ವಸಂತ ಬನ್ನಾಡಿ ಹೊಸ ಕವಿತೆ- ಅಮ್ಮ…

ವಸಂತ ಬನ್ನಾಡಿ


ಹೂಗಳು ಮಾತನಾಡುತ್ತವೆಯೇ
ಹಾಗೇ ಕೊನೆಗಾಲದಲಿ ನನ್ನಮ್ಮ
ತನ್ನದೇ ತೋಟದ ಹೂವಾಗಿ ನಳನಳಿಸುತ್ತಿದ್ದವಳು
ನಿಧಾನ ಬಾಡುತ್ತಾ ಹೋದಳು ಕಣ್ಣೆದುರೇ

ನೆಲ ಸೀಳಿ ನೆಗೆವ ಗರಿಕೆ ಹುಲ್ಲಿನ ಕಸುವ
ರಟ್ಟೆಗಳಲಿ ತುಂಬಿಕೊಂಡಿದ್ದವಳು
ಇದೀಗ ಮೌನ ಚಿಗುರು
ಆಗಾಗ ಚಿಮ್ಮುವ ನಗೆ ಎಸಳು

ನೋವು ಎಷ್ಟು ಅಭ್ಯಾಸವಾಗಿತ್ತೆಂದರೆ ಅವಳಿಗೆ
ಬಿಡಾರ ಹೂಡಲು ಬಂದ
ಬೇಸರ ಪಿಶಾಚಿಯನು
ಹೋಗಾಚೆ ಎಂದು ಬದಿಗೆ ಸರಿಸುತ್ತಿದ್ದಳು
ಮರೆಗುಳಿತನ ಮಾತ್ರ ಅದು ಹೇಗೋ
ಕಣ್ಣುತಪ್ಪಿಸಿ ಬಂದು ಕೂತು
ಕಠೋರ ಆಟ
ಹೂಡಿಯೇ ಬಿಟ್ಟಿತು
ಕಣ್ಣು ಬಿಟ್ಟು ನೋಡುವುದೆಷ್ಟೋ ಅಷ್ಟೇ
ಕಳೆದು ಹೋಗಿದ್ದವು ಹಾಗೇ ಕೊನೆಯ ಮೂರು ವರ್ಷ!

ಇನ್ನೂ ಮರೆವು ಪೂರ್ತಿ ಕೈ ಕೊಡದ ದಿನಗಳಲಿ
‘ಬಂದೆಯಾ ಬಾ’ ಎಂದು ನಗು ಸೂಸಿ
ಅವುಚಿಕೊಳ್ಳುವ ಹಕ್ಕಿಮರಿ
ಬದುಕಿನ ದಾರಿಯಲಿ ಉಂಡ ನೋವಿನ
ಸುಳಿವೇ ಇರುತ್ತಿರಲಿಲ್ಲ ಅಲ್ಲಿ

ಬದುಕಿನುದ್ದಕ್ಕೂ
ನಾನು ಅವಳ ಕಣ್ಣಲ್ಲಿ ಕಂಡದ್ದು
ಮಿಣುಕು ನಕ್ಷತ್ರದಂತಹ ಉಜ್ವಲ ನಗು


ಭಾವುಕಳಾಗಲು ಸಮಯ ಎಲ್ಲಿತ್ತು ಅವಳಿಗೆ
ಬದುಕಿನ ಕಂದೀಲು ಹಿಡಿದು
ದಾಪುಗಾಲಲಿ ನಡೆದವಳು
ತಾನೇ ಉರಿದು ಬೆಳಕನು ಹಂಚಿದವಳು
ನೆಲಕ್ಕಂಟಿ ಕೂತ ಮೋಹಕ ಹಣತೆ!

ಅವಳಲ್ಲಿ ಇದ್ದುದು ಒಂದೇ ಆಸೆ
‘ಸಾಕು ಪೇಟೆಯ ಸಹವಾಸ
ಮಕ್ಕಳೂ ನೆರಳು ಕಂಡು ಕೊಂಡಾಯ್ತು
ಇನ್ನೇನಿದ್ದರೂ
ತನ್ನದೇ ಊರು ಮನೆ ಮಣ್ಣು ಎಂದು ಬದುಕಬೇಕು’
ಹಠಮಾರಿ ಗಂಡನನು ಬಿಡದೆ ಬಗ್ಗಿಸಿ
ಸಾಧಿಸಿದಳು ಅದನು ಕೊನೆಗೂ

ಇದ್ದೇ ಇದ್ದರು ಅಲ್ಲಿ
ಮನಸು ಹಂಚಿಕೊಳ್ಳಲು ಸಂಗಾತಿ ಮಿತ್ರರು
ದನ ಕರು ಗಿಡ ಗಂಟೆ ಬಯಲು ಹಾರೋ ಹಕ್ಕಿಗಳು

‘ಯಾರನು ಕೇಳಿ ಒಳಗೆ ಬಂದಿರಿ?’
ಗದರಿಸಿ ಹುಳು ಹುಪ್ಪಟೆಗಳಿಗೆ
ನೀಳ ಕುತ್ತಿಗೆಯಲಿ ಇಣುಕುವ ಇರಿಚಲಿಗೆ
ಭದ್ರ ಪಡಿಸಿಕೊಳ್ಳುತ್ತಿದ್ದಳು ಕಿಟಕಿಗಳನು
ಕಾಯುತ್ತಿದ್ದಳು ಅವಳು ಮತ್ತೊಂದು ಮಳೆಗಾಲಕೆ

ಆಕಾಶದ ಫಲಕ್ಕಿಂತ
ಒಣಗಿದ ಬೇರಿಗೆ
ನೀರುಣಿಸುವ ಕಾತರದಲಿ


ಕಿರಿದಾಗುತ್ತಾ ಹೋಗುತ್ತಿರಬಹುದು ಜಗತ್ತು
ಅಮ್ಮ ಕಟ್ಟಿಕೊಂಡದ್ದು ಮಾತ್ರ
ತನ್ನದೇ ಪುಟ್ಟಲೋಕವನು
ದೃಷ್ಟಿ ಒಗ್ಗೂಡಿಸಿಕೊಳ್ಳುತ್ತಾ
ಅಂಗಳವನು ಚೊಕ್ಕವಾಗಿಟ್ಟುಕೊಳ್ಳುತ್ತಾ
ಮಳೆ ಗಾಳಿ ಚಳಿ ಜೊತೆ ಸೆಣಸುತ್ತಾ

ಗೊತ್ತಿರಲಿಲ್ಲ ಅವಳಿಗೆ ದೇಶ ವಿದೇಶಗಳ ಮಾತು
ಸರೀಕರ ಸುಖ ದುಃಖ ಪ್ರೀತಿ ದ್ವೇಷಾದಿಗಳೆ
ಅವಳಿಗೆ ದೊಡ್ಡ ಸುದ್ದಿ
ಹತ್ತು ಹೆಜ್ಜೆಯಲ್ಲೇ ಜಗತ್ತನು ಕಂಡರಿಸಿದವಳು

ಖುಷಿಗೊಂಡರೆ ನಾವು ಅವಳ ಕೈರುಚಿಗೆ
ಅಮ್ಮನ ಮೊಗದಲಿ
ಕಿರು ಯಜಮಾನಿಕೆಯ ಮೃದು ನಗು
ಊರ ಬೆಳಕಿಗೆ ಮುಖ ಮಾಡಿದ ಮೇಲೆ
ಮನಸು ಮಾಡಲೇ ಇಲ್ಲ
ಮನೆ ಬಿಟ್ಟು ದೂರ ಹೋಗಲು

ಗುನುಗುತ್ತಿದ್ದಳು ಅದೇನನೋ
ಬಿಡಲಿಲ್ಲ ಎಂದೂ ಹಾಡುವ ಖುಷಿಯನು
ಅವಳ ಒಳಗಿತ್ತು ಒಂದು ಉಲ್ಲಾಸದ ಚಿಲುಮೆ

ಸಖೇದಚ್ಚರಿ ನನಗೆ
ಹೇಗೆ ಬತ್ತದಂತೆ ಕಾಪಾಡಿಕೊಂಡಳು
ಅದೇ ಹುರುಪನು ಎಂಭತ್ತರ ಹರೆಯದಲ್ಲೂ!?


ಮೊನ್ನೆ ಹೋಗಿದ್ದೆ ನಾನು ಅಮ್ಮನಿಲ್ಲದ ಮನೆಗೆ
ಅಷ್ಟೆತ್ತರ ಬೆಳೆದು ನಿಂತಿತ್ತು ಹುಲ್ಲು ಮನೆ ಸುತ್ತ
ಕತ್ತಿ ಕಾಣದ ಸ್ವಚ್ಛಂದ ಹುಲ್ಲು
ಅಲ್ಲಿ ಅಮ್ಮ ಇರುವಂತಿದ್ದರೆ?
ಕಣ್ಣಲ್ಲೆ ಸಂಭ್ರಮಿಸಿ
‘ಹಾಲು ತರುವೆ ಇರು’ಎಂದು
ಪುಟ್ಟ ಪಾದಗಳಲಿ ಓಡಾಡುವಂತಿದ್ದರೆ?

‍ಲೇಖಕರು Admin

June 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: