ಡಾ ಬಿ ಎ ವಿವೇಕ ರೈ
**
ಖ್ಯಾತ ಸಾಹಿತಿ ಕುಂವೀ ಅವರ ಹೊಸ ಕಾದಂಬರಿ ‘ಮಾಕನಡುಕು’.
ವಸಂತ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕಾದಂಬರಿ ಕುರಿತು ಹೆಸರಾಂತ ಸಾಹಿತಿ ಹಾಗೂ ವಿಮರ್ಶಕರಾದ ಡಾ ಬಿ ಎ ವಿವೇಕ ರೈ ಅವರು ಬರೆದ ಬರಹ ಇಲ್ಲಿದೆ.
**
ಕುಂ ವೀರಭದ್ರಪ್ಪನವರ ಇತ್ತೀಚಿನ ಕಾದಂಬರಿಗಳನ್ನು ಓದುವುದೆಂದರೆ ಅದೊಂದು ಸಾಹಸಯಾತ್ರೆಯಿದ್ದಂತೆ. ಅದರಲ್ಲಿ ಗುರಿ ಮುಟ್ಟುತ್ತೇವೆ ಎನ್ನುವಷ್ಟರಲ್ಲಿ ಅದು ಮತ್ತೆ ಯಾವುದೊ ಕಡೆಗೆ ಹೋಗುವ ದಾರಿಯಲ್ಲಿ ಮುಕ್ತಮುಕ್ತಾಯವನ್ನು ಘೋಷಿಸಿ ನಮ್ಮನ್ನು ತಬ್ಬಿಬ್ಬು ಮಾಡುತ್ತದೆ. ಕುಂವೀ ಕಾದಂಬರಿಗಳ ಸೊಗಸೇ ಅದು. ಅವರ ‘ಮಾಕನಡುಕು’ ಕಾದಂಬರಿ ಓದಿದಾಗ ಮತ್ತೆ ಹಾಗೆಯೆ ಅನ್ನಿಸಿತು. ಎಂದಿನಂತೆ ಕುಂವೀ ಅವರ ಕಥನ ಶೈಲಿ ಕನ್ನಡ ಸಾಹಿತ್ಯದಲ್ಲಿ ಅನನುಕರಣಿಯ. ಅವರು ಬಳಸುವ ಭಾಷೆಯ ವೈವಿಧ್ಯಗಳು, ತೀರಾ ಗ್ರಾಮೀಣ ಭಾಷೆಯ ಪಕ್ಕದಲ್ಲೇ ವ್ಯಂಗ್ಯದ ನುಡಿಗಟ್ಟುಗಳನ್ನು ಬಳಸುವುದು, ವಾಕ್ಯರಚನೆಯಲ್ಲಿ ಅನಿಶ್ಚಿತತೆಯ ಮೂಲಕವೇ ಸನ್ನಿವೇಶಗಳ ಅನಿಶ್ಚಿತತೆಯನ್ನು ಸೂಚಿಸುವುದು, ಅಂಕಿತನಾಮಗಳಿಗೆ ಪರ್ಯಾಯವಾಗಿ ರೂಪಕದ ಪರ್ಯಾಯನಾಮಗಳನ್ನು ಬಳಸುವುದು, ಘಟನೆಗಳನ್ನು ಅನಾಮತ್ತಾಗಿ ಭ್ರಮಾ ಲೋಕಗಳಿಗೆ ಕೊಂಡೊಯ್ಯುವುದು -ಇಂತಹ ಅನೇಕ ಕಥನಶೈಲಿಯ ಮಾಂತ್ರಿಕ ಕುಂವೀ.

ಅವರ ಕಥನಸಾಹಿತ್ಯದ ಶೈಲಿಯನ್ನು ಕುರಿತೇ ಅನೇಕ ಆಯಾಮಗಳಲ್ಲಿ ಸಂಶೋಧನೆ ಮಾಡಲು ಅವಕಾಶಗಳಿವೆ. “ಇದು ನನ್ನ ಸ್ವಾನುಭವದ ಹಿನ್ನೆಲೆಯ ಕಾದಂಬರಿ. ವಾಗಿಲಿ, ಮಾಸೂರು, ಗೂಳ್ಯಮ್ ಗಳಲ್ಲಿ ದೈಹಿಕವಾಗಿಯೂ, ಸ್ಟೂವರ್ಟ್ ಪುರಂ, ನಲ್ಲಮಲ ಅರಣ್ಯದ ಅಂಚಿನಲ್ಲಿರುವ ಎರುಕಲ ಲಂಬಾಡಿ ತಾಂಡಗಳು, ಚೆನ್ನಂಪಲ್ಲಿ ಅಮರಾಬಾದ್ ಗಳಲ್ಲಿ ಮಾನಸಿಕವಾಗಿಯೂ ಒಡನಾಡಿದ್ದು ಸುಮಾರು ಐವತ್ತು ವರ್ಷಗಳ ಹಿಂದೆ. ಅವರ ಅರ್ಥವಾಗದ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು. ಅದಕ್ಕೆ ವೆರಿಯರ್ ಎಲ್ವಿನ್ ಕೃತಿಗಳ ಓದಿನ ಪ್ರಭಾವ ಸಹ ಇತ್ತು.” ಈರೀತಿ ಕುಂವೀ ಕಾದಂಬರಿಯ ಕರ್ತೃವಿನ ಮಾತುಗಳಲ್ಲಿ ಹೇಳಿಕೊಂಡಿದ್ದಾರೆ. ಪ್ರಾಥಮಿಕ ಶಾಲೆಯ ಒಬ್ಬ ಶಿಕ್ಷಕನ ವರ್ಗಾವಣೆಯ ಉಪಾಖ್ಯಾನದಿಂದ ಆರಂಭವಾಗುವ ‘ಮಾಕನಡುಕು’ ಕಾದಂಬರಿಯು ಆತನು ಮಾಕನಡುಕು ಊರಿನಲ್ಲಿ ಚಾರ್ಜ್ ತೆಗೆದುಕೊಂಡ ವೆಂಕಟರಾಮುಡು ಎಂಬ ಪ್ರಳಯಾಂತಕ ಶಿಕ್ಷಕನು ರಾಜಕೀಯ ಪ್ರಭಾವದ ಸಹಿತ ಅಲಕನಿರಂಜನಪುರಿ ಮಠದ ವಿಸ್ಮಯಾನಂದಾರೂಢ ಸ್ವಾಮಿ ಎಂಬ ಕಪಟ ಹೆಸರಿನಲ್ಲಿ ಮಠ ಕಟ್ಟಿಕೊಂಡಲ್ಲಿಗೆ ಆಡಳಿತಾಧಿಕಾರಿಯಾಗಿ ವರ್ಗಾವಣೆ ಪತ್ರ ಪಡೆಯುವಲ್ಲಿ ಮುಕ್ತಾಯವಾಗುತ್ತದೆ.

೩೪೩ ಪುಟಗಳ ಹರಹಿನ ಈ ಕಾದಂಬರಿಯ ಉದ್ದಕ್ಕೂ ಮಾಕನಡುಕುವಿನ ವಿಶ್ವರೂಪ ಬಗೆಬಗೆಗಳಲ್ಲಿ ತೆರೆದುಕೊಳ್ಳುತ್ತದೆ. ಇದರಲ್ಲಿ ಮತ್ತೆ ಮತ್ತೆ ಗಮನ ಸೆಳೆಯುವ ಎರಡು ಅಂಶಗಳು ಮಕ್ಕಳ ಪ್ರಾಥಮಿಕ ಶಿಕ್ಷಣ ಮತ್ತು ಬುಡಕಟ್ಟು ಸಮುದಾಯದವರ ಅನನ್ಯ ಭಾಷೆ ಮತ್ತು ಸಾಂಸ್ಕೃತಿಕ ಬಹುರೂಪಗಳು. ಇವುಗಳ ಜೊತೆಗೆಯೇ ಅವರಿಗೆ ಸಹಜ ಅನ್ನಿಸುವ, ಆದರೆ ನಾಗರಿಕರ ಪಾಲಿಗೆ ಕ್ರಿಮಿನಲ್ ಅನ್ನಿಸುವ ಬರ್ಬರ ಚಟುವಟಿಕೆಗಳು. ಇಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಲೇಖಕರು ವೆರಿಯರ್ ಎಲ್ವಿನ್ ರನ್ನು ನಡುನಡುವೆ ತಂದು ಬ್ಯಾಲೆನ್ಸ್ ಮಾಡುತ್ತಾರೆ. ಬುಡಕಟ್ಟು ಸಮುದಾಯಗಳ ಶಿಕ್ಷಣದ ಸವಾಲುಗಳು, ಅಪರಾಧ ಜಗತ್ತಿನ ನಡುವೆ ಬದುಕಬೇಕಾದ ಅನಿವಾರ್ಯತೆಗಳು, ಅದಕ್ಕೆ ಬೇಕಾದ ದೇಸೀಯ ತಂತ್ರಗಾರಿಕೆಯ ಸಾಹಸದ ಬಹುರೂಪಗಳು, ರಾಜಕೀಯ ನಾಯಕರು ಮತ್ತು ಅಪರಾಧ ಜಗತ್ತಿನ ಸಂಬಂಧಗಳು, ಹೊಸಮಠಗಳನ್ನು ಕಟ್ಟಿಕೊಂಡು ರಾಜಕಾರಣಿಗಳಿಂದ ಮತ್ತು ಶ್ರೀಮಂತರಿಂದ ಮನ್ನಣೆ ಹಾಗೂ ಲಾಭ ಪಡೆಯುವ ಅಪರಾಧ ಹಿನ್ನೆಲೆಯ ದಿಡೀರ್ ಮಠಾಧೀಶರು: ಹೀಗೆ ಕುಂವೀ ತಮ್ಮ ಅನುಭವ ಮತ್ತು ಅಧ್ಯಯನಗಳಿಂದ ನಾಗರಿಕ ಕಣ್ಣುಗಳಿಗೆ ಕಾಣದ ಭಾರತದ ಸಂಸ್ಕೃತಿಯ ಆಳದ ಒಳಪದರಗಳನ್ನು ‘ಮಾಕನಡುಕು’ ಕಾದಂಬರಿಯ ಮೂಲಕ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ತೆರೆದಿಡುತ್ತಾ ಹೋಗುತ್ತಾರೆ.
ಕಾದಂಬರಿ ಓದುತ್ತಾ ಹೋದ ಹಾಗೆ ಮನುಷ್ಯರು ಮತ್ತು ಪ್ರಾಣಿಗಳು ಅಭಿನ್ನರಾಗುತ್ತಾರೆ. ಕತ್ತೆಗಳು, ನಾಯಿಗಳು ಬದುಕಿನ ಭಾಗವಾಗುತ್ತವೆ. ಪ್ರಾಥಮಿಕ ಶಾಲಾ ಶಿಕ್ಷಕ ಅವಧೂತನಾಗುತ್ತಾನೆ. ವೆಂಕಟ್ರಾಮುಡು ವೆಂಕಾವಧೂತನಾಗುತ್ತಾನೆ. ಹೆಣ್ಣುದೇವತೆಗಳು ಊರೆಲ್ಲಾ ಸುತ್ತಾಡುತ್ತಾರೆ. ನರರೂಪಿ ರಾಕ್ಷಸಿಯರು ಕಾಡುತ್ತಾರೆ. ಮತಾಂತರಗೊಂಡವರು ಬುಡಕಟ್ಟಿನವರು ಎರಡು ಹೆಸರು ಇಟ್ಟುಕೊಂಡು ತಮ್ಮ ಹಿಂದಿನ ಸಂಸ್ಕೃತಿಯಲ್ಲೇ ಬದುಕುತ್ತಾರೆ. ಕಟ್ಟುಕತೆಗಳು ಇತಿಹಾಸದ ಭಾಗವಾಗುತ್ತವೆ. ಇವುಗಳ ನಡುವೆ ಎರುಕಲಯ್ಯ ‘ಕಳಚಿದ ಕೊಂಡಿ’ ಯಂತೆ ಸಂಪರ್ಕಕ್ಕೆ ಸಿಗುತ್ತಾನೆ. ‘ಮಾಕನಡುಕು’ ಕಾದಂಬರಿ ಒಂದು ಅದ್ಭುತ ರೋಮಾಂಚಕ ಥ್ರಿಲ್ಲರ್ ಸಿನೆಮಾದಂತೆ; ಅದು ಓದಿ ಅನುಭವಿಸಬೇಕಾದ ಸಾಹಿತ್ಯ ಕೃತಿ.
0 Comments