ವಲಸೆ ಹಕ್ಕಿಯಂತೆ ತಿರುಗಾಡುತ್ತಿದ್ದ ಕವಿ..

ಪ್ರಸಾದ್ ನಾಯ್ಕ್

**

ನಿನ್ನೆ-ಮೊನ್ನೆಯವರೆಗೆ ಬಿಡದೆ ಕರೆ ಮಾತಾಡುತ್ತಿದ್ದ ಮಿತ್ರರೊಬ್ಬರು ಏಕಾಏಕಿ ಇನ್ನಿಲ್ಲವೆಂದಾಗ ಆ ಸತ್ಯವನ್ನು ಅರಗಿಸಿಕೊಳ್ಳಲೇ ಬಹಳ ಸಮಯ ಬೇಕಾಗುತ್ತದೆ. ಲಕ್ಕೂರು ಆನಂದರ ವಿಷಯದಲ್ಲೂ ಹೀಗೆಯೇ ಆಯಿತು. ಎಂದಿನಂತಿದ್ದ ಸಾಮಾನ್ಯ ಬೆಳಗಿನಲ್ಲಿ ಲಕ್ಕೂರು ಆನಂದರು ಇನ್ನಿಲ್ಲವೆಂಬ ಸುದ್ದಿ ಬಂದೆರಗಿದಾಗ ನಾನು ಗರಬಡಿದವನಂತೆ ನಿಂತುಬಿಟ್ಟಿದ್ದೆ. ಹೀಗಾಗಿ ಕೆಲವೆಡೆ ಕರೆ ಮಾಡಿ ಕೂಡಲೇ ವಿಚಾರಿಸಿದೆ. ಬಹುಷಃ ಸುದ್ದಿಯು ಆಗಷ್ಟೇ ಹರಿಯಲು ಶುರುವಾಗಿತ್ತು. ಹೀಗಾಗಿ ಯಾರಿಗೂ ಈ ಬಗ್ಗೆ ಗೊತ್ತಿದ್ದಂತೆ ಕಾಣಲಿಲ್ಲ. ಈ ನಡುವೆ ಲಕ್ಕೂರು ಆನಂದರೇ ಪರಿಚಯಿಸಿದ್ದ ಒಂದಿಬ್ಬರು ತೆಲುಗು ಲೇಖಕ ಮಿತ್ರರು ಇದು ನಿಜವೇ ಎಂದು ಮೆಸೇಜ್ ಮಾಡಿ ಕೇಳಿದ್ದರು. “ಏನೂ ಗೊತ್ತಾಗುತ್ತಿಲ್ಲ, ಯಾವುದಕ್ಕೂ ಖಚಿತಪಡಿಸಿಕೊಂಡೇ ಹೇಳುತ್ತೇನೆ,” ಎಂದು ಚಿಕ್ಕದಾಗಿ ಮುಗಿಸಿ ಫೋನಿಟ್ಟುಬಿಟ್ಟೆ.

ಈಗೆಲ್ಲ ದಂಡಿಯಾಗಿ ಹರಿದು ಬರುವ ಫೇಕ್ ನ್ಯೂಸ್ ಗಳಂತೆ ಇದು ಕೂಡ ಸುಳ್ಳಾಗಲಿ ಎಂದು ಮನಸ್ಸು ಒಳಗೊಳಗೇ ಹಂಬಲಿಸುತ್ತಿತ್ತು. ದುರಾದೃಷ್ಟವಶಾತ್ ಹಾಗಾಗಲಿಲ್ಲ! ಒಂದು-ಒಂದೂವರೆ ವರ್ಷದ ಹಿಂದೆ ತಾವಾಗಿಯೇ ಪರಿಚಯ ಮಾಡಿಕೊಂಡು ಲಕ್ಕೂರು ಆನಂದರು ಕರೆ ಮಾಡಿದ್ದು ನನಗೆ ನೆನಪಿದೆ. ಹೀಗೆ ಕರೆ ಮಾಡಿದ್ದ ಮೊದಲ ದಿನವೇ ನಾವು ಆಜನ್ಮ ಗೆಳೆಯರಂತೆ ಹರಟಿದ್ದೆವು. ಇದಾದ ನಂತರ ಅವರು ಲೆಕ್ಕವಿಲ್ಲದಷ್ಟು ಬಾರಿ ಕರೆ ಮಾಡಿದ್ದಾರೆ. ಅಸಂಖ್ಯ ಸಂಗತಿಗಳ ಬಗ್ಗೆ ನಾವು ಮಾತಾಡಿದ್ದೇವೆ. ಆನಂದರು ಹೀಗೆ ಅದೆಷ್ಟೋ ಮಂದಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ನನಗೆ ತಿಳಿದಿದ್ದೇ ಅವರು ನಮ್ಮ ನಡುವಿನಿಂದ ಮರೆಯಾದ ಬಳಿಕ.

“ಹೇಗಿದ್ದೀರಿ ಕವಿಗಳೇ?”, ಅಂತೆಲ್ಲ ಮಾತನ್ನಾರಂಭಿಸುತ್ತಿದ್ದ ಲಕ್ಕೂರು ಆನಂದರಿಗೆ ಕಾವ್ಯದ ಬಗ್ಗೆ ಬಹಳ ಪ್ರೀತಿಯಿತ್ತು. ಆಗೆಲ್ಲಾ “ಕವಿ ನಾನಲ್ಲ ಸಾರ್, ನೀವೇ”, ಅನ್ನುತ್ತಿದ್ದೆ ನಾನು. ಹಾಗೆ ನೋಡಿದರೆ ನಾವಿಬ್ಬರು ಎಂದೂ ಭೇಟಿಯಾಗಿರಲಿಲ್ಲ. ಆದರೆ ಅವರು ಕರೆ ಮಾಡಿದಾಗಲೆಲ್ಲಾ ಬಹಳ ಮಾತಾಡುತ್ತಿದ್ದೆವು. ತುಸು ಹೆಚ್ಚೇ ಎಂಬಷ್ಟು ಕರೆ ಮಾಡುತ್ತಿದ್ದರು ಎಂದರೂ ಅಡ್ಡಿಯಿಲ್ಲ. ಹೇಗಿದ್ದೀರಿ? ಕೆಲಸ ಹೇಗಿದೆ? ಮಗಳು ಹೇಗಿದ್ದಾಳೆ? ಏನು ಓದ್ತಿದ್ದೀರಿ? ಏನು ಬರೆದ್ರಿ? ದಿಲ್ಲಿಯಿಂದ ಮನೆಯ ಕಡೆ ಯಾವಾಗ ಹೋಗ್ತೀರಿ? ಹೀಗೆ ಎಲ್ಲದರ ಬಗ್ಗೆಯೂ, ಪ್ರತೀ ಕರೆಯಲ್ಲೂ ತಪ್ಪದೆ ಪ್ರೀತಿಯಿಂದ ವಿಚಾರಿಸುತ್ತಿದ್ದರು. ಹಲವು ಸಂಗತಿಗಳ ಬಗ್ಗೆ ಫಿಲಾಸಫಿಕಲ್ ಆಗಿ ಮಾತಾಡುತ್ತಿದ್ದರು. ಇಂದಿಗೆ ವೈರಾಗ್ಯದ ಮಾತುಗಳು ಸಾಕೆನ್ನುವಂತೆ ನಾನು ಸುಳಿವು ಕೊಟ್ಟರೆ, ತನ್ನ ಮುಂದಿನ ಪುಸ್ತಕ-ಯೋಜನೆಗಳ ಬಗ್ಗೆಯೆಲ್ಲ ಅಷ್ಟೇ ಹುಮ್ಮಸ್ಸಿನಲ್ಲಿ ಮಹಾತ್ವಾಕಾಂಕ್ಷೆಯ ಮಾತುಗಳನ್ನಾಡುತ್ತಿದ್ದರು.

ನಾನೊಮ್ಮೆ ದಿಲ್ಲಿಯಲ್ಲಿ ತೆಲುಗಿನ ಪ್ರಖ್ಯಾತ ಕವಿ, ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಶಿವಾ ರೆಡ್ಡಿಯವರನ್ನು ಭೇಟಿಯಾಗಿದ್ದೆ. ಅದೊಂದು ಚಿಕ್ಕ ಭೇಟಿಯಲ್ಲಿ ಆ ಹಿರಿಯ ಜೀವವು ತೋರಿಸಿದ್ದ ಆಪ್ತತೆಯು ನನಗಿನ್ನೂ ನೆನಪಿದೆ. ಈ ಬಗ್ಗೆ ಆನಂದರಿಗೆ ಹೇಳಿದಾಗ ಬಹಳ ಖುಷಿಪಟ್ಟಿದ್ದರು. ಇತ್ತೀಚೆಗೆ ಸ್ಟಾರ್ ತಾರಾಗಣವಿದ್ದ ತೆಲುಗಿನ ಜನಪ್ರಿಯ ಚಲನಚಿತ್ರವೊಂದಕ್ಕೆ ಹಾಡು ಬರೆದಿದ್ದೆ ಎಂದು ಕೂಡ ಅವರು ಹೇಳಿದ ನೆನಪು. ಕ್ರೆಡಿಟ್ಸ್ ಸಿಗದ ಬಗ್ಗೆ ಅವರು ಸಹಜವಾಗಿ ಹೇಳಿಕೊಂಡಾಗ ಅವರಿಗಿಂತ ಹೆಚ್ಚು ನಾನೇ ಬೇಜಾರುಪಟ್ಟುಕೊಂಡಿದ್ದೆ. ಇವುಗಳಲ್ಲದೆ ಚಲಂ ಬಗ್ಗೆ ಅವರಿಗಿದ್ದ ಮೋಹ ಮತ್ತು ನನಗಿದ್ದ ಕುತೂಹಲದ ಬಗ್ಗೆ ನಾವು ಮಾತಾಡಿಕೊಂಡಿದ್ದೂ ಇದೆ. ಈ ನಡುವೆ ಚಲಂ ಬರೆದ ಪ್ರೇಮಪತ್ರಗಳ ಸಂಕಲನವನ್ನು ನಾನೇ ಕಳಿಸಿಕೊಡುತ್ತೇನೆ ಅಂದಿದ್ದರು. ಆದರೆ ಅದು ಆನಂದರು ಈ ಹಿಂದೆ ನೀಡಿದ್ದ ಹಲವಾರು ಭರವಸೆಗಳಂತೆ ಪೂರ್ತಿಯಾಗದೆ ಉಳಿದುಬಿಟ್ಟಿದೆ.

ಇತ್ತೀಚೆಗೆ ಪತ್ರಿಕೆಯೊಂದರ ಟಾಪ್ ಟೆನ್ ಪಟ್ಟಿಯಲ್ಲಿ ಈ ಚಲಂ ಪ್ರೇಮಪತ್ರಗಳ ಸಂಕಲನವನ್ನು ಕಂಡಾಗ ಬಹಳ ಖುಷಿಯಾಗಿತ್ತು. ನನ್ನ ವಲಯದಲ್ಲಿರುವ ಕೆಲವೇ ಕೆಲವು ಅಪ್ಪಟ ಮನುಷ್ಯರಲ್ಲಿ ಲಕ್ಕೂರು ಆನಂದರು ಕೂಡ ಒಬ್ಬರಾಗಿದ್ದರು ಎಂದು ನಿಸ್ಸಂಕೋಚವಾಗಿ ಹೇಳಬಲ್ಲೆ. ಅವರ ಮಾತಿನಲ್ಲಿ ಅಷ್ಟು ಪ್ರೀತಿಯಿರುತ್ತಿತ್ತು. ತಮ್ಮ ಕಳೆದುಹೋದ ಸಂಬಂಧಗಳ ಬಗ್ಗೆಯೂ ಬಹಳ ಪ್ರೀತಿ ಮತ್ತು ಗೌರವವಿಟ್ಟುಕೊಂಡೇ ಅವರು ಮಾತಾಡುತ್ತಿದ್ದರು. ಯಾರಾದರೊಬ್ಬರ ವಿವರವನ್ನು ನೀಡಿ, ನೀವು ಇವರೊಂದಿಗೆ ಮಾತಾಡಲೇಬೇಕು ಎಂದು ಬೆನ್ನು ಬೀಳುತ್ತಿದ್ದರು. ಇದೇ ರೀತಿ ನನ್ನನ್ನು ಕೂಡ ತಮ್ಮ ಹಿರಿಯ, ಕಿರಿಯ ಗೆಳೆಯರೊಂದಿಗೆಲ್ಲಾ ಅವರು ಬೆಸೆದಿದ್ದಿದೆ. ಯಾರ ಗುಣದಲ್ಲಾದರೂ, ಕೆಲಸದಲ್ಲಾದರೂ ಒಂದೊಳ್ಳೆಯ ಅಂಶವನ್ನು ಕಂಡಾಗ ಅದನ್ನು ಗುರುತಿಸಲು ಮತ್ತು ಪ್ರಶಂಸಿಸಲು ಅವರಿಗೆ ಯಾವ ಸಂಕೋಚವೂ ಇರಲಿಲ್ಲ. ಇಷ್ಟೆಲ್ಲಾ ಇದ್ದೂ ಲಕ್ಕೂರು ಆನಂದ್ ವಲಸೆಗೆ ಹೊರಟ ಹಕ್ಕಿಯಂತೆ ಆಗಾಗ ಮಾಯವಾಗುತ್ತಿದ್ದರು ಅಥವಾ ಅಜ್ಞಾತವಾಸವೊಂದನ್ನು ಮುಗಿಸಿ ಬಂದವರಂತೆ ಅದೆಲ್ಲಿಂದಲೋ ಥಟ್ಟನೆ ಮರಳಿ ಬರುತ್ತಿದ್ದರು.

ನಾನಿನ್ನು ಅಲ್ಲಿ ಸಿಗೋದಿಲ್ಲ, ಈ ರೆಫರೆನ್ಸ್ ಇಟ್ಟುಕೊಳ್ಳಿ; ಆ ನಂಬರ್ ಹೋಯಿತು, ಈ ನಂಬರ್ ಇಟ್ಟುಕೊಳ್ಳಿ ಅಂತೆಲ್ಲ ಗೊಂದಲಕ್ಕೆ ದೂಡುತ್ತಿದ್ದರು. ಹೀಗಾದಾಗಲೆಲ್ಲಾ “ನೀವೇ ನನಗೆ ಕರೆ ಮಾಡೀಪ್ಪಾ, ಇದೆಲ್ಲಾ ಬರೀ ಗೋಜಲು” ಅಂತ ನಾನು ಹುಸಿಮುನಿಸು ತೋರಿಸುತ್ತಿದ್ದೆ. “ಅಲ್ಲಲ್ಲ ಕವಿಗಳೇ… ಅದು ಹಾಗಲ್ಲ ಹೀಗೆ”, ಅಂತೆಲ್ಲ ಸಮಜಾಯಿಷಿಗಳನ್ನೂ ಅವರು ನೀಡುವುದಿತ್ತು. ಅಂತೂ ಈ ಸಮಜಾಯಿಷಿಗಳು ಮುಗಿಯುವಂಥದ್ದಲ್ಲ ಎಂಬುದು ನನಗೆ ಕ್ರಮೇಣ ಮನದಟ್ಟಾಗಿತ್ತು. ಲಕ್ಕೂರು ಆನಂದರು ಇನ್ನಿಲ್ಲವೆಂಬ ವರ್ತಮಾನ ಬಂದಾಗ ಅವರ ಬಗ್ಗೆ ನಾಲ್ಕು ಸಾಲು ಬರೆಯಲು ಸಾಧ್ಯವಾಗದಷ್ಟೂ ನಾನು ಕುಸಿದುಹೋಗಿದ್ದೆ. ನಂತರ ಹಲವಾರು ಮಂದಿ ಅವರ ಮತ್ತು ಅವರ ಬದುಕಿನ ವಿವಿಧ ಸಂಗತಿಗಳ ಬಗ್ಗೆ ಸಾಕಷ್ಟು ಬರೆದರು. ಕೊಂಚ ದೂಷಣೆ, ಪ್ರೀತಿ, ಅತಿರೇಕ, ಅಸೂಯೆ, ಅಚ್ಚರಿ, ಕುತೂಹಲ, ಅಸಡ್ಡೆ ಹೀಗೆ ಎಲ್ಲಾ ಛಾಯೆಗಳೂ ನನಗೆ ಅವುಗಳಲ್ಲಿ ಕಂಡಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ ದೈತ್ಯ ಪ್ರತಿಭೆಯುಳ್ಳ ಯುವಕನೊಬ್ಬ ತನ್ನ ಬದುಕನ್ನು ಹೀಗೆ ವ್ಯರ್ಥಗೊಳಿಸಿದನಲ್ಲಾ ಎಂಬ ಕಾಳಜಿಯು ಬಹುತೇಕರಲ್ಲಿತ್ತು.

ಪ್ರೀತಿಯಿರುವ ಕಡೆ ಇಂತಹ ಕಾಳಜಿಗಳಿರುವುದು ಸಹಜ. ಆ ನೋವು ನನ್ನದೂ ಕೂಡ. ಲಕ್ಕೂರು ಆನಂದರ ಹೊಸ ಪುಸ್ತಕಗಳ ಬಗ್ಗೆ ಬರೆಯಬಹುದಿತ್ತು. ಕಾಡುವ ಅವರ ಹಳೆಯ ಕವಿತೆಗಳ ಬಗ್ಗೆ ಬರೆಯಬಹುದಿತ್ತು. ಚಿಕ್ಕ ವಯಸ್ಸಿನಲ್ಲೇ ಮುಡಿಗೇರಿಸಿಕೊಂಡ ಬಿರುದು-ಸಮ್ಮಾನ ಪ್ರಶಸ್ತಿಗಳ ಜೊತೆಗೆ, ಹೆಮ್ಮರವಾಗಲು ಹಂಬಲಿಸುತ್ತಿದ್ದ ಅವರ ಸಮಕಾಲೀನ ಸಾಹಿತ್ಯಕೃಷಿಯನ್ನೂ ಹೆಮ್ಮೆಯಿಂದ ನೋಡಬಹುದಿತ್ತು. ಆದರೆ ಲಕ್ಕೂರು ಆನಂದರ ಬಗ್ಗೆ ಹೀಗೆ ನುಡಿ ನಮನವೊಂದನ್ನು ಬರೆಯಬೇಕಾಗುತ್ತದೆ ಎಂದು ನಾನು ಯಾವತ್ತೂ ಊಹಿಸಿರಲಿಲ್ಲ. ಬಹಳ ಬೇಗ ಹೊರಟುಬಿಟ್ಟಿರಿ ಎಂದು ಬೈದು ಹೇಳಲೂ ಅವರೀಗ ನಮ್ಮೊಂದಿಗಿಲ್ಲ. ಕಾಡಿದ ಗೆಳೆಯನಿಗೆ ಅಂತಿಮ ನಮನಗಳು ಮತ್ತು ನೋವಿನ ವಿದಾಯ…

‍ಲೇಖಕರು Admin MM

May 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: