ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಗುನಗುತಾ ಕರೆದಿದೆ ನಗುವನಹಳ್ಳಿ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

5

ನಾನೊಮ್ಮೆ ಹಾಸನಕ್ಕೆ ಗಾಂಧಿ ಮತ್ತು ಮಹಿಳೆಗೆ ಬಗ್ಗೆ ಮಾತಾಡಲು ಎ.ವಿ.ಕೆ ಕಾಲೇಜಿಗೆ ಹೋಗಬೇಕಿತ್ತು. ಅದೂ ಒಂದು ಕಾಲವಿತ್ತು, ಗಾಂಧಿ ಬಗ್ಗೆ ಮಾತಾಡಿ ಎಂದರೆ ಸಾಕು ಎಲ್ಲೆಂದರಲ್ಲಿಗೆ ಓಡಿ ಅಲ್ಲಲ್ಲ, ಹೋಗಿಬಿಡುತ್ತಿದ್ದೆ. ಆದರೆ ಹಕ್ಕಿ ಸಾವಾಸ ಮಾಡಿದ ಮೇಲೆ ಹೋಗುವಾಗ ಸ್ವಾಮಿಕಾರ್ಯ, ಸ್ವಕಾರ್ಯ ಎರಡನ್ನು ಮಾಡಿಕೊಳ್ಳಲು ಹವಣಿಸುತ್ತಿದ್ದೆ. ಸೀದಾ ಹೋಗುವ ದಾರಿ ಇದ್ದರೂ ಸಾಧ್ಯವಾದಷ್ಟೂ ಹಳ್ಳಿ ದಾರಿಯಲ್ಲಿ ಲಾಲಲಾ ಹೋಗುವಳೀ ಲೀಲಾಲಾ ಎಂದುಕೊಂಡು ಹಳ್ಳಿ ರೂಟ್ ಹಿಡಿಯುತ್ತಿದ್ದೆ. ಹೀಗೆ ಹಾಸನಕ್ಕೆ ಮಂಡ್ಯದ ಹಳ್ಳಿಗಳ ದಾರಿಯಲ್ಲಿ ಹೋಗುತ್ತಿದ್ದಾಗ ಮತ್ತೆ ಮತ್ತೆ ಹಾರಿ ಅದದೇ ಜಾಗಕ್ಕೆ ಬರುತ್ತಿದ್ದ ಹಸಿರು ಹಕ್ಕಿಯನ್ನು ಕಣ್ಣಗಲಿಸಿ ನೋಡಿದೆ. ಇದು ಗಿಳಿ ಇರಬಹುದೇನೊ ಅಂದುಕೊಂಡೆ, ನಾನು ಆ ಮೊದಲು ನೋಡಿದ ಗಿಳಿ ತರಹಕ್ಕೆ ಇದು ಇಲ್ಲವಲ್ಲ ಅನ್ನಿಸಿದರೂ. ಕೇಳೋದಾದರೂ ಯಾರನ್ನು? ಆಗ ಪುಸ್ತಕ, ರೆಫರೆನ್ಸ್ ಇವೆಲ್ಲಾ ಇನ್ನೂ ತಲೆಗೆ ಇಳಿದಿರಲಿಲ್ಲ. ಇದು ಒಂತರಹಕ್ಕೆ ಗಿಳಿ ಅಂತಾ ಮನಸಿಗಿಟ್ಟುಕೊಂಡೆ, ಸುಮ್ಮನಾದೆ. 

ಮಂಡ್ಯದಲ್ಲೇ ಮೊದಲಿಗೆ ವಾಕಿಂಗ್ ನೆಪ ಹಾಕಿ ಕ್ಯಾಮೆರಾ ಮರೆಯಲ್ಲಿ, ಸ್ವೆಟರಿನ ಜೋಬಿನಲ್ಲಿ ಹಾಕಿಕೊಂಡು ಒಯ್ಯುತ್ತಿದ್ದೆನಲ್ಲ ಆಗ ಪಿ.ಇ.ಎಸ್ ಕಾಲೇಜಿನ ಆವರಣದಲ್ಲಿ ಈ ನಮೂನೆಯ ಹಕ್ಕಿಯನ್ನು ಮೊದಲ ಬಾರಿಗೆ ನೋಡಿದ್ದೆ, ಹೆಸರು ಕುಲ ಗೊತ್ತಿರಲಿಲ್ಲ. ಆದರೆ ಹಕ್ಕಿಗಳು ನನ್ನನ್ನು ಸುಮ್ಮನೆ ಇರಿಸಬೇಕಲ್ಲ? ಕಷ್ಟಪಟ್ಟು ಹುಡುಕಿ ಅದರ ಹೆಸರು ಕಳ್ಳಿಪೀರ ಎಂದು ಪತ್ತೆ ಹಚ್ಚಿ ಭೇಷ್ ಎಂದು ಬೆನ್ನು ತಟ್ಟಿಕೊಂಡೆ. ಅವುಗಳಲ್ಲಿ ನಾನಾ ವಿಧದ ಬೀ ಈಟರುಗಳೂ ಇವೆ ಎನ್ನುವುದೂ ಗೊತ್ತಾಯಿತು. ಬೀ ಈಟರ್ ಹೆಸರಿಗೂ ಕಳ್ಳಿಪೀರ ಕನ್ನಡೀಕರಣಕ್ಕೂ ಏನ್ ಸಂಬಂಧ ಅಂತಾ ಭಾಷಾಶಾಸ್ತ್ರದ ದೃಷ್ಟಿಯಿಂದ ಲೆಕ್ಕ ಹಾಕಿದರೂ ಪಕ್ಕಾ ಉತ್ತರ ಸಿಗಲೇ ಇಲ್ಲ, ಬಿಟ್ಟು ಹಾಕಿದೆ.

ಬಂಡೀಪುರದಲ್ಲಿ ಸಫಾರಿಗೆ ಹೋಗಿದ್ದಾಗ ಮರವೊಂದರ ಕವಲಿನ ಮೇಲೆ ಕೂತಿದ್ದ ಗ್ರೀನ್ ಬೀ ಈಟರ್ ಒಳ್ಳೆಯ ಭಂಗಿಯಲ್ಲಿ ಚಿತ್ರವಾಗಿತ್ತು. ಸಫಾರಿ ಡ್ರೈವರ್ ಕಷ್ಟಪಟ್ಟು ಒಂದೆರಡು ನಿಮಿಷ ನಿಲ್ಲಿಸಿದ್ದ ಎನ್ನುವುದೇ ಮಹಾಶ್ಚರ್ಯದ ಸಂಗತಿ. ಆದರೆ ಬಂಡೀಪುರದವರೆಗೂ ಬಂದು ಸಫಾರಿ ಸವಾರಿಗೆ ಕಾಸು ತೆತ್ತು ಕಳ್ಳಿಪೀರ ಹಿಡಿಯಬೇಕಾ, ಇಲ್ಲ ತಾನೆ. ನನ್ನ ಹಕ್ಕಿಯ ಹುಡುಕಾಟ ಅರಿತ ಪರಿಚಿತರೊಬ್ಬರು ನಿಮ್ಮ ಮಂಡ್ಯದ ನಗುವನಹಳ್ಳಿ ಕಾವೇರಿ ನದಿಯ ತೀರದಲ್ಲಿ ಈ ಕಳ್ಳಿಪೀರ ಸಿಗುತ್ತವೆ. ಅಲ್ಲಿಯೇ ತಮ್ಮ ಸಂಸಾರ ಶುರುಮಾಡಿ ನದಿ ತೀರದ ಮರಳಿನಲ್ಲಿ ಕೊರೆಕೊರೆದು ಗೂಡು ಮಾಡಿ, ಮರಿಗಳನ್ನು ಬೆಳೆಸಿಕೊಂಡು ಹಾರಿಹೋಗುತ್ತವೆಂದು ಹೇಳಿ ಆಸೆ ಹುಟ್ಟಿಸಿದ್ದರು.

ಆಸೆ ಹುಟ್ಟಿಸಿದ ಮೇಲೆ ನಗುವನಹಳ್ಳಿಗೆ ಹೋಗಲೇಬೇಕು ತಾನೆ. ನಗುವನಹಳ್ಳಿಗೆ ಹೋಗೋದು ನನಗೆ ದೊಡ್ಡ ಸಮಸ್ಯೆಯೇನೂ ಆಗಿರಲಿಲ್ಲ. ಅದೇ ಊರಿನ ಬಳಿಯಲ್ಲಿ ಮಹಾರಾಜ ತಾಂತ್ರಿಕ ಸಂಸ್ಥೆ ಕಟ್ಟಿ ಅಲ್ಲೇ ಪ್ರಿನ್ಸಿಪಾಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನನ್ನ ತಮ್ಮ ಡಾ. ನರೇಶ್ ಕುಮಾರ್ ಪ್ರತಿದಿನ ಮಂಡ್ಯದಿಂದ ಕಾರಿನಲ್ಲಿ ಹೋಗಿ ಬರುತ್ತಿದ್ದ. ಹಾಗಾಗಿ ಬೆಳಿಗ್ಗೆ ಅವನ ಜೊತೆಗೆಯೆ ಹೋದರೆ ಬೇಕಾದಷ್ಟು ಹೊತ್ತು ಹಕ್ಕಿ ಫೋಟೋಗ್ರಫಿ ಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಬಿಡಿಸಿಕೊಂಡರೆ ಸಾಕು ಅಥವಾ ಸಂಜೆಯವರೆಗೂ ಇದ್ದು ಅವನ ಜೊತೆಗೆ ಮಂಡ್ಯಕ್ಕೆ ಮರಳಬಹುದು ಎಂದು ಆಲೋಚಿಸಿ ತಮ್ಮನನ್ನು ಬರಬಹುದಾ ಎಂದು ಕೇಳಿದೆ. ಬನ್ನಿ ಅದಕ್ಕೇನಂತೆ ರೈಟ್ ಎಂದ. ಮತ್ತಿನ್ನೇನು ನನ್ನ ಸವಾರಿ ನಗುವನಹಳ್ಳಿಯತ್ತ ಚಿತ್ತೈಸುವುದಷ್ಟೆ ನನ್ನ ಮುಂದಿನ ಕೆಲಸ.

ನಗುವನಹಳ್ಳಿಗೆ ನಗುನಗುತ್ತಾ ಹೋಗಲು ಸಿದ್ಧಳಾದೆ, ಎರಡು ಕ್ಯಾಮೆರಾ ಎರಡು ಲೆನ್ಸ್ ಎಲ್ಲ ರೆಡಿ ಆದವು. ವಾಸ್ತವ ಸಂಗತಿ ಏನೆಂದರೆ ನಗವನಹಳ್ಳಿಯ ಯಾವ ನೆಲೆಯಲ್ಲಿ ಬೀ ಈಟರ್‌ಗಳಿರುತ್ತವೆ ಎಂಬುದರ ಕಿಂಚಿತ್ ಅರಿವೂ ನನಗಿರಲಿಲ್ಲ. ಆ ನೆಲೆಗೆ ಹೇಗೆ ಹೋಗಬೇಕು ಎನ್ನುವುದಂತೂ ಮೊದಲೇ ಗೊತ್ತಿರಲಿಲ್ಲ. ಆದರೆ ತಮ್ಮನ ರಥದ ಸಾರಥಿ ಶಂಕರ ಭಾರಿ ಚುರುಕು. ನನಗೆ ಅಗತ್ಯವಾದ ಮಾಹಿತಿಗಳನ್ನು ಕಲೆ ಹಾಕಿದ. ಒಂದು ದಿನ ತಮ್ಮನ ಜೊತೆ ಹೊರಟೆ, ಅವನನ್ನು ಕಾಲೇಜಿನಲ್ಲಿ ಇಳಿಸಿ ಅಲ್ಲೇ ಕ್ಯಾಂಟೀನಿನಲ್ಲಿ ಅವನು ಕೊಡಿಸಿದ ತಿಂಡಿ ತಿಂದು ನನ್ನ ಹಕ್ಕಿಯ ದಾರಿ ಹಿಡಿದಾಗ ಗಡಿಯಾರದ ಮುಳ್ಳು ಒಂಬತ್ತನ್ನು ದಾಟಿತ್ತು. ಗದ್ದೆ ಹೊಲಗಳ ಕಿರುದಾರಿಯಲ್ಲಿ ಕಾರನ್ನು ಓಲಾಡಿಸುತ್ತಾ ಕಾವೇರಿ ನದಿಯಂಚಿಗೆ ನನ್ನನ್ನು ನನ್ನಾಯುಧಗಳ ಸಮೇತ ಕರೆತಂದ ಸಾರಥಿ. ಬೇಜಾನು ಕಳ್ಳಿಪೀರಗಳು ಹಾರಾಡುತ್ತಿದ್ದುದು ದೂರದಿಂದಲೇ ಕಾಣಿಸುತ್ತಿತ್ತು. ಆದರೆ ಎಲ್ಲಿಗೆ ಹೋಗುತ್ತವೆ ಎನ್ನುವುದು ಕಾಣಿಸುತ್ತಿರಲಿಲ್ಲ. ಸುತ್ತೆಲ್ಲಾ ಪೊದೆಗಳಿದ್ದವು. ಬಾಣದ ಬಿರುಸಿನಲ್ಲಿ ಬಂದಿಳಿದು ಮರಳಿನ ರಾಶಿಯ ನಡುವೆ ಮನೆಯನ್ನು ಕಟ್ಟಿದ ಈ ಹಕ್ಕಿಗಳನ್ನು ತೆಗೆಯಲು ಹೋದಾಗ ಬಿಸಿಲ ಬಿಸಿಯಲೆ ತಲೆಯೇರಿ ಕಾಯಿಸುತ್ತಿತ್ತು. ಎರಡೂ ಲೆನ್ಸ್ ಹಾಕಿ ಎರಡು ಕ್ಯಾಮೆರಾ ಹಿಡಿದು ಗಾಡಿಯಲ್ಲೇ ಕುಳಿತು ಚಿತ್ರ ತೆಗೆದೆ, ಕೆಲವೊಮ್ಮೆ ಮಾತ್ರ ಕೆಳಗಿಳಿದು ತೆಗೆದೆ, ತೆಗೆದೆ, ತೆಗೆದೆ ಸಾಕೆನ್ನಿಸುವವರೆಗೂ ತೆಗೆದೆ. ಹೇಗೆ ಬಂದಿವೆ ಎನ್ನುವುದರ ಪರಿವೆಯೂ ಇಲ್ಲದೆ ಕ್ಲಿಕ್ಕಿಸಿದೆ ಸಂಭ್ರಮದಿಂದ. ದೂರದಿಂದ ಕಂಡ ಈ ಹಕ್ಕಿಗಳನ್ನು ಮೊದಲ ಬಾರಿಗೆ ತೀರಾ ಹತ್ತಿರದಿಂದ ನೋಡುತ್ತಿದ್ದುದೇ ಈ ಸಂಭ್ರಮದ ಕಾರಣವಾಗಿತ್ತು.

ಸಂಜೆ ಮನೆಗೆ ಬಂದು ಸಿಸ್ಟಂಗೆ ಹಾಕಿ ನೋಡುತ್ತೇನೆ. ನೋಡಿದರೆ ಎಂಟ್ಹತ್ತು ಪಟ ಬಿಟ್ಟರೆ ಉಳಿದ ಎಲ್ಲವೂ ಭಯಂಕರವಾಗಿದ್ದವು. ಕಾರಣ harsh light. ಹಕ್ಕಿಗಳ ರೆಕ್ಕೆಯ ಬಣ್ಣ ಹೊಳಪು ಕಳೆದುಕೊಂಡು ಬೂದುಬಣ್ಣವಾಗಿತ್ತು. ನಾನೊಂದೆಣಿಸಿದರೆ ರವಿರಾಯ ಮತ್ತೊಂದೆಣಿಸಿದ್ದ. ಬಟಾಬಯಲಲ್ಲಿ ಇರುವ ಈ ಹಕ್ಕಿಗಳನ್ನು ಸೂರ್ಯ ಮಹಾರಾಜ ಉರಿದುರಿದು ಉರಿ ಕಾರುವ ಮೊದಲೇ ಬೆಳ್‌ಬೆಳಿಗ್ಗೆಯೇ ಹೋಗಿ ಚಿತ್ರ ತೆಗೆಯಬೇಕಿದೆ ಎನ್ನುವ ಮಹಾಸತ್ಯದ ಅರಿವು ಈ ಮಂದಮತಿಗೆ ಆಯ್ತು. ಮುಂದಿನ ಸಲದಿಂದ ತಮ್ಮನನ್ನು ಕಾಲೇಜಿಗೆ ಬಿಟ್ಟು ಸೀದಾ ಹಕ್ಕಿ ನೆಲೆಗೆ ಬರತೊಡಗಿದೆ. ಬೆಳಿಗ್ಗೆ ಬಿಸಿಲೇರಿ ನೆತ್ತಿ ಸುಡುವ ತನಕ ಛಾಯಾಗ್ರಹಿಸಿ, ಮಧ್ಯಾಹ್ನ ಇನ್ನೆಲ್ಲಾದರೂ ಅಂದರೆ ಶ್ರೀರಂಗಪಟ್ಟಣದ ಕಾಡಿನಲ್ಲಿ, ಮಹದೇವಪುರದ ನದಿಯ ಅಂಚಿನಲ್ಲಿ, ಕನ್ನಂಬಾಡಿಯ ಹಿನ್ನೀರು ಅಥವಾ ಪಾಂಡವಪುರದ ಬಳಿಯ ಕೆರೆತೊಣ್ಣೂರು, ಬನ್ನೂರು, ನಾಲೆಗಳ ಕಿರುದಾರಿ ಹೀಗೆ ನಾನಾ ಕಡೆ ಅಲೆದು ಮತ್ತೆ ಮೂರು ಮೂರೂವರೆಗೆ ನಗುವನಹಳ್ಳಿಗೆ ಮರಳಿ ಬಂದು ಇಳಿ ಸಂಜೆಯ ಹೊಂಬೆಳಕಿನಲ್ಲಿ ಇನ್ನಷ್ಟು ತೆಗೆಯುತ್ತಿದ್ದೆ. 

ಇದೇ ಸಂದರ್ಭದಲ್ಲಿ ನಡೆದ  ಘಟನೆಯೊಂದು ನೆನಪಿಗೆ ನುಗ್ಗಿ ನಗು ತರುತ್ತಿದೆ. ಶ್ರೀರಂಗಪಟ್ಟಣದ ಕಾಡಿನಲ್ಲೊಮ್ಮೆ ಕಾರಿನಲ್ಲಿ ಹೋಗುತ್ತಿದ್ದಾಗ ಅರಣ್ಯರಕ್ಷಕ ಕೈ ಅಡ್ಡಹಾಕಿ ಕಾರು ನಿಲ್ಲಿಸಿದ. ಯಾಕಪ್ಪ ಎಂದಾಗ “ಮೇಡಂ ಗನ್ ಹಿಡಿದು ಕಾಡಿನಲ್ಲಿ ಹೋಗಬಾರದು, ಇಲ್ಲೆಲ್ಲಾ ನೀವು ಶೂಟ್ ಮಾಡೋ ಹಾಗಿಲ್ಲ” ಎಂದ. ಒಂದು ಕ್ಷಣ ಬೆಚ್ಚಿಬಿದ್ದೆ. ಪೆನ್ ಹಿಡಿದ ಕೈ ನನ್ನದಾಗಿತ್ತೆ ಹೊರತು ತಮಾಷೆಗೂ ಗನ್ ಹಿಡಿದ ಕೈ ಆಗಿರಲಿಲ್ಲ. ಆದದ್ದು ಇಷ್ಟೆ, ಕಾರಿನಿಂದಾಚೆಗೆ ನನ್ನ ಕ್ಯಾಮೆರಾ ಲೆನ್ಸ್ ಕಾಣುತ್ತಿತ್ತಲ್ಲ, ಅದೇ ಆತನಿಗೆ ಗೊಂದಲು ಹುಟ್ಟಿಸಿತ್ತು. ಆತನ ಗೊಂದಲ ನಿವಾರಿಸಿ “ನಾನೇನೋ ಶೂಟ್ ಮಾಡ್ತಾ ಇದೀನಪ್ಪ, ಆದರೆ ಕ್ಯಾಮೆರಾ ಲೆನ್ಸುಗಳ ಮೂಲಕವೆ ವಿನಾ ಗನ್ನಿನಲ್ಲಲ್ಲ” ಎಂದು ನಗಿಸಿ ಮುಂದೆ ಹೋಗಿದ್ದೆ.

ನಗುವನಹಳ್ಳಿಗೆ ಸೀಜ಼ನ್ನಿನಲ್ಲಿ ಬರುತ್ತಿದ್ದವುಗಳಲ್ಲಿ ಬಹುಪಾಲು ನೀಲಿಬಾಲದ ಕಳ್ಳಿಪೀರಗಳೆ ಹೆಚ್ಚು, ಆಗಾಗ ಗ್ರೀನ್ ಬೀ ಈಟರ್ ಸಿಗುತ್ತಿದ್ದವು. ನದಿಯ ತೀರ ತೀರಾ ಪ್ರಶಾಂತವಾಗಿದ್ದುದು ಕಡಿಮೆ. ಊರೂರಿನ ದೋಬಿಗಳು ಆಟೊ ಟೆಂಪೊಗಳಲ್ಲಿ ಪರಿವಾರಸಮೇತ ಬಂದು ರಾಶಿ ಬಟ್ಟೆಯನ್ನು ತಂದು ಒಗೆದು ಸುತ್ತಲೂ ಒಣಹಾಕುತ್ತಿದ್ದರು. ಒಗೆಯುವ ಶಬ್ದ, ಒಗೆಯುವವರ ಬಿಡುವಿರದ ಮಾತು ಮಾತು ಮಾತು. ಬೇಸಿಗೆಯಲ್ಲಿರಲಿ, ಬೇರೆ ರಜಾ ದಿನಗಳಲ್ಲಿರಲಿ ನೀರಿಗೆ ಬಿದ್ದು ಈಜು ಮೋಜು ಮಾಡುವ ನರಮಾನವರ ಹಿಂಡುಗಳು, ಅವರ ಕೂಗು ಕೇಕೆಗಳು. ನದಿಯ ದಂಡೆಯಲ್ಲಿ ದನಕುರಿ ಅಡ್ಡಾಡಿಸಿ ಮೇಯಿಸಿಕೊಂಡು ಹೋಗಲು ಬಂದವರು. ನಿಶ್ಶಬ್ದದ ನಡುವೆ ಹಕ್ಕಿಗಾನ ಎದೆಯ ನಿರ್ವಾತವನ್ನು ತುಂಬುವ ಬದಲು ಶಬ್ದದಲೆಗಳೆ ಕಿವಿಗಪ್ಪಳಿಸಿ ಹೊಡೆಯುತ್ತಿರುತ್ತವೆ. ಹಕ್ಕಿ ಮತ್ತು ಮೌನ ಒಟ್ಟಿಗೆ ಇರಬೇಕಾದವೆಂದು ನನಗೆ ಮನದಟ್ಟಾಗಿತ್ತು. ಮೌನದ ಧ್ಯಾನದಲ್ಲಿ ತಾನೇ ಸಾಕ್ಷಾತ್ಕಾರ. ಸಂತೆಯ ಗದ್ದಲವಲ್ಲ, ನಿಶ್ಶಬ್ದದಲ್ಲಿ ತಲ್ಲೀನರಾದರೆ ಮಾತ್ರ ಹಕ್ಕಿದೇವರು ಪ್ರತ್ಯಕ್ಷ. ಪದೇಪದೇ ಮೊರೆಯುವ ಮೊಬೈಲಿಗೂ ತಾತ್ಕಾಲಿಕ ವಿರಾಮವಿತ್ತು ಹಕ್ಕಿಗೆ ಪೂರ್ಣ ಸಮಯ ಮೀಸಲಾಗಿರಿಸಿದೆ.

ಈ ಕಳ್ಳಿಪೀರಗಳು ಪ್ರೀತಿ ನಿವೇದನೆಗೆ ಹೊತ್ತು ತರುತ್ತಿದ್ದ ವೈವಿಧ್ಯಮಯ ಕೀಟದ ಉಡಗೊರೆಗಳು, ಅದನ್ನು ಸ್ವೀಕರಿಸುವಲ್ಲಿ ಹೆಣ್ಣಿನ ಬಿಂಕ-ಬಿಗುಮಾನ, ಗಂಡಿನ ಕರುಣೆ ಹುಟ್ಟಿಸುವ ಕೋರಿಕೆ, ತಾನು ಮನಕೊಟ್ಟ ಹೆಣ್ಣಿನ ಬಳಿ ಮತ್ತೊಂದು ಬಂದರೆ ಗುರ‍್ರೆನ್ನುವ ಈ ಗಂಡು. ಹೆಣ್ಣಿನ ಬಾಯಿಗೆ ಹೇಗಾದರೂ ತುತ್ತಿನ ಮುತ್ತಿಡುವ ಆತುರ, ಅದು ಪಡೆಯಲು ಒಪ್ಪದಿದ್ದರೆ ನಿರಾಶೆಯಿಂದ ವಿಧಿಯಿಲ್ಲದೆ ತಾನೇ ತಿಂದು ಹಾರಿ ಹೋಗುತ್ತಿತ್ತು. ಈ ನಡುವೆಯೇ ಮಿಲನದ ಪ್ರಯತ್ನ ಯಶಸ್ವಿ ಅಯಶಸ್ವಿ. ಒಂದೇ ಎರಡೇ ಹಲವು ಬಗೆಯ ಹಕ್ಕಿನೋಟಗಳ ನೆಲೆ ನಗುವನಹಳ್ಳಿಯ ತೀರ. ನೂರಾರು ಭಾವಭಂಗಿಗಳಲ್ಲಿ ಕಳ್ಳಿಪೀರನನ್ನು ಸೆರೆಹಿಡಿಯಲು ಅವಕಾಶ ಸಿಗುತ್ತಿತ್ತು. ಗೂಡಿನೊಳಗೆ ತತ್ತಿಯಿಟ್ಟು ಮರಿ ಆದ ಬಳಿಕ ಅಪ್ಪ ಅಮ್ಮ ಇಬ್ಬರ ಉಣಿಸುವಾತುರ, ನಾಲ್ಕೆಂಟು ದಿನ ಕಳೆದ ಬಳಿಕ ಮರಿ ಮೆಲ್ಲಮೆಲ್ಲನೆ ಗೂಡಿನ ಬಾಯಿಯ ಬಳಿ ಬಂದು ಕಾಯುವುದು, ಇತ್ತ ಉಣಿಸನ್ನು ಆತುರದಿಂದ ತಿಂದು ಮುಗಿಸಿ ಬಾಯ್ಬಾಯಿ ಬಿಡುವುದು. ಮತ್ತೆ ಅವುಗಳಿಗೆ ಆಹಾರ ತರಲು ಹಾರುವುದು. ಸುತ್ತಲಿನ ತರಹೇವಾರಿ ಚಿಟ್ಟೆ, ಕೀಟಗಳೆಲ್ಲ ಕಳ್ಳಿಪೀರಗಳ ಬಾಯಲ್ಲಿಯೇ ಶಿವಸಾಯುಜ್ಯ ಹೊಂದುತ್ತಿದ್ದವು. ನಡುನಡುವೆ ನೀರು ಬೇಕೆನಿಸಿದರೆ ಪಕ್ಕದ ನದಿಯಲ್ಲೊಂದು ಮಿಂಚಿನ ಡೈವ್ ಹೊಡೆದು ಮೇಲೇರುತ್ತಿದ್ದವು.

ಮರಿಗಳಿಗೆ ಉಣಿಸೀಯಲು ಬಹಳ ಮುತುವರ್ಜಿ ವಹಿಸಿ ಕಣ್ಣು ತಪ್ಪಿಸಿ ಕಳ್ಳಿಪೀರಗಳು ಬಂದು ಹೋಗುತ್ತಿದ್ದವು. ಆದರೆ ಮೇಲಿನಿಂದ ಹದ್ದು ಗಿಡುಗಗಳು ರವ್ವನೆ ಹಾರಿ ಬಂದು ಹಕ್ಕಿಯನ್ನು ಹಕ್ಕಿ ಮರಿಗಳನ್ನು ಹೆಕ್ಕಿ ಹಾರಿಸಿಕೊಂಡು ಹೋಗುತ್ತಿದ್ದವು, ಮತ್ತೆ ಕಾಗೆಗಳೂ ನಾವು ಯಾರಿಗೇನು ಕಡಿಮೆಯಲ್ಲ ಎಂದು ಕಾಕಕಣ್ಣು ಹಾಕುತ್ತಿದ್ದವು. ನಾಯಿಗಳ ಮುಕ್ತ ಓಡಾಟ, ಮೇಯಿಸುವವರ ಅಡ್ಡಾಟಗಳೂ ಇದ್ದವು. ಹೇಗಾದರೂ ನಾವು ಚಿತ್ರ ತೆಗೆಯಲೇಬೇಕೆಂಬ ನಮ್ಮಂತಹ ಉತ್ಸಾಹಿ ಹಕ್ಕಿಪ್ರಿಯ ಗುಂಪಿನವರ ಅತ್ಯುತ್ಸಾಹ, ಅತ್ಯಾತುರ ಬೇರೆ. ಕಳ್ಳಿಪೀರಗಳು ಸಂತತಿ ಬೆಳೆಸುವ ಕಾರ್ಯಕ್ಕೆ ಈ ಎಲ್ಲದರಿಂದ ಅಡಚಣೆ ಆಗುತ್ತದೆಂದು ಹಲವು ಪಕ್ಷಿಪ್ರೇಮಿಗಳು ನಿರಂತರವಾಗಿ ಸರ್ಕಾರದ ಮೇಲೆ ಒತ್ತಾಯ ಹೇರತೊಡಗಿದರು. ಇದರ ಪರಿಣಾಮವಾಗಿ ಅರಣ್ಯ ಇಲಾಖೆಯ ತಂಡ ನಾನೊಮ್ಮೆ ಅಲ್ಲಿ ಇದ್ದಂತೆಯೇ ಪರಿಶೀಲನೆಗೆಂದು ಬಂದರು, ತೀರ್ಮಾನಿಸಿದರು. ಪರಿಣಾಮವಾಗಿ ನಂತರ ಇಡೀ ಆವರಣಕ್ಕೆ ಮುಳ್ಳುತಂತಿ ಬೇಲಿ ಬಿಗಿದರು, ಬಾಗಿಲು ಹಾಕಿ ಬೀಗ ಜಡಿದರು. ಒಬ್ಬ ಕಾವಲುಗಾರನನ್ನು ಇಟ್ಟರು. ಬಟ್ಟೆ ಒಗೆಯುತ್ತಿದ್ದವರಿಗೆ ಬಟ್ಟೆ ಒಣಗಿಸಲು ಉಚಿತವಾಗಿ ಬೇಲಿ ಸಿಕ್ಕಿತು. ಫೋಟೋ ತೆಗೆಯುವವರಿಗೆ ಬಟ್ಟೆ ಹಿನ್ನೆಲೆಯೂ ಇರುತ್ತಿತ್ತು.

ನದಿ ತೀರದ ಮರಳಿನ ರಾಶಿಯಿದ್ದ ಆವರಣದಲ್ಲಿ ಗೂಡು ಮಾಡಿಕೊಳ್ಳುತ್ತಿದ್ದ ಹಕ್ಕಿಗಳಿಗೆ ಪರ್ಚ್ ಹಾಕಿ ಅಥವಾ ಹಾಕಿಸಿಕೊಂಡು ತಮ್ಮ ಫೋಟೋಗ್ರಫಿ ಮಾಡುತ್ತಿದ್ದ ರಣೋತ್ಸಾಹಿಗಳಿಗೆ ದೊಡ್ಡ ಬ್ರೇಕ್ ಬಿದ್ದಿತು. ಬೇಲಿಯ ಅಂಚಿನಲ್ಲಿ ಪರ್ಚ್ ಹಾಕಿ ಕಾಯುತ್ತಾ, ತಂತಿಗಳ ಸಂಧಿಯಲ್ಲಿ ಕ್ಯಾಮೆರಾ ತೂರಿಸಿಕೊಂಡು ಪಟ ಹಿಡಿಯುವುದೊಂದೆ ಉಳಿದ ದಾರಿಯಾಗಿತ್ತು. ಆ ಬೇಲಿಗಳ ಅಂಚಿಗೆ ಹೋಗುವ ಹಾದಿಯೂ ದುಸ್ತರವೇ ಆಗಿತ್ತು. ಮೈಯೆಲ್ಲಾ ಕಣ್ಣಾಗಿಸಿಕೊಂಡು ಸರ್ಕಸ್ ಮಾಡಿಕೊಂಡು ನದಿಯ ದಡಕ್ಕೆ ಹೋಗಿ ಹರಿದಾಡಬಹುದಾಗಿದ್ದ ಹಾವುಗಳ ನಡುವೆ ಮೈಯೆಲ್ಲಾ ಕಣ್ಣಾಗಿಸಿಕೊಂಡು ಹಕ್ಕಿಯನ್ನು ಕ್ಲಿಕ್ಕಿಸುತ್ತಿದ್ದರು, ಕ್ಲಿಕ್ಕಿಸುತ್ತಿದ್ದಾರೆ.

ಈ ನಗುವನಹಳ್ಳಿ ತೀರದ ಮತ್ತೊಂದು ಪರಮಾಕರ್ಷಣೆ ಮಿಂಚುಳ್ಳಿಗಳು ಇಲ್ಲಿ ಸಂತತಿ ಬೆಳೆಸಲು ಬರುವುದು. ಅವಕ್ಕಾಗಿ ನದಿಯ ಆ ದಂಡೆಗೆ ನೀರಿನಲ್ಲಿ ದಾಟಿ ಹೋಗಬೇಕಿತ್ತು. ಮೊದಲೇ ನೆಟ್ಟಗಿಲ್ಲದ ಕಾಲುಗಳು, ನದಿಯ ಪಕ್ಕ ಹೋಗಲೇ ಬೆಚ್ಚುತ್ತಿದ್ದೆ, ಇನ್ನು ನೀರಿಗಿಳಿಯುವ ದುಸ್ಸಾಹಸ ಎಂದೂ ಮಾಡಲಿಲ್ಲ. ನನ್ನ ಕಾಲಿನ ಮಿತಿಯನ್ನು ಮರೆಯದೇ ಇದ್ದರೆ ಮಾತ್ರ ಮುಂದಿನ ಹಕ್ಕಿ ಪಯಣಗಳು ಎನ್ನುವ ಪರಮಸತ್ಯದ ಅರಿವು ನನಗಿತ್ತು. ಕಾಲು ಇದ್ದರೆ ಕಾಲ ನನ್ನದು. ಹಾಗಾಗಿ ಮಿಂಚುಳ್ಳಿಗಳನ್ನು ಅದರಲ್ಲೂ ಕಿರು ಮಿಂಚುಳ್ಳಿ, ಅದೇ ಮಲ್ಯನ ಕಿಂಗ್ ಫಿಶರ್ ಮಿಂಚುಳ್ಳಿಗಳನ್ನು ಸನಿಹದಿಂದ ಕಂಡು ಚಿತ್ರ ತೆಗೆಯುವ ಆಸೆ ಇದ್ದರೂ ನನ್ನ ಮಿತಿಯೂ ಗೊತ್ತಿತ್ತಲ್ಲ. ಈ ದಡಕ್ಕೆ ಬಂದಾಗ ಅವುಗಳನ್ನು ಹಿಡಿದೆನೇ ವಿನಾ ಆ ದಡದ ಕನಸನ್ನಂತೂ ಕಾಣಲಿಲ್ಲ, ಕಾಣುವಂತಿರಲಿಲ್ಲ. ಇರುವ ದಡದಲ್ಲಿ ಇರುವುದು ಮುಖ್ಯ ತಾನೆ! ಆ ದಡ ಎಲ್ಲೋ ಎಂತಿದೆಯೋ ಬಲ್ಲವರು ಯಾರು, ಹೋದವರಂತೂ ಬಂದು ಹೇಳಿಲ್ಲ!

ಇದೇ ಕಳ್ಳಿಪೀರಗಳ ಆವರಣದಲ್ಲಿ ತೇನೆಹಕ್ಕಿ ಯಾನೆ ಟಿಟ್ಟಿಭಗಳು ನೆಲದ ಮಟ್ಟದಲ್ಲೇ ಗೂಡು ಕಟ್ಟಿ ಅದರಲ್ಲಿ ಮೊಟ್ಟೆ ಇರಿಸಿ ಕಾವಿಗೆ ಕೂರುತ್ತವೆ. ಸುತ್ತಲೂ ಬೇಲಿ ಇರುವುದರಿಂದ ಸ್ವಲ್ಪ ಧೈರ್ಯವೂ ಅವುಗಳಿಗಿದೆ. ತೇನೆಹಕ್ಕಿಗಳ ಟ್ಟಿಟ್ಟಿಟ್ಟಿ ಎನ್ನುವ ಸೈರನ್ನಿನಂತಹ ಕೂಗುಗಳು ಬಹುದೂರಕ್ಕೂ ಎಚ್ಚರಿಕೆ ಕೊಡುವಂತಿರುತ್ತವೆ. ತೇನೆಯಾಗಲೀ ಯಾವುದೇ ಹಕ್ಕಿಯಾಗಲೀ ಮೊಟ್ಟೆ ಮರಿಗಳ ರಕ್ಷಣೆಯ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತವೆ. ಕಾಟ ಕೊಡಲು ಬಂದವು ಬಲಿಷ್ಠವಾಗಿದ್ದರೂ ಪ್ರತಿರೋಧ ದಾಖಲಿಸುತ್ತವೆ. ತೇನೆಯೊಮ್ಮೆ ಮೊಟ್ಟೆಗೆ ಕಾವು ಕೊಡಲು ಎಚ್ಚರಿಕೆಯ ನೋಟದಲ್ಲಿ ಬಂದು ಕುಳಿತಿರುತ್ತಿದ್ದ, ಹಸಿವಾದಾಗ ಹಾರಿ ಹೋಗುತ್ತಿದ್ದ ನೋಟವೂ ನನಗೆ ಕಾಣಸಿಕ್ಕಿತು. ತೇನೆ ಎಂದರೆ ಏನೋ ಮೋಹ. ಕುವೆಂಪು ಅವರ ತೇನೆ ಪ್ರೀತಿಯ ಕವಿತೆ ಮನದಲ್ಲಿ ಅಚ್ಚೊತ್ತಿ ನಿಂತಿದೆ.

ನಗುವನಹಳ್ಳಿಯ ನದಿಯ ತೀರ ಮುನಿಯ, ಗೀಜಗಗಳಿಗೂ ಪ್ರಶಸ್ತವಾದ ಸ್ಥಳ, ನದಿಯ ಸುತ್ತಣ ಗಿಡಮರಗಳಲ್ಲಿ ಗೂಡುಕಟ್ಟಿ ಸಂತಾನ ಬೆಳೆಸುತ್ತವೆ. ಈ ನದಿಯ ತೀರದಲ್ಲಿ, ನದಿಯಲ್ಲಿ ಹಲವಾರು ಇತರ ಹಕ್ಕಿಗಳೂ ಕೂಡಾ ಕಾಣಸಿಗುತ್ತವೆ. ನದಿರೀವ, ಮೀಸೆ ರೀವ, ಬಕ, ಶುಕ, ಪಿಕ, ಚಾತಕ ಮುಂತಾದವು. ಒಮ್ಮೆಯಂತೂ ನದಿ ದಾರಿಯಲ್ಲಿರುವ ಬೇಲಿಯೊಂದರ ಗರಿಗಳ ನಡುವೆ ಗೂಡು ಮಾಡಿದ್ದ ನೀಲಿ ಟಿಕೆಲ್ಸ್ ಫೋಟೊ ತೆಗೆಯಲು ಅಷ್ಟು ಕಷ್ಟವಾದರೂ ಕ್ಯಾಮೆರಾ ಪಕ್ಕಕ್ಕೆ ಸೇರಿಸಿ ಇಡೀ ದಿನ ಮರಿಗಳಿಗೆ ಉಣಿಸು ತಂದುಕೊಡುತ್ತಿದ್ದ ಖುಷಿಯನ್ನು ನೋಡಿ ನೋಡಿ ಕಣ್ತುಂಬಿಕೊಂಡಿದ್ದೆ. ಹಕ್ಕಿಗಳ ವಾತ್ಸಲ್ಯದ ಅನುಭೂತಿಗೆ ಮನವೇ ಶರಣಾಗಿತ್ತು. ಕಿರುದಾರಿಯ ಬದಿಯಲ್ಲಿ ಒಂದಿಡೀ ಹಗಲು ಠಿಕಾಣಿ ಹೂಡಿ ಹೋಗಿಬರುವವರ ಕಣ್ಣು ಬಾಯಿಗೆ ಆಹಾರವಾಗಿ ಹಕ್ಕಿ ಮರಿಗುಣಿಸುವುದನ್ನು ಸೆರೆ ಹಿಡಿದಿದ್ದೆ. 

ಈ ತಂತಿಬೇಲಿಯ ಪಕ್ಕದಲ್ಲೇ ಒಂದು ವಾಚ್‌ಟವರ್ ಬೇರೆ ನಿರ್ಮಿಸಿದ್ದಾರೆ. ಆದರೆ ವಾಚ್‌ಟವರ್ ಯಾಕೆಂದು ನನಗಿನ್ನೂ ತನಕ ಅರ್ಥವಾಗಿಲ್ಲ, ಕ್ಯಾಮೆರಾ ಹೊತ್ತುಕೊಂಡು ಟವರ್‌ಗೆ ಹತ್ತಿಯೂ ಇಲ್ಲ, ಹತ್ತಲಾಗುವುದೂ ಇಲ್ಲ. ಈಗ ವಾಚ್‌ಟವರ್ ಬಳಿ ಕುಳಿತು ಫೋಟೋ ತೆಗೆಯುವಂತಿಲ್ಲ, ಏನಿದ್ದರೂ ನದಿ ದಂಡೆಯಲ್ಲಿ ಮಾತ್ರ. ವಾಚ್‌ಟವರ್ ಇರುವುದು ವಾಚ್ ಮಾಡಲಾದರೂ ಅದನ್ನು ಬೇರೆ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ದೂರು ಬಂದ ಬಳಿಕ ಅದಕ್ಕೂ ಬೇಲಿ ಹಾಕಿ ಬೀಗ ಬಿಗಿದಿದ್ದಾರೆ. ತುಂಬು ಮಳೆಗಾಲದ ನದಿಯ ಪ್ರವಾಹದಲ್ಲಿ ಈ ತಂತಿಬೇಲಿ ಶ್ರೀರಂಗನಾಥನಂತೆ ಧರಾಶಾಯಿ ಆಗುತ್ತದೆ, ಎಷ್ಟಾದರೂ ಶ್ರೀರಂಗನ ಸಾನ್ನಿಧ್ಯದಲ್ಲಿ ಇರುವ ಊರೆಂದು. ಆ ಪ್ರವಾಹದ ನೀರು ಹೊತ್ತು ತಂದ ಕಸಕಡ್ಡಿಯನ್ನೆಲ್ಲಾ ಈ ತಂತಿಗಳಿಗೂ ಅಕ್ಕಪಕ್ಕದ ಪೊದೆ, ಗಿಡಮರಗಳಿಗೂ ಸಿಕ್ಕಿಸಿ ನೀವು ಮಾಡಿದ ಕರ್ಮ ನೀವೇ ನೋಡಿ, ಅನುಭವಿಸಿ, ಆನಂದಿಸಿ ಎಂದು ನಮ್ಮ ಕರ್ಮಕಾಂಡಕ್ಕೆ ಸಾಕ್ಷಿಯಾಗಿ ಉಳಿಸಿ ಸಾಗುತ್ತದೆ. ಬಿದ್ದ ಕಂಬಗಳನ್ನೆಲ್ಲಾ ಬ್ರೀಡಿಂಗ್ ಸೀಜ಼ನ್ನಿಗೆ ಎತ್ತಿ ನಿಲ್ಲಿಸಿ ಸರಿಪಡಿಸುವ ಕೆಲಸ ಆಗುತ್ತಲೇ ಇರುತ್ತದೆ. ಈಗೀಗಂತೂ ಮಳೆಗಾಲ ಇಂತಿಷ್ಟೇ ದಿನ ಎಂದೂ ಲೆಕ್ಕ ಹಾಕಿ ಹೇಳುವಂತಿಲ್ಲವಲ್ಲ. ಯಾವ್ಯಾವ ಕಾಲಗಳಿವೆ ಎಂದರೆ ಮಳೆಗಾಲ, ಮಳೆಗಾಲ, ಮಳೆಗಾಲ ಎನ್ನುವಂತೆ ಕೆಲವು ಸಲ ಮುಸಲಧಾರೆ ಧೋ ಎಂದು ಸುರಿಯುತ್ತಿರುತ್ತದೆ. ಮುಳ್ಳುತಂತಿ ಹಾಕಿ ಫೋಟೋಗ್ರಾಫರುಗಳ ಉತ್ಸಾಹಕ್ಕೆ ಭಂಗ ಮಾಡಿದ್ದವರು ಇದೀಗ ಮುಳ್ಳಿಲ್ಲದ ತಂತಿಹಾಕಿ ಮೈಕೈ ಚುಚ್ಚದಂತೆ ಮಾಡಿದ್ದಾರೆ. 

ನದಿಯ ತೀರಕ್ಕೆ ಹೋಗುವ ಹಕ್ಕಿಯ ಹಾದಿ ಇರುವುದು ಗದ್ದೆ ಹೊಲಗಳ ನಡುವೆ. ಅಲ್ಲಿಗೆ ಸಾಗುವ ಹಾದಿ ದಿನೇ ದಿನೆ ಕಿರಿದಾಗಿದೆ, ಕಿರಿದಾಗುತ್ತಿದೆ. ಇತ್ತೀಚೆಗೆ ಒಂದಿಷ್ಟು ಸುಮಾರಾದ ರಸ್ತೆಯನ್ನು ಮುಖ್ಯ ರಸ್ತೆಯಿಂದ ಅಭಿವೃದ್ಧಿ ಪಡಿಸಿ ಮುಖ್ಯ ದ್ವಾರದಲ್ಲಿ ಬೋರ್ಡ್ ಹಾಕಿದ್ದಾರೆ. ಕಳ್ಳಿಪೀರಗಳ ನೆಲೆಯ ಬಳಿಯೆ ಊರಾದ ಊರಿನ ಬಟ್ಟೆಗಳನ್ನೆಲ್ಲಾ ಒಗೆಯುತ್ತಿದ್ದವರಿಗೆ ಬೇರೊಂದು ಜಾಗದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಆ ಮಟ್ಟಿನ ತೊಂದರೆ ತಪ್ಪಿ ನಿರಾತಂಕವಾಗಿ ಪಟ ಹಿಡಿಯಲು ಸಾಧ್ಯವಾಗಿದೆ. ನದಿ ತೀರದಲ್ಲೇ ಇಂದಿಗೂ ಶವಸಂಸ್ಕಾವನ್ನೂ ಮಾಡುತ್ತಾರೆ. ನದಿ ದಡದಲ್ಲಿ ಸಂಸ್ಕಾರ ನಡೆಸುವುದೂ ಮುಕ್ತಿಗೆ ಸುಲಭವಾದ ಹಾದಿಯೆಂಬ ನಂಬಿಕೆ ಸಾವಿರಾರು ವರ್ಷಗಳಿಂದ ಇದೆ. ಕಾಶಿಯ ಗಂಗೆಯೂ ಲಕ್ಷಾಂತರ ಜೀವಗಳ ಕೊನೆಯ ಕ್ರಿಯೆಯನ್ನು ಕಂಡು ಹರಿಯುತ್ತಿರುವವಳೇ ಅಲ್ಲವೆ. ಇನ್ನು ಕಾವೇರಿ ಇದಕ್ಕೆ ಹೊರತಲ್ಲವಲ್ಲ. ಕಾವೇರಿಯ ಈ ದಡದಲ್ಲಿ ಸಂಸ್ಕಾರ ಮಾಡಲು ಬೇಕಾದ ಸೌಕರ್ಯ ಕಲ್ಪಿಸಿದ್ದರೂ ಜನಕ್ಕೆ ಆ ಜಾಗದಲ್ಲೇ ಮಾಡಬೇಕೆಂಬ ಒತ್ತಡವಿಲ್ಲ. ಹಾಗಾಗಿ ಸುತ್ತಮುತ್ತ ಸಂಸ್ಕಾರ ಮಾಡುತ್ತಿರುತ್ತಾರೆ. ಹನ್ನೊಂದನೇ ದಿನದ ಕಾರ್ಯ ಮಾಡಿ ವಡೆ, ಕಜ್ಜಾಯ ಇಟ್ಟು ಹೋದಾಗ ಕಾಗೆ, ಮೈನಾ, ಹದ್ದು ಇನ್ನಿತರ ಹಕ್ಕಿಗಳ ಆಗಮನವೂ ಆಗಿ ಓಹ್! ಆತ್ಮಪಕ್ಷಿ ಹಾರಿಹೋದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸ್ವರ್ಗಕ್ಕೆ ಸೇರಿಸಲು ಈ ಪಕ್ಷಿಗಳು ಬಂದಿವೆ ಎಂದು ಸಾಕ್ಷಿಗೆ ಬೇಕಾದರೆ ಪಟ ಹಿಡಿಯಬಹುದು.ಬ್ರೀಡಿಂಗ್ ನೆಲೆಯ ಬೇಲಿಯ ಆವರಣದೊಳಗೆ ಎತ್ತರೆತ್ತರ ಬೆಳೆದ ಹುಲ್ಲಿನಿಂದಾಗಿ ಕಳ್ಳಿಪೀರಗಳು ಸರಿಯಾಗಿ ಕಾಣಿಸುವುದಿಲ್ಲ. ಆಗಾಗ ಹಲ್ಲು, ಪೊದೆ ಸವರುವ ಕೆಲಸ ಮಾಡಿದರೂ ಒಂದೆರಡು ಮಳೆ ಬಿದ್ದ ತಕ್ಷಣ ಬೆಳೆಯದೆ ಇರುತ್ತದೆಯೇ? ಹೀಗಿದ್ದರೂ ಅಲ್ಲಿಗೆ ಹೋಗುವ ಆಸೆ ಮುಗಿಯದು. ಪ್ರತಿ ವರ್ಷವೂ ಒಂದೆರಡು ಸಲವಾದರೂ ಭೇಟಿ ಕೊಡದಿದ್ದರೆ ಆ ವರ್ಷದ ಹಕ್ಕಿಯಾತ್ರೆ ಸಂಪೂರ್ಣ ಆಗುವುದಿಲ್ಲ ಎಂದೇ ಎನಿಸುತ್ತಿರುತ್ತದೆ. ಆದ್ದರಿಂದ ವರ್ಷವರ್ಷವೂ ಅದೇ ಹಕ್ಕಿಗಳು ಮತ್ತೆ ಬನ್ನಿ ಬನ್ನಿ ಎಂದು ಕೈಬೀಸಿ ಅಲ್ಲಲ್ಲ ರೆಕ್ಕೆ ಬೀಸಿ ಕರೆಯುತ್ತವೆ. ನಾವೂ ಅಲ್ಲಿಗೆ ಊಟ ತಪ್ಪಿಸಿದರೂ ಭೇಟಿ ತಪ್ಪಿಸುವುದಿಲ್ಲ. ನಗುವನಹಳ್ಳಿ ನಗುನಗುತ್ತಾ ಕೈಬೀಸಿ ಕರೆದು ಕಳುಹಿಸಿಕೊಡುತ್ತದೆ. ಕೊಡುತ್ತಿರುತ್ತದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: