ವರದೇಂದ್ರ ಕೆ ಮಸ್ಕಿ ಓದಿದ ‘ಮಕ್ಕಳೇನು ಸಣ್ಣವರಲ್ಲ’

ವರದೇಂದ್ರ ಕೆ ಮಸ್ಕಿ

ಮಕ್ಕಳು ಮಗ್ಧರು, ಮಕ್ಕಳು ಚಂಚಲ ಮನಸಿನವರು, ಮಕ್ಕಳು ಸ್ನಿಗ್ಧ ಸೌಂದರ್ಯದ ಸ್ವಚ್ಛ ಮನಸಿನ ತಿಳಿ ನೀರಿನಂತವರು, ಹಿಡಿ ಪ್ರೀತಿ ಕೊಟ್ಟರೆ ಬೊಗಸೆ ಪ್ರೀತಿ ಹಸ್ತಾಂತರಿಸುವವರು, ತುಸು ಕಾಳಜಿಗೆ ಸೇರು ವಿಶ್ವಾಸ ತುಂಬಿಕೊಡುವವರು. ಹೌದ್ಹೌದು..

ಆದರೂ “ಮಕ್ಕಳೇನು ಸಣ್ಣವರಲ್ಲ” ಬಿಡಿ. ವಯೋಮಾನದಲ್ಲಿ ಸಣ್ಣವರೆನ್ನಿಸಿಕೊಂಡರೂ ಅವರು ಮಾಡುವ ಘನಂದಾರಿ ಕೆಲಸಗಳಿಂದ ಈ ಶೀರ್ಷಿಕೆ ಗಿಟ್ಟಿಸಿಕೊಂಡು, ಶೀರ್ಷಿಕೆಗೆ ತಕ್ಕಂತೆ ಇದ್ದು ಸಾಬೀತುಪಡಿಸಿದವರು.
ಹಾಗಂತ ನಿರೂಪಿಸಿರುವುದಕ್ಕೆ ಸಾಕ್ಷಿ ಬೇಕ್ರೀ ಸಾಕ್ಷಿ. ಹಾಗಾದರೆ ಬನ್ನಿ ಒಮ್ಮೆ ಓದಿ. ಓದಿದವರೇ ನಿಮ್ಮ ಸಹಚರ್ಯೆಯನ್ನೇ ಮಕ್ಕಳ ಮುಂದೆ ಬದಲಾಯಿಸಿಕೊಳ್ಳುತ್ತೀರಿ. ಹೌದ್ರೀ… ನಿಜ.

ಮಕ್ಕಳ ಸಾಹಿತಿ, ರಾಯಚೂರು ಜಿಲ್ಲೆಯ “ಮಾಸಂಗಿ”ಪುರದ, “ಅಜ್ಜನ ಹಲ್ಲು ಸೆಟ್ಟಿನ” ಮೂಲಕ ಮಕ್ಕಳನ್ನು ರಂಜಿಸಿದ, “ಡಯಟಿಂಗ್ ಪುರಾಣ”ದಿಂದ ನಗೆಗಡಲಲ್ಲಿ ಓದುಗರನ್ನು ತೇಲಿಸಿ, “ನಾನೇ ಸತ್ತಾಗ” ನನ್ನ ಸುತ್ತಲಿನವರ ಮನಸ್ಥಿತಿಯನ್ನು ಮನುಸ್ಮೃತಿಯಂತೆ ಬಯಲಿಗೆಳೆದ, ಶಿಕ್ಷಕ ಸಾಹಿತಿ ಶ್ರೀ ಗುಂಡುರಾವ್ ದೇಸಾಯಿಯವರು ಇಂತಹ ಸಣ್ಣ ಮಕ್ಕಳ ದೊಡ್ಡ ದೊಡ್ಡ ಪ್ರಸಂಗಗಳನ್ನು ಹಾಸ್ಯವಾಗಿ, ರಸಾತ್ಮಕವಾಗಿ “ಮಕ್ಕಳೇನು ಸಣ್ಣವರಲ್ಲ” ಕೃತಿಯಲ್ಲಿ ಚಿತ್ರಿಸಿದ್ದಾರೆ.

ಸಂಶೋಧನಾ ಮನಸ್ಥಿತಿಯಲ್ಲಿ ಪ್ರತಿ ನಡೆಯನ್ನು ವಿಚಾರಿಸಿ, ಅವಲೋಕಿಸಿ ಅದರೊಳಗಿನ ಹಾಸ್ಯ, ಬದುಕಿನ ಲಾಸ್ಯಗಳನ್ನು ಹೊರಹೆಕ್ಕಿ ಓದುಗರಿಗೆ ಉಣಬಡಿಸುವ ಸ್ನೇಹ ಜೀವಿ, ಸದಾ ಹಸನ್ಮುಖಿ, ಸಾದಾ ಸೀದಾ ಬದುಕನ್ನು ರೂಢಿಸಿಕೊಂಡು ಪಯಣಿಸುತ್ತಿರುವ; ಜೊತೆಗೆ, ಸಹ ಪ್ರಯಾಣಿಕರನ್ನೂ ಕರೆದುಕೊಂಡು ಸಾಗುತ್ತಿರುವ ಲಲಿತ ಸಾಹಿತಿಗಳು ಶ್ರೀ ಗುಂಡುರಾವ್ ದೇಸಾಯಿಯವರು. ಅವರ ಈ ಮಕ್ಕಳ ಕಥಾ ಸಂಕಲನ ಮಕ್ಕಳಿಗಾಗಿ ಬರೆದ, ಮಕ್ಕಳ ಮನಸ್ಸನ್ನೇ ಕೇಂದ್ರೀಕರಿಸಿ ಬರೆದ, ಮಕ್ಕಳ ದಿನನಿತ್ಯದ ಚಟುವಟಿಕೆಗಳನ್ನೇ ಆಧರಿಸಿ ಬರೆದ, ಮಕ್ಕಳಾದಿಯಾಗಿ ಸರ್ವ ವಯೋಮಾನದವರೂ ಓದಬಹುದಾದಂತಹ ಕೃತಿ.

ಒಟ್ಟು ಹನ್ನೆರಡು ಕಥೆಗಳನ್ನು ಹೊಂದಿದ ಈ ಸಂಕಲನಕ್ಕೆ ಮುನ್ನುಡಿಯನ್ನು ಶ್ರೀ ಆನಂದ್ ಪಾಟೀಲ್ ಅವರು ಬರೆದಿದ್ದಾರೆ. ಇಡೀ ಕೃತಿಯ ಅಂತರಂಗದ ನೀಲನಕ್ಷೆ ಶ್ರೀಯುತರ ಮುನ್ನುಡಿ ಓದಿದಾಕ್ಷಣ ನಮಗೆ ಸಿಕ್ಕಿಬಿಡುತ್ತದೆ. ಕೃತಿಕಾರರ ಮತ್ತೂ ಕೃತಿಯ ಪ್ರೌಢಿಮೆಯನ್ನು ಅರ್ಥಪೂರ್ಣವಾಗಿ ಮುನ್ನುಡಿಯಲ್ಲಿ ದಾಖಲಿಸಿ ಕೃತಿಗೆ ಭೂಷಣವಾದ ಲೇಖನ ನೀಡಿದ್ದಾರೆ.

ಈ ಕೃತಿಗೆ ಇತ್ತೀಚೆಗೆ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದ ಶ್ರೀ ತಮ್ಮಣ ಬೀಗಾರ ಅವರ ಅರ್ಥಪೂರ್ಣ ಬೆನ್ನುಡಿ ಇದ್ದು ಸಂಕಲನದ ಮೆರುಗನ್ನು ಹೆಚ್ಚಿಸಿದೆ.

ಮುಖಪುಟ ವಿನ್ಯಾಸ ಮತ್ತು ಕಥೆಗಳಿಗೆ ತಕ್ಕಂತೆ ಸುಂದರವಾದ, ಪೂರಕವಾದ, ಆಕರ್ಷಕವಾದ ಚಿತ್ರಗಳನ್ನು ಸಂತೋಷ ಸಸಿಹಿತ್ಲು ಇವರು ಬಿಡಿಸಿದ್ದು, ಅವರ ಕೈ ಚಳಕ, ಏಕಾಗ್ರತೆ, ವೃತ್ತಿಪರತೆ ಎದ್ದು ಕಾಣುತ್ತದೆ.

ಇನ್ನೀ ಕಥೆಗಳನ್ನು ಓದುತ್ತಾ ಸಾಗಿದರೆ ನಗುವಿನ ಜೊತೆಗೆ ಸಂಭಾಷಣೆಯನ್ನು ಎದುರು ಕುಳಿತು ಆಸ್ವಾದಿಸುತ್ತಿದ್ದೇವೆ ಎಂದು ಪ್ರತಿಯೊಬ್ಬ ಓದುಗನಿಗೂ ಅನಿಸುತ್ತದೆ. ಶಿಕ್ಷಕ ವೃತ್ತಿಯಲ್ಲಿರುವವರಿಗಂತೂ ಈ ಸಂಕಲನ ತಮ್ಮ ವೃತ್ತಿ ಜಿವನದ ಶಾಲಾ ಅನುಭವಕ್ಕೆ ಒಂದು ಕನ್ನಡಿ. ಮಕ್ಕಳ ಸಾಹಿತ್ಯವನ್ನು, ಮಕ್ಕಳಿಗಾಗಿ ಸಾಹಿತ್ಯವನ್ನು ಬಹುಶಃ ಶಿಕ್ಷಕರಷ್ಟು ನೈಜವಾಗಿ ಯಾರೂ ಬರೆಯಲಿಕ್ಕೆ ಸಾಧ್ಯ ಇಲ್ಲ. ಜೀವನದಲ್ಲಿ ಎರಡು ಬಾರಿ ಮಕ್ಕಳಾಗುವುದಕ್ಕೆ ಸಾಧ್ಯ ಇರುವುದು ಕೇವಲ ಶಿಕ್ಷಕರಿಗೆ ಮಾತ್ರ ‌ಲಭ್ಯವಾದ ಅದೃಷ್ಟ‌.

ಮೊದಲನೇ ಕಥೆಯೇ ಓದುಗರನ್ನು ಆಕರ್ಷಿಸುತ್ತದೆ. ಒಂದು ಮೊಟ್ಟೆಯ ಕಥೆ ಕೇಳಿದ್ದೇವೆ. ಇಲ್ಲಿ ಅದನ್ನು ಮೀರಿದ ಕಥಾವಸ್ತು ಇದೆ ನೋಡಿ. ಅದೇ, “ಎಗ್ ರೈಸ್ ಮಂತ್ರಿ”, ಅಬಾಬಾಬಾ ತಾನು ಗೆದ್ದು ಶಾಲಾ ಸಂಸತ್ತಿನ ಮುಖ್ಯಮಂತ್ರಿ ಆಗಬೇಕೆಂದು; ಒಂದು ಓಟಿಗೆ ಒಂದು ಪ್ಲೇಟ್ ಎಗ್ ರೈಸ್ ಆಫರ್ ಕೊಡೋನು ಒಬ್ಬ, ತನ್ನ ಎಗ್ ರೈಸ್ ಅಂಗಡಿಗೆ ಸಖತ್ ವ್ಯಾಪಾರ ಆಗ್ಲೀ ಅಂತ ಅದರ ವ್ಯವಸ್ಥೆ ಮಾಡ್ತೀನಿ ಅನ್ನೋನು ಒಬ್ಬ. ನಮ್ಮ ರಾಜಕಾರಣಿಗಳ ಹುಸಿ ಆಶ್ವಾಸನೆಗಳನ್ನು ಕೇಳಿ ಕೇಳಿ ನಮ್ಮ ಮಕ್ಕಳೂ ಶಾಲಾ ಸಂಸತ್ತು ರಚನೆ ಸಂದರ್ಭದಲ್ಲಿ ಎಷ್ಟೆಲ್ಲಾ ರಾಜಕೀಯ ದಾಳದಾಟ ಆಡುತ್ತಾರೆಂಬುದನ್ನು ಅದ್ಭುತವಾಗಿ ಕೃತಿಕಾರರು ಈ ಕಥೆಯಲ್ಲಿ ಚಿತ್ರಿಸಿದ್ದಾರೆ. “ಒಂದು ಓಟಿಗೆ ಒಂದ್ ಪ್ಲೇಟ್ ಎಗ್ ರೈಸ್, ಹುಡುಗಿಯರಿಗೆ ಇದ್ದಲ್ಲೇ ಬರುತ್ತೆ ಪಾರ್ಸಲ್” ಯಪ್ಪಾ… ನಮ್ಮ ಶಾಲೆಗಳಲ್ಲಿ ಹೀಗೂ ಆಗುತ್ತಾ, ನಮ್ಮ ಮಕ್ಕಳು ಇಷ್ಟೆಲ್ಲಾ ಮುಂದುವರೆದಿದ್ದಾರಾ! ಎಂದು ಆಶ್ಚರ್ಯ ಓದುಗನಿಗೆ, ಶಿಕ್ಷಕರಿಗೆ, ಪಾಲಕರಿಗೆ ಆಶ್ಚರ್ಯವಾಗುತ್ತದೆ.

ಸಮೂ ಚೂಟಿ ಹುಡುಗ, ಅಂದುಕೊಂಡದ್ದನ್ನು ಸಾಧಿಸೋವರೆಗೆ ಜಗ್ಗೊ ಮಾತು ಅವನ ಬಳಿ ಇಲ್ಲ. ಅದರಲ್ಲೂ ಅಪ್ಪನ ಸಾತಿ ಸಿಕ್ಕರೆ ಕೇಳಬೇಕೆ… ಗಾಳಿಪಟ ಮೇಲೆ ಹಾರೇ ಹಾರುತ್ತೆ, ಬುಗುರಿ ಕೆಳಗೆ ತಿರುಗೋದು ಪಕ್ಕಾ. ಮಕ್ಕಳೇ‌ ಹಾಗೆ ಅಲ್ವಾ ಪಾದರಸಕ್ಕೆ ಉದಾಹರಣೆ ಅವು. ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಅಂತ ನಾವೇ ಹೇಳ್ತೀವಿ, ಆ ಯತ್ನದಲ್ಲಿ ವಿಫಲರಾದಾಗ ಅವರಿಗಿಂತ ನಾವೇ ಕೊರಗ್ತೀವಿ. ಆದರೆ ಅವರು ಮಾತ್ರ ತಮ್ಮ ಯತ್ನ ಸಫಲ ಆಗೋವರೆಗೂ ಬಿಡುವುದಿಲ್ಲ. ಅಂತೆಯೇ ಸಮು ಕೊನೆಗೂ ಗಾಳಿಪಟ ಹಾರಿಸಿ, ಹಾಳು ಮಾಡಿದ ಎಲ್ಲ ಅಮ್ಮನ ಅಲಮಾರದಲ್ಲಿಯ ದಾರ, ಕಸಬಾರಿಗೆಯ ಕಡ್ಡಿ, ಖಾಲಿಯಾದ ಅಕ್ಕನ ಅಂಟಿನಿಂದಾದ ತಾಯಿ ಅಕ್ಕನ ಸಿಟ್ಟನ್ನು ಮರೆಸಿಬಿಡುತ್ತಾನೆ, ಸಾರ್ಥಕ ಭಾವ ತಾನೂ ಹೊಂದಿ ಅವರಿಗೆ ಖುಷಿ ತರಿಸುತ್ತಾನೆ.
ಬುಗುರಿ ಆಡಿಸುವಾಗಿನ ಅಜ್ಜಿಯ ಮಾತುಗಳು ಅದಕ್ಕೆ ಸಮೂನ ಸ್ಪಷ್ಟನೆ, ಗಾಳಿಪಟಕ್ಕೆ ಮನೆಯ ದಾರ, ಕಡ್ಡಿ, ಅಂಟಿನ ಬಳಕೆ ಸಂಬಂಧ ತಾಯಿ, ಅಕ್ಕನ ಬೈಗುಳ ಎಲ್ಲವೂ ಹಾಸ್ಯಾತ್ಮಕವಾಗಿ ಮೂಡಿ ಬಂದಿದ್ದು ನಮ್ಮನ್ನು ಚಿಕ್ಕವಯಸ್ಸಿಗೆ ಕರೆದೊಯ್ಯುತ್ತವೆ.

“ಮಕ್ಕಳೇನು ಸಣ್ಣವರಲ್ಲ” ಎಷ್ಟೋ ಸಾರ್ತಿ ಅವರ ಮಾತುಗಳಿಗೆ ‌ಶಿಕ್ಷಕರೇ ದಂಗಾಗುತ್ತೇವೆ, ಮೂಕವಿಸ್ಮಿತರಾಗುತ್ತೇವೆ, ಮರು ಉತ್ತರ ನೀಡಲು ಆಗದೆ ಸಂದಿಗ್ಧ ಸ್ಥಿತಿಗೆ ಸಿಲುಕಿ ಪೇಚೆಗೀಡಾಗುತ್ತೇವೆ. ಆಗಲೇ ಅನುಭವಕ್ಕೆ ಬರುವುದು, ಹೌದು, “ಮಕ್ಕಳೇನು ಸಣ್ಣವರಲ್ಲ”. ತಮ್ಮ ವಯೋಸಹಜ ನಡವಳಿಕೆಗಿಂತ ಬಹಳ ಎತ್ತರಕ್ಕೆ ಅವರ ಆಲೋಚನೆಗಳು ಇದ್ದು, ಅಂತೆಯೇ ಅವರು ನಡೆದುಕೊಳ್ಳುತ್ತಾರೆ ಕೂಡ.
“ಓದು ಒಕ್ಕಾಲು ಬುದ್ಧಿ ಮುಕ್ಕಾಲು” ಎಂಬಂತೆ ಈ ಕಥೆಯಲ್ಲಿ ಮಕ್ಕಳೇ ವಿಷಯ ಜ್ಞಾನ ನಿಡುತ್ತಾರೆ. ಪಾರಿವಾಳದ ವೈಶಿಷ್ಠ್ಯದ ಜೊತೆಗೆ ಪಾರಿವಾಳ ಸಾಕಾಣಿಕೆ, ಪಾರಿವಾಳ ಬಳಸಿ ಜೂಜು ಕಟ್ಟುವುದು, ನಡುವೆ ಹೆಣ್ಣು ಪಾರಿವಾಳ ಬಳಸಿ ಗಂಡು ಪಾರಿವಾಳದ ದಿಕ್ಕು ತಪ್ಪಿಸುವುದು, ಒಂದೇ ಎರಡೇ, ದೊಡ್ಡವರಿಗೂ ಹೊಳೆಯದ ಅನೇಕ ವಿಚಾರಗಳಲ್ಲಿ ಮಕ್ಕಳು ಅದಾಗಲೇ ನಿಪುಣರಾಗಿದ್ದಾರೆಂಬುದು ತಿಳದು “ಮಕ್ಕಳೇನು ಸಣ್ಣವರಲ್ಲ” ಎಂಬುದನ್ನು ಲೇಖಕರು ಸಾಬೀತುಮಾಡುತ್ತಾರೆ.

ನಾಯಿಯೊಂದಿಗಿನ ಮಕ್ಕಳ ಸಖ್ಯ, ಅಜ್ಜಿಗೆ ಅದುವೇ ಅಸಖ್ಯ, ಸದಾ ಛೇಡಿಸಿಕೊಳ್ಳುವುದು, ಅಸಹ್ಯ ಮಾಡಿಕೊಳ್ಳುವುದು. ಮನೆಯಲ್ಲೆಲ್ಲಾ ಓಡಾಡಿದರೆ ಮೈಲಿಗೆಯಾದಂತಾಗುತ್ತದೆ ಎಂಬ ಭಯ. ಏನು ತಿಂದುಬರುತ್ತದೋ ಶನಿ ಎಂಬ ಭಾವ. ಒಮ್ಮೆ ಆ ನಡುರಾತ್ರಿಯಲ್ಲಿ ನಾಯಿ ಕೊಟ್ಟ ಹಿಂಸೆಯ ಫಲ ಅದನ್ನು ದೂರ ಅಟ್ಟುವುದು. ಅಲ್ಲಿಯವರೆಗೂ ತಡೆದುಕೊಂಡಿದ್ದ ತಂದೆ ಮೊದಲು ಈ ಶನಿಯನ್ನು ಸಾಗ್ಹಾಕಬೇಕೆಂದು ತೀರ್ಮಾನಿ‌ಸುವುದು, ಮಕ್ಕಳೋ ತಮ್ಮ ಆಪ್ತ ಜೊತೆಗಾರನನ್ನೇ ಕಳೆದುಕೊಂಡಂತೆ ದುಃಖಿಸುವುದು. ಆ ನಾಯಿ “ಲೂನಾ” ಗಾಡಿಗೆ ಸಿಕ್ಕಿ ಸಾಯುವುದು. ಮತ್ತೊಂದು ನಾಯಿಯನ್ನು ಯಾರಿಗೂ ಗೊತ್ತಾಗದಂತೆ ಮಕ್ಕಳು ಸಾಕುವುದು. ತಂದೆ ಗಮನಕ್ಕೆ ಬಂದು ಅಜ್ಜಿ ಕಣ್ಣಿಗೆ ಬೀಳಿಸದಿರಿ ಎಂದು ಎಚ್ಚರಿಸುವುದು, ಆ ನಾಯಿಯೋ ತನ್ನ ಚಟ ಬಿಡದೆ ಮಂದಿ ಮನೆ ಕೋಳಿ ತಿಂದು, ಅವರು ಬಂದು ಜಗಳ ಆಡೋದು, ಅಜ್ಜಿ “ನಾವು ಬ್ರಾಂಬರು.. ನಮ್ಮ ಮನೆಯಲ್ಲಿ ನಾಯಿ… ನಿನಗ ಎಲ್ಲೇರ ತಲಿಕೆಟ್ಟದನೂ?” ಎಂದು ಬೈದದ್ದು ಎಲ್ಲವೂ ಓದುಗನನ್ನು ಕಥೆಯೊಳಗೆ ತಲ್ಲೀನಗೊಳಿಸುತ್ತವೆ. ತಿಳಿ ಹಾಸ್ಯದ ಮಾತುಗಳು ನಗಿಸಿದರೆ, ಕೆಲವೊಮ್ಮೆ ಭಾವುಕತೆ ಹುಟ್ಟಿಸುತ್ತವೆ. ಸಾಕಿದ ನಾಯಿ ಮರಿ ಹಾಕಿ , ನಾಯಿ ಮತ್ತು ಮರಿಗಳನ್ನು ದೂರದಲ್ಲಿ ಬಿಟ್ಟು ಬಂದ ಕೆಲ ದಿನಗಳಲ್ಲಿ ತಾಯಿ ನಾಯಿ ಮಾತ್ರ ಮರಳಿದುದನ್ನು ಕಂಡ ಅಜ್ಜಿ, “ನಾನೇ ತಾಯಿ ಮಕ್ಕಳನ್ನ ದೂರಮಾಡಿದಂಗಾತು” ಅಂದಾಗ ಕಣ್ಣಂಚಲ್ಲಿ ನೀರು ಜಿನುಗುತ್ತವೆ, ಭಾವುಕತೆ ಉಕ್ಕಿಬರುತ್ತದೆ. ಕೃತಿಕಾರರ ವಾಕ್ಯಗಳು, ಸಂದರ್ಭಗಳ ಜೋಡಣೆ ಕಥೆ ಕಟ್ಟಿದ್ದು ಎನಿಸದೆ ನೈಜವಾದುದನ್ನೇ ನಿರೂಪಿಸಿದ್ದಾರೆ ಎನಿಸುತ್ತದೆ.

ಹಳ್ಳಿ ಇರಲಿ, ಸಿಟಿ ಇರಲಿ ಹೊರಗುಳಿದ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು ಸಾಹಸವೇ ಸರಿ. ಅಂತಹ ಒಬ್ಬ ನಾಗನನ್ನು ಶಾಲೆಗೆ ಕರೆತರಲು ಶಿಕ್ಷಕ ಪಾತ್ರಧಾರಿ “ಪವಾಡ”ವನ್ನೇ ಮಾಡಬೇಕಾಗಿ ಬಂದದ್ದು, ಅದರಲ್ಲಿ ಆ ನಾಗನ ತಾಯಿಯೇ “ಹೇಳಿಕೆ” ನೀಡುವ ದೈವೀ ಶಕ್ತಿ ಹೊಂದಿದವಳಾಗಿದ್ದು ಶಿಕ್ಷಕರು ಉಪಾಯವಾಗಿ ತಮ್ಮ ಸಮಸ್ಯೆ ಬಗೆಹರಿಸುವಂತೆ ಕೇಳಲು ಹೋಗಿ, “ಒಂದು ಹುಡುಗ ಶಾಲೆಗೆ ಬರುವಂತೆ ಮಾಡಿ, ಅವ ನಿಮ್ಮ ಮಗನೇ” ಎಂದಾಗ ದೇವರನ್ನು ಆಹ್ವಾನಿಸಿಕೊಂಡ ಆ ತಾಯಿ ಪೇಚೆಗೆ ಸಿಲುಕುತ್ತಾರೆ!. “ಅವನ ಜಾತಕದಾಗ ಗುರು ಎಂಟರಲ್ಲಿದ್ದು ಕಾಡ್ತಿದ್ದ, ನಾಳೆಯಿಂದ ಮಂಗಳನ ಪ್ರವೇಶ ಅದ, ನಾಡಿದ್ದ ಅವ ಶಾಲೆಗೆ ಬರ್ತಾನ” ಎಂದು ಹೇಳಿಕೆ ನೀಡುತ್ತಾರೆ. ನಂತರ ನಾಗ ಶಾಲೆಗೆ ಬರುತ್ತಾನೆ. ಇದರ ಮಧ್ಯದಲ್ಲಿ ನಾಗ ಮತ್ತು ಶಿಕ್ಷಕರ ನಡುವಿನ ಸಂಭಾಷಣೆಗಳು ಬಹಳ ಹಾಸ್ಯಾತ್ಮಕವಾಗಿವೆ. “ನನಗೆ ತಿಳುವಳಿಕೆ ಐತಿ, ಓದು ಬೇಕಿಲ್ಲ” ಎನ್ನುವ ನಾಗನ ವಾದ, “ಓದಿಲ್ದಿದ್ರೆ ಹಂಗಾಗುತ್ತೆ, ಹಿಂಗಾಗುತ್ತೆ ಎನ್ನುವ ಮೇಷ್ಟ್ರು” ಈ ಸಂಭಾಷಣೆಗಳಲ್ಲಿನ ಹಾಸ್ಯವನ್ನು, ಆನಂದವನ್ನು ಓದಿಯೇ ಅನುಭವಿಸಬೇಕು.

“ಮಕ್ಕಳೇನು ಸಣ್ಣವರಲ್ಲ”, ಅವರು ಮಾಡುವ ಒಂದೊಂದು ಘನಂದಾರಿ ಕೆಲಸಗಳು ಶಾಶ್ವತವಾಗಿ ನೆನಪಿಟ್ಟುಕೊಳ್ಳಬೇಕು, ಸಿನೆಮಾ ಮಾಡಬೇಕು. ಅಂತಹ ನಿರ್ಭಯದ ಮನಸಿನ ಮಕ್ಕಳು ಪಕ್ಕದ ಹಳ್ಳಿಯಲ್ಲಿ ಚಿರತೆ ಬಂದಿದೆ ಎಂದು ತಂದೆ ಎಚ್ಚರಿಕೆ ನೀಡಿ ಗುಡ್ಡಕ್ಕೆ ಹೋಗಕೂಡದು ಎಂದು ಎಚ್ಚರಾಕೆ ನೀಡಿದರೂ, ಕೇರ್ ಮಾಡದೆ ತಾವು ತಯಾರಿಸಿದ ಸೀಡ್ ಬಾಲಗಳನ್ನು ಎಸೆಯಲು ಗುಡ್ಡಕ್ಕೆ, ಇದ್ದ ಹಣದಲ್ಲೇ ಸ್ನ್ಯಾಕ್ಸ್ ತಗೊಂಡು ಹೋಗಿ ಬಿಡುತ್ತಾರೆ, ದುರದೃಷ್ಟ ಅಂದೇ, “ಮಸ್ಕಿ ಗುಡ್ಡದಲ್ಲಿ ಚಿರತೆ ಪತ್ತೆ” ಎಂದು ಪತ್ರಿಕೆಯಲ್ಲಿ ಬರುತ್ತೆ. ಮನೆಯಲ್ಲಿ ಮಕ್ಕಳು ಇಲ್ಲದ್ದನ್ನು ಕಂಡ ತಂದೆ ಪೊಲೀಸರಿಗೆ ವಿಷಯ ತಿಳಿಸುತ್ತಾರೆ, ಪೊಲೀಸರು ಅರಣ್ಯ ಇಲಾಖೆಗೆ. ಎಲ್ಲರೂ ಗುಡ್ಡಕ್ಕೆ ಪ್ರವೇಶಿಸುತ್ತಾರೆ. ಇತ್ತ ಮಕ್ಕಳು ಚಿರತೆಯನ್ನು ಕಂಡು ಎತ್ತರದ ಬಂಡೆ ಏರಿ ಕುಳಿತುಕೊಳ್ಳುತ್ತಾರೆ.

ಭಯದಲ್ಲಿ ಅಪ್ಪನ ಮಾತನ್ನು ನಿರ್ಲಿಕ್ಷಿಸಿದ್ದರ ಪರಿಣಾಮ ಎಂದು ಮನವರಿಕೆ ಆಗುತ್ತದೆ. ಚಿರತೆ ಬಂಡೆ ಏರಿ ಬರಲು ಪ್ರಯತ್ನಿಸುತ್ತಿದ್ದಾಗ ಚಿರತೆಗೆ ಸೀಡ್ ಬಾಲ್, ಕಲ್ಲು ಒಗೆದು ಅವು ಖಾಲಿ ಆದಾಗ ಚೂಟಿ ಸಮು ಚಿರತೆ ಬಾಯಿಗೆ ಕುರುಕರೆ ಎಸೆದ‌. ಅದರ ಉಪ್ಪು, ಹುಳಿ, ಖಾರದ ಸವಿಗೆ ಸೋತ ಚಿರತೆ ಅದನ್ನು ಚಪ್ಪರಿಸಿಕೊಂಡು ತಿನ್ನತೊಡಗಿತು. ಕುರುಕುರೆಯ ಖಾರ ಅದರ ಕಣ್ಣಿಗೆ ಬೀಳಲಿ ಎಂದರೆ, ಅದನ್ನು ಚಿರತೆ ಖುಷಿಯಿಂದ ತಿನ್ನತೊಡಗಿದ್ದನ್ನು ಕಂಡು ಮಕ್ಕಳು ಅದನ್ನು ಮೇಲೆ ಬರದಂತೆ ಸಮಯ ದೂಡಬೇಕು ಎಂದು ಚಾಕಲೇಟು, ಕುರುಕುರೆ ಎಸೆಯತೊಡಗುತ್ತಾರೆ. ಅದು ಮನುಷ್ಯರನ್ನು ಬಿಟ್ಟು, ಮನುಷ್ಯರು ಬಾಯಿ ಚಪಲಕ್ಕೆ ಮಾಡಿದ ಕುರುಕುರೆಯ ಟೇಸ್ಟಿಗೆ ಮನಸೋತು ತಿನ್ನುತ್ತದೆ. ಅಷ್ಟರಲ್ಲಿ ಅರಣ್ಯ ಸಿಬ್ಬಂದಿ ಬೋನುಗಳೊಂದಿಗೆ ಚಿರತೆ ಹಿಡಿಯಲು ಸನ್ನದ್ಧರಾಗಿರುತ್ತಾರೆ. ಅವರ ಸೂಚನೆಯಂತೆ ಮಕ್ಕಳು ಕುರುಕುರೆ ಪುಡಿ ಮಾಡಿ ದೂರ ಎಸೆದೇ ಬಿಡುತ್ತಾರೆ. ಅದನ್ನು ಹಿಡಿಯುವ ಭರದಲ್ಲಿ ನೆಗೆದ ಚಿರತೆ ಕಣ್ಣಲ್ಲಿ ಖಾರ ಬಿದ್ದು, ಕಾಲು ಜಾರಿ ಪಂಜರದಲ್ಲಿಯೇ ಬೀಳುತ್ತದೆ. ಮಕ್ಕಳ ಸಾಹಸಕಾರ್ಯ ಶ್ಲಾಘನೀಯವಾಗುತ್ತದೆ. ಆದರೆ ಸಮುಗೆ ತನ್ನ ಸ್ನ್ಯಾಕ್ಸ್ ವೇಸ್ಟಾದ ಚಿಂತೆ ಕಾಡುತ್ತದೆ. ಈ ಕಥೆಯಲ್ಲಿ ಸಮು,ಅನು ಇವರ ಗುಡ್ಡದಲ್ಲಿನ ಸಂಭಾಷಣೆಯನ್ನು ಕೃತಿಕಾರರು ಹಾಸ್ಯಮಯವಾಗಿ ದಾಖಲಿಸಿದ್ದಾರೆ. ಸ್ನ್ಯಾಕ್ಸ್ ತೆಗೆದುಕೊಂಡು ಹೋದರು, ತಿಂದ ಮೇಲೆ ಅದರ ಕವರ್ ಗಳನ್ನು ಅಲ್ಲಿ ಎಸೆಯುವಂತಿಲ್ಲ ಎಂಬ ಮಾತು ಹೇಳಿ, ಕೃತಿಕಾರು ತಮ್ಮ ಪರಿಸರ ಕಾಳಜಿಯನ್ನೂ ಸಹ ಈ ಮೂಲಕ ವ್ಯಕ್ತಪಡಿಸಿದ್ದಾರೆಂಬುದು ವಿಶೇಷವಾಗಿದೆ.

ಮಕ್ಕಳ ಜಾಣತನ ಅವರ ಅಹಂಕಾರವಾಗಬಾರದು. ಹೌದು ಕೆಲ ಮಕ್ಕಳು ಶಿಕ್ಷಕರಿಗೆ ಅಡ್ಡಾದಿಡ್ಡಿ ಪ್ರಶ್ನೆ ಕೇಳಿ ಗೊಂದಲ ಉಂಟು ಮಾಡಿ ಅವರನ್ನು ಅವಮಾನಿಸುವ ಕೃತ್ಯಕ್ಕೆ ಕೈ ಹಾಕುತ್ತಾರೆ. ಪಠ್ಯಕ್ಕೆ ಸಂಬಧವೇ ಇರದ ಶಿಕ್ಷಕರ ಗಮನಕ್ಕೆ ಬಾರದ ವಿಷಯಗಳನ್ನು ಯಾವುದೋ ಪುಸ್ತಕದಿಂದ ಹೆಕ್ಕಿ ಶಿಕ್ಷಕರಿಗೆ ಪ್ರಶ್ನೆ ಕೇಳುವುದು, ಅವರು ಮಕ್ಕಳ ಮುಂದೆ ಗೊತ್ತಿಲ್ಲ, ನಾಳೆ ಹೇಳುವೆ ಎಂದು ಮುಜಗರಕ್ಕೆ ಒಳಗಾಗುವಂತೆ ಮಾಡಿ, ತಾವು ಕುಹಕದ ನಗು ಬೀರುತ್ತವೆ. ಇಂತಹ ಒಬ್ಬ ಹುಡುಗ “ರಾಮು”. ಜಂಬದ ಕೋಳಿಯಾಗಿ ಕಥೆಯಲ್ಲಿ ಶಿಕ್ಷಕರಿಗೆ ತಲೆನೋವಾಗುತ್ತಾನೆ. ಇವನ ಅಹಂಕಾರ ಮುರಿಯಲು ಮತ್ತೊಬ್ಬ ಸಮನಾದ ಸ್ಪರ್ಧಾಳುವನ್ನು ತಯಾರಿ ಮಾಡಿ. ಪ್ರಥಮ ಬಂದೋರಿಗೆ ಬಹುಮಾನ ಘೋಷಿಸುತ್ತಾರೆ. ಇದು ನುಂಗಲಾರದ ತುತ್ತು ರಾಮುವಿಗೆ. ಕೊನೆಯಲ್ಲಿ ರಾಮು ಕಡಿಮೆ ಅಂಕ ತೆಗೆದುಕೊಂಡರೂ, ಅವನ ಮನಸಿಗೆ ನೋವಾಗಬಾರದೆಂದು ಶಿಕ್ಷಕರು “ಗಿರಿ” ಮತ್ತು “ರಾಮುಗೆ” ಸಮನಾದ ಅಂಕ ನೀಡುತ್ತಾರೆ. ರಾಮು ಸೊಕ್ಕಿನಿಂದ ಗಿರಿಯ ಮತ್ತು ತನ್ನ ಉತ್ತರ ಪತ್ರಿಕೆ ಪರಿಶೀಲಿಸಿ, ಬೇಕಂತಲೇ, ನನಗೆ ನೋವಾಗಬಾರದೆಂದು ಶಿಕ್ಷಕರು ಗಿರಿಗೆ ಬಹಳ ಅಂಕ ಬಂದರೂ ನನ್ನಷ್ಟೇ ಸಮ ಅಂಕ ನೀಡಿದ್ದಾರೆ ಎಂದು ತಿಳಿದು ಬೆಪ್ಪಾಗುತ್ತಾನೆ. ಜೊತೆಗೆ ಭಾವುಕನೂ ಆಗಿ ತನ್ನ ಅಹಂಕಾರವನ್ನು ಬಿಡುತ್ತಾನೆ. ತನ್ನ ತಪ್ಪು ಅರಿತು ಜಾಣತನದ ಜೊತೆಗೆ ಒಳ್ಳೆಯ ವಿದ್ಯಾರ್ಥಿಯಾಗಿ ಬದಲಾಗುತ್ತಾನೆ. ಇಲ್ಲಿ ಶಿಕ್ಷಕರು ಅವನನ್ನು ಕೇವಲ ಹೀಯಾಳಿಸದೆ ಅವನನ್ನು ಸರಿದಾರಿಗೆ ತರಲು ಪ್ರಯತ್ನಿ‌ಸಿ ಯಶಸ್ವಿಯಾಗುತ್ತಾರೆ. ಇದು ಶಿಕ್ಷಕರ ಉತ್ತಮ ಗುಣ ಎಂಬುದನ್ನು ತೋರಿಸಿದ್ದಾರೆ.

ಹುಣಸೇ ಬೀಜ ತಿಂದ ಸಮುಗೆ ” ಹೊಟ್ಟೆಯಲ್ಲಿ ಮರ” ಆಗುತ್ತದೆ ಎಂದು ಆಟ ಆಡಿಸಿ ಗೋಳಾಡಿಸಿದ ಅಕ್ಕ ಅನು, ಕೊನೆಯಲ್ಲಿ ತಾನೆ ವಾಯಕ್.. ವಾಯಕ್ ಎನ್ನುವಂತೆ ತಂದೆ ಮಗ ಉಪಾಯ ಮಾಡಿದ ಪ್ರಸಂಗ ಬಹಳ ಹಾಸ್ಯಮಯವಾಗಿ ಮೂಡಿಬಂದಿದೆ.

ಪ್ಲಾಸ್ಟಿಕಾಯಣವಂತೂ ಈ ಕೃತಿಗೆ ಒಂದು ಬಲ, ಮೆರುಗನ್ನು ನೀಡಿದ ಕಥೆ. ಪ್ಲಾಸ್ಟಿಕ್ ನಿಶೇಧದ ಬಗೆಗೆ ಸರಕಾರ ಕೈಗೊಳ್ಳುವ ಯಾವ ಯೋಜನೆ, ನಿಯಮಗಳು ಸಫಲವಾಗುವುದೇ ಇಲ್ಲ. ಕೇವಲ ಕೆಳ ಹಂತದ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸಲು ನಿಶೇಧ ಹೇರುವ ಸರಕಾರ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳಿಗೆ ಯಾವ ನಿಶೇಧ ಹೇರುವುದಿಲ್ಲ. ಪ್ರಸ್ತುತ ವರ್ತಮಾನಕ್ಕೆ ಪ್ಲಾಸ್ಟಿಕ್ ಹೊರತಾಗಿ ಬದುಕುವುದು ಸಾಧ್ಯವೇ ಇಲ್ಲ ಎನ್ನುವಷ್ಟು ಪ್ಲಾಸ್ಟಿಕ್ ನಮ್ಮನ್ನು ನಮ್ಮ ನಿತ್ಯ ವ್ಯವಹಾರದಲ್ಲಿ ಅನುಕೂಲತೆಗೆ ಆವರಿಸಿಕೊಂಡುಬಿಟ್ಟಿದೆ. ಅದನ್ನು ಬಳಸದೇ ಇರುವುದು ಜನರ ಕೈಯಲ್ಲಿಯೇ ಇದ್ದು, ಅವರು ಮನಸು ಮಾಡುತ್ತಿಲ್ಲ. ಹಾಗಾಗಿ ಬಳಸಿ ಎಸೆದ ಪ್ಲಾಸ್ಟಿಕ್‌ನ ವಿಕಾರ, ವಿಕೃತ ರೂಪದ ದರ್ಶನವನ್ನು ಮಕ್ಕಳು ಜನರಿಗೆ ತೋರಿಸಿದ್ದು, ಅದಕ್ಕೆ ಪೌರಾಡಳಿತವೂ ಬೆಂಬಲ ನೀಡಿದ್ದು ಈ ಕಥೆಯ ತಿರುಳು. ಈ ಕಥೆ ಮಕ್ಕಳ ಸಾಮಾಜಿಕ ಕಥೆಯಾಗಿದೆ. ಹಾಸ್ಯದ ಜೊತೆಗೆ ಸಮಾಜಮುಖಿ ಕಥಾ ವಸ್ತುವನ್ನು ಮಕ್ಕಳಿಗೆ ನೀಡುವಲ್ಲಿ ಕೃತಿಕಾರರು ಗೆದ್ದಿದ್ದಾರೆ. ಕಥೆಯಲ್ಲಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದಂತೆ, ನಾವೂ ಕಥೆಯ ಉದ್ದೇಶ ಅರಿತು ಇನ್ನುಮುಂದಾದರೂ ಪ್ಲಾಸ್ಟಿಕ್ ಬಳಕೆ ಮಿತಗೊಳಿಸಿದರೆ ಮುಂದಿನ ಪೀಳಿಗೆಗೆ ಒಳ್ಳೆಯ ಭೂ ಒಡಲನ್ನು ದಯಪಾಲಿಸಿದಂತಾಗುತ್ತದೆ.

ಇಂದಿನ ಕಾಲದಲ್ಲಿ ತಂದೆ ತಾಯಿಗೆ ಮಕ್ಕಳ, ಆಹಾರ ಮತ್ತು ಆರೋಗ್ಯದ್ದೇ ಚಿಂತೆ. ಈ ಜಂಕ್ ಫುಡ್ ಬಂದ ಮೇಲೆ ಮಕ್ಕಳ ಆಹಾರದ ಗತಿ ನಾನಾ ತೆರದಲ್ಲಿ ಬದಲಾಗಿದೆ, ಈ ಟಿ ವಿ ಮೊಬೈಲ್ ಬಂದ ಮೇಲೆ ಮಕ್ಕಳ ಆರೋಗ್ಯ ಬಹುತೇಕ ಹದಗೆಟ್ಟಿದೆ. ಸೋಮಾರಿತನ ಎನ್ನುವುದು ಆವರಿಸಿ ಅನೇಕ ದೈಹಿಕ ಸದೃಢತೆ ಹೆಚ್ಚಿಸುವ ಮಾನಸಿಕ ನಿರಾಳತೆ ನೀಡುವ ಹೊರಾಂಗಣ ಆಟಗಳು ಅಳಿವಿನ ಅಂಚಿನಲ್ಲಿವೆ. ಒಂದೇ ಕಡೆ ಕುಳಿತು ತಿಂದು, ತಿಂದು ಆಟವಿಲ್ಲದೆ, ಮೊಬೈಲ್, ಟಿ ವಿ ನೋಡುತ್ತ ಬೊಜ್ಜು ಬೆಳೆಸಿಕೊಂಡು ರೆಡಿಮೇಡ್ ಬಟ್ಟೆಯೇ ಸಿಗದಂತೆ ಊದಿಕೊಳ್ಳುತ್ತಾರೆ. ಅಂತಹ ಒಬ್ಬ ಹುಡುಗ “ರಾಮು”. ತೂಕದಲ್ಲಿ ಸೆಂಚ್ಯೂರಿ ಬಾರಿಸಿ ಎಲ್ಲರಿಂದ ಅಪಹಾಸ್ಯಕ್ಕೀಡಾಗಿ ತಂದೆ ತಾಯಿಗೆ ಸಮಸ್ಯೆಯಾಗುತ್ತಾನೆ. ಇದಕ್ಕೆ ಪರಿಹಾರವೇ ತಿಳಿಯದೇ ತಾಯಿ ಬಳಲಿದರೆ ಈ ರಾಮುಗೆ “ನಾಯಿ” ಸಾಕೋ ಹುಚ್ಚು. ಅದನ್ನು ಸಾಕಿದ ನಂತರ ಏನಾನುಗತ್ತದೆ, ಇವನ ಅಸಹಜ ತೂಕಕ್ಕೂ ಈ ನಾಯಿ ಸಾಕುವುದಕ್ಕೂ ಏನು ಸಂಬಂಧ ಅಂತೀರಾ ಅದೇ ಈ ಕಥೆಯ ಗುಟ್ಟು. ಗುಟ್ಟು ರಟ್ಟಾಗಲು ಈ ಕಥೆಯನ್ನು ಓದಲೇ ಬೇಕು. ಬಹಳ ಸೊಗಸಾದ ಕಥೆ ಈ “ರಾಮುವಿನ ನಾಯಿ”.

ಪವಾಡ ಪುರುಷರು ನೀರಿನ ಮೇಲೆ ನಡೆಯುತ್ತಾರೆ ಎಂಬ ಕಥೆ ಕೇಳಿ, “ನಾನೂ ನೀರಿನಲ್ಲಿ ನಡೆಯುತ್ತೇನೆ ನಮ್ಮ ಶಾಲೆಯ ಟೀಚರ್ರು ಹೇಳಿದ್ದಾರೆ ನಡೀಬಹುದು ಎಂದು”. “ಅದು ಹೇಗೆ ಸಾಧ್ಯವೋ ನಾನು ನಿಮ್ಮ ಟೀಚರ್ ಗೆ ಕೇಳುತ್ತೇನೆ ತಡಿ” ಎಂಬ ತಂದೆ ಮಾತಿಗೆ, “ಚೆನ್ನಾಗಿ ಓದಿದರೆ ನೀರಿನಲ್ಲಿ ನಡೆಯಬಹುದು ಎಂದಿದ್ದಾರೆ. ಅದ್ಯಾವುದೋ ಮೃತ ಸಮುದ್ರ ಇದೆ ಅಂತೆ. ಅಲ್ಲಿಗೆ ಹೋಗಲು ಬಹಳ ದುಡ್ಡು ಬೇಕಂತೆ. ದುಡ್ಡು ಬೇಕಾದರೆ ಚೆನ್ನಾಗಿ ಓದಿ ದೊಡ್ಡ ಹುದ್ದೆ ಪಡೀಬೇಕಂತೆ. ಅದಕ್ಕೆ ನಾನೂ ಚೆನ್ನಾಗಿ ಓದಿ ನಾನೂ ನೀರಿನ ಮೇಲೆ ನಡೆಯುತ್ತೇನೆ ಅಪ್ಪ. ಆದರೆ ನಿನಗೆ ಆಗಲ್ಲ ಬಿಡು” ಎಂದು ನಕ್ಕ ಸಮೂಗೆ, “ನೀನು ಹೋಗುವಾಗ ನಮ್ಮನ್ನ ಕರ್ಕೊಂಡು ಹೋಗಲ್ಲೇನು? ಎಂದು ಪ್ರಶ್ನಿಸಿದಾಗ ಕರ್ಕೊಂಡು ಹೋಗ್ತೀನಿ ಆದರೆ ಈಗ ಐದು ರೂಪಾಯಿ ಕೊಡು ಎಂದು ಮುಗ್ಧವಾಗಿ ಚಾಕಲೇಟು ತರಲು ಹೋಗುತ್ತಾನೆ. ಕಥೆಯ ಜೊತೆಗೆ ಮಕ್ಕಳಿಗೆ ತಿಳಿಯದ ವಿಷಯಗಳನ್ನೂ ತಿಳಿಸುವುದು ಶಿಕ್ಷಕರ ಕರ್ತವ್ಯ. ಶಿಕ್ಷಕ ಸಾಹಿತಿಗಳಾಗಿ ಕೃತಿಕಾರರು ಇದನ್ನು ಬಹುತೇಕವಾಗಿ ಪಾಲಿಸಿ ಮಕ್ಕಳ ಮೆಚ್ಚಿನ ಶಿಕ್ಷಕರೂ ಆಗಿದ್ದಾರೆ.

ಇಂದಿನ ಮಕ್ಕಳೇ ಹಾಗೆ, ಭಯ ಪಡಬಾರದ್ದಕ್ಕೆ ಭಯ ಪಡ್ತಾರೆ. ಭಯ ಪಡುವಲ್ಲಿ ಧೈರ್ಯ ಮೆರೀತಾರೆ. ಅದರಲ್ಲೂ ಈ ತಂತ್ರಜ್ಞಾನ ಬಂದಮೇಲೆ ಅಂತೂ ಮಾಟ, ಮಂತ್ರ, ದೇವರು, ದೆವ್ವ ಯಾವುದನ್ನೂ ಕೇರ್ ಮಾಡೋದಿಲ್ಲ. ಮೊಬೈಲ್ ನಲ್ಲಿ ದೇವರ, ಅಥವಾ ತಮ್ಮ ಅಭ್ಯಾಸದ ವಿಷಯಗಳಿಗಿಂತ ಹೆಚ್ಚು ಹಾರರ್ ಕಥೆಗಳನ್ನು ಚಿಕ್ಕಂದಿನಿಂದಲೇ ನೋಡೋದನ್ನು ಶುರು ಮಾಡಿರ್ತಾರೆ. ಅಂತಹ ಒಂದು ಕಥೆ ಕೇಳಿದ ರಾಮುವಿಗೆ ಬರೀ ದೆವ್ವದ್ದೇ ಗುಂಗು. ಒಂದು ದಿನ ರಾಮುವಿಗೆ ರಾತ್ರಿ ದೆವ್ವ ಎದುರಾಗುತ್ತದೆ. ಎದುರಾದ ದೆವ್ವವನ್ನೇ ಹೆದರಿಸಿ, ಮೊಬೈಲ್ ನಲ್ಲಿ ದೆವ್ವಗಳ ಹಾರಾಟ ಚೀರಾಟ ತೋರಿಸಿ, “ಇಷ್ಟು ದೆವ್ವಗಳನ್ನು ಹೊರಬಿಟ್ಟರೆ ನೀ ಉಳಿತೀಯಾ?” ಬಾ ಬಾ ಎಂದು ದೆವ್ವವ್ವನ್ನೇ ಓಡಿಸಿಕೊಂಡು (ಮೊಬೈಲ್) “ಯಂತ್ರದಲ್ಲಿ ಬಂಧಿಸ್ತೀನಿ ಬಾ”, “ನೀ ನನ್ನ ಕೊಂದ್ರ ನಾನು ಯೂನಿಯನ್ ಮಾಡ್ಕೋತೀನಿ ನಿಮ್ಮತಹವರಿಂದ ಅನ್ಯಾಯವಾಗಿ ಸತ್ತವರದ್ದು” ನಿನ್ನ ಬಿಡಂಗಿಲ್ಲ ನಾನು, ನಾನೂ ದೆವ್ವವಾಗಿ ಸೇಡು ತೀರಿಸಿಕೊಳ್ತೀನಿ”. ಹೀಗೆ ದೆವ್ವ ಮತ್ತು ರಾಮುವಿನ ‌ಸಂಭಾಷಣೆ ಹಾಸ್ಯಾತ್ಮಕವಾಗಿ ಮೂಡಿಬಂದಿವೆ.

ದೆವ್ವ ಹೆದರಿಕೊಂಡು ಪುಟ್ಟ ಮಾಯಾ ಪೆಟ್ಟಿಗೆಯಲ್ಲಿ ಎಷ್ಟೊಂದು ದೆವ್ವಗಳನ್ನು ಬಂಧಿಸಿದ್ದಾನೆ, ನನ್ನನ್ನು ಬಂಧಸ್ತಾನೋ? ಎಂದು ಓಡಿ ಹೋಗುತ್ತಿದ್ದಂತೆ ಬೆನ್ಹತ್ತಿದ ರಾಮು, “ಇವತ್ತು ನಂದಾರ ಆಗಬೇಕು, ನಿಂದರ ಆಗಬೇಕು” ಎಂದು ನಿನ್ನ ಬಂಧಿಸ್ತೀನಿ ಅಂತ ಫೋನನ್ನೇ ದೆವ್ವಕ್ಕೆ ಎಸೆಯುತ್ತಾನೆ. ಮುಂದೇನಾಯ್ತು? ದೆವ್ವ ಅವನಿಗೆ ಸಿಕ್ಕುತ್ತೋ? ಮಾಯಾ ಪೆಟ್ಟಿಗೆಯಲ್ಲಿ ಬಂಧಿಸ್ತಾನೋ? ಎಸೆದ ಹೊಡೆತಕ್ಕೆ ಮೊಬೈಲ್ ಏನಾಯ್ತು? ಎಲ್ಲ ಕುತೂಹಲ ತಣಿಸಿಕೊಳ್ಳಲು ಈ ಕಥೆಯನ್ನು ಓದಬೇಕು. ಓದ್ತೀರಲ್ವಾ. ಓದಿಯೇ ಅದರ ಕಥೆಗಾರರ ಸೃಜನಶೀಲತೆ ತಿಳಿಯಬೇಕು, ಕಥೆಯ ಸತ್ವ ಅರಿಯಬೇಕು.

ಹೀಗೆ ಹನ್ನೆರಡು ಕಥೆಗಳನ್ನೊಳಗೊಂಡ ಮಕ್ಕಳ, ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಬಹಳ ಸೊಗಸಾಗಿ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಂತಹ ಸಂಕಲನ ಪ್ರತಿಯೊಂದು ಶಾಲೆಯಲ್ಲಿ ಇರಲೇಬೇಕು. ಪ್ರತಿಭಾಕಾರಂಜಿಯ ಹಾಸ್ಯ ಸ್ಪರ್ಧೆಯಲ್ಲಿ, ಶಾಲಾ ವಾರ್ಷಿಕೋತ್ಸವದಲ್ಲಿ ಈ ಕಥೆಗಳಿಗೆ ನಾಟಕ ರೂಪ ಕೊಡಬಹುದು. ಶಿಕ್ಷಣ ಇಲಾಖೆ ಕನಿಷ್ಟ ಇಂತಹ ಮಕ್ಕಳಿಗಾಗಿ ಬರೆದ ಕವನ, ಕಥಾ ಸಂಕಲನ ನಾಟಕ, ಕಾದಂಬರಿಗಳಂತಹ ಕೃತಿಗಳನ್ನು ನಾಡಿನ ಪ್ರತಿಯೊಂದು ಶಾಲೆಗಳಿಗೆ ಒಂದೊಂದು ಪ್ರತಿಯನ್ನಾದರೂ ತಲುಪಿಸುವ ಕಾರ್ಯ ಮಾಡಬೇಕು. ಶಿಕ್ಷಕರು ಸ್ವ ಇಚ್ಛೆಯಿಂದ ಇಂತಿಷ್ಟು ಪುಸ್ತಕಗಳನ್ನು ಕೊಂಡು ಶಾಲಾ ಗ್ರಂಥಾಲಯದಲ್ಲಿ ಶೇಖರಿಸಿಟ್ಟರೆ ಮಕ್ಕಳಿಗೆ ಖುಷಿಯಾಗುತ್ತದೆ. ಮತ್ತು ಅವರ ಓದುವ ಹವ್ಯಾಸದ ಜೊತೆಗೆ, ಸಾಹಿತ್ಯದಲ್ಲೂ ಆಸಕ್ತಿ ಬೆಳೆಯುತ್ತದೆ. ಈ “ಮಕ್ಕಳೇನು ಸಣ್ಣವರಲ್ಲ” ಕಥಾ ಸಂಕಲನ ನಾಡಿನಾದ್ಯಂತ ಪಸರಿಸಲಿ, ಅನೇಕ ಪ್ರಶಸ್ತಿಗಳು ಕೃತಿಗೆ, ಕೃತಿಕಾರರಿಗೆ ಲಭಿಸಲಿ ಎಂಬ ಆಶಯದೊಂದಿಗೆ ನನ್ನ ಅವಲೋಕನಕ್ಕೆ ವಿರಾಮ ನೀಡುತ್ತೇನೆ.

‍ಲೇಖಕರು Admin

September 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: