ವಿಜಯಕ್ಕ ಅಜ್ಜಿಮನೆ ಕಥೆ- ಬೂಮರಾಂಗ್…

ವಿಜಯಕ್ಕ ಅಜ್ಜಿಮನೆ 

ಕಣ್ಣು ಬಿಟ್ಟಾಗ ಬೆಳಗ್ಗಿನ ೮ ಗಂಟೆ.. ಒಮ್ಮೆಯೂ ಎಚ್ಚರವಾಗದ ದಿವ್ಯ ನಿದ್ರೆ ಇಲ್ಲಿ ಮಾತ್ರ ಹೇಗೆ ಬರುತ್ತೆ ? ರೂಮಿನಿಂದ ಹೊರಬಂದಾಗ, ತಮ್ಮ ಉಲ್ಲಾಸ್ ಫೋನಲ್ಲಿ ಮಾತನಾಡುತಿದ್ದವ, ನನ್ನ ನೋಡಿದವನೇ.. ‘ಓ ನಿನ್ನ ಕ್ಲಾಸ್ ಮೇಟ್ ಬಂದಿದ್ದಾಳಪ್ಪ’ ಅಂದ ಒಹ್ ಸೂರ್ಯನ ಫೋನ್ ಅಂತ ಗೊತ್ತಾಯ್ತು.. ಸಂಜೆ ಮನೆ ಹತ್ರ ಬರ್ತೀನಂತ ಹೇಳು ಎಂದವಳೇ ಹಲ್ಲುಜ್ಜಲು ಹೊರಟೆ, ಅಡಿಗೆ ಮನೆ ಹೊಕ್ಕುತ್ತಿದ್ದಂತೆ ಬಿಸಿ ಕಾಫಿ ತಂದು ಮುಂದಿಟ್ಟಿದ್ದು ತಮ್ಮನ ಹೆಂಡತಿ ಮಮತಾ., ಟೇಬಲ್ ಮೇಲೆ ಗೆರಸಿಯಲ್ಲಿ ಹರಡಿದ್ದ ತೆಳ್ಳನೆಯ ಬಿಳಿ ಬಟ್ಟೆಯಲ್ಲಿ ಮಲಗಿದ್ದ ಒತ್ತು ಶ್ಯಾವಿಗೆ.., ನನ್ನ ಎಬ್ಬಿಸಬಾರದಿತ್ತಾ.. ಅಂದೆ..

ಒಳಬಂದ ಉಲ್ಲಾಸ ‘ತವರು ಮನೆಗೆ ಬಂದಿದ್ದೀಯಾ ಆರಾಮವಾಗಿ ತಿಂದುಂಡು ಇರು’ ಅಂದವನೇ ಪಕ್ಕದಲ್ಲಿ ಕುಳಿತ. ಆಗಾಗ ಕುಟುಂಬ ಸಮೇತ ತವರಿಗೆ ಬಂದು ಹೋಗುತಿದ್ದರೂ ಮಧ್ಯದಲ್ಲಿ ಒಬ್ಬಳೇ ತವರಿಗೆ ಬಂದು ೨ ದಿನ ಇದ್ದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆ.

ಒಬ್ಬಳೇ ಬಂದಾಗಿನ ಖುಷಿ ಬೇರೆಯೇ… ಈ ಬಾರಿ ಸೂರ್ಯ ಊರಲ್ಲೇ ಸೆಟ್ಲ್ ಆದ ಸುದ್ದಿ ವಿಶೇಷವಾಗಿದ್ದು, ತಮ್ಮ, ಹಾಗೂ ಸೂರ್ಯನ ಕರೆಗಳು ಜಾಸ್ತಿಯಾಗಿ ಊರು ತಲುಪುವಂತಾಗಿತ್ತು. ಅದೇನು ಸೂರ್ಯನ ಫೋನ್ ಬೆಲ್ಬೆಳಿಗ್ಗ?. ಅಮ್ಮನಿಗೆ ಎಲ್ಲಾ ವಿಷಯಾನೂ ಬೇಕು.. ಕಂಟ್ರಾಕ್ಟರ್ ನಂಬರ್ ಬೇಕಿತ್ತಂತೆ ಏನಕ್ಕೆ ? ಎನ್ನುತ್ತಲೇ ಅಮ್ಮ ಮಿಡಿ ಉಪ್ಪಿನಕಾಯಿ, ಕೊಬ್ರಿಯೆಣ್ಣೆ ಶ್ಯಾವಿಗೆ ಪಕ್ಕದಲ್ಲಿಟ್ಟಳು. ‘ಏನೋ ರಿಪೇರಿ ಯಂತೆ’..

ಸೂರ್ಯನ ತಂದೆ, ಹಾಗೂ ತಾತ ಬ್ಯಾಂಕ್ ಅಧಿಕಾರಿಗಳಾಗಿದ್ದವರು.. ಮುಲ್ಕಿಯಲ್ಲಿ, ತಾತ ಕಟ್ಟಿಸಿದ ಮನೆ, ಬಾಡಿಗೆಗೆ ಕೊಟ್ಟು, ಈ ಕುಟುಂಬ ಬ ಹಳ ವರ್ಷ ವರ್ಗಾವಣೆ ಮೇಲೆ ಊರೂರು ಸುತ್ತಿ, ತಾತ ತೀರಿಕೊಂಡ ವರ್ಷ ಸೂರ್ಯನ ಅಪ್ಪನಿಗೆ ಕಟಪಾಡಿಗೆ ವರ್ಗವಾಗಿತ್ತು. ಹೀಗಾಗಿ, ಮತ್ತೆ ಮುಲ್ಕಿ ಮನೆಗೆ ರಿಪೇರಿ ಕಾರ್ಯ ಶುರು ಮಾಡಿದ ದಿನವೇ ಸೂರ್ಯನ ಅಮ್ಮ ಸುಗಂಧಿ ಆಂಟಿ, ಮೊಟ್ಟ ಮೊದಲಿಗೆ ನಮ್ಮಲ್ಲಿಗೆ ಬಂದದ್ದು ..

ಬಚ್ಚಲ ಮನೆಗೆ ಹೋಗಲು ಬಂದವರು ಅಮ್ಮನೊಂದಿಗೆ ಫ್ರೆಂಡ್ ಆಗಿಬಿಟ್ಟರು… ಮನೆಯ ರಿಪೇರಿ ನಡೆದಷ್ಟೂ ದಿನ ಬೆಳಿಗ್ಗೆ ಬಂದವರು ಊಟಕ್ಕೆ ನಮ್ಮಲ್ಲೇ ಇದ್ದು ಸಂಜೆ ಕಟ್ಪಾಡಿಗೆ ಹಿಂತಿರುಗುತಿದ್ದರು. ಒಬ್ಬನೇ ಮಗ ಸೂರ್ಯ ನನ್ನ ವಯಸ್ಸಿನವನು, 6 ನೇ ಕ್ಲಾಸಿಂದ ನನ್ನ ಸ್ಕೂಲಿಗೆ ಸೇರಿದವ P U C ಮುಗಿಯುವತನಕ ನಾವಿಬ್ಬರೂ ಜೊತೆಯಾಗೇ ಇದ್ದೆವು. ದಿನಾ ಬೆಳಿಗ್ಗೆ ಸ್ಕೂಲ್ ವ್ಯಾನ್ ಹತ್ತಲು ಅವರ ಮನೆ ಹತ್ತಿರ ಹೋದಾಗಲೆಲ್ಲ ಸೂರ್ಯನ ಅಜ್ಜಿ, ಸುಗಂಧಿ ಆಂಟಿಗೆ ಬೈಯ್ಯೋದು, ಆಂಟಿ ಜೋರ್ ಮಾಡಿ ಉತ್ತರಿಸೋದು ಕೇಳಿಸ್ತಿತ್ತು..

ಇದು ಅಮ್ಮನಿಗೆ ಬಂದು ಹೇಳಿದಾಗ, ನಮ್ಮ ಗೇಟಲ್ಲೇ ವ್ಯಾನ್ ಹತ್ತಲು ಹೇಳಿದರಿಂದ, ಸೂರ್ಯನೂ ನನ್ನೊಂದಿಗೇ ಬಂದು ನಿಲ್ಲುತ್ತಿದ್ದ.. ಅಜ್ಜಿಗೆ ಏನ್ ಹೇಳಿದ್ನೋ ಗೊತ್ತಿಲ್ಲ.. ಅದೊಂದು ದಿನ ಅಮ್ಮ ತಿಂಡಿ ಕೊಟ್ಟು ಬರಲು ಹೇಳಿದಾಗ, ಹೊರಗೆ ಕೂತಿದ್ದ ಅಜ್ಜಿ ‘ರೇವತಿ, ಬಾಯಿಲ್ಲಿ, ನಮ್ಮನೆ ಜಗಳ ನೋಡಿ ಹೆದರಿ ಬರ್ತಿಲ್ಲವಂತೆ.. ಹೌದಾ ?…’ ಅಂತ ನನ್ನ ಕೈ ಹಿಡಿದು ಪಕ್ಕದಲ್ಲೇ ಕೂರಿಸಿ, ‘ನೋಡು ರೇವತಿ.., ನಾನು, ನನ್ನ ಗಂಡ ಕಟ್ಟಿಸಿದ ಮನೆ ಇದು. ಈಗ ಇವರಿಗೆ ಹಾಲ್ ದೊಡ್ಡದು ಬೇಕು ಅಂತ. ದೊಡ್ಡದಿರೋ ರೂಮನ್ನು ಚಿಕ್ಕದ್ ಮಾಡಿ. ಬಾತ್ ರೂಮ್ ಹೋಗ್ಬೇಕಾದ್ರು ಹೊರಗೆ ಹಾಲಿಂದ ಹೋಗೋ ತರಹ ಮಾಡಿದ್ದಾಳಲ್ಲ… ಕೋಪ ಬರದೇ ಇರುತ್ತಾ’ ಅಂತ.. ನನಗೆ ಆಕೆ ಒಪ್ಪಿಸಿದ ರೀತಿ, ಹಾಕಿದ ಕಣ್ಣೀರು, ವಿಷಯ ಸರಿಯಾಗಿ ಅರ್ಥವಾಗದೇ ಹೋದರೂ ಅಳು ಬರುವ ಹಾಗಾಗಿತ್ತು.

ನಾನು ವಿಜಯಾ ಕಾಲೇಜ್ನಲ್ಲಿ ಪಿ ಯು ಸಿ ಮುಗಿಸಿ ಕಾರ್ಕಳದಲ್ಲಿ ಡಿಗ್ರಿ ಸೇರಿದರೆ, ಸೂರ್ಯ ಕುಟುಂಬ ಹೈದ್ರಾಬಾದಿಗೆ ಹೋಗಿ ಸೆಟ್ಲ್ ಆಗಿತ್ತು. ಮುಲ್ಕಿ ಮನೆ ಮತ್ತೆ ಬಾಡಿಗೆಗೆ ಕೊಟ್ಟಿದ್ದ.. ನಂತರದೆಲ್ಲವೂ ಸುದ್ದಿಗಳೇ.. ಸೂರ್ಯನ ಇಂಜಿನೀರಿಂಗ್ ಮುಗಿದದ್ದು ಕೆಲಸ ಸಿಕ್ಕಿದ್ದು., ಮದುವೆ, ಮಕ್ಕಳು, ಅಜ್ಜಿ ತೀರಿಕೊಂಡಿದ್ದು.. ಎಂ. ಎ ಮುಗಿಸುತ್ತಿದ್ದಂತೆ ಮಾವನ ಮಗನ ಜೊತೆ ನನ್ನ ಮದುವೆ ಮುಗಿಸಿದ್ದರು.

ಮದುವೆಗೆ ಸುಗಂಧಿಆಂಟಿ ಗಂಡನೊಂದಿಗೆ ಬಂದು ಹೋಗಿದ್ದ ನೆನಪು. ಸೂರ್ಯನ ತಂದೆ ಮತ್ತೆ ಮುಲ್ಕಿಯ ಕಡೆ ಬರಲೇ ಇಲ್ಲ. ವರುಷಗಳು ಅದೆಷ್ಟು ವೇಗದಲ್ಲಿ ಓಡಿವೆ.. ಸಂಜೆ ಸೂರ್ಯನ ಮನೆ ಕಡೆ ಹೊರಟೆ. ಕೆಂಪುಗುಡ್ಡೆಯ ಉದ್ದನೆಯ ಚಿರಪರಿಚಿತ ರಸ್ತೆ. ಮನೆಯ ಹತ್ತಿರ ಹೋಗುತ್ತಿದ್ದಂತೆ. ಹೊರಗೇ ನಿಂತಿದ್ದ ಸೂರ್ಯ ಕಂಡ.. ಅದೆಷ್ಟು ವರ್ಷ ಆಯ್ತೆ ಮಾರಾಯ್ತಿ ಅಂದವನು ಹೆಂಡತಿಯನ್ನು ಪರಿಚಯಿಸಿದ.. ತುಂಬಾ ಚೆಂದವಿದ್ದಳು.. ನಿಮ್ಮ ಬಗ್ಗೆ ತುಂಬಾ ಹೇಳಿದ್ದಾರೆ..

‘೧೦ ನಿಮಿಷದಲ್ಲೇ ನಾನೂ ಮಧುರಾ ಸ್ನೇಹಿತರಾದೆವು. ನನ್ ಹೆಂಡ್ತಿ ನಂಗೆ ಬೆಸ್ಟ ಫ್ರೆಂಡ್ ಕಣೆ .. ಅಂದ ಮಧುರ ಕಾಫಿ ತರಲು ಹೋದಾಗ. ಮಧುರ ಅತ್ತೆ ರೂಮಿಗೆ ತಿಂಡಿ ಕೊಟ್ಟು ಬರುವಾಗ ರೇವತಿ ಬಂದಿದ್ದಾಳೆ ಅನ್ನೋದು ಕಿವಿಗೆ ಬಿತ್ತು. ತವಾ ಫ್ರೈ ಮಾಡಿದ ಪತ್ರೊಡೆ, ಗೆಣಸಿನ ಬಜ್ಜಿ ತಂದಿಟ್ಟು .. ನಿಮಗೆ ಇಷ್ಟ ಅಲ್ವಾ ಅಂತ ಕೇಳಿದಾಗ ‘ಹೌದು’ ಅಂದೆ. ಪತ್ರೊಡೆ ತುಂಬಾ ಚೆನ್ನಾಗಿದೆ ಅಂದೆ.. ನಿನ್ನೇನೆ, ನೀವು ಬಂದಾಗ, ಮಾಡಬೇಕಾದ ತಿಂಡಿ ಲಿಸ್ಟ್ ಕೊಟ್ಟಿದ್ರು.

ಮುಜುಗರ ಆಯ್ತು. ಏನೋ ಇಷ್ಟೊಂದು ನೆನಪು ಇಟ್ಕೊಂಡಿದ್ದೀಯ ಅಂದೆ. ‘ಇನ್ನು ಇದೆ. ಹೇಳ್ರಿ ಎಂದು ಮಧುರ, ಸೂರ್ಯನಿಗೆ ಏನೋ ಧೈರ್ಯ ಕೊಡುವ ತರಹ.. ಸೂರ್ಯ ನಗುತ್ತಾ ಕೂತಿದ್ದ … ನೀನೇ ಹೇಳಿಬಿಡು. ಮಧುರಾ ಅಂದ ನಗು ತಡೆದುಕೊಂಡು ಇಬ್ರು ಹೇಳ್ಬೇಡಿ.. ನಾಟಕ ಆಡ್ತಿದ್ದೀರ? ಅಂದೆ. ರೇವತಿ, ಕೇಳಿ.. ಒಮ್ಮೆ ಇವರು ನಿಮ್ಮನ್ನು ಕೇಳಿದ್ರಂತೆ ‘ನಾನು ನಿನ್ನ ಲವ್ ಮಾಡ್ತೀನಿ ಅಂದ್ರೆ ಏನ್ ಉತ್ರ ನಿಂದು ? ಅಂತ ಅದಕ್ಕೆ ನೀವು, ನೀವು..

ಏನಂದೆನಂತೆ….. ‘ಘಟನೆ ನೆನಪಿತ್ತು… ‘ಹೇಳ್ರಿ…ಅಂದಳು… ಸೂರ್ಯ ಏನೂ ಹೇಳದೆ ನಗುತಿದ್ದ… ಅವಳೇ ಮುಂದುವರೆಸಿದಳು. ‘ಒಂಚೂರು ಮುಖ ಆಕಡೆ ತಿರುಗಿಸು ಅಂದ್ರಂತೆ..’ ಆಕೆ ಕತ್ತು ಕೊಂಕಿಸಿ ತೋರಿಸಿದ ರೀತಿ ನಗು ಬಂತು. ಕೆನ್ನೆಗೆ ಬಾರಿಸೋದಿದ್ದಲ್ಲಿ ನಾವು ಎಲ್ಲಿ ‘ಕೆನ್ನೆ ತಿರ್ಗಿಸು’ ಅಂತ ಹೇಳುತ್ತಿದ್ದದ್ದು ನೆನಪಿಗೆ ಬಂತು. ಅಷ್ಟೇನಾ.. ಪುಕ್ಕಲ ನಿನ್ ಗಂಡ… ಕೆನ್ನೆ ಆ ಆಕಡೆ ತಿರ್ಗಿಸಿ ನೋಡೋದಲ್ವ… ಓಡಿ ಹೋಗಿ ಬಿಡೋದಾ ಅಂದೆ. ಮೂವರೂ ಜೋರಾಗಿ ನಗುತ್ತಾ ಆಂಟಿ ರೂಮಿಗೆ ಹೋದೆವು.

ಸೂರ್ಯನ ಅಜ್ಜಿ ರೂಮ್ ಈಗ ಸುಗಂಧಿಆಂಟಿ ರೂಮಾಗಿತ್ತು. ಮಂಚದ ಮೇಲೆ ಕೂತಿದ್ದ ಅವರು ನನಗೆ ಕೂರಲು ಜಾಗ ಮಾಡಿ ಕೊಡುತ್ತಾ ಬಾ ರೇವತಿ… ಕುತ್ಕೋ.. ಅಂದರು ಕುಳಿತೆ.. ಸಣ್ಣದೊಂದು ಟೀಪಾಯ್ ಗೋಡೆಯಲ್ಲೊಂದು ಟಿವಿ, ರೂಮು ಇಕ್ಕಟ್ಟಾಗಿತ್ತು.. ಅವರಿಬ್ಬರೂ ಬಾಗಿಲಲ್ಲೇ ನಿಂತರು. ಸ್ವಲ್ಪ ಸರಿದು ಜಾಗ ಮಾಡಿ, ಬಾ ಮಧುರ ಕುತ್ಕೋ ಅಂದೆ. ಪರವಾಗಿಲ್ಲ ಅನ್ನುತ್ತಾ ಅಲ್ಲೇ ನಿಂತರು.

ಸುಗಂಧಿ ಆಂಟಿ, ‘ಈ ರೂಮು, ನನ್ನ ಅತ್ತೆಯವರದಿತ್ತು.. ದೊಡ್ಡದಿತ್ತು.. ಹಾಲ್ ದೊಡ್ಡದು ಬೇಕು ಅಂತ.. ನಾನೇ…, ನನ್ನ ಅತ್ತೆ ರೂಮ್ ಚಿಕ್ಕದು ಮಾಡಿದ್ದೆ. ಈಗ ನೋಡು, ಹಿಂದೆಲ್ಲಾ.. ಈ ಜನ್ಮದಲ್ಲಿ ಮಾಡಿದ್ದು ಮುಂದಿನ ಜನ್ಮಕ್ಕೆ ಕಟ್ಟಿ ಕಟ್ಟಿ ಇಡೋದು ಅಂತಿದ್ರು.. ಈಗ ಹಾಗಲ್ಲ ಈ ಜನ್ಮದ್ದು ಈ ಜನ್ಮಕ್ಕೇ ನೋಡು… ಅದೇನದು ನೀವು ಆಡ್ತಿರಲ್ಲ ಬೂಮ್ರಾಂಗ್… ಆದ್ರೆ.. ನನ್ನ ಸೊಸೆ, ತುಂಬಾ ಒಳ್ಳೆಯವಳು ಕಣೆ. ಮೇಲಿನ ರೂಮ್ ತೊಗೊಳ್ಳಿ ಅಂತ ಬಲವಂತ ಮಾಡಿದ್ಲು. ಮಂಡಿ ನೋವು. ಹತ್ತೋದು ಇಳಿಯೋದು ಕಷ್ಟ .. ದಿನಾ ಮಸಾಜ್ ಮಾಡ್ತಾಳೆ..

ಹೀಗೊಂದು ನಿರೀಕ್ಷಿಸದ ಕನ್ಫೆಷನ್ ಒಂದು ನಮ್ಮ ಮುಂದೆ ಧಿಡೀರ್ ಅಂತ ನಡೆದದ್ದು.. ಬೇರೇನೂ ಮಾತನಾಡಲಾಗದ ಪರಿಸ್ಥಿತಿ. ಬಿಡು ಎಷ್ಟು ವರ್ಷಗಳ ನಂತರ ಸಿಕ್ಕಿದ್ದೇವೆ. ನಮ್ಮನ್ನ ನೋಡೋದಕ್ಕೆ ಬಂದಿದ್ದು. ‘ಸೂರ್ಯ ಮಾತನ್ನು ಬೇರೆ ಕಡೆಗೆ ತಿರುಗಿಸುವುದರಲ್ಲಿ ಯಶಸ್ವಿಯಾದ ಹೊರಗೆ ಬಂದೆ ಭಾರವಾದ ಮನಸ್ಸಿನಿಂದ.. ಅದೇನು ಕಂಟ್ರಾಕ್ಟರ್ ಗೆ ಬರೋಕ್ಕೆ ಹೇಳಿದ್ದು?. ಪರಿಸ್ಥಿತಿಯ ಗಂಭೀರತೆ ಕಡಿಮೆ ಮಾಡಲೆಂದು ಪ್ರಶ್ನೆ ಹಾಕಿದೆ.. ಇಷ್ಟು ದೊಡ್ದ ಹಾಲ್ ಬೇಕಾಗಿಲ್ಲ… ಅತ್ತೆ ರೂಂ ಹಿಂದಿನ ಹಾಗೆ ದೊಡ್ಡದು ಮಾಡೋಣ ಅಂತ ಮಧುರ ಅಂದಾಗ ಆಕೆಯನ್ನು ಹಗ್ ಮಾಡಿದೆ.

ಕೆಂಪು ಗುಡ್ಡದ ಆ ಉದ್ದನೆಯ ರಸ್ತೆಯ ಅಷ್ಟು ದೂರಬಂದವರು.. ನೀವು ಮನೆ ತನಕ ಬಿಟ್ಟು ಬನ್ನಿ ಎಂದು ನಗುವೊಂದನ್ನು ಕಣ್ಣಲ್ಲಿ ಹೊರ ಹಾಕಿ ಕೈ ಬೀಸಿದಳು ಸೂರ್ಯ, ನನ್ನೊಂದಿಗೆ ಹೆಜ್ಜೆ ಹಾಕಿದ.

ಕಾಲ, ವಯಸ್ಸು ಅದೆಷ್ಟು ಬದಲಾಯಿಸಿ ಬಿಡುತ್ತೆ ಅಲ್ವಾ ? ಅಮ್ಮ ನೋಡು, ನಿನ್ನೆದುರು ಕನ್ಫೆಸ್ ಮಾಡಿಕೊಂಡು, ಆರಾಮ ಆದರು ಇಷ್ಟು ವರ್ಷಗಳ ನಂತರ.. ಇದುವರೆಗೆ ಅವರು ಯಾರೊಂದಿಗೂ ಹೇಳಿಕೊಂಡಿಲ್ಲ.. ಮನಸ್ಸು ಹಗುರವಾಗಿರಬೇಕು. ರಾತ್ರಿ ತುಂಬಾ ಹೊತ್ತಿನ ನಂತರ ಹತ್ತಿದ ನಿದ್ರೆ ಕನಸಿನ ತುಂಬಾ ಗರಗರನೇ ಅತ್ತಿಂದಿತ್ತ ಓಡಾಡುತ್ತಿದ್ದ ಬೂಮರಾಂಗುಗಳು.

‍ಲೇಖಕರು Admin

November 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: