ತಳಮಟ್ಟದ ಸಮಾಜದಲ್ಲಿನ ತಳಮಳಗಳ ಅರಿವಿಲ್ಲದ ಭಾವನಾತ್ಮಕ ಅಸ್ಮಿತೆ ತೋರಿಕೆಯಾದೀತು
ನಾ ದಿವಾಕರ
—-
ಮತ್ತೊಂದು ಕರ್ನಾಟಕ ರಾಜ್ಯೋತ್ಸವ ನಮ್ಮ ಮುಂದಿದೆ. ಚೆಲುವ ಕನ್ನಡ ನಾಡು ಉದಯವಾಗಿ ಆರು ದಶಕಗಳೇ ಕಳೆದು ಕರ್ನಾಟಕ ಎಂಬ ಹೆಸರು ಪಡೆದ ಸುವರ್ಣ ಸಂಭ್ರಮದಲ್ಲಿ ಈ ಬಾರಿ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕರ್ನಾಟಕ ಎಂದು ನಾಮಕರಣ ಮಾಡಿದ ಐವತ್ತನೆಯ ವರ್ಷವನ್ನು ಅತ್ಯುತ್ಸಾಹದೊಂದಿಗೆ ವರ್ಷದುದ್ದಕ್ಕೂ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರ ಭಾವನಾತ್ಮಕ ನೆಲೆಯಲ್ಲಿ ಅಪೇಕ್ಷಣೀಯವೇ. ಈ ಐವತ್ತು ವರ್ಷಗಳಲ್ಲಿ ಕರ್ನಾಟಕ ನಡೆದುಬಂದ ಹಾದಿ ಹಾಗೂ ಮರೆತುಹೋದ ಚರಿತ್ರೆಯ ಹೆಜ್ಜೆ ಗುರುತುಗಳನ್ನು ಪುನರ್ ಮನನ ಮಾಡಿಕೊಳ್ಳಲು ಇದೊಂದು ಸುಸಂದರ್ಭ. ರಾಜ್ಯ ಸಂಸ್ಕೃತಿ ಸಚಿವಾಲಯ ಹಾಗೂ ಇಲಾಖೆಯ ವತಿಯಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿರುವುದೂ ಸಹ ಸ್ವಾಗತಾರ್ಹವೇ.
ಆದರೆ ಈ ಸಂಭ್ರಮದ ನಡುವೆಯೇ ರಾಜ್ಯದ ಜನತೆಯ ಮುಂದಿರುವ ಜ್ವಲಂತ ಸಮಸ್ಯೆಗಳತ್ತ, ಜಟಿಲ ಸಿಕ್ಕುಗಳತ್ತ ಗಮನಹರಿಸುವುದು ಕರ್ನಾಟಕದ ಜನತೆಯ-ಆಳುವವರ ಆದ್ಯತೆಯಾಗಬೇಕಿದೆ. ಕರ್ನಾಟಕದ ನೆಲ-ಜಲ ಸಂಪತ್ತಿನ ವೃದ್ಧಿಗೆ, ಸಮಾಜದ ಸಮೃದ್ಧಿಗೆ ದುಡಿಯುತ್ತಿರುವ ಸಮಸ್ತ ಜನಕೋಟಿಯನ್ನೂ ಕನ್ನಡಿಗರು ಎಂಬ ವಿಶಾಲಾರ್ಥದ ನೆಲೆಯಲ್ಲಿ ರಾಜ್ಯವು ಎದುರಿಸುತ್ತಿರುವ ಸವಾಲುಗಳನ್ನು ಈ ಸಂದರ್ಭದಲ್ಲಿ ಪರಾಮರ್ಶಿಸಬೇಕಿದೆ. ನವಂಬರ್ 1ರಂದು ಮನೆಮನೆಯಲ್ಲಿ ಕನ್ನಡ ಬಾವುಟ, ಅಂಗಳದ ರಂಗೋಲಿಯ ಚಿತ್ತಾರ ಮತ್ತಿತರ ಉತ್ಸವಗಳಿಂದಾಚೆಗೆ ಕರ್ನಾಟಕದ ಭವಿಷ್ಯದ ಪೀಳಿಗೆಯ ಬದುಕು ಹಾಗೂ ಕನ್ನಡ ಮಾತ್ರವೇ ಅಲ್ಲದೆ ಕರ್ನಾಟಕದ ಇತರ ಸ್ಥಳೀಯ ನೆಲಮೂಲ ಭಾಷೆಗಳ ಬೆಳವಣಿಗೆಯ ಕಡೆ ಗಮನಹರಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಕನ್ನಡ ಭಾಷೆಯ ಅಳಿವು-ಉಳಿವಿನ ಸುತ್ತ ನಡೆಯುತ್ತಿರುವ ಸಂಕಥನಗಳ ನಡುವೆ ರಾಜ್ಯದ ಇತರ ಭಾಷೆಗಳ ಅಸ್ತಿತ್ವವನ್ನೇ ಮರೆಯಕೂಡದು ಎಂಬ ವ್ಯವಧಾನದೊಂದಿಗೆ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಬೇಕಿದೆ.
ಬಂಡವಾಳಶಾಹಿಯ ಅಂಗಳದಲ್ಲಿ
ನವ ಉದಾರವಾದ, ಬಂಡವಾಳಶಾಹಿ ಆರ್ಥಿಕತೆ ಮತ್ತು ಡಿಜಿಟಲ್—ಕಾರ್ಪೋರೇಟ್-ಮಾರುಕಟ್ಟೆ ಕೇಂದ್ರಿತ ರಾಜಕೀಯ ಬೆಳವಣಿಗೆಗಳ ನಡುವೆ ಕರ್ನಾಟಕದ ಜನತೆ ತಮ್ಮ ಸಾಂಸ್ಕೃತಿಕ ನೆಲೆಯನ್ನು ಉಳಿಸಿಕೊಳ್ಳುವುದೇ ಅಲ್ಲದೆ, ಏಳು ದಶಕಗಳ ನಂತರವೂ ಢಾಳಾಗಿ ಕಾಣುತ್ತಿರುವ ಪ್ರಾದೇಶಿಕ ಅಸಮತೋಲನ, ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ನಿವಾರಿಸಿಕೊಳ್ಳುವ ಜವಾಬ್ದಾರಿಯನ್ನೂ ಹೊರಬೇಕಾಗಿದೆ. ಕರ್ನಾಟಕದ ಪ್ರಗತಿ ಅಥವಾ ಕನ್ನಡಿಗರ ಅಭ್ಯುದಯ ಇರುವುದು ಭಾವನಾತ್ಮಕ ಸ್ಥಾವರಗಳಲ್ಲೋ ವಾಸ್ತವಿಕ ಆಡಳಿತ ವ್ಯವಸ್ಥೆಯಲ್ಲೋ ಎನ್ನುವ ಜಿಜ್ಞಾಸೆಯೊಂದಿಗೆ ಈ ಸುವರ್ಣ ಸಂದರ್ಭವನ್ನು ನೋಡಬೇಕಿದೆ. ಮೈಸೂರು ಕರ್ನಾಟಕ ಎಂದಾಗಿ ಐವತ್ತು ವರ್ಷಗಳು ಕಳೆದಿದ್ದರೂ ಶೈಕ್ಷಣಿಕವಾಗಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಲು ಸಾಧ್ಯವಾಗದಿರುವುದು, ಹಾಗೆಯೇ ವೈವಿಧ್ಯಮಯ ಸ್ಥಳೀಯ ಭಾಷೆಗಳನ್ನು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಬೌದ್ಧಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಚನೆಯನ್ನೂ ಮಾಡದಿರುವುದು ನಮ್ಮನ್ನು ಕಾಡುವ ಜಟಿಲ ಪ್ರಶ್ನೆಯಾಗಬೇಕಿದೆ.
ಬದಲಾಗುತ್ತಿರುವ ಭಾರತದ ಆರ್ಥಿಕತೆ ಈ ದೇಶದ ಬಹುಭಾಷಾ ವೈವಿಧ್ಯತೆಯನ್ನು ಕಡೆಗಣಿಸುತ್ತಲೇ ಬಂಡವಾಳಶಾಹಿ ವ್ಯವಸ್ಥೆಗೆ ಹಾಗೂ ಕಾರ್ಪೋರೇಟ್ ಮಾರುಕಟ್ಟೆಗೆ ಭೌತಿಕ ವಿಸ್ತರಣೆಯ ಮಾರ್ಗಗಳನ್ನು ತೆರೆಯುತ್ತಾ ಹೋಗುತ್ತದೆ. ಡಿಜಿಟಲ್ ಆರ್ಥಿಕತೆಯಲ್ಲಿ ಔದ್ಯಮಿಕ ಬೆಳವಣಿಗೆಯು ಮೂಲತಃ ತಂತ್ರಜ್ಞಾನಾಧಾರಿತವಾಗಿದ್ದು, ದೈಹಿಕ ದುಡಿಮೆಗಿಂತಲೂ ಬೌದ್ಧಿಕ ದುಡಿಮೆಗೇ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ. ರಾಜ್ಯದ ಬೆಳವಣಿಗೆಯನ್ನು ಮಾರುಕಟ್ಟೆ ಮತ್ತು ಬಂಡವಾಳದ ದೃಷ್ಟಿಯಿಂದಲೇ ವ್ಯಾಖ್ಯಾನಿಸುವ ಆಳ್ವಿಕೆಯ ಆಡಳಿತ ನೀತಿಗಳು ಬಂಡವಾಳದ ಹರಿವು ಹಾಗೂ ಹೂಡಿಕೆಯ ಮಾರ್ಗಗಳಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳನ್ನು ನಿರ್ಲಕ್ಷಿಸುತ್ತಲೇ ಮುಂದುವರೆಯುತ್ತವೆ. ಭಾರತದ ಆರ್ಥಿಕ ಪ್ರಗತಿಯನ್ನು ನಿರ್ದೇಶಿಸುತ್ತಿರುವ ಮೂಲ ಸೌಕರ್ಯಗಳ (Infrastructural Development) ಔದ್ಯಮಿಕ ಹಿತಾಸಕ್ತಿಗಳು ಸ್ಥಳೀಯ ಸಂಸ್ಕೃತಿಗಳನ್ನೂ, ಭಾಷೆಗಳನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾ ಸಾಗುತ್ತವೆ.
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತಳಮಟ್ಟದ ಸಮಾಜದಲ್ಲಿ ಪರಂಪರಾನುಗತವಾಗಿ ಬಂದಿರುವ ಸಾಂಸ್ಕೃತಿಕ ಆಚರಣೆಗಳು ಮತ್ತು ಬೌದ್ಧಿಕ ನೆಲೆಗಳೂ ಸಹ ವಾಣಿಜ್ಯೀಕರಣಕ್ಕೊಳಗಾಗಿ, ಅಂತಿಮವಾಗಿ ಮಾರುಕಟ್ಟೆಯ ಸರಕುಗಳಾಗಿಬಿಡುತ್ತವೆ. ಸ್ಥಳೀಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕಾರ್ಪೋರೇಟ್ ಮಾರುಕಟ್ಟೆಯ ಅವಶ್ಯಕತೆಗಳಿಗನುಗುಣವಾಗಿ ಮರು ವ್ಯಾಖ್ಯಾನಿಸುತ್ತಾ, ಈ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಸ್ಥಳೀಯ ಭಾಷೆ, ಜೀವನಶೈಲಿ ಹಾಗೂ ಸಾಮಾಜಿಕ ಸಂರಚನೆಗಳನ್ನೂ ಬಂಡವಾಳದ ಬೆಳವಣಿಗೆಯ ಒಂದು ಭಾಗವಾಗಿ ಪರಿವರ್ತಿಸುವತ್ತ ಇಡೀ ವ್ಯವಸ್ಥೆಯನ್ನು ಮುನ್ನಡೆಸಲಾಗುತ್ತದೆ. ತಳಮಟ್ಟದ, ತಳಸಮುದಾಯದ ಸಾಂಸ್ಕೃತಿಕ ಜಗತ್ತಿನೊಳಗೂ ನುಸುಳುವ ಮೂಲಕ ಬಂಡವಾಳ ಮತ್ತು ಕಾರ್ಪೋರೇಟ್ ಮಾರುಕಟ್ಟೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತದೆ. ಜನಸಾಮಾನ್ಯರ ಸಾಂಸ್ಕೃತಿಕ ಅರಿವು ಮತ್ತು ಭಾಷಾಭಿಮಾನದ ನೆಲೆಗಳು ಕೇವಲ ಭಾವನಾತ್ಮಕವಾಗಿದ್ದರೆ, ಬಂಡವಾಳಶಾಹಿಯ ಈ ಪ್ರಕ್ರಿಯೆಯ ಮಾರ್ಗ ಸುಗಮವಾಗುತ್ತದೆ.
ಸಾಂಸ್ಕೃತಿಕ ರಾಜಕಾರಣದ ಆವರಣ
ಕಳೆದ ಐದು ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಕಾಣಲಾದ ಸಾಂಸ್ಕೃತಿಕ ರಾಜಕಾರಣದ ಹೊರಚಾಚುಗಳನ್ನು ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಿದೆ. ಶಿಕ್ಷಣವನ್ನೂ ಒಳಗೊಂಡಂತೆ ಸಾಂಸ್ಕೃತಿಕ ವಲಯದ ಎಲ್ಲ ಕೇಂದ್ರಗಳಲ್ಲೂ ಒಳನುಸುಳುವ ಮೂಲಕ ಕಾರ್ಪೋರೇಟ್ ಮಾರುಕಟ್ಟೆ ಸಾಂಸ್ಕೃತಿಕ ವಲಯದ ವಿವಿಧ ಚಟುವಟಿಕೆಗಳನ್ನು, ಪ್ರಕಾರಗಳನ್ನು, ಸಂರಚನೆಗಳನ್ನು ತನ್ನೊಳಗೆ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಸದಾ ನಿರತವಾಗಿರುತ್ತದೆ. ಈ ಪ್ರಯತ್ನದಲ್ಲೇ ಸಾಂಸ್ಕೃತಿಕ ಚಟುವಟಿಕೆಗಳನ್ನು, ಲಲಿತಕಲೆ ಮತ್ತು ರಂಗಭೂಮಿಯನ್ನೂ ಒಳಗೊಂಡಂತೆ ಇತರ ಪ್ರದರ್ಶನ ಕಲೆಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಂಡವಾಳಶಾಹಿಯು ಕಲಾ ಮಾಧ್ಯಮಗಳನ್ನೂ, ಅಭಿವ್ಯಕ್ತಿಯ ಮಾರ್ಗಗಳನ್ನೂ ವಾಣಿಜ್ಯೀಕರಣಕ್ಕೊಳಪಡಿಸುತ್ತವೆ. ನವ ಉದಾರವಾದದ ನೆಲೆಯಲ್ಲಿ ಇದನ್ನು ಕಾರ್ಪೋರೇಟೀಕರಣ ಎನ್ನಲೂಬಹುದು. ಸಾಂಸ್ಕೃತಿಕ ರಾಜಕಾರಣವು ಈ ಹಾದಿಯ ಮುಖಾಂತರ ವಿವಿಧ ಸಾಂಸ್ಕೃತಿಕ ನೆಲೆಗಳನ್ನು ತನ್ನೊಳಗೆ ಸೆಳೆದುಕೊಳ್ಳಲು, Appropriate ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.
ಈಗಾಗಲೇ ಕರ್ನಾಟಕ ಇಂತಹ ಒಂದು ಪ್ರವೃತ್ತಿಗೆ ಸಾಕ್ಷಿಯಾಗಿದೆ. ಚಲನಚಿತ್ರ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಈಗಾಗಲೇ ಒಳನುಸುಳಿರುವ ಕಾರ್ಪೋರೇಟ್ ಬಂಡವಾಳವು ತನ್ನ ಔದ್ಯಮಿಕ ವಿಸ್ತರಣೆಯೊಂದಿಗೇ ಸ್ಥಳೀಯ ಸಾಂಸ್ಕೃತಿಕ ಆಚರಣೆಗಳನ್ನೂ ತನ್ನದಾಗಿಸಿಕೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ. ತಂತ್ರಜ್ಞಾನಾಧಾರಿತ ಆರ್ಥಿಕ ಬೆಳವಣಿಗೆಯಲ್ಲಿ ಉದ್ಯೋಗಾವಕಾಶಗಳಿಲ್ಲದೆ ಸೊರಗುವ ಸಾಮಾನ್ಯ ಜನತೆಯ ನಡುವೆ ಸಾಂಸ್ಕೃತಿಕ ಅಭಿವ್ಯಕ್ತಿ ಮಾಧ್ಯಮಗಳು ಉಪಯುಕ್ತವಾಗಿ ಅಥವಾ ಜೀವನೋಪಾಯದ ಮಾರ್ಗಗಳಾಗಿ ಕಾಣತೊಡಗುತ್ತವೆ. ಬಂಡವಾಳ-ಮಾರುಕಟ್ಟೆಯ ವಿಸ್ತರಣೆಯೊಂದಿಗೆ ತಮ್ಮ ಬದುಕುವ ದಾರಿಯನ್ನು ಸಮೀಕರಿಸಿಕೊಳ್ಳುವ ಯುವ ಸಮೂಹ, ಕ್ರಮೇಣ ತನ್ನ ಸಾಮುದಾಯಿಕ ಪ್ರಜ್ಞೆಯನ್ನೂ ಕಳೆದುಕೊಂಡು, ಸ್ಥಳೀಯ ಸಾಂಸ್ಕೃತಿಕ ಮೂಲ ಸೆಲೆಯನ್ನೂ ಮರೆತು, ಮಾರುಕಟ್ಟೆಯಲ್ಲಿ ಒಂದಾಗಿಬಿಡುತ್ತದೆ. ಚಲನಚಿತ್ರ, ಸಂಗೀತ, ಚಿತ್ರಕಲೆ, ಶಿಲ್ಪಕಲೆ ಮತ್ತಿತರ ಕಲಾಭಿವ್ಯಕ್ತಿಗಳ ನಡುವೆ ರಂಗಭೂಮಿಯೂ ಸಹ ಈ ವಶೀಕರಣಕ್ಕೊಳಗಾಗುವ ಒಂದು ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ.
ಇಲ್ಲಿ ರಾಜ್ಯದ ಜನತೆ ಕಳೆದುಕೊಳ್ಳುವುದೇನು ? ಈ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಈಗಾಗಲೇ ನಿರ್ಲಕ್ಷ್ಯಕ್ಕೊಳಗಾಗಿರುವ ರಾಜ್ಯದ ಹಲವಾರು ಸ್ಥಳೀಯ ಭಾಷೆಗಳು ಮಾರುಕಟ್ಟೆಯಿಂದ ಸೃಷ್ಟಿಯಾಗುವ ದುಡಿಯುವ ಶಕ್ತಿಗಳ ವಲಸೆ ಮತ್ತು ಹೊರಹೋಗುವಿಕೆಯಿಂದ ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಲೇ ಹೋಗುತ್ತವೆ. ವಿಶಾಲ ನೆಲೆಯಲ್ಲಿ ನೋಡಿದಾಗ ಕನ್ನಡವೂ ಒಂದು ಭಾಷೆಯಾಗಿ ಇದೇ ಸಂಕೀರ್ಣತೆಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗುತ್ತದೆ. ತಂತ್ರಜ್ಞಾನಾಧಾರಿತ ಔದ್ಯಮಿಕ ಪ್ರಗತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶಗಳಲ್ಲಿ ಕನ್ನಡ ಅನಿವಾರ್ಯವಾಗಿರುವುದಿಲ್ಲ ಹಾಗೆಯೇ ದುಡಿಮೆಯ ವಲಯಗಳೂ ಸಹ ಭಾಷಾ ಸೂಕ್ಷ್ಮತೆಗೆ ಒಳಗಾಗುವುದಿಲ್ಲ. ಹಾಗಾಗಿ ಅನ್ಯಭಾಷಿಕರು ಔದ್ಯಮಿಕ ವಲಯಕ್ಕೆ ದಾಂಗುಡಿ ಇಡುವುದನ್ನು ತಪ್ಪಿಸಲಾಗುವುದಿಲ್ಲ. ಇದನ್ನು ತಪ್ಪಿಸಬೇಕಾದರೆ ಕನ್ನಡ ಔದ್ಯಮಿಕ ಭಾಷೆಯಾಗಬೇಕು, ಉದ್ಯೋಗಾವಕಾಶವನ್ನು ಕಲ್ಪಿಸುವಂತಹ ಭಾಷೆಯಾಗಿ ರೂಪುಗೊಳ್ಳಬೇಕು.
ಶಿಕ್ಷಣ ಭಾಷೆ ಮತ್ತು ಬದುಕು
ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುತ್ತಲೇ, ಔದ್ಯಮಿಕ ಜಗತ್ತಿಗೆ ಅವಶ್ಯವಾದ ಇಂಗ್ಲಿಷ್ ಭಾಷೆಯನ್ನು ಆರಂಭದಿಂದಲೇ ಕಲಿಕಾ ಭಾಷೆಯಾಗಿ ಅಳವಡಿಸುವ ಮೂಲಕ ಜಾಗತೀಕರಣ ಸೃಷ್ಟಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಕನ್ನಡಿಗರ ಅಸ್ತಿತ್ವವನ್ನು ಕಾಪಾಡಲು ಮತ್ತು ಹೆಚ್ಚಿಸಲು ಸಾಧ್ಯವಾಗಬಹುದು. ಮಾರುಕಟ್ಟೆಗೆ ಅವಶ್ಯವಾದ ತಾಂತ್ರಿಕ ಭಾಷೆಯನ್ನು ಕನ್ನಡೀಕರಿಸುವ ಅವಶ್ಯಕತೆ ಇರುವುದಾದರೂ, ವ್ಯಾಪಕವಾಗಿ ಬಳಕೆಯಲ್ಲಿರುವ ಇಂಗ್ಲಿಷ್ ಪದಗಳನ್ನೇ ಅಳವಡಿಸಿಕೊಂಡು, ಔದ್ಯಮಿಕ ಮಾರುಕಟ್ಟೆಯಲ್ಲಿ ಭಾಷೆ ಉಂಟುಮಾಡುವ ತೊಡಕುಗಳನ್ನು ನಿವಾರಿಸಿಕೊಳ್ಳುವುದು ವಿವೇಕಯುತ ಕ್ರಮವಾದೀತು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಯುವ ಸಮೂಹ ತಂತ್ರಜ್ಞಾನಾಧಾರಿತ ಔದ್ಯಮಿಕ ಮಾರುಕಟ್ಟೆಯನ್ನು ಪ್ರವೇಶಿಸಲೂ ಹೆಣಗಾಡಬೇಕಾದ ಒಂಧು ವಿಷಮ ಸನ್ನಿವೇಶವನ್ನು ನಾವಿಂದು ಎದುರಿಸುತ್ತಿದ್ದೇವೆ. ಈ ಜಟಿಲ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರಗಳು ವೈಜ್ಞಾನಿಕ ನೆಲೆಯಲ್ಲಿ ಆಡಳಿತ-ಶಿಕ್ಷಣ ನೀತಿಗಳನ್ನು ರೂಪಿಸಬೇಕಿದೆ.
ಔದ್ಯಮಿಕ ಮಾರುಕಟ್ಟೆಯ ನಡುವೆ ನಿಂತು ಕನ್ನಡ ಕ್ಷೀಣಿಸುತ್ತಿದೆ ಎಂದು ಹುಯಿಲೆಬ್ಬಿಸುವುದು ನಿರರ್ಥಕ. ಒಂದು ಭಾಷೆಯಾಗಿ ಶತಮಾನಗಳ ಚರಿತ್ರೆ ಮತ್ತು ಪರಂಪರೆ ಇರುವ ಕನ್ನಡ ಅಳಿಯುವುದಿಲ್ಲ. ಆದರೆ ಒಂದು ಭಾಷೆಯಾಗಿ ಉಳಿಯಬೇಕಾದರೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಉತ್ತೇಜನಕಾರಿ ಆಡಳಿತ ನೀತಿಗಳು ಅತ್ಯವಶ್ಯವಾಗಿ ಬೇಕಾಗುತ್ತದೆ. ಈ ನೀತಿ ನಿರೂಪಣೆಯಲ್ಲಿ ಈವರೆಗಿನ ಎಲ್ಲ ಸರ್ಕಾರಗಳು ಒಂದಲ್ಲಾ ಒಂದು ರೀತಿಯಲ್ಲಿ ಸೋತಿವೆ. ಭಾಷೆಯ ಬೆಳವಣಿಗೆ ಶೂನ್ಯದಲ್ಲಿ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಪ್ರಶಸ್ತ ಭೂಮಿಕೆಗಳನ್ನು ಸಜ್ಜುಗೊಳಿಸಬೇಕಾಗುತ್ತದೆ. ಕನ್ನಡ ಮಾಧ್ಯಮ ಈ ಹಾದಿಯ ಪ್ರಧಾನ ಅಂಶವಾದರೆ, ಶಾಲಾ ಕಾಲೇಜುಗಳಲ್ಲಿ ಕನ್ನಡವನ್ನು ಕೇವಲ ಸಂವಹನ ಮಾಧ್ಯಮವಾಗಿ ಪರಿಗಣಿಸದೆ, ಬೌದ್ಧಿಕ ಚಟುವಟಿಕೆಯ ಒಂದು ಭಾಗವಾಗಿ ಪರಿವರ್ತಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ.
ಇಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರದ ಪಾಲುದಾರಿಕೆ ಮತ್ತು ಜವಾಬ್ದಾರಿ ಬಹಳ ಮುಖ್ಯವಾಗಿ ಕಾಣುತ್ತದೆ. ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲೇ ಗಲ್ಲಿಗೊಂದರಂತೆ ತಲೆಎತ್ತುತ್ತಿರುವ ಆಂಗ್ಲಭಾಷಾ ಮಾಧ್ಯಮವನ್ನು ನಿಯಂತ್ರಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿದೆ. ಶಿಕ್ಷಣದ ವಾಣಿಜ್ಯೀಕರಣ ಹಾಗೂ ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಹಾಕದೆ ಹೋದರೆ ಇದು ಸಾಧ್ಯವಾಗುವುದಿಲ್ಲ. ಗ್ರಾಮೀಣ ಕರ್ನಾಟಕವನ್ನೂ ಆಕ್ರಮಿಸಿರುವ ಖಾಸಗಿ ಶಿಕ್ಷಣ ತಳಮಟ್ಟದ ಸಮಾಜವನ್ನು ಭ್ರಮಾಧೀನಗೊಳಿಸುತ್ತಿದ್ದು, ನಗರವಾಸಿಗಳ ಭ್ರಮಾಲೋಕವನ್ನು ಮತ್ತಷ್ಟು ರಂಜನೀಯಗೊಳಿಸುತ್ತಿದೆ. ಕಾರ್ಪೋರೇಟ್ ವಶವಾಗುತ್ತಿರುವ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣವನ್ನು ಸರ್ಕಾರ ನಿಯಂತ್ರಿಸಬೇಕಿದೆ. ತಮ್ಮ ಬದುಕಿಗೆ ಭಾಷೆಯ ಅರಿವು ಅವಶ್ಯವೇ ಅಲ್ಲ ಎಂಬ ಮನಸ್ಥಿತಿಯನ್ನು ಮೇಲ್ವರ್ಗದ ಸಮಾಜದಲ್ಲಿ ಸೃಷ್ಟಿಸಲಾಗುತ್ತಿದೆ. ಭಾಷಿಕವಾಗಿ ಕನ್ನಡ ಔದ್ಯಮಿಕ ಭಾಷೆಯಾಗದೆ ಇರುವುದು ಈ ಬೆಳವಣಿಗೆಗೆ ಪೂರಕವಾಗಿದೆ.
ಹಾಗಾಗಿಯೇ ಡಿಜಿಟಲ್ ಮಾರುಕಟ್ಟೆಗೆ ಅಗತ್ಯವಾದ ಸುಲಭಗ್ರಾಹ್ಯ ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಕರಾವಳಿ, ಕೊಡಗು, ಮೈಸೂರು, ಧಾರವಾಡ ಹೀಗೆ ಸಾಮಾನ್ಯ ಜನರ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಪಾರಿಭಾಷಿಕ ಚೌಕಟ್ಟನ್ನು ರೂಪಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಅಧ್ಯಯನ ಪೀಠಗಳು, ಅಕಾಡೆಮಿಗಳು ಹಾಗೂ ವಿಶ್ವವಿದ್ಯಾಲಯಗಳು ತ್ವರಿತಗತಿಯಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗಿದೆಯಾದರೂ ಸಮರ್ಪಕವಾಗಿಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದು ವಿವೇಕಯುತ. ಈ ಭಾಷಿಕ-ಸಾಹಿತ್ಯಕ ಪ್ರಯತ್ನಗಳಿಗೆ ಕರ್ನಾಟಕದಲ್ಲಿ ವಿದ್ವಾಂಸರ, ಸಾಹಿತಿಗಳ ಕೊರತೆಯಿಲ್ಲ. ಆದರೆ ಆಡಳಿತಾರೂಢ ಪಕ್ಷಗಳ ಬದ್ಧತೆಯಲ್ಲಿ ಕೊರತೆ ಎದ್ದುಕಾಣುತ್ತದೆ. ಕನ್ನಡವನ್ನು ಬದುಕಿನ ಭಾಷೆಯಾಗಿ ನೋಡದೆ ಭಾವನಾತ್ಮಕವಾಗಿ ನೋಡುವುದೂ ಇದಕ್ಕೆ ಕಾರಣವಾಗಿರಬಹುದು.
ಸಂಭ್ರಮದ ನಡುವಿನ ಜವಾಬ್ದಾರಿ
ಕರ್ನಾಟಕ ನಾಮಕರಣದ ಸುವರ್ಣ ಸಂಭ್ರಮದ ನಡುವೆ ರಾಜ್ಯದಾದ್ಯಂತ ಸರ್ಕಾರ ನಡೆಸಲಿಚ್ಚಿಸಿರುವ ಸಾಂಸ್ಕೃತಿಕ-ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಬಹುಮುಖ್ಯವಾಗಿ ಕನ್ನಡವನ್ನು ಒಂದು ಔದ್ಯೋಗಿಕ ಭಾಷೆಯಾಗಿ, ಔದ್ಯಮಿಕ ಭಾಷೆಯಾಗಿ, ತಳಮಟ್ಟದವರೆಗೂ ತಲುಪುವಂತಹ ಒಂದು ಬದುಕುವ ಭಾಷೆಯಾಗಿ ರೂಪಿಸುವ ಯೋಜನೆಗಳನ್ನೂ ಹಮ್ಮಿಕೊಳ್ಳಬೇಕಿದೆ. ಕನ್ನಡದ ಸಾಹಿತ್ಯ, ರಂಗಭೂಮಿ ಮತ್ತು ಲಲಿತಕಲೆಗಳ ಶ್ರೀಮಂತಿಕೆಯನ್ನು ಯುವ ಸಮೂಹಕ್ಕೆ ಪರಿಚಯಿಸುವುದಷ್ಟೇ ಅಲ್ಲದೆ ಈ ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ಉಳಿಸಿಕೊಂಡು ಹೋಗುವ ಮಾರ್ಗೋಪಾಯಗಳನ್ನು ಮಿಲೆನಿಯಂ ಜನಸಂಖ್ಯೆಗೆ ಅರುಹಬೇಕಿದೆ. ಈಗಾಗಲೇ ರಂಗಭೂಮಿ ಮತ್ತು ಸಾಹಿತ್ಯವನ್ನು ಆವರಿಸುತ್ತಿರುವ ಸಂಕುಚಿತ ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ರಾಜಕಾರಣವನ್ನು ಎದುರಿಸುತ್ತಲೇ, ಕರ್ನಾಟಕದ ಸಮನ್ವಯ ಸಂಸ್ಕೃತಿಯನ್ನು ಎಳೆಯರಿಗೆ ಪರಿಚಯಿಸುವ ಕೈಂಕರ್ಯ ನಮ್ಮದಾಗಬೇಕಿದೆ.
ಈ ನಿಟ್ಟಿನಲ್ಲಿ ನವಂಬರ್ 1ರ ರಾಜ್ಯೋತ್ಸವ ಹಾಗೂ ಮುಂದಿನ ಒಂದು ವರ್ಷದ ಸುವರ್ಣ ಸಂಭ್ರಮೋತ್ಸವದಲ್ಲಿ, ಕನ್ನಡದ ಅಸ್ಮಿತೆ ಮತ್ತು ಸಮಸ್ತ ಕನ್ನಡಿಗರ ಅಸ್ತಿತ್ವವನ್ನು ಶತಮಾನಗಳ ಕಾಲ ಆರೋಗ್ಯಕರವಾಗಿ ಕಾಪಿಟ್ಟುಕೊಳ್ಳುವಂತಹ ಕಾರ್ಯಯೋಜನೆಗಳನ್ನು ರೂಪಿಸಲು ಸಜ್ಜಾಗಬೇಕಿದೆ. ವರ್ತಮಾನದ ಕನ್ನಡಿಯಲ್ಲಿ ಸಮಸ್ತ ಕನ್ನಡಿಗರ ಭವಿಷ್ಯವನ್ನು ಕಾಣುವ ಔದಾತ್ಯವನ್ನು ರೂಢಿಸಿಕೊಂಡು, ಚರಿತ್ರೆಯ ಹೆಜ್ಜೆಗುರುತುಗಳನ್ನು ವಿಸ್ಮತಿಗೆ ಜಾರಲು ಬಿಡದೆ ಸಮಕಾಲೀನ ರಾಜಕೀಯ-ಸಾಂಸ್ಕೃತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಛಲದೊಂದಿಗೆ “ ಕರ್ನಾಟಕ 50 ”ರ ಸಂದರ್ಭವನ್ನು ಆಚರಿಸಬೇಕಿದೆ. ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್ತು ಒಳಗೊಂಡಂತೆ ಸಾಹಿತ್ಯಕ ಗುಂಪುಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳು ಈ ನಿಟ್ಟಿನಲ್ಲಿ ಸಾಗಲು ಸಜ್ಜಾಗಿವೆಯೇ ? ಯೋಚಿಸೋಣ.
0 ಪ್ರತಿಕ್ರಿಯೆಗಳು