ವಾಣಿಜ್ಯ ನಗರಿಯಲ್ಲಿ ಅರಳಿದ ಕಲೆ: ನಮ್ಮ ಜುಗಲ್ ಬಂದಿ

ಗಿರಿಜಾ ಶಾಸ್ತ್ರೀ

(ನಾನು ಮತ್ತು ರಘುನಾಥ್ ಇಬ್ಬರೂ ಸೇರಿ ಬರೆದ ಬರಹ)
“ನಮ್ಮ ದೇಶದಲ್ಲಿ ಅಂತಹ ನಗರಗಳೆಲ್ಲಿವೆ ನ್ಯೂಯಾರ್ಕ್‌ ನಂತಹವು?” ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಎನ್ನುವ ರಘುನಾಥ್ ಅವರ ಪಿಎಚ್. ಡಿ ವಿಷಯವನ್ನು ಕೇಳಿದ ಯು.ಆರ್ ಅನಂತಮೂರ್ತಿಯವರು ಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಹೀಗೆ ನುಡಿದಿದ್ದರು. ಲಾಸ್ ಏಂಜಲೀಸ್ ನ ಬ್ರೆಂಟ್ ವುಡ್ ಪ್ರದೇಶದಲ್ಲಿರುವ ‘ಗೆಟ್ಟಿ‌ ಸೆಂಟರ್’ (ಆರ್ಟ್ ಗ್ಯಾಲರಿ) ಇರುವುದು ಸ್ಯಾಂಟಾ ಮೋನಿಕಾ ಪರ್ವತ ಮಾಲೆಗಳ ಮೇಲೆ. ಬೆಟ್ಟದ ಮೇಲೆ ನಿಂತು ಮುಸ್ಸಂಜೆಯಲ್ಲಿ ಕೆಳಗೆ ಕಾರಿನ ಪ್ರವಾಹಗಳನ್ನು ನೋಡುತ್ತಿದ್ದಾಗ ಯು.ಆರ್.ಎ ಅವರ ನೆನಪಾಯಿತು. ನಾಲ್ಕು ಸಾಲುಗಳಲ್ಲಿ ಮೈಲುಗಟ್ಟಲೆ ಕಾರುಗಳು ಒಂದರ ಹಿಂದೆ ಒಂದು‌ ಶಿಸ್ತಾಗಿ ಪ್ರವಾಹದೋಪದಿಯಲ್ಲಿ ಬರುತ್ತಿದ್ದವು. ಮೇಲಿನಿಂದ ಕಾಣುವಾಗ ಬೆಳಕಿನ ಪ್ರವಾಹಚಲಿಸುತ್ತಿರುವಂತೆ ಭಾಸವಾಗುತ್ತಿತ್ತು. ಇಲ್ಲಿ ಇಡೀ ಲಾಸ್ ಏಂಜಲೀಸ್ ನಗರದ ಪಕ್ಷಿನೋಟವೊಂದು ದೊರಕುತ್ತದೆ.

ಲಾಸ್ ಏಂಜಲೀಸ್ ನಮ್ಮ ಮುಂಬಯಿಗಿಂತಲೂ ದೊಡ್ಡ ಶಹರ. ಅಮೇರಿಕಾದಲ್ಲಿರುವಂತಹ ನಗರಗಳು ನಮ್ಮ ದೇಶದಲ್ಲಿ ಇಲ್ಲದಿರಬಹುದು. ಆದರೆ ಪ್ರತಿಯೊಂದು ನಗರಕ್ಕೂ‌ಅದರದೇ ಆದ ಕಂಪನಗಳು (vibes) ಇದ್ದೇ ಇರುತ್ತದಲ್ಲವೇ? (ಅನಂತ ಮೂರ್ತಿಯವರು ಈಗ ಬದುಕಿದ್ದಿದ್ದರೆ ಖಂಡಿತಾ ಈ ಮಾತನ್ನು ಅವರಿಗೆ ತಿಳಿಸುತ್ತಿದ್ದೆ)
ನಗರೀಕರಣಕ್ಕೂ, ಆಧುನಿಕತೆಗೂ ನಂಟು ಇದ್ದದ್ದೇ! ಅದಕ್ಕೆ ಪ್ರತಿಕ್ರಿಯೆಯಾಗಿ, ಪ್ರತಿಭಟನೆಯಾಗಿ, ಪೂರಕವಾಗಿ, ಪರ್ಯಾಯವಾಗಿ ಕೊನೆಗೆ ಸಾಮರಸ್ಯದ ರೂಪವಾಗಿ ಅನಾದಿಕಾಲದಿಂದಲೂ ಸಾಹಿತ್ಯ ಮತ್ತು ಕಲೆ ತನ್ನ ದಿಕ್ಕನ್ನು ಬದಲಾಯಿಸುತ್ತಾ ರೂಪಾಂತರಗೊಳ್ಳುತ್ತಲೇ ಬಂದಿದೆ.

ಲಾಸ್ ಏಂಜಲೀಸ್ ನ ಆರ್ಟ್ ಗ್ಯಾಲರಿಯ ಹೊರಗೆ ನಿಂತು ಹರಿದು ಬರುತ್ತಿರುವ ಕಾರುಗಳನ್ನು ನೋಡುವಾಗ ನನಗೆ ನೆನಪಾದದ್ದು ನವ್ಯ ಸಾಹಿತ್ಯದ ಪ್ರಾತಿನಿಧಿಕವೆನ್ನಬಹುದಾದ ಕಥೆಗಳು.

ಗೆಟ್ಟಿ ಆರ್ಟಗ್ಯಾಲರಿಯೊಳಗೆ ಹೊಕ್ಕಾಗ ಅಲ್ಲಿ ತೆರೆದುಕೊಂಡದ್ದೇ ಇನ್ನೊಂದು ಲೋಕ. ಎಂಟನೇ ಶತಮಾನದಿಂದ ಹಿಡಿದು ನಗರಗಳ ಹುಟ್ಟಿಗೆ ಆಧುನಿಕತೆಗೆ ಕಾರಣವಾದ ಈಗಿನ ವರೆಗಿನ ಅನೇಕ ರೀತಿಯ ಗ್ರೀಕ್ ಶಿಲ್ಪಗಳು, ಪುನರುತ್ಥಾನ ಕಾಲದ ಯೂರೋಪಿಯನ್ ಚಿತ್ರಕಲೆಗಳು, ರೇಖಾ ಚಿತ್ರಗಳು, ಹಸ್ತಪ್ರತಿಗಳು, ಮುದ್ರಣ ಯಂತ್ರದ ಆವಿಷ್ಕಾರದ ಪ್ರತೀಕವಾಗಿ ಹೊಸದಾಗಿ ಮುದ್ರಣಕ್ಕೆ ಒಳಗಾದ ಬೈಬಲ್ ಪ್ರತಿಗಳು, ಫೋಟೋಗ್ರಫಿಯ ಆರಂಭಕಾಲದಿಂದ ಇಲ್ಲಿಯವರೆಗೆ ಸಂಗ್ರಹಿಸಿದ ಜಗದ್ವಿಖ್ಯಾತ ಪೋಟೋಗಳು, ಅಲಂಕಾರಿಕ ಕಲಾರೂಪಗಳು (Decorative arts).

ಕಳೆದು ಹೋದ ಕ್ಲಾಸಿಕ್ ಕಲಾಕೃತಿಗಳನ್ನು , ಪ್ರಾಚೀನ ಗ್ರಂಥಗಳನ್ನು ಮುದ್ರಿಸುವುದರ ಮೂಲಕ, ಅನುವಾದ ಮಾಡುವುದರ ಮೂಲಕ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ ಒಂದು ಕ್ರಾಂತಿಯ ಸ್ವರೂಪವೇ ಆ ಎರಡು ಮಹಡಿಗಳ ಬೃಹತ್ ಕೊಠಡಿಗಳಲ್ಲಿ ಚಲ್ಲವರಿದಿದ್ದವು. ಪ್ರದರ್ಶನಕ್ಕಿಟ್ಟ ಚಿತ್ರಗಳು ಮತ್ತು ಇತರ ಪ್ರತಿಕೃತಿಗಳು ಅಂದಿನ ದಿನಗಳ ನೆನಪಿನ ಘಮಲನ್ನು ಕೋಣೆಗಳ ತುಂಬಾ ಪಸರಿಸಿದ್ದವು. ಕೋಣೆಯ ಹೊರಗೆ ೨೨ನೇ ಶತಮಾನದ ಅತ್ಯಾಧುನಿಕತೆ ದೌಡಾಯಿಸುತ್ತಿತ್ತು.

ಎಲ್ಲಾ ಕೋಣೆಗಳಲ್ಲೂ ಸುಸಜ್ಜಿತ ಕಾವಲುಗಾರರು. ಫ್ಲ್ಯಾಷ್ ಬರುವ ಫೋಟೋಗಳನ್ನು ತೆಗೆಯುವ ಹಾಗಿಲ್ಲ. ಎಲ್ಲ ಕಡೆ ಶಾಂತಿಯಿಂದ ಸಾಗುವ ಪ್ರೇಕ್ಷಕರು.

ನಮ್ಮ ಮುಂಬಯಿನ ಜಹಾಂಗೀರ್ ಆರ್ಟ್ ಗ್ಯಾಲರಿಯ ನೆನಪು ಮರುಕಳಿಸಿತು. ಇದು ಅದರ ಕಲ್ಪನೆಗೂ ಮೀರಿದಷ್ಟು ದೊಡ್ಡದಾಗಿತ್ತು ( ೨೪ ಎಕರೆ ವಿಸ್ತೀರ್ಣ). ಚಿತ್ರಗಳನ್ನು ನೋಡಿ ಅವುಗಳ ವಿವರಣೆಗಳನ್ನು ಓದುವಷ್ಟರಲ್ಲಿ ಕಾಲುಗಳು ದಣಿದವು. ಕೇವಲ ಎರಡು ಮಹಡಿಯ ಕೋಣೆಗಳನ್ನು ನೋಡಲು ಎರಡು ಮೂರು ತಾಸು. ಹೀಗಾಗಿ ಶಿಲ್ಪಕಲೆಗೆ ಸಂಬಂಧಿಸಿದಂತಹ ಕಟ್ಟಡಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ. ಈ ಗ್ಯಾಲರಿಯದ್ದೇ ಆದ ವಿಶಿಷ್ಟ ಉದ್ಯಾನವೂ ಇದೆ. ಪೂರ್ತಿ ನೋಡಲು ಎರಡು ದಿನಗಳಾದರೂ ಬೇಕು.

ಲಾಸ್ಏಂಜಲೀಸ್ ನ ‘ಯೂನಿವರ್ಸಲ್ ಸ್ಟೂಡಿಯೋ’ ( ಡಿಸ್ನಿ ವರ್ಲ್ಡ್) ಇಲ್ಲ ‘ಗೆಟ್ಟಿ ಸೆಂಟರ್’ (ಆರ್ಟ್ ಗ್ಯಾಲರಿ ) ಇವುಗಳಲ್ಲಿ ಒಂದನ್ನು ನೋಡುವಷ್ಟು ಕಾಲಾವಕಾಶ ಮಾತ್ರ ನಮಗಿತ್ತು. ನಾವು ಗೆಟ್ಟಿಯನ್ನೇ ಆರಿಸಿಕೊಂಡೆವು. ಗ್ಯಾಲರಿಯ ಆವರಣ ಹೊಕ್ಕ ತಕ್ಷಣ ಕಣ್ಣಿಗೆ ಬಿದ್ದುದು ಅನೇಕ ಪ್ರಾಚೀನ ಗ್ರೀಕ್ ನಗ್ನ ಹಾಗೂ ಆಧುನಿಕ‌ ಶಿಲ್ಪಗಳು.

ಪ್ರತಿಯೊಂದು ಕೋಣೆಗಳಲ್ಲೂ ಮಧ್ಯಕಾಲೀನ ಯುರೋಪಿನ ಪುನರುತ್ಥಾನ ಯುಗದ ಕಲಾವಿದರ ಅನೂಹ್ಯ ಚಿತ್ರಗಳು. ಮೈಕೆಲ್ ಎಂಜಲೊ, ವ್ಯಾನ್ ಗೊ, ರೆಂಬ್ರಾಂಟ್, ಇತ್ಯಾದಿ ಪ್ರಸಿದ್ಧ ಯುಗ ನಿರ್ಮಾಪಕ ಕಲಾವಿದರ ಚಿತ್ರಗಳು. ಬಹುತೇಕ ಕ್ರಿಸ್ತನ ಹುಟ್ಟಿದ ದಿನದಿಂದ ಹಿಡಿದು, ಅವನ ದೀಕ್ಷೆ, ಅವನನ್ನು ಎಳೆದುಕೊಂಡು ಹೋಗುತ್ತಿರುವ, ಮುಳ್ಳಿನ ಕಿರೀಟವನ್ನು ತೊಡಿಸುತ್ತಿರುವ, ಕ್ರೂಸಿಫಿಕೇಷನ್, ಅವನ ಕಣ್ಣಿನಲ್ಲಿನ ಅಪಾರ ಕರುಣೆ, ಮೇರಿ ಮ್ಯಾಗ್ಡಲಿನ, ಅವಳ ಕೈಯಲ್ಲಿ ಮಗು, ರೋಮ್ ಸಾಮ್ರಾಜ್ಯದ ಕಾಲದಲ್ಲಿ ಅಲ್ಲಿನ ನಿರಂಕುಶ ಪ್ರಭುತ್ವದ ಅಡಿಯಲ್ಲಿ ಸಿಕ್ಕಿ ಅತ್ಯಾಚಾರಕ್ಕೆ ಒಳಗಾದ ಹೆಣ್ಣು, ಕಣ್ಣೀರು ಗರೆಯುತ್ತ, ಎದಗೆ ಚೂರಿ ಹಾಕಿಕೊಂಡು ತನ್ನ ಪ್ರತಿಭಟನೆಯನ್ನು ದಾಖಲಿಸಿದ ಅಪೂರ್ವ ಭಾವಪೂರ್ಣ ಚಿತ್ರ. ಅದರ ಪರಿಣಾಮವಾಗಿ , ಹುಟ್ಟಿದ ಚಳವಳಿಯಿಂದ ತನ್ನ ಪ್ರಭುತ್ವವನ್ನು ಕಳೆದುಕೊಂಡ ಅನನ್ಯ ಕ್ಷಣಗಳು.

ನಮ್ಮ ಕಂಸನನ್ನು ಹೋಲುವ ರಾಜ ಮಗು ತನ್ನನ್ನು ಕೊಲ್ಲುತ್ತದೆ ಎಂಬ ಭವಿಷ್ಯದ ವಾಣಿಯನ್ನು ಕೇಳಿ ಅವಳನ್ನು ಕೊಲ್ಲ ಹೊರಡುವನು. ಅದಕ್ಕೆ ಮೊದಲು ಡಯೋನಿಸಿಸ್ ಎನ್ನುವ ಗ್ರೀಕ್ ಪುರಾಣ ದೈವ ಮಾರುವೇಷದಿಂದ ಪ್ರವೇಶ ಮಾಡಿ ಅವಳನ್ನು ಬಸಿರುಮಾಡುತ್ತಾನೆ. ‌ ‌ಇಂತಹ ಅಪೂರ್ವ ಚಿತ್ರಗಳನ್ನು ಹೊಚ್ಚ ಹೊಸದಾಗಿ ಕಾಣುವಂತೆ ರಕ್ಷಿಸಲಾಗಿದೆ. ಇದು ಅವರ ಅಭಿರುಚಿ ಮತ್ತು ಅದನ್ನು ಶಿಸ್ತಿನಿಂದ ನಿರಂತರವಾಗಿ ಕಾಪಾಡಿಕೊಂಡು ಬರುವ ಅವರ ಆಸ್ಥೆಯನ್ನು ವ್ಯಕ್ತಪಡಿಸುತ್ತದೆ.

ಹೀಗೆ ಅನೇಕ ಕಾಲಮಾನಗಳಿಗೆ ಸೇರಿದ ಶಿಲ್ಪಕಲೆಗಳು, ಯೂರೋಪಿಯನ್ ಅಲಂಕಾರಿಕ ಕಲೆಗಳು (decorative arts),ವಿಶೇಷ ವಿದ್ಯುತ್ ಬೆಳಕನ್ನು ಹೊಂದಿದ ಹಸ್ತಪ್ರತಿಗಳು,ಸುಭದ್ರ ಚೌಕಟ್ಟುಗಳುಳ್ಳ ಬೃಹತ್ ಗಾತ್ರದ ಫ್ರೆಂಚ್‌ ಅಲಂಕಾರಿಕ ಕಲೆಗಳು, ಹತ್ತೊಂಬತ್ತನೇ ಶತಮಾನದ‌ ಚಿತ್ರಕಲೆ, ರೇಖಾಚಿತ್ರ ಮತ್ತು ಛಾಯಾಚಿತ್ರಕ್ಕೆ ಸಂಬಂಧಿಸಿದ ಪ್ರದರ್ಶನಗಳು ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ಎಂಬ ನಾಲ್ಕು ದಿಕ್ಕುಗಳಲ್ಲಿ ಹರಡಿಕೊಂಡಿವೆ.
ಅನೇಕ ಕ್ಲಾಸಿಕ್ ಚಿತ್ರಕಲೆಯನ್ನು ಸಮಕಾಲೀನರು ಮರುಸೃಷ್ಟಿ ಮಾಡುವ ಸವಾಲುಗಳನ್ನೂ ಬೇಕಾದರೆ ಸ್ವೀಕರಿಸಬಹುದು. ಅದಕ್ಕಾಗಿ ಇಲ್ಲಿ ಕಲಾವಿದರಿಗೆ ಅವಕಾಶವಿದೆ.

ಜೆ ಪಾಲ್ ಗೆಟ್ಟಿ (೧೮೯೨-೧೯೭೬) ಎನ್ನುವ ಒಬ್ಬ ಶ್ರೀಮಂತ ಉದ್ಯಮ ಪರಂಪರೆಗೆ ಸೇರಿದ ಕಲಾರಾಧಕ. ಇಟಾಲಿಯನ್ ಪುನರುತ್ಥಾನ , ಡಚ್ ಮತ್ತು ಫ್ಲೆಮಿಷ್ ಬ್ರೊಕ್ (Dutch and flemish baroque) ಕೃತಿಗಳಲ್ಲಿ ತೀವ್ರವಾದ ಆಸಕ್ತಿ ಯನ್ನು ಹೊಂದಿದ ಗೆಟ್ಟಿ ಆ ಪರಂಪರೆಯ ಪ್ರಖ್ಯಾತ ಕಲಾಕಾರರ
ಮೂಲ ಕಲಾಕೃತಿಗಳನ್ನು ಸಂಗ್ರಹಿಸುವಲ್ಲಿ ಸು. ನಾಲ್ಕು ದಶಕಗಳ ಕಾಲ‌ ಶ್ರಮಿಸಿದ.

ಇಟಾಲಿಯ ಕಲಾವಿದರುಗಳಾದ ಮಸಾಚ್ಚೊ – 1401-1428 (Masaccio), ಟಿಷನ್ -1488-1576 ( Titian), ಪರ್ಮಜ್ಯಾನೀನೋ (Parmigianino,) (1503 -1540), ಕ್ಯನುಲೆಟೊ, (Canaletto) (1697-1768)
ಜರ್ಮನಿಯ ಲುಕಾಸ್ ಕನಾಖ್ (Lucas Cranach,1472-1553), ಫ್ರೆಂಚ ಕಲಾವಿದರುಗಳಾದ ನಿಕೊಲಸ್ ಪುಷಿನ್ (ಬ್ರೋಕ್ ಶೈಲಿ) (Nicholas Poussin 1594-166), ಫ್ರ್ಯಗ್ನಾರ್ ( Fragonard 1732-1806) ಮ್ಯಾನೆಟ್ (Manet,1832-183),ಎಡ್ಗರ್ ಡುಗಾ ( Edgar Degas 1834-1883) Degas, ಅಗಸ್ಟ್ ರಿನೊ (Renoir 1841-1919), ಇಂಗ್ಲೇಂಡಿನ ರೊಮ್ಯಾಂಟಿಕ್ ಕಲಾವಿದ ಟರ್ನರ್ (J.M.W. Turner 1775-1851) ಗ್ರೀಕ್ ಕಲಾವಿದ ಎಲ್ ಗ್ರ್ಯಾಕೊ El Greco (1542-1614)

ಡಚ್ ಕಲಾವಿದರುಗಳಾದ ವಿನ್ಸೆಂಟ್ ವ್ಯಾನ್ ಗೊ ( Vincent VanGogh,( 1853-1890) ರೆಂಬ್ರ್ಯಾಂಟ್( 1606-69) ಹೀಗೆ ಅವನು ಆಸ್ಥೆಯಿಂದ ಒಟ್ಟು ಮಾಡಿದ ಚಿತ್ರಗಳ ಹಾಗೂ ಚಿತ್ರಕಲಾಕಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
“ಒಬ್ಬ ನಿಜವಾದ ಕಲಾಪ್ರೇಮಿಯು ಕಲಾಕೃತಿಗಳನ್ನು ಕೇವಲ ತನಗಾಗಿ ಮಾತ್ರ ಸಂಗ್ರಹಿಸುವುದಿಲ್ಲ. ತಾನು ಮಾತ್ರ ಅನುಭವಿಸಬೇಕು, ಸಂತೋಷಪಡಬೇಕು ಎಂಬ ಸ್ವಾರ್ಥಪರತೆಯಿಂದ, ಲಾಲಸೆಯಿಂದ ಅವನು ಚಿತ್ರಕಲೆಗಳನ್ನಾಗಲೀ, ಶಿಲ್ಪವನ್ನಾಗಲೀ, ಯಾವುದೇ ಪುರಾತನ ವಸ್ತುಗಳನ್ನಾಗಲೀ ಒಟ್ಟುಮಾಡುವುದಿಲ್ಲ. ಒಂದು ಕಲಾಕೃತಿಯ ಸೌಂದರ್ಯವನ್ನು ಮೆಚ್ಚುವುದರ ಜೊತೆಗೆ , ತನ್ನ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳಲು ಕಾತುರನಾಗಿರುತ್ತಾನೆ” (—J. Paul Getty, The Joys of Collecting, 1965) ಎಂಬ ಅವನ ಮಾತುಗಳಿಗೆ ಗೆಟ್ಟಿ ಗ್ಯಾಲರಿ ಒಂದು ಜೀವಂತ ಸಾಕ್ಷಿಯಾಗಿದೆ.

ನೂರಕ್ಕಿಂತಲೂ ಹೆಚ್ಚು ಮಹಾನ್ ಕಲಾಕೃತಿಗಳ ಸಮೀಕ್ಷೆಗಳು, ವಿವರಗಳು, ಬಣ್ಣ ಬಣ್ಣದ ರೋಚಕ ಚಿತ್ರಣಗಳು ಈ ಕಲಾಕೃತಿಗಳ ಐತಿಹಾಸಿಕ ಸಂಗತಿಗಳ ಕಡೆಗೆ ಗಮನ ಸೆಳೆಯುವುದಲ್ಲದೇ ಅವುಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನೂ ಸಾರುತ್ತವೆ. “ಪಾಶ್ಚಾತ್ಯ ಕಲೆಯ ಪುರಾತನ ಲೋಕಕ್ಕೆ ಇದೊಂದು ಅಭೂತಪೂರ್ವ ಯಾತ್ರೆ ಇದ್ದಂತೆ” ಎಂದು ಕಲಾಪ್ರೇಮಿಗಳು ಬಣ್ಣಿಸುತ್ತಾರೆ.

ಮನುಷ್ಯ ಸಮಾಜವನ್ನು ಸುಸಂಸ್ಕೃತಗೊಳಿಸುವಲ್ಲಿ, ನಾಗರಿಕವನ್ನಾಗಿ ಮಾಡುವಲ್ಲಿ ಕಲೆಯ ಪ್ರಭಾವ ಅನನ್ಯವಾದದ್ದು ಎಂದು ನಂಬಿದವನು ಗೆಟ್ಟಿ. ಅವನ ಅಪೂರ್ವ ಕಲಾಕೃತಿಗಳ ಸಂಗ್ರಹಗಳೇ ಲಾಸ್ ಏಂಜಲೀಸ್ ನ ಬ್ರೆಂಟ್ ವುಡ್ ನಲ್ಲಿರುವ ‘ಗೆಟ್ಟಿ ಸೆಂಟರ್’ ಎಂಬ ಕಲಾಕೇಂದ್ರಕ್ಕೆ ನಾಂದಿ ಹಾಡಿದವು. ಇದು ಸಾರ್ವಜನಿಕರಿಗೆ ತೆರೆದದ್ದು ೧೯೯೭ ರಲ್ಲಿ. ಪ್ರತಿ ವರ್ಷ ೧.೮ ಬಿಲಿಯ ಜನರು ಇಲ್ಲಿಗೆ ಭೇಟಿ ನೀಡುತ್ತಾರೆಂದು ವರದಿಯಾಗಿದೆ. ಮತ್ತು ಮಾಲಿಬು ಎಂಬ ಕಣಿವೆ ಪ್ರದೇಶದಲ್ಲಿರುವ ‘ಗೆಟ್ಟಿ ವಿಲ್ಲಾ’ ಪ್ರಾಚೀನ ಗ್ರೀಕ್, ರೋಮ್ ಕಲೆಗಳನ್ನು ಅಭ್ಯಾಸ ಮಾಡುವ ಶಿಕ್ಷಣ ಸಂಸ್ಥೆ ಹಾಗೂ ಸಂಶೋಧನ ಕೇಂದ್ರವೂ ಆಗಿದೆ.

ಬೆಟ್ಟದ ಮೇಲಿರುವ ಗ್ಯಾಲರಿಗೆ ಹೋಗಿ ಬರಲು ಟ್ರ್ಯಾಮ್ ವ್ಯವಸ್ಥೆ ಇದೆ. ಒಂದರ ಹಿಂದೆ ಇನ್ನೊಂದು ಬರುತ್ತಲೇ ಇರುತ್ತದೆ. ಗಾಡಿಗಳನ್ನು ಪಾರ್ಕ್ ಮಾಡಲು ಹಣ ಕೊಟ್ಟರೆ ಸಾಕು ( ೨೦ ಡಾಲರು, ಸಂಜೆ ಐದೂವರೆಯ ಮೇಲೆ ಹತ್ತು ಡಾಲರ್) ಟ್ರ್ಯಾಮ್ ನಲ್ಲಿ ಸಂಚರಿಸಲು ಮತ್ತು ಗ್ಯಾಲರಿಯ ಒಳಗೆ ಹೋಗಲು ಬೇರೆ ಟಿಕೆಟ್ಟನ್ನು ಖರೀದಿಸುವ ಅಗತ್ಯವಿಲ್ಲ.

ಆರ್ಟ್ ಗ್ಯಾಲರಿಯಲ್ಲಿ ತುಂಬಿ ತುಳುಕುವ ಕಲಾಪ್ರೇಮಿಗಳು. ಸಣ್ಣ ಸಣ್ಣ ಮಕ್ಕಳ ಜತೆಗೆ. ನಡೆಯಲಾರದ ಮಕ್ಕಳ ಬೆನ್ನು ಮೇಲೆ ಹೊತ್ತ ಅಪ್ಪಂದಿರು ನಡೆಯುತ್ತಿದ್ದ ದೃಶ್ಯ ಅಚ್ಚರಿ ಹುಟ್ಟಿಸುವಂತಿತ್ತು.

ಎಲ್ಲ ನೋಡಿಕೊಂಡು ಕೊಂಡು ಕೆಳಗೆ ಬಂದರೆ ಅವುಗಳಿಗೆ ಸಂಬಂಧಿಸಿದ ಕಲಾವಿದರ ಅಂಗಡಿ. ಅವರ ಕುರಿತ ಪುಸ್ತಕಗಳು. ಅವುಗಳನ್ನು ಕಣ್ತುಂಬಿಕೊಂಡು ಮತ್ತೆ ಟ್ರ್ಯಾಮ್ ನಲ್ಲಿ ಮರಳಿ ಹೊರಟೆವು. ನಮ್ಮ ಕಳಿಸಿದವಳು ಶಾಮಲೆಯಾದರೆ ಸ್ವಾಗತಿಸಿದವಳು ಶ್ವೇತ ಸುಂದರಿ. ಅಲ್ಲಿಂದ ಮರಳಿದಾಗ ರಾತ್ರಿಯಾಗಿತ್ತು.

ಕೆಲವು ಚಿತ್ರಗಳು : ಗೂಗಲ್ ಕೃಪೆ

‍ಲೇಖಕರು Admin

September 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: