ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -2 …

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

14.2

ಮಂಗಲಜೋಡಿ

ನಮ್ಮ ಮುಂದಿನ ಪಯಣ ಮಂಗಲಜೋಡಿಗೆ. ಜಗತ್ ಪ್ರಸಿದ್ಧ ಚಿಲ್ಕಾ ಸರೋವರದ ಒಂದಂಚೇ ಸಿಹಿನೀರಿನ ನೆಲೆಯ ಮಂಗಲಜೋಡಿ. ಬಿತರಕನಿಕಾದಿಂದ ಅಷ್ಟೇನೂ ಅವಸರಿಸದೆ ಪಯಣಿಸಿ ಮಂಗಲಜೋಡಿ ತಲುಪಿದ್ದು ಸೂರ್ಯಾಸ್ತದ ಹೊತ್ತಿಗೆ ಗಾಡ್ವಿಟ್ ಕಾಟೇಜಿಗೆ. ಹಿಂದಿದ್ದ ಡೈನಿಂಗ್‌ಹಾಲಿನಲ್ಲಿ ಒರಿಸ್ಸಾದ ಗಂಧಗಾಳಿಯ ಆಹಾರ ಉದರಕ್ಕಿಳಿಸಿ ಪವಡಿಸಿದೆ ಸೂರ್ಯೋದಯದ ಹಂಬಲದಲ್ಲಿ.

ಇರುಳನ್ನು ಸವೆಸಿ ಸೂರ್ಯ ಕಣ್ಣಿಗೆ ಬೀಳುವ ಹೊತ್ತಿಗೆ ಮಂಗಲಜೋಡಿಯ ಹಕ್ಕಿದಾಣದತ್ತ ತಲುಪಿದೆವು. ಹಕ್ಕಿಯೊಂದು ಬಾನೊಡೆಯನನ್ನು ದಾಟಿ ರೆಕ್ಕೆ ಬೀಸುತ್ತಾ ನಮ್ಮನ್ನು ಸ್ವಾಗತಿಸಿತು. ಬಿತರ್‌ಕನಿಕಾದ ದೋಣಿ ಯಾಂತ್ರೀಕೃತವಾಗಿದ್ದರೆ ಈ ದೋಣಿಗಳು ಹುಟ್ಟಿನವು. ಮೂರ್ನಾಲ್ಕು ಜನಕ್ಕೆ ಕೂರಲು ಜಾಗವಿತ್ತು. ಮೊದಲ ದಿನ ಮುಂಜಾನೆ ಸೆಷನ್ನಿನಲ್ಲಿ ಮುಂದೆ ಕೂರಲು ಎದೆಯಲ್ಲಿ ಚಳುಕು.  ಮಧ್ಯಾಹ್ನದ ಸೆಷನ್ನಷ್ಟರಲ್ಲಿ ಧೈರ್ಯ ಒಗ್ಗೂಡಿಸಿಕೊಂಡು ಮುಂದಿನ ಜಾಗ ಆಕ್ರಮಿಸಿಕೊಂಡೆ. ನಾವೇರುವ ದೋಣಿಯ ಅಂಚಿನಲ್ಲಿ ಕೀಟ ಅರಸಿ ಬಂದ ಉಲಿಯಕ್ಕಿ ಸ್ವಾಗತಿಸಿತು. ಅನುಪಮ್ `ಮಂಗಲಜೋಡಿಯಲ್ಲಿ ಇರೋದೆಲ್ಲಾ ನೀರಹಕ್ಕಿಗಳು, ಬಿತರ್‌ಕನಿಕಾ ತರಹ ಬಣ್ಣ ಬಣ್ಣದ್ದು ಆಗಿರಲ್ಲ’ ಎಂದಿದ್ದರು. 

ಭುವನೇಶ್ವರದಿಂದ ಸುಮಾರು ೭೦ ಕಿ.ಮೀ ದೂರದ ಒಂದೂವರೆ ಗಂಟೆಯೊಳಗೆ ಕ್ರಮಿಸುವ ಮಂಗಲಜೋಡಿ ಆಶ್ಚರ್ಯಕರವಾದ ಮನಃ ಪರಿವರ್ತನೆ ಪಡೆದ ಅಪೂರ್ವ ಪಕ್ಷಿತಾಣ. ಮೀನುಗಾರರ ಮಿತಿಯಿಲ್ಲದ ಆಸೆಯ ಕಾರಣದಿಂದ ಹಕ್ಕಿಗಳು ಮರೆಯಾಗುತ್ತಿದ್ದಾಗ ಅದೇ ಮೀನುಗಾರರೇ ಹಕ್ಕಿ, ಕೆರೆ ಸಂರಕ್ಷಕರಾಗಿ ಮಂಗಲಜೋಡಿ ಪಕ್ಷಿತಾಣವಾಗಿದೆ. ನವೆಂಬರ್‌ನಿಂದ ಫೆಬ್ರವರಿವರೆಗಿನ ಸೀಜನ್ನಿನಲ್ಲಿ ಅದರಲ್ಲೂ ಡಿಸೆಂಬರ್-ಜನವರಿ ತಿಂಗಳಲ್ಲಿ ಹಕ್ಕಿಗಳ ನಿರಂತರ ವಲಸೆ. ಉಳಿದ ಏಳೆಂಟು ತಿಂಗಳಲ್ಲಿ ಬೇಸಿಗೆಯಲ್ಲಿ ಬಿರುನೆಲ, ಮಳೆಗಾಲದಲ್ಲಿ ಬರಿಜಲ. ಅನುಪಮ್ `ಸಹಸ್ರ ಸಹಸ್ರ ಸಂಖ್ಯೆಯ ಹಕ್ಕಿಗಳ ಸಮುದ್ರ ಇದು.’ ಎಂದು ಕುತೂಹಲ ಹುಟ್ಟಿಸಿದ್ದರು. 

ಆಳವಿಲ್ಲದ ಜೌಗುನೆಲದ ನೀರಿನಲ್ಲಿ ದೋಣಿಯವ ಹುಟ್ಟು ಹಾಕುತ್ತಾ ಹೋದಂತೆ ಪಕ್ಷಿಲೋಕ ಕೈ ಬೀಸಿ ಕರೆಯಿತು. ಮುಂದಿನ ಐದು ಸೆಷನ್‌ಗಳಲ್ಲಿ ಪ್ರತಿ ಸೆಷನ್ನಿನ ಮೂರು ತಾಸು ಕಣ್ಣು ಹಕ್ಕಿ ಕಂಡತ್ತ -ಕ್ಯಾಮೆರಾ-ದೋಣಿ ತಿರುತಿರುಗುತ್ತಿತ್ತು. ಅನುಪಮ್ ಹೆಸರು ಹೇಳಿದರೂ ಹಕ್ಕಿ ನೋಡುವ ಸಂಭ್ರಮದಲ್ಲಿ ಒಂದೆರಡು ಹೆಸರು ಒಳಗಿಳಿದರೆ ಉಳಿದ ಹೆಸರುಗಳು ಕೆಳಗಿವಿಗೆ ಹೋದವು. ದೋಣಿಯಾನದಲ್ಲಿ ಸಿಕ್ಕ brahminy shelduck (ಕಂದುಬಾತು), northern pintail (ಸೂಜಿಬಾಲದ ಬಾತು), northern shoveler (ಚಲುಕಬಾತು) spot-billed duck (ವರಟೆಬಾತು) ನನಗೆ ಲೈಫರ್‌ಗಳೆ. 

ತಮ್ಮ ಆಹಾರ-ವಿಹಾರಗಳಲ್ಲಿ ತನ್ಮಯವಾಗಿದ್ದ ಹಕ್ಕಿಗಳು ಹತ್ತಿರ ಹೋಗುವವರು ಇನ್ನೂ ಹತ್ತಿರ… ಇನ್ನೂ ಹತ್ತಿರ ಎನ್ನುತ್ತಾ ಹೋದರೆ ಪುರ‍್ರೆಂದು ನೀರು ಹಾರಿಸುತ್ತಾ ಹಾರಿ ಹೋಗುತ್ತಿದ್ದವು. ನಡೆಯಲಾರದ ನನಗೆ ಹಾರುತ್ತಿರುವ ಹಕ್ಕಿಯ ಪಟ ಹಿಡಿಯುವ ಆಸೆಯಿದ್ದರೂ ಯಶಸ್ಸು ಕಾಣಲಾಗಿಲ್ಲ. ಕ್ಯಾಮೆರಾ ಲೆನ್ಸ್ ಭಾರ ಆಗುತ್ತಿದ್ದಂತೆ, ಮೊದಲೇ fieldಗೆ ಬರಲು ನಿನಗೇನಾಗಿತ್ತು ಅಂತಾ ನಾನೇ ಬೈದುಕೊಳ್ಳಬೇಕಿದೆ ಬಾ ಲೀಲಾ ಬಾ.. ಬಾ… ಹಕ್ಕಿಯೇ ಚಂದ ಎಂದ ಮೇಲೆ ಬೇರೆ ಯೋಚನೆಯೇ ಬೇಡ ಎಂದು ಬೆಳಗಿನ ಮಿರುಗುವ ಹೊಂಬಣ್ಣದಲ್ಲಿ ಮಿಂದ ಪಟ್ಟೆಬಾಲದ ಹಿನ್ನೀರ ಗೊರವ ಚಂಚಿನಂಚಿನಲ್ಲಿ ಹನಿಯೊಡನೆ ಸ್ವಾಗತಿಸಿತು. ದೋಣಿ ಸಾಗಲಿ ಮುಂದೆ ಹೋಗಲಿ. ಲೀಲಾ ಹಕ್ಕಿ ಚಿತ್ರ ತೆಗೆಯಲಿ…

ಬಣ್ಣಬಣ್ಣದ ಬಾತುಗಳ ಲೋಕ ದಾಟಿದಂತೆ, ಅವು ಹಾರಿ ದೂರವಾದಂತೆ ಕಂಬದ ಮೇಲಿದ್ದ ಕವಲು ತೋಕೆ ಕಂಡಿತು. ಅಂಬರಗುಬ್ಬಿ (Barn swallow) ಎಲ್ಲ ಕಡೆ ಸಿಕ್ಕರೂ  ಪಟ ತೆಗೆಯೋಕೆ ನಾನು, ನನ್ನ ಕ್ಯಾಮೆರಾ ಗೆಲ್ಲಲಾಗದಷ್ಟು ವೇಗಗಾಮಿ. ಈಗ ಎದುರೇ ಕವಲುತೋಕೆಗಳು ಹಾರಿ ಅಲ್ಲಲ್ಲೇ ಕೂರುತ್ತಿದ್ದವು. ಕವಲುತೋಕೆ ಮರಿಯೊಂದು ಕಂಬದ ಮೇಲೆ ಕೂರುವ ಸಾಹಸದಲ್ಲಿತ್ತು. ಅತ್ತಿತ್ತ ರೆಕ್ಕೆ ಹಾರಿಸಿ ಕಷ್ಟಪಟ್ಟು balanceಸಿ ಕೂತಿತು. ಪಿತಾಶ್ರೀ ಮಾತಾಶ್ರೀ ಬಂದೂ ತಿನ್ನಲು ಕೊಡಲಿಲ್ಲವೆಂದು ಬ್ರಹ್ಮಾಂಡದಗಲ ಬಾಯಿ ತೆಗೆದು ಬೊಂಬಡಾ ಬಜಾಯಿಸಿ ಸುಸ್ತಾಗಿ ಪಿಳಿಪಿಳಿ ಕಣ್ಣ ಕಿರಿದಾಗಿಸಿ ತೂಗಡಿಸಿತು. `ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ಮಂಕುತಿಮ್ಮ’ ಎಂದು ಹಾಡು ಗುನುಗಿದೆ.

ತೂಕಡಿಸುತ್ತಿದ್ದ ಅದಕ್ಯಾಕೆ ತೊಂದರೆ ಎಂದು ಮುಂದೆ ಸಾಗಿದೆವು.  ಮಗದಷ್ಟು ಹಕ್ಕಿಗಳು ಎದುರಾದವು. whiskered tern (ಮೀಸೆ ರೀವ) ನೆಲದ ಮೇಲೆ ಕೂತು ಕಾಯುತ್ತಿತ್ತು. ಅದೆಷ್ಟು ವೇಗವಾಗಿ turn ಆಗುತ್ತದೆಂದರೆ tern ಬದಲು whiskered turn ಎಂದೇ ಹೆಸರಿಸಬಹುದಿತ್ತು. whisker ಎಳೆಯಷ್ಟರಲ್ಲೇ ಪಾರಾಗುತ್ತಿದ್ದ ಅದರ ಪಟ ನಮ್ಮೂರ ಕೆರೆಯಲ್ಲಿ ತೆಗೆದಿದ್ದರೂ ಇಂದೆನಗೆ ಸರಿಯಾಗಿ ಸಿಕ್ಕಿಕೊಂಡೆ ಎಂದು ಕ್ಲಿಕ್ಕಿಸಿದೆ. ನೋಡುತ್ತಿದ್ದಂತೆ ಹಾರಿದ ರೀವ ಕಂಬದ ಮೇಲಿನ ಡಿಂಬವಾಯಿತು. ದೋಣಿ ಹತ್ತಿರಕ್ಕೆ ಹೋಯಿತು. ‘ಅಯ್ಯೋ ದೇವರೆ ಇಲ್ಲಿಗೂ ಬಂದಳಾ ನಾನೇನು ಮಾಡಲಿ’ ಎನ್ನುವಂತೆ ಕೊರಳನ್ನು ಪೂರಾ ಉಲ್ಟಿಸಿ ಮೇಲೆ ನೋಡಿ ಹಾರಿತು. `ಹಾರಿಹಾರಿ ಹೋದರೆತ್ತ ಮತ್ತೆ ಬರುವೆ ಭುವಿಯತ್ತ’ ಎಂದು ಗುನುಗಿದೆ. ಹಕ್ಕಿಗಳು ಹಾರುವ ಬಗೆಗೆ ಬ್ಬೆಬ್ಬೆಬೆರಗಾದ ನಾವು ಹಾರಲಾರದೆ ವಿಮಾನ, ಹೆಲಿಕಾಪ್ಟರ್… ಏನೇನೊ ಆವಿಷ್ಕರಿಸಿಕೊಂಡದ್ದು. ಯಾವುದನ್ನು ಕಂಡುಹಿಡಿದರೂ ಅದರಲ್ಲೇ ಪ್ರಯಾಣಿಸಿದರೂ ಹಾರುವ ಹಕ್ಕಿ ಬೀಳದೆಯೇ ಹಾರುವ ಬಗೆಯನ್ನು ಮಾತ್ರ ವಿಸ್ಮಯವೆಂಬಂತೆ ನೋಡುತ್ತಲೇ ಇದ್ದೇವೆ.  

ಮತ್ತೆ ಮತ್ತೆ ಕಾಣಿಸುತ್ತಿದ್ದ ಹಕ್ಕಿ purple heron (ಕೆನ್ನೀಲಿ ಬಕ). Grey heron, purple heron (ಬೂದುಬಕ, ಕೆನ್ನೀಲಿ ಬಕ)ಎರಡೂ ನಮ್ಮೂರಲ್ಲೂ common. ಅದು ಹೊಂಚಿ ಮೀನು ಬೇಟೆಯಾಡಿದ್ದನ್ನು ಕ್ಲಿಕ್ಕಿಸಿದ್ದೆ. ಮಂಗಳಜೋಡಿಯಲ್ಲಿ ಹಕ್ಕಿಯ ಪುಕ್ಕ ನವಿರಾಗಿ ಕಾಣುವಷ್ಟು ಹತ್ತಿರದಲ್ಲಿ ಕಂಡ ಮೇಲೆ ಸೆರೆ ಹಿಡಿಯದಿರಬಹುದೆ. ನೀಳಗೊರಳ ಬಕದ ಚಲನೆ ಆಕರ್ಷಕ. ರೆಕ್ಕೆಯಗಲಿಸಿ ಪಾದದಿಂದ ನೆಲವನ್ನೋ, ಜಲವನ್ನೋ ಒದ್ದು ಮೇಲೇರುವ ಪರಿಯೇ ಸೊಗಸು. `ಬಕಪಕ್ಷಿ ಕಾಯ್ದಂಗೆ…’ ಎನ್ನುವಂತೆ ಸಮಯದ ಮಿತಿಯಿರದೆ ಶಿಲಾಸ್ವರೂಪಿ ಆಗಿ ಹೊಂಚುತ್ತಾ ಕಾಯುವ ಪರಿ ಅನನ್ಯ.  ಹೊಂಚುಹಾಕಿ ಕಾಯ್ದರೂ ಬೇಟೆ ಕೈಗೆಸಿಗದಿರುವುದುಂಟು. ಮಂಗಳಜೋಡಿಯಲ್ಲಿ ಎತ್ತೆತ್ತ ನೋಡಿದರೂ ಬಕ ಬೇಟೆಯಾಡುವುದನ್ನೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದ ಶೂಟರುಗಳಿದ್ದರು. ಒಬ್ಬರಿಗೆ ಬೇಟೆಯ ಸುಳಿವು ಸಿಕ್ಕಿದರೆ ಉಳಿದವರೂ ಅತ್ತ ಸಾಗುತ್ತಿದ್ದರು. ತಮಗೆ ಬೇಕಾದುದನ್ನು ಬೇಟೆಯಾಡಿ ಪಡೆದುಕೊಳ್ಳುವುದು ಎಲ್ಲರ ಗುರಿ ತಾನೆ. ಬೇಟೆಯಾಡುವುದನ್ನು ನಂತರ ನೋಡೋಣ, ಅದರ ಹಾರುವ ಸಿದ್ಧತೆ, ಹಾರುವ ವಿನ್ಯಾಸಗಳನ್ನು ಈಗ ನೋಡೋಣ ಎಂದು ಕ್ಯಾಮೆರಾ ಸಜ್ಜುಗೊಳಿಸಿಕೊಂಡೆ.

ಕೆನ್ನೀಲಿ ಬಕದ ಹಾರುವ ಪರಿ ಕಣ್ ತುಂಬಿತು ನಿಜ, ಆದರೆ ಅದರ ಹೊಟ್ಟೆ ತುಂಬಬೇಕಲ್ಲ. ನಾವು ಬೆಳ್‌ಬೆಳಗ್ಗೆಯೇ ಚಿತ್ರಬೇಟೆಗೆ ಇಳಿದಿದ್ದೆವು, ನಮ್ಮ ಹೊಟ್ಟೆಯೂ ಬಹುತೇಕ ಖಾಲಿಯಿತ್ತು. ಅನುಪಮ್ ಬಿಸ್ಕತ್ ತಂದಿದ್ದರು. ನಾನದನ್ನು ಆಗ ತಿನ್ನುತ್ತಿರಲಿಲ್ಲವಾದ್ದರಿಂದ ನೀರು ಮಾತ್ರ ಆಹಾರವಾಗಿತ್ತು. ಆದರೆ ನೀರಿನಲ್ಲಿ ತನ್ನ ಆಹಾರಕ್ಕೆ ಹೊಂಚುತ್ತಿದ್ದ ಕೆನ್ನೀಲಿ ಬಕ ನಿಮ್ಮ ಪಾಡಿಗೆ ನೀವು ಫೋಟೊ ತಗೊಳಿ, ನಮಗೂ ನಿಮ್ಮಂತಹವರ ಅಭ್ಯಾಸ ಆಗಿದೆ ಎನ್ನುವಂತೆ ನಮ್ಮೆಡೆಗೆ ಅಸೀಮ ನಿರ್ಲಕ್ಷ್ಯ ತೋರುತ್ತಾ ತನ್ನ ಬೇಟೆಯತ್ತ ಗಮನ ಹರಿಸಿತ್ತು.  

ಅಷ್ಟರಲ್ಲಿ ನಮ್ಮ ಮುಂದಿನ ದೋಣಿ ಅವಸರದಿಂದ ಸಾಗಿದ್ದನ್ನು ಕಂಡು ನಾವೂ ಅತ್ತ ಧಾವಿಸಿದೆವು. ಇನ್ನೂ ಮುಂದೆ ಹೋಗಲು ಅಲ್ಲಿ ನೀರಿರದೆ ನಿಂತೆವು ಅಲ್ಲಲ್ಲ ದೋಣಿ ನಿಲ್ಲಿಸಿದೆವು. ಕ್ಯಾಮೆರಾ ರೆಡಿಯಿತ್ತು, ಕಣ್ ಅತ್ತಿತ್ತ ಅಲುಗಲಿಲ್ಲ. ಕ್ಲಿಕ್… ಕ್ಲಿಕ್… ಕ್ಲಿಕ್ ಶಬ್ದ ಮಾತ್ರ. ಕೆನ್ನೀಲಿ ಬಕದ ಹಿಡಿತ ಬಿಗಿ ಇತ್ತು.  ಹಾವು ಅದರ ನೀಳ ಕೊಕ್ಕನ್ನೇ ಸುತ್ತಿ ದಿಗ್ಬಂಧಿಸಿತ್ತು. ಯಾರು ಯಾರಿಗೇನೂ ಕಡಿಮೆ ಇರಲಿಲ್ಲ. ಹತ್ತಾರು ನಿಮಿಷ ತನ್ಮಯರಾದೆವು. ಬಕದ ಬಲಾಢ್ಯ ಹಿಡಿತಕ್ಕೆ ಹಾವು ಸೋಲೊಪ್ಪಿ ಬಕದ ಬಕಾಸುರ ಹೊಟ್ಟೆಯಲ್ಲಿ ಲೀನವಾಯಿತು. ಗೆದ್ದ ಹೆಮ್ಮೆಯಿಂದ ಬಕ ಹಾವಿನ ಬಾಲದಂಚನ್ನು ನುಂಗಿ ನೀರುಕುಡಿದು ತೃಪ್ತವಾಯಿತು.

ದಾಸ್ `ಮೇಡಂ ನೀವು lucky, hunting scene ಸಿಕ್ಕಿತು. ಕೆಲವೊಮ್ಮೆ ದಿನವಿಡೀ ಕಾಯ್ದರೂ ಸಿಗಲ್ಲ’ ನಾನು lucky-unluckyನೊ ನಂಗೊತ್ತಿಲ್ಲ, ಆದರೆ heron totally lucky. ಆಹಾರ ಸಿಕ್ಕಿತಲ್ಲ. ಹಸಿವು ತಾಳಲಾರದೆ ಒಂದಿಷ್ಟು ಆಹಾರ ಕದ್ದದ್ದಕ್ಕೆ ಕೊಂದವರ ದೇಶವಿದು. ನಾವು ಹುಟ್ಟುವ ಮೊದಲೇ ಹುಟ್ಟಿದ ಪ್ರಾಣಿ ಪಕ್ಷಿಗಳಿಗೆ ಅವುಗಳ ಆಹಾರ ಸಿಕ್ಕಿದರೆ ಇವತ್ತಿನ ದಿನ ಅವು lucky ಎಂದು ಭಾವಿಸುವ ಸ್ಥಿತಿ ಇದೆ.

ಕೆನ್ನೀಲಿ ಬಕ ಬೇಟೆ ಮುಗಿಸಿ ಹಾರಿಹೋಯಿತು. ಇನ್ನೆಷ್ಟೋ ಪಕ್ಷಿಗಳಿಗೆ ಹುಡುಕಾಟ ಮುಗಿದಿರಲಿಲ್ಲ, ಆಹಾರಕ್ಕಾಗಿ ಹುಡುಕಾಟ ನಿರಂತರ ತಾನೆ. ಇನ್ನಷ್ಟು ಬಕಗಳು, ಮಗದಷ್ಟು ಪಕ್ಷಿಗಳು ಹೊಟ್ಟೆಪಾಡಿಗೆ ಹೊಂಚು ಹಾಕುತ್ತಿದ್ದವು. ಪುಟ್ಟಣ್ಣ ಕಣಗಾಲರ ಋಣಮುಕ್ತಳು ಚಿತ್ರದಲ್ಲಿ ಭಾರತಿ `ಸಾವು ಬಂದರೆ ಸತ್ತವರ ಸಮಸ್ಯೆ ತೀರಿತು. ಆದರೆ ಬದುಕಿರುವವರನ್ನು ಹಸಿವು ಕಾಡುತ್ತಲೇ ಇರುತ್ತದೆ. ಉಸಿರು ಇರೋವರೆಗೂ ಹಸಿವು ಬಿಡಲ್ಲ’ ಎಂದು ಹಸಿವಿನ ಬಗ್ಗೆ ಹೇಳಿದಂತೆ ನಾವ್ಯಾರೂ ಹಸಿವು ಗೆದ್ದವರಲ್ಲ. ಬಕ-ಹಾವಿನ ಸೆಣೆಸಾಟ ಚಿಂತೆ ಹುಟ್ಟು ಹಾಕಿತ್ತು.

ಅಷ್ಟರಲ್ಲಿ ಅನುಪಮ್ ದೋಣಿಯನ್ನು ಬೇರೆ ದಿಕ್ಕಿಗೆ ಬೇಗ ಒಯ್ಯಲು ಸೂಚನೆ ಕೊಟ್ಟು `ಪಟ್ಟೆಬಾಲದ ಹಿನ್ನೀರ ಗೊರವ territorial fightingಗೆ ready ಆಗುತ್ತಿವೆ, camera ready ಇಟ್ಕೊಳ್ಳಿ’ ಎಂದರು. ಮಂಗಳಜೋಡಿಗೆ ಬರುವ ಛಾಯಾಗ್ರಾಹಕರಿಗೆರಡು ಗುರಿಗಳಿರುತ್ತವೆ. ಒಂದು hunting ಮತ್ತೊಂದು godwit territorial fighting. ತಮ್ಮದೆಂದು ನಿರ್ಧರಿಸಿಕೊಂಡ ವಲಯಕ್ಕೆ ಇನ್ನೊಂದು ಪ್ರವೇಶಿಸಿದರೆ ಏರಿ ಹೋಗುವ ಗುಣ ಎಲ್ಲ ಜೀವಿಗಳಲ್ಲಿದೆ. ಪ್ರವೇಶ ಅಕ್ರಮವೇ ಸಕ್ರಮವೇ ಎಂದು ನಿರ್ಧರಿಸುವುದು ಕಷ್ಟ. ಏಕೆಂದರೆ ಎರಡರ ನಡುವೆ ಅ-ಸ ಎರಡಕ್ಷರ ಮಾತ್ರ ವ್ಯತ್ಯಾಸ. ಅದರ ಹುಡುಕಾಟ ಅದಕ್ಕೆ, ಇದರ ಹುಡುಕಾಟ ಇದಕ್ಕೆ. ಸ್ವಾಮಿತ್ವ ಸಾಧಿಸುವ ಚಪಲ ಯಾರನ್ನು ಬಿಟ್ಟಿದೆ, ಸಿಗುವ ಒಂದೆರಡು ಹುಳ, ಒಂದಂಗುಲ ಜಾಗ, ಎಲ್ಲದಕ್ಕೂ ಪೈ(ಕೈ)ಪೋಟಿಯೇ. ಕೈಬಲ-ಬಾಯ್ಬಲ ಇರುವವರು ಬಚಾವಾದರೆ ಇಲ್ಲದವರ ಪಾಡು ಹೇಳತೀರದು. ಹಕ್ಕಿಗಳೂ ಹೊರತಲ್ಲ. ಗೊರವಗಳೆರಡೂ `ನಾವು ಯಾರಿಗೇನು ಕಮ್ಮಿ ಇಲ್ಲ, ನಾವು fight ಮಾಡದೆ ಬಿಡಲ್ಲ’ ಎನ್ನುವಂತೆ ಗುರಾಯಿಸುತ್ತಾ ಸಮೀಪಿಸಿ ಕೂಗುತ್ತಾ `ಬಾಜಿಕಟ್ಟಿ ನೋಡು ಬಾ ಮೀಸೆಮಾಮ’ ಎನ್ನುವಂತೆ ಜಿದ್ದಿಗೆ ಬಿದ್ದು ಕೈ, ಮೈ ರೆಕ್ಕೆ ಮಿಲಾಯಿಸುತ್ತಾ ಅತ್ತಿಂದಿತ್ತ ಹಾರಿ, ಕದನವಾಡಿದವು ಆಜಿಯೊಳ್ ಈ ಪರಮವೀರಾಗ್ರಣಿಗಳ್!

ಹಕ್ಕಿ ಹೆಕ್ಕಿಹೆಕ್ಕಿ ತಿನ್ನುವುದರಲ್ಲೇ ಮಗ್ನ. ಹುಳ-ಹುಪ್ಪಟೆ, ಮೀನು, ಹಾವು, ಕಪ್ಪೆಗಳಿಗೆ ಕಣ್ಣಗಾಳ ಹಾಕಿ ಕಾಯ್ದು ಕಬಳಿಸುತ್ತಿದ್ದವು. ದೊಡ್ಡವು ದೊಡ್ಡದಕ್ಕೆ ಕಣ್ಣು ಹಾಕಿದರೆ, ಸಣ್ಣವು ತಮ್ಮಳತೆಗೆ ಹುಡುಕುತ್ತಿದ್ದವು. ತಮ್ಮಳತೆ ಮೀರಿದವನ್ನು ಹಿಡಿದು ಇತ್ತ ಬಿಡಲಾರದೆ, ಅತ್ತ ನುಂಗಲಾರದೆ ತಿಣಕಾಡುತ್ತಿದ್ದ ದೃಶ್ಯಗಳಿದ್ದವು. ದೊಡ್ಡ ಮೀನನ್ನು ನುಂಗಲು ಪ್ರಯತ್ನಿಸಿದ ಬಕ ತುರುಕಿದರೂ ಒಳಹೋಗದೆ ಕಕ್ಕಿ, ಮತ್ತೆ ಕುಕ್ಕಿ ತುಂಡು ಮಾಡಿ ನುಂಗಿ ನೀರು ಕುಡಿಯಿತು. ಬೆಳಕನ್ನೇ ಪ್ರತಿನಿಧಿಸುತ್ತಿದ್ದ ಕೊಕ್ಕರೆ ರೆಕ್ಕೆತೆರೆದು ಹಾರಿ ಮತ್ತೊಂದು ನೆಲೆಯಲ್ಲಿಳಿದು ಸಿಕ್ಕಿದ ಕಪ್ಪೆಯನ್ನು ನುಂಗಿ ಒದ್ದಾಡಿ ಕಪ್ಪೆಸಮೇತ ಹಾರಿ ಹೋಯಿತು.

ದಾಸಿಮಯ್ಯ `ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿವಡೆ ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗಾತನೆ ಗಾರುಡಿಗ’, `ಒಡಲುಗೊಂಡವ ಹಸಿವ’ `ನೀನೆನ್ನ ಜಡಿದೊಮ್ಮೆ ನುಡಿಯದಿರ. ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ’ ಎಂದು ಪಂಥಾಹ್ವಾನ ನೀಡಿದ್ದ. ಬಸವಣ್ಣ ನುಡಿದಂತೆ `ಹಾವಿನ ಬಾಯ ಕಪ್ಪೆ ಹಸಿದು ಹಾರುವ ನೊಣಕ್ಕೆ ಆಸೆ ಮಾಡುವಂತೆ…’ ಹಸಿವು ನಿರಂತರ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಹಸಿವು. ಒಡಲ ಹಸಿವನ್ನು ತಣಿಸಬಹುದು, ಅದನ್ನು ಮೀರಿದ್ದನ್ನು ತಣಿಸಲಸಾಧ್ಯ. ವಿಜಯಮಲ್ಯ, ನೀರವ ಮೋದಿಯಂತಹವರು ತೀರದ ಹಸಿವು-ದಾಹಗಳಿಂದ ಮೋಸ ಮಾಡಿ ದೇಶ ಬಿಟ್ಟು ಸಾವಿರಾರು ಮೈಲಿ ದೂರದ ದೇಶಗಳಿಗೆ ಪಲಾಯನಿಸಿದರು. ಆದರೆ ಸಾವಿರಾರು ಮೈಲಿ ದೂರ ಪ್ರಯಾಣಿಸಿ ಮತ್ತೆ ಮರಳುವ ಹಕ್ಕಿಗಳು ಅಂದಂದಿಗೆ ಬೇಕಾದ್ದನ್ನು ಸಂಪಾದಿಸಿ ಮತ್ತೆ ಮರುದಿನಕ್ಕೆ ಹುಡುಕಾಡುತ್ತವೆ. `ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ ಸೂರ್ಯ ಉದಯಿಸಿದಾಗ ಆರಂಭವಾದ ಹುಡುಕಾಟ ಪಶ್ಚಿಮದಂಚಿಗೆ ಇಳಿಯುವನ್ನಕ ಸಾಗುತ್ತದೆ. ಇದ್ದಲ್ಲಿಂದ ಎದ್ದು ಹೋಗದೇನೋ ಎಂಬಂತೆ ಸಹನೆಯ ಕಾಯುವಿಕೆಗೆ ಫಲ ದೊರಕುತ್ತದೊ ಇಲ್ಲವೋ ಆದರೆ ಕಾಯುವಿಕೆಗೆ ಕೊನೆ ಇಲ್ಲವಷ್ಟೆ. ಹೊಂಚಿ ದಕ್ಕಿಸಿಕೊಂಡದ್ದನ್ನು ಮತ್ತೊಂದು ಕಸಿಯಲು ಅಟ್ಟಿಸಿಕೊಂಡು ಹಾರುವ ನೋಟ ಅನೇಕ ಸತ್ಯಗಳನ್ನು ಅರುಹಿತು. ಹೀಗೆ ಅಲ್ಲವೇ ಕಾಲ.

ನಮ್ಮೂರ ಕೆರೆಗಳಲ್ಲಿ ಮೆಟ್ಟುಗಾಲ ಹಕ್ಕಿ ಚಿತ್ರ ತೆಗೆದದ್ದುಂಟು. ಆದರೆ ಮಂಗಳಜೋಡಿಯಲ್ಲಿ ನೀರಿನಲ್ಲಿ ಪ್ರಯಾಣಿಸುತ್ತಾ ತೀರ ಸನಿಹದಿಂದ ತೆಗೆಯುವ ಅವಕಾಶ. ಏನಾದರೂ ತಾಗಿದರೆ ಲಟ್ ಎಂದು ಮುರಿದೇ ಹೋಗುತ್ತೇನೋ ಎನ್ನುವಂತಿದ್ದ ನೀಳ ಬಳುಕುವ ಕಾಲುಗಳನ್ನು ಸೂರ್ಯನ ಬೆಳಕಿನಲ್ಲಿ ನೋಡುವುದೇ ಒಂದು ಚಂದ. ಮೆಟ್ಟುಗಾಲ್ಹಕ್ಕಿ ನೀರು ಕುಡಿದು ಮುನ್ನಡೆದು ನಡೆದು ಒಂಟಿಗಾಲಲ್ಲಿ ನಿಂತ ಈ ಮುದ್ದು ತಪಸ್ವಿ ಮೆಲ್ಲಗೆ ನಿದ್ದೆಗೆ ಜಾರಿದ್ದು ನನ್ನ ರೆಪ್ಪೆಯೊಳಗೂ ಒಂದೆಳೆ ನಿದ್ದೆ ತಂದು ಬಿಟ್ಟಿತ್ತು.

ನವೆಂಬರಿನಿಂದ ಫೆಬ್ರವರಿ ತನಕ season. ಡಿಸೆಂಬರ್, ಜನವರಿ ವಲಸೆ ಹಕ್ಕಿ ಬರುವ peak period. ಛಾಯಾಗ್ರಾಹಕರು ತಮ್ಮಗತ್ಯಕ್ಕೆ ತಕ್ಕ ದೋಣಿ ಆರಿಸಿಕೊಳ್ಳುತ್ತಾರೆ. ಕೆಲವರಿಗೆ ಮೇಲೆ ಸಣ್ಣ ನೆರಳು ಬೇಕೆನಿಸಿದರೆ ಕೆಲವರಿಗೆ ಅದು ಅಡ್ಡವೆನ್ನಿಸುತ್ತದೆ. ಬಹುತೇಕರಿಗೆ ಹುಟ್ಟಿನ ದೋಣಿಯೇ ಪ್ರಿಯ, ಬೇಕೆಂದ ಕಡೆ ನಿಲ್ಲಿಸಿ ಚಿತ್ರ ತೆಗೆಯಬಹುದೆಂದು. ಅವಶ್ಯಕತೆಗೆ ತಕ್ಕಂತೆ ಯಾನ ಮಾಡಿಸುವ ದೋಣಿಗಳಲ್ಲಿ ಚಿತ್ರದಾಹಿಗಳು ಕ್ಯಾಮೆರಾಸ್ತ್ರ ಹಿಡಿದು ಚಿತ್ರಸೆರೆಯಲ್ಲಿ ಮಗ್ನರಾದವರಲ್ಲಿ  ಹೆಣ್ಣುಗಂಡು, ವಯಸಿನ ಭೇದವಿಲ್ಲ. ಅದಕ್ಕೆ ನಾನೇ ಸಾಕ್ಷಿ ಇದ್ದೆ. ಹಲವರು ಪಕ್ಷಿವೀಕ್ಷಕರು ಇನ್ನುಳಿದವರು ಛಾಯಾಗ್ರಾಹಕರು. ಜೀವನ ಒಂದು ಪಯಣ, ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ.

ಚಲಿಸುವ ದೋಣಿಯಲ್ಲಿ, ಗಾಳಿಗೂ ದೋಣಿ ಅಲುಗುವಾಗ ಚಿತ್ರ ತೆಗೆಯುವುದು ಸಾಹಸವೇ ಸರಿ ಚಿತ್ರ ತೆಗೆಯುವಾಗ ನಾವಿರುವ ದೋಣಿ ಸರಿಯಾದ ದಿಕ್ಕಿನಲ್ಲೇ ಇದೆ ಎನ್ನಲಾಗದು, ಹಕ್ಕಿಗೆ ತನ್ನದೇ ಗುರಿ ದಾರಿ ಇದ್ದವು. ನಮ್ಮ ದೋಣಿ ಹತ್ತಿರಕ್ಕೆ ಹೋಗುವವರೆಗೂ ಹಕ್ಕಿ ಇರಬೇಕಲ್ಲ. ಕಂಡಾಗ ತಕ್ಷಣಕ್ಕೆ ದೋಣಿ ನಿಲ್ಲಿಸಲೂ ಆಗದು. ನಿಂತರೂ ಕಂಪನಗಳಿರುತ್ತವೆ. ಮತ್ತೆ ಮತ್ತೆ ಅವಕಾಶ ಲಭ್ಯವಾಗುವ ವಯಸ್ಸು ನನ್ನದಲ್ಲವೆಂದು ಕಂಡದ್ದನ್ನು ಖುಷಿ ಅನ್ನಿಸಿದ್ದನ್ನು ಸೆರೆ ಹಿಡಿಯುವ ತವಕ. ಅವಕಾಶ ಸಿಕ್ಕಿದಾಗ ಕಂಡ ಎಲ್ಲ ಹಕ್ಕಿಗಳ ಚಿತ್ರ ಸರಿಯಾಗಿ ಬರಲಿ ಬಿಡಲಿ ಕ್ಲಿಕ್ಕಿಸುತ್ತಿದ್ದೆ. ನನ್ನಲ್ಲಿ ಸದಾ ಸುಳಿಯುವ ದಾರಿ ಸಿಕ್ಕಿದರೆ ಈ ಸಲವೇ ಸೆರೆಹಿಡಿ, ಇಲ್ಲದಿದ್ದರೆ ಇನ್ನೊಂದು ಸುತ್ತು ಬಂದರಾಯ್ತೆಂದು.

bronze winged jacana, pintail snipe, bar tailed godwit, black tailed godwit, ruff, ruddy breasted crake, slaty breasted rail, yellow bittern, glossy ibis, northern pintail, ruddy shelduck, plaintive cuckoo ಹೀಗೆ ಹಲವು ಲೈಫರ್‌ ಸಿಕ್ಕು ಮಂಗಲಜೋಡಿ ಮುದ ತಂದಿತು. ಹೊಸದಾಗಿ ಸಿಕ್ಕ ಹಕ್ಕಿಗಳ ಚಂದದ ಚಿತ್ರ ಸೆರೆ ಹಿಡಿಯುವುದರ ಜೊತೆಗೆ ಈಗಾಗಲೇ ಸಿಕ್ಕಿದ್ದ ಹಕ್ಕಿಗಳ Action oriented Photography ಮಾಡಲು ಸಾಧ್ಯವಾಗಿತ್ತು.

ಹಕ್ಕಿ ಫೋಸ್ ಕೊಡದೆ ನಾನಿರೋದೆ ಹೀಗೆ, ಬೇಕಾದರೆ ತಗೋ ಎನ್ನುವಂತೆ ನಾನಾವತಾರಗಳ ದರ್ಶನವಿತ್ತು ಕ್ಯಾಮೆರಾಕ್ಕೆ ಕೆಲಸ ಕೊಡುತ್ತಿರುತ್ತದೆ. ಮಂಗಲಜೋಡಿಯಲ್ಲಿ ಹಕ್ಕಿಗೆ ಹತ್ತಿರದಲ್ಲಿದ್ದಾಗ ನಾನಾ ಭಂಗಿಗಳ ಚಿತ್ರ ತೆಗೆದಿದ್ದೇನೆ. ಸೂರ್ಯೋದಯ-ಸೂರ್ಯಾಸ್ತಮಾನದ golden hourನಲ್ಲಿ ಹಕ್ಕಿಗಳ ಮೇಲೆ ರವಿಯ ಛವಿ ಬಿದ್ದಾಗ ಅದ್ಭುತ. ಸೂರ್ಯನಿಗೆ ಬೆನ್ನು ಹಾಕಿ ಆ ಕಾಂತಿಯಲ್ಲಿ ಮಿರುಗುವ ಹಕ್ಕಿ ಚಿತ್ರ ತೆಗೆಯುವುದು ಒಬ್ಬಗೆಯಾದರೆ, ಅವನಿಗೆದುರಾಗಿದ್ದು ಕಾಂತಿಯಲ್ಲಿ ಹಾಯ್ದು ಹೋಗುವ ಹಕ್ಕಿಗಳನ್ನು ನೆರಳಾಗಿ ತೆಗೆವುದೊಂದು ಬಗೆ. ಮಂಗಳಜೋಡಿಯಲ್ಲಿ ಉದಯ, ಅಸ್ತಮಾನಗಳಲ್ಲಿ ಇಬ್ಬಗೆಯ ಫೋಟೋ ತೆಗೆಯಬಹುದು. ಹೊಂಬಣ್ಣದ ಛಾಯಾಗ್ರಹಣದ ಆಸೆ ಹೇಳಿದಾಗ ಸೂಕ್ತ ಜಾಗಕ್ಕೆ ಅನುಪಮ್ ಕರೆದೊಯ್ದರು. ಆ ವೈಭವ ಸೆರೆಹಿಡಿದೆ. 

ಎಲ್ಲಕ್ಕೂ ಒಂದು ಕೊನೆ ಇದೆ. ಸೂರ್ಯನುದಯಿಸಿದ ಬಳಿಕ ಆ ದಿನಕ್ಕೆ ಕೊನೆ ಅಸ್ತಮಾನ. ಉತ್ಕಲದ ಪ್ರವಾಸದ ಕೊನೆಗೆ ಬಂದೆ. ಅನುಪಮ್‌ ‘ಒರಿಸ್ಸಾಗೆ ಬಂದಿದೀರಿ, ಸಂಬಲ್‌ಪುರ್ ಸೀರೆ ತಗೊಳಿ, ಚೆನ್ನಾಗಿರುತ್ತದೆ’ ಎಂದರೂ ಮನ ಮಾಡಲಿಲ್ಲ. ೨೦೧೫ರ ನಿವೃತ್ತಿಗೆ ಮೊದಲೇ ಸೀರೆ ಕೊಳ್ಳುವ ಕೆಲಸಕ್ಕೆ ಫುಲ್‌ಸ್ಟಾಪಿಸಿದ್ದೆ. ಸಮಾರಂಭಗಳಿಂದ ದೂರ ಆಗಿ ಇದ್ದುದನ್ನೇ ಉಡುವ ಸಂದರ್ಭವಿರದೆ ಕೊಳ್ಳುವ ಕೆಲಸವಿರಲಿಲ್ಲ. ಹಕ್ಕಿ ಚಿತ್ರ ತೆಗೆಯಲು ಸೀರೆಯೇ ತೊಡಕಾಗಿತ್ತು. ಎರಡು ವರ್ಷ ಪಶ್ಚಿಮ ಬಂಗಾಳ-ಒರಿಸ್ಸಾಗಳ ನಡುವೆ ಸ್ವಾಮ್ಯತೆ ಬಗ್ಗೆ ಪೈಪೋಟಿ ಹುಟ್ಟಿಸಿದ ರಸಗುಲ್ಲಾ ಬಂಗಾಳದ ಪಾಲಾಗಿತ್ತು. `ರಸಗುಲ್ಲಾ ತಿನ್ನದಿದ್ದರೆ ಒರಿಸ್ಸಾಗೆ ಬಂದದ್ದು ಸಾರ್ಥಕವಾಗದು, ತಿನ್ನದೇ ಹೋಗಲು ಸಾಧ್ಯವಿಲ್ಲ’ ಎಂದರು ಅನುಪಮ್ ಚಂಡಿಕಾಮಾತೆಗೆ. ಬೇಡ ಎನಿಸಿದರೆ ಬೇಕೆನ್ನುವ ಪದ ಕಾಣದ ನಾ ನಕ್ಕು ಸುಮ್ಮನಾದೆ. ಹಕ್ಕಿ ಸಿಕ್ಕರದೇ ಸಿಹಿ ಎಂದು ಕಣ್ಣರಳಿಸಿ ಚಂದದ ಹಕ್ಕಿಗಳನ್ನು ಸಾವಧಾನದಿಂದ ತೋರಿಸಿ ನಿಜಕ್ಕೂ ಸಿಹಿ ಇತ್ತಿರಿ ಎಂದು ದಾಸ್‌ಗೆ ಕೃತಜ್ಞತೆ ಹೇಳಿದ್ದೆ.

ಮಂಗಳಜೋಡಿ ನೆನೆದರೆ ಅಲ್ಲಿನ ಹಕ್ಕಿಗಳಂತೆಯೇ ಮನ ಗರಿಗೆದರಿ ಹಾರುತ್ತದೆ. ಅವಕ್ಕೆ ಅವುಗಳದ್ದೇ ಲೋಕ. ನಮಗೆ ಅವುಗಳೆ ಲೋಕ. ಸಾವಿರಾರು ಚಿತ್ರಗಳಾಗಿ ಸೆರೆಯಾದ ಆ ಹಕ್ಕಿಗಳು ಉತ್ಕಲದ ನೆನಪುಗಳನ್ನು ಉಲ್ಲಾಸದ ಉತ್ತುಂಗಕ್ಕೇರಿಸುತ್ತವೆ. ಬಂಧುವಿನಂತೆ ಉಪಚರಿಸಿ ಆಶೀರ್ವಾದ ಇರಲೆಂದ ಅನುಪಮ್‌ಗೆ ಋಣಿ. ಮಂಗಲಜೋಡಿಯ ಕೊನೆಯ ದೋಣಿಯಾನ ಮುಗಿಸಿದಾಗ ಒಳಗಿಳಿದ plaintive cuckoo ಕುಕಿಲಿನಂತೆ `ಕರೆವುದೆನ್ನಂ ಬಿತರ್‌ಕನಿಕಂ ನೆನೆವುದೆನ್ನ ಮನಂ ಮಂಗಳಜೋಡಿಯಂ’ .ಇದು ಮುಕ್ತಾಯವಲ್ಲ ಮತ್ತೊಂದರ ಆರಂಭ ಎಂದು ನೆನಪಿಸುತ್ತದೆ, ನೆನಪಿಸುತ್ತಲೇ ಇರುತ್ತದೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: