ವಸುಂಧರಾ ಕದಲೂರು
ಅಬ್ದಿಯುಂ ಒರ್ಮೆ ಕಾಲವಶದಿಂ
ಮರ್ಯಾದೆಯಂ ದಾಂಟದೇ
ಕಡಲು ಕದಲುವುದಿಲ್ಲ
ನಿಂತ ಆವಾರದ ಆಚೆಗೆ
ತುಳುಕದೆ ಥಳುಕು ಬದುಕಿಗೆ
ಹೊರಳದೇ.. ಬಳುಕಿ ಬಂದ
ನದಿಗಳ ಒಡಲೊಳಗೆ
ಶಾಂತಗೊಳಿಸುವ
ಕಡಲು ತನ್ನೊಡಲಲಿ ನಿತ್ಯ
ನಿರಾಳ ಮೌನದಲಿ ಧ್ಯಾನ
ಮಾಡುವಂತಿರುತ್ತದೆ.

ಕಾಲವಶದಲಿ ಅಬ್ದಿ
ಮರ್ಯಾದೆಯಂ ದಾಂಟಿ
ಮುನ್ನಡೆದರೆ….
ಕಡಲ ಮೌನ ಕದಡುವ
ಒಡಲ ಬಡಬಾನಲ
ಸುನಾಮಿ ಎಬ್ಬಿಸಿ
ಅಲೆಗಳ ಮುಗಿಲೆತ್ತರ
ಉಬ್ಬಿಸಿ ಆರ್ಭಟಿಸಿ
ಕುಣಿದು ಹುಚ್ಚೆದ್ದರೆ
ಆಗ ಕಡಲಂಚಿನಾಚೆಗೂ
ಸ್ಮಶಾನ ಮೌನ ವಿಸ್ತರಿಸುತ್ತದೆ
0 ಪ್ರತಿಕ್ರಿಯೆಗಳು