ಚ ಹ ರಘುನಾಥ್ ಅವಲೋಕನ

ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆ

ರಘುನಾಥ ಚ.ಹ.
ಫೋಟೊ-ಕಲಾಕೃತಿ ನೋಡಿ ಕಥೆ-ಕವಿತೆ ಬರೆಯುವುದು; ಅಪೂರ್ಣಕಥೆಯನ್ನು ಪೂರ್ಣಗೊಳಿಸುವುದು; ನಿರ್ದಿಷ್ಟ ವಿಷಯ ಒಳಗೊಂಡು ಕಥೆ-ಕವಿತೆ ರಚಿಸುವುದು, ಈ ಬಗೆಯ ಹಲವು ಪ್ರಯೋಗಗಳನ್ನು ಕನ್ನಡದ ಪತ್ರಿಕೆಗಳು ನಿರಂತರವಾಗಿ ಮಾಡುತ್ತಲೇ ಬಂದಿವೆ. ಈ ಪ್ರಯೋಗ ಪರಂಪರೆಯ ಭಾಗವಾಗಿ ‘ಅಪರಂಜಿ’ ಕಥೆಯೊಂದನ್ನು ನೀಡಿ, ಅದನ್ನು ಮರು ನಿರೂಪಿಸುವ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿ ಕಥನವಷ್ಟೇ ರೂಪಾಂತರ ಹೊಂದಿಲ್ಲ; ಕಥೆಗಾರರೂ ವೇಷಧಾರಿಗಳಾಗಿದ್ದಾರೆ.

ಕಥೆ ಸರಳವಾದುದು: ಗೋದಾವರಿತೀರದ ಮರವೊಂದರಲ್ಲಿಎಲೆಗೊಂದು ಗಿಳಿ. ಮಳೆಯ ಒಂದು ದಿನ ಆಶ್ರಯಕ್ಕಾಗಿ ಮರದಡಿಗೆ ಬಂದ ಕಪಿಗಳ ಹಿಂಡಿಗೆ ಗಿಳಿಗಳ ಬುದ್ಧಿವಾದ: ‘ಕೈ ಕಾಲು ಗಟ್ಟಿಯಿರುವ ನೀವು ಮನೆ ಕಟ್ಟಿಕೊಂಡು ನೆಮ್ಮದಿಯಿಂದ ಇರಬಾರದೆ?’ ಪರಿಣಾಮ: ಎರಡು ಮಿಲಿಯನ್ ವರ್ಷಗಳ ನಂತರ ಮರಗಳ ಜಾಗದಲ್ಲಿ ಮಹಲುಗಳು.

ಈ ಪುಟ್ಟಕಥೆ ಮನುಷ್ಯ ವಿಕಾಸದ ಚರಿತ್ರೆಯನ್ನೂ, ಆ ವಿಕಾಸದ ಭಾಗವಾಗಿರುವ ಪರಿಸರ ನಾಶದದುರಂತವನ್ನೂ ಒಟ್ಟಿಗೆ ಧ್ವನಿಸುತ್ತದೆ. ಈ ಕಥೆಯನ್ನೇ ಹಲವು ಲೇಖಕರು ಬೇರೆ ಬೇರೆ ರೀತಿಗಳಲ್ಲಿ ಕಟ್ಟುವ ಮೂಲಕ, ವಿಕಾಸ ಮತ್ತು ವಿನಾಶದ ಸಾಧ್ಯತೆಗಳನ್ನು ಬೇರೆ ಬೇರೆ ರೂಪಗಳಲ್ಲಿ ಚಿತ್ರಿಸಿದ್ದಾರೆ. ಈ ಪ್ರಯೋಗವನ್ನು, ‘ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆ’ ಎನ್ನಬಹುದು. ವ್ಯಕ್ತಿ ಹಾಗೂ ಸಮಾಜದ ಕೆಡುಕುಗಳಿಗೆ ಕನ್ನಡಿ ಆಗುವುದು ಎಲ್ಲ ಕಲೆಗಳ ಉದ್ದೇಶ. ಈ ನೆಲೆಗಟ್ಟಿನಲ್ಲಿ, ಗೋದಾವರಿ ತೀರದ ಕಥೆಯ ಮರು ನಿರೂಪಣೆಯ ವಿವಿಧ ಮಾದರಿಗಳು ಸಮಾಜದ ಓರೆಕೋರೆಗಳಿಗೆ ಬೇರೆ ಬೇರೆ ಕೋನಗಳಲ್ಲಿ ಹಿಡಿದಿರುವ ಕನ್ನಡಿಗಳೇ ಆಗಿವೆ.

ಈ ಪ್ರಯೋಗದ ಮತ್ತೊಂದು ವಿಶೇಷ, ಕಥೆಯನ್ನು ಮರು ನಿರೂಪಿಸಿರುವ ಲೇಖಕರು ಬಳಸಿರುವ ವಿಶಿಷ್ಟ ಕಥನಶೈಲಿ. ಇಲ್ಲಿನ ಲೇಖಕರು ತಮ್ಮ ಶೈಲಿಯನ್ನು ಬಿಟ್ಟು, ಕನ್ನಡದ ಪ್ರಸಿದ್ಧ ಬರಹಗಾರರ ಶೈಲಿಗಳನ್ನು ಅನುಸರಿಸಿದ್ದಾರೆ; ಡಿ.ವಿ.ಜಿ., ಕುವೆಂಪು, ದೇವನೂರು ಮಹಾದೇವ, ಎಸ್.ಎಲ್. ಭೈರಪ್ಪ, ಟಿ.ಪಿ. ಕೈಲಾಸಂ, ಎಚ್ಚೆಸ್ಕೆ, ಬೇಂದ್ರೆ, ಬೀಚಿಯವರನ್ನು ಬಹು ಸಂಭ್ರಮದಿಂದ ಆವಾಹಿಸಿಕೊಂಡಿದ್ದಾರೆ.

ಹಿರಿಯ ಲೇಖಕರನ್ನು ಒಳಗೊಳ್ಳುವ ಈ ಕ್ರಿಯೆ ಎಷ್ಟು ಸೊಗಸಾಗಿದೆಯೆಂದರೆ, ಅನುಸರಣೆಯ ವಿವರಗಳನ್ನು ಮರೆತು ಓದಿದರೆ ಇವು ಆಯಾ ಲೇಖಕರ ಅಸಲಿ ರಚನೆಗಳೇ ಎನ್ನುವಷ್ಟು ಜೀವಂತವಾಗಿವೆ.

ಕನ್ನಡದ ಹಲವು ರೂಪಗಳನ್ನು ಪ್ರತಿನಿಧಿಸುವ ‘ಅಪರಂಜಿಕನ್ನಡ’ದ ಈ ಬರಹಗಳು ಮೇಲ್ನೋಟಕ್ಕೆ ಒಂದು ತುಂಟ ಪ್ರಯೋಗದ ರೂಪದಲ್ಲಿ, ಓದುಗರ ತುಟಿಗಳಲ್ಲಿ ನಗೆಯರಳಿಸಬಹುದು. ಆದರೆ, ಈ ಅನುಸರಣೆಯನ್ನು ಮತ್ತೊಂದು ರೂಪದಲ್ಲೂ ನೋಡಲಿಕ್ಕೆ ಸಾಧ್ಯವಿದೆ. ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆಯ ರೂಪದಲ್ಲಿ ಈ ಬರಹಗಳನ್ನು ನೋಡುವುದಾದರೆ, ಇಲ್ಲಿನ ಅಭಿವ್ಯಕ್ತಿ ಈ ಹೊತ್ತಿನ ಅಥವಾ ‘ಅಪರಂಜಿ’ ಬಳಗದ ಬರಹಗಾರರ ಪ್ರತಿಕ್ರಿಯೆಯಷ್ಟೇ ಆಗಿರದೆ; ಕನ್ನಡ ಸಾಂಸ್ಕೃತಿಕ ಪರಂಪರೆಯನ್ನೇ ತನ್ನ ಜೊತೆಗಿರಿಸಿಕೊಳ್ಳುವ ಹಂಬಲವಾಗಿದೆ.

ಈ ಒಳಗೊಳ್ಳುವಿಕೆ ಕಾರಣದಿಂದಾಗಿ, ‘ಅಣಕುಗದ್ಯರಚನೆ’ಯ ಪ್ರಯೋಗ ತನ್ನ ಚೌಕಟ್ಟನ್ನು ಮೀರಿ, ವಿಸ್ತಾರ ಹಾಗೂ ಘನತೆಯನ್ನು ಪಡೆದುಕೊಂಡಿದೆ. ಆಧುನಿಕ ಕನ್ನಡದ ವಿವೇಕವೇ ಒಟ್ಟಾಗಿ ಪರಿಸರ ನಾಶದಕಥೆಯೊಂದನ್ನು ಸಮೂಹಗಾನದ ರೂಪದಲ್ಲಿ ನಿರೂಪಿಸುವ ಮೂಲಕ, ಪರಿಸರ ಕಾಳಜಿಯ ಅಗತ್ಯವನ್ನು ಹೇಳುವಂತಿದೆ.

‘ಅಪರಂಜಿ’ ಬಳಗದ ಈ ಚೇತೋಹಾರಿ ಪ್ರಯೋಗ ಅಭಿನಂದನೆಗೆ ಅರ್ಹ. ಮುಂದಿನ ಇಂಥ ಪ್ರಯೋಗಗಳಲ್ಲಿ ಹೊಸಗನ್ನಡದ ಗಣ್ಯರ ಜೊತೆಗೆ, ಪೂರ್ವಸೂರಿಗಳಾದ ಪಂಪ, ಕುಮಾರವ್ಯಾಸ, ವಚನಕಾರ, ಕೀರ್ತನಕಾರರೂ ‘ಅಪರಂಜಿ ಬಳಗ’ ಸೇರುವಂತಾಗಲಿ.

ಅಣಕು ಗದ್ಯ ಸ್ಪರ್ಧೆಯ ಫಲಶ್ರುತಿ

ಶಿವಕುಮಾರ್

ಆಗಸ್ಟ್ ಸಂಚಿಕೆಯಲ್ಲಿ ಬಾಲಬೋಧೆಯ ಕಥೆಯೊಂದನ್ನು ಕೊಟ್ಟು, ಅದನ್ನು ನಮ್ಮ ನಾಡಿನ ಖ್ಯಾತ ಸಾಹಿತಿಗಳ ಶೈಲಿಯಲ್ಲಿ ಅಣಕು ಬರಹಗಳನ್ನು ರಚಿಸಿರೆಂದು ಆಹ್ವಾನ ನೀಡಿದ್ದೆವು. ನಮ್ಮ ಆಹ್ವಾನವನ್ನು ಮನ್ನಿಸಿ ಬಹು ಉತ್ಸಾಹದಿಂದ ನಮ್ಮ ಬಳಗದ ಬರಹಗಾರರು ಈ ಸ್ಪರ್ಧೆಗೆ ಸ್ಪಂದಿಸಿದರು. ಮನರಂಜನೆಗೆಂದು ಮಾಡಿದ ಪ್ರಯತ್ನ ಹೇಗೆ ಅತ್ಯುತ್ತಮ ಸಾಹಿತ್ಯ ಸೃಷ್ಟಿಗೆ ಕಾರಣವಾಗಬಲ್ಲುದೆಂಬುದಕ್ಕೆ ಈ ಲೇಖನಗಳೇ ನಿದರ್ಶನ.

ಶ್ರೀಮತಿ ಚಿತ್ರಾ ರಾಮಚಂದ್ರನ್ ಅವರು ‘ಡಿ.ವಿ.ಜಿ.’ ಅವರ ಮಂಕುತಿಮ್ಮನ ಕಗ್ಗದ ಶೈಲಿಯನ್ನು ಆರಿಸಿಕೊಂಡಿದ್ದರೆ, ಮೈಸೂರಿನ ನಾಗರತ್ನ ಅವರು ‘ಬೇಂದ್ರೆ’ಯವರ ಶೈಲಿಯನ್ನು ಅನುಕರಿಸಿದ್ದಾರೆ. ಗೌತಮ ಅವರ “ಮರ ಹೆತ್ತ ನಗರ” ಲೇಖನ, ‘ದೇವನೂರು ಮಹದೇವ’ರ ಕುಸುಮಬಾಲೆಯನ್ನು ನೆನಪಿಗೆ ತರುತ್ತದೆ.

ಈ ಸ್ಪರ್ಧೆಯ ಕಲ್ಪನೆಯನ್ನು ನಮಗೆ ನೀಡಿದ ಆನಂದರು ತಮ್ಮ ಮೆಚ್ಚಿನ ‘ಎಚ್ಚೆಸ್ಕೆ’ ಅವರ ಸಂಕ್ಷಿಪ್ತ ಶೈಲಿಯನ್ನು ಚೊಕ್ಕದಾಗಿ ಮೂಡಿಸಿದ್ದಾರೆ. ಅಣಕು ಕವಿಯೆಂದೇ ಹೆಸರಾದ ರಾಮನಾಥರು ಬಳಸಿರುವ ‘ಬೀಚಿ’ಯವರ ಬ್ರೀಜೀ ಧಾಟಿ, ತಿಂಮನ ತಲೆಹರಟೆಯನ್ನು ನೆನಪಿಸುತ್ತದೆ. ಪಾಪಾ ಪಾಂಡು ಖ್ಯಾತಿ ನರಸಿಂಹ ಮೂರ್ತಿಯವರು ‘ಟಿ ಪಿ ಕೈಲಾಸಂ’ ಅವರ ಇಂಗ್ಲನ್ನಡವನ್ನು ಭಟ್ಟಿ ಇಳಿಸಿದ್ದರೆ, ನಮ್ಮ ಉಪಸಂಪಾದಕರಾದ ಬೇಲೂರು ರಾಮಮೂರ್ತಿಯವರು ‘ಎಸ್.ಎಲ್.ಭೈರಪ್ಪ’ನವರ ಶೈಲಿಯನ್ನು ಬಹು ಸೊಗಸಾಗಿ ಮೂಡಿಸಿದ್ದಾರೆ. ನನ್ನ ಮೆಚ್ಚಿನ ಕವಿ ‘ಕುವೆಂಪು’ ಅವರಿಗೂ ಈ ಸ್ಪರ್ಧೆಯಲ್ಲಿ ಒಂದು ಸ್ಥಾನವಿರಲಿ ಎಂದು ನಾನು ಶುಕೋಪದೇಶ ರಚಿಸಿರುವೆ.

ಒಟ್ಟಿನಲ್ಲಿ ಓದುಗರಿಗಾಗಿ ಅಣಕು ಗದ್ಯದ ರಸದೌತಣ ನಿಮ್ಮ ಮುಂದೆ ಬಾಳೇ ಎಲೆಯ ಮೇಲೆ ಉಣಬಡಿಸಲಾಗಿದೆ. ಓದಿ, ಖುಷಿಪಡಿ.

‍ಲೇಖಕರು avadhi

October 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: