ಪತ್ರಕರ್ತ ರವಿ ಪಾಂಡವಪುರ ಅವರ ಹೊಸ ಕೃತಿ- ದೇವರನಾಡಿನ ಗುಡ್ಡದ ಭೂತ
ಕೇರಳದ ವೈನಾಡಿನ ಮುಂಡಕೈ, ಚೂರ್ಲಮಲದಲ್ಲಿ ಆದ ಗುಡ್ಡ ಕುಸಿತದ ದುರಂತವನ್ನು ಕಣ್ಣಾರೆ ಕಂಡು ಕಟ್ಟಿಕೊಟ್ಟ ಕೃತಿ ಇದು.
ರವಿ ಪಾಂಡವಪುರ ಅವರು ಈ ಹಿಂದೆಯೂ ತಾವು ಕಂಡ ವರದಿ ಮಾಡಿದ ದುರಂತಗಳನ್ನು ಹೀಗೆ ಪುಸ್ತಕವಾಗಿ ದಾಖಲಿಸುತ್ತಲೇ ಬಂದಿದ್ದಾರೆ.
‘ರೈಟ್.. ರೈಟ್..’ ಹಾಗೂ ‘ಅಯ್ಯೋ ದ್ಯಾವ್ರೆ’ ಕೃತಿಗಳು ಮಾಧ್ಯಮ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರ ಕೈನಲ್ಲಿ ಇರಬೇಕು
ಈಗ ಹೊಸ ಕೃತಿಗೆ ಅವರು ಬರೆದಿರುವ ಮಾತುಗಳು ಇಲ್ಲಿವೆ-
-ಬದುಕುಳಿದವರು ಬದುಕಲಿಕ್ಕಾಗಿ ಆಕ್ರಂದನ,
ಅವಶೇಷಗಳ ಅಡಿಯಲ್ಲಿ ಸಿಕ್ಕ ಶವಗಳ ರಾಶಿಕಂಡು ದುಃಖ- ದುಮ್ಮಾನ,
ಸಾಲು- ಸಾಲು ಹೆಣಗಳ ರಾಶಿಯ ನಡುವೆ ಚೀರಾಟ
ಕೆಂಬಣ್ಣದ ನೀರಿನಲ್ಲಿ ಸಿಕ್ಕವರ ನರಳಾಟ,
ಸತ್ತವರಿಗಾಗಿ ಬದುಕಿರುವವರ ಹುಟುಕಾಟ,
ಕೆಸರಿನಡಿಯಲ್ಲಿ ಹುದುಗಿ ಜೀವ ಉಳಿಸಿಕೊಳ್ಳಲು ಹಪಹಪಿಸುತ್ತಿದ್ದವರ ಕಿರುಚಾಟ,
ಕಲ್ಲು ಬಂಡೆಗಳ ಅಡಿಯಲ್ಲಿ ಸತ್ತವರ ಮೂಕರೋಧನ,
ಸಾಲುಗಟ್ಟಿ ಬರುತ್ತಿದ್ದ ಆಂಬುಲೆನ್ಸ್ ಗಳ ಕಿಟಕಿ ಇಣುಕಿ ನೋಡುತ್ತಾ ತಮ್ಮವರ ಕಳೆಬರಹಕ್ಕಾಗಿ ಶೋಧನ
ದೇವರ ನಾಡು ಕೇರಳದ ವೈನಾಡಿನ ಮುಂಡಕೈ, ಚೂರ್ಲಮಲದಲ್ಲಿ ಪ್ರಕೃತಿ ಮಾತೆ ಉಸಿರಾಡುತ್ತಿದ್ದ ಕುಸಿದ ಗುಡ್ಡದ ನಡುವೆ ಕೇಳಿ ಬರುತ್ತಿದ್ದದ್ದು ಬರೀ ಅಳು, ಆತಂಕ, ಆಕ್ರಂದನ, ಕಣ್ಣೀರು ಬಿಟ್ಟರೆ ಬೇರೇನೂ ಅಲ್ಲ.
ನಿಸರ್ಗದ ಸಿರಿಯನ್ನ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು ಪ್ರವಾಸಿಗರ ಸ್ವರ್ಗವಾಗಿದ್ದ ಊರಲ್ಲಿ ಶವಗಳು, ಆಂಬುಲೆನ್ಸ್ ಗಳು, ಬೇಸರ, ದುಃಖ, ದುಗುಡ, ದುಮ್ಮಾನ, ಸತ್ತವರು, ಬದುಕಿರುವವರು ಬಿಟ್ರೆ ಬೇರೇನೂ ಇರಲಿಲ್ಲ.
ಗುಡ್ಡದಭೂತ ಒಮ್ಮೆಲೆ ಧುತ್ತನೇ ಇಡೀ ಊರಿಗೆ ಊರನ್ನೇ ನೆಲಸಮ ಮಾಡಿಬಿಟ್ಟಿತ್ತು. ಜಲಕಂಟಕದ ರೂಪದಲ್ಲಿ ಆ ಊರಿನ ಜನರನ್ನ ನೀರು ನುಂಗಿತ್ತು.
ಇಡೀ ನಾಡು ಕಂಡು ಕೇಳರಿಯದ ಕರಾಳ ಇತಿಹಾಸಕ್ಕೆ ಸಾಕ್ಷಿಯಾದ, ಐತಿಹ್ಯ ಪುಟದಲ್ಲಿ ಕೆಟ್ಟ ದಿನಗಳಾಗಿ ಉಳಿದ ಕೇರಳದ ದುರಂತ ಕಥೆಗೆ ನಾನು ಸಾಕ್ಷಿಯಾಗಿದ್ದೆ ಅನ್ನುವುದು ನನ್ನ ದೊಡ್ಡ ದುರಂತ ಅನಿಸಿದರೂ, ಸತ್ತ ಶವಗಳ ನಡುವೆ , ನಿರಾಶ್ರಿತರಾಗಿ ಬದುಕುತ್ತಿದ್ದ ಜೀವಗಳ ಮಧ್ಯೆ ನಾನು ಕೂಡ ಮಹಾ ದುರ್ಘಟನಾ ಸ್ಥಳದಲ್ಲಿ ಅನಾಥನಾಗಿ ಕಳೆದ ವಯನಾಡಿದ ದುರಂತ ಕಥೆಯನ್ನ ಬಿಚ್ಚಿಡುವ ಉದ್ದೇಶ ನನ್ನದಾಗಿತ್ತು. ಆ ಕಾರಣಕ್ಕೆ ಈ ದೇವರನಾಡಿನ ಗುಡ್ಡದ ಭೂತ ಪುಸ್ತಕ ಬರೆಯುತ್ತಿದ್ದೇನೆ.
0 ಪ್ರತಿಕ್ರಿಯೆಗಳು