ವಿಧಿ ಇವನ ಮುಂದೆ ಮಂಡಿಯೂರಿತು!

ವೀರಕಪುತ್ರ ಎಂ ಶ್ರೀನಿವಾಸ

**

“ನಾನು ಎಲ್ಲೂ ಓಡಲಾರೆ ಏಕೆಂದರೆ ನಾನು ಏನನ್ನೂ ನೋಡಲಾರೆ! ಎಲ್ಲೇ ಹೋದರೂ ಇದೇ ಸ್ಥಿತಿ ಆದ್ದರಿಂದ ಇದ್ದ ಜಾಗದಿಂದಲೇ ಹೋರಾಡ್ತೀನಿ” ಅಂತಾನೇ ಆ ಹುಡುಗ. ಆ ಮಾತಿನಂತೆಯೇ ಶ್ರೀಕಾಂತ ಸಿನಿಮಾ ಸಾಗುತ್ತಾ ಹೋಗುತ್ತದೆ! ಆತನ ಬಗ್ಗೆ ತಿಳಿಯದ ಕಾರಣಕ್ಕೋ ಏನೋ ನನಗೆ ಇಡೀ ಸಿನಿಮಾ ಕುತೂಹಲದಿಂದ ನೋಡಿಸಿಕೊಂಡಿತು. ಆಂಧ್ರದ ಬಡರೈತನ ಕುಟುಂಬದ ಕಣ್ಣಿಲ್ಲದ ಕೂಸಾಗಿ ಹುಟ್ಟುವ ಶ್ರೀಕಾಂತನನ್ನು ಹುಟ್ಟಿದ ದಿನವೇ ಅವರ ತಂದೆ ಸಾಯಿಸಲು ಹೊರಡುತ್ತಾನೆ. ಆದರೆ ತಾಯಿಯ ಒತ್ತಾಯದಿಂದ ಶ್ರೀಕಾಂತ ಉಳಿಯುತ್ತಾನೆ ಮತ್ತು ಬೆಳೆಯುತ್ತಾನೆ. ಹಾಗೆ ಹುಟ್ಟಿದ ಕ್ಷಣದಿಂದಲೇ ಹೋರಾಟ ಎಂಬುದು ಅವನ ಬದುಕಿನ ಭಾಗವಾಗುತ್ತದೆ!

ಸೈನ್ಸ್ ವಿಭಾಗಕ್ಕೆ ಸೇರಲು ಆತ ಹೋರಾಡುವ ರೀತಿ, India doesn’t need me ಅಂತ್ಹೇಳಿ ಅಮೇರಿಕಾದ ಎಂಐಟಿ ಸೇರುವುದು, ಅಲ್ಲಿ ವಿದ್ಯಾಭ್ಯಾಸ ಮುಗಿದ ನಂತರ ಒಳ್ಳೊಳ್ಳೆ ಉದ್ಯೋಗದ ಅವಕಾಶಗಳಿದ್ದಾಗಲೂ India Needs me ಅಂತ ವಾಪಸ್ಸಾಗುವುದು, ಇಲ್ಲಿ ನೂರಾರು ಕೋಟಿ ವಹಿವಾಟಿನ ಸಂಸ್ಥೆಯನ್ನು ಕಟ್ಟಿ ಬೆಳೆಸುವುದನ್ನು ತೆರೆಮೇಲೆ ನೋಡುವಾಗ ರೋಮಾಂಚನವಾಗದೇ ಇರದು. ಸಾಮಾನ್ಯವಾಗಿ ಅಂಧರ ಸಿನಿಮಾ ಅಂದರೆ ಅದು ನೋವಿನ ಕಥೆಯೇ ಆಗಿರುತ್ತದೆ. ಯಾವ ನಿರ್ದೇಶಕರೇ ಆದರೂ ಈ ಕಥೆಯನ್ನು ಆ ದೃಷ್ಠಿಕೋನದಿಂದಲೇ ನೋಡುತ್ತಿದ್ದರು. ಮಹಾ ಅಂದರೆ ಇದನ್ನೊಂದು ಅವಾರ್ಡ್ ಸಿನಿಮಾವಾಗಿಸಬಹುದಿತ್ತು. ಅವನ ಕಷ್ಟಗಳನ್ನು ಹೇಳಿ, ಅವಮಾನಗಳನ್ನು ತೋರಿಸಿ, ನಮ್ಮನ್ನು ಅಳಿಸಿ, ಕೈಗೆ ಕರವಸ್ತ್ರ ಕೊಟ್ಟು ನಾವು ಒರೆಸಿಕೊಳ್ಳುವ ಹೊತ್ತಿಗೆ ಇಂಟರ್ವೆಲ್ ಬರ್ತಿತ್ತು. ಉಳಿದರ್ಧದಲ್ಲಿ ಆತುರಾತುರವಾಗಿ ಅವನ ಸಾಧನೆಗಳನ್ನು ಹೇಳಿ ಶುಭಂ ಎನ್ನುತ್ತಿದ್ದರು.

ಆದರೆ ಈ ಸಿನಿಮಾ ಅದಕ್ಕೆ ಹೊರತಾಗಿದೆ! ಇದರ ವೇಗ ಎಷ್ಟಿದೆ ಎಂದರೆ ಟೈಟಲ್ ಕಾರ್ಡ್ ಮುಗಿಯುವಷ್ಟರಲ್ಲಿ ಅವನ ಕಷ್ಟಗಳೆಲ್ಲಾ ಮುಗಿದು ಹೋರಾಟದ ಬದುಕು ಅರಂಭವಾಗಿಬಿಡುತ್ತೆ. ಅಲ್ಲಿಂದಾಚೆಗೆ ಶ್ರೀಕಾಂತ ಗೆಲ್ಲುತ್ತಾ ಹೋದಂತೆ ಇಲ್ಲಿ ಪ್ರೇಕ್ಷಕ ಅರಳುತ್ತಾ ಕೂರುತ್ತಾನೆ. ಸಿನಿಮಾ ಕಡಿಮೆ ಹೇಳಬೇಕು, ಜಾಸ್ತಿ ತೋರಬೇಕು ಎಂದು ಭಾವಿಸುವವನು ನಾನು. ಈ ಸಿನಿಮಾ ಅದಕ್ಕೆ ತಕ್ಕ ಹಾಗಿದೆ. ಕಣ್ಣಿಲ್ಲದವನು ಅಂದ ಮಾತ್ರಕ್ಕೆ ಅವನ ನೋವುಗಳನ್ನೇ ಮಿಕ್ಸಿಗೆ ಹಾಕಿ ರುಬ್ಬಿಲ್ಲ. ಅಂಧತ್ವವನ್ನು ಬಲವನ್ನಾಗಿಸಿಕೊಂಡು ಆತ ಬದುಕಿದ ರೀತಿಯನ್ನಷ್ಟೇ ನಿರ್ದೇಶಕರು ತೆರೆಮೇಲೆ ತಂದಿದ್ದಾರೆ. ರಾಜಕುಮಾರ್ ರಾವ್ ಎಂಬ ನಟನ ಕಥೆಗಳ ಆಯ್ಕೆ ತುಂಬಾ ಚೆನ್ನಾಗಿರುತ್ತೆ ಎಂಬ ನನ್ನ ಅಭಿಪ್ರಾಯವನ್ನು ಆತ ಮತ್ತೊಮ್ಮೆ ನಿಜವಾಗಿಸಿದ್ದಾನೆ. ಆತನ ಅಭಿನಯ ಈ ಸಿನಿಮಾದ ಮತ್ತೊಂದು ಹೆಗ್ಗಳಿಕೆ. ಜ್ಯೋತಿಕಾ, ಶರದ್ ಕೇಲ್ಕರ್ ಸಿನಿಮಾವನ್ನು ಇನ್ನಷ್ಟು ಸಹನೀಯವಾಗಿಸುತ್ತಾರೆ. ನಿಸ್ಸಂದೇಹವಾಗಿ ಮಕ್ಕಳಿಗೆ ಸ್ಫೂರ್ತಿ ತುಂಬಬಲ್ಲ ಸಿನಿಮಾವಿದು.

ಜೊತೆಗೆ ಗೆಲುವಿನ ಹಾದಿಯಲ್ಲಿರುವ ವ್ಯಕ್ತಿ ಯಾವಾಗ ಸೋಲಲಾರಂಭಿಸುತ್ತಾನೆ ಎಂಬುದನ್ನೂ ಈ ಸಿನಿಮಾ ಗಟ್ಟಿಯಾಗಿ ಹೇಳುತ್ತದೆ. ಮಗಳು ಕನಸುವಿನ ಒತ್ತಾಯದ ಮೇರೆಗೆ ಮೊದಲನೇ ದಿನವೇ ಸಿನಿಮಾ ನೋಡಿ ಬಂದೆವು. ಬಂದ ಕ್ಷಣದಿಂದಲೂ “ಅಲ್ಲಯ್ಯಾ, ಕಣ್ಣಿಲ್ಲದವ ನನ್ನಂತಹವನೇ ಇಷ್ಟೆಲ್ಲಾ ಸಾಧಿಸಬಹುದು ಅನ್ನೋದಾದರೆ ನಿಮಗ್ಯಾಕೆ ಸಾಧ್ಯವಿಲ್ಲ.” ಅಂತ ಪ್ರತಿಕ್ಷಣವೂ ಚೇಡಿಸಲಾರಂಭಿಸಿದ್ದಾನೆ ಈ ಶ್ರೀಕಾಂತ! ಅಂದ ಹಾಗೆ, ಇದು ಕಾಲ್ಪನಿಕ ಕಥೆ ಅಲ್ಲ. ನೈಜ ಕಥೆಯನ್ನಾಧರಿಸಿದ ಸಿನಿಮಾ. ಶ್ರೀಕಾಂತ ಬೊಲ್ಲ ಈ ಕಥೆಯ ಹೀರೋ. ಆತನ ಕಂಪೆನಿ ಹೆಸರು Bollant Industry. ಸಧ್ಯದ ವಹಿವಾಟು ಅಂದಾಜು ನೂರು ಕೋಟಿ. ಆತನ ವಯಸ್ಸು 32. ಸಾಧ್ಯವಾದರೆ “ಈ ಒಳಗಣ್ಣಿನ ಸಾಧಕನನ್ನು ನಮ್ಮ ಹೊರಗಣ್ಣುಗಳು ಕಣ್ತುಂಬಿಕೊಳ್ಳುವ ಅವಕಾಶ ನೀಡಿ”. ನಿಮ್ಮಲ್ಲೊಂದು ಕಿಡಿ ಹತ್ತದಿದ್ದರೇ ಹೇಳಿ.

‍ಲೇಖಕರು Admin MM

May 16, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: