ವಿನಯಾ ಒಕ್ಕುಂದ ಓದಿದ ʼಶಯ್ಯಾಗೃಹದ ಸುದ್ದಿಗಳುʼ

ಶೋಭಾ ನಾಯಕ ಅವರ ಇತ್ತೀಚಿನ ಕವನಸಂಕಲನ- ʼಶಯ್ಯಾಗೃಹದ ಸುದ್ದಿಗಳುʼ.

ಈ ಸಂಕಲನಕ್ಕೆ ಖ್ಯಾತ ಕವಯತ್ರಿ ವಿನಯಾ ಒಕ್ಕುಂದ ಬರೆದಿರುವ ಮುನ್ನುಡಿ ಇಲ್ಲಿದೆ.

ವಿನಯಾ ಒಕ್ಕುಂದ

‘ಶಯ್ಯಾಗೃಹದ ಸುದ್ದಿಗಳು’ ಎಂಬ ಸಂಕಲನದ ಕವಿತೆಗಳು ನನ್ನಿಂದ ಮರಳಿ ಮರಳಿ ಓದಿಸಿಕೊಂಡಿವೆ. ಕನ್ನಡದ ಮಹಿಳಾ ಸಂವೇದನೆಯ ಪರಂಪರೆಯನ್ನು ನನ್ನ ನೆನಪಿನಲ್ಲಿಟ್ಟುಕೊಂಡು ಓದಿದ್ದೇನೆ. ಖಾಸಗಿಯಾದುದೆಲ್ಲವೂ ರಾಜಕೀಯವಾದದ್ದು ಎಂಬ ತಾತ್ವಿಕತೆಯ ಸರಳೀಕರಣವಿಲ್ಲಿದೇಯೇ? ಎಂಬ ಎಚ್ಚರದಲ್ಲಿಯೂ ನೋಡಿದ್ದೇನೆ.

ಯಾಕೆಂದರೆ, ನಾವೀಗ ಸ್ತ್ರೀವಾದಿ ತಾತ್ವಿಕತೆಯೂ ತಪ್ಪಾಗಿ ಮತ್ತು ಸರಳೀಕೃತವಾಗಿ ಬಳಕೆಯಾಗುತ್ತಿರುವ ಕಾಲಸ್ಥಿತಿಯಲ್ಲಿದೇವೆ. ಆದರೆ, ಈ ಕವಿತೆಗಳು ಬಲು ಧ್ಯಾನಸ್ಥವಾಗಿ ಮತ್ತು ಸುಡು ಎಚ್ಚರದಲ್ಲಿ ಹೆಣ್ಣಿನ ಇತಿಗೀತಿಕೆಯನ್ನು ಹಾಡಿಕೊಳ್ಳುತ್ತಿವೆ. ಹೆಣ್ಣು ಹಾಗಂದರೇನು? ನಿಜಕ್ಕೂ ಅವಳಿಗೆ ಬೇಕಿರುವುದೇನು? ಎಂಬ ಪ್ರಶ್ನೆಯನ್ನು ನಿಷ್ಠುರವಾಗಿ ಮಾತ್ರವಲ್ಲ ಮಾರ್ದವವಾಗಿ ಕೂಡ ಉತ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.

ಹೆಣ್ಣಿನ ಕುರಿತು, ಅವಳ ಬೇಕು-ಬೇಡಗಳ ಕುರಿತು, ಅವಳ ಆಯ್ಕೆ-ಅನಾಯ್ಕೆಗಳ ಕುರಿತು ಜಗತ್ತಿನೆಲ್ಲೆಡೆ ಎಲ್ಲ ಭಾಷೆಗಳಲ್ಲಿ ಎಲ್ಲ ಕಾಲಗಳಲ್ಲಿ ನಿಷ್ಕರ್ಷೆಗಳು ನಡೆದಿವೆ. ಬಹುತೇಕವಾಗಿ ಪಿತೃಸತ್ತೆಯ ಧಿಮಾಕಿನಿಂದ, ಸಂಸ್ಕೃತಿ ಮತ್ತು ಸಂಪ್ರದಾಯಗಳೆಂಬ ಪರಿಕಲ್ಪನೆಗಳ ಮುಚ್ಚಟೆಯಲ್ಲಿ ನಡೆದಿವೆ. ಆಧುನಿಕವಾಗಿ ಹೆಣ್ಣುಪರ ಎಂಬ ಅನುಕಂಪ ಪೂರಿತವಾಗಿ ನಡೆದಿದೆ.

ಈ ಹೆದ್ದಾರಿಗಳು ಮಹಿಳಾ ಸಂವೇದನೆಯನ್ನು ಅದೆಷ್ಟು ಆಕ್ರಮಿಸಿಕೊಂಡಿದ್ದವೆಂದರೆ, ಇವುಗಳಿಗೆ ಹೊರತಾದ ಹೆಜ್ಜೆಗಳನ್ನು ಜೋಡಿಸಿಕೊಂಡು ಕಾಲುದಾರಿಯನ್ನಾದರೂ ರೂಪಿಸಿಕೊಳ್ಳುವುದು ಕಠಿಣವಾಗಿತ್ತು. ಆ ಕಠಿಣತೆಯನ್ನು ನೀಗಿಸಿಕೊಳ್ಳುವುದನ್ನು ಮಹಿಳಾ ಸಂವೇದನೆಯು ತನ್ನ ಸಾಧ್ಯತೆಯಾಗಿಸಿಕೊಂಡು ಮುನ್ನಡೆದಿದೆ. ಈ ಸಾಧ್ಯತೆಯು ಹೆಣ್ಣುನೋಟ ಕ್ರಮವನ್ನು ಸಂಕರಗೊಳಿಸುತ್ತದೆ. ಇದೊಂದು ನಿರಂತರತೆಯ ಕ್ರಮ. ಈ ಸಂಕಲನದ ಹಲವು ಕವಿತೆಗಳು ಆ ನಿರಂತರತೆಯ ಭಾಗಗಳಾಗಿವೆ. 

ಅನಾದಿಯಿಂದಲೂ ಹೆಣ್ಣಿನ ಅಭಿವ್ಯಕ್ತಿಯನ್ನು ಮಾತ್ರವಲ್ಲ, ಸಂವೇದನೆಯನ್ನೇ ನಿಯಂತ್ರಿಸಿದ ಯಾಜಮಾನ್ಯವು, ಲೈಂಗಿಕತೆಯ ಪ್ರಶ್ನೆಯನ್ನು ನಿಷೇಧಿತ ವಲಯವಾಗಿಸಿತ್ತು. ಆ ಮಡಿ-ಹುಡಿಯ ಪರಿಧಿಯನ್ನು ಉಲ್ಲಂಘಿಸುವುದು ಅನೈತಿಕವೆಂದು ನಂಬಿತವಾಗಿತ್ತು. ೧೮ನೇ ಶತಮಾನದಲ್ಲಿ ತೆಲುಗಿನಲ್ಲಿ ಮುದ್ದು ಪಳಿನಿಯು ‘ರಾಧಿಕಾ ಸಾಂತ್ವನ’ ಕೃತಿಯನ್ನು ರಚಿಸಿದಾಗ, ಅದನ್ನು ವಿರೋಧಿಸಿದ ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯ ಚರಿತ್ರೆಯೇ ಇದೆ.

ಇಂದಿಗೂ ಅಕ್ಕನ ವಚನಗಳನ್ನೂ ಒಳಗೊಂಡ ಹಾಗೆ ಭಕ್ತಿಕಾವ್ಯದ ಹೆಣ್ಣಿನ ಅಭಿವ್ಯಕ್ತಿಯನ್ನು ಭಕ್ತಿಯೆಂಬ ಪರಿಧಿಯಲ್ಲಿ ಮಾತ್ರ ನೋಡಬೇಕೆಂಬ ಒತ್ತಾಸೆಯಿದೆ. ಜನಪದ ಹೆಣ್ಣಿನ ಸಂವೇದನೆಯನ್ನಂತೂ ಜರಡಿ ಹಿಡಿದು ಶೋಧಿಸಿಯೇ ಕೊಟ್ಟಿದ್ದೇವೆ. ಹಾಗಿದ್ದೂ ಆಧುನಿಕ ಸಂವೇದನೆಯು ಈ ಕಟ್ಟುಪಾಡಿನಿಂದ ತನ್ನನ್ನು ಮುಕ್ತವಾಗಿಸಿಕೊಳ್ಳುವ ನಿರ್ಭೀತ ನೆಲೆಯತ್ತ ಹಾದಿದೆ.  ಇಲ್ಲಿಯ ಬಹುತೇಕ ಕವಿತೆಗಳು ಈ ಮೀರುವಿಕೆಯನ್ನೆಲ್ಲ ಮುಖ್ಯ ಆದ್ಯತೆಯಾಗಿಸಿಕೊಂಡಿವೆ. 

ಸಾಮಾಜಿಕ ಸಂಬಂಧದ ತಳಾದಿಯಾದ ಗಂಡು-ಹೆಣ್ಣಿನ ಸಾಂಗತ್ಯವನ್ನು ಸೂರ್ಯ-ಭೂಮಿ, ಚಂದ್ರ-ಭೂಮಿ, ಮರ-ಬಳ್ಳಿ, ಕಡಲು-ನದಿ ಈ ಯಾವೆಲ್ಲ ಪಡಿಯಚ್ಚುಗಳಲ್ಲಿಡಲಾಗಿದೆಯೋ ಅವು ಹೆಣ್ಣಿನ ಪ್ರತಿನಿಧೀಕರಣವನ್ನು ಮಾಡಲಾರವು. ಅವಳನ್ನು ಅವಳಾಗಿ ಇಡಲಾರವು.  ಗಂಡು-ಹೆಣ್ಣಿನ ಆತ್ಯಂತಿಕ ವಿಶ್ವಾಸಾರ್ಹ ಸಂಬಂಧವಾದ ಪ್ರೇಮ-ಕಾಮವು ಗಂಡಿನ ಉದಾಸ ಅಹಂನಿಂದಾಗಿ ನಿಸ್ಸಾರವೆನಿಸಿದೆ. ಬದುಕಿನಲ್ಲಿ ದುರಂತವನ್ನು ಮಾತ್ರ ಸತ್ಯವೆನಿಸಿದೆ. 

ಬ್ರೈಲ್ ಲಿಪಿಯಲ್ಲಿ ಬರೆದ
ಶೃಂಗಾರ ಕಾವ್ಯ ನಾನು
ದುರಂತವೆಂದರೆ,
ಓದಬೇಕಾದ ನೀನು ಕುರುಡನಲ್ಲ

ಹೆಣ್ಣಿನ/ಗಂಡಿನ ಮನಸ್ಸಿನಾಳದ ಪ್ರೇಮವು ಉತ್ಕರ್ಷ ಅನುಭೂತಿಯಾಗುವ ‘ಒಂದುತನವು’ ಗಂಡಿನ ಅವಜ್ಞೆಯಿಂದ ಅಸಂಭಾವ್ಯವಾಗುತ್ತದೆ. ಬ್ರೈಲ್ ಲಿಪಿ, ಸ್ಪರ್ಶಕ್ಕೆ ಮಾತ್ರ ದಕ್ಕುವಂಥದ್ದು. ಪ್ರಯತ್ನಪೂರ್ವಕ ಅನುನಯದಿಂದ ಒದಗುವಂಥದ್ದು. ಕಣ್ಣಿಲ್ಲದವರಿಗೆ ಭಾಷೆ. ಕಣ್ಣಿದ್ದವರಿಗೆ ಕುರುಡು. ಅವನು ವ್ಯವಸ್ಥೆಯ ರೂಢಿಯ ಕಣ್ಬೆಳಕನ್ನು ಪಡೆದವ. ಅದರಾಚೆಗಿನ ಸತ್ಯಗಳಿಗೂ ಕುರುಡಾದವ. ಹೆಣ್ಣನ್ನು ಆಳುವವನು, ಗೆಲ್ಲುವವನು, ಮಣಿಸುವವನು ಎಂದು ಭ್ರಮಿತನಾದವ. ಗಂಡು-ಹೆಣ್ಣಿನ ಸಂಬಂಧದ ಬಹುರೂಪೀ ನಲಿವುಗಳನ್ನೆಲ್ಲ ಕಡೆಗಣಿಸಿ ಅಹಮಿಕೆಯ ಭಾರದಲ್ಲಿ ತತ್ತರಿಸುತ್ತಾನೆ. ಆಳಿಕೆಯ ಭಾರವನ್ನು ಮಂಚದಲ್ಲೂ ಮರೆಯದ ಗಂಡುಗರ್ವವೇ! ದಿನವಿಡೀ ತಾನೇ ಶ್ರೇಷ್ಠ ಎಂಬ ವ್ಯಸನ, ರಾತ್ರಿಯ ಮಧುರ ಸಂಬಂಧದಲ್ಲೂ ಯುದ್ಧದ ಉನ್ಮಾದ–

ಮಂಚವೆಂದರೆ
ಸಮರಾಂಗಣ
ನಿನಗೆ
ರಾತ್ರಿಗಳೆಂದರೆ
ಬರೀ ಯುದ್ಧವೇ
ನಿನಗೆ

ಈ ಅಹಮಿಕೆ ಅವಳಿಗಷ್ಟೇ ಅಲ್ಲ, ಅವನಿಗೂ ಅಸುಖವೇ. ಇಲ್ಲಿ ತಾನು ‘ಹಾಸ್ಯುಂಡು ಬೀಸಿ ಒಗೆವ ಬಾಳೆಲೆ’ ಎಂದು ಪ್ರತಿಮಿಸಿಕೊಳ್ಳುವ ಜನಪದ ಹೆಣ್ಣಿದ್ದಾಳೆ. ‘ಅವನೆನ್ನ ತೊಡೆಯೇರಿ’ ಎಂದು ತನಗಲ್ಲದ ತನ್ನದಾಗದ, ತನ್ನ ದೇಹದ ಸ್ಥಿತಿಯನ್ನು ಕಾಣುವ ಅಮೃತಮತಿಯಿದ್ದಾಳೆ. ಅಥವಾ ಇಂಥಹ ದಿನದಿನದ ಕೊಂಡ ಹಾದೂ ಸಂಬಂಧದ ಜತ್ತು ಹಿಡಿಯುವ ಅವಳಿದ್ದಾಳೆ. ಲೈಂಗಿಕ ವಿಜೃಂಭಣೆಯೇ ಆದ್ಯಂತವೆಂಬ ಗಂಡುಗರ್ವಕ್ಕೆ ಕವಿತೆ ಆಹ್ವಾನವೀಯುತ್ತದೆ. ಪ್ರೇಮನಿಷ್ಠೆಯನ್ನು ಕಡೆಯುಸಿರಿರುವವರೆಗೂ ನಿಭಾಯಿಸಿ, ಗಂಡಸು ಎಂದು ಸಾಬೀತುಪಡಿಸಲು, ನಮ್ಮ ಸಮಾಜ ಗಂಡಸಿಗೆ ಪ್ರೇಮನಿಷ್ಠೆಯನ್ನು ದಾಂಪತ್ಯನಿಷ್ಠೆಯನ್ನು ಕಲಿಸಿಲ್ಲ.  ಕನ್ಯೆ, ಪತಿವೃತೆ ಎಂಬ ಪದಗಳೆಲ್ಲ ಹೆಣ್ಣಿಗೆ ಮೀಸಲು. ಗಂಡಸಿಗೆ ನೀಡಿದ ಈ ಸಸಾರದಿಂದ ಹೆಣ್ಣು ಹೊಸಿಲೊಳಗೂ ಹೊಸಿಲಾಚೆಗೂ ಬಳಲುತ್ತಿದ್ದಾಳೆ. 

ಇಂತಹ ಅಸಹನೀಯ ಸ್ಥಿತಿಯಲ್ಲಿ ದೇಹ-ಮನಸ್ಸುಗಳ ಕಂದಕಕ್ಕೆ ಅವಳೇ ಸಾಕ್ಷೀಭೂತಳಾಗಬೇಕಾಗುತ್ತದೆ. ಮನದೊಡೆಯ ಮನೆಯೊಡೆಯ ಎಂಬ ಈ ಇಬ್ಬಂದಿ ಸ್ಥಿತಿಯ ಸಂಕಟವಿದು. ಮಲೆಮಾದೇಶ್ವರ ಕಾವ್ಯದಲ್ಲಿ ನೀಲಗೌಡ ಮಡದಿ ಸಂಕಮ್ಮನನ್ನು ನಿಷ್ಠಳಾಗಿಸಲು, ಅವಳ ದೇಹದ ಮೇಲೆ ತನ್ನ ಭೋಗ್ಯವೆಂದು ಸ್ಥಾಪಿಸಲು ಅದೆಷ್ಟು ನರಕಗಳನ್ನು ತಂದ! ಆ ಹಳೆಕಾಲ ಹೋಗಿದೆ. ಹೊಸಕಾಲ ಬಂದಿದೆ. ಆದರೆ ಗಂಡಾಳಿಕೆಯ ಭ್ರಾಂತಿಯೇನೂ ಕಮ್ಮಿಯಾಗಿಲ್ಲ. ಅದು ಬದಲಾಗಿದೆ ಅಷ್ಟೇ. ಹಾಗಾಗಿ ‘ಸಂಕಮ್ಮನ ಸಾಲು’ ಅಷ್ಟಷ್ಟೇ ಇಷ್ಟಿಷ್ಟೇ ಬದಲಾಗಿ ಉಳಿದೇ ಬಂದಿದೆ.  ಮಂಜು ಮಲೆ ಕಾಡಿನಿಂದ ಅಂತರಗಂಗೆಯವರೆಗೂ ಸಂಕಮ್ಮನ ಕಣ್ಣೀರು ಹೆಪ್ಪುಗಟ್ಟಿಯೇ ಇದೆ.  ಅಲ್ಲಿ ಮಾದಯ್ಯನಿದ್ದಾನೆ. ಇಲ್ಲಿ ಅವಳಾಗಿ ಅವಳೇ, ‘ಹುಸಿ ಸಂಸಾರದ ಸಾಬೂನು ಗುಳ್ಳೆಯನು ಠಪ್ಪೆನಿಸುವ’ ವಾಸ್ತವಕ್ಕೆ ಸಿದ್ಧಳಾಗಬೇಕು.

ಇದು ಬದುಕು, ಸುಮ್ಮನೆ ಕೊಡವಿಕೊಳ್ಳಲು, ಕತ್ತರಿಸಿ ಮುನ್ನಡೆಯಲು ಆಗುವುದಿಲ್ಲ. ಮನಸ್ಸಿನಲ್ಲಿ ಪ್ರಶ್ನೆಗಳಿವೆ.  ಅಸದಳ ನೋವುಗಳಿವೆ. ವಾಸ್ತವದಲ್ಲಿ ಅವಕ್ಕೆಂದೂ ಉತ್ತರವಿಲ್ಲ. ಯಾಕೆಂದರೆ ಉತ್ತರಿಸಬೇಕಾದವರಿಗೆ ಪ್ರಶ್ನೆಯೇ ತಿಳಿಯುವುದಿಲ್ಲ. ತಿಳಿಯಬೇಕೆಂಬ ಗರಜೂ ಇರುವುದಿಲ್ಲ. ಹಾಗಂತ ಉಸಿರಿಗೆ ಜತ್ತಾಗಿರುವ ಪ್ರಶ್ನೆಗಳನ್ನು ಸುಮ್ಮನೆ ಬರಾಕಾಸ್ತು ಮಾಡಿ ಬಿಡುವುದೂ ಸಾಧ್ಯವಿಲ್ಲ. ಅಂತಹ ಕಟ್ಟಕಡೆಯ ಆಶ್ರಯವಾಗಿ ಮನಸ್ಸನ್ನು ಇಳಿಸಲು ಒದಗಿಬರುವುದು ಕವಿತೆ. ಕಾವ್ಯಮೀಮಾಂಸೆಯ ಶಾಸ್ತ್ರ ಸಂಹಿತೆಗೆ ಗೋಚರಿಸದ ಕಾವ್ಯಕಾರಣವಿದು. ಕವಿತೆ ಮುಲಾಜಿಲ್ಲದೆ ಹೇಳುತ್ತದೆ-

ಅವನ ಎಲ್ಲಕೂ
ಜವಾಬು ಕೇಳಲೆಂದೇ 
ಕವಿತೆ ಬರೆಯುತ್ತೇನೆ

ಎಂದಿನಿಂದಲೂ ಹೆಣ್ಣು ಮನಸ್ಸು ರಂಗೋಲಿ, ಹೆಣಿಗೆ, ಹಾಡು-ಹಸೆಗಳಲ್ಲಿ ಒರಗಿದ್ದೇ ಹೀಗೆ. ಇಲ್ಲಿಯ ಕವಿತೆ ಬಟ್ಟೆಯುಡಲು ಸಿದ್ಧವಿಲ್ಲ. ಅಂದರೆ, ಸಿದ್ಧ ಬಟ್ಟೆಯಲ್ಲಿ ನಡೆವ ಮನಸ್ಸಿಲ್ಲ. ಅಕ್ಕನ ಬತ್ತಲೆಯಂತೆ ಕವಿತೆಯೂ ಬತ್ತಲಾಗುತ್ತದೆ. ಒಳಗಣ ಹೊರಗಣ ರಣರಂಗವನ್ನು ಒಂದು ಮಾಡಿಕೊಂಡು. ಯಾಕೆಂದರೆ,

ಸುಖ
ಕೇವಲ ಒಂದು
ಹೊಂಗನಸಲ್ಲ
ನಾವಾಗೇ ಬರೆದು ಪೂರ್ಣಗೊಳಿಸಬೇಕಾದ ವರ್ಣಚಿತ್ರ
ಎಂಬ ಆಳದಾಳದ ಎಚ್ಚರದಲ್ಲಿ, ಆ ಕುರಿತು ಮಾತನಾಡುವ ಅಗತ್ಯ ಹುಟ್ಟುತ್ತದೆ.

ಇಲ್ಲಿಯ ಬಹುತೇಕ ಕವಿತೆಗಳು ಹೆಣ್ಣಿನ ಸಂವೇದನೆಯನ್ನು ನಿರ್ಬಂಧಿಸಿದ ಭಾಷೆಯ ಮುಜುಗರವನ್ನು ಮೀರುತ್ತವೆ. ಯಾವ ಹೆಣ್ಣು ದೇಹ ಗಂಡು ಪರಿಭಾಷೆಯಾಗಿತ್ತೋ ಅದನ್ನು ಕಸಿದುಕೊಳ್ಳುವ ಒತ್ತಡ; ಯಾವುದನ್ನು ಹೆಣ್ಣಿನ ಲಜ್ಜೆ-ಸುಖ ಇತ್ಯಾದಿ ವ್ಯರ್ಥ ಆರೋಪಿಸಲಾಗಿತ್ತೋ ಅದನ್ನು ನಿರಾಕರಿಸುವ ದರ್ದು ಇಲ್ಲಿದೆ. ಹೆಣ್ಣಿನ ಆಳದಾಳದ ಆಕಾಂಕ್ಷೆಯನ್ನು ಶೋಧಿಸಿಕೊಳ್ಳುವ ನಿರ್ಭೀತ ಮುಕ್ತತೆಯಿದೆ. ಮೊಲೆಗಳು ಸದಾ ಉರಿವ ಒಲೆಗಳು, ಬ್ರಾಂಡೆಡ್ ಮುಕ್ತಿ, ನಾನು ಒಬ್ಬಳೇ ಅಲ್ಲ, ಹಾಲೆದೆ ಮೊದಲಾದ ಕವಿತೆಗಳನ್ನು ಈ ಮೂಲಕ ಓದಬೇಕಿದೆ. ವರ್ತಮಾನದ ನಿಷ್ಠುರ ವಾಸ್ತವದ ಕವಿತೆಗಳೂ ಚರಿತ್ರೆಯ ಸ್ಮೃತಿಗಳನ್ನು ಒಡಲಾಳದಲ್ಲಿರಿಸಿಕೊಂಡಿವೆ.

ಇಲ್ಲಿಯ ಕವಿತೆಗಳ ಸೌಂದರ್ಯವಿರುವುದು, ಅದು ತನ್ನ ಜೀವಶಕ್ತಿಯಾಗಿಸಿಕೊಂಡಿರುವ ಸ್ವಾತಂತ್ರ್ಯದ ಪ್ರೀತಿಯಲ್ಲಿ. ಬಾಳನ್ನು ಸಹನೀಯವಾಗಿಸಿಕೊಳ್ಳುವ ಅದಮ್ಯ ಆಕಾಂಕ್ಷೆಯಲ್ಲಿ. ಗುಂಡೇಟಿನಂತಹ ಮಳೆಯ ಹೊಡೆತಕೂ ಉದುರದಿರುವ ದಾಸವಾಳದ ಭಂಡತನ ಕವಿಗೆ ಮುಖ್ಯವೆನಿಸುತ್ತಿದೆ. ಬೆಚ್ಚನೆಯ ಮನೆಯಲ್ಲಿ ಬೆಚ್ಚಗಿರಲಾಗದ ಮನುಷ್ಯ ಬಾಳನ್ನದು ಸಂಭಾಳಿಸಬೇಕು ಅನ್ನಿಸುತ್ತಿದೆ. ಆದರೆ ಸಂಭಾಳಿಕೆ ಖಾಸಗಿ ಲೋಕವಾಗಿ ಉಳಿದಿಲ್ಲ. ಅವಳ ಮನಸ್ಸು ಚೂರು ರೆಕ್ಕೆಯಗಲಿಸಿದರೂ ಅದು ಚಪ್ಪರಿಸುವ ಸುದ್ದಿಯಾಗಿ ಬಿಡುತ್ತದೆ.

ವ್ಯಕ್ತಿಗತ ಬದುಕಿನ ಶೂನ್ಯವನ್ನು ಇನ್ನೊಬ್ಬರ ಶೂನ್ಯದಿಂದ ತುಂಬಿಸಿಕೊಳ್ಳಬಹುದೆಂಬ ಹತಾಶ ಸ್ಥಿತಿ ಇದು. ಆಡಿಕೊಳ್ಳುವ ಹೆಣ್ಣುಗಳು, ಆಡಿಸಿ ನೋಡಬಹುದೆಂಬ ಗಂಡುಗಳು-ಇಬ್ಬರೂ ಅರೆಬರೆ ಬೇಯಿಸಿ ಎಸೆಯುವವರೇ. ಹೆಣ್ಣಿನೊಂದಿಗೆ ಸದರವಾಗಿ ವರ್ತಿಸುವವರ ತರಹೇವಾರಿ ನಮೂನೆಗಳನ್ನು ಶೃದ್ಧೆಯಿಂದ ಚಿತ್ರಬಿಡಿಸುವ ಕವಿತೆಗಳಿವೆ. ‘ಯಾಯಾತಿ’ಯಂತಹ ಮನಸ್ಥಿತಿಯೊಂದಿಗೆ ಸಾಮಾಜಿಕ ಸಹಬಾಳ್ವೆಯೆಂಬುದು ಸಾಹಸಯಾತ್ರೆಯೇ ತಾನೇ?

ಮುಖ್ಯವೆಂದರೆ, ತನ್ನನ್ನು ಸದಾ ‘ಎಥಿಕಲಿ ರೈಟ್’ ಎಂಬ ಸೇಫ್ ಝೋನ್‌ನಲ್ಲಿರಿಸಿಕೊಳ್ಳುವ ಹುಸಿತನದತ್ತ ಕವಿತೆ ಸರಿಯುವುದಿಲ್ಲ. ಅದು ಕನ್ನಡಿಯೆದುರು ನಿಲ್ಲುವಲ್ಲಿರಬಹುದು, ಒಂದು ಉನ್ಮಾದಕ್ಕೆ ಆತ್ಮವನ್ನೆಲ್ಲ ಬಲಿಗೊಟ್ಟೆನೆಂಬ ಹಳಹಳಿಕೆಯಲ್ಲಿರಬಹುದು. ತನ್ನೊಂದಿಗೆ ತಾನೇ ತಿಕ್ಕಾಟಕ್ಕಿಳಿವ ಸಂದರ್ಭ ಇದ್ದಿರಬಹದು. ಅಣುಕ್ಷಣ ಸಾವಿನೊಂದಿಗೆ ಸರಸ ಮಾಡುತ್ತಿರುವ ಭಾವದ ಆರ್ದ್ರತೆಯಲ್ಲಿರಬಹುದು. ಅಥವಾ ಮುಟ್ಟು ಮುರಿದು ಮುಪ್ಪಿನತ್ತತ್ತ ಸರಿವ ದಿನಗಳಲ್ಲೂ, ತನ್ನ ಭಾವನೆಗೆ ಸ್ಪಂದಿಸುವ ಅಮೂರ್ತ ‘ಅವನ’ ಕುರಿತ ಕನಸಿರಬಹುದು. 

ಇರಬೇಕಿತ್ತು
ದುಂಡನೆಯ ಮೊಲೆಗಳ ನಡುವೆ
ಅಡಗಿಕೊಳ್ಳುವವನು
ಈಗಲೂ…
ನಲವತ್ತೈದು ವರ್ಷದ ಬಳಿಕವೂ
ಬೆನ್ನು ಹಾಕಿ ಮಲಗದವನು

‘ಇರಬಾರದೇ ಅಂಥವನೊಬ್ಬ’ ಎಂಬ ಅದಮ್ಯ ನಿರೀಕ್ಷೆಯಲ್ಲಿಯೇ ಕವಿತೆ, ಅಂದಿನ ಇಂದಿನ ಮುಂದಿನ ಎಲ್ಲ ಹೆಣ್ಣುಗಳ ಬಾಳ ಕನಸಿನ ವಾರಸಾ ಆಗಿಬಿಡುತ್ತದೆ. ಹೆಣ್ಣು ಮನಸ್ಸಿನ ಆಳದ ಕಂಪನಾಂಕವನ್ನು ದಾಖಲಿಸುವಲ್ಲಿಯೇ ಕವಿತೆಗೊಂದು ಸೊಬಗು ದತ್ತವಾಗುತ್ತದೆ. 

ಇಲ್ಲಿಯ ಕವಿತೆಗಳಿಗೆ ಗಂಡು-ಹೆಣ್ಣಿನ ಸಂಬಂಧ ಲೋಕದೆಲ್ಲ ಜಂಝಾವಾತಗಳನ್ನು ಅಳೆವ ಮಾನದಂಡ. ಅದರಲ್ಲಿ ದುಸರಾ ಮಾತಿಲ್ಲ. ಹಾಗೆಯೇ ಪರಂಪರೆಯ ಸತುವನ್ನು ಹೀರಿ ಬೆಳೆದ ಉತ್ಕಂಠಿತತನವಿದೆ. ತುಂಬಿ ತೊನೆವ ಭತ್ತದ ಗದ್ದೆ, ಒಂದರಂತೆ ಇನ್ನೊಂದು ಅನ್ನಿಸಿದರೂ ಅವು ಪ್ರತ್ಯೇಕ ಮತ್ತು ಸ್ವಾಯತ್ತ. ಆ ಆಹ್ಲಾದ, ಆ ಗಮಲು… ಮರೆಯಲಾಗದ್ದು. ಕನ್ನಡದ ಮಹಿಳಾ ಸಂವೇದನೆಗೆ ಖಂಡಿತವಾಗಿಯೂ ಇಂದೊಂದು ಮಹತ್ವದ ಸೇರ್ಪಡೆ. ಮುಂದಿನ ದಿನಗಳಲ್ಲಿ ಶೋಭಾ ಕವಿತೆಗಳು ಸಾಮಾಜಿಕ ವಿದ್ಯಮಾನಗಳ ಪ್ರತಿಸ್ಪಂದನೆಯತ್ತ ಹೆಚ್ಚು ವಾಲಿಕೊಳ್ಳಲಿ ಎಂಬ ಹಾರೈಕೆ ಮತ್ತು ನಿರೀಕ್ಷೆಗಳೊಂದಿಗೆ.

‍ಲೇಖಕರು Admin

July 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: