರಾಂತಿಕಾರಿಯಾಗಿ ತೋರಿಸಿದ್ದಾರೆ, ತನ್ನ ಪರೀದಿಯಿಂದ ಹೊರಗೆ ಹೆಜ್ಜೆ ಇಟ್ಟಿದ್ದಾಳೆ. ಕ್ರಾಂತಿ, ಮಾಡರ್ನ್ ಎನ್ನುತ್ತಾ ತಾನೇ ಮೋಸ ಹೋಗಿದ್ದೂ ಇದೆ, ಸ್ವಾರ್ಥಿಯಾಗಿ ಗಂಡನ್ನು ಗಂಡನನ್ನಾಗಿಸಿಕೊಂಡು ಅವನ ಗೋರಿ ಕಟ್ಟಿ ಅದರ ಮೇಲೆ ಪ್ರಶಸ್ತಿ ಪಡೆಯಲು ಬಯಸಿದ್ದೂ ಇದೆ, ಸರಿಯೆಂದು ತೋರಿದಾಗ ಬುದ್ಧಿಮಾಂದ್ಯ ಮಗನಿಗೊಸ್ಕರ ವಿವಾಹ ಬಂಧನವನ್ನೂ ತೊರೆಯುತ್ತಾಳೆ.

ಹಾಗೆಯೇ ಹಲವು ಸಮಾಜದ ಪೀಡುಗಗಳು ಕಥೆಗಳಲ್ಲಿ ಬಂದು ಹೋಗುತ್ತವೆ ಉದಾಹರಣೆಯಾಗಿ ಜಾತಿ ಪದ್ಧತಿ, ಮೂಡ ನಂಬಿಕೆ, ಜಮೀನುದಾರನ ದಬ್ಬಾಲಳಿಕೆ, ಹೆಣ್ಣಿನ ಶೋಷಣೆ,ಕ್ರಾಂತಿಯ ಹೆಸರಿನಲ್ಲಿ ನಡೆಯುವ ಸೋಗಲಾಡಿತನ. 

ನಾನು ಅತಿ ಹೆಚ್ಚು ಇಷ್ಟಪಟ್ಟ ಕತೆ ಪೂರ್ಣಗ್ರಹಣ-ಕುರೂಪಿ ಬುದ್ಧಿಮಾಂದ್ಯ ಮಗುವನ್ನು ತಂದೆಯಾದವನು ದೂರ ಮಾಡಿದಾಗ ಒಂಟಿಯಾಗಿ ಮಗುವನ್ನು ಸಾಕಲು ನಿರ್ಧರಿಸುತ್ತಾಳೆ ತಾಯಿ, ಇಷ್ಟೆಲ್ಲಾ ಕಷ್ಟಪಡುವ ಬದಲು ತಾನು ‘ಬಂಜೆಯಾಗಿದ್ದರೆ ಚೆನ್ನಾಗಿತ್ತೆಂದು’ ಹೇಳಿಕೊಳ್ಳುತ್ತಾಳೆ, ಇದೇ ಕಥಾಸಂಕಲನದ ಶೀರ್ಷಿಕೆ. ಬುದ್ಧಿಮಾಂದ್ಯ ಮಗುವನ್ನು ಸಾಕಲು ಗೆಳತಿಯೊಬ್ಬಳು ಸಹಾಯ ಮಾಡುತ್ತಾಳೆ. ತಾಯಿ ಪ್ರೀತಿಯೇ ಅಂತಹದ್ದು ಯಾವುದೂ ತಡೆಗೋಡೆಯಲ್ಲ, ಎಲ್ಲದನ್ನೂ ಮೀರಿ ನಿಲ್ಲುವ ಶಕ್ತಿ ಇದೆ.

ಮತ್ತೊಂದು ಗಮನ ಸೆಳೆಯುವ ಕತೆ ‘ಭೂತಬಲಿ’. ಭೂತ, ನೇಮ, ಕೋಲ, ನಮ್ಮ ತುಳು ನಾಡಿನ ಸಂಸ್ಕೃತಿ, ಇದರ ಹಿನ್ನೆಲೆಯಲ್ಲಿ ಹೆಣೆದ ಕತೆ. ತಂದೆ ತನಗಾದ ಮೋಸಕ್ಕೆ ಕುಟುಂಬದವರೊಡನೆ ಸಿಡಿದೆದ್ದಾಗ ಮಗ ಸಂಪ್ರದಾಯ, ಹಿರಿಯರು, ಮನೆತನದತ್ತ ಮುಖ ಮಾಡುತ್ತಾನೆ. ಭೂತ ಕೋಲದ ಸಮಗ್ರ ದರ್ಶನವನ್ನು ಲೇಖಕರು ಓದುಗನಿಗೆ ತೆರೆದಿಡುತ್ತಾರೆ, ಓದುಗನಿಗೆ ಇದರಲ್ಲಿ ನಂಬಿಕೆ ಇರಲಿ, ಇಲ್ಲದಿರಲಿ, ಇದೊಂದು ನಮ್ಮ ಸಂಸ್ಕೃತಿಯ ಭಾಗವೆಂದು ತೆಗೆದುಕೊಂಡರಾಯಿತು.

ಬಹಳ ಪ್ರಬುದ್ಧ ಕಥೆ ನನ್ನ ಬಾಲ್ಯದ ದಿನಗಳು’ ಮತ್ತು ‘ಕ್ರಾಂತಿ’ಯದ್ದು. ಆದರೆ ಎರಡರಲ್ಲೂ ಹೆಣ್ಣು ಸ್ವಾರ್ಥಿ, ಕ್ರಾಂತಿಕಾರ ಮನೋಭಾವದವಳು. ಕಥೆ ‘ನನ್ನ ಬಾಲ್ಯದ ದಿನಗಳು’ಯಲ್ಲಿ ಹೆಣ್ಣು ಸಹ ಉದ್ಯೋಗಿಯನ್ನು ಮದುವೆಯಾಗಿ, ಇವನಿಂದ ನಾನು ಶೋಷಣೆಗೆ ಒಳಗಾದೆನೆಂದು ತೋರಿಸಿ ಪ್ರಶಸ್ತಿ ಗಿಟ್ಟಿಸಲು ಹೊರಟಾಗ ತಾನೇ ಬಲಿಯಾಗುವ ಕತೆ, ಕತೆಯೊಳಗೊಂದು ಕತೆ ತೋರಿಸಿ ಕತೆಯನ್ನು ಪ್ರಸ್ತುತ ಪಡಿಸಿದ ರೀತಿ ಇಷ್ಟವಾಗುತ್ತದೆ. ‘ಕ್ರಾಂತಿ’ಯಲ್ಲಿ ಪ್ರಚಾರಕ್ಕಾಗಿ ಕೃತಕ ಪ್ರೀತಿ ತೋರಿಸಿದ ಹೆಣ್ಣು ಕಥೆಗಾರನಿಗೆ ಬೈ ಹೇಳಿ, ಪ್ರೀತಿಸಿದವನ ಹಿಂದೆ ನಡೆದು ತಾನು ಕ್ರಾಂತಿ ಮಾಡಿದೆನೆಂದುಕೊಳ್ಳುವಾಗ ಕಹಿ ವಾಸ್ತವ ಎದುರಾಗುತ್ತದೆ.

ಕಥಾಸಂಕಲನದಲ್ಲಿ ಬಹಳ ಸಿಹಿಯಾದ ಕತೆ ‘ಏಕಸೂತ್ರ’ದ್ದು, ಗಂಡ, ಹೆಂಡತಿಯ ಪ್ರೀತಿ, ಗಂಡು ವರದಕ್ಷಿಣೆ ತೆಗೆದುಕೊಂಡು ಮದುವೆಯಾದರೂ ತನ್ನ ಮಾವನಿಗೆ ಆವಶ್ಯಕತೆ ಬಂದಾಗ ಅದನ್ನೇ ಬಡ್ಡಿ ಸಮೇತ ಹಿಂತಿರುಗಿಸಿ ಕೊಡುವ ಸುಂದರ ಕತೆ.

ಒಂದು ಹುಡುಗಿ ತಂದೆಯಿಂದಲೇ ವೇಶ್ಯೆಯಾಗುವ ಕ್ರೂರ ಕತೆ ‘ತಕ್ಷಕ’. ಕಥೆ ಓದುತ್ತಾ ಹೋದಂತೆ ಇಂತಹದ್ದು ಅಲ್ಲಿ, ಇಲ್ಲಿ ನಡೆದಿದ್ದರೂ ಓದುವಾಗ ಅರಗಿಸಿಕೊಳ್ಳುವುದು ಕಷ್ಟವೆನಿಸುತ್ತದೆ.

ಬಿಳಕಿನ ಕಿಂಡಿ, ಬೇಲಿ, ಮುಕ್ಕಣ್ಣ, ಅತಿವೃಷ್ಟಿ, ಓಟ, ಋತುಭೇದ, ಖಾಲಿ ಕುರ್ಚಿ ಎಲ್ಲವೂ ವಿಭಿನ್ನ ಪರಿಸರ, ವಿಭಿನ್ನ ಕಥಾವಸ್ತು. ಆದ್ದರಿಂದಲೇ ಇರಬೇಕು ಎಲ್ಲವನ್ನೂ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ.

ವಿಭಿನ್ನ ಕಥಾವಸ್ತುವಿನ ಸುಂದರ ಪ್ರಸ್ತುತಿಯ ಕಥಾಸಂಕಲನ ‘ಬಂಜೆತನ ಬಯಸಿದವಳು’.

‍ಲೇಖಕರು Avadhi

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: