
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
18.5
ಸಂಜೆ ಮರಳಿದಾಗ ನನ್ನ ಲಗೇಜನ್ನು ಗಾಡಿಗೇರಿಸಿದ ಸಂದೀಪ ತನ್ನ Passerine retreatಗೆ ಕರೆತಂದ. ಅಷ್ಟು ಹೊತ್ತಿಗೆ ಅವನ ಗೆಸ್ಟ್ ರೂಂ ಖಾಲಿ ಮಾಡಿದ್ದರು. ಆ ಮುಸ್ಸಂಜೆಯಲ್ಲಿ ಹಕ್ಕಿ ಸಿಗುವ ಛಾನ್ಸೆ ಇರಲಿಲ್ಲ. ಬೆಳಿಗ್ಗೆ ನೋಡುವ ಎಂದು ಇರುಳನ್ನು ಸಾವಕಾಶವಾಗಿ ದಬ್ಬಿದೆ. ಆದರೆ ಬೆಳಿಗ್ಗೆ ಎದ್ದರೆ ಲಾವಾಕ್ಕೆ ಹೋಗೋಣ ಎಂದ. ಸರಿ ಆಯಿತಪ್ಪ ನಡೆ ಎಂದು ಹೊರಟರೆ ಕರೆತಂದದ್ದು ಲಾವಾದ ಮಾನೆಸ್ಟರಿ ಬಳಿಗೆ. ಮುಖ್ಯದ್ವಾರದ ಬಳಿ ಇಳಿದು ತುಸು ದೂರ ನಡೆದು ಒಳಬಂದೆವು. ಮಾನೆಸ್ಟ್ರಿಯಿಂದ ಸುತ್ತಣ ಪ್ರಾಕೃತಿಕ ಚೆಲುವಿನ ನೋಟ ಮನಂಬುಗುವಂತಿತ್ತು. ನೂರಾರು ಬೌದ್ಧ ಭಿಕ್ಷುಗಳ ಈ ನೆಲೆಯಲ್ಲಿ ಹಕ್ಕಿಗಳೂ ಸಿಗುತ್ತವೆ ಎಂದ ಸಂದೀಪ. ತುಸು ಕಾಲ ಕಾಯ್ದ ಬಳಿಕ ಮಬ್ಬು ಬೆಳಕಿನಲ್ಲಿ ಬಂದದ್ದು White tailed robin. ರಾಬಿನ್ ಕತ್ತಲೆಯಿಂದ ಹಾರಿ ಕತ್ತಲಿನಲ್ಲೇ ಕೂರುತ್ತಿತ್ತು. ಒಮ್ಮೆ ಮಾತ್ರ ಸ್ವಲ್ಪ ಬೆಳಕು ಬೀಳುವ ಜಾಗದಲ್ಲಿ ಕೂತಾಗ ಕಷ್ಟಪಟ್ಟು ಕ್ಲಿಕ್ಕಿಸಿದೆ. ಮಾನೆಸ್ಟ್ರಿಯತ್ತ ಕಣ್ಣು ಹಾಯಿಸಿದರೆ ಭಿಕ್ಷುವೊಬ್ಬ ಮೊಬೈಲ್ ಹಿಡಿದು ತಲೆಗೆ ಕೈಹೊತ್ತು ಕುಳಿತಿದ್ದ. ನಾನೂ ಕ್ಯಾಮೆರಾ ಹಿಡಿದು ಅದೇ ಚಿಂತಾಗ್ರಸ್ತ ಸ್ಥಿತಿಯಲ್ಲಿದ್ದೆ. ಎರಡು ಗಂಟೆ ಇಳಿಜಾರಿನಲ್ಲಿ ಅತ್ತಿತ್ತ ನಡೆಯುವ ಕಸರತ್ತಿನ ಕಷ್ಟ ಸಾಕಾಗಿ ಇಲ್ಲಿಂದ ಹೋಗುವ ಎಂದೆ. ಅವನಿಗೂ ಸಾಕಾಗಿತ್ತು. ಮತ್ತೆ ರಿಷ್ಯಪ್ಗೆ ಕರೆತಂದ.

ಪ್ಯಾಸರಿನ್ ರಿಟ್ರೀಟ್ ಪ್ಯಾಸೇಜ್ನಿಂದ ಕಾಣುತ್ತಿದ್ದ ಕಾಂಚನಗಂಗಾ, ಕೊಠಡಿ ಒಳಗಿನ ಬಿದಿರು ಅಲಂಕಾರ, ಫೋಟೋಗ್ರಫಿಗೆ ಪುಟ್ಟ ಬಾಲ್ಕನಿ. ವಾತಾವರಣವೆ ಮನಕ್ಕೆ ಮುದವಿತ್ತಿತು. ಹಕ್ಕಿ ಸಿಕ್ಕದಿದ್ದರೂ ಪರವಾಗಿಲ್ಲ, ಒಂದೆಡೆ ಕುಳಿತು ಕಣ್ಣಾಡಿಸುತ್ತಾ ರಿಲ್ಯಾಕ್ಸಿಸಲು ಸೊಗಸಾದ ನೆಲೆ. ಎದುರೆ ಇದ್ದ ಮೊಬೈಲ್ ಟವರ್. ಕೂತು ಬೋರಾದರೆ ಜಗದ ಸಂಪರ್ಕ ಸಿಗುತ್ತಿತ್ತು. ಸಂದೀಪನ ಮೇಲಿನ ಸಿಟ್ಟಿಳಿದಿತ್ತು. ಅವನಿಗೆ ಹೇಳಿದೆ `ಇನ್ನುಳಿದ ದಿನ ಇಲ್ಲಿಂದ ಹೊರಗೆ ಬರಲ್ಲ’. ಕಾಟ ತಪ್ಪಿದವನಂತೆ ಮಂದಹಾಸ ಬೀರಿದ.
ಬಾಲ್ಕನಿಯಲ್ಲಿ ಹತ್ಯಾರ ಇರಿಸಿಕೊಂಡೆ. ಬಾಲ್ಕನಿಯ ಅತ್ತ ಕಾಡು, ಇತ್ತ ಸಣ್ಣ ಹೊಲಗಳು, ಗಿಡಮರಗಳು, ಹಾದುಹೋಗುತ್ತಿದ್ದ ಮಂಜು ಮೋಡಗಳು. ಸ್ವರ್ಗವೇ ನೀನು ಇಲ್ಲಿಯೇ ಇದ್ದೀಯೆ ಎನ್ನಿಸುವ ಮೋಹಕ ವಾತಾವರಣ. ಹಕ್ಕಿ ಸಿಗಲಿ ಬಿಡಲಿ ಇಲ್ಲೇ ಕಾಯುತ್ತೇನೆಂದು ಎರಡೂ ದಿನ ಜಾಗ ಬಿಟ್ಟು ಅಲುಗಾಡಲಿಲ್ಲ. ತಿನ್ನಲು ಕಷ್ಟವಾಗಿದ್ದ ಊಟ ತಿಂಡಿ ಜಾಗಕ್ಕೆ ಸರಬರಾಜಾದವು. ಸಂದೀಪ ಏನೆಲ್ಲಾ ಸಾಮಗ್ರಿ ತಂದುಕೊಟ್ಟರೂ ಆ ಕುಕ್ ಸರಿಯಾಗಿ ಕುಕ್ಕಿಸದೆ ತಿನ್ನಲು ನಾನೂ ತಲೆ ಕುಕ್ಕಿಕೊಳ್ಳುವಂತಿತ್ತು. ಆದರೂ ಹೊಟ್ಟೆಪಾಡು ಕಳೆಯಬೇಕಲ್ಲ, ತಟ್ಟೆ ಖಾಲಿ ಮಾಡುತ್ತಿದ್ದೆ.

ಒಂದು ದಿನವಂತೂ ಕುಕ್ಕಿನ ಗಂಡ ಕಂಠಮಟ್ಟ ಕುಡಿದು ಕಿಕ್ಕಾಗಿ ಕೂಗಾಡುತ್ತಾ ಹೆಂಡತಿಯನ್ನು ಕಾಡಿಸಲು ಕುಕ್ರಿ ಹಿಡಿದುಹೋದ. ಕ್ಯಾಮೆರಾ ಹಿಡಿದಿದ್ದ ಸಂದೀಪ ಬಿಡಿಸಲು ಕ್ಯಾಮೆರಾ ಸಮೇತ ಹೋದರೆ ಅವನಿಗೂ ಕುಕ್ರಿ ತೋರಿಸಿದ. ಸಂದೀಪ ಇನ್ನೂ ಮದುವೆ ಆಗದ ಹುಡುಗ, ಕೈಯಲ್ಲಿ ಕ್ಯಾಮೆರಾ ಇದೆ, ಕುಕ್ರಿ ಇಲ್ಲ. ಅವನಿಗೇನಾದರೂ ಆದರೆಂಬ ಆತಂಕದಿಂದ ನನ್ನ ಕ್ಯಾಮೆರಾ ಪಕ್ಕದಲ್ಲಿಟ್ಟು ನೋಡುತ್ತಿದ್ದೆ. ಹತ್ತು ನಿಮಿಷ ಕಳೆಯಿತು. ಅವನ ಕುಡಿದ ಮತ್ತಿಳಿದು, ಇವನಾ ಇಷ್ಟು ಗಲಾಟೆ ಮಾಡಿದ್ದು ಎನ್ನುವಂತೆ ತಣ್ಣಗೆ ಗೂಡು ಸೇರಿಕೊಂಡ. ಸಂದೀಪನೂ ತನ್ನ ಕ್ಯಾಮೆರಾ ಹಿಡಿದು ಏನೂ ಆಗಿಲ್ಲ ಎನ್ನುವಂತೆ ನನ್ನ ಬಳಿಗೆ ಬಂದು `ಅಮ್ಮಾ ಹೆದರಿದಿರಾ, ಇದೆಲ್ಲಾ ಅವನು ಕುಡಿದಾಗ ಮಾಮೂಲಿ. ಆದರೆ ದೀದಿಗೆ ಜೋರಾಗಿ ಹೊಡೆಯುತ್ತಾನೆ, ಅದೇ ಸಮಸ್ಯೆ’ ಎಂದ.
ನನ್ನೆದುರಿಗೊಂದು ಹೈಡ್ರಾಮಾ ನಡೆದು ಸುಖಾಂತ್ಯವಾಯಿತು. ಅಲ್ಲಿಯತನಕ ಒಂದೇ ಸಮನೆ ಲಬೋ ಎನ್ನುತ್ತಿದ್ದ ಅವರ ಮಕ್ಕಳು ಸೊರ್ ಬರ್ರೆನ್ನುತ್ತಾ ಸುಮ್ಮನಾದರು. ಏಟುತಿಂದ ಕುಕ್ ಕುಕ್ಕದೆ ರಾತ್ರಿ ಹತ್ತೂವರೆ ಆದರೂ ಊಟ ಬರಲಿಲ್ಲ. ಇತ್ತ ನಾನು ನಿದ್ದೆ ಮಾಡದೆ, ಹೊರಗೆ ಹೋಗಿ ಕೇಳಲು ಭಯವಾಗಿ ಕಾಯ್ದು ಸಾಕಾಗಿ ಸಂದೀಪನಿಗೆ ಫೋನಾಯಿಸಿದೆ. ಒಂದು ಗಂಟೆ ಕಳೆದ ಬಳಿಕ ಪನೀರ್ ರೈಸ್ ಎಂದು ಕೊಟ್ಟರು. ಮೆದು ಪನೀರ್ ಕಟ್ಟಿಗೆ ತುಂಡಿನಂತಿದ್ದು ಬಾಯಿಗೆ ಸಿಕ್ಕ ಪನೀರಿನ ತುಂಡನ್ನು ಉಗಿಯುತ್ತಾ ರೈಸ್ ಮಾತ್ರ ಒಳಗೆ ತುರುಕಿ ಊಟ ಮುಗಿಸಿದೆ. ವಡ್ಡಾರಾಧನೆಯ ಸುಕುಮಾರಸ್ವಾಮಿ ಕಥೆಯಲ್ಲಿ ರಾಜ ಬಂದನೆಂದು ತಾವರೆ ದಂಟಿನ ಅಕ್ಕಿಗೆ ಬೆರೆಸಿದ್ದ ಮಾಮೂಲಿ ಅಕ್ಕಿ ಬೆರೆಸಿ ಅನ್ನ ಮಾಡಿದ್ದರೆ, ಸುಕುಮಾರ ಮಾಮೂಲಿ ಅಕ್ಕಿಯ ಅನ್ನ ಉಗಿದು ತಾವರೆ ಅಕ್ಕಿ ಮಾತ್ರ ತಿಂದ ಕಥೆ ನೆನಪಿಗೆ ಬಂತು.

ನಾನು ಸುಕುಮಾರ ಅಲ್ಲಲ್ಲ ಸುಕುಮಾರಿ ಅಲ್ಲ, ಆದರೂ ಪನೀರ್ ಅಗಿಯಲಾಗುತ್ತಿರಲಿಲ್ಲ. ಬೆಳಿಗ್ಗೆ ಕುಕ್, ಸಂದೀಪ ಇಬ್ಬರೂ ಸಾರಿ ಕೇಳಿದರು. ನಾನು ಸರಿ ಬಿಡ್ರಪ್ಪ ಎಂದೆ.ಬಾಲ್ಕನಿಯಲ್ಲಿ ಕೂತಾಗ ಮುತ್ತಿಗೆ ಹಾಕಿ ತಂಪು ತುಂಬಿಸಿ ಹೋಗುತ್ತಿದ್ದ ಕುಳಿರ್ಗಾಳಿ, ಮಂಜಿನ ತೆರೆ. ಬಿಸಿಲೇರಿದ ಅರೆಕ್ಷಣದಲ್ಲಿ ತಂಪಾಗುತ್ತಿದ್ದ ವಾತಾವರಣ. ಹುಣ್ಣಿಮೆಯ ದಿನಗಳಾದ್ದರಿಂದ ಇರುಳ ಚಳಿಯಲ್ಲೂ ಸಾಕಷ್ಟು ಹೊತ್ತು ಬಾಲ್ಕನಿಯಲ್ಲೇ ಠಿಕಾಣಿ ಹೂಡಿದ್ದೆ. ಮೊಬೈಲಿನಲ್ಲಿ Time lapseನಲ್ಲಿ ಚಂದ್ರ, ಮೋಡದ ಓಡಾಟ ರೆಕಾರ್ಡ್ ಆಯಿತು. ಬಾಲ್ಕನಿಯ ಸಮೀಪ ಬಂದ ಹಕ್ಕಿಗಳ ಚಿತ್ರ ತೆಗೆದಾಗ ಐದು ಲೈಫರ್ ಸಿಕ್ಕವು. White browed shrike babbler, Black winged cuckoo shrike, Buff Barred Warbler ಹಾಗೂ ಹೆಣ್ಣು-ಗಂಡು Red tailed minla. Blue tailed minla ನಾಲ್ಕಾರು ಕಡೆ ಸಿಕ್ಕಿತ್ತು. ಎರಡೂವರೆ ವರ್ಷಗಳ ನಂತರ ಕೆಂಪುಬಾಲದ ಮಿನ್ಲಾ ದರ್ಶನ ದಕ್ಕಿತು.

common rose finch ಗಂಡು ಹೆಣ್ಣುಗಳು ಬಂದವು. ಹೆಸರಿನಲ್ಲಿ ಕಾಮನ್ ಎಂದಿದ್ದರೂ ಕೆಲವು ಸಲ ಕಾಮನ್ ಗ್ರೇಟ್ ತರಹ ಆಡಿ ಸುಲಭವಾಗಿ ಕೈಗೆ ಸಿಕ್ಕಲ್ಲ. ಸಿಕ್ಕಿದರೂ ಹೀಗೆ ಸಿಗೋದು ಕಷ್ಟ. ವಿಶೇಷ ಏನು ಗೊತ್ತಾ? ಏನೋ ತಿನ್ನುತ್ತಾ ಅಲ್ಲ ಮುಕ್ಕುತ್ತಾ ಇದ್ದವು. ಇದೇನು ಹೀಗೆ ಮುಕ್ಕುತ್ತಿದ್ದಾವಲ್ಲ ಎಂದು ಕ್ಲಿಕ್ ಮಾಡ್ತಾ ನೋಡ್ತಿದ್ದೆ. ಸ್ವಲ್ಪ ಹೊತ್ತಿನ ಬಳಿಕ ಮಂಪರು ಬಂದು ಜೋಲಿ ಹೊಡೆದಂತೆ ಆಯಿತು. ಡೌಟು. ಕೂತು ಸಾಕಾಗಿ ನನಗೆಯೆ ನಿದ್ದೆಯಾ, ಕಣ್ಣುಜ್ಜಿ ನೋಡಿದೆ. ಮಂಪರು ನನಗಲ್ಲ, ಈ ಹಕ್ಕಿ ನನ್ಮಕ್ಕಳಿಗೆ. ಫುಲ್ಲೂ ಕಣ್ಣರಳಿಸಿ ನೋಡಿದೆ. ಓಹೋ ಇದಾ ಸಮಾಚಾರ, ಇವೂ ಕಿಲಾಡಿಗಳು. ಅಸಲಿ ವಿಚಾರ ಏನೆಂದರೆ ಅವು ಮುಕ್ಕುತ್ತಿದ್ದ ಗಿಡ ಗಾಂಜಾ ಗಿಡ. ತೂರಾಡುತ್ತಿದ್ದವು. ಕಿಕ್ಗಾಗಿ ಗಾಂಜಾ ಗಿರಾಕಿಗಳಾಗಿವೆ. ಹೋಗಲಿಬಿಡಿ ನನಗ್ಯಾಕೆ ಅವುಗಳ ಸಮಾಚಾರ, ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಮೆತ್ತಿದಂಗೆ ಆಗಬಾರದಲ್ಲ. ಈ ರೋಸ್ ಫಿಂಚ್ ಮರಿ ಸೀಬೆ ಗಿಡದೆಲೆಯ ಮೇಲೆ ಕುಳಿತಿದ್ದ ಭಂಗಿಯಂತೂ ಸೂಪರ್ ಆಗಿತ್ತು.
ಮೊದಲಸಲ ಬಂಗಾಳಕ್ಕೆ ಬಂದಾಗ ನಿಯೋರಾ ವ್ಯಾಲಿಯಲ್ಲಿದ್ದ ಚಿತ್ರದಲೆತ ಬದಲಾಯಿಸಿ ಗಾಜಲಡೋಬ ಕಾರ್ಯಕ್ರಮ ಆಗಿಸಿದ್ದರು. ಈ ಸಲ ನಿಯೋರಾ ವ್ಯಾಲಿ ಇರಲಿಲ್ಲ. ಲಾವಾ ದಾಟುತ್ತಿದ್ದಂತೆ ನಿಯೋರಾ ವ್ಯಾಲಿ ಬೋರ್ಡ್ ನೋಡಿ ಒಳಗೆ ಹೋಗಲೇಬೇಕೆಂದು ಮಕ್ಕಳ ತರಹಕ್ಕೆ ಹಟ ಮಾಡಿದೆ. ಅರವತ್ತು ದಾಟಿದ ನಾನೂ ಮಗೂನೆ ಅಲ್ವಾ. ಸಂದೀಪ್ `ಅಮ್ಮಾ ಮೊದಲೇ ಅನುಮತಿ ತಗೋಬೇಕಾಗುತ್ತೆ’ ಎಂದರೂ ಪಟ್ಟು ಬಿಡಲಿಲ್ಲ, ಹಟಹುಟ್ಟಿತು. ಸಂದೀಪ್ ಅಲ್ಲಿದ್ದ ಅರಣ್ಯ ಇಲಾಖೆಯ ಚೌಕಿಯೊಳಗೆ ಹೋಗಿ, ಒಂದರ್ಧ ಗಂಟೆಗೆ ಅನುಮತಿ ಪಡೆದುಬಂದ. ನಾಲ್ಕೈದು ಕಿ.ಮೀ ವ್ಯಾಲಿ ರಸ್ತೆಯಲ್ಲಿ ಹೋಗಿ ಬಂದೆವು. ಅಡ್ಡಾಡಿದ್ದು ಖುಷಿಯಾಯಿತು. ಇನ್ನೊಮ್ಮೆ ಬಂದರೆ ಖಂಡಿತಾ ಇದರೊಳಗೆ ಹಕ್ಕಿಗೆ ಹುಡುಕಾಡಬೇಕೆಂದು ನಿರ್ಧರಿಸಿ ಕಂಡ ಹಕ್ಕಿ ಕ್ಲಿಕ್ಕಿಸಿದೆ.

ಮುಂದಿನ ಗುರಿ ಸಿಲಿಗುರಿಯ ಅಕ್ಕಪಕ್ಕದಲ್ಲಿ ಫೋಟೋಗ್ರಫಿ. ಒಂದಿಡೀ ದಿನ ಪ್ರಯಾಣಿಸಿ ಸಿಲಿಗುರಿ ತಲುಪಿದ್ದಾಯ್ತು. ದಾರಿಯಲ್ಲಿ ಹಕ್ಕಿ ಸಿಗಲಿಲ್ಲ ಅಥವಾ ನಿಲ್ಲಿಸಲಿಲ್ಲ. ತೀಸ್ತಾ ಬ್ಯಾರೇಜಿನ ಬಳಿ ರಿಸಾರ್ಟಲ್ಲಿ ಊಟಕ್ಕೆ ನಿಲ್ಲಿಸಿ, ನನ್ನನ್ನು ಕೂರಿಸಿ ಊಟಮಾಡ್ತಿರಿ ಎಂದು ನಾಪತ್ತೆ ಆದ ಸಂದೀಪ ಊಟ ಮುಗಿಸುವ ವೇಳೆಗೆ ಬಂದು ಪೆಟ್ರೋಲ್ ಹಾಕಿಸಲು ಹೋಗಿದ್ದೆ ಎಂದ. ಮುಸ್ಸಂಜೆಗೆ ಸಿಲಿಗುರಿ ತಲುಪಿ ಅಂದಿನ ಹಕ್ಕಿ ಹುಡುಕಾಟಕ್ಕೆ ತಿಲಾಂಜಲಿ ಕೊಡಿಸಿದ್ದ. ಉಳಿಯಲು ವ್ಯವಸ್ಥೆ ಮಾಡಿ ಬೆಳಿಗ್ಗೆ ಆರುಗಂಟೆಗೆ ಎಂದು ಯಥಾಪ್ರಕಾರ ಸೂಚನೆ ಕೊಟ್ಟೇ ಸಂದೀಪ ಹೋದ.
ಬೆಳಿಗ್ಗೆ ಆರೂವರೆಯ ಹೊತ್ತಿಗೆ ಬಂದವನು ಶಿವಕೋಲದ ದಾರಿಯಲ್ಲಿ ಲೋಕಲ್ ಗೈಡ್ ಒಬ್ಬನನ್ನು ಹತ್ತಿಸಿಕೊಂಡ. ಹಿಂದಿನ ದಿನವೇ `ಇದೇ ಸ್ಥಳಕ್ಕೆ ಸೇರಿದ ನಿನಗೇ ಗೊತ್ತಿರುತ್ತದೆ, ಮತ್ಯಾಕೆ ಗೈಡ್, ಕಳೆದ ಸಲ ಗೈಡ್ ಇಲ್ಲದೆ ಹೋಗಿರಲಿಲ್ಲವೆ’ ಎಂದು ಕೆಣಕಿದ್ದೆ. ಗೈಡ್ಗಳೆಲ್ಲ ಸೇರಿ ಸಂಘ ಮಾಡಿಕೊಂಡು ಗೈಡ್ ಸಹಾಯ ಕಡ್ಡಾಯ ತೆಗೆದುಕೊಳ್ಳಲೇಬೇಕೆಂದು ನಿರ್ಣಯಿಸಿದ್ದಾರೆ’ ಎಂದ ಸಂದೀಪ. ಹಕ್ಕಿ ಜ್ಞಾನ ಅಷ್ಟಾಗಿ ಇರದಿದ್ದ ಗೈಡ್ ಕಾರಿಗೆ ಹತ್ತಿಕೊಂಡ. ಅವ ಅತ್ತಿತ್ತ ಹುಡುಕಾಡಿದಂತೆ ಮಾಡಿದನೆ ಹೊರತೂ ಒಂದು ಹಕ್ಕಿಯನ್ನೂ ಕಾಣಿಸಲಿಲ್ಲ.
ಟೀ ಎಸ್ಟೇಟಿನ ಮರದ ಕೊಂಬೆಯ ಮೇಲೆ ಶಯ್ಯಾಸೀನವಾಗಿದ್ದ ನೀಳಬಾಲದ ನತ್ತಿಂಗ ಕಾಣಸಿಕ್ಕಿತು. ನಿಶಾಚರಿಯಾದ ನತ್ತಿಂಗ ಹಗಲಲ್ಲದೆಷ್ಟು ಜಡವೆಂದರೆ ಚಲನೆಯೇ ಕಾಣದು. ಅಲ್ಲಿದ್ದ ಮೂರು ಗಂಟೆ ಇದ್ದಲ್ಲೇ ಇದ್ದಿತು. ಬಹುಶಃ ಮರಳಿದ ಮೇಲೂ ಇದ್ದಿತೋ ಏನೋ. ಹಲವು ಸಲ ಫೋಟೊ ತೆಗೆದರೂ, ನಾ ಮಾತ್ರವಲ್ಲ ಇನ್ನೂ ಹತ್ತಾರು ಜನ ಫೋಟೊ ತೆಗೆಯುತ್ತಿದ್ದರೂ ಭಂಗಿಯಲ್ಲಿ ಬದಲಾವಣೆ ಇರಲಿಲ್ಲ. ಆಗಾಗ್ಗೆ ಅರೆಗಣ್ಣಿನ ನೋಟ ಬೀರಿ ಮತ್ತೆ ಮಲಗುತ್ತಿತ್ತು. ಬೀಳುವ ಭಯವಿಲ್ಲದೆ ನಿದ್ರಾಯೋಗದಲ್ಲಿದ್ದ ಅದರ ವಿಡಿಯೋ ಮಾಡಿದರೂ ಸ್ಟಿಲ್ ಫೋಟೊದಂತಿತ್ತು.

ಡಾಲರ್ ಅಂದರೆ ಡಾಲರ್ ಹಕ್ಕಿಯ ರೆಕಾರ್ಡ್ ಷಾಟ್ ಅಂಡಮಾನಿನಲ್ಲಿ ಸಿಕ್ಕಿತ್ತು, ಜೊತೆಗೆ ಅತೃಪ್ತಿ ಕೂಡಾ. ಈ ಪ್ರವಾಸದಲ್ಲಿ ಡಾಲರ್ ಬೇಕೇಬೇಕೆಂದು ಸಂದೀಪನಿಗೆ ತಾಕೀತು ಮಾಡಿದ್ದೆ. ಟೀ ಎಸ್ಟೇಟಿನಲ್ಲಿ ಗಂಟೆಗಟ್ಟಲೆ ಕಾಯ್ದರೂ ದೂರದ ಮರದ ಮೇಲೆ ಕುಳಿತು ಆಗಾಗ್ಗೆ ಹಾರಿ ಆಹಾರ ಹಿಡಿದು ಕೊಂಬೆ ಬದಲಾಯಿಸಿ ಕೂರುತ್ತಿತ್ತು. ಬಾ…ಬಾ.. ಬಳಿಗೆ ಬಾ ಎಂದರೂ ಬರದ ಡಾಲರ್ಗಾಗಿ ಮತ್ತೊಂದು ಪ್ರವಾಸ ಇದ್ದೇ ಇದೆ.
ಬೆಟ್ಟಗುಡ್ಡಗಳ ಇಳಿಜಾರಿನಲ್ಲಿ ಹಬ್ಬಿ ಹರಡಿದ್ದು ಚಹಾ ಯಾನೆ ಟೀ ಎಸ್ಟೇಟ್. ಯಾರಾದರೂ ಮಾಡಲಿ, ಸ್ವತಃ ತಾವೇ ಮಾಡಿಕೊಂಡಿರಲಿ… ಚಹಾಪ್ರಿಯರಿಗೆ ಅನಿವಾರ್ಯ. ಹಕ್ಕಿಗಾಗಿ ಚಹಾತೋಟದೊಳಗೆ ನಾ ಕಾಯುತ್ತಿದ್ದಾಗ ಬಣ್ಣಬಣ್ಣದ ಕೊಡೆ ಹಿಡಿದು ಬೆನ್ನಿಗೆ ಬುಟ್ಟಿಹೊತ್ತು ಹಸಿರ ನಡುವೆ ಹೋಗುತ್ತಿದ್ದವರ ನೋಟ ಸೊಗಸಾಗಿತ್ತು. ಟೀ ತೋಟಗಳಲ್ಲಿ ಕೆಲಸ ಮಾಡುವವರೆಲ್ಲ ಹೀಗೆಯೇ ಇರುತ್ತಾರೋ ಇಲ್ಲವೋ ನಾನರಿಯೆ. ಟೀತೋಟ ದಾಟಿ ರಾಂಗ್ಟಾಂಗಿಗೆ ಹೋದರೆ ದೂರದಲ್ಲಿದ್ದ ಸ್ಕಾರ್ಲೆಟ್ ಮಿನಿವೆಟ್ ನಕ್ಕಿತು. ಮರದ ತುದಿಯಲ್ಲಿದ್ದ common magpie ಕುಳಿತಿತ್ತು ಅಷ್ಟೆ, ತೆಗೆಯಲಾಗದ ನಾನೂ ಗಾಡಿಯಲ್ಲಿದ್ದೆ.

ಮರುದಿನ ಬೆಳಿಗ್ಗೆ ಕುರೆಸಾಂಗ್ ತನಕ ಹೋದೆವು. ಹಕ್ಕಿ ಇದ್ದ ಕಡೆ ನಿಲ್ಲಿಸಲಿಲ್ಲ. ಹಕ್ಕಿ ಕಾಣದ ಜಾಗದಲ್ಲಿ ಹುಡುಕುತ್ತಿದ್ದರು. ಇದಕ್ಕೆ ಗೈಡ್ ಬೇರೆ. ಅವರ ಈ ಹುಡುಕಾಟದಲ್ಲಿ ಒಂದು ಹಕ್ಕಿ ಕಂಡಿತು. ಅಲ್ಲಿದೆ ನೋಡಿ ಎನ್ನುತ್ತಾ ತನ್ನ ಕ್ಯಾಮೆರಾ ಫೋಕಸ್ ಮಾಡಿ ಎಂದಿನಂತೆ ಕ್ಲಿಕ್ಕಿಸಿದ ಸಂದೀಪ. ನಾನು ಗುರುತಿಸಿ, ಒಂದೆರಡು ಕ್ಲಿಕ್ ಮಾಡುತ್ತಿದ್ದಂತೆ ಹಾರಿಹೋಯಿತು ಟೂರ್ಗೆ ಬಂದಿದ್ದು ನಾನಾ, ಅವನಾ ಸಂದೇಹ ಕಾಡಿತು. ಇಬ್ಬರಿಬ್ಬರು ಗೈಡ್ ಕೈಕೊಟ್ಟಿದ್ದರು. ಚಂದದ ಹಕ್ಕಿಯ ಒಳ್ಳೆಯ ಷಾಟ್ ಮಿಸ್ಸಾಯಿತು. ಯಥಾಪ್ರಕಾರ ಸಾರಿ ಅಮ್ಮಾ ಸಾರಿ ಎಂದ. ತೆಗೆಯಲು ಇಲ್ಲಿಯವರೆಗೂ ಬಂದಿದ್ದೆ, ಇರಲಿ, ಪರವಾಗಿಲ್ಲ ಮುಂದಿನ ಸಲ ನೋಡೋಣ ಎಂದು ಸುಮ್ಮನಾದೆ.
ಮಧ್ಯಾಹ್ನದ ಹೊತ್ತಿಗೆ ಸಿಲಿಗುರಿಗೆ ತಲುಪಿದೆ. ಪದೇಪದೇ ಮೆಸೇಜ್, ಬೆಂಗಳೂರಿಗೆ ಹೋಗುವ ಫ್ಲೈಟ್ ತಡವಾಗುತ್ತಿದೆ ಎಂದು. ರಿಸ್ಕ್ ಬೇಡವೆಂದು ಸಮಯಕ್ಕೆ ಸರಿಯಾಗಿ ಬಾಗ್ಡೋಗ್ರಾ ತಲುಪಿದ್ದೆ. ವಿಮಾನದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಮಧ್ಯಾಹ್ನ ಮೂರಕ್ಕೆ ಹೊರಡುವವರಿಗೆ ರಾತ್ರಿಯಾದರೂ ಗೊಂದಲ ಬಗೆಹರಿದಿರಲಿಲ್ಲ. ಸಂದೀಪನಿಗೆ ಕರೆಮಾಡಿದೆ, ಕ್ಯಾನ್ಸೆಲ್ಲಾದರೆ ಉಳಿಯಲು ವ್ಯವಸ್ಥೆ ಮಾಡಬೇಕೆಂದು. ಡೋಂಟ್ ವರಿ ಅಮ್ಮಾ ಮಾಡಿಕೊಡುವೆ ಎಂದಿದ್ದ. ಕಾಯುತ್ತಿದ್ದ ನಮಗೆ ಕೊಟ್ಟ ಸ್ನ್ಯಾಕ್ಸ್ ಖಾಲಿಯಾದರೂ ಕಾಣಲಿಲ್ಲ ವಿಮಾನ. ಕೊನೆಗೆ ಎಂಟೂವರೆಗೆ ಬಾಗ್ಡೋಗ್ರಾ ಬಿಟ್ಟು ನಟ್ಟನಡುರಾತ್ರಿಯಲ್ಲಿ ಬೆಂಗಳೂರು ತಲುಪಿ ಫ್ಲೈಬಸ್ ಹತ್ತಿ ಮುಂಜಾವಕ್ಕೆ ಮಂಡ್ಯ ತಲುಪಿದವಳು ಬಂಗಾಲ, ಹಕ್ಕಿ ಮರೆತು ನಿದ್ರಿಸಿದೆ ಎನ್ನುವಲ್ಲಿಗೆ ಬಂಗಾಳದ ಮೂರನೆಯ ಪ್ರವಾಸ ಮುಕ್ತಾಯ.

0 ಪ್ರತಿಕ್ರಿಯೆಗಳು